ಹೀಗೊಂದು ಮಾರವಾಡಿ ಸಂಸಾರ

ಹೀಗೊಂದು ಮಾರವಾಡಿ ಸಂಸಾರ

ಬರಹ
ಇತ್ತೀಚೆಗೆ ನಾನು ಬೆಂಗಳೂರಿನಿಂದ ಮುಂಬಯಿಗೆ ಟ್ರೈನಿನಲ್ಲಿ ಪ್ರಯಾಣ ಮಾಡುತ್ತಿದ್ದೆ. ಉದ್ಯಾನ್ ಎಕ್ಸ್~ಪ್ರೆಸ್~ನಲ್ಲಿ ತುಂಬಾ ಜನ ಗುಜರಾತಿನ ಪ್ರಾಂತ್ಯಕ್ಕೆ ಹೋಗುವವರು ಇರುತ್ತಾರೆ. ಬೆಂಗಳೂರಿನಿಂದ ಮುಂಬಯಿಗೆ ಬಂದು ನಂತರ ಗುಜರಾತಿನ ಕಡೆಗೆ ಹೋಗುತ್ತಾರೆ - ಏಕೆಂದರೆ ಬೆಂಗಳೂರಿನಿಂದ ವಾರಕ್ಕೆ ಎರಡು ದಿನಗಳು ಮಾತ್ರ ನೇರ ಗಾಡಿ ಇರೋದು ಮತ್ತು ಅದರಲ್ಲಿ ಟಿಕೇಟು ಸಿಗೋದು ತುಂಬಾ ಕಷ್ಟ ಅಂತೆ. ಮುಂಬೈಗೆ ೨೪ ಘಂಟೆಗಳ ಪ್ರಯಾಣ. ಒಬ್ಬನೇ ಪ್ರಯಾಣ ಮಾಡುವಾಗ ಮಾಡಲು ಕೆಲಸವಿಲ್ಲದೇ ನನ್ನ ಗಮನವೆಲ್ಲಾ ಎದುರಿಗಿದ್ದ ಮಾರವಾಡಿ ಸಂಸಾರದ ಕಡೆಯೇ. ಆ ಸಂಸಾರದ ಬಗೆಗಿನ ನನ್ನ ಅನಿಸಿಕೆ ಹೀಗಿದೆ - ಇದೇನು ಸರಿಯೇ - ತಿಳಿದವರು ಹೇಳಿ ಮಾರವಾಡಿಗಳದ್ದು ಪುರುಷ ಪ್ರಧಾನ ಕುಟುಂಬ ಅಂದ್ರೆ ತಪ್ಪಾಗಲ್ಲ. ಹಿರಿಯರಲ್ಲಿ ದರ್ಪ ದಬ್ಬಾಳಿಕೆ ಎದ್ದು ಕಾಣುವಂತಿರುತ್ತದೆ. ಮಾರವಾಡಿ ಅಥವಾ ಮಾರವಾರಿ ಜನಾಂಗ ಮೂಲತ: ರಾಜಸ್ಥಾನದ ಮಾರವಾರ ಪ್ರಾಂತ್ಯದವರು. ಇವರ ವೃತ್ತಿ ವ್ಯಾಪಾರ. ಜಗತ್ತಿನ ಎಲ್ಲ ಕಡೆಗಳಲ್ಲೂ ಕಾಣಬರುವವರು (ಹೊಟೆಲ್ ಉದ್ಯಮದಲ್ಲಿ ದಕ್ಷಿಣ ಕನ್ನಡದವರು, ರಸ್ತೆ ಕೆಲಸಗಳಲ್ಲಿ ತಮಿಳಿನವರು ಮತ್ತು ಬೀದಿ ಬದಿಯ ವ್ಯಾಪಾರದಲ್ಲಿರುವ ಮಲಯಾಳಿಗಳ ಹಾಗೆ). ಹಿರಿಯರು ತಾವು ಹೇಳಿದ್ದೇ ಸರಿ ಮಾಡಿದ್ದೇ ಸರಿ - ಅದನ್ನು ಪ್ರಶ್ನಿಸೋ ಅಧಿಕಾರ ಕಿರಿಯರಿಗಿಲ್ಲ. ಆದರೂ ಅವರು ನಿಷ್ಟಾವಂತರು - ದಿನಂಪ್ರತಿ ಬೆಳಗ್ಗೆ ಬಸದಿಗೆ ಹೋಗಿ ಪ್ರಾರ್ಥನೆ ಸಲ್ಲಿಸುವರು. ಹಿರಿಯ ಹೆಂಗಸರು ಮನೆಯಲ್ಲಿ ಕಿರಿಯರ ಮೇಲೆ ಜೋರು ಮಾಡುವರು. ಹಿರಿಯ ಗಂಡಸರು ತಮ್ಮ ಕಿರಿಯರ ಮೇಲೆ ಅಂಗಡಿಯಲ್ಲಿ ಕಡಿವಾಣ ಹಾಕುವರು. ಮನೆಯಲ್ಲಿ ದಢೂತಿ ಅತ್ತೆಯ ಸೊಂಟದಲ್ಲಿ ಬೀಗದ ಕೈಗಳ ಗೊಂಚಲು. ಅವಳದ್ದು ಅಡುಗೆ ಮನೆಯಿಂದ ಹಿಡಿದು ಮಲಗುವ ಕೋಣೆವರೆಗೆ ಮೇಲ್ವಿಚಾರಣೆ - ಒಂದು ತರಹದ ಮ್ಯಾಕ್ರೋ ಲೆವೆಲ್ ಯಜಮಾನಿ. ಅವಳು ಮಾತ್ರ ಬೇರೆಯ ಗಂಡಸರೊಂದಿಗೆ ಮಾತನಾಡಲು ಅಡ್ಡಿಯಿಲ್ಲ ಅದೂ ತಲೆಯ ಮೇಲೆ ಸೆರಗು ಹೊದೆಯದೇ. ತನ್ನ ಹೆಣ್ಣುಮಕ್ಕಳೂ ಹೇಗೆ ಡ್ರೆಸ್ ಮಾದಿಕೊಂಡರೂ ಅಡ್ಡಿ ಇಲ್ಲ. ಆದರೆ ಅವಳ ಹಿಡಿತವೆಲ್ಲಾ ಬೇರೆಯ ಮನೆಗಳಿಂದ ಬಂದ ಸೊಸೆಯರ ಮೇಲೇ. ಅವರುಗಳಲ್ಲೂ ಎರಡು ವಿಧ. ಹೊಸದಾಗಿ ಮನೆಗೆ ಬಂದವರು ಮತ್ತು ಹಳಬರು. ಹೊಸಬರು ಎಲ್ಲ ಕೆಲಸ ಮಾಡಬೇಕು - ಅದಕ್ಕೇ ಇರಬೇಕು ಅವರುಗಳು ಸಪೂರ ಮತ್ತು ಮುಟ್ಟಿದರೆ ಮುರಿದು ಹೋಗುವ ಬಳ್ಳಿಯಂತೆ. ಅಡುಗೆ ಮನೆಯ ಕೆಲಸದಿಂದ ಹಿಡಿದು ಮನೆಯ ಎಲ್ಲ ಕಾರ್ಯದಲ್ಲೂ ಅವರೇ. ಸ್ವಲ್ಪ ಹಿರಿಯರಾದ ಸೊಸೆಯರು ಹೊಸದಾಗಿ ಬಂದವರ ತಪ್ಪು ಕಂಡು ಹಿಡಿಯುವ - ತಿದ್ದುವವರು. ಅವರು ಮುಂದಿನ ಪ್ರಮೋಶನ್ ಗಾಗಿ ಕಾಯುತಿರುವವರು (ದಢೂತಿ ಆಗಲು). ಕಿರಿಯರು ಮತ್ತು ಮಧ್ಯಮರಲ್ಲಿ ಎಷ್ಟು ಬೇಗ ಪ್ರಮೋಶನ್ ಆಗಬಹುದು ಎಂಬುದರ ಚಿಂತನಾ ಮಾತುಕತೆ - ಆದೂ ಅತ್ತೆಗೆ ತಿಳಿಯದ ಹಾಗೆ. ಇನ್ನು ಮಕ್ಕಳಲ್ಲಿ ಗಂಡು ಮಕ್ಕಳಿಗೆ ಮೊದಲ ಆದ್ಯತೆ. ಕೆಲಸ ಮಾಡಲು ಮಾತ್ರ ಹೆಣ್ಣುಮಕ್ಕಳು - ಅವರಿಗೆ ಓದು ಬರಹ ಬೇಡ ಅನ್ನುವ ಧೋರಣೆ ಹಿರಿಯರಲ್ಲಿ. ಗಂಡು ಮಕ್ಕಳನ್ನು ವ್ಯಾಪಾರದಲ್ಲಿ ತೊಡಗಿಸುವುದರಲ್ಲಿ ಎರಡು ವಿಧವಿದೆ. ಹೆಚ್ಚಿನ ಸಿರಿವಂತರಲ್ಲದವರು ಗಂಡು ಮಕ್ಕಳಿಗೆ ಅವಶ್ಯಕತೆ ಇರುವಷ್ಟು (ಹತ್ತನೆ ತರಗತಿವರೆಗೆ) ಓದನ್ನು ಕೊಡಿಸುವರು. ನಂತರ ಹಿರಿಯರ ಸ್ನೇಹಿತರ ವ್ಯಾಪಾರದಲ್ಲಿ ಕೆಲಸಕ್ಕೆ ಕಳುಹಿಸಿವರು. ಇಲ್ಲಿ ಪೊಲೀಸ್ ವಿಭಾಗದಲ್ಲಿ ಕೊಡುವಂತಹ ಶಿಕ್ಷಣ. ತುಂಬಾ ಕಷ್ಟತರಹದ್ದು. ಆ ಸ್ನೇಹಿತರ ಅಂಗಡಿ ಯಾ ಮನೆಯಲ್ಲೇ ವಾಸ. ಬೆಳಗ್ಗೆ ಬೇಗ ಅಂಗಡಿ ತೆರೆಯಬೇಕು. ಸಂಜೆ ೯ ರವರೆಗೂ ದುಡಿತ. ಇಷ್ಟಾಗಿ ಅವರ ಕೈಗೆ ದುಡ್ಡು ಸಿಗದ ಹಾಗೆ ನೋಡಿಕೊಳ್ಳುವರು. ಈ ಹುಡುಗರು ತುಂಬಾ ಚಾಣಾಕ್ಷರು. ಬಹಳ ಬೇಗ ವ್ಯಾಪಾರ ಉದ್ಯಮದ ಒಳ ಮರ್ಮವನ್ನು ಅರಿಯುವರು. ಆ ಹಿರಿಯ ಸ್ನೇಹಿತರು ಇವರ ಚಾಣಾಕ್ಷತನ ದೃಢೀಕರಿಸಿದ ಮೇಲೆಯೇ ಮತ್ತೆ ಇವರ ಮನೆಯ ಕಡೆಗೆ ಓಟ. ಅಲ್ಲಿ ಇವರಿಗಾಗಿ ಒಂದು ವ್ಯಾಪಾರ ಉದ್ಯಮ ಕಾಯುತ್ತಿರುತ್ತದೆ. ಇನ್ನು ಸ್ವಲ್ಪ ಸಿರಿವಂತರಾದವರು ಗಂಡು ಮಕ್ಕಳು ಓದುವವರೆಗೂ ಓದಿಸಿ ನಂತರ ಮದುವೆ ಮಾಡುವರು. ಆ ಹುಡುಗ ಕೇಳಿದಷ್ಟು ಹಣ ಇತ್ತು ಒಂದು ವ್ಯಾಪಾರ ಮಾಡಲು ಬಿಡುವರು. ಅವನಿಗೆ ವ್ಯಾಪಾರದಲ್ಲಿ ಅನುಭವವೇ ಇರುವುದಿಲ್ಲ. ಮತ್ತೊಂದೆಡೆ ಹೊಸದಾಗಿ ಮದುವೆಯಾಗಿ. ಗಮನವೆಲ್ಲಾ ಮಡದಿಯೊಂದಿಗೆ ಚೆಲ್ಲಾಟದ ಕಡೆ. ತಂದೆ ಕೊಟ್ಟ ಹಣದಲ್ಲಿ ಪ್ರಾರಂಭಿಸಿದ ವ್ಯಾಪಾರ ನೀರಿನಲ್ಲಿ ಮಾಡಿದ ಹೋಮದಂತೆ. ಆಗ ತಂದೆಗೆ ಗೊತ್ತಾಗದ ಹಾಗೆ ಸಾಲಗಾರರ ಮೊರೆಗೆ. ಅವರು ಈತನ ತಂದೆಯ ಮುಖ ನೋಡಿ ಈತನಿಗೆ ಸಾಲ ಕೊಡುವರು. ಅದನ್ನೂ ಬಹಳ ಬೇಗ ಕಳೆದುಕೊಂಡು ಮೂಗಿನ ಮಟ್ಟಕ್ಕೆ ಸಾಲದಲ್ಲಿ ಮುಳುಗಿದಾಗ ಸಾಲಗಾರರು ಈತನ ತಂದೆಯ ಸಾಲ ಮರುಪಾವತಿಗಾಗಿ ಹೋಗುವರು. ಆಗ ತಂದೆಯಾದರೋ ಪೂರ್ಣವಾಗಿ ವ್ಯಾಪಾರೀ ಮನೋಭಾವದಲ್ಲಿ ಹಣ ವಾಪಸ್ಸು ಮಾಡುವುನೆಂದೇ ಜೊತೆಗೆ ಒಂದು ಶರತ್ತನ್ನು ಮಾಡಿಕೊಳ್ಳುವನು. ಅದೇನೆಂದರೆ, ಹುಡುಗನಿಂದ ಹಣ ವಾಪಸ್ಸು ತೆಗೆದುಕೊಳ್ಳಲು ಪ್ರಯತ್ನಿಸಿಬೇಕು ಮತ್ತು ಹಾಗೆ ಬಂದ ಹಣವನ್ನು ತನಗೆ ಬಡ್ಡಿಯ ಸಮೇತ ಹಿಂದಿರುಗಿಸಬೇಕು. ಇದರ ಬಗ್ಗೆ ತಿಳಿಯದ ಹುಡುಗ ಮಾನ ಉಳಿಸಿಕೊಳ್ಳುವ ಸಲುವಾಗಿ ಕಡೆಯದಾಗಿ ತನ್ನ ತಂದೆಯ ಮುಂದೆ ಎಲ್ಲ ವಿಷಯಗಳನ್ನೂ ಅರುಹಿ ಹಣವನ್ನು ಕೇಳುವನು. ತಂದೆಯಾದರೋ ಮತ್ತೆ ವ್ಯಾಪಾರೀ ಮನೋಭಾವದಲ್ಲಿ ಸಾಲಕ್ಕಿಂತ ಹೆಚ್ಚಿನ ಹಣ ಕೊಡುವುದಾಗಿಯೂ ಅದನ್ನು ಬಡ್ಡಿ ಸಮೇತ ಮರುಪಾವತಿಸಲು ಶರತ್ತನ್ನು ಹಾಕುವನು. ಆಗ ಹುಡುಗ ವ್ಯಾಪಾರದಲ್ಲಿ ಪೂರ್ಣವಾಗಿ ತನ್ನನ್ನು ತಾನೇ ತೊಡಗಿಸಿಕೊಳ್ಳುವನು. ಇಲ್ಲಿ ಅವನಿಗೆ ಜೀವನದ ಅರಿವಾಗಿದೆ. ನಲಿವು ನೋವು ಎರಡನ್ನೂ ಅನುಭವಿಸಿದ್ದಾಗಿದೆ. ಆತ ವ್ಯಾಪಾರದಲ್ಲಿ ನಿಜಕ್ಕೂ ಹೆಚ್ಚಿನ ಪ್ರತಿಫಲ ಪಡೆಯುವನು. ಇಂತಹ ಟ್ರೈನಿಂಗನ್ನು ಎಂತಹ ಮ್ಯಾನೇಜ್ ಮೆಂಟ್ ಕಾಲೇಜುಗಳಲ್ಲೂ ನೀಡುವುದಿಲ್ಲ. ಇದು ವಂಶ ಪಾರಂಪರ್ಯವಾಗಿ ನಡೆದು ಬಂದ ಪದ್ಧತಿ. ಅದೇ ಹೆಣ್ಣುಮಕ್ಕಳಿಗೆ ಮನೆಕೆಲಸದಲ್ಲೇ ಪೂರ್ಣ ತರಬೇತಿ. ಆದಷ್ಟೂ ಬೇಗ ಅವರನ್ನು ಮದುವೆ ಮಾಡಿ ಬೇರೆ ಮನೆ ಕಡೆ ಕಳುಹಿಸುವ ತರಾತುರಿ. ಇನ್ನು ಮಕ್ಕಳಲ್ಲೇ ನೋಡಿದರೆ ಕುಡಿಯಲು ನೀರು ಬೇಕಿದ್ರೆ ಗಂಡು ಮಕ್ಕಳು ಅಲ್ಲಾಡೋಲ್ಲ = ಹೆಣ್ಣು ಮಕ್ಕಳೇ ತಂದು ಕೊಡಬೇಕು. ಆ ಮಗು ಊಟಕ್ಕೆ ಕೂತಿದ್ರೂ ಎದ್ದು ಹೋಗಿ ತರಬೇಕು. ಇನ್ನು ಹಿರಿಯರಲ್ಲಿ ಇವರ ಭಕ್ತಿ ಬಗ್ಗೆ ಹೇಳಬೇಕಂದ್ರೆ - ಎಲ್ಲೇ ಹಿರಿಯರು ಮೊದಲ ಬಾರಿ ಕಂಡರೂ (ಅದು ರಸ್ತೆಯ ಮಧ್ಯ ಭಾಗದಲ್ಲೇ ಇರಬಹುದು) ಕಾಲು ಮುಟ್ಟಿ ನಮಸ್ಕರಿಸಬೇಕು. ಇನ್ನು ಇವರುಗಳ ಅಡುಗೆ ಊಟದ ವೈಖರಿ ಬಗ್ಗೆ ಸ್ವಲ್ಪ ಹೇಳುವೆ. ಇವರುಗಳಿಗೆ ಸಿಹಿ ಪದಾರ್ಥ ಮತ್ತು ಎಣ್ಣೆಯಲ್ಲಿ ಕರಿದ ಪದಾರ್ಥ ಎಂದರೆ ಪಂಚಪ್ರಾಣ. ಎಲ್ಲರೂ ಒಂದೇ ತಾಟಿನಲ್ಲಿ ತಿನ್ನುವರು ಒಂದೇ ಲೋಟೆಯಲ್ಲಿ ನೀರು ಕುಡಿಯುವರು. ಅದೇನು ಒಮ್ಮತ ಸಂಕೇತವೋ ಏನೋ ತಿಳಿಯದು. ನಮ್ಮ ಪಾತಜ್ಜಿ ಹೇಳೋ ಪ್ರಕಾರ ಎಂಜಲು ಮುಸುರೆ ಬಗ್ಗೆ ತಿಳಿಯದ ಮುಸುಂಡಿಗಳು. ತಮಾಷೆಗಾಗಿ ಹೇಳಿದ್ದು - ಅವರನ್ನು ಅವಹೇಳನ ಮಾಡುವ ಉದ್ದೇಶವಿಲ್ಲ. ಆದರೂ ಇವರಿಂದ ನಾವು ಕಲಿಯ ಬೇಕಾದ ಜೀವನ ಪಾಠ ಬಹಳಷ್ಟಿದೆ ಅಂದ್ರೆ ಅದು ಉತ್ಪ್ರೇಕ್ಷೆಯಲ್ಲ.