ಮನೆಯಲ್ಲಿ ಪುಟಾಣಿ ಸಸಿಗಳ ಕೃಷಿ: ತಿಂಗಳಿಗೆ ರೂ.5 ಲಕ್ಷ ಆದಾಯ

ಕೇರಳದ ಅಜಯ್ ಗೋಪಿನಾಥ್ ತಮ್ಮ ಮನೆಯ 100 ಚದರಡಿ ಕೋಣೆಯಲ್ಲಿ ಷೆಲ್ಪ್-ಗಳಲ್ಲಿಟ್ಟ ಪ್ಲಾಸ್ಟಿಕ್ ಟ್ರೇಗಳಲ್ಲಿ ಪುಟಾಣಿ ತರಕಾರಿ ಸಸಿಗಳನ್ನು ಬೆಳೆದು, ದಿನದಿನವೂ ಸುಮಾರು 10 ಕಿಗ್ರಾ ಮಾರಾಟ ಮಾಡಿ, ತಿಂಗಳಿಗೆ ರೂ.5 ಲಕ್ಷಕ್ಕಿಂತ ಅಧಿಕ ಆದಾಯ ಗಳಿಸುತ್ತಿದ್ದಾರೆ! ಅವರು ಎರ್ನಾಕುಲಂನ ಚಿತ್ತೂರಿನ ಮುರಲಿಕದವರು.
ಇದೆಲ್ಲ ಶುರುವಾದದ್ದು ಬೆಂಗಳೂರಿನ ಹೋಟೆಲಿನಲ್ಲಿ ಊಟಕ್ಕೆ ಬಡಿಸಿದ್ದ ಇಂತಹ ಪುಟಾಣಿ ತರಕಾರಿ ಸಸಿಗಳನ್ನು ಅವರೊಮ್ಮೆ ತಿಂದಾಗ. ಅನಂತರ ಇಂತಹ ಸಸಿಗಳ ಬಗ್ಗೆ ಅವರಿಂದ ಮಾಹಿತಿಶೋಧ ಶುರು. ಇವು ಬೀಜ ಮೊಳೆತ ನಂತರ ಕೇವಲ ಒಂದು ವಾರ ಬೆಳೆದ ಪುಟಾಣಿ ಸಸಿಗಳು; ಪೋಷಕಾಂಶ ತುಂಬಿದ ಇವನ್ನು “ಸುಪರ್ ಫುಡ್” ಎಂದು ಕರೆಯುತ್ತಾರೆಂದು ತಿಳಿದಾಗ ಅವರಿಗೆ ಅಚ್ಚರಿ.
ಅನಂತರ ತಮ್ಮ ಸಿಟಿಬ್ಯಾಂಕ್ ಉದ್ಯೋಗ ತೊರೆದ ಅಜಯ್ ಗೋಪಿನಾಥ್ ಈ ಪುಟಾಣಿ ಸಸಿಗಳನ್ನು ಮನೆಯಲ್ಲೇ ಬೆಳೆಯಲು ನಿರ್ಧರಿಸಿದರು. "2018ರ ಸುಮಾರಿನಲ್ಲಿ ನಾನು ಇವನ್ನು ಕೋಣೆಯೊಂದರಲ್ಲಿ ಪ್ರಾಯೋಗಿಕವಾಗಿ ಬೆಳೆಸಲು ಶುರು ಮಾಡಿದೆ. ಇವುಗಳ ಕೃಷಿ ಬಗ್ಗೆ ಮಾಹಿತಿ ಸಂಗ್ರಹಿಸುತ್ತಾ, ಪ್ರಯೋಗಗಳನ್ನು ಮಾಡುತ್ತಾ ಇವನ್ನು ಬೆಳೆಸೋದು ಹೇಗೆಂದು ತಿಳಿದುಕೊಳ್ಳಲು ಎರಡು ವರುಷಗಳೇ ತಗಲಿದವು. ಅನಂತರ ಮಾರಾಟಕ್ಕಾಗಿ ಇವನ್ನು ಬೆಳೆಸಲು ಆರಂಭಿಸಿದೆ” ಎನ್ನುತ್ತಾರೆ.
ಅಜಯ್ ಗೋಪಿನಾಥರ (ವಯಸ್ಸು 53) ಮೊದಲ ಪ್ರಯತ್ನ ಯೂ-ಟ್ಯೂಬಿನ ಟ್ಯುಟೋರಿಯಲ್‌ಗಳನ್ನು ನೋಡಿ, ಹೆಸರು ಕಾಳುಗಳನ್ನು ಟಿಶ್ಯೂ ಪೇಪರಿನಲ್ಲಿ ಬಿತ್ತಿ ಬೆಳೆಯಲು ಪ್ರಯತ್ನಿಸಿದ್ದು. ಆದರೆ ಪುಟಾಣಿ ಸಸಿಗಳು ಚೆನ್ನಾಗಿ ಬೆಳೆಯಲಿಲ್ಲ. ಆ ಟ್ಯುಟೋರಿಯಲ್‌ಗಳು ಇವನ್ನು ಬೆಳೆಸುವ ಸರಿಯಾದ ವಿಧಾನವನ್ನು ತಿಳಿಸುತ್ತಿಲ್ಲ ಎಂದು ಅವರಿಗೆ ಅರಿವಾಯಿತು.
ಅನಂತರ ತಮ್ಮ ಯುನೈಟೆಡ್ ಕಿಂಗ್‌ಡಮ್‌ನ (ಬ್ರಿಟನ್) ಗೆಳೆಯನೊಬ್ಬನ ಮೂಲಕ ಪುಟಾಣಿ ಸಸಿಗಳ ಕೃಷಿಯಲ್ಲಿ ಪರಿಣತನಾದ ಕೃಷಿಕನೊಬ್ಬನನ್ನು ಸಂಪರ್ಕಿಸಿದರು. ಆ ಪರಿಣತರು ಗುಟ್ಟೊಂದನ್ನು ಇವರಿಗೆ ತಿಳಿಸಿದರು: ಎಲ್ಲ ಬೀಜಗಳು ಪುಟಾಣಿ ಸಸಿಗಳನ್ನು ಬೆಳೆಸಲು ಸೂಕ್ತವಲ್ಲ. ಇದಕ್ಕೆ ಹೈಬ್ರಿಡ್ ಅಲ್ಲದ, ಯಾವುದೇ ರಾಸಾಯನಿಕ ಬಳಸದ ಮತ್ತು ಜೈವಿಕವಾಗಿ ಮಾರ್ಪಾಡು ಆಗಿಲ್ಲದ ಬೀಜಗಳು ಮಾತ್ರ ಸೂಕ್ತ.
ಅಂತಹ ಬೀಜಗಳನ್ನು ಬೆಂಗಳೂರು, ಪುಣೆ ಮತ್ತು ಚತ್ತಿಸ್‌ಘರ್-ನಿಂದ ತರಿಸಿಕೊಂಡು ಪುಟಾಣಿ ಸಸಿಗಳನ್ನು ಬೆಳೆಸತೊಡಗಿದರು ಅಜಯ್ ಗೋಪಿನಾಥ್. "ಆ ಬೀಜಗಳು ದುಬಾರಿ. ಆದರೆ ಅವುಗಳ ಫಸಲು ಬಂದಾಗ ನಮಗೆ ಉತ್ತಮ ಆದಾಯ ಸಿಗುತ್ತದೆ” ಎನ್ನುತ್ತಾರೆ ಅವರು. ಆ ಬೀಜಗಳ ಬೆಲೆ ಕಿಲೋಗ್ರಾಮಿಗೆ ಸುಮಾರು ರೂ.600/-
“ಆರಂಭದಲ್ಲಿ ನಾನು ಎರಡು ಟ್ರೇಗಳಲ್ಲಿ ಪುಟಾಣಿ ಸಸಿಗಳನ್ನು ಬೆಳೆಸಿದ್ದೆ. ನನಗೆ ಅವನ್ನು ಮಾರಾಟ ಮಾಡುವ ಉದ್ದೇಶ ಇರಲೇ ಇಲ್ಲ. ಅವನ್ನು ನನ್ನ ಗೆಳೆಯರಿಗೆ ಹಂಚಿದೆ. ಅವರೆಲ್ಲರೂ ಅವುಗಳ ರುಚಿ ಮತ್ತು ಗುಣಮಟ್ಟ ಮೆಚ್ಚಿಕೊಂಡರು. ಆಗ ನನಗೆ ಇವನ್ನು ಮಾರಾಟ ಮಾಡಬಹುದೆಂದು ಅನಿಸಿತು” ಎಂದು ಆರಂಭದ ದಿನಗಳನ್ನು ನೆನಪು ಮಾಡಿಕೊಳ್ಳುತ್ತಾರೆ ಅವರು. ಹೀಗೆ 2020ರಲ್ಲಿ ಮನೆಯಲ್ಲೇ ವಾಣಿಜ್ಯ ಮಟ್ಟದಲ್ಲಿ ಪುಟಾಣಿ ಸಸಿಗಳನ್ನು ಬೆಳೆಸಲು ಶುರುವಿಟ್ಟರು ಅಜಯ್ ಗೋಪಿನಾಥ್.
ಪ್ರಪಂಚದಲ್ಲಿ ಆಹಾರಕ್ಕಾಗಿ 150 ವಿಧದ ತರಕಾರಿ ಮತ್ತು ಹಸುರು ಸೊಪ್ಪುಗಳ ಪುಟಾಣಿ ಸಸಿಗಳನ್ನು ಬೆಳೆಸಲಾಗುತ್ತಿದೆ. ಅಜಯ್ ಗೋಪಿನಾಥ್ ಬೆಳೆಸುತ್ತಿರುವುದು 15 ವಿಧದ ಪುಟಾಣಿ ಸಸಿಗಳನ್ನು ಮಾತ್ರ: ಕೆಂಪು, ಬಿಳಿ ಮತ್ತು ಹಸುರು ಸಾಸಿವೆ; ಸೂರ್ಯಕಾಂತಿ; ಕೆಂಪು ಮೂಲಂಗಿ ಮತ್ತು ಚೈನೀಸ್ ರೋಸ್ ಮೂಲಂಗಿ; ಕಾರ್ನ್; ಬೊಕ್-ಚೊಯ್ (ಸಸ್ಯಶಾಸ್ತ್ರೀಯ ಹೆಸರು: ಬ್ರಾಸ್ಸಿಕ ರಪ) ಇತ್ಯಾದಿ. ಮೂಲಂಗಿ, ಸಾಸಿವೆ ಮತ್ತು ಸೂರ್ಯಕಾಂತಿಯ ಪುಟಾಣಿ ಸಸಿಗಳಿಗೆ ಬಹಳ ಬೇಡಿಕೆಯಿದೆ.
ಪುಟಾಣಿ ಸಸಿಗಳನ್ನು ಬೆಳೆಸುವುದು ಹೇಗೆ?
ಅಜಯ್ ಗೋಪಿನಾಥ್ ಪುಟಾಣಿ ಸಸಿ ಬೆಳೆಸುವ 100 ಚದರಡಿಯ ಎರಡು ಹವಾ ನಿಯಂತ್ರಿತ ಕೋಣೆಗಳಲ್ಲಿ ಯಾವಾಗಲೂ 25 ಡಿಗ್ರಿ ಸೆಲ್ಷಿಯಸ್‌ಗಿಂತ ಕಡಿಮೆ ಉಷ್ಣತೆ ಮತ್ತು ಶೇಕಡಾ 40 - 60 ತೇವಾಂಶ ಇರುವಂತೆ ವ್ಯವಸ್ಥೆ ಮಾಡಿದ್ದಾರೆ. ಅಲ್ಲಿ ಫುಡ್-ಗ್ರೇಡ್ ಪ್ಲಾಸ್ಟಿಕ್ ಟ್ರೇಗಳಲ್ಲಿ ಕೋಕೋಪೀಟ್‌ನಲ್ಲಿ ಬೀಜಗಳನ್ನು ಬಿತ್ತಿ ಪುಟಾಣಿ ಸಸಿಗಳ ಕೃಷಿ. ಯಾವುದೇ ಗೊಬ್ಬರ ಅಥವಾ ರಾಸಾಯನಿಕ ಗೊಬ್ಬರ ಬಳಸುವುದಿಲ್ಲ.
ಎರಡು ಹಂತಗಳ ಈ ಟ್ರೇಗಳ ಕೆಳಹಂತದಲ್ಲಿ ನೀರು ಇರುತ್ತದೆ. ಮೇಲಿನ ಹಂತದಲ್ಲಿ ಬಿತ್ತಿದ ಬೀಜಗಳು ಮೊಳೆತಾಗ ಕೆಳಕ್ಕೆ ಇಳಿಯುವ ಬೇರುಗಳಿಗೆ ಕೆಳಹಂತದಿಂದ ನೀರು ಲಭ್ಯ. ಬೀಜಗಳನ್ನು ಬಿತ್ತಿದ ನಂತರ ಅವನ್ನು ಮುಚ್ಚಿ, ಮಂದ ಬೆಳಕಿನಲ್ಲಿಟ್ಟು ಫ್ಯಾನ್‌ಗಳನ್ನು ಚಾಲೂ ಮಾಡಿ, ಚೆನ್ನಾಗಿ ಗಾಳಿಯಾಡುವಂತೆ ನೋಡಿಕೊಳ್ಳುತ್ತಾರೆ. ಎರಡು ದಿನಗಳಲ್ಲಿ ಬೀಜಗಳು ಮೊಳಕೆ ಬಂದಾಗ, ಹದವಾದ ಬೆಳಕಿನಲ್ಲಿ ಟ್ರೇಗಳನ್ನು ಇರಿಸುತ್ತಾರೆ.
ಏಳು ದಿನಗಳಲ್ಲಿ ಪುಟಾಣಿ ಸಸಿಗಳು ಮಾರಾಟಕ್ಕೆ ಸಿದ್ಧ. ಆಗ ಅವುಗಳಲ್ಲಿ ತೀರಾ ತೆಳುವಾದ ಕಾಂಡ ಮತ್ತು ಒಂದು ಜೊತೆ ಎಲೆಗಳು ಇರುತ್ತವೆ. ಈ ಬೀಜದಳಗಳು (ಮೊಳಕೆ ಎಲೆಗಳು, ಕೊಟಿಲಿಡನ್ಸ್) ಮೂಡಿದ ಕೂಡಲೇ ಪುಟಾಣಿ ಸಸಿಗಳನ್ನು ಬೇರಿನಿಂದ ತುಸು ಮೇಲಕ್ಕೆ ಕತ್ತರಿಸಿ ಪ್ಯಾಕ್ ಮಾಡುತ್ತಾರೆ.
ಪ್ರತಿ ದಿನ ಸುಮಾರು 10 ಕಿಗ್ರಾ ಪುಟಾಣಿ ಸಸಿಗಳನ್ನು ಕೊಯ್ಲು ಮಾಡುವ ಅಜಯ್, ಅವನ್ನು 100 ಗ್ರಾಮ್‌ಗೆ ರೂ.150 ದರದಲ್ಲಿ ಮಾರುತ್ತಾರೆ. “ಗ್ರೋ ಗ್ರೀನ್ಸ್” ಎಂಬ ಬ್ರಾಂಡ್ ಹೆಸರಿನಲ್ಲಿ ಕೇರಳದ ಹಲವು ನಗರಗಳಲ್ಲಿ ಮತ್ತು ಚೆನ್ನೈ ಹಾಗೂ ಬೆಂಗಳೂರಿನಲ್ಲಿ ಮಾರಾಟ. ಸುಪರ್-ಮಾರ್ಕೆಟುಗಳಿಗೆ, ಹೋಟೆಲುಗಳಿಗೆ, ಆಸ್ಪತ್ರೆಗಳಿಗೆ ಮತ್ತು ಆನ್-ಲೈನಿನಲ್ಲಿ ಮಾರಾಟ ಮಾಡುತ್ತಾರೆ.
ಪುಟಾಣಿ ಸಸಿಗಳ ಪೋಷಕಾಂಶಗಳು
1)ಈ ಪುಟಾಣಿ ಸಸಿಗಳನ್ನು ಬೆಳೆಸಿದರೆ, ಅವುಗಳಿಂದ ಸಿಗುವ ತರಕಾರಿಗಳಲ್ಲಿ ಇರುವುದಕ್ಕಿಂತಲೂ ಜಾಸ್ತಿ ಪೋಷಕಾಂಶಗಳು ಪುಟಾಣಿ ಸಸಿಗಳಲ್ಲೇ ಇರುತ್ತವೆ. ಉದಾಹರಣೆಗೆ, 25 ಗ್ರಾಮ್ ಕೆಂಪು-ಎಲೆಕೋಸಿನ ಪುಟಾಣಿ ಸಸಿಗಳಲ್ಲಿ ಒಂದು ಕಿಲೋಗ್ರಾಮ್ ಕೆಂಪು-ಎಲೆಕೋಸಿನಲ್ಲಿ ಇರುವುದಕ್ಕಿಂತ ಜಾಸ್ತಿ ಪೋಷಕಾಂಶಗಳು ಇರುತ್ತವೆ ಎನ್ನುತ್ತಾರೆ ಅಜಯ್.
2)ಅಧ್ಯಯನಗಳ ಅನುಸಾರ ಪುಟಾಣಿ ಸಸಿಗಳು ವಿಟಮಿನ್-ಸಿ, ವಿಟಮಿನ್-ಕೆ ಮತ್ತು ವಿಟಮಿನ್-ಬಿ-12 ಇವುಗಳ ಉತ್ತಮ ಆಕರಗಳು. ಜೊತೆಗೆ ಇವು ಪೊಟಾಷಿಯಮ್, ಮೆಗ್ನೇಷಿಯಮ್, ಕಬ್ಬಿಣ ಮತ್ತು ಸತು - ಈ ಖನಿಜಗಳ ಹಾಗೂ ಆಂಟಿ-ಓಕ್ಸಿಡೆಂಟ್‌ಗಳ ಸಮೃದ್ಧ ಆಕರಗಳು.
3)ಪುಟಾಣಿ ಸಸಿಗಳ ಕಾಂಡ ಮತ್ತು ಎಲೆಗಳನ್ನು ಹಸಿಯಾಗಿಯೇ ತಿನ್ನಬೇಕು. ಅವನ್ನು ಬೇಯಿಸಲೇ ಬಾರದು; ಯಾಕೆಂದರೆ ಬೇಯಿಸಿದರೆ ಅವುಗಳಲ್ಲಿರುವು ಪೋಷಕಾಂಶಗಳು ನಾಶವಾಗುತ್ತವೆ. ಹಾಗಾಗಿ ಅವನ್ನು ಹಸಿಯಾಗಿ ಅಥವಾ ಸಲಾಡ್ ಜೊತೆ ಸೇರಿಸಿ ತಿನ್ನಬೇಕು ಎಂದು ತಿಳಿಸುತ್ತಾರೆ ಅಜಯ್ ಗೋಪಿನಾಥ್.
"ಪುಟಾಣಿ ಸಸಿಗಳು ಪೋಷಕಾಂಶಗಳ ಸಮೃದ್ಧ ಆಕರಗಳು ಎಂಬುದನ್ನು ಬಹಳಷ್ಟು ಜನರು ತಿಳಿದೇ ಇಲ್ಲ. ಅವು ಫೈವ್-ಸ್ಟಾರ್ ಹೋಟೆಲುಗಳಲ್ಲಿ ಮಾತ್ರ ಸಿಗುವ ಆಹಾರ ಎಂದು ಭಾವಿಸುವವರೇ ಜಾಸ್ತಿ. ಇನ್ನಾದರೂ ಪುಟಾಣಿ ಸಸಿಗಳು ದುಬಾರಿಯಲ್ಲ ಮತ್ತು ಅವನ್ನು ಬೆಳೆಸುವುದು ಕಷ್ಟದ ಕೆಲಸವಲ್ಲ ಎಂದು ಜನರು ತಿಳಿದುಕೊಳ್ಳಬೇಕು. ಹೆಚ್ಚೆಚ್ಚು ಜನರು ಇವನ್ನು ಬೆಳೆಸಿ, ಮಾರಾಟ ಮಾಡಲು ಪ್ರಾರಂಭಿಸಿದರೆ ಜನಸಾಮಾನ್ಯರಿಗೆ ಪೋಷಕಾಂಶಭರಿತ ಆಹಾರ ಸಿಗಲು ಸಾಧ್ಯ” ಎಂಬುದು ಅಜಯ್ ಗೋಪಿನಾಥರ ಆಶಯ.