ಧೀರತಮ್ಮನ ಕಬ್ಬ (ಸಂಪುಟ ೩)

ಧೀರತಮ್ಮನ ಕಬ್ಬ (ಸಂಪುಟ ೩)

ಪುಸ್ತಕದ ಲೇಖಕ/ಕವಿಯ ಹೆಸರು
ಡಾ. ಸುರೇಶ ನೆಗಳಗುಳಿ
ಪ್ರಕಾಶಕರು
ಶುಭ ಪ್ರಕಾಶನ, ಎಕ್ಕೂರು ರಸ್ತೆ, ಮಂಗಳೂರು -೫೭೫೦೦೯
ಪುಸ್ತಕದ ಬೆಲೆ
ರೂ. ೧೦೦.೦೦, ಮುದ್ರಣ: ೨೦೨೧

ವೃತ್ತಿಯಲ್ಲಿ ವೈದ್ಯರಾಗಿದ್ದುಕೊಂಡು ಪ್ರವೃತ್ತಿಯಲ್ಲಿ ಸಾಹಿತಿ, ಕವಿ ಆಗಿರುವ ಡಾ. ಸುರೇಶ ನೆಗಳಗುಳಿ ಅವರು ಬರೆದ ಮುಕ್ತಕಗಳ ಸಂಕಲನ ‘ಧೀರತಮ್ಮನ ಕಬ್ಬ'. ಇದು ಮೂರನೇ ಸಂಪುಟ. ನೆಗಳಗುಳಿ ಅವರ ಈ ಕೃತಿಗೆ ಬೆನ್ನುಡಿಯನ್ನು ಬರೆದಿದ್ದಾರೆ ಖ್ಯಾತ ಸಾಹಿತಿ ಅರವಿಂದ ಚೊಕ್ಕಾಡಿ. ಅದರಲ್ಲಿ “ಡಾ. ಸುರೇಶ ನೆಗಳಗುಳಿ ಅವರ ಮುಕ್ತಕಗಳು ಡಿ.ವಿ.ಜಿ.ಯವರನ್ನು ಹೋಲುವ ನೀತಿಬೋಧಕ ರಚನೆಗಳಾಗಿವೆ. ‘ಧೀರತಮ್ಮ'ನನ್ನು ಉದ್ದೇಶಿಸಿ ಹೇಳುವ ವಿನ್ಯಾಸದಲ್ಲಿ ರಚನೆಯಾಗಿರುವ ಮುಕ್ತಕಗಳಲ್ಲಿ ಬದುಕಿನ ಬಹು ಮಗ್ಗುಲಿನ ಅಪಾರ ಅನುಭವಗಳನ್ನು ಕಾಣಬಹುದು. ಗಳಿಸಿದ ಅನುಭವಗಳ ಬಗ್ಗೆ ಹೃದಯದಿಂದ ಚಿಂತಿಸಿ ಭಾವಪೋಷಕರಾಗಿ ಬರೆಯಲ್ಪಟ್ಟಿರುವ ಈ ಮುಕ್ತಕಗಳು ಅದಮ್ಯ ಜೀವನೋತ್ಸಾಹ ಮತ್ತು ಜೀವಪ್ರೀತಿಯಿಂದ ಓದುಗರನ್ನು ಸೆಳೆದು ಮುದ ನೀಡುವ ಓದಿನ ಅನುಭವವನ್ನು ರೂಪಿಸುತ್ತವೆ.

ತನ್ನ ಅನುಭವಕ್ಕೆ ದಕ್ಕಿದ, ಕಲ್ಪನೆಗೆ ನಿಲುಕಿದ ಜೀವನದ ದೈನಂದಿನ ಕೂಡು-ಕೊಳ್ಳುವಿಕೆಗಳು, ಪ್ರಕೃತಿ, ಜೀವಿಗಳು- ಇವೆಲ್ಲದರ ಕುರಿತ ಒಂದು ಪ್ರೇಮಭರಿತ ನೋಟ, ಮನುಷ್ಯ ಜೀವನದ ಸಮೃದ್ಧಿಯ ಚಿಂತನೆ ಇಲ್ಲಿನ ಮುಕ್ತಕಗಳಲ್ಲಿ ಇವೆ. ಹೇಳುವುದನ್ನು ಜಟಿಲಗೊಳಿಸದೆ ಸರಳವಾಗಿ ಹೇಳಬಹುದು ಎನ್ನುವುದಷ್ಟೇ ಅಲ್ಲ ಸುಂದರವಾಗಿಯೂ ಹೇಳಬಹುದು ಎಂಬುದಕ್ಕೆ ಈ ಮುಕ್ತಕಗಳೇ ಸಾಕ್ಷಿಯಾಗಿವೆ.” ಎಂದು ಚೊಕ್ಕಾಡಿಯವರು ಅಭಿಮಾನ ಪೂರ್ವಕವಾಗಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಈ ಪುಸ್ತಕಕ್ಕೆ ಸವಿವರವಾದ ಮುನ್ನುಡಿಯನ್ನು ಬರೆದಿದ್ದಾರೆ ಸಾಹಿತಿ ವಿ ಬಿ ಕುಳವರ್ಮ. ಬಹಳಷ್ಟು ಜನರಿಗೆ ‘ಮುಕ್ತಕ' ಎಂದರೆ ಏನು ಎಂದೇ ಗೊತ್ತಿರುವುದಿಲ್ಲ. ಈ ಬಗ್ಗೆ ಸವಿವರಾದ ಮಾಹಿತಿಯನ್ನು ಈ ಮುನ್ನುಡಿಯಲ್ಲಿ ನೀಡಿದ್ದಾರೆ, ಇದರ ಜೊತೆಗೆ ಮುಕ್ತಕಗಳ ಛಂದಸ್ಸನ್ನು ಉದಾಹರಣೆಗಳ ಸಹಿತ ಬಹಳ ಸೊಗಸಾಗಿ ವಿವರಿಸಿದ್ದಾರೆ. ಉದಯೋನ್ಮುಖ ಕವಿಗಳು, ಮುಕ್ತಕಗಳ ರಚನೆಯಲ್ಲಿ ಆಸಕ್ತಿ ಹೊಂದಿರುವವರು ಈ ಉದಾಹರಣೆಗಳನ್ನು ಗಮನಿಸಿ ಅದರಂತೆಯೇ ರಚನೆ ಮಾಡಿಕೊಳ್ಳಬಹುದು. ನಿಮ್ಮಲ್ಲಿ ವಿಷಯಾಗಳು ಇರಬೇಕಷ್ಟೇ. 

ಕುಳವರ್ಮರು ಮುನ್ನುಡಿಯ ಒಂದೆಡೆ “ಡಾ. ನೆಗಳಗುಳಿಯವರ ಧೀರತಮ್ಮ ಕಬ್ಬದಲ್ಲಿ ಸುಮಾರು ೨೨೨ ಮುಕ್ತಕಗಳಿವೆ. ಇಲ್ಲಿ ಅವರು ವಿವಿಧ ರೀತಿಯ ಮಾತ್ರಾಲಯಗಳನ್ನು ಬಳಸಿಕೊಂಡು ಮುಕ್ತಕಗಳನ್ನು ರಚಿಸಿದ್ದಾರೆ. ಎಲ್ಲವೂ ಸರಾಗವಾಗಿ ಓದಿಸಿಕೊಂಡು ಹೋಗುತ್ತವೆ. ಸುಶ್ರಾವ್ಯವಾಗಿ ಹಾಡುವುದರೊಂದಿಗೆ ಗಮಕ ಶೈಲಿಯ ವಾಚನ -ವ್ಯಾಖ್ಯಾನವನ್ನೂ ಈ ರಚನೆಗಳಿಂದ ಮಾಡಬಹುದು.

ಇಲ್ಲಿ ವಾಸ್ತು ವೈವಿಧ್ಯವಿದೆ ; ಗುರುಭಕ್ತಿ, ನಂಬಿಕೆ, ಮೈತ್ರಿ, ನೆರವು ಅಥವಾ ಪರೋಪಕಾರವೇ ಮೊದಲಾದ ಸಾಮಾಜಿಕ ಕಳಕಳಿಯನ್ನು ಸಾರುವ ಮುಕ್ತಕಗಳು ಹಲವಿವೆ. ಹಬ್ಬಗಳ ಮಹತ್ವ, ಪೂಜೆ, ಆರಾಧನೆ, ಹೊಸ ಮನೆಯ ಪ್ರವೇಶ ಮೊದಲಾದ ಸಾಂಸ್ಕೃತಿಕ ಹಾಗೂ ಧಾರ್ಮಿಕ ಆಯಾಮಗಳನ್ನು ಸಾರುವ ಸಾಲುಗಳೂ ಇವೆ. ವೇದ, ಉಪನಿಷತ್ತು, ಆರೋಗ್ಯ, ಔಷಧಿ, ಹಬ್ಬ, ಪರಿಸರಪ್ರಜ್ಞೆ, ಧರ್ಮಕರ್ಮ, ಸತತಾಭ್ಯಾಸ, ಕಾಯಕದ ಮಹತ್ವ ಇತ್ಯಾದಿಗಳನ್ನು ಸಾರುವ ಅನೇಕ ಸಾಲುಗಳು ಗಮನ ಸೆಳೆಯುತ್ತವೆ. ಮನುಷ್ಯನಿಗೆ ಹಮ್ಮುಬಿಮ್ಮುಗಳಿರಬಾರದು, ಸ್ವಪ್ರತಿಷ್ಟೆ ಸಲ್ಲದು, ಕೆಡುಕು ಚಿಂತನೆ ಸರಿಯಲ್ಲ ಮೊದಲಾದ ಕಿವಿಮಾತುಗಳನ್ನು ಸಾರುವುದರೊಂದಿಗೆ ಸಂಬಂಧ, ಸದ್ಗುಣ, ಸಂಸ್ಕಾರ, ಸತ್ಸಂಗ, ಸನ್ನಡತೆ, ಸತ್ಕಾರ್ಯ, ಸೌಂದರ್ಯಪ್ರಜ್ಞೆ, ಸದಾಚಾರ, ಸದ್ವಿನಿಯೋಗ, ಸಾಮಾರಸ್ಯವೇ ಮೊದಲಾದ ಸದಾಶಯಗಳನ್ನು ಹೃನ್ಮನಗಳಲ್ಲಿ ಬಿತ್ತುವ ಸಾಮರ್ಥ್ಯವುಳ್ಲ ವಿಶೇಷವಾದ ಮುಕ್ತಕಗಳೂ ಇವೆ.

ಪರದೇಶದಿಂ ಬಂದು ಜನರ ಕಾಡುವ ಸೋಂಕು

ಕಿರಿಕಿರಿ ಕೊರೋನವದು ನಿಜಕು ಮಾರಿ।

ಸರಿಯಾಗಿ ಮುಖಕವಚ ತನುಶುದ್ಧಿಯಿರಿಸಿದರೆ 

ಬರದು ಬಳಿಗದು ನಿಮ್ಮ ಧೀರತಮ್ಮ ॥

ಎಂಬ ಮುಕ್ತಕಗಳ ಸಾಲುಗಳಲ್ಲಿ ಪ್ರಪಂಚವನ್ನೇ ತಲ್ಲಣಗೊಳಿಸಿದ ಮಹಾಮಾರಿ ಕೊರೋನಾವನ್ನು ತಡೆಗಟ್ಟುವ ಜೋಪಾನಸೂತ್ರವನ್ನೂ ಕಾಣಬಹುದು. ಒಬ್ಬರು ವೈದ್ಯರಾಗಿ ಜನಸಾಮಾನ್ಯರ ಆರೋಗ್ಯವನ್ನು ಹೇಗೆ ರಕ್ಷಿಸಿಕೊಳ್ಳಬೇಕೆಂಬ ಕಿವಿಮಾತನ್ನು ಹೇಳುವಲ್ಲಿ ಉತ್ತಮ ಕೌಶಲವನ್ನು ತೋರಿದ್ದಾರೆ.” ಎಂದು ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ.

ನೆಗಳುಗುಳಿ ಅವರು ತಮ್ಮ ಮಾತಿನಲ್ಲಿ ತಾವು ಕಾವ್ಯ ಲೋಕಕ್ಕೆ ಪ್ರವೇಶ ಮಾಡಿದ ಬಗ್ಗೆ, ಗಝಲ್ ಗಳನ್ನು ಒಲಿಸಿಕೊಂಡ ಬಗ್ಗೆ ವಿವರವಾಗಿ ಬರೆದಿದ್ದಾರೆ. ೮೦ ಪುಟಗಳ ಈ ಕೃತಿಯನ್ನು ಅವರು ತಮ್ಮ ಹೆತ್ತವರು, ಗುರುಗಳು, ಸೋದರ ಸೋದರಿಯರು, ಅಸಂಖ್ಯಾತ ಕವಿಗಳು ಮತ್ತು ಓದುಗರಿಗೆ ಸಮರ್ಪಿಸಿದ್ದಾರೆ. ಭವಿಷ್ಯದಲ್ಲಿ ಡಾ. ಸುರೇಶ್ ನೆಗಳಗುಳಿ ಅವರ ಲೇಖನಿಯಿಂದ ಇನ್ನಷ್ಟು ಮುಕ್ತಕಗಳ ಸಂಪುಟಗಳು ಹೊರಬರಲಿ ಎನ್ನುವುದು ಅಭಿಮಾನಿಗಳ ಆಶಯ.