ಸಾಂವಿ - ಖರ್ಚಿಲ್ಲದೆ ಆದಾಯ ತರುವ ಬೆಳೆ

ಸಾಂವಿ, ಬರಗ ಮತ್ತು ನವಣೆ ಈ ಮೂರು ಒಂದೇ ಪ್ರಕಾರದ ಬೆಳೆಗಳಾಗಿವೆ. ಆಕಾರದಲ್ಲಿ ಸಣ್ಣ ಕಾಲುಗಳಾಗಿದ್ದು ಮುಂಗಾರು ಹಂಗಾಮಿನಲ್ಲಿ ಬೆಳೆಯುತ್ತವೆ. ಬರಗ ಎರಡೇ ತಿಂಗಳಿನಲ್ಲಿ ಕೊಯ್ಲಿಗೆ ಬಂದರೆ ಸಾಂವಿ, ನವಣೆ ಮೂರು ತಿಂಗಳಿಗೆ ಕೊಯ್ಲಿಗೆ ಬರುತ್ತವೆ. ಸಾಂವಿಯನ್ನು ಬಿತ್ತಲು ಜೂನ್ ತಿಂಗಳ ಮೊದಲನೆ ವಾರ ಸಕಾಲ. ಉಸುಕು ಮಿಶ್ರೀತ ಕೆಂಪು ಮಣ್ಣಿನ ಮಸಾರಿ ಜಮೀನಿನಲ್ಲಿ ಮತ್ತು ಕಲ್ಲಿನ ಹಕ್ಕಲು ಜಮೀನಿನಲ್ಲೂ ಬೆಳೆಯುತ್ತದೆ. ಉತ್ತರ ಕರ್ನಾಟಕದಲ್ಲಿ ಹೆಚ್ಚಾಗಿ ಸಾಂವಿಯನ್ನು ಬೆಳೆಯುತ್ತಾರೆ. ಅತಿ ಕಡಿಮೆ ಖರ್ಚಿನಲ್ಲಿ ಹೆಚ್ಚು ಇಳುವರಿ ಕೊಡಬಲ್ಲ ಸಾಂವಿ ರೈತರನ್ನು ಬರಗಾಲದ ಬವಣೆಯಿಂದ ಪಾರು ಮಾಡುವ ಬೆಳೆಯಾಗಿದೆ.

ಬೀಜಗಳ ರಕ್ಷಣೆ ಬಹಳ ಸುಲಭ :

ಸಾಂವಿಯ ಬೀಜಕ್ಕಾಗಿ ಯಾವುದೇ ಕಂಪನಿಯ ಮೊರೆ ಹೋಗಬೇಕಾಗಿಲ್ಲ. ಹೈಬ್ರಿಡ್ ಬೀಜದ ಮೊರೆ ಹೋಗದೆ ರೈತರು ಮನೆಯಲ್ಲೇ ಸಾಂವಿಯ ಬೀಜ ಸಂಗ್ರಹಿಸುತ್ತಾರೆ. ಸಾಂವಿಯ ಬೀಜ ಸಂಗ್ರಹಿಸುವುದು ಬಹಳ ಸುಲಭ. ಹಿಂದಿನ ವರ್ಷ ಬೆಳೆದ ಸಾಂವಿಯ ಕಾಳುಗಳನ್ನೇ ಬೀಜವಾಗಿ ಮುಂದಿನ ಹಂಗಾಮಿಗೆ ಬಳಸಬಹುದಾಗಿದೆ. ಪ್ರತಿ ವರ್ಷ ಪೇಟೆಗೆ ಹೋಗಿ ಅವರು ಹೇಳಿದ ದರಕ್ಕೆ ಖರೀದಿಸದೆ ಎಷ್ಟೋ ವರ್ಷಗಳಿಂದ ಬೀಜ ರಕ್ಷಣೆ ಮಾಡಿ ಬಿತ್ತನೆ ಮಾಡುತ್ತಿದ್ದಾರೆ. ಬೀಜಗಳ ರಕ್ಷಣೆಗೆ ವಿಶೇಷ ಕಾಳಜಿ ಬೇಕಾಗಿಲ್ಲ. ಯಾವ ಕ್ರಿಮಿನಾಶಕಗಳ ಕೀಟನಾಶಕಗಳ ಬಳಕೆ ಇಲ್ಲದೆ ಗೋಣಿ ಚೀಲಗಳಲ್ಲಿ ಸಂಗ್ರಹಿಸಿಡಲು ಬರುತ್ತದೆ. ಸಾಂವಿಯ ಕಾಳುಗಳಿಗೆ ಕೀಟ, ನುಸಿಗಳ ಬಾದೆಯಗದು, ಸಾಂವಿ ಜವಾರಿ ತಳಿಯಾಗಿದ್ದು ಎಷ್ಟೋ ವರ್ಷಗಳಿಂದಲೂ ರೈತರೇ ಸಂಗ್ರಹಿಸಿದ ಬೀಜಗಳನ್ನು ಬಿತ್ತುತ್ತಿದ್ದರು ಇಳುವರಿ ಕಡಿಮೆಯಾಗಿಲ್ಲ. ಸಾಂವಿಯ ಬೆಳೆಗೆ ಯಾವುದೇ ಕೀಟ ಹಾಗೂ ರೋಗದ ಬಾದೆಯಿಲ್ಲದೆ ಬೆಳೆಯುವುದು. ಹೀಗಾಗಿ ಸಾಂವಿಯ ಬೆಳೆಗೆ ವಿಶೇಷ ಆರೈಕೆ ಬೇಕಾಗಿಲ್ಲ.

ಬರಗಾಲದಲ್ಲೂ ಬದುಕಿಸುವ ಬೆಳೆ :
ಅಲ್ಪ ಮಳೆಯಾದರೂ ಸಾಂವಿ ಬೆಳೆಯುತ್ತದೆ. ಕಳೆದ ವರ್ಷ ಸಾಂವಿ ಬಿತ್ತಿದ ಒಂದು ತಿಂಗಳಿನ ನಂತರ ಮಳೆಯಗೆಲೇ ಇಲ್ಲ. ಒಂದೂವರೆ ತಿಂಗಳು ಮಳೆಯಾಗದೆ ಸಾಂವಿ ಒಣಗಿ ಹೋಗಿತ್ತು. ಅಷ್ಟಾದರೂ ಮಳೆಯಾದ ಕೂಡಲೆ ಪುನಶ್ಚೇತನ ಪಡೆದು ಹೊಡೆ ಹಾಕಿದ್ದು ಆಶ್ಚರ್ಯಕರ ಸಂಗತಿ. ಸಾಂವಿಯ ಹುಲ್ಲು ದನಗಳಿಗೆ ಉತ್ತಮ ಆಹಾರ (ಮೇವು ) ಆಗಿದೆ. ಸಾಂವಿಯ ಕಾಳಿನ ಮೇಲಿನ ಸಿಪ್ಪೆ ದನಕರುಗಳಿಗೆ ತವುಡಾಗಿದೆ. ಭತ್ತದ ಹುಲ್ಲಿನ ಹಾಗೆ ಸಾಂವಿಯ ಹುಲ್ಲು ಬಣವೆಗೆ ಹೊದಿಸಲು ಉಪಯುಕ್ತವಾಗಿದೆ. ಬೇಸಾಯದ ಖರ್ಚಿಲ್ಲದೆ, ಅಲ್ಪ ಮಳೆಯಲ್ಲಿ ಅಧಿಕ ಇಳುವರಿ ಕೊಡಬಲ್ಲ ಸಾಂವಿ ರೈತರಿಗೆ ವರದಾನವಾಗಿದೆ. ಸಾಂವಿ ಸಂಪೂರ್ಣ ಸ್ವಾವಲಂಬಿ ಬೆಳೆಯಾಗಿದೆ. ಸಾಂವಿಯ ಕಾಳುಗಳು ಸಾಸಿವೆ ಕಾಳಿನಷ್ಟೇ ಗಾತ್ರದವು ಆಗಿವೆ ಸಾಂವಿ ಹುಲ್ಲು ಎರಡರಿಂದ ಮೂರು ಅಡಿ ಎತ್ತರಕ್ಕೆ ಬೆಳೆಯುತ್ತದೆ. ಸಾಂವಿಯಲ್ಲಿ ಬೇರೆ ಬೇರೆ ತಳಿಗಳಿಲ್ಲ. ಸಾಂವಿಯ ಕೃಷಿ ಸಾವಯವ ಕೃಷಿಯಾಗಿದೆ. ಎಕರೆಗೆ ಕನಿಷ್ಠ ೪ರಿಂದ ೬ ಕ್ವಿoಟಲ್ ಇಳುವರಿ ಬರುತ್ತದೆ. ಧಾರಣೆಯೂ ಕ್ವಿoಟಲ್ಗೆ ಏನಿಲ್ಲೆಂದುರೂ ಕ್ವಿoಟಲ್ಗೆ ಸಾವಿರ ರೂಪಾಯಿಗಳಷ್ಟಾಗಿದೆ.

ಯೋಗ್ಯ ಸಾಂವಿ ಭೋಗ್ಯ ಸಾಂವಿ ......:
ಸಾಂವಿಯ ಕಾಳಿನೊಳಗೆ ಇರುವ ಅಕ್ಕಿಯನ್ನು ಅನ್ನ, ಹುಗ್ಗಿ ಮತ್ತು ಇಡ್ಲಿ ಮಾಡುತ್ತಾರೆ. ಸಾಂವಿ ಅನ್ನ ಭತ್ತದ ಅನ್ನಕ್ಕಿಂತ ರುಚಿಕರವಾಗಿದೆ. ಸಾಂವಿಯ ಅಕ್ಕಿ ಆರೋಗ್ಯಕ್ಕೆ ಬಹಳ
ಉತ್ತಮ ಆಹಾರ ಎನಿಸಿದೆ. ಇದರಲ್ಲಿ ವಾತ, ಪಿತ್ಥ ಮತ್ತು ಕಫದ ಅಂಶಗಳು ಇಲ್ಲ. ಪಿಷ್ಟದ ಅಂಶ ಬಹಳ ಕಡಿಮೆ ಇದೆ. ಸಕ್ಕರೆ ಕಾಯಿಲೆಯಿಂದ ಬಳಲುವವರಿಗೆ ಸಾಂವಿ ಅಕ್ಕಿ ಉತ್ತಮ ಆಹಾರ ಎನಿಸಿದೆ. ಸಕ್ಕರೆ ಕಾಯಿಲೆ ಅಷ್ಟೇ ಅಲ್ಲ ರಕ್ತದ ಒತ್ತಡ ಉಳ್ಳವರೂ ಧಾರಾಳವಾಗಿ ಉಣ್ಣಬಹುದು. ಬೊಜ್ಜು, ಮೈ ಉಳ್ಳವರಿಗೂ ಸಾಂವಿ ಅನ್ನ ಯೋಗ್ಯ
ಆಹಾರವಾಗಿದೆ. ಕೊಬ್ಬಿನ ಅಂಶ (ಕೊಲೆಸ್ಟ್ರಾಲ್) ಕಡಿಮೆ ಇರುವದರಿಂದ ಸಾಂವಿ ಅಕ್ಕಿ ಉತ್ತಮ ಆರೋಗ್ಯಕ್ಕೆ ಹೇಳಿ ಮಾಡಿಸಿದಂತಿದೆ. ಒಟ್ಟಿನಲ್ಲಿ ಸಾಂವಿಯೂ ರಾಗಿಯ ಹಾಗೆ 'ಯೋಗ್ಯ ಸಾಂವಿ, ಭೋಗ್ಯ ಸಾಂವಿ, ಆರೋಗ್ಯವಂತ ಸಾಂವಿ' ಎನಿಸಿದೆ.
ಜನರ ಆರೋಗ್ಯಕ್ಕೆ ಉತ್ತಮ ಆಹಾರವಾಗಿರುವ ಸಾಂವಿ ಮಣ್ಣಿನ ಆರೋಗ್ಯವನ್ನು ರಕ್ಷಿಸುವ ಬೆಳೆಯಾಗಿದೆ ಇಂತಹ ಸಾಂವಿಯನ್ನು ಉಳಿಸಿ (ಇದರ ಬೀಜಗಳನ್ನು ರಕ್ಷಿಸಿ ),
ಬೆಳೆಸಿ, ಬಳಸಿ ಉತ್ತಮ ಆರೋಗ್ಯಕ್ಕೆ ಪ್ರೇರಕವಾಗಿಸಿದ ರೈತ ಸಮುದಾಯಕ್ಕೆ ಧನ್ಯವಾದ ಹೇಳಲೇಬೇಕು. 'ಯಾರು ನನಗೆ ಸಾಟಿ' ಎಂದು ಹೈಟೆಕ್ ಯುಗದ ತಂತ್ರಜ್ಞಾನಕ್ಕೆ
ಸವಾಲೆಸೆದ ಸಾಂವಿಯ ಬಗ್ಗೆ ಎಷ್ಟು ಬರೆದರೂ ಕಡಿಮೆಯೆ.