ಮಕೈಬಾರಿ ಟೀ ಎಸ್ಟೇಟ್: ದುಬಾರಿ ಚಹಾದ ತವರು

ಒಂದು ಕಿಲೋಕ್ಕೆ ರೂಪಾಯಿ ೧.೧೦ ಲಕ್ಷ ಬೆಲೆಯ ಚಹಾ ಬಗ್ಗೆ ಕೇಳಿದ್ದೀರಾ? ಅದುವೇ ಜಗತ್ತಿನ ಅತ್ಯಂತ ದುಬಾರಿ ಚಹಾ. ಅದರ ತವರು ಡಾರ್ಜಿಲಿಂಗಿನ ಮಕೈಬಾರಿ ಟೀ ಎಸ್ಟೇಟ್. ೧೮೫೯ರಲ್ಲಿ ಗಿರೀಶ್ ಚಂದ್ರ ಬ್ಯಾನರ್ಜಿ ಆರಂಭಿಸಿದ ಈ ಎಸ್ಟೇಟಿಗೆ ೧೫೮ ವರುಷಗಳ ದೀರ್ಘ ಇತಿಹಾಸ. ೧,೬೫೦ ಎಕ್ರೆ ವಿಸ್ತಾರದ ಮಕೈಬಾರಿ ಟೀ ಎಸ್ಟೇಟಿನಲ್ಲಿ ಸುತ್ತಾಡುವಾಗ ಅಲ್ಲಿ ಮೂರನೆಯ ಎರಡು ಭಾಗ ಪ್ರದೇಶದಲ್ಲಿ (೧,೧೦೦ ಎಕ್ರೆ) ಅರಣ್ಯವೇ ಕಾಣಿಸುತ್ತದೆ. ಉಳಿದ ಮೂರನೆಯ ಒಂದು ಭಾಗ ಪ್ರದೇಶದಲ್ಲಿ (೫೫೦ ಎಕ್ರೆ) ಮಾತ್ರ, ಅರಣ್ಯದ ನಡುನಡುವೆ ಚಹಾ ಗಿಡಗಳ ಉದ್ಯಾನಗಳಿವೆ. ಇಲ್ಲಿ ಅತ್ಯುತ್ತಮ ಗುಣಮಟ್ಟದ ಟೀ ಉತ್ಪಾದನೆಯಾಗಲು ಇದುವೇ ಪ್ರಧಾನ ಕಾರಣ, ಎನ್ನುತ್ತಾರೆ ಮಕೈಬಾರಿ ಟೀ ಎಸ್ಟೇಟಿನ ಮಾಲೀಕ ರಾಜಾ ಬ್ಯಾನರ್ಜಿ (೭೦). ೧೯೬೦ ಮತ್ತು ೧೯೭೦ರ ದಶಕಗಳಲ್ಲಿ, ಈ ಎಸ್ಟೇಟಿನಲ್ಲಿ ನೂರಾರು ಎಕ್ರೆ ಕಾಡು ನಾಶ ಮಾಡಲಾಯಿತು. ಅದರ ದುಷ್ಪರಿಣಾಮಗಳು ಕೆಲವೇ ವರುಷಗಳಲ್ಲಿ ಕಂಡು ಬಂದವು. ಭಾರೀ ಭೂಕುಸಿತದಿಂದಾಗಿ, ವ್ಯಾಪಕ ಪ್ರದೇಶದಲ್ಲಿ ಚಹಾ ಉದ್ಯಾನಗಳು ನಾಶವಾದವು. ಅದಲ್ಲದೆ, ರಾಸಾಯನಿಕ ಪೀಡೆನಾಶಕಗಳ ಅಧಿಕ ಬಳಕೆಯಿಂದಾಗಿ ಅಲ್ಲಿನ ಮಣ್ಣು ವಿಷಮಯವಾಯಿತು. “ಇದರಿಂದ ನಾವು ಪಾಠ ಕಲಿತು, ಕಾಡು ಬೆಳೆಸುವ ದೊಡ್ಡ ಕಾರ್ಯಕ್ರಮ ಕೈಗೆತ್ತಿಕೊಂಡೆವು” ಎಂದು ವಿವರಿಸುತ್ತಾರೆ ರಾಜಾ ಬ್ಯಾನರ್ಜಿ. ಜೊತೆಗೆ, ಅಲ್ಲಿ ಬಯೋಡೈನಮಿಕ್ ಕೃಷಿ ಎಂಬ ಸಾವಯವ ಪದ್ಧತಿಯಲ್ಲಿ ಚಹಾ ಗಿಡಗಳ ಕೃಷಿ ಮಾಡುತ್ತಿರುವುದೂ ಅಲ್ಲಿನ ಚಹಾದ ಗುಣಮಟ್ಟ ವೃದ್ಧಿಗೆ ಪೂರಕ. ಡಾರ್ಜಿಲಿಂಗಿನಲ್ಲಿ ಚಹಾದ ಸಾವಯವ ಕೃಷಿ ಆರಂಭಿಸಿದ ಮೊದಲನೆಯ ಎಸ್ಟೇಟ್ ಮಕೈಬಾರಿ. “ನಾವು ಕಾಡು ಬೆಳೆಸುವ ಮತ್ತು ಸಾವಯವ ಕೃಷಿಯ ಕ್ರಮಗಳನ್ನು ಜ್ಯಾರಿ ಮಾಡಿದ್ದರಿಂದಾಗಿ ನಮ್ಮ ಟೀ ಎಸ್ಟೇಟ್ ಉಳಿಯಿತು. ಜೊತೆಗೆ, ಜಗತ್ತಿನ ಎಲ್ಲ ಪ್ರದೇಶಗಳ ಚಹಾಪ್ರೇಮಿಗಳಿಗೆ ನಮ್ಮ ಉತ್ಪನ್ನಗಳು ಇಷ್ಟವಾದವು. ಡಾರ್ಜಿಲಿಂಗಿನ ಇತರ ಟೀ ಎಸ್ಟೇಟಿನವರು ಇದೇ ಕ್ರಮಗಳನ್ನು ಅನುಸರಿಸಿದರು. ಹಾಗಾಗಿ, ಈಗ ಡಾರ್ಜಿಲಿಂಗಿನಲ್ಲಿ ಎಲ್ಲೆಡೆ ಸಾವಯವ ಟೀ ಎಸ್ಟೇಟುಗಳೇ ಇವೆ” ಎಂದು ಮಾಹಿತಿ ನೀಡುತ್ತಾರೆ ರಾಜಾ ಬ್ಯಾನರ್ಜಿ. ಅಂದ ಹಾಗೆ ಮಕೈಬಾರಿ ಟೀ ಎಸ್ಟೇಟಿನ ಮಾಲೀಕ ಕುಟುಂಬದ ನಾಲ್ಕನೇ ತಲೆಮಾರಿನ ರಾಜಾ ಬ್ಯಾನರ್ಜಿ ಇಲ್ಲಿಗೆ ಬಂದು ನೆಲೆಸಿದ್ದು ಆಕಸ್ಮಿಕ. ಲಂಡನಿನಲ್ಲಿ ಇಂಜಿನಿಯರ್ ಆಗಿದ್ದ ಅವರನ್ನು ಅಲ್ಲಿನ ಆಧುನಿಕ ಜೀವನಶೈಲಿ ಸೆಳೆದಿತ್ತು. ೧೯೬೦ರಲ್ಲಿ ಒಮ್ಮೆ ರಜೆಯಲ್ಲಿ ಮಕೈಬಾರಿ ಟೀ ಎಸ್ಟೇಟಿಗೆ ಬಂದಿದ್ದರು. ಆಗೊಂದು ದಿನ ಕುದುರೆ ಓಡಿಸುತ್ತಿದ್ದಾಗ ಜಾರಿ ಬಿದ್ದರು. “ನಾನು ಪ್ರಪಾತಕ್ಕೆ ಉರುಳದಂತೆ ಒಂದು ಮರ ಅಡ್ಡವಾಯಿತು. ಆ ಸಂದರ್ಭದಲ್ಲಿ ನನಗೆ ಕೇಳಿದ್ದು ಹಕ್ಕಿಗಳ ಗಾನ ಮತ್ತು ಎಲೆಗಳ ಸಂಗೀತ. ತಮ್ಮ ದುರ್ದೆಶೆಯನ್ನು ಅವು ನನಗೆ ಹೇಳುತ್ತಿವೆ ಎಂದು ಆಗ ಅನಿಸಿತು. ಆ ಕ್ಷಣವೇ ಇಲ್ಲಿನ ಜೀವಸಂಕುಲದ ಜೊತೆ ಉಳಿಯಲು ನಿರ್ಧರಿಸಿದೆ” ಎನ್ನುತ್ತಾರೆ ರಾಜಾ ಬ್ಯಾನರ್ಜಿ. ಮಕೈಬಾರಿಯ ಜೀವವೈವಿಧ್ಯ ಇದೆಯಲ್ಲ, ಅದು ಬೆಲೆ ಕಟ್ಟಲಾಗದ ಸಂಪತ್ತು! ನೂರಾರು ಜಾತಿಯ ಸಸ್ಯಸಂಕುಲ, ೪೦೦ ಜಾತಿಯ ಹಕ್ಕಿಗಳು, ವಿವಿಧ ಪ್ರಾಣಿಗಳು, ಜಗತ್ತಿನಲ್ಲಿ ಬೇರೆಲ್ಲಿಯೂ ಕಾಣಸಿಗದ ಕೀಟಗಳು. ಈಗ ಮತ್ತೆ ಕಾಲಚಕ್ರ ತಿರುಗಿದೆ. ರಾಜಾ ಬ್ಯಾನರ್ಜಿ ಅವರ ಇಬ್ಬರು ಮಗಂದಿರಿಗೂ ಈ ವಿಶಾಲ ಟೀ ಎಸ್ಟೇಟಿನ ನಿರ್ವಹಣೆ ಮುಂದುವರಿಸಲು ಇಷ್ಟವಿಲ್ಲ. ಹಾಗಾಗಿ, ತನ್ನ ಒಡೆತನದ ಶೇಕಡಾ ೯೦ ಪಾಲನ್ನು ಕೊಲ್ಕತಾದ ಚಟರ್ಜಿಗಳ ದೊಡ್ಡ ಕಂಪೆನಿ ಲಕ್ಷ್ಮಿ ಗ್ರೂಪಿಗೆ ಜೂನ್ ೨೦೧೪ರಲ್ಲಿ ರಾಜಾ ಬ್ಯಾನರ್ಜಿ ಮಾರಿದ್ದಾರೆ. ಅದೇನಿದ್ದರೂ, ತಾನಿರುವ ತನಕ ತಾನೇ ಈ ಎಸ್ಟೇಟನ್ನು ನಿರ್ವಹಿಸುವುದಾಗಿ ಒಪ್ಪಂದ ಮಾಡಿಕೊಂಡಿದ್ದಾರೆ. (ಬಾಕ್ಸ್ ಆರಂಭ) ಶ್ರೇಷ್ಠ ಚಹಾ ತಯಾರಿಯ ಹಂತಗಳು ಚಹಾ ಗಿಡಗಳ ಎಳೆಯ ಎಲೆಗಳು ಚಹಾ ಹುಡಿಯಾಗಿ ಪರಿವರ್ತನೆ ಆಗುವುದು ಹಲವು ಹಂತಗಳ ಪ್ರಕ್ರಿಯೆ. ಕೊಯ್ದ ಎಲೆಗಳನ್ನು ಗುಣಮಟ್ಟದ ಆಧಾರದಿಂದ ವಿಂಗಡಿಸುವುದು ಮೊದಲನೆಯ ಹಂತ. ಎಲೆಗಳ ತೇವಾಂಶ ಕಡಿಮೆ ಮಾಡುವುದು ಎರಡನೆಯ ಹಂತ. ಅದಕ್ಕಾಗಿ, ಎಲೆಗಳನ್ನು ಕೆಲವು ಗಂಟೆಗಳ ಕಾಲ ತಂಪು ಗಾಳಿಗೆ ಒಡ್ಡಲಾಗುತ್ತದೆ. ಅನಂತರ, ಅವನ್ನು ೩೭.೭ ಡಿಗ್ರಿ ಸೆ. ಉಷ್ಣತೆಯಲ್ಲಿ ೧೮ ಗಂಟೆ ಅವಧಿ ಒಣಗಿಸಬೇಕು - ಶೇಕಡಾ ೬೨ ತೇವಾಂಶ ಹೋಗಲಾಡಿಸಲಿಕ್ಕಾಗಿ. ಉಳಿದ ತೇವಾಂಶವು “ರೋಲಿಂಗ್" ಹಂತದಲ್ಲಿ ಎಲೆಯ ಕೋಶಗಳನ್ನು ಒಡೆಯಲು, ಆ ಮೂಲಕ ಬುರುಗು ಬರಿಸಲು ಸಹಕಾರಿ. ಈ ಹಂತದಲ್ಲಿ ಚುರುಚೂರಾದ ಎಲೆಗಳು ವಿಶಿಷ್ಠ ಬಣ್ಣ ಮತ್ತು ಪರಿಮಳ ಪಡೆಯುತ್ತವೆ. ಅತ್ಯಂತ ಸುಮಧುರ ಪರಿಮಳ ಉಂಟಾದಾಗ ಎಲೆಚೂರುಗಳನ್ನು ಪೂರ್ತಿ ಒಣಗಿಸಿ, ಪ್ಯಾಕ್ ಮಾಡಲಾಗುತ್ತದೆ. ಕಪ್ಪು ಚಹಾ, ಊಲೋಂಗ್ ಚಹಾ, ಹಸುರು ಚಹಾ ಮತ್ತು ಬಿಳಿ ಚಹಾ - ಇವು ಮಕೈಬಾರಿ ಎಸ್ಟೇಟ್ ಉತ್ಪಾದಿಸುವ ನಾಲ್ಕು ವಿಧದ ಚಹಾ ಹುಡಿಗಳು. ಗುಲಾಬಿ ಹೂವಿನ ಪರಿಮಳದ ಸಿಲ್ವರ್ ಟಿಪ್ಸ್ ಇಂಪೀರಿಯಲ್ ಬ್ರಾಂಡ್ ಅತ್ಯಂತ ದುಬಾರಿ ಚಹಾ ಹುಡಿ. ಇದರ ಬೆಲೆಯೇ ಏಲಂನಲ್ಲಿ ಕಿಲೋಕ್ಕೆ ಒಂದು ಲಕ್ಷ ರೂಪಾಯಿಗಿಂತ ಜಾಸ್ತಿ. ನೆನಪಿರಲಿ: ಡಾರ್ಜಿಲಿಂಗ್ ಚಹಾದ ರುಚಿ ಮತ್ತು ಪರಿಮಳ ಆಸ್ವಾದಿಸ ಬೇಕಾದರೆ, ನಮ್ಮ ಮುಂದೆ ಹಬೆಯಾಡುವ ಚಹಾ ಕಪ್ ತಂದಿಟ್ಟ ತಕ್ಷಣ ಕುಡಿಯಬಾರದು. ಅದರ ಉಷ್ಣತೆ ಕೋಣೆಯ ಉಷ್ಣತೆಗೆ ಸಮವಾಗುವ ತನಕ ತಾಳ್ಮೆಯಿಂದ ಕಾಯಬೇಕು. ಅನಂತರ, ಗುಟುಕು ಚಹಾ ನಿಧಾನವಾಗಿ ಹೀರಿಕೊಂಡು, ಸಾವಧಾನದಿಂದ ಸವಿಯಬೇಕು. ಆಗ, ನಮ್ಮ ಅನುಭವಕ್ಕೆ ದಕ್ಕುವ ಚಹಾದ ರುಚಿ ಮತ್ತು ಪರಿಮಳವನ್ನು ಪದಗಳಲ್ಲಿ ವರ್ಣಿಸಲು ಸಾಧ್ಯವಿಲ್ಲ. (ಬಾಕ್ಸ್ ಮುಕ್ತಾಯ) ಮಕೈಬಾರಿ ಟೀ ಎಸ್ಟೇಟಿನ ವಾರ್ಷಿಕ ಉತ್ಪಾದನೆ ೧.೩ ಟನ್ ಚಹಾ ಹುಡಿ. ಇದರ ಶೇಕಡಾ ೯೦ ಭಾಗ ಯು.ಎಸ್.ಎ. ದೇಶಕ್ಕೆ ರಫ್ತು. ಭಾರತದಲ್ಲಿ ಈ ಎಸ್ಟೇಟಿನ ಚಹಾ ಹುಡಿ ಯಾವುದೇ ಮಳಿಗೆಯಲ್ಲಿ ಮಾರಾಟಕ್ಕೆ ಲಭ್ಯವಿಲ್ಲ. ಅದು ಬೇಕೆಂದಾದರೆ, ಆನ್-ಲೈನಿನಲ್ಲಿಯೇ ಬೇಡಿಕೆ ಸಲ್ಲಿಸಿ ತರಿಸಿಕೊಳ್ಳಬೇಕು. ಮಕೈಬಾರಿ ಎಸ್ಟೇಟಿನ ಟೀ ಜಾಗತಿಕವಾಗಿ ಹೆಸರುವಾಸಿಯಾಗಲು ಅಲ್ಲಿನ ಚಹಾ ಎಲೆ ಕೀಳುವ ೫೫೦ ಮಹಿಳಾ ಕಾರ್ಮಿಕರ ಕೈಚಳಕವೂ ಮುಖ್ಯ ಕಾರಣ. ಅವರದು ಡಾರ್ಜಿಲಿಂಗಿನಲ್ಲಿಯೇ ಅತಿ ದೊಡ್ದ ಕೆಲಸಗಾರರ ತಂಡ. ಪ್ರತಿಯೊಬ್ಬ ಎಲೆ ಕೀಳುವ ಮಹಿಳೆ ೫,೦೦೦ ಅಡಿ ಎತ್ತರದ ಬೆಟ್ಟಗಳಲ್ಲಿರುವ ಚಹಾ ಉದ್ಯಾನಗಳಿಂದ ದಿನದಲ್ಲಿ ಎರಡು ಸಲ ಎಲೆ ಕಿತ್ತು ತರುತ್ತಾಳೆ. ಪ್ರತೀ ಸಲ ತಲಾ ಐದು ಕಿಮೀ ನಡೆಯಬೇಕಾಗುತ್ತದೆ. ಆ ಮಹಿಳಾ ಕಾರ್ಮಿಕಳ ಬೆನ್ನಿನಲ್ಲಿರುವ ಬುಟ್ಟಿಯಲ್ಲಿ ಎಲೆಗಳು ತುಂಬಿದಾಗ ಅದರ ತೂಕ ೩೦ ಕಿಲೋಗ್ರಾಮ್. ಪ್ರತಿ ದಿನದ ಕೆಲಸಕ್ಕೆ ಅವರಿಗೆ ಸಿಗುವ ಮಜೂರಿ ರೂ.೯೦. ಜೊತೆಗೆ, ತಿಂಗಳ ಸಂಬಳದೊಂದಿಗೆ ಕಡಿಮೆ ಗುಣಮಟ್ಟದ ೨೫೦ ಗ್ರಾಮ್ ಚಹಾ ಹುಡಿ. ಈ ಮಹಿಳಾ ಕಾರ್ಮಿಕರ ಮುಖದಲ್ಲಿ ಕಾಣಿಸುತ್ತದೆ, ಜಗತ್ತಿನ ಪ್ರಸಿದ್ಧ ಟೀ ಎಸ್ಟೇಟಿನಲ್ಲಿ ದುಡಿಯುತ್ತಿದ್ದೇವೆ ಎಂಬ ಅಭಿಮಾನ. ಐದು ಸಾವಿರ ಅಡಿ ಎತ್ತರದ ಪರ್ವತಗಳಲ್ಲಿ ಹಬ್ಬಿರುವ, ಮುಗಿಲಿಗೆ ಮುತ್ತಿಕ್ಕುವ ಟಿ ಎಸ್ಟೇಟ್ ಮಕೈಬಾರಿ. ಮೂರು ನದಿಗಳು ಹರಿಯುತ್ತಿರುವ, ವೈವಿಧ್ಯಮಯ ಜೀವಸಂಕುಲ ತುಂಬಿರುವ, ಜಗತ್ತಿನಲ್ಲೇ ಅತ್ಯಂತ ದುಬಾರಿ ಚಹಾ ಹುಡಿ ಉತ್ಪಾದಿಸುತ್ತಿರುವ ಇಂತಹ ಟೀ ಎಸ್ಟೇಟಿಗೆ ನಮ್ಮ ದೇಶದ ಹಾಗೂ ವಿದೇಶಗಳ ಪ್ರವಾಸಿಗರು ಪ್ರತಿ ವರುಷ ದೊಡ್ಡ ಸಂಖ್ಯೆಯಲ್ಲಿ ಬರುತ್ತಾರೆ. ಅವರ ಅನುಕೂಲಕ್ಕಾಗಿ, ಅಲ್ಲಿನ ಕೆಲವು ಕಾರ್ಮಿಕರ ಮತ್ತು ಆ ಪ್ರದೇಶದ ಹಳ್ಳಿಗರ ೨೨ ಕುಟುಂಬಗಳು ತಮ್ಮ ಮನೆಯ ಕೋಣೆಯೊಂದನ್ನು ಸುಸಜ್ಜಿತ ಹೋಂಸ್ಟೇ ಆಗಿ ಪರಿವರ್ತಿಸಿವೆ. ಅಲ್ಲಿ ದಿನವೊಂದಕ್ಕೆ ಒಬ್ಬರಿಗೆ ರೂ.೮೦೦ ವೆಚ್ಚದಲ್ಲಿ ಉಳಿಯಲು ಸುಸಜ್ಜಿತ ಕೋಣೆ, ಬೆಳಗ್ಗಿನ ಉಪಾಹಾರ ಮತ್ತು ಎರಡು ಊಟ ಲಭ್ಯ. ಡಾರ್ಜಿಲಿಂಗ್ ಮತ್ತು ಸಿಲಿಗುರಿ ಪಟ್ಟಣಗಳಿಂದ ಅಥವಾ ಬಾಗ್‌ದೋಗ್ರಾ ವಿಮಾನ ನಿಲ್ದಾಣದಿಂದ ಮಕೈಬಾರಿ ಟೀ ಎಸ್ಟೇಟಿಗೆ ಒಂದೂವರೆ ಗಂಟೆಯ ಪ್ರಯಾಣ. ಅಲ್ಲಿನ ಚಹಾದ ಕೃಷಿ ಹಾಗೂ ಸಂಸ್ಕರಣೆ ಕಣ್ಣಾರೆ ಕಂಡು, ಆ ಚಹಾದ ಘಮಘಮ ಆಸ್ವಾದಿಸಲು ಒಂದು ಬಾರಿಯಾದರೂ ಮಕೈಬಾರಿಗೆ ಹೋಗಿ ಬರಬೇಕು ಅನಿಸುತ್ತದೆ, ಅವರ ಜಾಲತಾಣದಲ್ಲಿ ಕಾಣಿಸುವ ಈ ಮೊದಲ ಮಾತನ್ನು ಓದಿದಾಗ: "ನಾವು ರೈತರು, ಮಣ್ಣಿನ ಮೆನೇಜರರು”.
-- - ಅಡ್ಡೂರು ಕೃಷ್ಣ ರಾವ್