ಧಾರವಾಡ ಕೃಷಿಮೇಳದಲ್ಲಿ ಸಿರಿಧಾನ್ಯ ಪ್ರಚಾರ

ಇತ್ತೀಚೆಗೆ ಧಾರವಾಡದಲ್ಲಿ ಜರಗಿದ ಕೃಷಿಮೇಳದಲ್ಲಿ ಸಿರಿಧಾನ್ಯಗಳ ಪ್ರಾಮುಖ್ಯತೆ ಹಾಗೂ ಕೃಷಿ ಬಗ್ಗೆ ಪ್ರಚಾರ ನೀಡಲಾಯಿತು.
ಬೆಳೆಯುವ ಮಕ್ಕಳ ಅಪೌಷ್ಟಿಕತೆ ನಿವಾರಣೆಗೆ ಸಿರಿಧಾನ್ಯಗಳ ಸೇವನೆ ಪರಿಹಾರ ಎಂಬುದು ಆಹಾರತಜ್ನರ ಅಭಿಪ್ರಾಯ. ಅದಕ್ಕಾಗಿ, ಧಾರವಾಡ ಕೃಷಿ ವಿಶ್ವವಿದ್ಯಾಲಯದ ಬೇಕರಿ ತರಬೇತಿ ಕೇಂದ್ರದಿಂದ ಕೃಷಿಮೇಳಕ್ಕೆ ಭೇಟಿ ನೀಡಿದವರಿಗೆ ಸಿರಿಧಾನ್ಯಗಳ ಬಳಕೆ ಮತ್ತು ಮೌಲ್ಯವರ್ಧನೆ ಬಗ್ಗೆ ಮಾಹಿತಿ ನೀಡಲಾಯಿತು. ಸಿರಿಧಾನ್ಯಗಳಿಂದ ತಯಾರಿಸಿದ ತಿಂಡಿತಿನಿಸುಗಳನ್ನು ಜನರಿಗೆ ಪರಿಚಯಿಸುವ ಮೂಲಕ ಸಿರಿಧಾನ್ಯಗಳನ್ನು ಜನಪ್ರಿಯಗೊಳಿಸಲು ಕೃಷಿಮೇಳದಲ್ಲಿ ಬೇಕರಿ ತರಬೇತಿ ಕೇಂದ್ರದ ವಿದ್ಯಾರ್ಥಿಗಳ ಮುತುವರ್ಜಿ. ಸಿರಿಧಾನ್ಯಗಳ ಹಿಟ್ಟಿನಿಂದ ತಯಾರಿಸಿದ ಬಿಸ್ಕಿಟ್, ಉಂಡೆ, ಚಕ್ಕುಲಿ, ಬ್ರೆಡ್, ಬನ್, ಪಪ್ಸ್, ಪಾಸ್ತಾ, ಕೇಕ್, ಹೋಳಿಗೆ, ಬೇಸನ್ ಲಾಡುಗಳ ಪ್ರದರ್ಶನ. ಇವುಗಳ ತಯಾರಿಕೆ ಬಗ್ಗೆ ಆಸಕ್ತರಿಗೆ ಮಾರ್ಗದರ್ಶನ. ಇದಲ್ಲದೆ, ಇವುಗಳ ತಯಾರಿಕೆಗೆ ಮಹಿಳೆಯರಿಗೆ ೧೦, ೧೫ ಹಾಗು ೩೧ ದಿನಗಳ ತರಬೇತಿಯನ್ನು ಬೇಕರಿ ತರಬೇತಿ ಕೇಂದ್ರ ನೀಡುತ್ತಿರುವ ಬಗ್ಗೆಯೂ ಕೃಷಿಮೇಳದಲ್ಲಿ ಮಾಹಿತಿ.

ಕೃಷಿಮೇಳವನ್ನು ಉದ್ಘಾಟಿಸಿದ ಕರ್ನಾಟಕದ ಕೃಷಿ ಸಚಿವ ಕೃಷ್ಣ ಭೈರೇಗೌಡರು, ಸಿರಿಧಾನ್ಯಗಳ ಬೆಳೆಗಾರರಿಗೆ ಸರಕಾರ ಪ್ರೋತ್ಸಾಹ ನೀಡುತ್ತಿದೆ ಎಂದು ತಿಳಿಸಿದರು. ನವಣೆ, ಸಾವೆ, ಕೊರಲೆ, ಊದಲು, ಬರಗು ಇಂತಹ ಸಿರಿಧಾನ್ಯಗಳನ್ನು ಹಾಗೂ ಜೋಳ, ಸಜ್ಜೆ, ರಾಗಿ ಬೆಳೆಯುವ ರೈತರು ತಮ್ಮ ಫಸಲಿನ ಮಾರಾಟದ ಬಗ್ಗೆ ಆತಂಕ ಪಡಬೇಕಾಗಿಲ್ಲ; ಅವರ ಉತ್ಪನ್ನಗಳಿಗೆ ಮಾರುಕಟ್ಟೆ ಕಲ್ಪಿಸಲು ಸರಕಾರ ಬದ್ಧ ಎಂಬುದು ಅವರಿತ್ತ ಭರವಸೆ. ಈ ವರುಷವನ್ನು ಸರಕಾರವು “ಸಿರಿಧಾನ್ಯಗಳ ವರುಷ” ಎಂದು ಘೋಷಿಸಿದ್ದು, ಸಿರಿಧಾನ್ಯ ಬೆಳೆಯುವ ಪ್ರದೇಶದ ವಿಸ್ತರಣೆಗೆ ಒತ್ತು ನೀಡಲಾಗುತ್ತಿದೆ ಎಂದರು.
- ಅಡ್ಡೂರು ಕೃಷ್ಣ ರಾವ್
ಮುನ್ನೋಟ
ಮಂಗಳೂರಿನ “ಸಾವಯವ ಕೃಷಿಕ ಗ್ರಾಹಕ ಬಳಗ” ನಾಡೋಜ ಡಾ. ಎಲ್. ನಾರಾಯಣ ರೆಡ್ಡಿ ಅವರಿಂದ ಉಪನ್ಯಾಸ ಏರ್ಪಡಿಸಿದೆ.
ದಿನಾಂಕ: ೯-೧೦-೨೦೧೭, ಸೋಮವಾರ, ಸಂಜೆ ೪ ಗಂಟೆಗೆ.
ಸ್ಥಳ : ಬಾಳಂಭಟ್ ಹಾಲ್, ಶರವು ದೇವಸ್ಥಾನದ ಹತ್ತಿರ, ಮಂಗಳೂರು.
“ಸಾವಯವ ಯೋಗಿ” ಎಂದು ಹೆಸರಾದ ೮೨ ವರುಷಗಳ ಹಿರಿಯ ಎಲ್. ನಾರಾಯಣ ರೆಡ್ಡಿಯವರ ದಶಕಗಳ ಸಾವಯವ ಕೃಷಿಯ ಅನುಭವ ತಿಳಿದುಕೊಳ್ಳಲು ಆಸಕ್ತರಿಲ್ಲರಿಗೂ ಸ್ವಾಗತ.