ಆಮದು ವೆಚ್ಚ ರೂ.೧.೪ ಲಕ್ಷ ಕೋಟಿ: ರೈತರ ಕೈತಪ್ಪಿತೇ?

೨೦೧೫ – ೧೬ನೇ ವರುಷದಲ್ಲಿ ನಮ್ಮ ದೇಶ ಆಮದು ಮಾಡಿಕೊಂಡ ಕೃಷಿ ಉತ್ಪನ್ನಗಳ ಮೌಲ್ಯ ರೂ.೧.೪ ಲಕ್ಷ ಕೋಟಿ. ಇದರಿಂದಾಗಿ ಹುಟ್ಟುವ ಸಂದೇಹ: ಆಹಾರ ಉತ್ಪಾದನೆಯಲ್ಲಿ ಸ್ವಾವಲಂಬಿ ಆಗಿರಬೇಕೆಂಬ ಧೋರಣೆಯನ್ನು ನಮ್ಮ ದೇಶ ಕ್ಷಿಪ್ರವಾಗಿ ಬದಲಾಯಿಸುತ್ತಿದೆಯೇ? ಈ ಸಂದೇಹಕ್ಕೆ ಕಾರಣ, ಇತ್ತೀಚೆಗಿನ ವರುಷಗಳ ಬೆಳವಣಿಗೆ: ಇತ್ತ ಬಂಪರ್ ಬೆಳೆ ಬೆಳೆದಿದ್ದೇವೆ ಎಂದು ಘೋಷಿಸುವ ಸರಕಾರ, ಅತ್ತ ಕೃಷಿ ಉತ್ಪನ್ನಗಳ ಆಮದಿಗೆ ಉತ್ತೇಜನ ನೀಡುತ್ತಿರುವುದು. ಮುಖ್ಯವಾಗಿ, ಗೋಧಿ, ಜೋಳ ಮತ್ತು ಅಕ್ಕಿ (ಬಸುಮತಿ ಹೊರತಾಗಿ) ಇಂತಹ ಏಕದಳ ಧಾನ್ಯಗಳ ಆಮದಿಗೆ ಅವಕಾಶ ನೀಡಿರುವುದು. ಈ ಆಹಾರಧಾನ್ಯಗಳ ಆಮದು ಪರಿಮಾಣ ೨೦೧೪ರಿಂದ ೨೦೧೭ರ ಅವಧಿಯಲ್ಲಿ ೧೧೦ ಪಟ್ಟು ಹೆಚ್ಚಾಗಿದೆ. ನಮ್ಮ ದೇಶದಲ್ಲಿ ಈ ಆಹಾರಧಾನ್ಯಗಳನ್ನು ಬೆಳೆಸುವವರು, ಈಗ ತೀವ್ರ ಆರ್ಥಿಕ ಮುಗ್ಗಟ್ಟು ಎದುರಿಸುತ್ತಿರುವ ರೈತರೇ ಆಗಿದ್ದಾರೆ. ಈ ಆಮದಿನಿಂದಾದ ಬೆಲೆ ಕುಸಿತದ ತೀವ್ರ ಹೊಡೆತ ಬಿದ್ದಿರುವುದು ಇದೇ ರೈತರಿಗೆ. ಆದ್ದರಿಂದಲೇ ಅವರ ಆಕ್ರೋಶ ಮುಗಿಲು ಮುಟ್ಟಿದೆ. ಕೃಷಿ ಉತ್ಪನ್ನಗಳ ಆಮದಿನ ಮೇಲಣ ಸುಂಕವನ್ನು ಇಳಿಸಿದ ಹಾಗೂ ರದ್ದು ಮಾಡಿದ ಸರಕಾರದ ಧೋರಣೆಯಿಂದಾಗಿ ಈಗ ಪರಿಸ್ಥಿತಿ ಏನಾಗಿದೆ? ಸ್ಥಳೀಯ ಮಾರುಕಟ್ಟೆಯಿಂದ ಧಾನ್ಯಗಳನ್ನು ಖರೀದಿಸುವುದಕ್ಕಿಂತ, ಅದನ್ನು ಆಸ್ಟ್ರೇಲಿಯಾದಿಂದ ಆಮದು ಮಾಡುವುದೇ ವರ್ತಕರಿಗೆ ಹಾಗೂ ಮಿಲ್ಲುಗಳ ಮಾಲೀಕರಿಗೆ ಅಗ್ಗವೆನಿಸಿದೆ. ಈ ಧೋರಣೆಯ ಪರಿಣಾಮ: ಭಾರತದ ಆಹಾರ ಆಮದು ವೆಚ್ಚದಲ್ಲಿ ಭಾರೀ ಏರಿಕೆ. ಏಕದಳ ಧಾನ್ಯಗಳ (ಗೋಧಿ, ಜೋಳ ಮತ್ತು ಅಕ್ಕಿ ಸಹಿತ) ಆಮದು ವೆಚ್ಚ ೨೦೧೪-೧೫ರಲ್ಲಿ ರೂ.೧೩೪ ಕೋಟಿಯಿಂದ ೨೦೧೬-೧೭ರಲ್ಲಿ ರೂ.೯,೦೦೯ ಕೋಟಿಗೆ ಹೆಚ್ಚಳ (ಶೇ.೬,೭೨೩ ಹೆಚ್ಚಳ). ಕೇಂದ್ರ ಸರಕಾರದ ಕೃಷಿ ಮಂತ್ರಾಲಯ ೨೦೧೫-೧೬ರಲ್ಲಿ ೯೪ ದಶಲಕ್ಷ ಟನ್ ಗೋಧಿ ಉತ್ಪಾದನೆ ಆಗಲಿದೆ ಎಂದು ಅಂದಾಜು ಪ್ರಕಟಿಸಿತ್ತು (ಮುಂಚಿನ ವರುಷಕ್ಕಿಂತ ಶೇ.೮.೬ ಹೆಚ್ಚು). ಇದು ಆಧಾರರಹಿತ ಎಂದು ಕೆಲವೇ ತಿಂಗಳುಗಳಲ್ಲಿ ಬಹಿರಂಗವಾಯಿತು. ಯಾಕೆಂದರ, ೨೦೧೫-೧೬ರಲ್ಲಿ ೨೮ ದಶಲಕ್ಷ ಟನ್ ಗೋಧಿ ಖರೀದಿಸಿದ್ದ ಕೇಂದ್ರ ಸರಕಾರ, ೨೦೧೬-೧೭ರಲ್ಲಿ ೨೩ ದಶಲಕ್ಷ ಟನ್ ಖರೀದಿಸಿ (ಉತ್ಪಾದನೆಯ ಕುಸಿತ ನಿರೀಕ್ಷಿಸಿ), ಗೋಧಿಯ ಆಮದಿಗೆ ಉತ್ತೇಜನ ನೀಡಿತು! ಗೋಧಿ ಆಮದಿನ ಮೇಲಿನ ಸುಂಕವನ್ನು ಸಪ್ಟಂಬರ್ ೨೦೧೬ರಲ್ಲಿ ಶೇ.೨೫ರಿಂದ ಶೇ.೧೦ಕ್ಕೆ ಇಳಿಸಿತು; ಅನಂತರ ಡಿಸೆಂಬರ್ ೨೦೧೬ರಲ್ಲಿ ಆ ಸುಂಕವನ್ನು ಸಂಪೂರ್ಣ ರದ್ದುಗೊಳಿಸಿತು! ಕೇಂದ್ರ ಸರಕಾರ ೨೦೧೫-೧೬ರಲ್ಲಿ ಗೋಧಿಯ ಬಂಪರ್ ಬೆಳೆಯ ಅಂದಾಜು ಮಾಡಿದ್ದರೂ, ವರ್ತಕರಿಗೆ ಆ ವರುಷ ಗೋಧಿ ಉತ್ಪಾದನೆ ಕಡಿಮೆಯಾಗಲಿದೆ ಎಂಬ ಸೂಚನೆ ಸಿಕ್ಕಿತ್ತು. ಇದುವೇ ಎಪ್ರಿಲಿನಿಂದ ಡಿಸೆಂಬರ್ ೨೦೧೬ ಅವಧಿಯಲ್ಲಿ ವರ್ತಕರು ಗೋಧಿಹುಡಿಯ ಬೆಲೆ ಶೇ.೨೫ ಹೆಚ್ಚಿಸಲು ಕಾರಣವಾಯಿತು. ಈ ಬೆಲೆ ಹೆಚ್ಚಳ ತಡೆಯಲಿಕ್ಕಾಗಿ ಕೇಂದ್ರ ಸರಕಾರ ಗೋಧಿಯ ಆಮದಿಗೆ ಉತ್ತೇಜನ ನೀಡಿತು. ಜೊತೆಗೆ, ಭಾರತದ ಆಹಾರ ನಿಗಮದ ಮಾಹಿತಿಯ ಪ್ರಕಾರ, ಕಳೆದ ದಶಕದಲ್ಲೇ ಗೋಧಿ ಸಂಗ್ರಹದ ಮಟ್ಟ ೨೦೧೬-೧೭ರಲ್ಲಿ ಅತ್ಯಂತ ಕೆಳಮಟ್ಟಕ್ಕೆ ಕುಸಿಯಿತು. ಈ ಮಟ್ಟ ೧ ಜನವರಿ ೨೦೧೭ರಲ್ಲಿ ೧.೩೮ ದಶಲಕ್ಷ ಟನ್ ಆಗಿದ್ದರೆ, ೨೦೧೫-೧೬ರಲ್ಲಿ ೨.೪ ದಶಲಕ್ಷ ಟನ್ ಆಗಿತ್ತು. ಗಮನಿಸಿ, ಇದು ಗೋಧಿಯ ಕಾಪಿಟ್ಟ ಸಂಗ್ರಹದ ಕನಿಷ್ಠ ಮಟ್ಟ (ಅಂದರೆ ಇಷ್ಟು ಸಂಗ್ರಹ ಇರಲೇ ಬೇಕು). ಹಾಗಾಗಿ, ೨೦೧೬-೧೭ ಹಂಗಾಮಿನಲ್ಲಿ ಈಗಾಗಲೇ ೫.೭೫ ದಶಲಕ್ಷ ಟನ್ ಗೋಧಿ ಆಮದು ಮಾಡಲಾಗಿದೆ. ಕೃಷಿ ಉತ್ಪನ್ನಗಳ ಆಮದನ್ನು, ಆಹಾರವಸ್ತುಗಳ ಬೆಲೆಯೇರಿಕೆ ತಡೆಯುವ ಕಾರ್ಯತಂತ್ರವಾಗಿ ಸರಕಾರ ಬಳಸುತ್ತಿದೆ. ಆದರೆ, ಆಮದು-ಸುಂಕವಿಲ್ಲದ ಗೋಧಿಯ ಆಮದು ಹೀಗೆಯೇ ಮುಂದುವರಿದರೆ, ಮಾರುಕಟ್ಟೆಯಲ್ಲಿ ಗೋಧಿಯ ಬೆಲೆ ಕನಿಷ್ಠ ಬೆಂಬಲ ಬೆಲೆಗಿಂತಲೂ ಕಡಿಮೆಯಾದೀತು. ಕೇಂದ್ರ ಸರಕಾರ ಗೋಧಿ ಮತ್ತು ದ್ವಿದಳಧಾನ್ಯಗಳ ಕನಿಷ್ಠ ಬೆಂಬಲ ಬೆಲೆ ಏರಿಸಿದೆ: ಅಕ್ಟೋಬರ್ ೨೦೧೬ರಲ್ಲಿ ಗೋಧಿಯದ್ದನ್ನು ಟನ್ನಿಗೆ ರೂ.೧,೫೨೫ರಿಂದ ರೂ.೧,೬೨೫ಕ್ಕೆ ಮತ್ತು ೨೦ ಜೂನ್ ೨೦೧೭ರಂದು ದ್ವಿದಳಧಾನ್ಯಗಳದ್ದನ್ನು ಟನ್ನಿಗೆ ರೂ.೫೦,೫೦೦ರಿಂದ ರೂ.೫೪,೫೦೦ಕ್ಕೆ ಏರಿಸಿದೆ. ಆದರೆ ಇದರಿಂದ ರೈತರಿಗೇನೂ ಪ್ರಯೋಜನ ಆಗಲಿಲ್ಲ; ಯಾಕೆಂದರೆ, ಮಾರ್ಚ್ ೨೦೧೭ರ ವರೆಗೂ ಸುಂಕವಿಲ್ಲದೆ ಗೋಧಿ ಆಮದಿಗೆ ಅವಕಾಶ ನೀಡಲಾಗಿತ್ತು. ಆಮದಿಗೆ ಉತ್ತೇಜನ ನೀಡುವ ಸರಕಾರದ ಧೊರಣೆಯಿಂದಾಗಿ ದೇಶದ ಆರ್ಥಿಕತೆಗೆ ಧಕ್ಕೆಯಾಗುತ್ತಿದೆ. ಉದಾಹರಣೆಗೆ, ೧೯೯೩-೯೪ರಲ್ಲಿ ದೇಶದ ಖಾದ್ಯತೈಲ ಬಳಕೆಯ ಶೇ.೩ರಷ್ಟನ್ನು ಮಾತ್ರ ಆಮದು ಮಾಡಲಾಗುತ್ತಿತ್ತು. ಈಗ, ಈ ಆಮದಿನ ಪ್ರಮಾಣ ಶೇ.೭೦ಕ್ಕೇರಿದೆ – ಪ್ರತಿ ವರುಷವೂ ರೂ.೭೦,೦೦೦ ಕೋಟಿ ವೆಚ್ಚದಲ್ಲಿ! ಇದರಿಂದಾಗಿ, ನಮ್ಮ ಆಂತರಿಕ ಮಾರುಕಟ್ಟೆಯಲ್ಲಿ ಆಮದಾದ ಅಗ್ಗದ ಬೆಲೆಯ ಪಾಮ್ ಎಣ್ಣೆ ಮತ್ತು ಸೋಯಾಬೀನ್ ಎಣ್ಣೆ ಧಾರಾಳ ಲಭ್ಯ. ೨೦೧೫-೧೬ರಲ್ಲಿ, ನಮ್ಮ ದೇಶದಲ್ಲಿ ಎಣ್ಣೆಕಾಳುಗಳ ಬಂಪರ್ ಫಸಲು. ಆದರೆ, ಕೊಯ್ಲಿನ ಮುಂಚೆ ಸರಕಾರ ಕಚ್ಚಾ ಮತ್ತು ಸಂಸ್ಕರಿತ ಪಾಮ್ ಎಣ್ಣೆಯ ಆಮದು-ಸುಂಕವನ್ನು ಶೇ.೫ ಕಡಿಮೆ ಮಾಡಿತು. ಇದರಿಂದಾಗಿ, ರೈತರು ನೆಲಗಡಲೆ ಮತ್ತು ಸೋಯಾಬೀನನ್ನು ಕನಿಷ್ಠ ಬೆಂಬಲ ಬೆಲೆಗಿಂತ ಕಡಿಮೆ ಬೆಲೆಗೆ ಮಾರಬೇಕಾಯಿತು. ದ್ವಿದಳ ಧಾನ್ಯಗಳದ್ದೂ ಇದೇ ಕಥೆ-ವ್ಯಥೆ. ಕಳೆದ ದಶಕದಲ್ಲಿ ದ್ವಿದಳಧಾನ್ಯಗಳ ಆಮದು ಮೂರು ಪಟ್ಟು ಜಾಸ್ತಿಯಾಗಿದೆ. ನಮ್ಮ ದೇಶದ ಬಳಕೆಯ ಶೇ.೨೫ ದ್ವಿದಳಧಾನ್ಯಗಳನ್ನು ಪ್ರತಿ ವರುಷ ರೂ.೨೦,೦೦೦ ಕೋಟಿ ವೆಚ್ಚದಲ್ಲಿ ಸರಕಾರ ಆಮದು ಮಾಡಿಕೊಳ್ಳುತ್ತಿದೆ. ೨೦೧೬-೧೭ರ ಖಾರಿಫ್ (ಮುಂಗಾರು) ಹಂಗಾಮಿನಲ್ಲಿ , ನಮ್ಮ ರೈತರು ಬೆಳೆಸಿದ್ದು ದ್ವಿದಳಧಾನ್ಯಗಳ ಬಂಪರ್ ಬೆಳೆ. ಆದರೆ, ಆ ವರುಷ ಸರಕಾರ ಆಮದು ಮಾಡಿಕೊಂಡದ್ದು ೫.೯ ದಶಲಕ್ಷ ಟನ್ ದ್ವಿದಳಧಾನ್ಯಗಳನ್ನು – ರೂ.೨೫,೬೦೦ ಕೋಟಿ ವೆಚ್ಚದಲ್ಲಿ! ಇದರಿಂದಾಗಿ, ರೈತರು ಬೆಳೆದ ದ್ವಿದಳಧಾನ್ಯಗಳು ಮಾರುಕಟ್ಟೆಗೆ ಬಂದಾಗ ಬೆಲೆ ಕುಸಿದು, ಅವರು ಅದನ್ನು ಕನಿಷ್ಠ ಬೆಂಬಲ ಬೆಲೆಗಿಂತ ಕಡಿಮೆ ಬೆಲೆಗೆ ಮಾರಬೇಕಾಯಿತು. ೨೦೦೮-೦೯ರಲ್ಲಿ ಭಾರತದ ಒಟ್ಟು ಆಮದಿನಲ್ಲಿ ಕೃಷಿ ಉತ್ಪನ್ನಗಳ ಪಾಲು ಕೇವಲ ಶೇ.೨ (ಮೌಲ್ಯ ರೂ.೨೯,೦೦೦ ಕೋಟಿ). ಅದು ೨೦೧೪-೧೫ರಲ್ಲಿ ಶೇ.೪.೪೩ಕ್ಕೆ (ಮೌಲ್ಯ ರೂ.೧.೨೧ ಲಕ್ಷ ಕೋಟಿ) ಮತ್ತು ೨೦೧೫-೧೬ರಲ್ಲಿ ಶೇ.೫.೫೩ಕ್ಕೆ (ಮೌಲ್ಯ ರೂ.೧.೪ ಲಕ್ಷ ಕೋಟಿ) ಏರಿದೆ. ಹೀಗೆ ವೆಚ್ಚ ಮಾಡಿದ ರೂ.೧.೪ ಲಕ್ಷ ಕೋಟಿ, ಸಾಲದ ಹೊರೆಯಿಂದ ತತ್ತರಿಸಿರುವ ನಮ್ಮ ರೈತರ ಕೈಸೇರಬೇಕಾಗಿತ್ತು. ಬೆಳೆನಷ್ಟ ಹಾಗೂ ಬೆಲೆಕುಸಿತದಿಂದ ಹತಾಶರಾಗಿ, ಕಳೆದ ೨೦ ವರುಷಗಳಲ್ಲಿ ಆತ್ಮಹತ್ಯೆ ಮಾಡಿಕೊಂಡ ರೈತರ ಸಂಖ್ಯೆ ಮೂರು ಲಕ್ಷಕ್ಕಿಂತ ಅಧಿಕ. ಸರಕಾರದ ಆಮದು ಧೋರಣೆ ಕೃಷಿರಂಗದ ಹಿತಾಸಕ್ತಿ ರಕ್ಷಿಸಿದ್ದರೆ, ಈ ಜೀವಹಾನಿಯ ಬಹುಪಾಲು ತಪ್ಪಿಸಬಹುದಾಗಿತ್ತು, ಅಲ್ಲವೇ?