ಸಂಪದ ಶ್ರಾವ್ಯ, ೧೩ನೇ ಸಂಚಿಕೆ; ನಮ್ಮೊಂದಿಗೆ ಡಾ. ಎಚ್.ಎಸ್. ವೆಂಕಟೇಶ ಮೂರ್ತಿ

To prevent automated spam submissions leave this field empty.
ಸಂದರ್ಶನ ಇಲ್ಲೇ ಕೇಳಿ: 

ಪ್ರಿಯ ಸಂಪದಿಗರೇ,

ಕನ್ನಡದ ಬಹುಮುಖ್ಯ ಕವಿ ಎಚ್.ಎಸ್.ವೆಂಕಟೇಶ ಮೂರ್ತಿಯವರೊಂದಿಗೆ ಸಂಪದ ತಂಡ ನಡೆಸಿದ ಸಂದರ್ಶನ ಪಾಡ್ ಕಾಸ್ಟ್ ರೂಪದಲ್ಲಿ ನಿಮ್ಮ ಮುಂದಿದೆ. ತುಂಬ ದಿನಗಳ ಹಿಂದೆಯೇ ಸಂದರ್ಶನ ನಡೆಸಿದ್ದೆವಾದರೂ ಕಾರಣಾಂತರಗಳಿಂದ ಪ್ರಕಟಣೆ ತೀರ ತಡವಾಯಿತು.

ಕೆಳಗೆ ನೀಡಿರುವ ಲಿಂಕು ಬಳಸಿ ಪಾಡ್ ಕಾಸ್ಟನ್ನು ಡೌನ್ ಲೋಡ್ ಮಾಡಿಕೊಂಡು ಕೇಳಬಹುದು ಇಲ್ಲವೇ ಸಂಪದದಲ್ಲೇ ಕೇಳಬಹುದು.

- ಸಂಪದ ನಿರ್ವಹಣೆ ತಂಡ

ಡಾ.ಎಚ್.ಎಸ್.ವೆಂಕಟೇಶ ಮೂರ್ತಿ ಅವರು ನವ್ಯೋತ್ತರ ಕನ್ನಡ ಕಾವ್ಯದ ಪ್ರಮುಖ ವಾಹಿನಿಗಳಲ್ಲಿ ಒಂದು ಪ್ರಮುಖ ಧಾರೆಯಾಗಿದ್ದಾರೆ. ಅವರ ಕಾವ್ಯ ಮಾರ್ಗ ಕೇವಲ ತೀವ್ರತೆಯೊಂದನ್ನೇ ಅಲ್ಲದೇ ಪ್ರಮಾಣದ ಕಾರಣದಿಂದಲೂ ಮಹತ್ವದ್ದಾಗಿದೆ. ೧೯೬೮ರಲ್ಲಿ ತಮ್ಮ ಮೊದಲ ಕವನ ಸಂಕಲನ ‘ಪರಿವೃತ್ತ’  ಪ್ರಕಟಿಸಿದ ಅವರು ೨೦೦೮ರಲ್ಲಿ ಉತ್ತರಾಯಣ ಸಂಕಲನ ಪ್ರಕಟವಾದಾಗ ಅದು ಅವರ ೬೪ನೇ ಕೃತಿಯಾಗಿತ್ತು ಅಂದರೆ ಅವರ ಒಟ್ಟೂ ಬರವಣಿಗೆಯ ಗಾತ್ರ ಕನ್ನಡ ಸಾಹಿತ್ಯವನ್ನು ಶ್ರೀಮಂತಗೊಳಿಸಿದೆ. ಪರಂಪರೆಯ ಸತ್ವದೊಡನೆ ಸ್ವಂತದ ಅನುಭವಗಳನ್ನು ಅನುಸಂಧಾನ ಮಾಡುತ್ತ ಪ್ರಾಚೀನ ಮತ್ತು ವರ್ತಮಾನಗಳ ಸಹಯೋಗವನ್ನು ಅವರು ಸಾಧಿಸಿದ್ದಾರೆ. ನಾಟಕಗಳನ್ನು, ಮಕ್ಕಳ ಕಾದಂಬರಿ ಮತ್ತು ವಿಮರ್ಶೆಗಳನ್ನು ಹಾಗೇ ಕವನ ಸಂಕಲನಗಳನ್ನು ಕಾಲದಿಂದ ಕಾಲಕ್ಕೆ ಪ್ರಕಟಿಸುತ್ತ ಬಂದಿರುವ ಎಚೆಸ್ವಿ, ಆ ಮುಖೇನ ಎಂಬ ಅಂಕಣಬರಹವನ್ನು ಉದಯವಾಣಿಗೆ ಬರೆಯುತ್ತಿದ್ದುದನ್ನೂ ಮರೆಯುವ ಹಾಗಿಲ್ಲ. ಚಿನ್ನಾರಿ ಮುತ್ತ ಚನಚಿತ್ರ ಕೂಡ ಅವರ ಕೊಡುಗೆಯೇ. ಭಾಷೆಯ ಲವಲವಿಕೆ, ಜೀವಂತಿಕೆ, ಸಹಜೋಲ್ಲಾಸ, ಚಿತ್ರಕಶಕ್ತಿ, ಲಾಲಿತ್ಯ, ವಸ್ತು ನಿರ್ವಹಣೆಯ ನಾವೀನ್ಯ, ಹೀಗೆ ಅವರ ಕಾವ್ಯೋದ್ಯೋಗವನ್ನು ಬೇರೆ ಬೇರೆ ನೆಲೆಗಳಿಂದ ವಿಷ್ಲೇಷಿಸಬಹುದಾದರೂ, ಅವರು ತಮ್ಮ ಸಂಕಲನಗಳ ಮೂಲಕ ಹುಡುಕುತ್ತಿರುವ ಹೊಸಹಾದಿಯನ್ನು ಗಮನಿಸುವುದೇ ಒಂದು ಸೊಗಸು.

ಅವರ ಇತ್ತೀಚಿನ ಸಂಕಲನ ಉತ್ತರಾಯಣದ ಹಲವು ಕವಿತೆಗಳಲ್ಲಿ ಅವರು ಧ್ಯಾನಿಸಿರುವ ರೀತಿ ಕನ್ನಡ ಕಾವ್ಯ ಪರಂಪರೆಗೆ ಮತ್ತೊಂದು ಮಜಲನ್ನು ಜೋಡಿಸಿದೆ. ಅನೇಕಾನೇಕ ಕೃತಿಗಳನ್ನು ಈವರೆಗೆ ತಂದಿದ್ದರೂ, ಅವರ ಕಾವ್ಯದ ಮೂಲಕೇಂದ್ರ ಯಾವುದೆಂದು ಮೇಲ್ನೋಟಕ್ಕೆ ದಕ್ಕದಿರುವುದೂ ಒಂದು ಹೆಗ್ಗಳಿಕೆಯೇ. ಬರಿಯ ಕನ್ನಡಕ್ಕಷ್ಟೇ ಅಲ್ಲದೆ ವಸಾಹತೋತ್ತರ ಭಾರತೀಯ ಕಾವ್ಯ ಸಂದರ್ಭಕ್ಕೇ ಅವರು ಮಾದರಿಯಾಗಿದ್ದಾರೆ. ಮೂಲಸ್ವರೂಪದ ಅಭಿಜ್ಞಾನದಲ್ಲೇ ಅವರ ಸಾಹಿತ್ಯ ಯಾತ್ರೆ ನಡೆಯುತ್ತಿರುತ್ತದೆ. ಬರಿಯ ಛಂದೋವಿನ್ಯಾಸಗಳಲ್ಲಲ್ಲದೇ ತಾತ್ವಿಕ ಕಾರಣಗಳಿಂದಲೂ ಅವರ ಕಾವ್ಯಕೃಷಿ ಮಹತ್ವದ್ದಾಗಿದೆ. ತಮ್ಮ ಕಾವ್ಯೋದ್ಯೋಗದುದ್ದಕ್ಕೂ ಕಾವ್ಯದ ಸ್ವದೇಶೀಕರಣಕ್ಕೆ ಬದ್ಧರಾಗಿದ್ದಾರೆ. ಕಾವ್ಯವನ್ನು ಅಮೂರ್ತದ ಆಗಸದಿಂದ ಮಣ್ಣ ನೆಲಕ್ಕೆ, ತಾತ್ವಿಕತೆಯ ಒಗಟಿನಿಂದ ಅನುಭವದ ನಿಜಕ್ಕೆ, ಕನಸಿನಾದರ್ಶಗಳನ್ನು ಕಥನಕಾವ್ಯದ ಅನುಸರಣದ ಕೆಲಸದಿಂದ ಅರಿವಿನಂಗಳಕ್ಕೆ ತಂದು ನಿಲ್ಲಿಸುವ ಅವರು, ಪುರಾಣದ ಪಾತ್ರಗಳಿಗೆ ಹೊಸ ಪೋಷಾಕು ತೊಡಿಸಿ ಬೆಚ್ಚಿಬೀಳಿಸಿದ್ದಾರೆ. ಶ್ರೀಸಂಸಾರಿ ಮತ್ತು ಆಪ್ತಗೀತೆ ಎಂಬ ಪದ್ಯಗಳಲ್ಲಿ ಅವರು ದೈವತ್ವಕ್ಕೆ ನೀಡಿದ ಮರುವ್ಯಾಖ್ಯಾನ ಕೂಡ ಗಮನೀಯವೇ ಆಗಿದೆ. ಹರಿವ ಇರುವೆ ಕೂಡ ನೋಯದ ಹಾಗೆ, ಪಂಚಮದ ಇಂಚರ ಎಷ್ಟು ಮಾತ್ರಕ್ಕೂ ಒಡೆಯದ ಹಾಗೆ ಕಾಪಿಡಬೇಕೆನ್ನುವುದು ಅವರ ಕವಿಮನಸ್ಸಿನ ವೈಚಾರಿಕತೆಯಾಗಿದೆ. ಪೌರಾಣಿಕ ಸ್ಮೃತಿಯ ಮಂಥನದ ಮೂಲಕ ಆಧುನಿಕ ಕಾಲಕ್ಕೂ ಪ್ರಸ್ತುತವಾಗುವ ವೈಚಾರಿಕ ನವನೀತವನ್ನು ಹಂಚುತ್ತಿರುವ ಎಚೆಸ್ವಿ ಆಧುನಿಕ ಮನೋಭೂಮಿಕೆಯಲ್ಲಿರುವ ನಮ್ಮನ್ನೆಲ್ಲ ಪರಂಪರೆಯ ಆಗಸದವಕಾಶಕ್ಕೆ ಜೋಡಿಸಿ ಹೊಸ
ಚಿಂತನೆಗಳು ಸಾಧ್ಯವಿದೆಯೆಂದು ಮನಗಾಣಿಸಿದ್ದಾರೆ.

ಎಚೆಸ್ವಿಯವರ ಕವಿತೆಗಳು ಸರಳವಾಗಿವೆಯೆನ್ನಿಸಿದರೂ ಅವು ಓದುಗನಲ್ಲಿ ಉಳಿಸುವ ಪ್ರಶ್ನೆಗಳು ದೊಡ್ಡವು. ಅವುಗಳ ಆಶಯವೂ ದೊಡ್ಡದೇ. ಕಾವ್ಯವೆಂದರೇನೆಂದು ಮತ್ತೆ ಮತ್ತೆ ಆಲೋಚಿಸುವ ಹಾಗೆ ಮಾಡುವ ಅವರ ಕಾವ್ಯಕ್ರಿಯೆಗೆ ಒಂದು ನಮಸ್ಕಾರ. 

- ಡಿ ಎಸ್ ರಾಮಸ್ವಾಮಿ

ಸಂದರ್ಶಕರು: ಇಸ್ಮಾಯಿಲ್

ಕವಿ ಪರಿಚಯ : ಡಿ ಎಸ್ ರಾಮಸ್ವಾಮಿ

ಚಿತ್ರಗಳು : ಹರಿಪ್ರಸಾದ್ ನಾಡಿಗ್

ಲೇಖನ ವರ್ಗ (Category): 

ಪ್ರತಿಕ್ರಿಯೆಗಳು

ಬಹಳ ದಿನಗಳ ನಂತರ (ವರ್ಷ?) ಸಂಪದದಲ್ಲಿ ಶ್ರಾವ್ಯ ಸಂದರ್ಶನ ಪ್ರಕಟವಾಗಿದೆ ಶ್ರೀ ಹೆಚ್ ಎಸ್ ವೆಂಕಟೇಶ ಮೂರ್ತಿಯವರದು. ಇಸ್ಮಾಯಿಲ್ ರವರು ಮಾತಿನ ಓಘಕ್ಕೆ ದಕ್ಕೆ ಬಾರದಂತೆ ಅತಿ ಕಡಿಮೆ ಪ್ರಶ್ನೆಗಳಲ್ಲಿ ಹೆಚ್ ಎಸ್ ವಿ ರವರ ಮನಸಿನ ಲಹರಿಯನ್ನು ನಮ್ಮ ಮುಂದೆ ಬಿಡಿಸಿದ್ದಾರೆ.ಹೆಚ್ ಎಸ್ ವಿರವರು ನವ್ಯ ನವೋದಯದ ಪ್ರಭಾವವಿದ್ದರು ಪರಂಪರೆಯ ಕಾವ್ಯದ ಬಗ್ಗೆ ತಮ್ಮ ಶ್ರದ್ದೆ ಇತ್ತೆಂದು ಸ್ವಂತಿಕೆ ಉಳಿಸಿಕೊಳ್ಳುವಲ್ಲಿ ಯಾವುದೆ ಚಳುವಳಿಗಳು ತಮ್ಮ ಮೇಲೆ ನೇರ ಪರಿಣಾಮ ಬೀರಲಿಲ್ಲ ಎನ್ನುತ್ತಾರೆ. ಹಳೆಯ ಕಾವ್ಯಗಳಿಗು ಉತ್ತರಾಯಣದ ಪದ್ಯಗಳಿಗು ನಡುವಿನ ವೆತ್ಯಾಸಕ್ಕೆ ಕಾರಣ ತಿಳಿಸುತ್ತ ಪ್ರಾರಂಬದಲ್ಲಿ ಕಾವ್ಯವನ್ನು ಹೊರಹಾಕುವುದೆ ಮುಖ್ಯವಾಗಿದ್ದು , ಉತ್ತರಾಯಣ ಕಾಲಕ್ಕೆ ಅಂತರಂಗದಿಂದಲೆ ಕಾವ್ಯವನ್ನು ಎತ್ತಿಕೊಂಡಿರುವುದು ವೆತ್ಯಾಸಕ್ಕೆ ಕಾರಣವೆನ್ನುತ್ತಾರೆ. ನೋಡುವ ದೃಷ್ಟಿಯಲ್ಲಿನ ವೆತ್ಯಾಸಕ್ಕೆ ಕಾರಣ ಹುಡುಕುತ್ತ ಮೊದಲಿನಂತೆ ಬಿಡಿಬಿಡಿಯಾಗಿ ನೋಡದೆ ಪೂರ್ಣವಾಗಿ ನೋಡುವ ಅನುಭವ ಕಾರಣವೆನ್ನುತ್ತಾರೆ. ಹಾಗೆಯ ನವ್ಯ ನವೋದಯದ ನಂತರ ಮಕ್ಕಳ ಕಾವ್ಯವನ್ನು ನಿರ್ಲಕ್ಷಮಾಡಲಾಯಿತು ಎನ್ನುವ ಇವರು ತಾವು ರಚಿಸಿದ ಕವನ ನಾಟಕಗಳು ಮಕ್ಕಳಿಗೆ ಮಾತ್ರವಲ್ಲ ದೊಡ್ಡವರಿಗು ಎನ್ನುತ್ತಾ, ಪ್ರತಿ ಲೇಖಕನಲ್ಲು ಮಗುವಿನ ಮುಗ್ದತೆ ಇರಲೆ ಬೇಕು ಇಲ್ಲದಿದ್ದರೆ ಹೊಸ ವಿಷಯಗಳ ಗ್ರಹಿಕೆ ಅಸಾದ್ಯವೆನ್ನುತ್ತಾರೆ. ಹಾಗೆಯೆ ಅಳಿಲು ರಾಮಾಯಣದ ಬಗ್ಗೆ ಇತರ ವಿಷಯಗಳ ಬಗ್ಗೆ ತಿಳಿಸಿ ಕಡೆಯಲ್ಲಿ ಸಂಪದ ಲೇಖಕರಿಗೆ ತಮ್ಮ ಬರಹಗಳಲ್ಲಿ ನಿಷ್ಟೆ ಉಳಿಸಿಕೊಳ್ಳುವಂತೆ ಸಲಹೆ ನೀಡಿದ್ದಾರೆ. ಸಂದರ್ಶನದಲ್ಲಿ ಕವಿ ಹಾಗು ಸಂದರ್ಶಕರ ದ್ವನಿ ಸ್ವಷ್ಟವಾಗಿದ್ದು ಆರಿಸಿಕೊಂಡಿರುವ ಪ್ರಶ್ನೆಗಳು ಪ್ರಸ್ತುತವಾಗಿದೆ ಸಂಪದ ತಂಡಕ್ಕೆ ಅಭಿನಂದನೆಗಳು (ಸಂದರ್ಶನ ನೇರವಾಗಿ ಸಂಪದದಿಂದಲೆ ಕೇಳಲು ಚೆನ್ನಾಗಿದೆ ) ---ಪಾರ್ಥಸಾರಥಿ

ಕವಿ ಸ0ವಾದ ನಿಜಕ್ಕೂ ತು0ಬಾ ಚೆನ್ನಾಗಿದೆ ಹಾಗೆಯೇ ಅದನ್ನು ಸರಿಯಾಗಿ ವಿಮರ್ಶಿಸಿದ್ದಾರೆ "ಮಥನ ಚಿ0ತಾಮಣಿ" ಪಾರ್ಥಸಾರಥಿಗಳು. ಅವರು ಹೇಳಿದ್ದೆಲ್ಲಾ ಸ್ವತಹ ಅನುಭವಿಸಬೇಕೆ0ದರೆ ನೀವೆ ಖುದ್ದಾಗಿ ಕೇಳಿ. ಇದನ್ನು ಸ0ಪದಿಗರೆಲ್ಲರೂ ಕೇಳುವ ಅವಕಾಶ ಮಾಡಿಕೊಟ್ಟ ನಿರ್ವಾಹಕರಿಗೆ ಅಭಿನ0ದನೆಗಳು ಮತ್ತು ನಮನಗಳು.

+೧ ಪಾರ್ಥಸಾರಥಿಯವರು ಹೇಳಿದಂತೆ ಸಂದರ್ಶನ ನೇರ ಸಂಪದದಿಂದಲೇ ಕೇಳಲು ಚೆನ್ನಾಗಿದೆ. ಸಂಪದ ನಿರ್ವಾಹಕರಿಗೆ ಧನ್ಯವಾದಗಳು. -ಗಣೇಶ.

ನನಗೆ ಇದೊಂದು ಹೊಸ ಅನುಭವ! ಮೊದಲ ಬಾರಿ ಇಂತದೊಂದು ಆಡಿಯೊ ಕೇಳಿದೆ. ತುಂಬ ಖುಶಿಯಾಯ್ತು. ಮಕ್ಕಳ ಸಾಹಿತ್ಯದ ಬಗ್ಗೆ ಎಚ್ಎಸ್ವಿ ತುಂಬ ಒಳ್ಳೆಯ ಮಾತುಗಳನ್ನಾಡಿದ್ದಾರೆ. ಅವರ "ಚಿನ್ನಾರಿ ಮುತ್ತ"ದ ಒಂದೊಂದು ಹಾಡುಗಳೂ... ಮರೆಯುವಂತಿಲ್ಲ. ಈಗಲೂ ನಾವು ಆ ಹಾಡುಗಳನ್ನ ಮೆಲುಕುಹಾಕ್ತೇವೆ. ಇನ್ನು ನಮ್ಮ ಧಾರಾವಾಹಿಯ ಗೀತೆಗಳನ್ನೂ ಬರೆದಿಟ್ಟುಕೊಳ್ಳಬೇಕು, ಕಂಠಪಾಠ ಮಾಡಬೇಕು ಎನ್ನುವಶ್ಟರ ಮಟ್ಟಿಗೆ ಅವರು ಕಾವ್ಯವನ್ನು ತುಂಬಿದ್ದಾರೆ. ಅವರ ಇತ್ತೀಚಿನ "ಅನುವಾದ" ಧಾರಾವಾಹಿಗೆ ಬರೆದಿರುವ ಗೀತೆಯೊಂದೇ ಸಾಕು! ಇಂತಹವರು ತಾವು ಎಲ್ಲಿಯೇ ಹೋದರೂ ಹೋದ ಜಾಗದಲ್ಲೆಲ್ಲ ಸುಗಂಧವನ್ನು ಪಸರಿಸುತ್ತಾರೆ. ಕವಿ ಪರಿಚಯ ಮಾಡಿಕೊಟ್ಟಿರುವ ಡಿ.ಎಸ್.ರಾಮಸ್ವಾಮಿಯವರು ಗಪದ್ಯವನ್ನು ಬರೆದಿದ್ದಾರೆನ್ನಿಸುತ್ತೆ. ಇಸ್ಮಾಯಿಲ್ ಅವರ ಧ್ವನಿ ವಿಶಿಷ್ಟವಾಗಿ ಕೇಳಿಸುತ್ತದೆ. ಹಾಗೆಯೇ, ಅವರು ಎಚ್ಎಸ್ವಿ ಅವರನ್ನು ಕೇಳಿರುವ ಪ್ರಶ್ನೆಗಳೂ...ಸಂಪದ ಇಂತಹ ಕೆಲಸಗಳನ್ನು ಮತ್ತಶ್ಟು ಮಾಡುತ್ತಿರಲಿ.ಶುಭಾಶಯಗಳು!!!

ಕಾವ್ಯದ ತಿಳಿಗೊಳದಲ್ಲಿ ಮಿಂದು ಪವಿತ್ರಗೊಂಡು, ಎದ್ದು ಬಂದಂಥ ನಿರಾಳ ನೆಮ್ಮದಿಯ ಅನುಭವ, ಎಚ್.ಎಸ್.ವಿಯವರ ಸರಳ ನೇರ ಮಾತುಗಳನು ಕೇಳಿ. ಥ್ಯಾಂಕ್ಸ್ ಸಂಪದ. :)