ಭಾಗ - ೨೬ ಭೀಷ್ಮ ಯುಧಿಷ್ಠಿರ ಸಂವಾದ: ಶ್ರೀಕೃಷ್ಣ ಭೂದೇವಿ ಸಂವಾದ ಅಥವಾ ಪಂಚಯಜ್ಞಗಳು!

0

         ಇದು ಭೀಷ್ಮ ಯುಧಿಷ್ಠಿರ ಸಂವಾದ ಅರ್ಥಾತ್ ರಾಜನೀತಿ ಶಾಸ್ತ್ರದಿಂದ ಆಯ್ದ ಮತ್ತೊಂದು ನೀತಿ ಕಥೆ.  
        ಯುಧಿಷ್ಠಿರನು ಹೀಗೆ ಕೇಳಿದನು, "ಪಿತಾಮಹಾ! ರಾಜ್ಯಪರಿಪಾಲನೆಯ ಭಾರವು ನನ್ನ ಭುಜಸ್ಕಂದಗಳ ಮೇಲೆ ಬಿದ್ದಿದೆ. ನಿಜವಾಗಿಯೂ ಇದು ನನಗೆ ಇಷ್ಟವಿಲ್ಲ. ಕಾಡಿಗೆ ಹೋಗಿ ತಪವನ್ನಾಚರಿಸಿಕೊಂಡಿರಬೇಕೆಂದು ನನ್ನ ಮನವು ಪರಿತಪಿಸುತ್ತಿದೆ. ಆದರೆ, ಗುರು-ಹಿರಿಯರ ಆಜ್ಞೆಯನ್ನು ತುಳಸಿ ದಳದಂತೆ ಶಿರಸಾವಹಿಸಿ ಪರಿಪಾಲನೆ ಮಾಡುತ್ತಿದ್ದೇನೆ. ರಾಜ್ಯವು ಸುಭಿಕ್ಷವಾಗಿರಬೇಕೆಂದರೆ ಪ್ರತಿಯೊಂದನ್ನೂ ಪ್ರಭುತ್ವವೇ ಮಾಡಬೇಕೆನ್ನುವುದು ಸಾಧ್ಯವಾಗದ ಮಾತು. ರಾಜ್ಯವು ಸುಭಿಕ್ಷವಾಗಿರಬೇಕೆಂದರೆ ರಾಜ್ಯದಲ್ಲಿರುವ ಪ್ರತಿವ್ಯಕ್ತಿ, ಪ್ರತಿ ಕುಟುಂಬ ಧರ್ಮವನ್ನು ಆಚರಿಸುತ್ತಾ ಆದರ್ಶವಂತರಾಗಿ ಬಾಳಬೇಕು. ಗೃಹಸ್ಥ ಧರ್ಮವನ್ನು ಪಾಲಿಸುವ ವ್ಯಕ್ತಿಯು ತನ್ನ ಕರ್ತವ್ಯವನ್ನು ತಾನು ನಿರ್ವಹಿಸಿದರೆ ರಾಜನಾದವನು ಮಾಡಬೇಕಾದ ಕೆಲಸವು ಅತ್ಯಲ್ಪವಾಗಿರುತ್ತದೆ ಎನ್ನುವುದು ನನ್ನ ಅಭಿಪ್ರಾಯ. ಗೃಹಸ್ಥನಾದವನು ಕೈಗೊಳ್ಳಬೇಕಾದ ಕರ್ತವ್ಯಗಳೇನೆಂದು ತಾವು ದಯಮಾಡಿ ತಿಳಿಸಿಕೊಡುವಂತಹವರಾಗಿ."
      ಭೀಷ್ಮನು ಹೀಗೆ ಉತ್ತರಿಸಿದನು, "ಧರ್ಮಜ್ಞನೇ! ಉಚಿತವಾದ ಮಾತನ್ನೇ ಆಡಿರುವೆ. ಎಲ್ಲಾ ಆಶ್ರಮಗಳಲ್ಲಿ ಗೃಹಸ್ಥಾಶ್ರಮವೇ ಮುಖ್ಯವಾದುದು. ಸಮಾಜ ಜೀವನವು ಎಲ್ಲ ಕಾಲಕ್ಕೂ ಆಧರಿಸಿರುವುದು ರಾಜನ ಮೇಲೆ ಅಲ್ಲ, ಅದು ಆಧರಿಸಿರುವುದು ಗೃಹಸ್ಥನ ಮೇಲೆಯೇ. ಆದ್ದರಿಂದ ದೇಶದಲ್ಲಿ, ಅದರಲ್ಲೂ ಪ್ರತಿ ಗ್ರಾಮದಲ್ಲಿ ಗೃಹಸ್ಥನಾದವನು ತನ್ನ ಧರ್ಮವನ್ನು ಸರಿಯಾಗಿ ನಿರ್ವಹಿಸಿದರೆ ನೂರಕ್ಕೆ ತೊಂಬತ್ತೊಂಬತ್ತು ಸಮಸ್ಯೆಗಳು ಪರಿಹಾರವಾಗುತ್ತವೆ. ಉಳಿದುದನ್ನು ರಾಜನು ನಿರ್ವಹಿಸಬಲ್ಲನು"
        "ಈ ವಿಷಯವಾಗಿ ಶ್ರೀಕೃಷ್ಣನು ಭೂದೇವಿಯನ್ನು ಪ್ರಶ್ನಿಸಿದಾಗ ಆಕೆ ಕೊಟ್ಟ ಉತ್ತರಗಳು ಇವೆ. ಅವುಗಳನ್ನೇ ನಿನಗೆ ಹೇಳುತ್ತೇನೆ" 
        "ಭೂದೇವಿ ಯಾವ್ಯಾವ ಗಾರ್ಹಸ್ಥ ವಿಧಿಗಳನ್ನು ನಿರ್ವಹಿಸಿದರೆ ಗೃಹಸ್ಥಾಶ್ರಮವು ಸಫಲವಾಗುತ್ತದೆ?" ಎಂದು ಶ್ರೀ ಕೃಷ್ಣನು ಕೇಳಿದನು."
      "ಶ್ರೀ ಕೃಷ್ಣಾ! ಮನುಷ್ಯನು ತನ್ನ ಜೀವಿತಾವಧಿಯಲ್ಲಿ ಪ್ರಧಾನವಾಗಿ ಐವರ ಋಣವನ್ನು ಹೊಂದಿರುತ್ತಾನೆ. ಆ ಋಣವನ್ನು ತೀರಿಸುವುದೇ ಅವನು ಮಾಡಬೇಕಾದ ಪ್ರಮುಖವಾದ ಕರ್ತವ್ಯವಾಗಿದೆ. ಮಾನವ ಜೀವನವು ಇಂತಹ ಋಣಗಳಿಂದ ವಿಮುಕ್ತವಾಗಲು ಮಾಡುವ ಕೃಷಿಯಿಂದ ಔನತ್ಯವನ್ನು ಹೊಂದುತ್ತದೆ" ಎಂದು ಭೂದೇವಿಯು ಹೇಳಿದಳು."
        "ಆ ಐವರು ಯಾರು? ಅವರ ಋಣಗಳನ್ನು ತೀರಿಸಲು ಏನು ಮಾಡಬೇಕು?" ಎಂದು ಶ್ರೀ ಕೃಷ್ಣನು ಭೂದೇವಿಯನ್ನು ಪುನಃ ಪ್ರಶ್ನಿಸಿದನು."
        "ಪ್ರತ್ಯುತ್ತರವಾಗಿ ಭೂದೇವಿಯು, "ಅದನ್ನು ಹೇಳುತ್ತೇನೆ ಕೃಷ್ಣಾ, ಕೇಳುವಂತಹವನಾಗು. ಅವರೆಂದರೆ, ದೇವತೆಗಳು, ಋಷಿಗಳು, ಪಿತೃಗಳು, ಭೂತಗಳು ಮತ್ತು ಸಹಮಾನವರು (ಸಮಾಜ). ಈ ಐದೂ ಜನರಿಗೆ ಪ್ರತಿಯೊಬ್ಬ ಮನುಷ್ಯನೂ ಋಣಪಟ್ಟಿರುತ್ತಾನೆ. ಈ ಐವರ ಋಣವನ್ನು ತೀರಿಸುವ ಪ್ರಯತ್ನವನ್ನು ಮಾಡುವುದೇ ಮಾನವ ಜೀವನದ ಗುರಿ. ಈ ಪ್ರಯತ್ನವನ್ನೇ ’ಪಂಚಯಜ್ಞಾನುಷ್ಠಾನ’ ಎಂದು ಹೇಳುತ್ತಾರೆ."
      "ದೇವಋಣವು ಮೊದಲನೆಯದು. ನಮಗೆ ಜೀವವನ್ನು ಕರುಣಿಸುವುದು ಪರಮೇಶ್ವರ. ಹಾಗಾಗಿ ಆ ಪರಮೇಶ್ವರ ಮತ್ತು ಅವನ ಪ್ರತಿರೂಪಗಳಾದ ದೇವತೆಗಳನ್ನು ನಿರಂತರವಾಗಿ ಸ್ಮರಿಸುವುದರ ಮೂಲಕ, ಪೂಜಿಸುವುದರ ಮೂಲಕ, ದೇವಋಣವನ್ನು ತೀರಿಸುವ ಪ್ರಯತ್ನವನ್ನು ಮಾಡಬೇಕು. ಯಜ್ಞಯಾಗಾದಿಗಳು, ವ್ರತಗಳ ಅನುಷ್ಠಾನ, ಮೊದಲಾದವುಗಳ ಮೂಲಕ ಮಾಡುವ ದೇವಯಜ್ಞವು ದೇವ ಋಣವನ್ನು ತೀರಿಸುವಲ್ಲಿ ಪೂರಕವಾಗಿದೆ." 
     "ಆಮೇಲೆ ಬರುವುದು ಋಷಿಋಣ. ಇದರಿಂದ ಮುಕ್ತರಾಗಲು ಋಷಿಯಜ್ಞವನ್ನು ಕೈಗೊಳ್ಳಬೇಕು. ಅಂದರೆ, ನಮಗೆ ಋಷಿಗಳ ಮೂಲಕ ಬಂದಿರುವ ಪಾರಂಪರಿಕ ಸಂಸ್ಕೃತಿ, ಸಂಪ್ರದಾಯಗಳು ಇವೆ. ಅವನ್ನು ಅನುಸರಿಸಬೇಕು ಹಾಗು ಮುಂದಿನ ತಲೆಮಾರುಗಳಿಗೆ ಅವನ್ನು ತಿಳಿಸಿಕೊಡಬೇಕು. ಅದಕ್ಕಾಗಿ ವೇದಗಳನ್ನು, ರಾಮಾಯಣ, ಮಹಾಭಾರತ, ಭಾಗವತ, ಹಾಗು ಇತರೇ ಶಾಸ್ತ್ರಗಳ ಅಧ್ಯಯನವನ್ನು ಕೈಗೊಳ್ಳಬೇಕು. ಇದೇ ಋಷಿಯಜ್ಞವಾಗಿದೆ."
      "ಮೂರನೆಯದೇ, ಪಿತೃಋಣವಾಗಿದೆ. ಪಿತೃಯಜ್ಞದ ಮೂಲಕ ಈ ಋಣದಿಂದ ಮುಕ್ತಿ ಹೊಂದಲು ಸಾಧ್ಯವಾಗುತ್ತದೆ. ಈ ಶರೀರವನ್ನು ಪ್ರಸಾದಿಸಿರುವುದು ನಮ್ಮ ಪಿತೃಗಳು. ಈ ಶರೀರ ಹಾಗು ವಂಶಾವಳಿಗಳು ಅವರಿಂದ ನಮಗೆ ವಾರಸತ್ವವಾಗಿ ಬಂದಿವೆ. ಅಂತಹ ವಂಶವನ್ನು ವೃದ್ಧಿಗೊಳಿಸಬೇಕು. ಸತ್ಸಂತಾನವನ್ನು ಪಡೆಯಬೇಕು. ನಮ್ಮ ಸಂತತಿಯು ಧರ್ಮಮಾರ್ಗದಲ್ಲಿ ನಡೆಯುವಂತೆ ನೋಡಿಕೊಳ್ಳಬೇಕು. ಪಿತೃಗಳನ್ನು ಹೀಗೆ ಪ್ರತಿದಿನವೂ ಸ್ಮರಿಸುತ್ತಾ ಅವರಿಗೆ ಶ್ರಾದ್ಧಾದಿ ಕರ್ಮಗಳನ್ನು ಮಾಡುವುದೇ ಪಿತೃಯಜ್ಞ." 
      "ನಾಲ್ಕನೆಯ ಋಣವೇ ಭೂತ ಋಣವಾಗಿದೆ. ಇದಕ್ಕಾಗಿ ಒಬ್ಬರು ಭೂತಯಜ್ಞವನ್ನು ನಿರ್ವಹಿಸಬೇಕು. ನಮ್ಮ ಜೀವನ ಯಾತ್ರೆಯಲ್ಲಿ ಪಶು, ಪಕ್ಷಿ, ವೃಕ್ಷ, ಕ್ರಿಮಿಕೀಟಗಳೆಷ್ಟೋ ನಮ್ಮೊಂದಿಗೆ ಜೀವಿಸುತ್ತವೆ. ಅವಕ್ಕೆ ನಾವು ಋಣಪಟ್ಟಿದ್ದೇವೆ. ಅಹಿಂಸೆ, ದಯೆ, ಮೊದಲಾದ ಗುಣಗಳನ್ನು ರೂಢಿಸಿಕೊಂಡು ತಾನು ಭುಜಿಸುವ ಮುನ್ನ ಗೋವು, ಮೊದಲಾದ ಪ್ರಾಣಿಗಳಿಗೆ, ಕಾಗೆ ಮೊದಲಾದ ಪಕ್ಷಿಗಳಿಗೆ, ತುಳಸಿ ಮೊದಲಾದ ಸಸ್ಯಗಳಿಗೆ, ಇರುವೆ ಮೊದಲಾದ ಕ್ರಿಮಿಕೀಟಗಳಿಗೆ ಆಹಾರವನ್ನು ಒದಗಿಸಬೇಕು."
       "ಕಟ್ಟಕಡೆಯದೇ ಮಾನವ ಋಣ. ಇದನ್ನು ಸಮಾಜ ಋಣವೆಂದು ಕರೆಯಬಹುದು. ಇದನ್ನು ಮಾನುಷ ಯಜ್ಞದ ಮೂಲಕ ತೀರಿಸಬೇಕು. ಇದನ್ನೇ ’ಅತಿಥಿ ಯಜ್ಞ’ವೆಂದೂ ಕರೆಯಲಾಗುತ್ತದೆ. ಸಮಾಜದಿಂದಾಗಿಯೇ ನಮಗೆ ಸುಖಮಯ ಜೀವನವು ಲಭಿಸುತ್ತದೆ. ಆದ್ದರಿಂದ ಸಮಾಜ ಸೇವೆ ಮಾಡುವುದು ನಮ್ಮ ಧರ್ಮ. ದೀನ, ದುಃಖಿತರ ಸೇವೆ, ಉಪೇಕ್ಷಿತರ ಸೇವೆ ಇದರೊಳಗೇ ಬರುತ್ತವೆ. ತಾನು ಭುಜಿಸುವ ಮುನ್ನ ತನ್ನ ಸುತ್ತಮುತ್ತಲು ಯಾರಾದರೂ ಆಹಾರವಿಲ್ಲದೆ ಹಸಿವೆಯಿಂದ ಬಳಲುತ್ತಿದ್ದಾರಾ ಎನ್ನುವುದನ್ನು ಗಮನಿಸಿ ಅವರಿಗೆ ಆಹಾರವನ್ನು ಕೊಟ್ಟು ತಾನು ತಿನ್ನಬೇಕು. ಇಲ್ಲಿ ಸುತ್ತಮುತ್ತಲು ಎನ್ನುವುದನ್ನು ವಿಶಾಲಾರ್ಥದಲ್ಲಿ ಸಮಾಜಕ್ಕೆ ಅನ್ವಯಿಸಿಕೊಳ್ಳಬೇಕು."
     "ಧರ್ಮನಂದನನೇ! ಈ ಪಂಚಯಜ್ಞ ಭಾವನೆ ಎನ್ನುವುದು ಸಮಾಜ ಜೀವನವನ್ನು ಸುಖಮಯವಾಗಿರಿಸಲು ಸಂಜೀವಿನಿ ಔಷಧಿಯಂತೆ ಕೆಲಸ ಮಾಡುತ್ತದೆ. ಪಂಚಯಜ್ಞಾನುಷ್ಠಾನವು ಪ್ರತಿಯೊಬ್ಬ ಗೃಹಸ್ಥನ ಕರ್ತವ್ಯವಾಗಿದೆ. ರಾಜನೂ ಸಹ ಗೃಹಸ್ಥನೇ! ರಾಜ್ಯವೆಲ್ಲಾ ರಾಜನ ಕುಟುಂಬವೇ ಅಲ್ಲವೇ!" 
*****
(ಆಧಾರ - ಶ್ರೀಯುತ ದೋನೇಪುಡಿ ವೆಂಕಯ್ಯನವರು ತೆಲುಗಿನಲ್ಲಿ ರಚಿಸಿರುವ ಭೀಷ್ಮ ಯುಧಿಷ್ಠಿರ ಸಂವಾದ ಅರ್ಥಾತ್ ರಾಜನೀತಿ ಶಾಸ್ತ್ರ ಎಂಬ ಗ್ರಂಥದಿಂದ ಆಯ್ದ ಭಾಗದ ಅನುವಾದ. ಈ ಸರಣಿಯನ್ನು ಈ ಹಿಂದೆ ಮೊಗಹೊತ್ತಗೆ - ಫೇಸ್ ಬುಕ್ಕಿನಲ್ಲಿ ನನ್ನ ವ್ಯಕ್ತಿಗತ ಪುಟದಲ್ಲಿ ಪ್ರಕಟಿಸಲಾಗಿತ್ತು).  
ಚಿತ್ರಕೃಪೆ:  ಗೂಗಲ್
ಹಿಂದಿನ ಲೇಖನ  ಭಾಗ - ೨೫ ಭೀಷ್ಮ ಯುಧಿಷ್ಠಿರ ಸಂವಾದ: ಸಹಧರ್ಮಾಚರಣೆ! ಓದಲು ಈ ಕೆಳಗಿನ ಕೊಂಡಿಯನ್ನು ನೋಡಿ https://sampada.net/node/48499
 

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.