LaTeX ಪರಿಚಯ ಮತ್ತು ಕನ್ನಡದಲ್ಲಿ LaTeX !

5

LaTeX ಎಂಬ ಪದ ನನಗೆ ಮೊದಲು ಪರಿಚಯ ಆಗಿದ್ದು ಸುಮಾರು ೮-೧೦ ವರ್ಷಗಳ ಹಿಂದೆ ಇರಬೇಕು. ಅಲ್ಲಿಯವರೆಗೂ latex  ಎಂದರೆ ವೈದ್ಯರು ಬಳಸುವ ಕೈ ಗವಜುಗಳನ್ನೂ, ಮತ್ತುಳಿದವರು ಬಳಸುವ ಕಾಂಡೋಮ್ ಗಳನ್ನೂ ತಯಾರಿಸುವ ರಬ್ಬರಿನ ಹೆಸರು ಎಂದು ತಿಳಿದಿದ್ದವನಿಗೆ, LaTeX ಎಂದರೆ ಒಂದು ಅಕ್ಷರ ಜೋಡಣೆ (Typesetting) ವ್ಯವಸ್ಥೆ ಎಂದೂ, ಅದನ್ನು ಲೇಟೆಕ್ಸ್ ಎಂದು ಹೇಳದೆ ಲೇಟೆಖ್ ಎಂದು ಹೇಳಬೇಕೆಂದೂ, ತಿಳಿದಿದ್ದು LaTeX ಅನ್ನು ಬಳಸಿ ಅದನ್ನು ವಾಚಾಮಗೋಚರವಾಗಿ ಹೊಗಳುತ್ತಿದ್ದ ಅದರ ಭಕ್ತರಿಂದ.

ಅದರಲ್ಲೂ ವಿಜ್ಞಾನ, ಇಂಜಿನಿಯರಿಂಗ್ ಗಳಲ್ಲಿ ಉನ್ನತ ವ್ಯಾಸಂಗ ಮಾಡುತ್ತಿದ್ದ ಗೆಳೆಯರೇ ನನಗೆ ಹೆಚ್ಚಾಗಿದ್ದರಿಂದ ಹೆಚ್ಚು ಕಮ್ಮಿ ಪ್ರತಿ ದಿನ ಒಬ್ಬನಲ್ಲದಿದ್ದರೆ ಮತ್ತೊಬ್ಬರು ಬಂದು ತಮ್ಮ ಅಂದಿನ LaTeX ಕರಾಮತ್ತನ್ನೂ, ಅದು ಅಂದು ಕೊಟ್ಟ ಸುಂದರ rendering ಅನ್ನೂ, ಜಕಣಾಚಾರಿ ಚನ್ನಕೇಶವ ದೇಗುಲದ ಮೇಲೆ ತೋರುವಂದದ ಪ್ರೀತಿಯಿಂದ ತೋರಿಸುತ್ತಿದ್ದರು. ಇವರೆಲ್ಲರ ಭಜನಾ ಮಂಡಳಿಯ ಉಪಟಳ ತಡೆಯಲಾಗದೆ ತಲೆ ತಪ್ಪಿಸಿಕೊಂಡು ಸುಮಾರು ದಿನ ತಿರುಗಾಡಿದೆನಾದರೂ ಕೊನೆಗೆ ಏನಾಗುತ್ತೋ ನೋಡಿಯೇ ಬಿಡೋಣ ಎಂದು ಧೈರ್ಯ ಮಾಡಿ, 'ಅದೇನದು ತೋರಿಸ್ರಪ್ಪ' ಎಂದು ಶರಣಾದೆ.

ನಾನು ಹಾಗಂದಿದ್ದೇ ತಡ, ತಾನು ಮೊದಲು, ತಾನು ಮೊದಲು ಎಂದು ಹಲವಾರು ಮಂದಿ ಕಲಿಸಲು ಮುಂದೆ ಬಂದರು. ಆದರೆ, ನನ್ನ ಆಲಸ್ಯವೋ, LaTeX ನ ಕಲಿಕೆಯ ಕಷ್ಟವೋ, ಒಟ್ಟಿನಲ್ಲಿ ಅವರಾರಿಂದಲೂ ನನಗೆ LaTeX ಕಲಿಸಲು ಆಗಲೇ ಇಲ್ಲ. ನಾನು ಮೈಕ್ರೋಸಾಫ್ಟ್ ವರ್ಡ್ ಗೂ, ಅದರ ಈಕ್ವೆಶನ್ ಎಡಿಟರ್ ಗೂ ಹಿಡಿಶಾಪ ಹಾಕುತ್ತ, ನನ್ನ ಥೀಸಿಸ್ ಅನ್ನು ಬರೆದು ಮುಗಿಸಿದೆ.

ನಾನು ವಿಜ್ಞಾನ, ತಂತ್ರಜ್ಞಾನ, ಇಂಜಿನಿಯರಿಂಗ್ ಕ್ಷೇತ್ರಗಳಲ್ಲೇ ಕೆಲಸ ಮುಂದುವರಿಸುತ್ತಿದ್ದಿದ್ದರಿಂದ ಮುಂದಿನ ವರ್ಷಗಳಲ್ಲಿ ಆಗಾಗ LaTeX ಎಂಬ ಶಬ್ದ ಕಿವಿಗೆ ಬೀಳುತ್ತಿದ್ದರೂ, ಈಗಾಗಲೇ ಬಾಯಿ ಸುಟ್ಟುಕೊಂಡ ತೆನಾಲಿ ರಾಮನ ಬೆಕ್ಕಿನಂತೆ ದೂರ ಓಡುವುದನ್ನು ಯಶಸ್ವಿಯಾಗಿ ಕಲಿತುಬಿಟ್ಟಿದ್ದೆ.

ಆದರೆ, ಮೊನ್ನೀಚೆಗೆ ಹತ್ತಿರದವರೊಬ್ಬರು ಬರೆಯುತ್ತಿದ್ದ ತಾಂತ್ರಿಕ ಗ್ರಂಥವೊಂದನ್ನು proofread ಮಾಡುವ ಮತ್ತು ಒಂದು ಅಧ್ಯಾಯವನ್ನು ಬರೆಯುವ ಪರಿಸ್ಥಿತಿ ಬಂದು ಬಿಟ್ಟಿತು. ಅವರು ತಮ್ಮ ಭಾಗವನ್ನೆಲ್ಲ LaTeX ನಲ್ಲೇ ಬರೆದು ಬಿಟ್ಟಿದ್ದರಿಂದ, ನನ್ನ ಅಧ್ಯಾಯವನ್ನೂ LaTeX ನಲ್ಲೇ ಬರೆಯುವ ಅನಿವಾರ್ಯತೆಗೆ ನಾನು ಸಿಕ್ಕಿಹಾಕಿಕೊಂಡುಬಿಟ್ಟೆ.

ಹೀಗೆ ನೀರು ಮೂಗಿನ ಮಟ್ಟಕ್ಕೆ ಏರಿದ ಅನಿವಾರ್ಯ ಪರಿಸ್ಥಿತಿಯಲ್ಲಿ LaTeX ಅನ್ನು ಕಲಿಯದೇ ಗತ್ಯಂತರವಿಲ್ಲ ಎಂದು ಗೊತ್ತಾದಾಗ, ಸರಿ ಈ ಬಾರಿಯಾದರೂ ಸರಿಯಾದ ಪ್ರಯತ್ನ ಮಾಡೋಣ ಎಂದು ಹೊರಟೇ ಬಿಟ್ಟೆ. ಈ ಸಾರಿಯ ಪ್ರಯತ್ನ ಯಶಸ್ವಿ ಆಯಿತು ಎನ್ನುವುದನ್ನು ನೀವು ಈಗಾಗಲೇ ಊಹಿಸಿರುತ್ತೀರ. ಸುಮಾರು ಒಂದು ದಶಕದ ಬುದ್ದಿ ವಿಕಾಸ ಕೆಲಸಕ್ಕೆ ಬಂತು ಎನ್ನುವುದಕ್ಕಿಂತಲೂ , ಈ ಬಾರಿ ಸರಿಯಾದ ಟೂಲ್ ಗಳನ್ನು ಬಳಸಿದ್ದೆ ಕಾರಣ ಎನ್ನುವುದು ಹೆಚ್ಚು ಸೂಕ್ತ.

ಅದಲ್ಲದೆ ನಾನು ಹಿಂದಿನ ಸಾರಿ ಕಲಿತಾಗ ತೀರಾ geek ಗಳಾಗಿದ್ದ ನನ್ನ ಸ್ನೇಹಿತರು ತೀರಾ ಪ್ರಾರಂಭದಲ್ಲೇ ಬೇಕಾದ- ಬೇಡವಾದ ತಾಂತ್ರಿಕ ವಿವರಣೆಯನ್ನೆಲ್ಲಾ ನನಗೆ ಕೊಟ್ಟು ಕಕ್ಕಾಬಿಕ್ಕಿ ಮಾಡಿದ್ದೂ, ನಾನು 'ಥೋ, ಹೋಗ್ರಪ್ಪ, ಇದೇನೂ ನನಗೆ ತಿಳಿಯೋ  ಲಕ್ಷಣ ಕಾಣೋಲ್ಲ' ಎಂದು ಕೈ ಚೆಲ್ಲಲು ಮುಖ್ಯ ಕಾರಣ ಎಂದರೆ ತಪ್ಪಲ್ಲ.

ಈ ಒಟ್ಟು ಅನುಭವದಿಂದ ನಾನು ಕಲಿತ ಪಾಠಗಳನ್ನು ಹಂಚಿಕೊಳ್ಳುವುದೇ ಈ ಬರಹದ ಉದ್ದೇಶ.LaTeX ಅನ್ನು ಹೇಗೆ ಸುಲಭವಾಗಿ ಉಪಯೋಗಿಸಬಹುದು ಎಂದು ಹೇಳುವದಕ್ಕೆ ಮುಂಚೆ ಒಂದಿಷ್ಟು ಪಾಯಿಂಟುಗಳು:

 

    * * LaTeX ಅತ್ಯಂತ ಸುಂದರವಾಗಿ ಪದ ಜೋಡಣೆ ಮಾಡುತ್ತದೆ. ಇದು ಉತ್ಪಾದಿಸುವ PDF ಗಳು ಬಹಳ ಮುದ್ದಾಗಿಯೂ, professional ಆಗಿಯೂ ಇರುತ್ತವೆ. ವರ್ಡ್ ಮುಂತಾದ ಸಾಫ್ಟ್ವೇರ್ ಗಳು ಮಾಡುವ ಪದಜೋಡನೆ ಯನ್ನು ಇದರ ಪಕ್ಕಕ್ಕೆ ಇಡಲೂ ನಾಚಿಕೆ ಆಗುತ್ತದೆ! (ಉದಾಹರಣೆಗೆ  )
    * * ಕಲಿಯಲು ಸ್ವಲ್ಪ ಕಷ್ಟವಾದರೂ, ಒಮ್ಮೆ ಕಲಿತ ನಂತರ ಆಗುವ ಉಪಯೋಗ ಕಲಿಕೆಯ ಕಷ್ಟಕ್ಕಿಂತ ಸಿಕ್ಕಾಪಟ್ಟೆ ಹೆಚ್ಚು.
    * ಸ್ವಲ್ಪವಾದರೂ ಸಂಕೀರ್ಣತೆ ಇರುವ ಯಾವುದೇ ಬರಹಕ್ಕೆ (ಪುಸ್ತಕ, ಪ್ರಾಜೆಕ್ಟ್ ರಿಪೋರ್ಟು, ಥೀಸಿಸ್, ಲೇಖನ, ನಾಟಕ, ಚಿತ್ರಕಥೆ) LaTeX ಒದಗಿಸುವ ಅನುಕೂಲ ಬಹಳ.
    * * ಈಕ್ವೆಶನ್ ಗಳು, ಟೇಬಲ್ ಗಳು ಇರುವ ಯಾವುದೇ ವೈಜ್ಞಾನಿಕ ಬರಹಕ್ಕಂತೂ LaTeX ಹೆಚ್ಚು ಕಮ್ಮಿ ಅನಿವಾರ್ಯ. (ಜಗತ್ತಿನ ಹೆಚ್ಚಿನ ವೈಜ್ಞಾನಿಕ ನಿಯಕಾಲಿಕಗಳೆಲ್ಲ ಇತ್ತೀಚಿಗೆ ಲೇಖಕರು LaTeX ನಲ್ಲೇ ಲೇಖನಗಳನ್ನು ಕಳಿಸಬೇಕೆಂದು ತಾಕೀತು ಮಾಡುತ್ತಿವೆ).
    * * cross-reference, index, citation, footnote, bibliography, ಇತ್ಯಾದಿಗಳೆಲ್ಲ ಇದರಲ್ಲಿ ನೀರು ಕುಡಿದಷ್ಟು ಸುಲಭ. ಉದಾಹರಣೆಗೆ ಇಡೀ ಪುಸ್ತಕದ ಪರಿವಿಡಿ ಬೇಕು ಎಂದರೆ \tableofcontents ಎಂದು ಬರೆದರೆ ಆಗಿ ಹೋಯಿತು.
    * * ಹಾಗೆ ಓದಿ LaTeX ಕಲಿಯುವುದು ಸಾಧ್ಯವಾದರೂ, ಲೇಖನವನ್ನೇ ಬರೆದು ಕಲಿಯುವುದು ಇದನ್ನು ಕಲಿಯಲು ಉತ್ತಮ ಮಾರ್ಗ. ಇಲ್ಲದಿದ್ದರೆ ಒಂದು ಥರ ಪುಸ್ತಕ ಓದಿ ಈಜು ಕಲಿತಂತೆ ಆಗುತ್ತದೆ!
    * * ಕಂಪ್ಯೂಟರ್ ಪ್ರೊಗ್ರಾಮಿಂಗ್ ಜ್ಞಾನ ಅವಶ್ಯವಲ್ಲದಿದ್ದರೂ, ಪ್ರಾಥಮಿಕ ಪ್ರೊಗ್ರಾಮಿಂಗ್ ತರಬೇತಿ ಇದ್ದರೆ ಕಲಿಯಲು ಅನುಕೂಲ.

 

ನೀವಾಗಲೀ, ನಿಮ್ಮ ಪರಿಚಯದವರಾಗಲೀ ಸಧ್ಯದಲ್ಲೇ ಪುಸ್ತಕವನ್ನೋ, ರಿಪೋರ್ಟ್ ಅನ್ನೋ, ಥೀಸಿಸ್ ಅನ್ನೋ ಬರೆಯುತ್ತಿದ್ದರೆ, LaTeX annu ಬಳಸಿ ನೋಡುತ್ತೀರಿ ಎಂದು ಈ ಲೇಖನದ ಆಶಯ.

 

ಈ ಮುಂದಿನ ಹೆಜ್ಜೆಗಳನ್ನು ಪಾಲಿಸಿದರೆ LaTeX ಕಲಿಯುವುದು ಮತ್ತು ಬಳಸುವುದು ನೀರು ಕುಡಿದಷ್ಟೇ ಸುಲಭ.

೧. ನಿಮ್ಮ ಕಂಪ್ಯೂಟರ್ ಗೆ  Ubuntu ಹಾಕಿಕೊಳ್ಳಿ.

೨. Applications -> Ubuntu Software Center ಮೇಲೆ ಕ್ಲಿಕ್ ಮಾಡಿ

೩. ಅಲ್ಲಿ ಸರ್ಚ್ ನಲ್ಲಿ Kile ಎಂದು ಹುಡುಕಿ, Kile ಅನ್ನು ಇನ್ಸ್ಟಾಲ್ ಮಾಡಿಕೊಳ್ಳಿ. ಅದು ಜೊತೆಗೆ ಬೇರೆ ಬೇರೆ ಪ್ಯಾಕೇಜುಗಳು ಬೇಕು ಎಂದು ತಗಾದೆ ತೆಗೆಯುತ್ತದೆ. ಸರಿ, ಏನೇನು ಬೇಕು ಎಲ್ಲ ಡೌನ್ ಲೋಡ್ ಮಾಡಪ್ಪ ಎಂದು ಹೇಳಿ. ಸುಮಾರು 1 GB ಅಷ್ಟು ಡೌನ್ಲೋಡ್ ಆಗುತ್ತದೆ (ಬ್ರಾಡ್ ಬ್ಯಾಂಡ್ ಬಿಲ್ ಬಗ್ಗೆ ಜಾಗ್ರತೆ!).

೪. Applications->Office->Kile ಮೇಲೆ ಕ್ಲಿಕ್ ಮಾಡಿ.

೫. File->New ಮೇಲೆ ಕ್ಲಿಕ್ ಮಾಡಿ, article ಅಥವಾ book ಅನ್ನು ಆರಿಸಿಕೊಳ್ಳಿ.
೬. Article ಆರಿಸಿದಾಗ ಬಂದಿದ್ದನ್ನು ಕೆಳಗಿನಂತೆ ಬದಲಾಯಿಸಿ.

 

\documentclass[a4paper,10pt]{article}

\usepackage[utf8x]{inputenc}

%opening

\title{My super document}\author{My Name}
\begin{document}
\maketitle
\begin{abstract}

This is an abstract of my document.

\end{abstract}
\section{My first section}

This is the main text of my document.

\end{document}

ನಿಮಗೆ ತೋಚಿದಂತೆ ಇದನ್ನು ಬದಲಾಯಿಸಿ. 'This is the main text of my document' ಎಂದು ಇರುವಲ್ಲಿ ನಿಮಗೆ ಬೇಕಾದಷ್ಟು ಬರೆಯಿರಿ.

 

೬. Save ಬಟನ್ ಒತ್ತಿ ನಿಮಗೆ ಬೇಕಾದ ಜಾಗದಲ್ಲಿ ಸೇವ್ ಮಾಡಿ.

೭. Kile ಯಲ್ಲಿ ಇರುವ Quick Build ಬಟನ್ ಒತ್ತಿ.

೮. ಸ್ವಲ್ಪ ಹೊತ್ತಿನಲ್ಲಿ ನಿಮ್ಮ ಮೊದಲ LaTeX ಡಾಕ್ಯುಮೆಂಟ್ ತಯಾರಾಗಿ PDF ತಾನಾಗಿಯೇ ಓಪನ್ ಆಗುತ್ತದೆ (ಆಗಲಿಲ್ಲ ಎಂದರೆ ನೀವು ೬ ನೆ ಹೆಜ್ಜೆಯಲ್ಲಿ ಸೇವ್ ಮಾಡಿದ ಜಾಗದಲ್ಲೇ ಒಂದು ಹೊಸ PDF ಸೃಷ್ಟಿ ಆಗಿರುತ್ತದೆ. ಅದನ್ನು ಓಪನ್ ಮಾಡಿ.)

೯. ಇನ್ನು ಏನೇನು ಬೇಕೋ, ಅದನ್ನೆಲ್ಲ ಬರೆಯಲು Kile ಯ ಸೈಡ್ ಬಾರ್ ಮತ್ತು LaTeX Toolbar ನಲ್ಲಿ ಹುಡುಕಿ. ಸ್ವಲ್ಪ ದಿನಗಳ ನಂತರ ಆ ಕಮ್ಯಾಂಡ್ ಗಳು ನಿಮಗೇ ಬಾಯಿಪಾಠ ಆಗಿ ಮೆನುಗಳ ಸಹಾಯ ಇಲ್ಲದೆ ಬರೆಯಲು ಕಲಿಯುತ್ತೀರ.

೧೦. ಏನೇ ಅನುಮಾನ ಬಂದರೂ, 'ಇದನ್ನು ಹೇಗೆ ಮಾಡುವುದು' ಎಂದು ಪ್ರಶ್ನೆ ಬಂದರೂ, ಗೂಗಲೆಶ್ವರನ ಮೊರೆ ಹೋಗಿ. http://en.wikibooks.... ಯಲ್ಲಿ ನಿಮಗೇ ಬೇಕಾದ ಎಲ್ಲ ಮಾಹಿತಿಯೂ ಸಿಗುತ್ತದೆ. ಅದರ PDF ಡೌನ್ಲೋಡ್ ಮಾಡಿಟ್ಟುಕೊಂಡರೆ ಇನ್ನೂ ಅನುಕೂಲ.


ಇನ್ನು ನನ್ನ ಕಥೆಗೆ ವಾಪಸ್ ಬಂದರೆ, ಸರಿ, LaTeX ಬಳಸುವುದನ್ನೆನ್ನೋ ಕಲಿತು ಅದರ ಅಂದ ಚಂದ ಹೊಗಳುವ ದಾಸರಲ್ಲಿ ನಾನೂ ಒಬ್ಬನಾದೆ. ಆದರೆ ಅದಾದ ನಂತರ ಮೊದಲು ಬಂದ ಪ್ರಶ್ನೆ, LaTeX ಬಳಸಿ, ಕನ್ನಡದಲ್ಲಿ ಬರೆಯುವುದು ಹೇಗೆ? ಸುಮಾರು ಹುಡುಕಾಟ ಮಾಡಿದರೂ, ಸರಿಯಾದ ಸುಲಭವಾದ ಮಾರ್ಗ ಸಿಗಲೇ ಇಲ್ಲ. ಮಾರ್ಗ ಇಲ್ಲದಿದ್ದರೆ ಮಾಡೋಣ ಎಂದು ತೀರ್ಮಾನ ಮಾಡಿ, ಸುಮಾರು ಅಧ್ಯಯನ ಮಾಡಿ ಕಂಡು ಹಿಡಿದ ಸೂತ್ರ ಇದೋ, ನಿಮಗಾಗಿ!
ಮೇಲಿನ ಹತ್ತು ಹೆಜ್ಜೆಗಳನ್ನು ಅನುಸರಿಸಿದ್ದರೆ ಕನ್ನಡದಲ್ಲಿ ಬರೆಯಲು ನೀವು ೯೦% ತಯಾರು! ಕನ್ನಡದಲ್ಲಿ ಬರೆಯಲು ಹೀಗೆ ಮಾಡಿ.೧. Kile ಯಲ್ಲಿ ಹೊಸ ಡಾಕ್ಯುಮೆಂಟ್ ನಲ್ಲಿ ಈ ರೀತಿ ಬರೆಯಿರಿ.

 

\documentclass[11pt]{article}

\usepackage{fontspec}

\usepackage{polyglossia}
\setmainfont[Script=Kannada{Kedage}

%\newfontfamily\english{Ubuntu}

%\newfontfamily\english{"LiberationSerif"}

\newfontfamily\english{"FreeSerif"}
\newcommand\en[1]{{\english #1}}
\title{ಕನ್ನಡದಲ್ಲಿ ಲೇಟೆಖ್}

\begin{document}

\maketitle

\section{ಇದೊಂದು ತಲೆಬರಹ} ಇದು ಕನ್ನಡ ಬರಹ. ಒಂದೊಮ್ಮೆ ಕನ್ನಡದ ಮಧ್ಯ ಇಂಗ್ಲೀಶ್ ಬೇಕಾದರೆ? \en{Here it is!}.

\end{document}

 

೨. ಕನ್ನಡದಲ್ಲಿ ಬರೆಯುವಾಗ ಅಕ್ಷರಗಳು unicode ಆಗಿಯೇ ಇರಲಿ! iBus ಅಥವಾ Google Transliterate ಉಪಯೋಗಿಸಿ ಕನ್ನಡ ಬರೆಯಿರಿ. ಇಂಗ್ಲೀಶ್ ಬೇಕು ಎಂದರೆ \en{} ಎಂದು ಹಾಕಿ, ಬ್ರಾಕೆಟ್ ಗಳ ಮಧ್ಯದಲ್ಲಿ ಇಂಗ್ಲೀಶ್ ಬರೆಯಿರಿ. ಕನ್ನಡ ಮತ್ತು ಇಂಗ್ಲಿಷ್ ನಲ್ಲಿ ಬೇರೆ ಫಾಂಟ್ ಬಳಸಲು ಸೂಕ್ತ ಸ್ಥಳದಲ್ಲಿ ಬದಲಾವಣೆ ಮಾಡಿ. ಇನ್ಸ್ಟಾಲ್ ಆಗಿರುವ Open type ಫಾಂಟ್ ಗಳನ್ನು ಮಾತ್ರ ಬಳಸಲು ಸಾಧ್ಯ.

 

೩. PDF ತಯಾರಿಸಲು ಈಗ Quick Build ಬದಲು ಮೇಲೆ ಮೆನು ನಲ್ಲಿ ಇರುವ Build->Compile->XeLaTeX ಅನ್ನು ಆರಿಸಿ. (೧-೨ ಬಾರಿ ಇದನ್ನು ಮಾಡಿದಾಗ Quick Build ಪಕ್ಕದಲ್ಲಿ XeLaTeX ಬಟನ್ ಬರುತ್ತದೆ. ನಂತರ ಅದನ್ನೇ ಬಳಸಬಹುದು).
ಅಷ್ಟೇ! ಬಾಕಿ ಎಲ್ಲ LaTeX ಸೌಲಭ್ಯ ಗಳೂ ಕನ್ನಡಕ್ಕೂ ಲಭ್ಯ. (ಕನ್ನಡದಲ್ಲಿ ಶಬ್ದಗಳನ್ನು ಎಲ್ಲಿ ಒಡೆದು hyphen ಗಳನ್ನು ಹಾಕಬೇಕು ಎನ್ನುವುದು ಇನ್ನೂ ಸಂಪೂರ್ಣವಾಗಿ LaTeX ಗೆ ಗೊತ್ತಿಲ್ಲ. ತೀರ ಉದ್ದದ ಲೈನ್ ಗಳಾದರೆ ನೀವಾಗಿಯೇ hyphen ಸೇರಿಸಬೇಕಾಗಬಹುದು) .

 

ಸಂಪದದಲ್ಲಿರುವ ತಂತ್ರಜ್ಞರಿಗೆ : Openoffice hyphenation ಅನ್ನೇ TeX ಕೂಡ ಬಳಸುತ್ತದೆ. OpenOffice ಗೆ ಇರುವ ಕನ್ನಡ hyphenation dictionary (http://extensions.services.openoffice.org/en/project/hyph_kn_IN) ಅನ್ನೇ ನಮ್ಮ TeX distribution ಗೆ ಕಾಣಿಸುವಂತೆ ಮಾಡಲು ಉಪಾಯವಿದೆಯೇ? ಮತ್ತೊಂದು ತೊಂದರೆ ಎಂದರೆ ಕೇದಗೆ ಅಥವಾ ಲೋಹಿತ್ ಎರಡೂ ಫಾಂಟ್ ಗಳಲ್ಲಿ 'ಎಂದು' ಎನ್ನುವ ಶಬ್ದ ದಲ್ಲಿ ಎ ಮತ್ತು ಅನುಸ್ವಾರದ ಮಧ್ಯೆ ಒಂದು ಅದೃಶ್ಯ glyph ಬರುತ್ತಿದೆ. ಕಾರಣ ಏನಾದರೂ ಗೊತ್ತೇ?

 

 

ಸಂಪದದ ಓದುಗರಿಗಾಗಿ ನನ್ನ ಮೆಚ್ಚಿನ ಲೇಖಕ ಅನಿಲ್ ಕುಮಾರ್ ಅವರ ಫಿನ್ಲಂಡ್ ಪ್ರವಾಸ ಕಥನದ e-ಪುಸ್ತಕ ಇಲ್ಲಿದೆ. LaTeX ಬಳಸಿ ತಯಾರಿಸಿದ್ದು. ಓದಿ, ಹಂಚಿ! ಲೇಖಕರ ಮತ್ತು ಸಂಪದದ ವಿರೋಧ ಇದಕ್ಕಿಲ್ಲ ಎಂದು ಭಾವಿಸುತ್ತೇನೆ. (ಕ್ಷಮಿಸಿ, ಸಂಪದದಲ್ಲಿ PDF ಫೈಲ್  ಗಳನ್ನು ಸೇರಿಸಲು ಆಗುತ್ತಿಲ್ಲ.ಬೇರೆ ಉಪಾಯವಿದ್ದರೆ PDF ಅನ್ನು ಹಂಚಿಕೊಳ್ಳುವೆ. !!)

ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಪ್ರತಿಕ್ರಿಯೆಗಳು

ಒಳ್ಳೆಯ ಅನುಭವ ... ನಾನೂ ಸಲ್ಪ ದಿನ ಮುಂಚೆ ಜೀಟೆಕ್(XeTeX) ಉಪಯೋಗಿಸಿದ್ದೆ.. ತುಂಬಾ ಚೆನ್ನಾಗಿದೆ. ಮದ್ಯೆ ಇಂಗ್ಲೀಷ್ ಬಳಸಬೇಕಾದಲ್ಲಿ ಫಾಂಟ್ ಬದಲಾಯಿಸೋದು ಸಲ್ಪ ರಗಳೆ ಅನ್ನಿಸಿತ್ತು. ನೀವು ಬರೆದಂತೆ \en{} ಎಂದು new command ಮಾಡಿಕೊಂಡರೆ ಸುಲಭವಾಗುತ್ತೆ. ಧನ್ಯವಾದಗಳು :) ನಾನು ಎಲ್ಲದಕ್ಕೂ Emacs ಬಳಸುತ್ತೇನೆ. :) ಟೆಕ್ ಎಡಿಟ್ ಮಾಡಕ್ಕೆ ಕೂಡಾ... ನೀವು ಹೇಳಿದ ಹಾಗೇ "ಎ" ಬರೆದ ಮೇಲೆ ಸೊನ್ನೆಯ ತೊಂದರೆ ನನಗೂ ಇತ್ತು. ಅದೇ ಸಮಯದಲ್ಲಿ ಓಪನ್ ಆಫೀಸ್ ನಲ್ಲೂ ಆ ತೊಂದರೆ ಇತ್ತು. ಹಾಗಾಗಿ ಅದು ಪ್ಯಾಂಗೋ ಬಗ್ ಎಂದು ಅನುಮಾನ. ಆ ತೊಂದರೆ ಪ್ಯಾಂಗೋನಲ್ಲಿ ಸರಿ ಮಾಡಿದ್ದಾರೆ ಅಂತಲೂ ಕೇಳಿದ ನೆನಪು. ಯಾವ್ದಕ್ಕೂ ಒಮ್ಮೆ ನೋಡಿ ಹೇಳುವೆ. hyphenation ಗೆ ಇದನ್ನು ನೋಡಿ, ನಾನು ಇದನ್ನಿನ್ನೂ ಪ್ರಯೋಗಿಸಿಲ್ಲ. ಪ್ರಯೋಗಿಸಿ ನೋಡಬೇಕು. http://tug.ctan.org/...
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ಧನ್ಯವಾದ ಅರವಿಂದ್! texlive-lang-indic ಪ್ಯಾಕೇಜ್ ನಲ್ಲಿ sanhyp ಕೂಡ ಇದೆ.ಆ ಪ್ಯಾಕೇಜ್ ಇನ್ಸ್ಟಾಲ್ ಮಾಡಿ \language=\kannada ಅಂತ ಸೇರಿಸಿದರೆ undefined control sequence ಅಂತ ಎರರ್ ಬರ್ತಾ ಇದೆ. ನೋಡ್ಬೇಕು ಸರಿ ಮಾಡೋಕೆ ಆಗುತ್ತಾ ಅಂತ. ಪ್ಯಾಂಗೋ 'ಎಂಬ' ಬಗ್ ಬಗ್ಗೆ ಮಾಹಿತಿ ಇದ್ದರೆ ದಯವಿಟ್ಟು ಹಂಚಿಕೊಳ್ಳಿ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

\language\sanskrit ಅಂತನೇ ಕೊಟ್ಟು ನೋಡಿ. ಕೆಲಸ ಮಾಡಿದರೆ, ಆ ಟೆಕ್ ಫೈಲ್ ಅನ್ನು ಬದಲಾಯಿಸಬಹುದು ಕನ್ನಡ ಎಂದು ಕೊಡಲು.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

\sanskrit ಅಂತ ಕೂಡ ಕೊಟ್ಟು ನೋಡಿದ್ದೆ. ಬರ್ತಾ ಇರ್ಲಿಲ್ಲ. ಬೇರೆ ಯಾವ್ದಾದ್ರು ಪ್ಯಾಕೇಜ್ ಅನ್ನ \usepackage ಮೂಲಕ ಲೋಡ್ ಮಾಡ್ಕೋ ಬೇಕೋ ಏನೋ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ಲೇಟೆಖ್ ನಲ್ಲಿ ಕನ್ನಡದ hyphenation ಬಗ್ಗೆ ಲೇಖನ ಬರೆದಿದ್ದೇನೆ ನೋಡಿ. (solution) http://aravindavk.in...
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

Kile ತುಂಬಾ ಚೆನ್ನಾಗಿದೆ. ಪರಿಚಯಿಸಿದ್ದಕ್ಕೆ ಥ್ಯಾಂಕ್ಸ್ ಈಗ ಅರ್ಧಕ್ಕೆ ಬಿಟ್ಟ ಯೋಜನೆಯೊಂದನ್ನು ಮತ್ತೆ ಪ್ರಾರಂಭಿಸಲು ಹುಮ್ಮಸ್ಸು ಬಂದಿದೆ :)
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ಸಂಪದದಲ್ಲಿ PDF fileಗಳನ್ನು ಸೇರಿಸಲು, File attachment ಆಯ್ಕೆಯನ್ನು ಬಳಸಿ. 'attach file' ಕ್ಲಿಕ್ಕಿಸಿ, ನಂತರ ನಿಮ್ಮ ಆಯ್ಕೆಯ fileಅನ್ನು upload ಮಾಡಿ. ಒಟ್ಟು ಹತ್ತು MB ವರೆಗೂ upload ಮಾಡಬಹುದು.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ಇಲ್ಲ ರೀ, ನೋಡ್ ಎಡಿಟ್ ಫಾರ್ಮ್ ನಲ್ಲಿ fileuploads ಕಾಣಿಸ್ತಾ ಇಲ್ಲ. ಬಹುಶ ಎಲ್ಲರಿಗೂ (ಎಲ್ಲ ಯೂಸರ್ ರೋಲ್ ಗಳಿಗೂ) ಅಪ್ಲೋಡ್ ಪೆರ್ಮಿಶನ್ ಇಲ್ಲ ಅನ್ಸುತ್ತೆ. ನಿರ್ವಾಹಕರ ಗಮನಕ್ಕೆ: admin/user/permissions ನಲ್ಲಿ upload files ಪರ್ಮಿಶನ್ ನ್ನ authenticated users ಗೂ ಕೊಡೀಪ್ಪಾ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ಉತ್ತಮ ಲೇಖನ. ಅನಿಲ್ ಕುಮಾರ್ ಅವರ ಪುಸ್ತಕ ಸದ್ಯದಲ್ಲೇ ಪುಸ್ತಕ ರೂಪದಲ್ಲಿ (off-line) ಬರಲಿದೆ. ಇ-ಪುಸ್ತಕ ರೂಪದಲ್ಲಿ ಇದನ್ನು ಹಂಚಿದಲ್ಲಿ ಪುಸ್ತಕವನ್ನು ಪ್ರಕಟಿಸುತ್ತಿರುವವರಿಗೆ ತೊಂದರೆಯಾದೀತು.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ಓಹೋ, ಹಾಗಾದರೆ ಸರಿ ಬಿಡಿ, ಅದನ್ನು ಹಂಚುವುದಿಲ್ಲ. LaTeX ಕನ್ನಡ ಕೇಸ್ ಸ್ಟಡಿ ಗಾಗಿ ಅವರ ಲೇಖನ ಮಾಲೆಯನ್ನು ಬಳಸಿಕೊಂಡಿದ್ದೆ ಅಷ್ಟೆ. Dead-tree ಆವೃತ್ತಿಗಾಗಿ ಕಾಯುತ್ತೇನೆ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ನನ್ನ ಮಂದ ಮುದ್ಧಿಗೆ ಲೇಟೆಕ್ಸ್ ಅಂದಾಗ ತೋಚಿದ್ದು ಬೇರೆಯೇ. ನನ್ನ ಕಂಪ್ಯೂಟರ್ ಜ್ಞಾನ ಅಷ್ಟಕ್ಕಷ್ಟೇ. ತೀರಾ ಟೆಕ್ನಿಕಲ್ ಆಗದೆ ಸುಲಭವಾಗಿ ಕಲಿಯುವಂತಾದರೆ ಕಲಿಯಬೇಕು. ನಿಮ್ಮ ಈ ಮಾತು ಸತ್ಯ; "ತೀರಾ ಪ್ರಾರಂಭದಲ್ಲೇ ಬೇಕಾದ- ಬೇಡವಾದ ತಾಂತ್ರಿಕ ವಿವರಣೆಯನ್ನೆಲ್ಲಾ ನನಗೆ ಕೊಟ್ಟು ಕಕ್ಕಾಬಿಕ್ಕಿ ಮಾಡಿದ್ದೂ....." ಇದು ಜ್ಞಾನದ ಎಲ್ಲಾ ಮಜಲುಗಳಿಗೂ ಅನ್ವಯವಾಗುತ್ತೆ. ಕಂಪ್ಯೂಟರ್ ಕಲಿಸುವಾಗ, ram, bite.. ಗೀಗಾ ಬೈಟು, ಟೆಟ್ರಾ ಬೈಟು ಎಂದು ಜನರನ್ನು ಕಂಪ್ಯೂಟರ್ ನಿಂದ ದೂರ ಮಾಡಿಬಿಡುತ್ತಾರೆ. ಇಂಗ್ಲಿಷ್ ಕಲಿಸುವಿಕೆಯಲ್ಲೂ ಇದೆ ರೀತಿಯ ಧೋರಣೆ. ಗ್ರಾಮರ್ ಬೇಕು ಇಂಗ್ಲಿಷ್ ಕಲಿಯಲು ಎಂದು ಜನರನ್ನು ಭಯ ಬೀಳಿಸುತ್ತಾರೆ. ನಡೆಯಲು ಬಾರದ ಎಳೆ ಮಗುವಿಗೆ marathon ಗೆ ತರಬೇತಿ ನೀಡಿದಂತೆ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ಒಳ್ಳೆಯ ಲೇಖನ, DTP ಹಾಗು Book publishing ಗೆ ತುಂಬಾ ಸಹಾಯವಾಗುತ್ತದೆ ಇದರಿಂದ, ಇವತ್ತೆ ರಾತ್ರಿ D/L ಮಾಡ್ತಿನಿ, ಇದು ೧ ಜಿ. ಬಿ ಮಾತ್ರ್ ಆಗುತ್ತಾ ಅಥವಾ ಜಾಸ್ತಿನಾ?
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ಹೀಗೊಂದು ಪ್ರತಿಕ್ರಿಯೆ, ಸ್ವತಃ ಕೆ ಪಿ ರಾವ್ ಅವರಿಂದ ಬಂದದ್ದು: atyadbhuta lekhana, dhanyavadagaLu. Latex (mattu Don Knuth) nanage 30+ varushagaLinda gottu, AdarU iShtu cennaagi bareyabahudendu tilidudu idE modalu. KPRao (ಫೇಸ್ ಬುಕ್ಕಿನಲ್ಲಿ ಹಾಕಿದ್ದರು)
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ಮೆಚ್ಚುಗೆ ಮಾತುಗಳಿಗೆ ಕೆ ಪಿ ರಾವ್ ಆವರಿಗೂ, ಅದನ್ನು ತಲುಪಿಸಿದ ನಿಮಗೂ ಧನ್ಯವಾದಗಳು.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.