ಸಾಹಿತ್ಯ ಮತ್ತು ಜೀವನದ ಇತರ ಮೌಲ್ಯಗಳು !

ಮೈಸೂರ್ ಅಸೋಸಿಯೇಷನ್, ಮುಂಬೈ ನ ಬಂಗಾರದ ಹಬ್ಬದ, ದತ್ತಿ ಉಪನ್ಯಾಸಮಾಲೆ-೨೦೦೮.

" ಸಾಹಿತ್ಯ ಮತ್ತು ಜೀವನದ ಇತರ ಮೌಲ್ಯಗಳು "

೨ ದಿನ ಹಮ್ಮಿಕೊಂಡ ಈ ಕಾರ್ಯಕ್ರಮದಲ್ಲಿ ೧೯, ಶನಿವಾರ, ಜನವರಿ, ೨೦೦೮ ರ, ಸಾಯಂಕಾಲ, ೬-೪೫ ಕ್ಕೆ ನಡೆದ ಮೊದಲನೆಯ ದಿನದ, ಶುಭಾರಂಭವನ್ನು ಶ್ರೀಮತಿ. ಶ್ಯಾಮಲರವರ " ಕರಣಾಳು ಬಾಬೆಳಕೆ, " ಎಂಬ (ಬಿ.ಎಮ್.ಶ್ರೀರವರ, ಗೀತೆ) ಪ್ರಾರ್ಥನೆಯೊಂದಿಗೆ, ಪ್ರಾರಂಭಮಾಡಲಾಯಿತು. ಅಸೋಸಿಯೇಷನ್ ನ ಅಧ್ಯಕ್ಷರಾದ, ಶ್ರೀ. ದೊರೈಸ್ವಾಮಿಯವರು, ಡಾ. ಬೈರಪ್ಪನವರನ್ನೂ, ಬಂದ ಎಲ್ಲ ಸಭಿಕರನ್ನೂ ಸ್ವಾಗತಿಸಿದರು. ನಂತರ, ಡಾ. ನಾಗೇಶ್ ಉಪಾಧ್ಯೆಯವರು, ಡಾ. ಎಸ್. ಎಲ್. ಭೈರಪ್ಪನವರನ್ನು ಸಭಿಕರಿಗೆಲ್ಲಾ ಪರಿಚಯಿಸಿದರು. ಡಾ. ಭೈರಪ್ಪನವರು (೨೬, ಜುಲೈ, ೧೯೩೪ ) ಹಾಸನ ಜಿಲ್ಲೆಯ, ಚನ್ನರಾಯಪಟ್ಟಣ ತಾಲ್ಲೂಕಿನ, 'ಸಂತೆಶಿವಿರ,' ಎಂಬ ಅತಿ ಹಿಂದುಳಿದ ಗ್ರಾಮದಲ್ಲಿ ಹುಟ್ಟಿದರು. ಪ್ರಾಥಮಿಕ ಶಿಕ್ಷಣ ಊರಿನಲ್ಲೇ ಆಯಿತು. ೧೯೫೭ ರಲ್ಲಿ, ತತ್ವಶಾಸ್ತ್ರದಲ್ಲಿ ಬಿ. ಎ. (ಆನರ್ಸ್), ಮಹಾರಾಜ ಕಾಲೇಜ್, ಮೈಸೂರಿನಲ್ಲಿ ಮಾಡಿದರು. ಮನೆಯಲ್ಲಿ ಅತಿ ಬಡತನ. ಭರಪ್ಪನವರ ಸಂಘರ್ಷಮಯ ಜೀವನ, ಎಂತಹವರನ್ನೂ ಮೂಕರನ್ನಾಗಿ ಮಾಡುತ್ತದೆ. ತಮ್ಮ ೮ ನೆಯ ವಯಸ್ಸಿನಲ್ಲಿ , " ಪ್ಲೇಗ್ ಮಹಾಮಾರಿ," ಯಿಂದ ತಮ್ಮ ತಂಗಿ ಮತ್ತು ಅಣ್ಣನನ್ನು ಕಳೆದುಕೊಂಡರು. ಸ್ವಲ್ಪದಿನಗಳಲ್ಲೆ ತಾಯಿ, ಗೌರಮ್ಮನವರು ತೀರಿಕೊಂಡರು. ತಂದೆ, ಲಿಂಗಯ್ಯ ನವರಿಂದ ಹೆಚ್ಚಿನದ್ದೇನೂ ಅಪೇಕ್ಷಿಸುವಂತಿರಲಿಲ್ಲ. ಪುನಃ ತಮ್ಮ ೧೪ ನೆಯ ವಯಸ್ಸಿನಲ್ಲಿ, ಅವರ ತಮ್ಮ ಮರಣಹೊಂದಿದರು. ಅವನ ಶವವನ್ನು ತಮ್ಮ ಹೆಗಲಮೆಲೆ ಹೊತ್ತು, ಮಣ್ಣುಮಾಡಿದ್ದ ಗಳಿಗೆಯನ್ನು ಸ್ಮರಿಸಿಕೊಳ್ಳುತ್ತಾರೆ. ತೀವ್ರವಾದ, ವೇದನೆಯನ್ನು ಅವರು ಅನುಭವಿಸಿದರು. ಅವರು ಪಟ್ಟ ಕಷ್ಟ ಒಂದೊಂದಲ್ಲ. ಒಂಟಿತನ, ಹಾಗೂ ಅನಾಥ ಪ್ರಜ್ಞೆ ಅವರಿಗೆ ಪ್ರತಿಕ್ಷಣದಲ್ಲಿಯೂ ಗೋಚರಿಸಿತು. ಅದರೆ ಅವೆಲ್ಲವನ್ನೂ ಎದುರಿಸಿ ಅದರಲ್ಲಿ ಜಯಶಾಲಿಯಾದರು. ಅಗರಬತ್ತಿ ಮಾರಾಟಮಾಡಿದರು, ಅಂಗಡಿಯಲ್ಲಿ ಲೆಖ್ಖಬರೆದರು. ಹೋಟೆಲ್ ನಲ್ಲಿ ವೈಟರ್ ಆಗಿ, ಸಿನಿಮಾ ಗೃಹಗಳಲ್ಲಿ, ಟಿಕೆಟ್ ಮಾರಿದರು, ಇತ್ಯಾದಿ. ಬೊಂಬಾಯಿಗೆ ಹೋದರೆ ಹೆಚ್ಚಿನ ಸಹಾಯವಾಗುವುದೆಂದು ಅವರು ಆಲೋಚಿಸಿದ್ದರು. ಆದರೆ, ಅವರ ಕಲ್ಪನೆ ಸುಳ್ಳಾಯಿತು. ಅಲ್ಲಿಗೆ ಹೋದಾಗ್ಯೂ, ಅವರಿಗೆ ಸಿಕ್ಕಿದ್ದು ಹೋಟೆಲ್ ವೈಟರ್ ಕೆಲಸ, ಆಡುಗೆ ಮಾಡುವ, ಕೆಲಸ. ಇತ್ಯಾದಿ. ಡ್ರಾಮ ಕಂಪೆನಿಯಲ್ಲಿ, ದುಡಿದರು. ಏನಾದರೂ ಅವರ ಅರ್ಥಿಕ ಪರಿಸ್ಥಿತಿಮಾತ್ರ, ಸುಧಾರಿಸಲಿಲ್ಲ. ಬೇಸತ್ತ ಅವರು, ತಮ್ಮ ಕೆಲವು ಗೆಳೆಯರ ಸಹಾಯದಿಂದ, ಕರ್ನಾಟಕಕ್ಕೆ ವಾಪಸ್ಸಾದರು. ಆದರೆ, ತಮ್ಮ ಜೀವನದ ಸಂಘರ್ಷಗಳು, ಅವರು, ಮುಂದೆ ಕವಿಯಾದಾಗ, ಕೆಲಸಕ್ಕೆ ಬಂದವು. ಹಲವು ಬಾರಿ ತಕ್ಕ ಗ್ರಾಸ ಒದಗಿಸಿದವು.

ಮೊದಲು, ೧೯೫೮-೬೦ ರವರೆಗೆ, ಹುಬ್ಬಳ್ಳಿಯ ಕಾಡುಸಿದ್ಧೇಶ್ವರಕಾಲೇಜ್ ನಲ್ಲಿ, ತರ್ಕಶಾಸ್ತ್ರ, ಮತ್ತು ಮನಃಶಾಸ್ತ್ರದ ವಿಭಾಗದಲ್ಲಿ, ರೀಡರ್ ಆಗಿ, ಸೇರಿದರು. ೧೯೬೨ ರಲ್ಲಿ ಅವರಿಗೆ ಪಿ. ಎಚ್. ಡಿ ಪದವಿ ಗುಜರಾತಿನ, ವಿಶ್ವವಿದ್ಯಾಲಯದಿಂದ ದೊರೆಯಿತು. ನಂತರ, ಸರ್ದಾರ್ ಪಟೇಲ್ ಕಾಲೇಜ್, ಆನಂದ್ ನಲ್ಲಿ, ಮತ್ತೆ, ೧೯೬೭-೧೯೭೧ ರವರೆಗೆ, ದೆಹಲಿಯ, ರಾಷ್ಟ್ರೀಯ ಶಿಕ್ಷಣ ಮತ್ತು ತರಬೇತಿ ಸಂಸ್ಥೆಯಲ್ಲಿ, ಕೆಲಸಮಾಡಿದರು. ೧೯೭೧ ರಲ್ಲಿ ಕರ್ನಾಟಕಕ್ಕೆ ವಾಪಸ್ ಬಂದರು. ಮೈಸೂರಿನ, ಪ್ರಾದೇಶಿಕ ಕಾಲೇಜ್ ನಲ್ಲಿ ತತ್ವಶಾಸ್ತ್ರ, ಮತ್ತು ಶಿಕ್ಷಣ ಶಾಸ್ತ್ರ ವಿಭಾಗದಲ್ಲಿ, ರೀಡರ್ ಆಗಿ ಸೇರಿ, ತದನಂತರ, ೧೦ ವರ್ಷ ಪ್ರಾದ್ಯಾಪಕರಾಗಿ ದುಡಿದರು.
'ಆಲ್ಪ್ಸ್', 'ರಾಕಿ', 'ಆಂಡಿಸ್' ಪರ್ವತಗಳಲ್ಲಿ, ಮತ್ತು ಜಪಾನಿನ 'ಫ್ಯೂಜಿಯಾಮ,' ಗಳಲ್ಲಿ ಚಾರಣ [Trekking] ಮಾಡಿದ್ದಾರೆ. ಹಿಮಾಲಯ ಪರ್ವತಶ್ರೇಣಿ, ಅವರ ಅತ್ಯಂತ ಹರ್ಷದಾಯಕ ತಾಣವಾಗಿದೆ. ತಮ್ಮ ವೃತ್ತಿಜೀವನದ ಮಧ್ಯೆಯೇ ಬಿಡುವುಮಾಡಿಕೊಂಡು, ಇದುವರೆಗೆ ಸುಮಾರು ೨೧ ಕಾದಂಬರಿಗಳನ್ನು ಬರೆದಿದ್ದಾರೆ. ಅವುಗಳಲ್ಲಿ ಹಲವು ಕಾದಂಬರಿಗಳು ಅನೇಕ ಭಾರತೀಯ ಭಾಷೆಗಳಲ್ಲಿ ಅನುವಾದವಾಗಿವೆ. "ಧರ್ಮಶ್ರಿ" ಅವರ, ಮೊಟ್ಟ ಮೊದಲನೆಯ ಹಾಗೂ "ಆವರಣ" ಅವರ ಇತ್ತೀಚಿನ ಕಾದಂಬರಿ. ಕನ್ನಡದ ಅತ್ಯಂತ ಜನಪ್ರಿಯ ಕಾದಂಬರಿಕಾರರಲ್ಲಿ ಶ್ರೀ. ಎಸ್. ಎಲ್. ಭೈರಪ್ಪನವರು ಅಗ್ರಗಣ್ಯರು. ಸಾವಿನ ಬಗ್ಗೆ ಪರಿಕಲ್ಪನೆಯನ್ನು 'ಭಿತ್ತಿ', ಕಾದಂಬರಿಯಲ್ಲಿ ತಂದಿದ್ದಾರೆ. ಹಿರಿಯ ಸಾಹಿತಿಯಾದ ಅವರು, ಸಂಸ್ಕೃತಿ ಹಾಗೂ ಜೀವನ ಮೌಲ್ಯಗಳ ಹಿರಿಮೆಯನ್ನು ತಮ್ಮ ಕಾದಂಬರಿಗಳಲ್ಲಿ ತರುವ ಪ್ರಯತ್ನವನ್ನು ಮಾಡಿದ್ದಾರೆ.

ಪ್ರೊ. ಸಂತೆಶಿವರ ಲಿಂಗಯ್ಯ (ಎಸ್. ಎಲ್.) ಭೈರಪ್ಪನವರ ಭಾಷಣ :

ಮೈಸೂರ್ ಅಸೋಸಿಯೇಷನ್ ನ ಭವ್ಯ ಹವಾನಿಯಂತ್ರಿತ ರಂಗಮಂದಿರದಲ್ಲಿ, ಆಹ್ವಾನಿತ ಸಭಿಕರನ್ನು ಉದ್ದೇಶಿಸಿ ಮಾತನಾಡಿದ ಅವರು, ಮೊದಲು ಜೀವನ-ಮೌಲ್ಯಗಳ ಬಗ್ಗೆ ಎಲ್ಲರ ಗಮನ ಸೆಳೆದರು. ಅದರ ಆಂಗ್ಲ ಅನುವಾದ, ’ ’Value” ಅತಿ ಹತ್ತಿರದ ಪದಮಾತ್ರ. ಸಮಾನಾರ್ಥ ಅದರಲ್ಲಿ ಸಿಗುವುದಿಲ್ಲ. ಪುರುಷಾರ್ಥಗಳು ಮುಖ್ಯವಾಗುತ್ತವೆ. ಮೌಲ್ಯ ನಿರ್ಧಾರವಾಗುವ ಹಲವು ವಿಧಗಳನ್ನು ಗಮನಕ್ಕೆ ತಂದರು. ನಂತರ ಧರ್ಮ, ಅರ್ಥ, ಕಾಮ, ಮತ್ತು ಮೋಕ್ಷಗಳ ಪರಿಕಲ್ಪನೆಯನ್ನು ಸಭಿಕರಮುಂದಿಟ್ಟರು. ಮತ್ತು ಈ ಪದಗಳ ವ್ಯಾಪ್ತಿಯನ್ನೂ ಒತ್ತಿಹೇಳಿದರು. ಧರ್ಮದ ವಿವಿಧ ಪ್ರಕಾರಗಳನ್ನು, ನಮ್ಮ ವೃತ್ತಿಗೆ ಸಂಬಂಧಿಸಿದಂತೆ ಸಮೀಕರಿಸುವ ಬಗೆಯನ್ನು ಮನದಟ್ಟುಮಾಡಿದರು. ಮುಂಬೈ ಅವರಿಗೆ ಪ್ರೀತಿಯ ತಾಣ. "ಗ್ಲೋಬಲೈಸೇಶನ್" ನಮ್ಮ ಉಪಯೋಗಕ್ಕೆ ಬರುವಂತ ನಾವು ನಡೆದುಕೊಳ್ಳದೆ , ಅದಕ್ಕೆ ಬಲಿಪಶುವಾದ ಪ್ರಕರಣಗಳನ್ನು ಉದ್ಧರಿಸಿದರು. " ಎಲ್ಲವೂ ಮೌಲ್ಯಾಧಾರಿತವಾಗಿದ್ದು, ಭಾರತೀಯತೆಯ ಚೌಕಟ್ಟಿನಲ್ಲಿದ್ದರೆ, ಅದು ವಿಶ್ವಕ್ಕೇ ಮಾರ್ಗದರ್ಶಿಯಗಬಲ್ಲುದು," ಎಂದರು. ಇನ್ನೂ ಹಲವಾರು ಸಾಮಾಜಿಕ ಸಮಸ್ಯೆಗಳನ್ನು ಸಂದರ್ಭೋಚಿತವಾಗಿ ಎಲ್ಲರ ಮುಂದಿಟ್ಟರು. ಸಾಮಾಜಿಕ ಅವ್ಯವಸ್ಥೆಯನ್ನು ಕಂಡುಕೊಂಡು, ಅದಕ್ಕೆ ತಕ್ಕ ಉಪಾಯವನ್ನು ನಾವು ಈ ಬದಲಾಗುತ್ತಿರುವ ಸಮಾಜದಲ್ಲಿ ಕಂಡುಕೊಳ್ಳುವುದರ ಅನಿವಾರ್ಯತೆಯನ್ನು ಒತ್ತಿ ಹೇಳಿದರು.

ಎರಡನೆಯ ದಿನ :

೨೦ ನೆಯ ತಾರೀಖು, ಭಾನುವಾರ, ಬೆಳಿಗ್ಯೆ, ೧೧-೩೦ ಕ್ಕೆ" ಸಂವಾದ " ಕಾರ್ಯಕ್ರಮವಿತ್ತು. ಕನ್ನಡ ಹಾಗೂ ಆಂಗ್ಲಭಾಷೆಗಳಲ್ಲಿ ಸುಮಾರು ೨ ಗಂಟೆ ಸತತವಾಗಿ ನಡೆದ ಮೊದಲ ಹೊತ್ತಿನ ಕಾರ್ಯಕ್ರಮದಲ್ಲಿ, ಸಭಿಕರು, ಹಲವಾರು, ಸಂಶಯಗಳನ್ನು , ನಿವಾರಿಸಿಕೊಂಡರು. ಡಾ. ಭೈರಪ್ಪನವರು ಎಲ್ಲರ ಪ್ರಶ್ನೆಗಳಿಗೂ ಅತ್ಯಂತ ಸಮಯೋಜಿತವಾಗಿಯೂ, ಸಮರ್ಪಕವಾಗಿಯೂ ಉದಾಹರಣೆಗಳೊಂದಿಗೆ ಉತ್ತರ ಕೊಟ್ಟರು. ಸಭಾಗೃಹ ತುಂಬಿದ್ದು, ಸುಮಾರಾಗಿ ಎಲ್ಲರೂ ಸಕ್ರಿಯವಾಗಿ ಮಾತುಕತೆಯಲ್ಲಿ ಭಾಗವಹಿಸಿದರು. ಊಟದ ನಂತರ ಮಧ್ಯಾನ್ಹದಲ್ಲಿ, ಭರಪ್ಪನವರ ಕಾದಂಬರಿಯ ಮೇಲೆ ಆಧಾರಿತ, "ತಬ್ಬಲಿಯುನೀನಾದೆ ಮಗನೆ," ಚಲನಚಿತ್ರವನ್ನು ಪ್ರದರ್ಶಿಸಲಾಯಿತು. ಅದಕ್ಕೂ ಬಹಳಜನ, ಸಾಹಿತ್ಯಪ್ರಿಯರು ಆಗಮಿಸಿ, ಆನಂದಿಸಿದರು.
ಭೈರಪ್ಪನವರು, ಹಲವಾರು ಸಂಘಸಂಸ್ಥೆಗಳ ಜೊತೆಗೆ ಸಂಪರ್ಕವಿಟ್ಟುಕೊಂಡಿದ್ದಾರೆ :

೧. Ford Foundation Fellowship ನ ವತಿಯಿಂದ, " Problems of Indian Immigrants in USA " ಬಗ್ಗೆ ಸಾಕಷ್ಟು ಅಭ್ಯಾಸ ಮಾಡಿ, ಪ್ರಬಂಧವನ್ನು ಮಂಡಿಸಿದ್ದಾರೆ.

೨. " writers' Conference " ನ್ನು ಪ್ರತಿನಿಧಿಸಲು ಹಲವು ಬಾರಿ, ಉತ್ತರ ಅಮೆರಿಕ, ಯೂರೋಪ್, ಜಪಾನ್ ಹಾಗೂ ಚೈನದೇಶಗಳಲ್ಲಿ ಭಾಗವಹಿಸಿದ್ದರು.

೩. " Indian Institute of Letters ", ಹಾಗೂ "ಭಾರತೀಯ ಜ್ಞಾನಪ್ರಶಸ್ತಿ ಸಮಿತಿ " ಯಲ್ಲಿ ಸಕ್ರಿಯವಾಗಿ ಭಾಗವಹಿಸುತ್ತಿದ್ದಾರೆ.
೪. ಕರ್ನಾಟಕ ಲಿಟರರಿ ಅಕ್ಯಾಡಮಿ ಯ, ’ Executive Board Member’ ಆಗಿ, ತಮ್ಮ ಅಮೂಲ್ಯವಾದ ಯೋಗದಾನ ನೀಡುತ್ತಿದ್ದಾರೆ.

ಸನ್, ೨೦೦೭ ರ ಜನವರಿ ತಿಂಗಳಲ್ಲಿ, ಹೊರಬಂದ ಅವರ ಇತ್ತೀಚಿನ ಕಾದಂಬರಿ, "ಆವರಣ", ಮೊದಲನೆಯ ದಿನವೇ, ೩,೦೦೦ ಪ್ರತಿಗಳು ಮಾರಾಟವಾದವು. ಮತ್ತೆ ಎರಡುವಾರದಲ್ಲಿ ೭,೦೦೦ ಪ್ರತಿಗಳು ಬಿಕರಿಯಾದವು. ಇನ್ನೂ ಹಲವಾರು ಸಾವಿರ ಕಾಪಿಗಳಿಗೆ ಬೇಡಿಕೆ ಬಂದಿದೆ. ಇದು, " ಇಸ್ಲಾಮೀಯ ಭಯೋತ್ಪಾದನೆಯ ಹಿನ್ನೆಲೆ " ಯ ಸುತ್ತ ಹೆಣೆಯಲ್ಪಟ್ಟ ವೈಚಾರಿಕ, ಕಾದಂಬರಿ. ಆವರಣ, ಭಯೋತ್ಪಾದನೆಯ ಪ್ರಕರಣಗಳ ಇತ್ತೀಚಿನ ಹಾಗೂ ಚಾರಿತ್ರಿಕ ಮಗ್ಗಲುಗಳನ್ನು, ತೆರೆಯುತ್ತಾ ಸಾಗುತ್ತದೆ. ಓದುತ್ತಾಹೋದಂತೆ, ನಮ್ಮ ದೇಶದ ಚಾರಿತ್ರ್ಯಿಕ ಒಳನೋಟಗಳ ಎಳೆಗಳು ಒಂದೊಂದಾಗಿ ಬಿಡಿಸಿಕೊಳ್ಳುತ್ತಾ ಹೋಗುತ್ತವೆ. ಈ ಹೊತ್ತಗೆಯನ್ನು ಓದಿದ, ಪ್ರತಿಯೊಬ್ಬ ಭಾರತೀಯ ಓದುಗನಿಗೂ ಅತ್ಯಂತ ಸಾರ್ಥಕ ಓದಿನ ಅನುಭವ ನಿಜಕ್ಕೂ ಬರುವುದರಲ್ಲಿ ಸಂದೇಹವಿಲ್ಲ. ಪುಸ್ತಕ, ರೋಚಕವಾಗಿಯೂ ಮತ್ತು ವಾಸ್ತವ ವಿಶ್ವದ ಅನುಭವವೂ ಆಗಿದೆ. ಅಲ್ಲದೆ ಎಲ್ಲರನ್ನೂ ಮತ್ತೊಮ್ಮೆ ವೈಚಾರಿಕತೆಗೆ ಒಡ್ಡುತ್ತದೆ. ಭೈರಪ್ಪನವರು, ಹೇಳುವುದು ಇಷ್ಟು. " ನಾವು ಅದರ ನೈಜತೆ, ಹಾಗೂ ವಾಸ್ತವ ಸತ್ಯದಕಡೆ ಗಮನ ಹರಿಸಬೇಕು ; ಏಕೆಂದರೆ, ಇದು ಚರಿತ್ರೆ. ನಂತರ ಅದನ್ನು ಪುನರಾವರ್ತನೆಯಾಗದಂತೆ ಎಚ್ಚರವಹಿಸುವುದು, ಇದರ ಮೂಲ ಅನ್ನಿಸಿಕೆ. ಡಾ. ಎಸ್. ಎಲ್. ಭೈರಪ್ಪನವರು, ಬರೆದು ಪ್ರಕಟಿಸಿರುವ ಹೊತ್ತಗೆಗಳು :

೧. ಧರ್ಮಶ್ರೀ (೧೯೬೧)

೨. ದೂರ ಸರಿದರು (೧೯೬೨)

೩. ಮತದಾನ (೧೯೬೫)

೪. ವಂಶವೃಕ್ಷ (೧೯೬೫)

೫. ಜಲಪಾತ (೧೯೬೭)

೬. ನಾಯಿ ನೆರಳು (೧೯೬೮)

೭. ತಬ್ಬಲಿಯು ನೀನಾದೆ ಮಗನೆ (೧೯೬೮)

೮. ಗೃಹಭಂಗ (೧೯೭೦)

೯. ನಿರಾಕರಣ (೧೯೭೧)

೧೦. ಗ್ರಹಣ (೧೯೭೨)

೧೧. ದಾಟು (೧೯೭೩)

೧೨. ಅನ್ವೇಶಣೆ (೧೯೭೬)

೧೩. ಪರ್ವ(೧೯೭೯)

೧೪. ನೆಲೆ (೧೯೮೩)

೧೫. ಸಾಕ್ಷಿ (೧೯೮೬)

೧೬. ಅಂಚು (೧೯೯೦)

೧೭. ತಂತು (೧೯೯೩)

೧೮. ಸಾರ್ಥ (೧೯೯೮)

೧೯. ಮಂದ್ರ (೨೦೦೧)

೨೦. ಭೀಮಕಾಯ (೨೦೦೪/೨೦೦೫)

೨೧. ಆವರಣ (೨೦೦೭)

ಸತ್ಯ ಮತ್ತು ಸೌಂದರ್ಯ (೧೯೬೬)
(ಡಾಕ್ಟೊರಲ್ ಥೀಸಿಸ್) :

* ಸಾಹಿತ್ಯ ಮತ್ತು ಪ್ರತೀಕ (೧೯೬೭)

* ಕಥೆ ಮತ್ತು ಕಥಾವಸ್ತು (೧೯೬೯)

* ನಾನೇಕೆ ಬರೆಯುತ್ತೇನೆ ? (೧೯೮೦)

ಡಾ. ಭರಪ್ಪನವರ ಕಾದಂಬರಿಗಳು ಭಾರತದೇಶದ ಇತರ ಭಾಷೆಗಳಲ್ಲಿಯೂ ಸಿಗುತ್ತವೆ.

* ಧರ್ಮಶ್ರೀ : ಸಂಸ್ಕುತ, ಮರಾಠಿ

* ವಂಶವೃಕ್ಷ : ತೆಲುಗು, ಮರಾಠಿ, ಹಿಂದಿ, ಉರ್ದು, ಇಂಗ್ಲೀಷ್

* ನಾಯಿ-ನೆರಳು : ಗುಜರಾತಿ, ಹಿಂದಿ

* ತಬ್ಬಲಿಯು ನೀನಾದೆ ಮಗನೆ : ಹಿಂದಿ

* ಗೃಹಭಂಗ : ಭಾರತದ ೧೪ ಭಾಷೆಗಳಲ್ಲಿಯೂ ಲಭ್ಯ.

* ನಿರಾಕರಣ : ಹಿಂದಿ

* ದಾಟು : , ಭಾರತದ ೧೪ ಭಾಷೆಗಳಲ್ಲಿಯೂ ಲಭ್ಯ. ಹಾಗೂ, ಇಂಗ್ಲೀಷ್ ನಲ್ಲಿ.

* ಅನ್ವೆಷಣ : ಮರಾಠಿ, ಹಿಂದಿ
* ಪರ್ವ : ತೆಲುಗು, ಮರಾಠಿ, ಹಿಂದಿ, ಬೆಂಗಾಲಿ, ತಮಿಳು, ಇಂಗ್ಲೀಷ್
* ನೆಲೆ : ಹಿಂದಿ
* ಸಾಕ್ಷಿ : ಹಿಂದಿ, ಇಂಗ್ಲೀಷ್
* ಅಂಚು : ಮರಾಠಿ , ಹಿಂದಿ
* ತಂತು : ಮರಾಠಿ , ಹಿಂದಿ
* ಸಾರ್ಥ : ಸಂಸ್ಕೃತ, ಮರಾಠಿ, ಹಿಂದಿ, ಇಂಗ್ಲೀಷ್
* ನಾನೇಕೆ ಬರೆಯುತ್ತೇನೆ : ಮರಾಠಿ
* ಸತ್ಯ ಮತ್ತು ಸೌಂದರ್ಯ : ಇಂಗ್ಲೀಷ್
* ಭಿತ್ತಿ : ಮರಾಠಿ, ಹಿಂದಿ

ಎಸ್. ಎಲ್. ಭರಪ್ಪನವರ ಈ ಎರಡು ಕಾದಂಬರಿಗಳನ್ನು ಆಧಾರಿಸಿ ಚಲನ-ಚಿತ್ರಗಳು ನಿರ್ಮಾಣವಾಗಿವೆ. ಎಲ್ಲರ ಮೆಚ್ಚುಗೆಗೆ ಪಾತ್ರವಾಗಿವೆ :

* ವಂಶವೃಕ್ಷ (೧೯೭೨)
* ತಬ್ಬಲಿಯು ನೀನಾದೆ ಮಗನೆ (೧೯೭೭)
* ಮತದಾನ (೨೦೦೧)
* ನಾಯಿ-ನೆರಳು (೨೦೦೬)

ದೂರದರ್ಶನಕ್ಕಾಗಿ ಅಳವಡಿಸಿ, ಪ್ರಸಾರವಾದ ಎರಡು ಪ್ರದರ್ಶನಗಳು :

* ಗೃಹಭಂಗ
* ದಾಟು (ಹಿಂದಿ)