ಡಾ. ಯು. ಆರ್. ಅನಂತಮೂರ್ತಿಯವರ "ಋಜುವಾತು ಪುಸ್ತಕದ ಅನಾವರಣ" ಇಂದು - ಬೆಂಗಳೂರಿನಲ್ಲಿ.

ಇನ್ನೇನು ಕೆಲವೇ ನಿಮಿಷಗಳಲ್ಲಿ ಬೆಂಗಳೂರಿನ ಬಸವನಗುಡಿಯ, ಬೀ.ಪೀ. ವಾಡಿಯಾ ರಸ್ತೆಯಲ್ಲಿರುವ ಪ್ರತಿಷ್ಠಿತ Indian Institute of World Culture ನ ಸಭಾಂಗಣದಲ್ಲಿ ಡಾ. ಅನಂತಮೂರ್ತಿಯವರ "ಋಜುವಾತು ಕಾದಂಬರಿ" ಯ ಅನಾವರಣವಾಗಲಿದೆ. ಇದರ ಜೊತೆಗೆ 'ಸಂವಾದ,' ವೂ ಇದೆ. ಇದು ಸಂಪದಿಗರಿಗೆಲ್ಲಾ ಶುಭ ಸಂದೇಶ ! ಅನಂತಮೂರ್ತಿಯವರು ನಮ್ಮ ಕರ್ಣಾಟಕದ ಒಬ್ಬ ಪ್ರಭಾವಿ ಲೇಖಕರು, ಮತ್ತು ಚಿಂತಕರು - ಮೇಲಾಗಿ ಅವರೂ ಒಬ್ಬ ಶ್ರೇಷ್ಟ ಸಂಪದಿಗರು ! ಅವರ ಅಂಕಣವನ್ನು ನಾವು ಓದಿ ಅದರ ರಸಾನುಭವವನ್ನು ಮಾಡಿದ್ದೇವೆ.

ಈ ಕಾರ್ಯಕ್ರಮ ನಮ್ಮ ಕಲ್ಯಾಣನಗರಿ, ಮಾಹಿತಿತಂತ್ರಜ್ಞಾನದ ತವರೂರು, ಸಾಂಸ್ಕೃತಿಕ ಕಾರ್ಯಕ್ರಮಗಳ ಗೂಡಾದ, ಬೆಂಗಳೂರಿನಲ್ಲಿ ಆಯೋಜಿಸಲ್ಪಟ್ಟಿದೆ ; ಇಂದಿಗೂ ಈ ನಗರದ ಖ್ಯಾತಿಗೆ ಸ್ವಲ್ಪವೂ ಚ್ಯುತಿ ಬಂದಿಲ್ಲ.

ಈ ಸಂಸ್ಥೆಯನ್ನು [Indian Institute of World Culture,] ಶ್ರೀ ಬೊಮನ್ ಜೀ ಪೆಸ್ತೊನ್ ಜೀ ( ೧೮೮೧-೧೯೫೮ ) ಮತ್ತು ಅವರ ಪತ್ನಿಯವರು ೧೧, ನೇ ಆಗಸ್ಟ್, ೧೯೪೫ ರಲ್ಲೇ ಬೆಂಗಳೂರಿನ ಕೃಷ್ಣರಾವ್ ಪಾರ್ಕಿನ ಬಳಿ ಕಟ್ಟಿ ಬೆಳಸಿದ್ದರು. ನಗರದ ಎಲ್ಲಾ ವರ್ಗದ ಜನರ ಮಧ್ಯೆ ಸೌಹಾರ್ದ, ಹಾಗೂ ಪ್ರೇಮವನ್ನು ಸಂಸ್ಥಾಪಿಸುವ ಮೂಲ ಉದ್ದೇಶ್ಯದಿಂದ ಈ ಸಂಸ್ಥೆಯನ್ನು ಅನಾವರಣ ಮಾಡಲಾಗಿತ್ತು. ಇದರ ಮೂಲ ದ್ರವ್ಯವೇ ಸಾಂಸ್ಕೃತಿಕ ಕರ್ಯಕ್ರಮಗಳ ಆಯೋಜನೆ. ಹಾಗಾಗಿ ಸಂಗೀತ, ನೃತ್ಯ, ಸಂಭಾಷಣೆಗಳು, ಉಪನ್ಯಾಸಗಳು ಇಲ್ಲಿ ಪ್ರತಿವಾರವೂ ಸತತವಾಗಿ ನಡೆದುಕೊಂಡು ಬರುತ್ತಿವೆ. ನಾನಂತೂ ಈ ಸಂಸ್ಥೆಯ ಪುಸ್ತಕಾಲಯದಲ್ಲಿ ಹೆಚ್ಚು ಕಡಿಮೆ, ದಿನಕ್ಕೊಮ್ಮೆಯಾದರೂ ಬಂದು ಹೊಗುತ್ತಿದ್ದೆ. ಡಾ. ಜಯಂತ್ ವಿಷ್ಣು ನಾರ್ಲೀಕರ್ ರವರ ಭಾಷಣವನ್ನು ಸಭಾಂಗಣದ ಹೊರಗಡೆ ನಿಂತು ಆಲಿಸಿದ್ದು ಇಂದಿಗೂ ನೆನಪಿನಲ್ಲಿದೆ. ಸಭಾಂಗಣ ತುಂಬಿ-ತುಳುಕುತ್ತಿತ್ತು !

ಮೇಲಿನ ಸುಮಧುರ ಸ್ಮೃತಿಗಳೊಂದಿಗೆ "ಋಜುವಾತು ಪುಸ್ತಕದ, ಅನಾವರಣ ಕಾರ್ಯಕ್ರಮ" ದ ಪೂರ್ಣ ಯಶಸ್ಸಿಗೆ ನಮ್ಮೆಲ್ಲರ ಶುಭಹಾರೈಕೆಗಳು.

ಸಿರಿ ಕನ್ನಡಕ್ಕೆ ಜಯವಾಗಲಿ.

ವೆಂಕಟೇಶ್, ಮುಂಬೈ.
ಆದಿತ್ಯವಾರ, ಏಪ್ರಿಲ್ ೮, ೨೦೦೭