ಏನಿದು ಹೇಳಿ ???--- ಭೂಷಣ್ ಮಿಡಿಗೇಶಿ

ಇದು ಯಾವ ಸಸ್ಯದ ತುಣುಕು.

ಪ್ರತಿಕ್ರಿಯೆಗಳು

ಎಲೆಯ ರಚನೆಯು ಕೇದಿಗೆಯನ್ನು ಹೋಲುತ್ತದೆ.
ಗಿಡವನ್ನು ಗುರುತಿಸಬೇಕಾದರೆ, ಯಾವಾಗಲು ಅದರ ಹೂವಿರಬೇಕು. ಇದು ಸಸ್ಯಶಾಸ್ತ್ರದ ನಿಯಮ.
ಶಿವ ಶಪಿತ ಕೇದಿಗೆಯೆಂದು ಅನಿಸುತ್ತದೆ.

-ನಾಸೋ

ಕೇದಿಗೆ ನನ್ನ ಅಚ್ಚುಮೆಚ್ಚಿನ ಹೂವುಗಳಲ್ಲಿ ಒಂದು.

ಕೇದಿಗೆಯನ್ನು ಸಸ್ಯಶಾಸ್ತ್ರೀಯವಾಗಿ ‘ಪಂಡಾನಸ್ ಒಡೋರಾಟಿಸ್ಸಿಮಸ್’ ಎಂದು ಕರೆಯುವರು. ಇಂಗ್ಲೀಷಿನಲ್ಲಿ ಇದನ್ನು ಅಂಬ್ರೆಲ್ಲ ಟ್ರೀ ಅಥವ ಸ್ಕ್ರ್ಯೂ ಪೈನ್ ಟ್ರೀ ಎಂದು ಕರೆಯುವರು. ಏಷಿಯ ಹಾಗೂ ಆಸ್ತ್ರೇಲಿಯ ಇದರ ತವರೂರು.

ಕೇದಿಗೆ ತನ್ನ ಸುವಾಸನೆಗೆ ಹೆಸರುವಾಸಿಯಾದದ್ದು. ಈ ಗುಣವೇ ಪ್ರಭೇದ ಹೆಸರಿಗೆ ಕಾರಣ. ಕೇದಿಗೆಯಲ್ಲಿ ಹಾವು ವಾಸಿಸುತ್ತದೆ ಎನ್ನುವುದು ಒಂದು ನಂಬಿಕೆ. ಕೆ.ಎಸ್.ನ ಅವರೂ ಸಹಾ ‘ಕೇದಿಗೆಯ ಬನಗಳಲಿ ಸಂಚರಿಸದಿರು ಓ ಚೆಲುವೆ’ ಎಂದು ಬರೆದಿದ್ದಾರೆ ಎಂದು ನೆನಪು. ಹಾವಿಗೆ ಪೂರ್ಣ ಬೆಳೆದ ನಾಸಿಕಾಂಗ ಇರದ ಕಾರಣ, ಕೇದಿಗೆಯ ಸುವಾಸನೆಗಾಗಿ, ಅದರಲ್ಲಿ ವಾಸಿಸುತ್ತದೆ ಎನ್ನುವುದು ಸುಳ್ಳು. ಕೇದಿಗೆಯು ಪೊದೆ ಪೊದೆಯಾಗಿ ಇರುವುದರಿಂದ ಹಾವಿಗೆ ಅಡಗಿಕೊಳ್ಳಲು ಒಳ್ಳೆಯ ತಾಣ. ಹಾಗಾಗಿ ಕಾಕತಾಳೀಯವಾಗಿ ಕೇದಿಗೆಯ ಪೊದೆಯಲ್ಲಿ ಹಾವನ್ನು ಕಾಣಬಹುದು. ಅಷ್ಟೆ!

ಕೇದಿಗೆಯ ಗಂಡು ಹೂವು ಸುವಾಸನೆಯನ್ನು ಬೀರುತ್ತದೆ. ಈ ಹೂವನ್ನು ಭಟ್ಟಿಯಿಳಿಸಿ ಕೇದಿಗೆಯ ನೀರನ್ನು ತಯಾರಿಸಿ, ಅದನ್ನು ಪನ್ನೀರು ದಾನಿಯಲ್ಲಿ ಹಾಕಿ ಮದುವೆ ಮನೆಯಲ್ಲಿ ಅತಿಥಿಗಳ ಮೇಲೆ ಚಿಮುಕಿಸುವುದುಂಟು. ಇದರಲ್ಲಿರುವ ಟರ್ಪೀನುಗಳು ಹಾಗೂ ಡೈಪೆಂಟೀನುಗಳು ಸುವಾಸನೆಗೆ ಕಾರಣವಂತೆ!

ಕೇದಿಗೆಯ ಎಸಳು ಹಾಗೂ ಪರಾಗಗಳನ್ನು ರೇಷ್ಮೆ ಸೀರೆಯ ನಡುವೆ ಇಡುವುದುಂಟು. ಇದರಿಂದ ಎರಡು ಲಾಭ. ಕೀಟಗಳು ಬರುವುದಿಲ್ಲ. ಸೀರೆ ಸುವಾಸನಾ ಮಯವಾಗಿರುತ್ತದೆ. ನಾನು ಈ ಹೂವಿನ ಎಸಳನ್ನು (ವಾಸ್ತವದಲ್ಲಿ ಇದು ಬ್ರಾಕ್ಟ್) ನನ್ನ ಪುಸ್ತಕದ ಹಾಳೆಗಳ ನಡುವೆ ಇಟ್ಟುಕೊಳ್ಳುತ್ತಿದ್ದೆ.

ಕೇದಿಗೆಯನ್ನು ಹೆಣ್ಣು ಮಕ್ಕಳು ಮುಡಿಯುತ್ತಾರೆ. ದೇವರಿಗೆ ಈ ಕೇದಿಗೆಯನ್ನು ಏರಿಸುವುದಿಲ್ಲ. ಇದಕ್ಕೆ ಒಂದು ಕಥೆಯಿದೆ. ವಿಷ್ಣು ಹಾಗೂ ಬ್ರಹ್ಮರ ನಡುವೆ ಯಾರು ಶ್ರೇಷ್ಠ ಎಂಬ ಪ್ರಶ್ನೆ ಉದ್ಭವಿಸಿತು. ಆಗ ಶಿವನು ಭೂಮ್ಯಾಕಾಶಗಳನ್ನು ವ್ಯಾಪಿಸಿ ಜ್ವಲಿಸುವ ಅಗ್ನಿ ಸ್ಥಂಭವಾದನು. ಈ ಸ್ಥಂಭದ ಬುಡವನ್ನು ತಿಳಿಯಲು ವಿಷ್ಣುವು ವರಾಹವಾಗಿ ಭೂಮಿಯನ್ನು ಅಗೆಯಲು ಆರಂಭಿಸಿದನು. ಬ್ರಹ್ಮನು ಹಂಸವಾಹನನಾಗಿ ಈ ಸ್ಥಂಭದ ತುದಿಯನ್ನು ತಿಳಿಯಲು ಮೇಲೆ ಹಾರಿದನು. ಇಬ್ಬರೂ ಎಷ್ಟು ಪ್ರಯತ್ನಿಸಿದರೂ ಸ್ಥಂಭದ ಆದಿ ಅಂತ್ಯಗಳನ್ನು ತಿಳಿಯಲು ಆಗಲಿಲ್ಲ.

ಆಗ, ಶಿವನ ತಲೆಯ ಮೇಲಿದ್ದ ಕೇದಿಗೆ ಹೂವು ಜಾರಿ ಕೆಳಗೆ ಬೀಳುತ್ತಿರುತ್ತದೆ. ಅದನ್ನು ನೋಡಿ ಬ್ರಹ್ಮ ಒಮ್ದು ತಂತ್ರ ಹೂಡುತ್ತಾನೆ. ಸ್ಥಂಭದ ತುದಿಯನ್ನು ತಾನು ನೋಡಿರುವುದಾಗಿ ವಿಷ್ಣುವಿನ ಬಳಿ ಸಾಕ್ಷ್ಯ ನುಡಿಯಬೇಕೆಂದು ಕೇದಿಗೆಯನ್ನು ಒಪ್ಪಿಸುತ್ತಾನೆ. ಕೇದಿಗೆಯು ಹಾಗೆಯೇ ಸುಳ್ಳನ್ನು ಹೇಳುತ್ತದೆ. ಇದನ್ನು ಕಂಡು ಕುಪಿತನಾದ ಶಿವನು ಕೇದಿಗೆಯನ್ನು ಯಾರೂ ಪೂಜೆಗೆ ಬಳಸಬಾರದು ಎಂದು ಶಾಪ ನೀಡುತ್ತಾನೆ ಎಂಬಲ್ಲಿಗೆ ಭೂಷಣ ಮಿಡಿಗೇಶಿಯವರಿಂದ ಆರಂಭವಾದ ಈ ಕೇದಿಗೆ ಪುರಾಣವು ಸಮಾಪ್ತಿಯಾಗುತ್ತದೆ. ಈ ಕಥೆಯನ್ನು ಓದಿದವರಿಗೂ, ಕೇಳಿದವರಿಗೂ ಸಕಲ ಪುಣ್ಯ ಲಭಿಸುತ್ತದೆ (ಎನ್ನುವುದಕ್ಕೆ ನಾನು ಖಾತರಿ ನೀಡುವುದಿಲ್ಲ :)

-ನಾಸೋ

ಇನ್ನೆರಡು ಅಂಶಗಳನ್ನು ಮರೆತಿದ್ದೆ!

೧. ಕೇದಿಗೆಯ ಹಣ್ಣುಗಳನ್ನು ತಿನ್ನುತ್ತಾರಂತೆ! ನಾನು ತಿಂದಿಲ್ಲ. ಭೂಷಣ್ ಅವರು ಏನಾದರೊ ತಿಂದಿದ್ದಾರ? ರುಚಿ ಹೇಗಿರುತ್ತದೆ?
೨. ಕೇದಿಗೆಯ ಉದ್ದನೆಯ ಎಲೆಗಳಿಂದ ನಾರನ್ನು ತೆಗೆದು ಸೊಗಸಾದ ಹಗ್ಗವನ್ನು ಹೊಸೆಯುತ್ತಾರೆ. ನನಗೆ ತಿಳಿದ ಹಾಗೆ ಇದು ಅತ್ಯಂತ ಶಕ್ತಿಶಾಲಿ ಹಗ್ಗವಾಗಿರುತ್ತದೆ.

-ನಾಸೋ

ಸಾರ್ ಮಲೆನಾಡಲ್ಲಿ , ದ.ಕ. ಉಡುಪಿ ಜಿಲ್ಲೆಗಳಲ್ಲಿ ಇದರ ಎಲೆಯ ಮುಳ್ಳೆಲ್ಲಾ ತೆಗೆದು, ಸುಟ್ಟು, ಲೋಟದಾಕಾರದಲ್ಲಿ ಸುತ್ತಿ, ಇಡ್ಲಿ ಹಿಟ್ಟು ಹಾಕಿ, ಕೊಟ್ಟೆ ಕಡ್ಬು ಮಾಡ್ತಾರೆ. ಏನ್ ರುಚಿ ಅಂತೀರ - ನನಗೆ ಗೊತ್ತಿರೋ ಉತ್ತಮ ಉಪಯೋಗ ಇದು

ಈ ಕೇದಿಗೆ ಹೂವನ್ನ (ಚಿಗುರೆಲೆ?) ನಾಗಾರಾಧನೆಯಲ್ಲಿ ಉಪಯೋಗಿಸ್ತಾರೆ

ಕೊಟ್ಟೆ ಕಡ್ಬು ...ಆಹಾ ..!! ಏನೆಲ್ಲಾ ಗ್ನಾಪಿಸ್ತೀರಲ್ರಿ :)
ಕೇದಿಗೆ ನಾರಿ೦ದ ಹಗ್ಗ ಹೊಸಿತಾರೋ ಇಲ್ವೋ ಗೊತ್ತಿಲ್ಲ, ಆದ್ರೆ ನಾವು ಹೂ ಕಟ್ಟೋಕೆ ಉಪಯೋಗಿಸ್ತಾ ಇದ್ವಿ.
ಈ ಎಲೆಗಳು ಸ್ವಲ್ಪ ಹಳದಿ ಇರ್ತಿತ್ತು (ಇದನ್ನ ಚಿಗುರು ಅಂತಾರೋ, ಹಣ್ಣೆಲೆ ಅಂತಾರೋ ಗೊತ್ತಿಲ್ಲ) ಆಗ ಅದರ ಪರಿಮಳಕ್ಕಾಗಿ ಮುಡ್ಕೋಳೋಕೆ ಜಗಳ ಆಡ್ತಾ ಇದ್ವಿ. ಆದರೆ ಅರ್ಧ ಗ೦ಟೆಗಿ೦ತ ಜಾಸ್ತಿ ತಲೆನಲ್ಲಿ ಇರ್ತ ಇರ್ಲಿಲ್ಲ. ಸುವಾಸನೆಗೆ ತಲೆನೋವು ಬರೋದು :)

>>ಕೊಟ್ಟೆ ಕಡ್ಬು ...ಆಹಾ ..!! ಏನೆಲ್ಲಾ ಗ್ನಾಪಿಸ್ತೀರಲ್ರಿ
ಮೊನ್ನೆ ಅಷ್ಟೆ ಊರಲ್ಲಿ ತಿನ್ಕೊಂಡ್ ಬಂದೆ, ಸೂಪರ್ರಾಗಿತ್ತು, ಫ್ರೆಷ್ ತೆಂಗಿನೆಣ್ಣೆ, ತೆಂಗಿನ ಕಾಯಿ ಗೊಜ್ಜು.. ಏನ್ ಕಾಂಬಿನೇಶನ್!
>>ಆಗ ಅದರ ಪರಿಮಳಕ್ಕಾಗಿ ಮುಡ್ಕೋಳೋಕೆ ಜಗಳ ಆಡ್ತಾ ಇದ್ವಿ.
ಚಿಗುರಿರ್ಬೇಕು,, ನನ್ನ ಇಬ್ರು ಅಕ್ಕಂದಿರೂ ಅಷ್ಟೆ :)

>>ಸುವಾಸನೆಗೆ ತಲೆನೋವು ಬರೋದು
ಹುಂ, ಕೆಂಡಸಂಪಿಗೆ ತರಾನೇ

ಕೆಂಡ ಸಂಪಿಗೆಗಿಂತಲೂ ಕೇದಿಗೆಯ ವಾಸನೆ ತೀಕ್ಷ್ಣ ಹಾಗೂ ಹೆಚ್ಚು ಕಾಲವಿರುತ್ತದೆ.

ಕೊಟ್ಟೆ ಕಡುಬಿನ ಬಗ್ಗೆ ಕೇಳಿದ್ದೇನೆ. ತಿಂದಿಲ್ಲ. ತುಂಬಾ ಚೆನ್ನಾಗಿರುತ್ತಾ?? :)

-ನಾಸೋ

<<ಮೊನ್ನೆ ಅಷ್ಟೆ ಊರಲ್ಲಿ ತಿನ್ಕೊಂಡ್ ಬಂದೆ, ಸೂಪರ್ರಾಗಿತ್ತು, ಫ್ರೆಷ್ ತೆಂಗಿನೆಣ್ಣೆ, ತೆಂಗಿನ ಕಾಯಿ ಗೊಜ್ಜು.. ಏನ್ ಕಾಂಬಿನೇಶನ್!>>
Deep fried ಸಂಡಿಗೆ ಮೆಣ್ಸು ಸೇರ್ಸ್ಕಣಿ :)