ಒತ್ತಕ್ಷರಗಳು ಮತ್ತು ಸಂಯುಕ್ತಾಕ್ಷರಗಳು

3

ಒತ್ತಕ್ಷರಗಳು ಬೇಱೆ. ಸಂಯುಕ್ತಾಕ್ಷರಗಳು ಬೇಱೆ. ಒತ್ತಕ್ಷರಗಳೆಂದರೆ ಒಂದೇ ವ್ಯಂಜನ ಒತ್ತಲ್ಪಟ್ಟು ಉಚ್ಚರಿಸಲ್ಪಡುವುದು. ಉದಾ: ಕ್ಕ, ಚ್ಚ, ಟ್ಟ, ತ್ತ, ನ್ನ ಇತ್ಯಾದಿ. ಆದರೆ ಸಂಯುಕ್ತಾಕ್ಷರಗಳೆಂದರೆ ಕ್ಷ, ಕ್ಲ ಇತ್ಯಾದಿ ವಿಜಾತೀಯ ವ್ಯಂಜನಗಳು ಸೇರಿ ಆಗುವ ಅಕ್ಷರಗಳು. ಕನ್ನಡವನ್ನು ಚೆನ್ನಾಗಿ ಗಮನಿಸಿದರೆ ಸಂಯುಕ್ತಾಕ್ಷರಗಳು ಸಂಸ್ಕೃತಕ್ಕಿಂತ ಕಡಿಮೆ. ಪೂರ್ವದ ವ್ಯಂಜನ ನ್‍, ಣ್‍, ಯ್‍, ರ್‍, ಲ್‍, ಳ್‍, ೞ್‍ ಹಾಗೂ ಕೆಲವು ವೇಳೆ ಱ್‍ ಇದ್ದಾಗ ಮಾತ್ರ ಸಂಯುಕ್ತಾಕ್ಷರಗಳನ್ನು ಮಾಡಬಹುದು. ಇನ್ನೊಂದು ವಿಶೇಷವೆಂದರೆ ’ಱ್’ ನ ಉಚ್ಚಾರ ದಂತಮೂಲೀಯ ಕಂಪಿತವಾಗಿರುವುದರಿಂದ ಹೆಚ್ಚಾಗಿ ಹೞಗನ್ನಡ ಹಾಗೂ ಹೊಸಗನ್ನಡದಲ್ಲಿ ’ಱ್ಱ್’ ನಿಜವಾಗಿ ’ತ್ತ್’ ಆಗುತ್ತದೆ. ಗಮನಿಸಿ ತಮಿೞಿನ ಮಱ್ಱುಂ ಕನ್ನಡದಲ್ಲಿ ಮತ್ತು, ’ನೆಱ್ಱಿ ’ ಕನ್ನಡದಲ್ಲಿ ’ನೆತ್ತಿ’ ಇತ್ಯಾದಿ. ಉದಾಹರಣೆಗೆ, ’ಜಾಣ್ಮೆ’, ’ಮೇಲ್ಮೆ’ ಇತ್ಯಾದಿ ಕನ್ನಡದ ನಿಯಮಿತ ಸಂಯುಕ್ತಾಕ್ಷರಗಳು ದೊರೆಯುತ್ತವೆ. ಸಂಸ್ಕೃತ ಬಿಟ್ಟರೆ ಇನ್ನಾವ ಭಾರತೀಯ ಭಾಷೆಗಳಲ್ಲಿ ವಿಸ್ತಾರವಾದ ಸಂಯುಕ್ತಾಕ್ಷರಗಳ ಸಂಯೋಜನೆ (Combination) ಕಾಣುವುದಿಲ್ಲ.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

’ಕ’ ಯಿಂದ ’ಮ’ ವರೆಗಿನ ಅಕ್ಷರಗಳು ಸ್ಪರ್ಷಗಳು. ಅಂದರೆ ಇಲ್ಲಿ ಉಚ್ಚರಿಸುವಾಗ ಉಸಿರು ಸಂಪೂರ್ಣವಾಗಿ ತಡೆಯಲ್ಪಡುತ್ತದೆ. ಹಾಗಾಗಿ ವಿಜಾತೀಯ ಸ್ವರಗಳು ಮುಂದೆ ಬಂದಾಗ ಓದಿಲ್ಲದ ಜನಗಳಿಗೆ ಉಚ್ಚರಿಸುವುದು ಕಷ್ಟ. ಹಾಗಾಗಿ ಮಧ್ಯದಲ್ಲಿ ’ಅ’, ’ಇ’ ’ಉ’ ಇತ್ಯಾದಿ ಸ್ವರಗಳನ್ನು ಸೇರಿಸಿಕೊಂಡೇ ಕನ್ನಡ, ತಮಿೞರು ಅಷ್ಟೆ ಏಕೆ ತೆಲುಗರಿಗೂ ಕಷ್ಟ. ಈಗ ’ಉತ್ಸಾಹ’ ಎಂಬ ಪದವನ್ನೇ ತೆಗೆದುಕೊಳ್ಳಿ. ಹೆಚ್ಚಾಗಿ ಜನರು ’ಉಸ್ತಾಹ’ ಎಂದೇ ಉಚ್ಚರಿಸುತ್ತಾರೆ. ಇದಕ್ಕೆ ಕಾರಣ ಮೊದಲಲ್ಲಿರುವ ’ತ’ ಕಾರ ಸಂಪೂರ್ಣವಾಗಿ ಉಸಿರನ್ನು ಕಟ್ಟಿ ಹಾಕಿಬಿಡುತ್ತದೆ. ಹಾಗಾಗಿ ’ತ್’ ಮತ್ತು ’ಸ್’ ಪಲ್ಲಟಿಸಿದಾಗ ’ಸ್’ ಸ್ವಲ್ಪಮಟ್ಟಿಗೆ ಉಸಿರನ್ನು ಬಿಡುವುದರಿಂದ ’ಸ್ತ’ ಎಂದು ಜನ ಸ್ವಲ್ಪ ಸುಲಭವಾಗಿ ಉಚ್ಚರಿಸುತ್ತಾರೆ. ಗಮನಿಸಿ ’ಶ, ಷ, ಸ ಹ’ ಗಳು ಊಷ್ಮ ವರ್ಣಗಳು. ಹಾವು ಬುಸುಗುತ್ತಿದಾಗ (hissing) ಸ್ವಲ್ಪ ಮಟ್ಟಿನ ಉಸಿರು ಹೊಱಗೆ ಬರುವುದರಿಂದ ಜನಕ್ಕೆ ’ಉತ್ಸಾಹ’ಕ್ಕಿಂತ ’ಉಸ್ತಾಹ’ ದಲ್ಲೆ ಹೆಚ್ಚು ಉತ್ಸಾಹ.

ಮಹೇಶ್‍ರವರು ಸರಿಯಾದ ಉದಾಹರಣೆಗಳನ್ನು ಕನ್ನಡದಲ್ಲಿ ಕೊಟ್ಟಿದ್ದಾರೆ. ಸುತ್ಸು, ಚುಚ್ಸು ಇತ್ಯಾದಿ. ಇದನ್ನು ತೆನ್ನುಡಿಗರಿಗೆ ಉಚ್ಚರಿಸಲು ಕಷ್ಟ.

ಸಂಯುಕ್ತಾಕ್ಷರಗಳನ್ನೆ ಕುಱಿತು ಬರೆಯುತ್ತಿದ್ದೇನೆ. ಹೞಗನ್ನಡದಲ್ಲಿ ’ಹ’ ಇಲ್ಲದಿದ್ದರೂ ಹೊಸಗನ್ನಡದಲ್ಲಿ ಹೞಗನ್ನಡದ ’ಪ’ ಕಾರಗಳೆಲ್ಲ ’ಹ’ ಕಾರವಾಗಿವೆ. ಕೆಲವು ಕಡೆ ಹೞೆಯ ’ಪ’ ಕೂಡ ಉಳಿದಿದೆ. ಉದಾಹರಣೆ ಪುಡಿ=ಹುಡಿ, ಪೀಚು=ಹೀಚು. ಕೆಲವು ಕಡೆ ಪಕಾರ ಹಾಗೆ ಉಳಿದಿದೆ. ಪಡು, ಪಾಡು, ಪಸೆ ಇತ್ಯಾದಿ. ವಿಜಾತೀಯ ವ್ಯಂಜನಗಳು ’ಕ’ ದಿಂದ ’ಮ’ ವರೆಗೆ ಸಂಯುಕ್ತಾಕ್ಷರ ಮಾಡಿ ಹೇೞುವುದು ತೆನ್ನುಡಿಗರಿಗೆ ಕಷ್ಟ ಅದಕ್ಕೆ ಪ್ರಸಂಗ->ಪರಸಂಗ, ಪ್ರಪಂಚ->ಪರಪಂಚ ಆಗುವುದು. ವಿಜಾತೀಯ ಸಂಯುಕ್ತಾಕ್ಷರಗಳನ್ನುಳ್ಳ ಶಬ್ದಗಳೇ ತೆನ್ನುಡಿಗಳಲ್ಲೆಲ್ಲೂ ಕಾಣಸಿಗದು.

"...ವ್ಯಂಜನಗಳು ’ಕ’ ದಿಂದ ’ಮ’ ವರೆಗೆ ಸಂಯುಕ್ತಾಕ್ಷರ ಮಾಡಿ ಹೇೞುವುದು ತೆನ್ನುಡಿಗರಿಗೆ ಕಷ್ಟ .."
ಇದು ಸರಿ ಮತ್ತು ತಪ್ಪು ಎರಡೂ,

ನಮಗೆ 'ಬ್ಯಾಡ', 'ಬ್ಯಾಟ'(ಬ್ಯಾಟರಾಯನಪುರ), ದ್ಯಾವಪ್ಪ ಇವು ಯಾವುದು ಉಲಿಯುವುದಕ್ಕೆ ಎಡರಾಗೇ ಇಲ್ಲ. ಆದರೆ ನೀವು ಹೇಳ್ದಂಗೆ
ಪ್ರಪಂಚ, ಪ್ರಸಂಗ ಉಲಿಯಕ್ಕೆ ನಮ್ಗೆ ಆಗಲ್ಲ. ಪರ್ ಪಂಚ, ಪರ್ ಸಂಗ ಸರಿ

"...ಹೞಗನ್ನಡದಲ್ಲಿ ’ಹ’ ಇಲ್ಲದಿದ್ದರೂ ಹೊಸಗನ್ನಡದಲ್ಲಿ ..."
ಇದರ ಮೇಲೆ ಬೆಳಕು ಚೆಲ್ಲಬೇಕೆಂದು ಬಹಳ ದಿನಗಳಿಂದ ಉಂಕಿಸುತ್ತಿದ್ದೆ.
ಕ.ರಾ.ಮಾ ದ ಮೊದಲನೆ ಪರಿಚ್ಚೇದದಲ್ಲಿ ೪೯ನೇ ಪದ್ಯ ಹೀಗಿದೆ
"ಪೊಡವಿಪತಿ ಗೊರವನೆನೆ ಪೇ
ೞ್ಪಡೆಯದುವದೆಕರಿಸಿ ಕಬ್ಬಿಗರ್ದೂಱೆನೆಯುಂ
ಹಡುವಸುಮಱೆಸೆಟ್ಟಿಸು ಗೆಂ
ಮುಡಿಯೊಳಮಾರ್ಗೆಂದು ನುಡಿವ ಪೞಗನ್ನಡಮಂ (?)"

'ಪೊಲಗೆಡಿಸಿದ' ಹೞಗನ್ನಡಕ್ಕೆ ಈ ಪದ್ಯ ಮಾದರಿ. ಮಾರ್ಗಕಾರನಿಗೆ ಅರ್ತವಾಗದ ಈ 'ಕನ್ನಡ' ನಮಗೆ ಹೇಗೆ ಅರ್ತವಾಗುತ್ತೆ?
'ಹಡುವಸುಮಱೆಸೆಟ್ಟಿಸು..' ಇಲ್ಲಿನ 'ಹ' ಕಾರದ ಪ್ರಯೋಗ ಗಮನಿಸಬೇಕಾದುದು.
೧. ಕ.ರಾ.ಮಾ ಕ್ಕೂ ಮೊದಲೆ 'ಹ' ಕಾರವಿತ್ತೆ ? ಅತ್ವ ಪ ಕಾರದಿಂದ 'ಹ'ಕಾರ ಮಾರ್ಪು ಆಗಲೆ ಸುರುವಾಗಿತ್ತೆ?
೨. ಅತ್ವ ಇದು ಬರೀ ಆಗಿನ ಕಾಲದಲ್ಲಿ ದೋಸವಾಗಿತ್ತೆ?

ಇದರ ಬಗ್ಗೆ ಬೆಳಕು ಚೆಲ್ಲಿ :)
--
ಕನ್ನಡಕ್ಕೆ ಬೇಕು ಕನ್ನಡದೇ ಸೊಬಗು,ಸೊಗಡು

ಈ ಬ್ಯಾಡ, ಬ್ಯಾಟರಾಯ ಇಲ್ಲೆಲ್ಲ ಬ್ಯಾನೇ ಇದೆಯೋ ಅಥವಾ ಬ್ಯಾ ಮತ್ತು ಬೇ ಗಳ ನಡುವಿನ ಸ್ವರವೊಂದನ್ನು ಸೂಚಿಸಲಾಗದ ಸ್ಥಿತಿ ನಮಗಿದೆಯೋ ನನಗೆ ಗೊತ್ತಿಲ್ಲ. ಹಾಗೆಯೇ ಮ್ವಾರೆ, ಕ್ವಾಪ ಎಂಬಲ್ಲಿ ಮೋ ಮ್ವಾ ಕೋ ಕ್ವಾ ನಡುವಿನ ಸ್ವರವಿದೆಯೊ ತಿಳಿಯುತ್ತಿಲ್ಲ. ಏಕೆಂದರೆ ಈ ಮೋರೆ ಉತ್ತರದವರು ಮೋರಿ=ಮುಖ (ಎಣ್ಣೆಗೆ ಎಣ್ಣಿ ಎನ್ನುವಂತೆ) ಮಾರಿ ಮೇಲೆ ಹೊಡೆದ್‍ಹಾಂಗ ಹೇಳ್ದ (ಹೇೞ್ದ) ಅಂತ ಹೇೞುತ್ತಾರೋ ನನಗೆ ಗೊತ್ತಿಲ್ಲ. ನನ್ನ ಪ್ರಕಾರ ಇಲ್ಲಿ ನಮಗೆ ಸೂಚಿಸಲಾಗದ ಸ್ವರವೊಂದಿದೆಯೆಂದಭಿಪ್ರಾಯ (ಇಂಗ್ಲಿಷಿನ am ಹೇಗೆ ಕನ್ನಡದಲ್ಲಿ ಸೂಚಿಸುತ್ತೀರಿ ಆಂ ಎಂತಲೋ ಏಂ ಎಂತಲೋ ಅದು ಖಂಡಿತ ಯಾಂ ಅಲ್ಲ).

ಪಕಾರ ಆಗಲೆ ಹಕಾರವಾಗಲು ಪ್ರಾರಂಭಿಸಿತ್ತು. ಆಡುಭಾಷೆಯಲ್ಲಿ ಪ್ರಾರಂಭವಾಗಿತ್ತೇನೋ. ಈಗಲೂ ಪಕಾರ ಹಕಾರ ಎರಡೂ ಕೆಲವು ಶಬ್ದಗಳಲ್ಲಿ ಇವೆ. ಉದಾಹರಣೆಗೆ ಪುಡಿ<->ಹುಡಿ, ಪೀಚು<->ಹೀಚು ಪಿಳ್ಳೆ<->ಹಿಳ್ಳೆ ಇನ್ನೂ ಇರಬಹುದು. ಇದಱ ಸೂಚನೆ ಕವಿರಾಜಮಾರ್ಗದಲ್ಲಿ ಸಿಗುತ್ತದೆ.

ಕವಿರಾಜಮಾರ್ಗಕ್ಕೂ ಮುಂಚೆಯೆ ಪಕಾರ‌ ಹಕಾರವಾಗುತ್ತಿತ್ತು. ಕವಿರಾಜಮಾರ್ಗದಲ್ಲಿ ಒಂದು ಪದ್ಯವಿದೆ. ಈಗ‌ ಸಿಗುತ್ತಿಲ್ಲ‌. ಸಿಕ್ಕಾಗ‌ ಉದಾಹರಿಸುತ್ತೇನೆ.

ಆದರೆ ಈ ಸುತ್ಸು, ಬದ್ಕೋ ಇಲ್ಲೆಲ್ಲ ಕನ್ನಡಿಗರು ನಿಜಕ್ಕೂ ಸಂಯುಕ್ತಾಕ್ಷರವನ್ನು ಸರಿಯಾಗಿ ಉಚ್ಚರಿಸುತ್ತಾರೋ ಗೊತ್ತಿಲ್ಲ. ನನಗಂತೂ ಸುತ್ತಿಸು, ಬದುಕೋ ಎಂದೇ ಉಚ್ಚರಿಸುತ್ತಾರೆಂದೆನಿಸುತ್ತದೆ. ಈ ಮಧ್ಯದಲ್ಲಿ ಬೞಕೆಯಾಗುವ ’ಇ’ ಹಾಗೂ ’ಉ’ ತೀರಾ ಲಘುವಾಗಿರುವುದಱಿಂದ ನಮಗೆ ಸುತ್ಸು, ಬದ್ಕೋ ಎಂದು ಕೇಳುತ್ತದೆ. ಹಾಗಲ್ಲದೆ ಕಡ್ಲೆ, ಸತ್ಳು ಇತ್ಯಾದಿಗಳನ್ನು ನಾವು ನಿಜವಾಗಿ ಕಡ್ಳೆ, ಸತ್ಲು ಎಂದೇ ಉಚ್ಚರಿಸುತ್ತೇವೆ. ಇದಕ್ಕೆ ಕಾರಣ ಮೂರ್ಧನ್ಯವಾದ ’ಡ್’ಯಿಂದ ’ಲ್’ ಕ್ಕೆ ನಾಲಿಗೆ ಮಧ್ಯದ್ದಲ್ಲಿ ಸ್ವರವನ್ನೆ ಬೞಸದೆ ಕೆೞಗಿಳಿಯಲಾರದು. ಹಾಗೆಯೇ ’ಸತ್ಲು’ ಎನ್ನುವಾಗ ಮಧ್ಯದಲ್ಲಿ ಸ್ವರ ಸೇರಿಸದೆ ’ಳ್’ ಎನ್ನಲು ನಾಲಿಗೆ ಮೇಲೇಳಲಾರದು. ಇದಕ್ಕೆ ಕಾರಣ ’ಡ್’ ಮತ್ತು ’ತ್’ ಸಂಪೂರ್ಣವಾಗಿ ಸ್ಪೃಷ್ಟಗಳಾಗಿದ್ದು ಮಧ್ಯದಲ್ಲಿ ಸ್ವರ ಸೇರಿಸದ ಹೊಱತು ಉಸಿರು ಸಂಪೂರ್ಣವಾಗಿ ತಡೆಯಲ್ಪಡುತ್ತದೆ. ಸತ್ಲು ಇದು ಕನ್ನಡದ ನಿಜವಾದ ಭಾಷಾಸ್ವರೂಪದಿಂದ ಭಿನ್ನವಾಗಿದೆ. ಕಾರಣ ಇಲ್ಲಿ ಸ್ತ್ರೀಲಿಂಗಸೂಚಕವಾದ ’ಳ್’ ಇರಬೇಕು.

ಧ್ವನಿ ವ್ಯ್ತತ್ಯಾಸವಿದೆ. ಹಾಗಾದಾಗ ಸಾಮಾನ್ಯ ನಿಯಮಕ್ಕೆ ವಿರುದ್ಧವಾಗುತ್ತದೆ. ಸಾಮಾನ್ಯ ನಿಯಮವಿರದಿದ್ದರೆ ಭಾಷೆ ಹೇಗೆಹೇಗೋ ಹರಿಯುವ ನೀರಿನಂತಾಗಿ ಕಡೆಗೆ ಕೇವಲ ಆಡುಭಾಷೆಗೆ ಸೀಮಿತವಾಗಿ ಭಾಷೆ ಆೞಿದುಹೋಗಬಹುದು. ಜನಸಾಮಾನ್ಯರು ಭಾಷೆ ಉೞಿಸುತ್ತಾರೆ. ಓದಿದ ಹಾಗೂ ಬರೆಯುವ ನಾವು ನೀವು ಭಾಷೆ ಉೞಿಸಬೇಕು, ಬೆಳೆಸಬೇಕು. ಅದಕ್ಕೆ ನಾನು ಹೞೆಯ ಅಕ್ಷರಗಳನ್ನು ಹೇಗಿರಬೇಕೋ ಹಾಗೆ ಬೞಸುತ್ತಿರುವುದು. ನಾವು ಹೞೆಯದನ್ನು ಮಱೆಯಬಾರದು ಸಂಪೂರ್‍ಣ ತೊಱೆಯಬಾರದು.

ಸಾಮಿ ಕನ್ನಡಕಂದರೆ,

"...ಕಾರಣ ಇಲ್ಲಿ ಸ್ತ್ರೀಲಿಂಗಸೂಚಕವಾದ ’ಳ್’ ಇರಬೇಕು...".

ಈ ಕಟ್ಟಳೆಯನ್ನು ಮುರಿಯುವ ಆಡುನುಡಿ ನಮ್ಮಲ್ಲಿದೆ.

ನಮ್ ಕಡೆ (ಮಂಡಿಯ, ಚಾ.ನಗರದ ಕೆಲವು ಬಾಗಗಳು) 'ಅವ' ಅಂದ್ರೆ ಅವಳು ಅಂತಾನೆ. ಇದಕ್ಕೇನಂತಿರಿ. ಹಾಗೆಯೆ, ಅಂವ = ಅವನು ಅಂತ

ಮಾದರಿ:
೧. ತಂಗ(ತಂಗಮ್ಮ) ತವ್ರಿಗೆ ಬಂದ = ತಂಗಿ ತವರಿಗೆ ಬಂದಳು.
೨. ಅವ ಬಾವಿಯಿಂದ ನೀರ್ ಸೇದಿಕೊಂಡು ಬಂದ = ಅವಳು ಬಾವಿಯಿಂದ ನೀರನ್ನು ಸೇದಿಕೊಂಡು ಬಂದಳು.

ಹಾಗೆಯೆ,
೨. ಅಂವ ವೊಲಕ್ಕೆ ವಾದ = ಅವನು ಹೊಲಕ್ಕೆ ಹೋದ(ನು).
೩. ಬಲ, ಮಂಡಿಯಕ್ಕೆ ಓಮ/ಓಗುಮ = ಬಾರೊ, ಮಂಡ್ಯಕ್ಕೆ ಹೋಗೋಣ

ತಿರುಳು: ಎಲ್ಲ ಕಡೆ ಹೆಣ್ ಸೂಚಿಸಲು 'ಳ್' ಇರಲೇಬೇಕಂತ ನಿಕ್ಕುವ ಕಟ್ಟಳೆಯಿಲ್ಲ.
--
ಕನ್ನಡಕ್ಕೆ ಬೇಕು ಕನ್ನಡದೇ ಸೊಬಗು,ಸೊಗಡು

ಬಱೆ ಅಲ್ಲೇ ಯಾಕೆ? ಕೊಡಗಿಗೆ ಬನ್ನಿ. ಅಲ್ಲೂ ಕೂಡ ಬೆರಳ್‍ಗೆ ಬೆರ ಅನ್ನುತ್ತಾರೆ. ಅವಂ=ಅವನು ಅವ=ಅವಳು. ಪುಲ್ಲಿಂಗದಲ್ಲಿ ಮೂಗಿನಲ್ಲಿ ಉಚ್ಚರಿಸುತ್ತಾರೆ (ಅನುಸ್ವಾರ) ಇಲ್ಲದೆ ಅವ ಅಂದರೆ ಅವಳ್=ಅವಳು

ಈ ರೀತಿಯ ಉಚ್ಚಾರ ಕನ್ನಡನಾಡಿನಲ್ಲಿರುವ ಇನ್ನೂ ಕೆಲವು ಉಪಭಾಷೆಗಳಲ್ಲೂ ಇದೆ.

ಅವೊ (ವೊ ಅನ್ನುವುದು ಅನುನಾಸಿಕವಾಗಿ ಬರುತ್ತೆ) - ( ಮೂಲರೂಪ ಅವನ್ ಆಗಿದ್ದಬಹುದು) - ಅವನು
ಅವೆ - ಅವಳು ( ಇಲ್ಲಿ ವೆ ಅನುನಾಸಿಕವಾಗಿ ಬರುವುದಿಲ್ಲ)

-ಹಂಸಾನಂದಿ
ಪುರಂದರ ದಾಸರ ರಚನೆಗಳಿಗಾಗಿ ಇಲ್ಲಿ ಚಿಟಕಿಸಿ :- http://purandara.wordpress.com/