ಸುಮ್ಮನೇ ಕೆಲವು ಐತಿಹಾಸಿಕ ವಿಷಯದ ಬಗ್ಗೆ ಕುತೂಹಲ

5
ಸುಮ್ಮನೇ ಒಂದು ಇತಿಹಾಸದತ್ತ - ಭಾರದ್ವಾಜ ಋಷಿಗಳು ಗೋದಾವರಿ ನದಿಯ ದಂಡೆಯಲ್ಲಿ ಆಶ್ರಮಹೊಂದಿದ್ದರು. ಇವರ ಹೆಂಡತಿಯ ಹೆಸರು ಪೈಥೀನಸಿ, ಇವರ ಮಗಳು ವಿಶ್ರವನ ಮೊದಲ ಹೆಂಡತಿ. ಇವರಿಬ್ಬರಿಗೆ ಮಗ ಕುಬೇರ, ಅಂದರೆ ಭಾರದ್ವಾಜರು ಕುಬೇರನ ಅಜ್ಜ. ಈ ವಿಶ್ರವಗೆ ಇನ್ನೊಬ್ಬ ಮಗ ರಾವಣ. ಈ ರಾವಣನ ತಾಯಿ ಕೈಸಾಕಿ. ಅಂದರೆ ಈ ರಾವಣ ಕುಬೇರನ ಮಲ-ಅಣ್ಣ. ರಾವಣ ತನ್ನ ಮಲತಮ್ಮ ಕುಬೇರನನ್ನು ಸೋಲಿಸಿ ಇವನ ಪುಷ್ಪಕ ವಿಮಾನವನ್ನೂ ಲಂಕೆಯನ್ನೂ ಸ್ವಾಧೀನಪಡಿಸಿಕೊಂಡಿದ್ದ. ಇದಕ್ಕೆ ಕಾರಣ ಇವಳ ತಾಯಿ ಕೈಸಾಕಿಯ ದುಷ್ಟ ಬುದ್ಧಿ, ಈ ಕೈಸಾಕಿ, ರಾಕ್ಷಸ ರಾಜ ಸುಮಾಲಿಯ ಮಗಳು. ಈ ಸುಮಾಲಿ, ಒಂದು ದಿನ ಕುಬೇರ ತನ್ನ ಪುಷ್ಪಕ ವಿಮಾನದಲ್ಲಿ ಹಾರಿಹೋಗುವಾಗ ನೋಡಿ ಇಂತಹದೇ ಮಗ ತನ್ನ ಮಗಳಾದ ಕೈಸಾಕಿಗೆ ಹುಟ್ಟಿ ಪ್ರಥ್ವಿಯನ್ನು ಆಳಲಿ ಎಂಬ ಉದ್ದೇಶದಿಂದ ತನ್ನ ಮಗಳಾದ ಕೈಸಾಕಿಯನ್ನು ವಿಶ್ರವಮುನಿಯ ಕಡೆಗೆ ಕಳಿಸಿಕೊಡುತ್ತಾನೆ ಮತ್ತು ಮೊಮ್ಮಗನಿಗಾಗಿ ದುಂಬಾಲು ಬೀಳುತ್ತಾನೆ. ಹೀಗಾಗಿ ಪುರುಸೊತ್ತಿಲ್ಲದ ಕೈಸಾಕಿ ದುರ್ಮುಹೂರ್ತದಲ್ಲಿ ವಿಶ್ರವನ ಸಂಗಮಾಡುತ್ತಾಳೆ. ಇದರ ಪರಿಣಾಮವಾಗಿ ವಿನಾಶಕಾರಿ ಮಗುವಿನ ಜನ್ಮವಾಗುತ್ತದೆ ಎಂದು ವಿಶ್ರವ ಹೇಳುತ್ತಾನೆ. ಅದರಂತೆ ರಾವಣ ಹುಟ್ಟಿ ತಂದೆಯ ಮಾತನ್ನು ಉಳಿಸಿದ. ಈ ವಿಶ್ರವನ ತಂದೆ ಪುಲಸ್ತ್ಯ. ಈ ಪುಲಸ್ತ್ಯ, ಬ್ರಹ್ಮನ ಮಾನಸ ಪುತ್ರರಲ್ಲಿ ಒಬ್ಬ, ಇವನು ಬ್ರಹ್ಮನ ಕಿವಿಯಿಂದ ಹುಟ್ಟಿದ್ದ ಮತ್ತು ಬ್ರಹ್ಮ ಇವರೆಲ್ಲರನ್ನೂ ಸೃಷ್ಟಿಕ್ರಿಯೆ ಮಾಡೆಂದು ಒತ್ತಾಯಿಸುತ್ತಿದ್ದ. ಪುಲಸ್ತ್ಯನ ಹೆಂಡತಿ ತೃಣಬಿಂದುವಿನ ಮಗಳು. ಹೀಗಾಗಿಯೇ ಬ್ರಹ್ಮ ರಾವಣನ ಮುತ್ತಜ್ಜ. ಈ ಕುಬೇರನಿಗೊಬ್ಬ ಮಗನಿದ್ದ ಅವನ ಹೆಸರು ನಲಕುವರ. ಈ ನಲಕುವರನ ಹೆಂಡತಿ ರಂಭೆ. ಇವಳು ಇಂದ್ರನ ಆಸ್ಥಾನದ ಸದಸ್ಯೆ. (ಈ ನಲಕುವರನ ಬಗ್ಗೆ ಇನ್ನೊಮ್ಮೆ ಬರೆಯಬೇಕು). ಮೇಲೆ ಹೇಳಿದ ಭಾರದ್ವಾಜರಿಗೆ ಯವಕ್ರೀಡಾ ಎಂಬ ಮಗನಿದ್ದ. ಈ ಯುವಕ್ರೀಡ ವೇದಪಾರಂಗತನಾಗಲು ಹವಣಿಸುತ್ತಿದ್ದನಂತೆ. ದ್ರೋಣರೂ ಇವರ ಮಗನೆಂದು ಓದಿದ್ದ ನೆನಪು. ಈ ದ್ರೋಣ ಕೃಪಾಚಾರ್ಯರ ಮಗಳನ್ನು ಲಗ್ನಮಾಡಿಕೊಂಡಿದ್ದ. ಇವರಿಗೆ ಮಗ ಅಶ್ವತ್ಥಾಮ. ಈ ಕೃಪಾಚಾರ್ಯ ಗೌತುಮ ಋಷಿಗಳ ಮಗ. ನಾನೂ ನಿಮ್ಮಂತೆಯೇ ಗಲಿಬಿಲಿಗೊಂಡಿದ್ದೇನೆ.ಮತ್ತು ಋಷಿಗಳ ಮೂಲದ ಬಗ್ಗೆ ಹೆಚ್ಚು ತಿಳಿಯಲು ಪ್ರಯತ್ನ ಪಡುತ್ತಿದ್ದೇನೆ. ನನ್ನ ಈ ಸಂಗ್ರಹಣೆ ಕದಾಚಿತ್ ತಪ್ಪಿರಲೂ ಬಹುದು, ಬಲ್ಲವರು ಇದನ್ನು ಸರಿಪಡಿಸಿ ನಮ್ಮಂಥ ಇತಿಹಾಸ ಪಿಪಾಸುಗಳಿಗೆ ತಿಳಿಸಲಿ.
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಹೌದು. ಆದರ ಪುರಾಣವು ಇತಿಹಾಸದ ಮುಂದುವರೆದ ಭಾಗೆ ಎಂಬುದು ನನ್ನ ಅಭಿಮತ. ಇತಿಹಾಸದ ವ್ಯಕ್ತಿಗಳು ಮುಂದೆ ಪುರಾಣಗಳಲ್ಲಿ, ಜನರ ನಂಬಿಕೆಗಳಿಗೆ ಮತ್ತು ಭಾವನೆಗಳಿಗೆ ತಕ್ಕಂತೆ ಮಾರ್ಪಾಡಾಗುತ್ತ ಹೋಗುತ್ತಾರೆ ಬಹುಷಃ ಆಗ ಅವರು ಅನೇಕರ ಕೈಗಳಲ್ಲಿ ಅವರವರ ಭಾವನೆ ಮತ್ತು ಭಕುತಿಗೆ ಅತಿಮಾನವರಾಗಿ ಬದಲಾಗುತ್ತಾರೆ! ಆದರೂ ಮೂಲದಲ್ಲಿ ಪುರಾಣಕ್ಕೆ ಎಲ್ಲೋ ಇತಿಹಾಸದ ಕೊಂಡಿ ಇದೆ ಎಂಬುದು ನನ್ನ ನಂಬಿಕೆ. ನೀವೇನಂತೀರಿ? ಕೃಷ್ಣ

ಕುಲಕರ್ಣಿಯವರೇ, ನಾನು ಸಹ ತಮ್ಮಂತೆ ’ಇತಿಹಾಸ ಪಿಪಾಸು’ವೇ. ನಮ್ಮ ಊಟ-ತಿಂಡಿ, ಉಡುಗೆ-ತೊಡುಗೆ, ಆಚಾರ-ಸಂಪ್ರದಾಯ, ಆಚಾರಶೀಲತೆ-ಅನಾಚಾರ - ಹೀಗೆ ಪ್ರತಿಯೊಂದು ’ಲೌಕಿಕ’ ಬದುಕಿಗೂ ಇತಿಹಾಸವಿದ್ದೇ ಇರುತ್ತದೆ. ಬಹಳಷ್ಟು ಜನ ಬಹಳಷ್ಟರ ಬಗ್ಗೆ ತಲೆ ಕೆಡಿಸಿಕೊಳ್ಳುವುದಿಲ್ಲ. ವ್ರತ-ನೋಹಿಗಳಿಗಾಗಲೀ, ಶ್ರಾದ್ದ-ಸಂಸ್ಕಾರಗಳಿಗಾಗಲೀ ಅದರದೇ ಅರ್ಥವಿರುತ್ತದೆ. ಇಂತಹ ಬಹಳಷ್ತು ಆಚರಣೆಗಳು ಇಂದಿನ ಸಂದರ್ಭದಲ್ಲಿ Redundant ಆಗಿರುವುದೇ ಹೆಚ್ಚು. ಆದರೂ ಮೂರ್ಖರಾಗಿ ಆಚರಿಸುತ್ತೇವೆ; ಗೊತ್ತಿದ್ದರೂ ನೆರೆ-ಹೊರೆಯವರ ಭಯಕ್ಕಾಗಿಯಾದರೂ ಆಚರಿಸಲೇಬೇಕಗುತ್ತದೆ. ಇದು ’ಇತಿಹಾಸ’ದ ಮಾತಾಯಿತು. ಪುರಣದ ಬಗ್ಗೆ ಬೇರೆಯೇ ದೃಷ್ಟಿಕೊನದಿಂದ ನೋಡಬೇಕಗುತ್ತದೆ. ಆದಿಕವಿ ವಾಲ್ಮೀಕಿ ಮತ್ತು ’ವಿಶಾಲ ಬುದ್ಧಿ’ಯ ವ್ಯಾಸರು ಬರೆದಿರುವುದೆಲ್ಲಾ ಪುರಾಣ. ಅದು ಸಂಪೂರ್ಣವಾಗಿ ಇತಿಹಾಸವಲ್ಲ. ಐತಿಹಾಸಿಕ ಸಂಗತಿಗಲು ಇದರಲ್ಲಿ ಇರುವುದು ನಿಜ. ಶ್ರೀರಾಮಚಂದ್ರನ ಅಯೋಧ್ಯಾ, ಶ್ರೀಕೃಷ್ಣನ ಗೊಕುಲ-ದ್ವಾರಿಕಾಗಳನ್ನು ಪುರತತ್ತ್ವಜ್ಞರು ಪತ್ತೆಹಚ್ಚಿರುವುದು ನಿಜ. ಅದರೆ ವಾಲ್ಮೀಕಿ-ವ್ಯಾಸದಿಗಳು, ತಥಾಕಥಿಕ ಘಟನೆಗಳಿಗೆ ಕಥನಾಭಿವ್ಯಕ್ತಿ ಕೊಟ್ಟಿದ್ದಾರೆ. ಕಣ್ನಿಂದ ನೋಡಿ-ನೋಡಿದ್ದನ್ನು ಹಾಗೆ-ಹಾಗೇ ’ವರದಿ’ ಮಾಡಿದ್ದಾರೆನ್ನುವುದು ಕಾವ್ಯ ಪ್ರತಿಭೆಗೇ ಅಪಚಾರವಾಗುತ್ತದೆ. ಅವರುಗಳ ಇನ್ನಿಲ್ಲದ ಕಾವ್ಯಾಭಿವ್ಯಕ್ತಿಯಿಂದ ಸಂಪ್ರೇರಿತವದ ಜಾನಪದ ಪ್ರತಿಭೆಗಳು ತಮ್ಮ-ತಮ್ಮ ಊರು-ಕೇರಿ ಪರಿಸರಗಳಲ್ಲೇ ಪಾಂಡವರ ಗುಹೆಗಳನ್ನೂ, ಸೀತಮ್ಮನ ಸ್ನಾನದ ತಾಣವನ್ನೂ, ಲಕ್ಷ್ಮಣನ ಬಾಣ ಉಕ್ಕಿಸಿದ ನಾಮದ ಚಿಲುಮೆಯನ್ನೂ, ಭೀಮನಿಂದ ಹತನಾದ ಬಕನ ಬಂಡೆಯನ್ನೂ ಸಮಸೃಜಿಸಿವೆ. ಇವುಗಳ ಕಾವ್ಯರಸವನ್ನು ತಲೆತೂಗಿ ಅಸ್ವಾದಿಸಬೇಕೇ ಹೊರತು ನಂಬಿ ನೀರೆರೆಯಹೋಗುವುದು ಮೂಢತನವಾಗುತ್ತದೆ. ರಾಮನ, ಕೃಷ್ಣನ, ಧರ್ಮರಾಯನ, ಮೌಲ್ಯಗಳು ಐತಿಹಾಸಿಕ ಸತ್ಯ; ರಾಮಾಯಣ ಮಹಭಾರತಾದಿ ಪುರಾಣಗಳು ಸಾಹಿತ್ಯಕ ಭಂಡಾರಗಳೆನ್ನುವುದು ನನ್ನ ನಂಬಿಕೆ ಪ್ರತಿಕ್ರಿಯೆ ಉದ್ದವಾಯಿತು ಕ್ಷಮಿಸಿ.

ಶ್ರೀ ದಿವಾಕರರಿಗೆ, " ಇವುಗಳ ಕಾವ್ಯರಸವನ್ನು ತಲೆತೂಗಿ ಅಸ್ವಾದಿಸಬೇಕೇ ಹೊರತು ನಂಬಿ ನೀರೆರೆಯಹೋಗುವುದು ಮೂಢತನವಾಗುತ್ತದೆ" - ಎಂಬ ನಿಮ್ಮ ಅಭಿಮತ ನಿಜಕ್ಕೂ ಒಪ್ಪಿಗೆಯುಕ್ತ. ಆದರೂ ನನ್ನಂಥ ಇತಿಹಾಸ ಪ್ರೀಯರಿಗೆ ಎಲ್ಲೋ ಇದಕ್ಕೆಲ್ಲ ಒಂದು ಕೊಂಡಿ ಇದೆ ಎನ್ನಿಸುತ್ತಿರುತ್ತದೆ. ಹಾಗೆ ನೋಡಿದರೆ ಈ ರಾಮಾಯಣ ಮತ್ತು ಮಹಾಭಾರತದಲ್ಲಿ ಬರುವ ಎಲ್ಲ ಪಾತ್ರಗಳೂ ಒಂದಕ್ಕೊಂದು ಸಂಬಂಧ ಪಟ್ಟಿವೆ ಎನಿಸುತ್ತದೆ. ಆ ಕಾಲ ಘಟ್ಟದಲ್ಲಿರುವವರೆಲ್ಲ ಮಹಾನ್ ಸಾಧಕರು ಮತ್ತು ಧ್ಯೇಯವಾದಿಗಳಾಗಿದ್ದರು ಎಂಬುದು ನನ್ನ ಅಭಿಮತ. ಹೀಗಾಗಿ ಅನೇಕ ಬಾರಿ ಗೊಂದಲಕ್ಕೆ ಒಳಗಾಗುತ್ತೇನೆ. ನಿಮ್ಮ ಉತ್ತರಕ್ಕೆ ಧನ್ಯವಾದಗಳು ಕೃಷ್ಣ

’ಉತ್ತರಕ್ಕೆ ಧನ್ಯವಾದಗಳು’ ಎಂಬ ಮಾತನಲ್ಲಿ, ’ಸಾಕು, ಇನ್ನು ಬರೆಯಬೇಡಿ’ ಎನ್ನುವ ಆದೇಶವಿದ್ದರೆ ದಯವಿಟ್ಟು ಮುಂದಿನದನ್ನು Ignore ಮಾಡಿಬಿಡಿ...! "ಪಾತ್ರಗಳು" ಎಂಬ ತಮ್ಮ ಮಾತು ಅತ್ಯಂತ ಔಚಿತ್ಯಪೂರ್ಣ. "ಐತಿಹಾಸಿಕ ಮಹಾಪುರುಷರು" ಮತ್ತವರ ನಡುವಣ ಕೊಂಡಿ ಎಂದು ’ಖಚಿತವಾಗಿ’ ಹೇಳಿದ್ದರೆ ನನಗೂ ಗೊಂದಲವಾಗುತ್ತಿತ್ತು! ಲಕ್ಷ್ಮಣ, ವಾಲ್ಮೀಕಿಗೆ ಶೇಷಾವತಾರವಾಗಿದ್ದರೆ, ಅದು ವ್ಯಾಸರಲ್ಲಿ ಬಲರಾಮನಾಗುತ್ತದೆ. ಶಾಸ್ತ್ರಪ್ರವೀಣ ಕೇಶವ ಸೋಮಯಾಜಿಗಳು, ತಮ್ಮ ಮಗನ ಕುಂಡಲಿ, ಲಕ್ಷ್ಮಣನ ಜಾತಕಕ್ಕೆ ಹೊಂದಿಕೆಯಾಗುತ್ತಿತ್ತೆಂದು ’ರಾಮಾನುಜ’ ಎಂದು ಹೆಸರಿಡುತ್ತಾರೆ. ಬಾಲ್ಯದಿಂದಲೂ ಭೀಮನ ’ಪಾತ್ರ’ವನ್ನು ಮೆಚ್ಚಿ ಅನುಕರಿಸುತ್ತಿದ್ದ ಮಧ್ವಾಚಾರ್ಯರು, ಶಿಷ್ಯರ ಭಾಗಕ್ಕೆ ವಾಯುದೇವರ ಅವತಾರವೇ ಆಗಿಹೋಗುತ್ತಾರೆ. ಈ ಆಚಾರ್ಯರುಗಳಾದರೋ ಐತಿಹಾಸಿಕ ಪುರುಷರು; ತಮ್ಮ ದರ್ಶನ, ಕಾಣ್ಕೆಗಳಿಂದಲೇ ಅಮರರಾದ ಇವರಿಗೆ ಅವತಾರದ ಉರುಳು, ಬಾಲಂಗೋಸಿಯಷ್ಟೆ! ರಾಮ ಮತ್ತು ಕೃಷ್ಣರ ಮಾಳ್ಕೆ-ಕಾಣ್ಕೆಗಳು ಮತ್ತು ಮೌಲ್ಯಗಳಲ್ಲಿ ಅವರವರದೇ ಅಸ್ತಿತ್ವಕ್ಕಿಂತಲೂ, ವಾಲ್ಮೀಕಿ-ವ್ಯಾಸರ ತಾದಾತ್ಮ್ಯವೇ ಹೆಚ್ಚಾಗಿ ಕಾಣುತ್ತದೆಂದರೆ ತಪ್ಪಾಗುತ್ತದೆಯೇ? ಶ್ರೀಹರಿಯ ಪರಿಪೂರ್ಣತೆಯೇನೋ, ನಂಬುಗರಿಗೆ, ಪ್ರಶ್ನಾತೀತವಿರಬಹುದು. ಆದರೆ ಅವನದೇ ಅವತಾರವೆನ್ನಲಾಗುವ ರಾಮ-ಕೃಷ್ಣರು, ಐತಿಹಾಸಿಕವಾಗಿ ಕ್ವಚಿತ್ತಾಗಿದ್ದಿರಬಹುದಾದರೂ, ಅವರುಗಳು ಆದರ್ಶವಾಗಿ, ಜೀವನ ಮೌಲ್ಯವಾಗಿ ಅಮರರಾಗಿರುವುದು ಆದಿಕವಿ ಮತ್ತು ಮಹಾನ್ ಕವಿಯ ಕಾಣ್ಕೆ, ಪರಿಕಲ್ಪನೆಗಳಿಂದಲೇ ಅಲ್ಲವೇ? - ಇದು ವಾದವಲ್ಲ; ಚಿಂತನೆ ಮತ್ರಾ!