'ಶತಾವಧಾನಿ' ಗಣೇಶ ಅವರ ಮರೆವು!

4

'ಕನ್ನಡ' ಸಾಹಿತ್ಯದ ಮಟ್ಟಿಗೆ ವ್ಯಾಸರ ನಂತರದ ಸ್ಥಾನದಲ್ಲಿ ಡಾ. ಮಾಸ್ತಿ ವೆಂಕಟೇಶ ಅಯ್ಯಂಗಾರ್ ಹಾಗೂ ಭೈರಪ್ಪ ಅವರು ನಿಲ್ಲುತ್ತಾರೆ' ಎಂದು ಶತಾವಧಾನಿ ಗಣೇಶ್ ಹೇಳಿದರೆಂದು ಪತ್ರಿಕೆಗಳಲ್ಲಿ ವರದಿಯಾಗಿದೆ.


ಕನ್ನಡದ ಮಟ್ಟಿಗೆ ವ್ಯಾಸರ ನಂತರ ಎಂದು ಹೇಳಿರುವುದರಿಂದ - ವ್ಯಾಸರ ಕನ್ನಡ ಕೃತಿ ಯಾವುದೆಂಬ ಅನುಮಾನ ಬಾರದಿರದು. ಅದಿರಲಿ.


ಈಗ್ಗೆ ಒಂದು ವರ್ಷಗಳ ಹಿಂದೆ ಸುರಾನಾ ಕಾಲೇಜಿನಲ್ಲಿ ಕುವೆಂಪು ರಾಮಾಯಣ ದರ್ಶನಂ ಅನುವಾದಗಳ ಬಗ್ಗೆ ಒಂದು ವಿಚಾರ ಸಂಕಿರಣ ನಡೆದಿತ್ತು. ಆಗ ಭಾಗವಹಿಸಿದ್ದ, ಶತಾವಧಾನಿಗಳು, 'ಮೂಲರಾಮಾಯಣ'ದ ಕೆಲವು ಸನ್ನಿವೇಶಗಳನ್ನು (ಉದಾಹರಣೆಗೆ ಉದಾತ್ತ ರಾವಣನ ಚಿತ್ರಣ, ಸೀತೆಯೊಂದಿಗೆ ರಾಮನೂ ಅಗ್ನಿಪ್ರವೇಶ ಮಾಡುವುದು) ಕವಿ ಬದಲಾಯಿಸಿರುವುದು ಅಪರಾಧ ಎನ್ನುವಂತೆ ಮಾತನಾಡಿದ್ದರು.  ಅದಕ್ಕೆ ಹೆಚ್ಚಿನ ವಿವರಣೆ ಬಯಸಿ ಪ್ರಶ್ನೆ ಕೇಳಿದವರೊಂದಿಗೆ ಮುನಿಸಿಕೊಂಡು ಮೌನವಾಂತು ಕುಳಿತುಬಿಟ್ಟಿದ್ದರು.


ಈ ಹಿನ್ನೆಲಯುಲ್ಲಿ, ಈ ಸಂದರ್ಭದಲ್ಲಿ ನನ್ನನ್ನು ಕಾಡುತ್ತಿರುವ ಸಮಸ್ಯೆ ಇದು.


ಮೂಲರಾಮಾಯಣದಲ್ಲಿ ಇಲ್ಲದ 'ಆಂಜನೇಯ ಲಂಕೆಗೆ ಸಮುದ್ರವನ್ನು ಈಜಿಕೊಂಡು ಹೋಗುವ ಸನ್ನಿವೇಶ'ವನ್ನು ತಮ್ಮ ರಾಮಾಯಣದಲ್ಲಿ ಬರೆದಿರುವ ಮಾಸ್ತಿಯವರನ್ನು, ಹಾಗೂ ಆಧುನಿಕ ಪರಿಕಲ್ಪನೆಗಳೊಂದಿಗೆ, ಹಲವಾರು ಬದಲಾವಣೆಗಳೊಂದಿಗೆ ಮೂಲಮಹಾಭಾರತವನ್ನು 'ಪರ್ವ' ಕಾದಂಬರಿಯಲ್ಲಿ ಪುನರ್ರಚಿಸಿರುವ ಭೈರಪ್ಪನವರನ್ನು ವ್ಯಾಸರ ನಂತರದ ಸ್ಥಾನಕ್ಕೆ ನಾಮ ನಿರ್ದೇಶನ ಮಾಡಿಬಿಟ್ಟಿದ್ದಾರೆ.


ಈ ಇಬ್ಬಂದಿತನ ಏಕೆ?


ಇದು ಗಣೇಶ್ ಅವರ ಸ್ವತಂತ್ರ ಎಂದು ಸುಮ್ಮನಾಗುವುದೇ? ಅಥವಾ


ಕವಿಕಲ್ಪನೆ, ಕವಿಸ್ವತಂತ್ರ ಇವುಗಳನ್ನು ತಮಗೆ ಬೇಕಾದಾಗ ಸ್ವೀಕರಿಸುವ ಹಾಗೂ ತಿರಸ್ಕರಿಸುವ ಇಂತಹ ಮನೋಭಾವ ಶತಾವಧಾನಿಗಳಿಗೆ ಶೋಬಿಸುವುದೇ? ಅಥವಾ ಬಹುಭಾಷಾ ಬಹುಶೃತರಾದ ಶತಾವಧಾನಿಗಳಿಗೂ (ಜಾಣ) ಮರೆವು ಇದೆಯೇ? ಎಂದು ತಿಳಿದುಕೊಳ್ಳುವುದೇ?


ಇದು ಯಾವುದೇ ಕವಿಯ ಸ್ಥಾನ ನಿರ್ದೇಶನದ ಪ್ರಶ್ನೆಯಲ್ಲ. ಶತಾವಧಾನಿಗಳ ಮರೆವಿನ ಪ್ರಶ್ನೆ!

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಡಾ. ಸತ್ಯನಾರಾಯಣರೆ, ನಾನು ನೀವು ಎತ್ತಿರುವ ವಿಷಯಗಳನ್ನು ವಿಶ್ಲೇಷಿಸುವಷ್ಟು ದೊಡ್ಡವನಲ್ಲ ಆದರೂ ನನಗೆ ತಿಳಿದಿದ್ದನ್ನು ಇಲ್ಲಿ ಪ್ರಸ್ತುತ ಪಡಿಸುತ್ತಿದ್ದೇನೆ. ಶತಾವಧಾನಿ ಗಣೇಶ್ ಅವರು ಡಾ. ಮಾಸ್ತಿ ವೆಂಕಟೇಶ ಅಯ್ಯಂಗಾರ್ ಹಾಗೂ ಭೈರಪ್ಪನವರು ವ್ಯಾಸರನಂತರ ಸ್ಥಾನದಲ್ಲಿ ನಿಲ್ಲುತ್ತಾರೆಂದರೆ ಅದರ ಹಿಂದಿರುವ ಭಾವವನ್ನು ಅರ್ಥಮಾಡಿಕೊಳ್ಳಿ. ಕನ್ನಡದಲ್ಲಿ ಅವರ ದ್ರುಷ್ಠಿಯಲ್ಲಿ ವ್ಯಾಸರ ಸ್ಥಾನ ತುಂಬುವವರು ಇಲ್ಲದಿರುವುದರಿಂದ ಈ ಇಬ್ಬರು ಮಹನೀಯರಿಗೆ ಅವರ ನಂತರದ ಸ್ಥಾನವನ್ನು ಕೊಟ್ಟಿರುವರು. ಆದ್ದರಿಂದ ವ್ಯಾಸರು ಯಾವಾಗ ಕನ್ನಡದಲ್ಲಿ ಕ್ರುತಿ ಬರೆದರೆಂಬ ಪ್ರಶ್ನೆ ಉದ್ಭವಿಸುವುದಿಲ್ಲ. ಇನ್ನು ಮಾಸ್ತಿಯವರಾಗಲಿ ಭೈರಪ್ಪನವರಾಗಲಿ ಇರುವ ವಿಷಯವನ್ನು ಇನ್ನೊಂದು ಕೋನದಿಂದ ಬರೆದಿದ್ದಾರೆ ಆದ್ದರಿಂದ ಅವರಿಗೆ ಅದರ ಬಗ್ಗೆ ಆಕ್ಷೇಪಣೆ ಇಲ್ಲದೇ ಇರಬಹುದು. ಆದರೆ ಕುವೆಂಪುರವರು ಬರೆದಿರುವುದು ಮೂಲದಲ್ಲಿ ಇರದೇ ಇರುವ ಹೊಸ ದ್ರುಷ್ಠಾಂತಗಳನ್ನ; ಹಾಗಾಗಿ ಅವರಿಗೆ ಅವು ಹಿಡಿಸದೇ ಇರಬಹುದು ಅಷ್ಟೆ. ಆದ್ದರಿಂದ ನನಗೆ ಶತಾವಧಾನಿ ಗಣೇಶರ ನಿಲುವಿನಲ್ಲಿ ಇಬ್ಬಂದಿತನವೇನೂ ಕಾಣಿಸುವುದಿಲ್ಲ. ಈ ರೀತಿಯಾಗಿ ಹೊಸ ವಿಷಯಗಳನ್ನು ಸೇರಿಸಿರುವುದು ಇದು ಮೊದಲೇನಲ್ಲವೆನ್ನುವುದು ನಿಜ; ಏಕೆಂದರೆ ಕಾಳಿದಾಸನ ಅಭಿಗ್ನಾನ ಶಾಕುಂತಲದಲ್ಲಿ ದೂರ್ವಾಸ ಮುನಿಯ ಶಾಪದಿಂದಾಗಿ ದುಷ್ಯಂತ ಶಕುಂತಲೆಯನ್ನು ಮರೆಯುತ್ತಾನೆಂದು ಕಾಳಿದಾಸ ಸೇರಿಸಿದ್ದಾನೆ. (ಸಂಪದದಲ್ಲಿ ಇರುವ ಕೀಲಿ ಮಣೆಯಿಂದ ಕೆಲವು ಅಕ್ಷರಗಳನ್ನು ಮುದ್ರಿಸಲಾಗುವುದಿಲ್ಲ ಆದ್ದರಿಂದ ಶಬ್ದ ದೋಷಗಳಿಗೆ ಕ್ಷಮೆಯಿರಲಿ.)

ಶತಾವಧಾನಿ ಗಣೇಶರು ಕೂಡಾ ನಿಮ್ಮ ನಮ್ಮ ಹಾಗೆ ಕೇವಲ ಮನುಷ್ಯರು ಎಂಬುದು ಈ ಬರಹದಿಂದಾಗಿ ತಿಳಿಯಿತು. ಪರಿಪೂರ್ಣರಾದವರು ಯಾರಾದರೂ ಇದ್ದಾರೆಯೇ?

>>>>> ಇದು ಗಣೇಶ್ ಅವರ ಸ್ವತಂತ್ರ ಎಂದು ಸುಮ್ಮನಾಗುವುದೇ? ಅಥವಾ ಕವಿಕಲ್ಪನೆ, ಕವಿಸ್ವತಂತ್ರ <<<< ಈ ವಾಕ್ಯಗಳಲ್ಲಿ ಬಂದ "ಸ್ವತಂತ್ರ" ಪದದ ಬದಲು "ಸ್ವಾತಂತ್ರ್ಯ" ವೆಂದಾಗಬೇಕಿತ್ತೇ? ಅಥವಾ ಸ್ವತಂತ್ರ ಪದಬಳಕೆ ಸರಿಯೇ?