ವಿದ್ಯೆಯ ಹಿರಿಮೆ

5

ವಿದ್ಯೆಯ ಹಿರಿಮೆ

ಅಜರಾಮರವತ್ಪ್ರಾಜ್ಞಃ ವಿದ್ಯಾಮರ್ಥಂ ಚ ಸಾಧಯೇತ್
ಗೃಹೀತ ಇವ ಕೇಶೇಷು ಮೃತ್ಯುನಾ ಧರ್ಮಮಾಚರೇತ್||೧||
ತನಗೆ ಸಾವು ಇಲ್ಲ ರೋಗವೂ ಬಾರದೆಂದುಕೊಂಡೇ ಪ್ರಾಜ್ಞನಾದವನು ವಿದ್ಯೆಯನ್ನೂ ಹಣವನ್ನೂ ಸಂಪಾದಿಸಬೇಕು. ಈಗಲೇ ಸಾವು ಸಂಭವಿಸಬಹುದೆಂದು ಒಳ್ಳೆಯ ಕೆಲಸ ಮಾಡಬೇಕು. ವಿದ್ಯೆ ಹಣಗಳೆರಡು ಜೀವನದಲ್ಲಿ ನಿರಂತರ ಅವಶ್ಯಕತೆಗಳು. ಹಾಗಾಗಿ ಯಾವಾಗಲೂ ರೋಗವಿಲ್ಲದೆ ಬದುಕಿರುತ್ತೇನೆಂದು ವಿದ್ಯೆ ಹಣಗಳೆರಡನ್ನೂ ಸಂಪಾದಿಸಬೇಕು. ಯಾವತ್ತಿದ್ದರೂ ಸಾಯುತ್ತೇನೆಂಬ ನಿರಾಶಾಭಾವನೆಯನ್ನು ವಿದ್ಯೆ ಮತ್ತು ಹಣ ಗಳಿಸುವ ವಿಷಯದಲ್ಲಿ ಉದಾಸೀನ ಭಾವನೆ ತಾಳಬಾರದು. ಒಳ್ಳೆಯ ಕೆಲಸವನ್ನು “ಶುಭಸ್ಯ ಶೀಘ್ರಂ” ಎಂಬಂತೆ ತಕ್ಷಣವೇ ಮಾಡಿಬಿಡಬೇಕು.  ಅಂದರೆ ಒಳ್ಳೆಯ ಕೆಲಸ ಮಾಡಬೇಕೆನಿಸಿದಾಗ ಮಾಡದಿದ್ದರೆ ಮತ್ತೊಮ್ಮೆ ಒಳ್ಳೆಯ ಕೆಲಸ ಮಾಡುವ ಅವಕಾಶ ತಪ್ಪಿಹೋಗಬಹುದು.

ಕ್ಷಣಶಃ ಕಣಶಶ್ಚೈವ ವಿದ್ಯಾಮರ್ಥಂ ಚ ಸಾಧಯೇತ್
ಕ್ಷಣತ್ಯಾಗೇ ಕುತೋ ವಿದ್ಯಾ ಕಣತ್ಯಾಗೇ ಕುತೋ ಧನಮ್||೨||
ಕ್ಷಣ ಕ್ಷಣವೂ ವ್ಯರ್ಥವಾಗದಂತೆ ವಿದ್ಯೆಯನ್ನು ಕಣ ಕಣವೂ ವ್ಯರ್ಥವಾಗದಂತೆ ಹಣವನ್ನು ಸಂಪಾದಿಸಬೇಕು. ಸಮಯ ವ್ಯರ್ಥವಾದರೆ ವಿದ್ಯೆ ಲಭಿಸದು. ಹಾಗೆಯೇ ಗಳಿಸಿದ ಸ್ವಲ್ಪ ಮೊತ್ತದ ಹಣ ವ್ಯರ್ಥವಾದರೆ ಹಣಸಂಗ್ರಹವೂ ಸಾಧ್ಯವಾಗದು.
ಜಲಬಿಂದುನಿಪಾತೇನ ಕ್ರಮಶಃ ಪೂರ್ಯತೇ ಘಟಃ
ಸ ಹೇತುಃ ಸರ್ವವಿದ್ಯಾನಾಂ ಧರ್ಮಸ್ಯ ಚ ಧನಸ್ಯ ಚ||೩||
ನೀರಿನ ಬಿಂದುಗಳು ಬೀಳುವುದರಿಂದ ನೀರು ಸಂಚಯವಾಗಿ ಮಡಕೆಯು ಕ್ರಮೇಣ ತುಂಬುತ್ತದೆ. “ಹನಿ ಹನಿ ಕೂಡಿದರೆ ಹಳ್ಳ. ತೆನೆ ತೆನೆ ಕೂಡಿದರೆ ಬಳ್ಳ” ಎಂಬ ಗಾದೆಯಂತೆ ಎಲ್ಲಾ ವಿದ್ಯೆಗಳು, ಒಳ್ಳೆಯ ಕೆಲಸಗಳಿಂದ ಪುಣ್ಯಲಾಭವು ಮತ್ತು ಹಣವು ಸಂಚಯವಾಗುತ್ತವೆ.

ಯಸ್ತು ಸಂಚರತೇ ದೇಶಾನ್ ಯಸ್ತು ಸೇವೇತ ಪಂಡಿತಾನ್
ತಸ್ಯ ವಿಸ್ತಾರಿತಾ ಬುದ್ಧಿಃ ತೈಲಬಿಂದುರಿವಾಂಭಸಿ||೪||
ಯಾರು ದೇಶಗಳನ್ನೆಲ್ಲ ಸುತ್ತುತ್ತಾರೋ ಯಾರು ತಿಳಿದವರೊಡನೆ ವಿಚಾರವಿನಿಮಯ ಮಾಡಿಕೊಳ್ಳುತ್ತಾರೋ “ದೇಶ ಸುತ್ತು ಕೋಶ ಓದು” ಎಂಬಂತೆ ಅವರ ವಿವೇಕಬುದ್ಧಿಯು ನೀರಿನಲ್ಲಿ ಬಿದ್ದ ಹನಿಯು ದೊಡ್ಡದಾಗುವಂತೆ ವಿಶಾಲವಾಗುತ್ತದೆ.

ಆಚಾರ್ಯಾತ್ ಪಾದಮಾದತ್ತೇ ಪಾದಂ ಶಿಷ್ಯಃ ಸ್ವಮೇಧಯಾ
ಪಾದಂ ಸಬ್ರಹ್ಮಚಾರಿಭ್ಯಃ ಪಾದಂ ಕಾಲಕ್ರಮೇಣ ಚ||೫||
ಒಬ್ಬ ವಿದ್ಯಾರ್ಥಿಯು ತನ್ನ ಜ್ಞಾನಸಂಪಾದನೆಯಲ್ಲಿ ಕಾಲು ಭಾಗವನ್ನು ಗುರುವಿನಿಂದಲೂ, ತನ್ನ ಸ್ವಂತ ವಿಮರ್ಶಾತ್ಮಕ ಬುದ್ಧಿಯಿಂದ ಕಾಲುಭಾಗವನ್ನು, ಸಹಪಾಠಿಗಳೊಡನೆ ವಿಚಾರವಿನಿಮಯದಿಂದ ಕಾಲುಭಾಗವನ್ನು ಮತ್ತು ಕಾಲಕ್ರಮೇಣ ಉಳಿದ ಕಾಲುಭಾಗವನ್ನು ಪಡೆಯುತ್ತಾನೆ.

ಯಸ್ಯ ನಾಸ್ತಿ ಸ್ವಯಂಪ್ರಜ್ಞಾ ಕೇವಲಂ ಯೋ ಬಹುಶ್ರುತಃ
ಸ ನ ಜಾನಾತಿ ಶಾಸ್ತ್ರಾರ್ಥಾನ್ ದರ್ವೀ ಪಾಕರಸಾನಿವ||೬||
ಯಾರಿಗೆ ಸ್ವಂತ ವಿಶ್ಲೇಷಣೆ ಮಾಡುವ ಬುದ್ಧಿಯಿಲ್ಲವೋ ಯಾರು ಬಹಳಷ್ಟು ವಿಷಯಗಳನ್ನು ಕೇಳಿರುತ್ತಾನೋ ಅಥವಾ ಓದಿರುತ್ತಾನೋ “ಗಿಳಿಯೋದಿನಂತೆ” ಅವನು ಅಡಿಗೆಯಲ್ಲಿ ಮುಳುಗಿರುವ ಸೌಟು ಹೇಗೆ ಅಡಿಗೆಯ ರುಚಿಯನ್ನು ಅರಿಯದೋ ಆ ತೆರನಾಗಿ ಶಾಸ್ತ್ರಗಳ ಅರ್ಥಗಳನ್ನು ಅರಿಯಲಾರನು. ಈ ಪದ್ಯವೊಂದೇ ಯಾವುದೇ ಜ್ಞಾನ ಅಥವಾ ವಿಜ್ಞಾನವನ್ನು ಅರಿತುಕೊಳ್ಳಬೇಕಾದರೆ ಒಂದು ವಿಷಯದ ಎಲ್ಲಾ ಪರಿಕಲ್ಪನೆಗಳನ್ನು ಒ ವ್ಯಕ್ತಿ ಸರಿಯಾಗಿ ಮಾಡಿಕೊಳ್ಳದಿದ್ದರೆ ಅವನು ಓದಿದ್ದೆಲ್ಲವೂ ಕೇಳಿದ್ದೆಲ್ಲವೂ ವ್ಯರ್ಥವೆಂಬುದನ್ನು ಹೇಳುತ್ತದೆ. ಗುರುವಿನಲ್ಲಾಗಲಿ ಅಥವಾ ಒಂದು ಪುಸ್ತಕದಲ್ಲಾಗಲಿ ಜ್ಞಾನ ಸಿಗುವುದಿಲ್ಲ. ಪರರೊಡನೆ ವಿಚಾರದಿಂದ ಅಥವಾ ಓದಿದ್ದನ್ನು ಅರ್ಥ ಮಾಡಿಕೊಂಡಾಗ ಮಾತ್ರ ಅದು ಉಪಯುಕ್ತವಾದ ಜ್ಞಾನವಾಗುತ್ತದೆ. ಇಲ್ಲದೇ ಹೋದರೆ,

ಪುಸ್ತಕಸ್ಥಾ ತು ಯಾ ವಿದ್ಯಾ ಪರಹಸ್ತಗತಂ ಧನಮ್
ಕಾರ್ಯಕಾಲೇ ಸಮುತ್ಪನ್ನೇ ನ ಸಾ ವಿದ್ಯಾ ನ ತದ್ಧನಮ್||೭||
ಪುಸ್ತಕದಲ್ಲಿರುವ ವಿದ್ಯೆಯು, ಬೇರೆಯವರ ಕೈಗೆ ಕೊಟ್ಟ ಹಣವು ಅದರ ಅವಶ್ಯಕತೆ ಬಿದ್ದಾಗ ಉಪಯೋಗಕ್ಕೆ ಬಾರದ ವಿದ್ಯೆ ಮತ್ತು ಹಣವಾಗಿ ಅವು ನಿಜವಾದ ವಿದ್ಯೆಯೂ ಅಲ್ಲ ಧನವೂ ಅಲ್ಲ ಎಂಬಂತಾಗುತ್ತವೆ.

 

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಒಳ್ಳೆಯ ಸಂಕಲನ. ಧನ್ಯವಾದಗಳು. ಇನ್ನೊಂದು - ವಿದ್ಯಾತುರಾಣಾಂ ನ ಸುಖಂ ನ ನಿದ್ರಾ. ವಿದ್ಯೆಯ ಹಂಬಲವುಳ್ಳವನಿಗೆ ಸುಖ ಮತ್ತು ನಿದ್ರೆಯು ಇರಬಾರದಂತೆ. >>ಯಸ್ಯ ನಾಸ್ತಿ ಸ್ವಯಂಪ್ರಜ್ಞಾ ಕೇವಲಂ ಯೋ ಬಹುಶ್ರುತಃ ಸ ನ ಜಾನಾತಿ ಶಾಸ್ತ್ರಾರ್ಥಾನ್ ದರ್ವೀ ಪಾಕರಸಾನಿವ>> ನಾನು ಕೇಳಿದ ಇದರ ರೂಪಾಂತರ ಹೀಗಿದೆ- ಯಸ್ಯ ನಾಸ್ತಿ ಸ್ವಯಂಪ್ರಜ್ಞಾ ಶಾಸ್ತ್ರಂ ತಸ್ಯ ಕರೋತಿ ಕಿಂ| ಲೋಚನಾಭ್ಯಾಂ ವಿಹೀನಸ್ಯ ದರ್ಪಣಃ ಕಿಂ ಕರಿಷ್ಯತಿ|| ಯಾರಿಗೆ ಸ್ವಂತ ವಿಶ್ಲೇಷಣೆ ಮಾಡುವ ಬುದ್ಧಿಯಿಲ್ಲವೋ ಅವರಿಗೆ ಶಾಸ್ತ್ರವೇನು ಮಾಡುವುದು? ಎರಡು ಕಣ್ಣುಗಳಿಲ್ಲದವನಿಗೆ ಕನ್ನಡಕ ತಾನೆ ಏನು ಮಾಡೀತು? ಅಂದ ಹಾಗೆ ಈ ಶ್ಲೋಕಗಳನ್ನು ನೀವು ಹೀಗೆ ಸಂಕಲಿಸಿದ್ದೋ ಅಥವಾ ಹೀಗೆಯೆ ಒಟ್ಟಾಗಿ ಯಾವ ಹೊತ್ತಗೆಯಲ್ಲಾದರೂ ಇದೆಯೋ?

ಇವೆಲ್ಲವನ್ನು ಹಲವು ಸುಭಾಷಿತ ಸಂಗ್ರಹಗಳಿಂದ ಸಂಗ್ರಹಿಸಿದ್ದು. ಹಾಗೆಯೇ ಹಲವಾರು ಪಾಠಾಂತರಗಳಿರುತ್ತವೆ. ಉದಾಹರಣೆಗೆ ’ಯಸ್ಯ ನಾಸ್ತಿ ಸ್ವಯಂ ಪ್ರಜ್ಞಾ ಶಾಸ್ತ್ರಂ ತಸ್ಯ ಕರೋತಿ ಕಿಮ್’ ಎಂಬುದಾಗಿರುವ ಪಾಠಾಂತರವನ್ನು ನೀವು ಉಲ್ಲೇಖಿಸಿದ್ದೀರಿ. 'ಕಾಮಾತುರಾಣಾಂ ನ ಭಯಂ ನ ಲಜ್ಜಾ’ ಎಂದೂ ಪಾಠವಿದೆ.