ಬೆಂಗಳೂರು ಸುತ್ತಮುತ್ತ ಜಮೀನು ಪಡೆಯುವುದು ಇಷ್ಟೊಂದು ಸುಲಭವೇ!? 'ಅಮ್ಮ'

4.333335

ನೆನ್ನೆ ಎಲೆಕ್ಟ್ರಾನಿಕ್ ಮಾಧ್ಯಮಗಳಲ್ಲಿ ಹಾಗೂ ಸಂಜೆ ಪತ್ರಿಕೆಗಳಲ್ಲಿ ಮತ್ತು ಇಂದಿನ ಬಹುತೇಕ ಎಲ್ಲಾ ಪತ್ರಿಕೆಗಳಲ್ಲಿ ಒಂದು ಸುದ್ದಿ ಫೋಟೋ ಸಮೇತ ಪ್ರಕಟವಾಗಿದೆ.  ‘ಅಮ್ಮ’ ರಾಯಚೂರಿನ ಬಳಿ ಡೊಂಗುಪುರದಲ್ಲಿ ಕಟ್ಟಿಸಿಕೊಟ್ಟಿರುವ 100 ಮನೆಗಳ ಬೀಗದ ಕೈಯನ್ನು ಮುಖ್ಯಮಂತ್ರಿಗಳಿಗೆ ಹಸ್ತಾಂತರಿಸಿದ್ದಾರೆ. ನೆರೆಪೀಡಿತರಿಗೆ ತತ್ತಕ್ಷಣವಾಗಿ ಮನೆಗಳ ಅವಶ್ಯಕತೆಯಿದ್ದು, ಅದನ್ನು ಆದಷ್ಟು ಭೇಗ ನೆರವೇರಿಸಿದ ‘ಅಮ್ಮ’ ಹಾಗೂ ಆ ಕಾರ್ಯಕ್ರಮಕ್ಕೆ ಅಲ್ಲಿಯವರೆಗೂ ಹೋಗಿ ಬಂದ ಮುಖ್ಯಂತ್ರಿಗಳನ್ನು ಮೊದಲು ಅಭಿನಂದಿಸೋಣ.


‘ಅಮ್ಮ’ ಈಗ ಕೇವಲ 100 ಮನೆಗಳನ್ನು ಕಟ್ಟಿಸಿಕೊಟ್ಟಿದ್ದಾರೆ. ಮುಂದೆ ಇನ್ನೂ 600 ಮನೆಗಳನ್ನು ಕಟ್ಟಿಸಿಕೊಡುವವರಿದ್ದಾರಂತೆ. ಪತ್ರಿಕೆಗಳಲ್ಲಿ ಪ್ರಕಟವಾಗಿರುವ ವರದಿಯಂತೆ ಸುಮಾರು ೨೫೦ ಚದುರ ಅಡಿಗಳಷ್ಟಿರುವ ಈ ಮನೆಗಳು ರೈತರ ಅನುಕೂಲಕ್ಕೆ ತಕ್ಕನಾಗಿ ಇವೆಯೇ ಇಲ್ಲವೇ ಎಂಬುದು ಬೇರೆ ಪ್ರಶ್ನೆ. ಆದರೆ ಒಂದು ಮನೆಗೆ ಸುಮಾರು 1 ಲಕ್ಷದ 45 ಸಾವಿರ ರೂಪಾಯಿಗಳನ್ನು ಖರ‍್ಚು ಮಾಡಲಾಗಿದೆಯಂತೆ. ಅಂದರೆ 100 ಮನೆಗಳಿಗೆ ಸುಮಾರು 1 ಕೋಟಿ 45 ಲಕ್ಷ ರೂಪಾಯಿಗಳನ್ನು ‘ಅಮ್ಮ’ ಆಶ್ರಮ ಖರ್ಚು ಮಾಡಿದೆ.


ಇನ್ನು ಮೊದಲು ಮಾತು ಕೊಟ್ಟಿದ್ದಂತೆ 700 ಮನೆಗಳಲ್ಲಿ ಉಳಿದ 600 ಮನೆಗಳನ್ನು ಮುಂದೆ ಕಟ್ಟಿಸಿಕೊಡಲಾಗುತ್ತದಂತೆ. ಅದಕ್ಕೆ ತಗುಲುವ ಅಂದಾಜು ವೆಚ್ಚ ಸುಮಾರು 8 ಕೋಟಿ 70 ಲಕ್ಷ ರೂಪಾಯಿಗಳು. ಭಲೇ ‘ಅಮ್ಮ’ ಎಂದು ಬಿಡೋಣ.


ಆದರೆ ನೆನ್ನೆಯ ಈ ಸುದ್ದಿಯ ಜೊತೆಗೆ ಇನ್ನೊಂದು ಸುದ್ದಿ ಮುಖ್ಯವಾಗಿ ಕೆಲವು ಪತ್ರಿಕೆಗಳಲ್ಲಿ ತಲೆಬರಹದಲ್ಲೂ ಕಾಣಿಸಿಕೊಂಡಿದೆ. ಅದೇನೆಂದರೆ, ರಾಜ್ಯ ಸರ‍್ಕಾರ ‘ಅಮ್ಮ’ಗೆ ಕೊಡುಗೆಯಾಗಿ ಬೆಂಗಳೂರಿನ ಹೊರವಲಯದಲ್ಲಿ ಕೆಂಗೇರಿ ಬಳಿ 15ಎಕರೆ ಸರ‍್ಕಾರಿ ಜಮೀನು ಮತ್ತು 5 ಕೋಟಿ ಹಣವನ್ನು ನೀಡಲಿದೆ ಎಂಬ ಸುದ್ದಿ. ಇಷ್ಟೆಲ್ಲಾ ಉಚಿತ ಕಾಣಿಕೆ ‘ಉಚಿತ’ ಆಸ್ಪತ್ರೆ ಕಟ್ಟಿಸುವುದಕ್ಕೆ ಎಂಬ ಸುದ್ದಿಯೂ ಬಂದಿದೆ.


ಅಮ್ಮ ಈಗ ಕಟ್ಟಿರುವ 100 ಮನೆಗಳು ಹಾಗೂ ಮುಂದೆ ಕಟ್ಟಿಕೊಡಲಿರುವ(?) 600ಮನೆಗಳಿಗೆ ಆಗುವ ಒಟ್ಟು ಖರ್ಚು 10 ಕೋಟಿ 15 ಲಕ್ಷ ರೂಪಾಯಿಗಳು ಮಾತ್ರ. ಅದಕ್ಕೆ ಪ್ರತಿಯಾಗಿ ಸರ್ಕಾರದಿಂದ ಗಿಟ್ಟಿಸಿರುವ ಕಾಣಿಕೆ 15 ಎಕರೆ ಜಮೀನು ಮತ್ತು 5 ಕೋಟಿ ರೂಪಾಯಿ ಹಣ. ಬೆಂಗಳೂರಿನ ಹೊರವಲಯದ ಕೆಂಗೇರಿ ಬಳಿ 15 ಎಕರೆ ಜಮೀನಿನ ಮುಕ್ತ ಮಾರುಕಟ್ಟೆ ಬೆಲೆಯನ್ನು ಕೋಟಿಗಳಲ್ಲಿ ನೀವೇ ಲೆಕ್ಕ ಹಾಕಿಕೊಳ್ಳಿ! ಇಷ್ಟು ಹಣವನ್ನು ನೆರೆ ಪೀಡಿತ ಪ್ರದೇಶದಲ್ಲಿ ಮನೆಕಟ್ಟಲು ಸರ್ಕಾರವೇ ಬಳಸಬಹುದಾಗಿತ್ತಲ್ಲವೆ?


ಇನ್ನು ರಾಜ್ಯದಲ್ಲಿ ಎಷ್ಟೊಂದು ಉಚಿತ ಆಸ್ಪತ್ರೆಗಳಿಗೆ ಜಮೀನು ಇತ್ಯಾದಿ ಸಹಾಯವನ್ನು ಸರ್ಕಾರಗಳು ಹಲವಾರು ವರ್ಷದಿಂದ ಮಾಡುತ್ತಾ ಬಂದಿವೆ. ಆದರೆ ಎಷ್ಟು ಆಸ್ಪತ್ರೆಗಳಲ್ಲಿ ಅವುಗಳ ಘೋಷಿತ ಉದ್ಧೇಶ ಈಡೇರಿದೆ ಹಾಗೂ ಈಡೇರುತ್ತಿದೆ? ಇದು ಚಿದಂಬರ ರಹಸ್ಯ.


ನಮ್ಮ ಊರಿನವರೊಬ್ಬರು ತಮ್ಮ ತಾಯಿಗೆ ಆಗಬೇಕಿದ್ದ ಉದರ ಸಂಬಂಧಿ ಶಸ್ತ್ರಚಿಕಿತ್ಸೆಗೆ ಯಾರದೋ ಮಾತು ಕೇಳಿಕೊಂಡು ವೈಟ್ ಫೀಲ್ಡಿನಲ್ಲಿರುವ ಉಚಿತ ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದರು. ಮೂರು ತಿಂಗಳ ನಂತರದ ಒಂದು ದಿನಾಂಕ (ಆಪರೇಷನ್ ಮಾಡಿಸಿಕೊಳ್ಳಲು) ಹಾಗೂ ಒಂದಷ್ಟು ಮಾತ್ರೆಗಳ ಪ್ರಿಸ್ಕ್ರಿಪ್ಷನ್ ಬರೆದು ಕಳುಹಿಸಲಾಗಿತ್ತು. ಮೂರು ತಿಂಗಳು ಬಿಟ್ಟು ಆಪರೇಷನ್ ಮಾಡಿಸಿಕೊಳ್ಳುವವರೆಗೆ ಖಾಯಿಲೆಯಾಗಲೀ, ರೋಗಿಯಾಗಲೀ ಕಾಯುವುದಿಲ್ಲ ಎಂದು ಅದಷ್ಟು ಬೇಗ ಅರ್ಥ ಮಾಡಿಕೊಂಡು ಆ ಯೋಚನೆಯನ್ನೇ ಕೈಬಿಟ್ಟು ಬೇರೆ ಕಡೆ ಹೋದರು!


ಇದೆಲ್ಲವನ್ನೂ ಗಮನಿಸುತ್ತಿದ್ದರೆ, ಬೆಂಗಳೂರು ಸುತ್ತಮುತ್ತ ಜಮೀನು ಬೇಕಿದ್ದರೆ ನೆರೆಪೀಡಿತ ಪ್ರದೇಶದಲ್ಲಿ ಮನೆ ಕಟ್ಟಿಸಿಕೊಡಬೇಕು ಎಂಬ ಒಳ ಒಪ್ಪಂದ ಏರ್ಪಟ್ಟಿರಬಹುದಾ ಎಂಬ ಗುಮಾನಿ ಬರುವುದಿಲ್ಲವೆ!?


ಬಲಗೈಯಲ್ಲಿ ಕೊಟ್ಟಿದ್ದು ಎಡಗೈಗೆ ಗೊತ್ತಾಗಬಾರದು ಎಂಬ ಮಾತಿದೆ. ಈಗ ಅದಕ್ಕೆ ಇನ್ನೊಂದನ್ನು ಸೇರಿಸಬಹುದಾ?


'ಎಡಗೈಯಲ್ಲಿ ತೆಗೆದುಕೊಂಡಿದ್ದು ಬಲಗೈಗೂ ಗೊತ್ತಾಗಬಾರದು' ಅಂತ.


ಹಗಲು ದರೋಡೆ ಎಂಬುದಕ್ಕೆ ತಾಜಾ ಉದಾಹರಣೆ.


ಹೆಸರು ಯಾರದೋ ಬಸಿರು ಇನ್ಯಾರದೋ?


ಜೈ‘ಅಮ್ಮ’; ಜೈ ಯಡಿಯೂರು‘ಅಪ್ಪ’


ಕೊಸರು: ಕೃಷ್ಣದೇವರಾಯನ ಪಟ್ಟಾಭಿಷೇಕಕ್ಕಾಗಿ 75 ಕೋಟಿ ಖರ್ಚು ಮಾಡಿರುವ ಸುದ್ದಿ ವಿ.ಕ.ದಲ್ಲಿ ಬಂದಿದೆ. 75 ಕೋಟಿ ಹಣದಲ್ಲಿ ಎಷ್ಟು ಮನೆ ಕಟ್ಟಿಕೊಡಬಹುದಿತ್ತು? 

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಒಳ್ಳೆಯ ಲೇಖನ . ಹೌದು ಈ ಅಮ್ಮ , ಮತ್ತು ಪುಟಪರ್ತಿ ಯ ಅಪ್ಪ ನ ಬಗ್ಗೆ ತುಂಬಾ ಓದಿದಷ್ಟು ಬೇಸರ ಅನ್ನಿಸುತ್ತದೆ . ಪ್ರವೀಣ ಸಾಯ

ಬಿ ಆರ್ ಎಸ್, ಜೈ‘ಅಮ್ಮ’; ಜೈ ಯಡಿಯೂರು‘ಅಪ್ಪ’, ಈ ಲೇಖನ ಬರೆದವನು ಬೆಪ್ಪ. ವ್ಯಂಗ್ಯ ಬೇಡ, ಯಾಕಂದ್ರೆ, ನಿಮ್ಮ ಯಡಿಯೂರು‘ಅಪ್ಪ’ ಎಷ್ಟಾದರೂ ಈ ರಾಜ್ಯದ ಮುಖ್ಯ ಮಂತ್ರಿ. ಅವ್ರಿಗೆ ಬೈದ್ರೆ, ನಮ್ಮ ಮುಖಕ್ಕೆ ನಾವೇ ಉಗುದ್ಕಂಡಾಗೆ << ಕೊಸರು: ಕೃಷ್ಣದೇವರಾಯನ ಪಟ್ಟಾಭಿಷೇಕಕ್ಕಾಗಿ 75 ಕೋಟಿ ಖರ್ಚು ಮಾಡಿರುವ ಸುದ್ದಿ ವಿ.ಕ.ದಲ್ಲಿ ಬಂದಿದೆ. 75 ಕೋಟಿ ಹಣದಲ್ಲಿ ಎಷ್ಟು ಮನೆ ಕಟ್ಟಿಕೊಡಬಹುದಿತ್ತು? >> ನಂದೂ ಒಂದು ಕೊಸರು: ಅಲ್ಲಾ ಸ್ವಾಮಿ, ನಿಮಗೇನಾದ್ರೂ ಹೊಟ್ಟೆ ನೋವು ಬಂದ್ರೆ, ಮೀಸೆ ಬೋಳಿಸ್ಕೋತೀರ? ಅಥ್ವಾ ಹೊಟ್ಟೆ ನೋವಿಗೆ ಔಷಧ ತಗೋತೀರ? ಹೊಟ್ಟೆ ನೋವು = ನೆರೆಪೀಡಿತ ಪ್ರದೇಶ. ಮೀಸೆ = ಕೃಷ್ಣದೇವರಾಯನ ಪಟ್ಟಾಭಿಷೇಕ ನಮ್ಮ ನಮ್ಮಲ್ಲೇ ಏಕೆ ಹೀಗೆ ಹೊಡೆದಾಟ, ಬನ್ನಿ, ನಾವೆಲ್ಲರೂ ಸೇರಿ ಕಟ್ಟೋಣ ಹೊಸ ನಾಡೊಂದನು, ಕನ್ನಡಾಂಬೆಯ ಸೇವೆ ಮಾಡುತ್ತಾ, ಹಚ್ಚೋಣ ಕನ್ನಡದ ದೀಪವನು ಜೈ ಕರ್ನಾಟಕ, ಜೈ ಕನ್ನಡಾಂಬೆ