ಹಕ್ಕಿ ಅಲ್ಲ ಅಕ್ಕಿ

0

ಸಂಪದದ ಸ್ನೇಹಿತರೆ,
ನನ್ನ ಚೊಚ್ಚಲ ಬರಹ "ಅ""ಹ"ಕಾರಕ್ಕೆ ಸ್ಪಂದಿಸಿದ್ದೀರಿ ಧನ್ಯವಾದಗಳು. ಸರಿಯಾಗಿ ಯುನಿಕೋಡ್ ಬಳಸಲು ಬಾರದ ನನಗೆ ಕೆಲವೊಂದು ಟಿಪ್ಸ್ ನೀಡಿರುವ ವಿನಯ ಮತ್ತು ಶ್ಯಾಮಲ ಅವರಿಗೆ ಚಿರರುಣಿ.
ಇದೀಗ ನನ್ನ ಎರಡನೇ ಬರಹ ಬರೆದಿದ್ದೀನಿ.... ಖಂಡಿತಾ ಇದಕ್ಕೂ ಹೀಗೆ ಸ್ಪಂದಿಸ್ತೀರ ಅಂತ ನಂಬಿದ್ದೀನಿ....
ಇಂತಿ ನಿಮ್ಮ ತೇಜಸ್ವಿನಿ.
ನಾನಾಗ ದ್ವಿತೀಯ ಪದವಿ....ಒಂದಿನ ನನ್ನ ಗೆಳತಿಯೊಬ್ಬಳು ನಮ್ಮ ಮನೆಗೆ ಬಂದು 'ನಿಮ್ಮಮ್ಮ ಇದ್ದಾರೇನೇ' ಅಂತ ಕೇಳಿದ್ಲು! ಅಲ್ಲ ಅಪರೂಪಕ್ಕೊಮ್ಮೆ ನಮ್ಮನೆ ಕಡೆ ಬರುವವಳು ಏನಿವತ್ತು ಬಂದಿರೋದು ಅಲ್ದೆ ನಮ್ಮಮ್ಮನ ಕೇಳ್ತಾ ಇದ್ದಾಳಲ್ಲ ಅಂತ ಅನ್ನಿಸಿದ್ರು..... ಇದ್ದಾರೆ ಬಾ ಅಂದೆ.
ಅಡುಗೆ ಮನೆಯಿಂದ ಬಂದ ಅಮ್ಮ ಏನಮ್ಮ ಸಮಾಚಾರ ಅಂತ ಕೇಳಿದ್ರು. ಆಂಟಿ ನಾನು ಸಂಕಷ್ಟ ಹರ ಗಣಪತಿ ವ್ರತನ ಮನೇಲೇ ಮಾಡಬೇಕಂತ ಇದ್ದೀನಿ... ಅದಕ್ಕೆ ಅಂತಾನೇ ನಮ್ಮಪ್ಪ ಒಂದು ಬೆಳ್ಳಿ ಗಣ್ಪತಿ ವಿಗ್ರಹಾನೂ ತಂದು ಕೊಟ್ಟಿದ್ದಾರೆ... ಆದ್ರೆ ಅದನ್ನ ಹೇಗ್ ಮಾಡ್ಬೇಕಂತ ನಂಗೆ ಗೊತ್ತಿಲ್ಲ ಆಂಟಿ....ಯಾರೋ ಹೇಳಿದ್ರು ಹಕ್ಕಿ ಮೇಲ್ ಗಣಪತಿ ಕೂರುಸ್ಬೇಕು ಅಂತ ಆದ್ರೆ ಹಕ್ಕಿನ ತಟ್ಟೆಲಿಡ ಬೇಕೋ ಇಲ್ಲ ಬಾಳೆ ಎಲೆ ಮೇಲೆ ಇಡಬೇಕೋ ಅಂತ ಕೇಳಕ್ಕೆ ಬಂದೆ ಆಂಟಿ ಅಂದ್ಲು!!!!!
ನಂಗು ನಮ್ಮಮ್ಮಂಗು ತಲೆ ಕೆಟ್ಟು ಹೋಯ್ತು..... ಅಲ್ಲ ವಿಷ್ಣುವಿಗಾದ್ರೆ ಆದ್ರೆ ಗರುಡ ವಾಹನ, ಇನ್ನು ಗಣಪನ ಅಣ್ಣ ಷಣ್ಮುಖನಿಗಾದರೋ ನವಿಲು... ಗಣಪತಿನ್ಯಾವ ಹಕ್ಕಿ ಮೇಲೆ ಕೂರುಸ್ತಾರಪ್ಪಾ ಅಂತ ಮುಖ ಮುಖ ನೋಡಿಕೊಂಡ್ವಿ.
ನಮ್ಮ ಗೊಂದಲ ಅವಳಿಗೆ ಅರ್ಥ ಆಯ್ತೋ ಏನೋ ಅಲ್ಲ ಆಂಟಿ ನಾವೇ ಭತ್ತ ಬೆಳೆಯೋದ್ರಿಂದ ಎಲ್ಲೋ ಹೋಗಿ ಗುಂಪಲ್ಲಿ ಕೂತು ಪೂಜೆ ನೋಡಿ ಬರೋದ್ರು ಬದಲು ಮನೇಲೇ ಇಟ್ಟು ಪೂಜೆ ಮಾಡೋಣ ಅಂತ... ಅಂದ ತಕ್ಷಣ ನಂಗು ನಮ್ಮಮ್ಮಂಗು ನಗು ಬಂತಾದ್ರೂ ಪಾಪ ಭಕ್ತಿಯಿಂದ ಪೂಜೆ ಮಾಡಕ್ಕೆ ಹೊರಟಿದ್ದಾಳಲ್ಲ ಅಂತ ಅನ್ನಿಸಿ.... ಅಮ್ಮ ಹೇಳಿದ್ರು 'ನೋಡಮ್ಮ ಇದರ ಬಗ್ಗೆ ನಂಗು ಹೆಚ್ಚು ಗೊತ್ತಿಲ್ಲ... ಯಾರಾದ್ರು ತಿಳಿದಿರುವವರ ಹತ್ತಿರ ಕೇಳಿ ಮಾಡು ಒಳ್ಳೆಯದಾಗಲಿ' ಅಂತ.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.