ಲಸಿಕೆಗಳು ಬೇಕೆ?

5

ಮಕ್ಕಳಿಗೆ ಲಸಿಕೆ ಹಾಕಬೇಕೇ ಬೇಡವೇ ಎಂಬ ಬಗ್ಗೆ ಬಹಳಷ್ಟು ಚರ್ಚೆ ಸಂಪದದಲ್ಲಿ ನಡೆದಿದೆ. ಇದರಿಂದ ಸಾಮಾನ್ಯರಿಗೆ ಗೊಂದಲವುಂಟಾಗುವುದು ಸಹಜವೇ. ಆಧುನಿಕ ವೈದ್ಯ ವಿಜ್ಞಾನದ ಬಗ್ಗೆ ಹಾಗೂ ಅದನ್ನು ಪಾಲಿಸುವ ವೈದ್ಯರ ಬಗ್ಗೆ ಜನಸಾಮಾನ್ಯರಲ್ಲಿ ಸಾಕಷ್ಟು ಬೇಸರ ಹಾಗೂ ಸಂಶಯಗಳಿರುವುದು ಕೂಡಾ ಈ ಚರ್ಚೆಯಲ್ಲಿ ವ್ಯಕ್ತವಾಗಿದೆ. ಅದನ್ನು ಅಲೋಪತಿ ತಜ್ಞರೆಂದು ಕರೆಯಿಸಿಕೊಳ್ಳುತ್ತಿರುವ ನಾವೆಲ್ಲರೂ ತೆರೆದ ಮನಸ್ಸಿನಿಂದ ಪರಿಗಣಿಸಬೇಕಾಗಿದೆ. ಆಧುನಿಕ ವೈದ್ಯ ವಿಜ್ಞಾನದಲ್ಲಿ ಎಲ್ಲವೂ ಸಂಪೂರ್ಣವಾಗಿ ಸರಿಯಿದೆ ಎನ್ನಲಾಗದು ಹಾಗೂ ಸಾಕಷ್ಟು ಪಾರದರ್ಶಕತೆಯಿದೆಯೆಂದೂ ಹೇಳಲಾಗದು.

ಲಭ್ಯವಿರುವ ಎಲ್ಲಾ ಲಸಿಕೆಗಳನ್ನೂ ಕಡ್ಡಾಯವಾಗಿ ಹಾಕಿಸಿಕೊಳ್ಳಲೇ ಬೇಕು ಅಥವಾ ಯಾವ ಲಸಿಕೆಗಳನ್ನೂ ಹಾಕಿಸಿಕೊಳ್ಳಲೇ ಬಾರದು ಎನ್ನುವುದೆರಡೂ ಅತಿರೇಕವೆನಿಸುತ್ತದೆ. ಅದಾಗಲೇ ಹಲವರು ಹೇಳಿರುವಂತೆ, ಲಸಿಕೆಗಳು ವ್ಯಾಪಾರದ ಸರಕುಗಳಾದ ಬಳಿಕ ಅವುಗಳ ಬಗ್ಗೆ ಪಾರದರ್ಶಕವಾದ ಸತ್ಯವು ಹೊರಬೀಳುವುದು ಕಷ್ಟವೇ ಆಗಿಬಿಟ್ಟಿದ್ದು, ತಜ್ಞರೊಳಗೇ ಹಲವಾರು ಭಿನ್ನಾಭಿಪ್ರಾಯಗಳಿಗೆ ಕಾರಣವಾಗಿವೆ. ಅಂತಹ ಸನ್ನಿವೇಶದಲ್ಲಿ ಜನಸಾಮಾನ್ಯರಲ್ಲಿ ಗೊಂದಲ ಹಾಗೂ ಆತಂಕಗಳು ಸಹಜವಾಗಿಯೇ ಹುಟ್ಟುತ್ತವೆ; ದಬಾಯಿಸಿ ಸುಮ್ಮನಾಗಿಸುವುದರಿಂದ ಅವು ಇನ್ನಷ್ಟು ಹೆಚ್ಚುತ್ತವೆಯೇ ವಿನಃ ಬೇರೇನೂ ಆಗುವುದಿಲ್ಲ. ಹಾಗಾದರೆ, ತಜ್ಞರೊಳಗೇ ಇರುವ ಪರಸ್ಪರ ಭಿನ್ನವಾದ ಅಭಿಪ್ರಾಯಗಳಲ್ಲಿ ಸಾಮಾನ್ಯರು ಯಾವುದನ್ನು ಹೇಗೆ ಮತ್ತು ಏಕೆ ಆಯ್ದುಕೊಳ್ಳಬೇಕೆಂದು ಯಾರಾದರೂ ಕೇಳಿದರೆ, ಅದಕ್ಕೆ ಉತ್ತರಿಸುವುದು ಸ್ವಲ್ಪ ಕಷ್ಟವೇ. ಖಾಸಗೀಕರಣದಿಂದಾಗಿ ಸಂಪೂರ್ಣವಾಗಿ ವಾಣಿಜ್ಯೀಕರಣಗೊಂಡಿರುವ ವೈದ್ಯ ಶಿಕ್ಷಣ ಹಾಗೂ ವೈದ್ಯ ವೃತ್ತಿಗಳ ಇಂದಿನ ಪರಿಸ್ಥಿತಿಯಲ್ಲಿ ಇಂತಹಾ ಹಲವಾರು ಸಮಸ್ಯೆಗಳು ಇನ್ನಷ್ಟು ಜಟಿಲಗೊಳ್ಳಲಿರುವುದಂತೂ ದಿಟ.

ಲಸಿಕೆಗಳು ಮನುಕುಲಕ್ಕೆ ಯಾವ ಪ್ರಯೋಜನವನ್ನೂ ಮಾಡಿಲ್ಲ, ಅವುಗಳಿಂದಾಗಿ ಕೇವಲ ಹಾನಿಯಷ್ಟೇ ಆಗಿದೆ, ಅವುಗಳ ಸಂಶೋಧನೆಯಲ್ಲಿ ಕ್ರೌರ್ಯವೇ ತುಂಬಿದೆ ಎನ್ನುವ ಹೇಳಿಕೆಗಳು ಅಷ್ಟೊಂದು ಸಮಂಜಸವಲ್ಲ. (ಸಂಶೋಧನೆಯಲ್ಲಿ ನಡೆಸಲಾಗಿರುವ ಕ್ರೌರ್ಯವನ್ನು ಪರಿಗಣಿಸುವುದಾದರೆ ಯಾವ ರೋಗಕ್ಕೂ ಯಾವ ಔಷ್ಧವನ್ನೂ ತೆಗೆದುಕೊಳ್ಳುವಂತಿಲ್ಲ; ಗಿಡ ಮೂಲಿಕೆಗಳನ್ನು ಕೀಳುವುದೂ ಕ್ರೌರ್ಯವಲ್ಲವೆ?) ಸಿಡುಬು, ಪೋಲಿಯೋ, ನಾಯಿಕೆಮ್ಮು, ಡಿಫ್ತೀರಿಯಾ ಹಾಗೂ ಧನುರ್ವಾತ (ಟೆಟನಸ್)ಗಳ ವಿರುದ್ಧ ಜಯ ಸಾಧಿಸುವಲ್ಲಿ ಅವುಗಳ ವಿರುದ್ಧ ನೀಡಲಾಗುವ ಲಸಿಕೆಗಳ ಪಾತ್ರವು ಗಣನೀಯವಾದುದೆಂಬುದು ನಿಸ್ಸಂದೇಹವಾಗಿದೆ.[1-4] ಈ ಎಲ್ಲಾ ರೋಗಗಳು ಗಂಭೀರ ಸಮಸ್ಯೆಗಳಿಗೂ, ಪ್ರಾಣಹಾನಿಗೂ ಕಾರಣವಾಗಬಲ್ಲವು ಮಾತ್ರವಲ್ಲ, ಅವುಗಳ ಚಿಕಿತ್ಸೆಯು ಕಷ್ಟಕರ ಹಾಗೂ ಅತಿ ವೆಚ್ಚದಾಯಕವೂ ಹೌದು. ಆದ್ದರಿಂದ ನವಜಾತ ಶಿಶುಗಳಿಗೆ ಈ ನಾಲ್ಕು ರೋಗಗಳ (ಪೋಲಿಯೋ, ನಾಯಿಕೆಮ್ಮು, ಡಿಫ್ತೀರಿಯಾ ಹಾಗೂ ಧನುರ್ವಾತ) ವಿರುದ್ಧ ಲಸಿಕೆಗಳನ್ನು ಹಾಕಿಸುವುದೇ ಒಳ್ಳೆಯದು, ಇಲ್ಲದಿದ್ದರೆ ಅನಗತ್ಯವಾದ ಅಪಾಯವನ್ನು ಆಹ್ವಾನಿಸಿದಂತೆ ಆಗುತ್ತದೆ.

ಅದೇ ರೀತಿ, ಹುಚ್ಚುನಾಯಿ ಕಡಿತಕ್ಕೊಳಗಾದವರಿಗೆ ತಗಲುವ ಮಾರಣಾಂತಿಕವಾದ ರೇಬೀಸ್ ರೋಗದಿಂದ ಬದುಕಿ ಉಳಿಯುವುದು ಅತ್ಯಪರೂಪವಾಗಿದ್ದು, ಅದನ್ನು ತಡೆಯಲಿಕ್ಕೆ ಲಸಿಕೆಯೊಂದೇ ದಾರಿಯಾಗಿದೆ. ಇವಲ್ಲದೆ, ಕೆಲವೊಂದು ಭೂಪ್ರದೇಶಗಳಲ್ಲಿ ಮಾತ್ರ ಕಾಣ ಸಿಗುವ ಹಳದಿ ಜ್ವರ (Yellow Fever), ಜಾಪನೀಸ್ ಎನ್ಸೆಫಲೈಟಿಸ್, ಮಂಗನ ಕಾಹಿಲೆ ಇತ್ಯಾದಿಗಳ ವಿರುದ್ಧವೂ ಲಸಿಕೆಗಳಿಂದ ಪ್ರಯೋಜನಗಳಾಗಿವೆ.

ಇನ್ನುಳಿದ ಲಸಿಕೆಗಳ ಪ್ರಯೋಜನಗಳ ಬಗ್ಗೆ ಹಾಗೂ ನಮ್ಮ ದೇಶದಲ್ಲಿ ಅವುಗಳ ಅಗತ್ಯದ ನನಗೂ ಸಂದೇಹಗಳಿವೆ.

ಹೆಪಟೈಟಿಸ್ ಬಿ ಸೋಂಕು ರಕ್ತದ ಸಂಪರ್ಕದಿಂದಷ್ಟೇ ಹರಡುವುದಿದ್ದು, ಸರಳ ಸಂಪರ್ಕದಿಂದ ಸುಲಭವಾಗಿ ಹರಡುವುದಿಲ್ಲ.[5,6] (ಈ ಬಗ್ಗೆ ಲಸಿಕೆ ತಯಾರಕರ ವ್ಯತಿರಿಕ್ತವಾದ ಮಾಹಿತಿ ಇಲ್ಲಿದೆ [7]) ನಮ್ಮ ದೇಶದಲ್ಲಿ ಶೇ. ೨.೪ ರಷ್ಟು ಜನ ಹೆಪಟೈಟಿಸ್ ಬಿ ಉಳ್ಳವರಾಗಿದ್ದು,[8] ಅವರ ಜೊತೆ ರಕ್ತ ಸಂಪರ್ಕಕ್ಕೆ (ಚುಚ್ಚು ಸೂಜಿಗಳು, ಲೈಂಗಿಕ, ತಾಯಿಯಿಂದ ಮಗುವಿಗೆ) ಬರುವವರಿಗೆ ಅದು ಹರಡಬಹುದು. ಸಾಕಷ್ಟು ಮುನ್ನೆಚ್ಚರಿಕೆಯಿಂದ ಇದನ್ನೂ ತಡೆಯಲು ಸಾಧ್ಯವಿದೆ. ಒಂದು ವೇಳೆ ಹೆಪಟೈಟಿಸ್ ಬಿ ತಗಲಿದರೂ, ಶೇ. ೯೦ರಷ್ಟು ರೋಗಿಗಳು ತಂತಾನೇ ಗುಣ ಹೊಂದುತ್ತಾರೆ, ಇನ್ನುಳಿದವರಲ್ಲಿ ಸ್ವಲ್ಪಾಂಶ ರೋಗಿಗಳು ಕಾಲ ಕ್ರಮೇಣ ಯಕೃತ್ತಿನ ವೈಫಲ್ಯ ಯಾ ಕ್ಯಾನ್ಸರ್ ಗೆ ತುತ್ತಾಗಬಹುದು; ಇವರಲ್ಲೂ ಶೀಘ್ರ ರೋಗನಿದಾನದಿಂದ ಸೂಕ್ತ ಚಿಕಿತ್ಸೆಯನ್ನು ನೀಡಿದರೆ ಈ ಸಮಸ್ಯೆಗಳನ್ನು ತಡೆಯಬಹುದು. ಆದ್ದರಿಂದ, ಕುಟುಂಬದ ಸದಸ್ಯರಿಗೆ ಹೆಪಟೈಟಿಸ್ ಬಿ ಇದ್ದರೆ, ಅಥವಾ ಹೆಚ್ಚಾಗಿ ರಕ್ತದ ಸಂಪರ್ಕಕ್ಕೆ ಬರುವ ಸಾಧ್ಯತೆಗಳಿದ್ದರೆ (ವೈದ್ಯರು, ದಾದಿಯರು, ರಕ್ತನಿಧಿಯ ಸಿಬ್ಬಂದಿ, ಆಗಾಗ ರಕ್ತವನ್ನು ಪಡೆಯಬೇಕಾದ ಕಾಹಿಲೆಗಳಿರುವವರು, ಡಯಾಲಿಸಿಸ್ ಗೆ ಒಳಗಾಗುವವರು ಇತ್ಯಾದಿ) ಹೆಪಟೈಟಿಸ್ ಬಿ ಲಸಿಕೆಯನ್ನು ತೆಗೆದುಕೊಳ್ಳುವುದು ಒಳ್ಳೆಯದು.

ಕೆಪ್ಪಟೆ (Mumps), ದಡಾರ (Measles) ಮತ್ತು ಅಂತಹದೇ ಆದ ರುಬೆಲ್ಲಾ ಸೋಂಕುಗಳು ತನ್ನಿಂತಾನಾಗಿ ವಾರದೊಳಗೆ ಗುಣ ಹೊಂದುತ್ತವೆಯಾದ್ದರಿಂದ ಅವುಗಳ ವಿರುದ್ಧ ಲಸಿಕೆಯನ್ನು ಹಾಕಿಕೊಳ್ಳದಿದ್ದರೆ ಮಾರಣಾಂತಿಕವಾದ ಸಮಸ್ಯೆಗಳೇನೂ ಉಂಟಾಗವು. ಇವುಗಳ ವಿರುದ್ಧದ MMR ಲಸಿಕೆಯ ಬಗ್ಗೆಯೇ ಅತಿ ಹೆಚ್ಚು ವಿವಾದಗಳೂ ಎದ್ದಿವೆ.

ಇನ್ನು ಕೋಟಲೆ (Chicken pox), ಹೆಪಟೈಟಿಸ್ ಎ ಇತ್ಯಾದಿ ಲಸಿಕೆಗಳು ವ್ಯಾಪಾರದ ಸರಕುಗಳಷ್ಟೆ ಎನ್ನಬಹುದು.

ಕೆಲವು ಆಕರಗಳು

  1. http://www.phac-aspc.gc.ca/publicat/cig-gci/p01-02-eng.php 
  2. http://www.registerguard.com/csp/cms/sites/web/opinion/7335697-47/story.csp
  3. http://www.icddrb.org/pub/publication.jsp?classificationID=3&pubID=6526
  4. http://www.who.int/vaccine_safety/reports/june_2002/en/index.html
  5. http://www.hepb.org/hepb/transmission.htm
  6. http://www.cdc.gov/hepatitis/
  7. http://www.immunize.org/catg.d/p2100nrs.pdf
  8. http://medind.nic.in/ibv/t07/i9/ibvt07i9p663.pdf
Forums: 
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಚೆನ್ನಾದ ಲೇಖನ! ನಿಮ್ಮ ಬರಹ ನೋಡಿ ನಿಜವಾಗಿಯೂ ಸಂತಸ ಆಯ್ತು. ನನ್ನ ಮನಸ್ಸಿನಲ್ಲಿದ್ದ ಕೆಲವು ಸಂಶಯಗಳು ಕಡಿಮೆಯಾಗಿದೆ ಅನ್ನಬಲ್ಲೆ!

ಚೆನ್ನಾಗಿ ಬರೆದಿದ್ದೀರ,
"ಲಸಿಕೆಗಳು ಮನುಕುಲಕ್ಕೆ ಏನೂ ಮಾಡಿಲ್ಲ, ಇದರಿಂದ ಏನೂ ಪ್ರಯೋಜನವಾಗಿಲ್ಲ ಎನ್ನುವುದು ಸಮಂಜಸವಾಗಿಲ್ಲ. " ಇದನ್ನೇ ನಾನೂ ಅಭಿಪ್ರಾಯಪಡುತ್ತೇನೆ. ಹೆಪಟೈಟಿಸ್-ಬಿ-ಲಸಿಕೆ ಮಕ್ಕಳಿಗೆ ಕೊಡುವುದು ನಾನು ಒಪ್ಪುತ್ತೇನೆ, ಏಕೆಂದರೆ, ತಾಯಿಯಿಂದ ಮಗುವಿಗೆ ಬರುವ ಅವಕಾಶವಿರುವುದರಿಂದ, ಹಾಗಾಗಿ ಮಕ್ಕಳಿಗೆ ಬರುವ ಹೆಪಟೈಟಿಸ್ ಅನ್ನು ತಡೆಗಟ್ಟಿದೆ. ಈ ಲಸಿಕೆಯಿಂದ ಆಗುವ ದುಷ್ಪರಿಣಾಮಗಳು ತುಂಬಾ ಕಡಿಮೆ, ಬೆನೆಫಿಟ್ಸ್ ನ ನೋಡಿದರೆ. ಇಂತಹ ಸನ್ನಿವೇಶಗಳಲ್ಲಿ ಲಸಿಕೆ ಹಾಕುವುದು ಸಾರ್ವಜನಿಕ ಆರೋಗ್ಯ (ಪಬ್ಲಿಕ್ ಹೆಲ್ತ್) ದೃಷ್ಟಿಯಿಂದ ತುಂಬಾ ಒಳ್ಳೇದು.

ಹಾಗೂ ಇನ್ನೊಂದು ವಿಷಯ ಮರೆತುಹೋಗುವುದು ಇಲ್ಲಿ ಎಂದರೆ " ಒಂದು ಇಂಡೆಕ್ಸ್ ಕೇಸ್" ಎಷ್ಟು ಜನರಿಗೆ ಹರಡಬಹುದು? ಇನ್ಫೆಕ್ಟಿವಿಟಿ ರೇಟ್ ಯಾರೂ ಪರಿಗಣಿಸುತ್ತಿಲ್ಲ. Recently one patient with measles landed in Sanfrancisco airport from other country, By the time the diagnosis was made & patient was isolated (as soon as the patient landed ), this case had infected ( contracted) many others in the flight itself. If a small baby got infected, less than a year, could suffer from pneumonia, meningitis & more so if patient has any kind of immunodeficiency. Measles has been the cause of death for many kids in India & many developing countries. If the above patient had the immunization for Measles, could have prevented 20 other cases of measles. The logic is simple "these are communicable, contagious diseases, spreads fast & make the whole community sick with in few days.

ಲಸಿಕೆ ಬೇಡ ಎನ್ನುವವರು ಈ ವಿಷಯವನ್ನು ಪರಿಗಣಿಸುತ್ತಿಲ್ಲ. ಈ ರೋಗಗಳನ್ನು ಬರೀ ಲೈಫ್ ಸ್ಟೈಲ್ ಬದಲಾವಣೆಯಿಂದ, ಪ್ರಕೃತಿನಿಯಮಗಳಿಂದಷ್ಟೇ ಸುದಾರಿಸಲು ಸಾಧ್ಯವಿಲ್ಲ್. ಪಬ್ಲಿಕ್ ಹೆಲ್ತ್ ಅನ್ನೋ ಕಾಕಾನ್ಸೆಪ್ಟೇ ಇಲ್ಲ ಕೆಲವರಿಗೆ. ನಮ್ಮ ಪರಿಸರ ಆರೋಗ್ಯವಾಗಿದ್ದರೇನೇ ನಾವೂ ಆರೋಗ್ಯವಾಗಿರುವುದಲ್ಲವೆ? (ಅರ್ಥಾತ್ ನಮ್ಮ ಜೊತೆ ಶಾಲೆಗೆ ಹೋಗುವರು, ಕೆಲಸಮಾಡುವವರು, ಹೀಗೆ). ಆದ್ದರಿಂದ ಸಾರ್ವಜನಿಕ ಆರೋಗ್ಯ ತುಂಬಾ ಮುಖ್ಯವಾದುದು. ಅದನ್ನು ಕಾಪಾಡಿಕೊಳ್ಳುವುದಕ್ಕಾದರೂ ಪ್ರಯೋಜನ ಇರುವ, ಜಾಸ್ತಿ ದುಷ್ಪರಿಣಾಮವಿರದ ಲಸಿಕೆಗಳನ್ನು ಹಾಕಿಸುವುದೇ ಮೇಲು.

~ಮೀನಾ.

ಹೀಗೆ ಸಂಪದದಲ್ಲಿನ ವೈದ್ಯರುಗಳು ಪರಸ್ಪರ ಚರ್ಚಿಸುವುದರಿಂದ ಎಷ್ಟೋಂದು ವಿಷಯಗಳು ನಮ್ಮೆಲ್ಲರಿರೂ ತಿಳಿಯುತ್ತವೆ!! ಖುಷಿ ಆಗ್ತಿದೆ ಈ ಥರದ ಸಂವಾದಗಳು ನಡೆಯುತ್ತಿರುವುದು ಕಂಡು. ತುಂಬಾ ಮಾಹಿತಿಪೂರ್ಣ ಬರಹಗಳು.

ಎಲ್ಲರಿಗೂ ಧನ್ಯವಾದಗಳು.

ಗರ್ಭಿಣಿಯಲ್ಲಿ ನಿಯತವಾಗಿ ನಡೆಸುವ ಪರೀಕ್ಷೆಗಳಲ್ಲಿ ಹೆಪಟೈಟಿಸ್ ಬಿ ಪತ್ತೆಯಾದಲ್ಲಿ, ಹುಟ್ಟುವ ಮಗುವಿಗೆ ಖಂಡಿತವಾಗಿಯೂ ಹೆಪಟೈಟಿಸ್ ಬಿ ಇಮ್ಯುನೋಗ್ಲಾಬುಲಿನ್ ಹಾಗೂ ಲಸಿಕೆಗಳನ್ನು ಹಾಕಿಸಲೇಬೇಕೆನ್ನುವುದರಲ್ಲಿ ಎರಡು ಮಾತಿಲ್ಲ. ಆದರೆ ಎಲ್ಲಾ ನವಜಾತ ಶಿಶುಗಳಿಗೂ ಅದನ್ನು ಹಾಕಿಸಲೇಬೇಕು ಎನ್ನುವುದಕ್ಕೆ ಸಾಕಷ್ಟು ಕಾರಣಗಳು ನನಗಂತೂ ಮನವರಿಕೆಯಾಗಿಲ್ಲ. ಇನ್ನೊಂದು ವಿಷಯವನ್ನೂ ಇಲ್ಲಿ ಸೇರಿಸಬಯಸುತ್ತೇನೆ. ಹತ್ತು ವರ್ಷಗಳ ಹಿಂದೆ, ಭಾರತೀಯ ವೈದ್ಯಕೀಯ ಸಂಘದ ಮಂಗಳೂರು ಘಟಕದ ಆಶ್ರಯದಲ್ಲಿ ಸಾರ್ವಜನಿಕರಿಗೆ ಹೆಪಟೈಟಿಸ್ ಬಿ ಲಸಿಕೆಯನ್ನು ಹಾಕುವ ಹಲವಾರು ಶಿಬಿರಗಳನ್ನು ಏರ್ಪಡಿಸಲಾಗಿತ್ತು. ಇದಕ್ಕಾಗಿ, ಹೆಪಟೈಟಿಸ್ ಬಿ ಸೋಂಕು ಏಡ್ಸ್ ಗಿಂತಲೂ ಭೀಕರವಾದ ಕಾಹಿಲೆಯೆಂದೂ, ಆಟವಾಡುವಂತಹ ಸರಳ ಸಂಪರ್ಕಗಳಿಂದಲೂ ಅದು ಹರಡುತ್ತದೆಯೆಂದೂ, ಅದನ್ನು ತಡೆಯಲು ಎಲ್ಲರೂ ಲಸಿಕೆಯನ್ನು ಹಾಕಿಸಿಕೊಳ್ಳಬೇಕೆಂದು ವಿಶ್ವ ಆರೋಗ್ಯ ಸಂಸ್ಥೆಯು ಶಿಫಾರಿಸು ಮಾಡಿದ್ದು ಅದರಂತೆ ಆಯೋಜಿಸಲಾಗುತ್ತಿರುವ ಈ ಶಿಬಿರಗಳಲ್ಲಿ ಲಸಿಕೆಗಳನ್ನು ರಿಯಾಯಿತಿ ದರದಲ್ಲಿ ಒದಗಿಸಲಾಗುವುದೆಂದೂ ಕರಪತ್ರಗಳು ಮತ್ತು ಮಾಧ್ಯಮಗಳ ಮೂಲಕ ಪ್ರಚಾರ ಮಾಡಲಾಗಿತ್ತು, ಶಾಲೆ-ಕಾಲೇಜುಗಳ ಮೂಲಕವೂ ಅವನ್ನು ವಿತರಿಸಲಾಗಿತ್ತು. ಇದನ್ನು ನಾವು ಕೆಲವರು ವಿರೋಧಿಸಿದ್ದಲ್ಲದೆ, ವಿಶ್ವ ಆರೋಗ್ಯ ಸಂಸ್ಥೆಗೆ ಇ-ಪತ್ರವನ್ನು ಬರೆದು, ಅಂತಹ ಶಿಫಾರಸೇನೂ ಇಲ್ಲವೆಂದು ಅವರಿಂದ ಸ್ಪಷ್ಟೀಕರಣವನ್ನು ಪಡೆದು, ಮಾಧ್ಯಮಗಳ ಮೂಲಕ ವಿವರಗಳನ್ನು ಪ್ರಕಟಪಡಿಸಿದ ನಂತರ ಈ ಶಿಬಿರಗಳನ್ನು ನಿಲ್ಲಿಸಲಾಯಿತು.

ದಡಾರದಿಂದ ಅಪರೂಪಕ್ಕೊಮ್ಮೆ, ಗಂಭೀರವಾದ, ಮಾರಣಾಂತಿಕ ಸಮಸ್ಯೆಗಳು ಉಂಟಾಗುವುದು ನಿಜವಾದರೂ, ಮೂರು ವಿಧದ ಕೃಷಗೊಳಿಸಲಾದ ಜೀವಂತ ವೈರಾಣುಗಳನ್ನು ಹೊಂದಿರುವ ಎಂಎಂಆರ್ ಲಸಿಕೆಯ ಸುರಕ್ಷತೆಯ ಬಗ್ಗೆ ಸಾಕಷ್ಟು ಸಂದೇಹಗಳಿರುವುದೂ ಅಷ್ಟೇ ನಿಜವಾಗಿದೆ. ಈ ಬಗ್ಗೆ ಕೊಕ್ರೇನ್ ವಿಮರ್ಶೆಯಲ್ಲಿ ಹೀಗೆನ್ನಲಾಗಿದೆ: The design and reporting of safety outcomes in MMR vaccine studies, both pre- and post-marketing, are largely inadequate. The evidence of adverse events following immunisation with MMR cannot be separated from its role in preventing the target diseases.[ಇಲ್ಲಿದೆ: http://www.cochrane.org/reviews/en/ab004407.html] ಈ ಲಸಿಕೆಯ ಸುರಕ್ಷತೆಗೆ ಸಂಬಂಧಿಸಿದ ವಿವರಗಳ ಬಗ್ಗೆ ನನಗೆ ವಿಶೇಷವಾದ ಪರಿಣತಿಯಿಲ್ಲದಿರುವುದರಿಂದ ಹೆಚ್ಚೇನೂ ನಾನು ಹೇಳುವಂತಿಲ್ಲ; ಆದರೆ, ಮೂರು ಜೀವಂತ ವೈರಾಣುಗಳ ಮಿಶ್ರ ಲಸಿಕೆಯ ಬದಲಾಗಿ ಈ ಮೂರಕ್ಕೂ ಪ್ರತ್ಯೇಕ ಲಸಿಕೆಗಳನ್ನು ಒದಗಿಸುವುದು ಹಾಗೂ ದಡಾರದ ಲಸಿಕೆಯನ್ನು ಕಡ್ಡಾಯಗೊಳಿಸಿ ಉಳಿದೆರಡನ್ನು ಐಚ್ಛಿಕಗೊಳಿಸುವುದು ಸೂಕ್ತವೇನೋ ಎನ್ನುವುದು ನನ್ನ ಜಿಜ್ಞಾಸೆಯಷ್ಟೆ.

ಅದೇ ರೀತಿ, ನವಜಾತ ಶಿಶುಗಳಿಗೆ ನೀಡಲಾಗುತ್ತಿರುವ ಪ್ರತ್ಯೇಕ ಲಸಿಕೆಗಳನ್ನೆಲ್ಲ ಜೊತೆಗೂಡಿಸಿ ಬಹುರೋಗ ಲಸಿಕೆಯನ್ನು ಬಳಕೆಗೆ ತರುವ ದಿಸೆಯಲ್ಲಿ ಪ್ರಯತ್ನಗಳಾಗುತ್ತಿವೆ. ಇದನ್ನು ವೈದ್ಯಕೀಯ ಸಮುದಾಯ ಹಾಗೂ ಜನಸಾಮಾನ್ಯರೆಲ್ಲರೂ ಸೇರಿ ವಿರೋಧಿಸಬೇಕೆನ್ನುವುದು ನನ್ನ ಅಭಿಪ್ರಾಯವಾಗಿದೆ. ಉನ್ನತ ತಂತ್ರಜ್ಞಾನದ ಹೆಸರಲ್ಲಿ ಲಸಿಕೆ ತಯಾರಿಯನ್ನು ಕೇವಲ ಒಂದೆರಡು ಕಂಪೆನಿಗಳ ಏಕಸ್ವಾಮ್ಯತೆಗೆ ಒಳಪಡಿಸುವುದೇ ಇದರ ಹಿಂದಿರುವ ಉದ್ದೇಶವಾಗಿದೆ. ನಮ್ಮ ಸರಕಾರಗಳು ಅವನ್ನು ದುಬಾರಿ ಬೆಲೆತೆತ್ತು ಖರೀದಿಸಲೇಬೇಕಾದ ಒತ್ತಡಕ್ಕೆ ಸಿಲುಕುವುದು ಒಂದೆಡೆಯಾದರೆ, ಅಗತ್ಯವಿಲ್ಲದಿರುವ ಲಸಿಕೆಗಳನ್ನು ಹಾಕಿಸಿಕೊಳ್ಳಲೇ ಬೇಕಾದ ದುಸ್ಥಿತಿ ನಮ್ಮ ಶಿಶುಗಳದ್ದಾಗುತ್ತದೆ.

ನಿನ್ನೆ [ ೨೫-೦೨-೨೦೦೯] ನನ್ನ ಮಗಳನ್ನು ( ಅವಳಿಗೀಗ ೨ ತಿ೦ಗಳು) ಲಸಿಕೆ ಹಾಕಿಸಲು ವೈದ್ಯರ ಹತ್ತಿರ ಹೋಗಿದ್ದೆವು. ಅವರು ಒ೦ದು ದೊಡ್ದ ಪಟ್ಟಿಯನ್ನೆ ಕೊಟ್ಟಿದ್ದಾರೆ. ನೋಡಿದರೆ ಭಯವಾಗುತ್ತದೆ ( ಅಷ್ಟೊ೦ದು ಲಸಿಕೆಗಳು ಹಾಗೂ ಅದರ ಮೊತ್ತ ನೋಡಿ ). ಒ೦ದು ಬಾರಿ ಹೆಣ್ಣು ಮಕ್ಕಳಿಗೆ ( ಅದರಲ್ಲೂ ನನ್ನ ಹೆ೦ಡತಿಗೆ) ಎನಾದರೂ ಹೇಳಿದರೆ ಮುಗಿಯಿತು ಅದನ್ನು ಹೆಚ್ಚು ವಿಚಾರ ಮಾಡದೆ ಹಠ ಹಿಡಿಯುತ್ತಾರೆ. ವ್ಯೆದ್ಯರು ನಾಲ್ಕು ವರ್ಷಗಳ ಸ೦ಪೂರ್ಣ ಪಟ್ಟಿಯನ್ನು ಕೈಗಿಟ್ಟಿದ್ದಾರೆ. ಔಷಧಿಗಳನ್ನು ಮಾರಾಟ ಮಾಡುವ ಕ೦ಪನಿಯಲ್ಲಿ ಕೆಲಸ ಮಾಡುವ ಗೆಳೆಯನನ್ನು ಕೇಳಿದೆ, ಅವನು ನಿಮ್ಮ ಲೇಖಕರ ಅನಿಸಿಕೆಗಳನ್ನೆ ತಿಳಿಸಿದ್ದಾನೆ. ಆದರೂ ನಿಜವಾಗಲೂ ಬೇಕಾದ ಲಸಿಕೆಗಳು ಯಾವುವು? ಎ೦ಬುದು ಯಕ್ಷಪ್ರಶ್ನೆಯಾಗಿಯೆ ಉಳಿದಿದೆ?, ವೈದ್ಯ ವ್ರತ್ತಿಯಲ್ಲಿಲ್ಲದ ನಮಗೆ ಮೆಲ್ಕಾಣೆಸಿದ ಪದಗಳು ಕೇವಲ ಶಬ್ದಗಳಾಗಿಯೆ ಉಳಿದುಹೊಗುತ್ತವೆ. ಲಸಿಕೆ ಹಾಕಿಸದಿದ್ದರೆ ಮು೦ದೆ ಎನಾದರೂ ತೊ೦ದರೆಯಾಗುತ್ತನೋ ಎ೦ಬ ಭಯ ಹಾಗಾಗಿಯೆ ಎನೂ ಪ್ರಶ್ನೆ ಕೇಳದೆ ಹೂ೦ಗುಟ್ಟಬೆಕಾಗುತ್ತದೆ.

ವೈದ್ಯ ವ್ರತ್ತಿಯಲ್ಲಿರುವ ನಿಮ್ಮ೦ತಹವರು ಈ ಬಗ್ಗೆ ಜನ ಸಾಮಾನ್ಯರಿಗೆ ಅರ್ಥವಾಗುವ ಹಾಗೆ ಔಷದಗಳ ಹಾಗೂ ಸಮಯ ಪಟ್ಟಿ ಸಿದ್ದಪಡಿಸಿದರೆ ಅದೂ ನಿಜಕ್ಕೂ ಎಲ್ಲರಿಗೂ ಸಹಾಯವಾಗುತ್ತದೆ. ಈಗ ಸರ್ಕಾರಿ ಆಸ್ಪತ್ರೆಗಳಲ್ಲಿ ಅ೦ತಹ ಪಟ್ಟಿಯನ್ನು ನೀಡಿರುತ್ತಾರೆ ಆದರೆ ಅಲ್ಲಿ ಅವರು ಹೇಳಿದ ದಿನದ೦ದು "ಔಷದಿಗಳ ದಾಸ್ತಾನು ಮುಗಿದಿರುತ್ತದೆ" ಅಥವಾ "ಇನ್ನೂ ಸ್ಟಾಕ್ ಬ೦ದಿಲ್ಲ".

ಸ೦ಪೂರ್ಣ ವೈದ್ಯ ಸಮುದಾಯ ಇ ವಿಷಯದಲ್ಲಿ ಜನರೊಳಿತಿಗಾಗಿ ಒ೦ದುಗೂಡಿ ಸಮ೦ಜಸವಾದದ್ದನ್ನು ಪ್ರಕಟಣೆಗೊಳಿಸಬೇಕು.