ಆಟದಲ್ಲಷ್ಟೇ ಅಲ್ಲ. ಪಾಠದಲ್ಲೂ ಚೀನಾ ಭಾರತಕ್ಕಿಂತ ಮುಂದೆ!

0

ಒಂದು ದೇಶದ ವೈಜ್ನಾನಿಕ ಸಂಶೋಧನೆಯ ಗುಣ ಮಟ್ಟ ಎಷ್ಟು ಎನ್ನುವುದು ಆ ದೇಶದ ಮೂಲಭೂತ ಸಂಶೋಧನಾ ಲೇಖನಗಳು ಅದೆಷ್ಟು ಸಂಖ್ಯೆಯಲ್ಲಿ ಪ್ರಪಂಚದ ಪ್ರಮುಖ ಪ್ರತಿಷ್ಠಿತ ವಿಜ್ನಾನ ನಿಯತಕಾಲಿಕಗಳಲ್ಲಿಪ್ರಕಟವಾಗಿದೆ (number of publications) ಮತ್ತು ಅದರಲ್ಲೆಷ್ಟು ಲೇಖನಗಳು ಬೇರೆಯವರ ಸಂಶೋಧನೆಗಳಲ್ಲಿ ಉಲ್ಲೇಖಿಸಲ್ಪಟ್ಟಿದೆ ( Citation Index) ಎಂಬುದರ ಮೇಲೆ ನಿರ್ಭರವಾಗುತ್ತದೆ. ಅನೇಕ ವರ್ಷಗಳಿಂದ ಜಾಗತಿಕ ಮಟ್ಟದಲ್ಲಿ ಭಾರತೀಯ ವೈಜ್ನಾನಿಕ ಸಂಶೋಧನಾ ಕೊಡುಗೆ ಕ್ರಮೇಣ ಕಡಿಮೆಯಾಗುತ್ತಿದ್ದು, ಮುಂದುವರೆದ ದೇಶಗಳ ತುಲನೆಯಲ್ಲಿ ಹಾಗಿರಲಿ, ಹಲವೇ ವರ್ಷಗಳ ಹಿಂದೆ ಒಂದೇ ಮಟ್ಟದಲ್ಲಿದ್ದ ಚೀನಾ, ದಕ್ಷಿಣ ಕೊರಿಯಾ, ಮತ್ತು ಬ್ರೆಝಿಲ್ ದೇಶಗಳಿಗಿಂತಲೂ ತುಂಬಾ ಹಿಂದುಳಿದಿದೆ.

ಭಾರತದ National Institute of Science Technology and Developmental Studies( NISTADS) ಹಮ್ಮಿಕೊಂಡ ಇಪ್ಪತ್ತು ದೇಶಗಳ ಅಧ್ಯಯನವೊಂದರ ಪ್ರಕಾರ 1996 ರಲ್ಲಿ ಭಾರತ 13ನೇ ಸ್ಥಾನದಲ್ಲಿತ್ತು. ಅದೇ ವರ್ಷ ಚೀನಾ 9ನೇ ಸ್ಥಾನದಲ್ಲಿತ್ತು.

2006ನೇ ವರ್ಷದಲ್ಲಿ ಭಾರತ 10ನೇ ಸ್ಥಾನ ಗಳಿಸಿದರೆ, ಚೀನಾ ಬಹಳ ಮುಂದುವರೆದು 2 ನೇ ಸ್ಥಾನ ಗಳಿಸಿಕೊಂಡಿದೆ. ಈ ಅಧ್ಯಯನದ ಪ್ರಕಾರ ಈ ಹತ್ತು ವರ್ಷಗಳಲ್ಲಿ ಚೀನಾ ವರ್ಷಂಪ್ರತಿ 20.74 % ಪ್ರಗತಿ ತೋರಿದರೆ ಭಾರತ ಕೇವಲ 7.02% ಪ್ರಗತಿ ಸಾಧಿಸಿತು. ಭಾರತದ ತುಲನೆಯಲ್ಲಿ ಹೆಚ್ಚಿನ ಪ್ರಗತಿ ಸಾಧಿಸಿದ ರಾಷ್ಟ್ರಗಳು - ದಕ್ಷಿಣ ಕೊರಿಯಾ 14.16% ಹಾಗೂ ಬ್ರೆಝಿಲ್ 12.04% .

NISTADSನ ಪ್ರೊ. ಬಿ. ಎಮ್. ಗುಪ್ತಾರವರ ಪ್ರಕಾರ ಚೀನಾಕ್ಕೆ ಸರಿಸಮ ಬರಬೇಕಾದರೆ ಭಾರತ 2010ರ ವೇಳೆಗೆ ತನ್ನ ಸಂಶೋಧನಾ ಪ್ರಕಟಣೆಯ ಭರವನ್ನು ವರ್ಷಂಪ್ರತಿ 30% ಮಟ್ಟಕ್ಕೆ ಏರಿಸಬೇಕಾಗುತ್ತದೆ. ಇಲ್ಲವಾದಲ್ಲಿ ನಮ್ಮಿಬ್ಬರ ನಡುವಣ ಕಂದರ ವರ್ಷೇ ವರ್ಷೇ ಇನ್ನೂ ಹೆಚ್ಚಾಗುತ್ತಾ ಹೋಗುತ್ತದೆ.

SCOPUS ಎಂಬ ಮತ್ತೊಂದು ಅಧ್ಯಯನದ ಪ್ರಕಾರ ಜಾಗತಿಕ ಸಂಶೋಧನೆಗೆ ಭಾರತದ ಕೊಡುಗೆ ಕೇವಲ 2.4%. ಅದೇ ಚೀನಾದ ಕೊಡುಗೆ 10.49%, ಅಂದರೆ ನಮಗಿಂತ ನಾಲ್ಕುಪಟ್ಟು ಹೆಚ್ಚು.

ಅಮೇರಿಕದ Office of Naval Research ವಿಜ್ನಾನಿ ರೊನಾಲ್ ಕೋಸ್ಟಾಫ್ ಎಂಬುವರ ಅಧ್ಯಯನದ ಪ್ರಕಾರ 1980ರಲ್ಲಿ ಭಾರತ ಚೀನಾಗಿಂತ 14 ಪಟ್ಟು ಜಾಸ್ತಿ ಲೇಖನಗಳನ್ನು ಪ್ರಕಟಿಸುತ್ತಿತ್ತು. 1995ರ ವೇಳೆಗೆ ಎರಡೂ ದೇಶಗಳು ಒಂದೇ ಮಟ್ಟ ತಲುಪಿದ್ದವು. ಆದರೆ 2005ರ ವೇಳೆಗೆ ಚೀನಾ ಭಾರತಕ್ಕಿಂತ ಮೂರು ಪಟ್ಟು ಹೆಚ್ಚು ಪ್ರಕಟಣೆಗಳಿಂದ ಬಹಳ ಮುಂದುವರೆದಿತ್ತು. ಎಂದರೆ ಚೀನಾ ಕೇವಲ ಇಪ್ಪತ್ತೈದು ವರ್ಷಗಳಲ್ಲಿ ತನ್ನ ವಿಜ್ನಾನದ ಜಾಗತಿಕ ಕೊಡುಗೆಯನ್ನು ಸುಮಾರು 40 ಪಟ್ಟು ಹೆಚ್ಚಿಸಿದಂತಾಯಿತು. ಭಾರತೀಯರಿಗಿದ್ದಷ್ಟು ಇಂಗ್ಲೀಷ್ ಭಾಷೆಯ ಜ್ನಾನದ ಅನುಕೂಲ ತಮಗಿಲ್ಲದಿದ್ದಾಗ್ಯೂ ಚೀನಾ ದೇಶದ ವಿಜ್ನಾನಿಗಳು ಜಾಗತಿಕ ಮಟ್ಟದಲ್ಲಿ ತಮ್ಮ ವಿಜ್ನಾನದ ಕೊಡುಗೆಯ ಸಂಖ್ಯೆ ಮತ್ತು ಗುಣಮಟ್ಟ ಇಷ್ಟರಮಟ್ಟಿಗೆ ಹೆಚ್ಚಿಸಿದ್ದು ನಿಜಕ್ಕೂ ಶ್ಲಾಘನೀಯ.

ಪ್ರೊ. ಸಿ. ಎನ್. ಆರ್. ರಾವ್‍ರಂತಹ ಮೇಧಾವಿ ವಿಜ್ನಾನಿಗಳನ್ನು ತನ್ನ ಪ್ರಧಾನ ಸಲಹೆಗಾರರಾಗಿ ನೇಮಿಸಿಕೊಂಡಿರುವ ಭಾರತ ಸರ್ಕಾರ, ಕಾಲ ಕಾಲಕ್ಕೆ ಅವರಿತ್ತ ಎಚ್ಚರಿಕೆ, ಸಲಹೆ ಮತ್ತು ಸೂಚನೆಗಳನ್ನು ಗಣನೆಗೆ ತೆಗೆದುಕೊಳ್ಳದಿರುವುದು ಒಂದು ಮಹಾದುರಂತವೇ ಸರಿ.

ನಮ್ಮ ವಿಜ್ನಾನ ಮತ್ತು ತಂತ್ರಜ್ನಾನ ವಿಭಾಗದ ಮಂತ್ರಿಮಹೋದಯ ಕಪಿಲ್ ಸಿಬಾಲ್ ಮಾತ್ರ “ಇದರಲ್ಲಿ ಆಶ್ಚರ್ಯವೇನಿದೆ? ನಮ್ಮಲ್ಲಿ ವೈಜ್ನಾನಿಕ ಸಂಶೋಧನೆಗೆ ಜಿ.ಡಿ.ಪಿಯ ಕೇವಲ 0.8% ಖರ್ಚು ಮಾಡುತ್ತೇವೆ. ಇದರ ತುಲನೆಯಲ್ಲಿ ಚೀನಾ 1.23% ಹಣ ವ್ಯಯ ಮಾಡುತ್ತದೆ. ಎಲ್ಲಿಯವರೆಗೂ ಪ್ರೈವೇಟ್ ರಿಸರ್ಚ್ ಮತ್ತು ವಿಶ್ವವಿದ್ಯಾನಿಲಯಗಳು ಹುಟ್ಟಿಕೊಳ್ಳುವುದಿಲ್ಲವೋ ಈ ಸ್ಥಿತಿ ಇದೇ ರೀತಿ ಮುಂದುವರೆಯುವುದು ಖಂಡಿತ” ಎಂದು ಕೈ ಕೊಡವಿಕೊಂಡಿದ್ದಾರೆ.

ಇಂತಹ ಧುರೀಣರ ಮುಖಂಡತ್ವದಲ್ಲಿ ನಮ್ಮ ದೇಶದ ಭವಿಷ್ಯವದೇನಿದೆಯೋ ಆ ದೇವರೇ ಬಲ್ಲ.

- ನವರತ್ನ ಸುಧೀರ್
*********************************************************************
ಮೊದಲ ಬಾರಿಗೆ ಈ ಲೇಖನ thatskannada.comನಲ್ಲಿ ೮-೦೯-೨೦೦೮ ರಂದು ಪ್ರಕಟವಾಯಿತು.
http://thatskannada.oneindia.in/news/2008/09/08/china-way-ahead-of-india...

Forums: 
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.