ಬುದ್ಧಿಮತ್ತೆ ಮತ್ತು ಪ್ರಬುದ್ಧತೆ

1

ಮಾನವ ಪ್ರಾಣಿಯೊಂದಕ್ಕೆ ಎಷ್ಟೇ ಬುದ್ಧಿವಂತಿಕೆಯಿದ್ದರೇನು; ಪ್ರಬುದ್ಧತೆಯಿಲ್ಲದಿದ್ದರೆ ಅದು ಸಮಾಜಕ್ಕೆ ಯಾವ ರೀತಿಯಿಂದಲೂ ಪ್ರಯೋಜನಕ್ಕೆ ಬರುವುದಿಲ್ಲ; ಅತಿಯಾದರೆ ಮತ್ತೂ ಕ್ಷೋಭೆಯನ್ನೇ ತಂದೀತು. ಇದು ಸತ್ಯದಲ್ಲಿ ಸತ್ಯ. ಆದರೆ ಈ ಸತ್ಯವನ್ನು ಹೇಳುತ್ತಲೇ, ಮಹಾ ಮುತ್ಸದ್ದಿಯೊಬ್ಬರು, ಇದಕ್ಕೆ ತಾವೇ ಉದಾಹರಣೆಯಾಗಿಹೋದದ್ದು ವಿಪರ‍್ಯಾಸ!
ಭ್ರಷ್ಟಾಚಾರದ ಆರೋಪ ರಾಜಕಿಯ ಮುಖಂಡರ ಮೇಲೆ ಇದ್ದದ್ದೇ. ವಿಶೇಷವಿಲ್ಲ. ಪರ ಪಕ್ಷದವರೋ, ಸ್ವಯಂ ಪಕ್ಷದವರೋ, ಅದನ್ನು ಅವಶ್ಯ ಹೊರೆಸುತ್ತಾರೆ. ಬ್ಲ್ಯಾಕ್‌ ಮೇಲಿಂಗ್ ತಾನೇ, ಇಲ್ಲಿನ ರಾಜಕೀಯ? ಅದು ಬಿಡಿ. ಸತ್ತ ಮಹಾತ್ಮರೊಬ್ಬರನ್ನು, ಜೀವಂತ ಪಾತಕಿಯೊಬ್ಬನೊಡನೆ, ಹೊತ್ತಲ್ಲದ ಹೊತ್ತಿನಲ್ಲಿ, ಹೋಲಿಸುವುದು, ಅವಿವೇಕದ ಪರಮಾವಧಿ.
ಚುನಾವಣೆ ಹತ್ತಿರವಾಗುತ್ತಿದೆ. ಓಲೈಕೆಯಿಂದ ವೋಟ್‌ಬ್ಯಾಂಕ್ ಸೃಷ್ಟಿಸಿಕೊಂಡು ಮೆರೆದಾಡುತ್ತಿರುವ ಕಾಂಗ್ರೆಸ್ ವಿರುದ್ಧ ಬಹುಸಂಖ್ಯಾತರನ್ನು ಸಂಘಟಿಸಹೊರಟ ಪಕ್ಷ, ಒಗ್ಗಟ್ಟು-ಒಮ್ಮತಗಳ ಗಂಧ-ಗಾಳಿಯೇ ಇಲ್ಲದೆ, ತನ್ನ ಸ್ತಿತ್ವಕ್ಕಾಗಿಯೇ, ವಿರೋಧಾಭಾಸ ವ್ಯಕ್ತಿತ್ವಗಳನ್ನು ಓಲೈಸಿಟ್ಟುಕೊಳ್ಳಬೇಕಾದ ಶೋಚನೀಯ ಸ್ಥಿತಿಗೆ ಬಂದಿದೆ.
ಮತದಾರ ಪ್ರಭುವಾದರೂ ಈಗ ಪ್ರಬುದ್ಧತೆ ತೋರಬೇಕು. ಲೋಕಸಭಾ ಚುನಾವಣೆ ಮಟ್ಟಿಗೆ, ಒಕ್ಕೂಟ-ತಿಕ್ಕೂಟಗಳೆಂಬ ಬೆರಕೆ ತೆವಲುಗಳಿಗೆ ಸೊಪ್ಪುಹಾಕಬಾರದು; ಅಭ್ಯರ್ಥಿಯ ವೈಯಕ್ತಿಕ ಗುಣಾವಗುಣಗಳ ದಾಕ್ಷಿಣ್ಯವೇ ಬೇಡ; ಎರಡು ಪಕ್ಷಗಳ ಪೈಕಿ ಒಂದನ್ನಾರಿಸಲಿ: ಒಕ್ಕೂಟದ ವ್ಯಭಿಚಾರದಿಂದಾಗಿ, ಕ್ಷೇತ್ರದಲ್ಲಿ ಆ ಪಕ್ಷದ ಅಭ್ಯರ್ಥಿ ಇಲ್ಲದಿದ್ದರೆ ತೆಪ್ಪಗೆ ಮನೆಯಲ್ಲಿದ್ದುಬಿಡಲಿ; ಆ ಮೂಲಕವಾದರೂ ಸಂಸತ್ತಿಗೆ ಕಿಂಚಿತ್ ಮರ‍್ಯಾದೆ ಉಂಟಾದೀತು.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.