ಅಂಗವಿಕಲರು ವಿಕಲಚೇತನರೇ?

4.533335

                                              "ಓ ನನ್ನ ಚೇತನ
                                               ಆಗು ನೀ ಅನಿಕೇತನ.."


ಮತ್ತೆ ಮತ್ತೆ ಹಾಡಿಸಿಕೊಳ್ಳುವ, ಎಂತಹ ವೈಫಲ್ಯದ ಪರಿಸ್ಥಿತಿಯಲ್ಲೂ ವ್ಯಕ್ತಿಯನ್ನು ಹುರಿದುಂಬಿಸಬಲ್ಲ, ಹುಲುಮಾನವನಿಂದ ವಿಶ್ವಮಾನವನನ್ನಾಗಿ ರೂಪಿಸಬಲ್ಲ ಅದ್ಭುತವಾದ ಸಾಲುಗಳು! ಆದರೆ ನಮ್ಮ ಆಧುನಿಕ ನುಡಿತಜ್ಞರ ಪ್ರಕಾರ, ಅಂಗವಿಕಲ == ವಿಕಲಚೇತನ (== physically challenged == specially abled). ಆಹಾ! ಎಂತಹ ಭಾಷಾ ಪ್ರಾವೀಣ್ಯತೆ! ನಿಜಕ್ಕೂ ಕುವೆಂಪು ಚೇತನ ಇಂದಿಗೆ ನಿರ್ನಾಮವಾಯಿತು. "ಚೇತನ" ವನ್ನು ನಾಮಪದವಾಗಿ ಬಳಸಿದಾಗ - ಮನಸ್ಸು, ಬುದ್ಧಿ, ಪ್ರಜ್ಞೆ ಎಂತಲೂ, ಗುಣವಾಚಕವಾಗಿ ಬಳಸಿದಾಗ - ಇಂದ್ರಿಯಗ್ರಹಣ ಶಕ್ತಿಯುಳ್ಳ, ಪ್ರಜ್ಞೆಯುಳ್ಳ, ಸಜೀವವಾದ ಎಂಬ ಅರ್ಥವೆಂದು ವೆಂಕಟಸುಬ್ಬಯ್ಯನವರ ಪ್ರಿಸಂ ನಿಘಂಟು ಹೇಳುತ್ತದೆ. ಹೀಗಿರಲು, ಕೆಲವು ಅಂಗಗಳು ಊನವಾಗಿರುವವ ವಿಕಲಚೇತನ!! ಎಷ್ಟು ಅರ್ಥಹೀನ ಹಾಗೂ ಅಮಾನವೀಯ! ಬಹುಶ: ಆ ಭಾಷಾಪರಿಣತರೊಮ್ಮೆ ಅಂತರರಾಷ್ಟ್ರೀಯ ಅಂಗವಿಕಲರ ಒಲಂಪಿಕ್ಸ್ (IWAS - 2009) ಕ್ರೀಡಾಕೂಟವನ್ನೊಮ್ಮೆ ವೀಕ್ಷಿಸಿದ್ದರೆ ಇಂತದೊಂದು ಪದದ ರಚನೆಯೇ ಆಗುತ್ತಿರಲಿಲ್ಲವೇನೋ!
ರಗ್ಬಿ, ಟೇಬಲ್ ಟೆನ್ನಿಸ್, ವಾಲಿಬಾಲ್, ಶಾಟ್ಪುಟ್, ಜಾವ್ಲಿನ್, ಡಿಸ್ಕ್ ಥ್ರೋ, ಆರ್ಚರಿ, ಲಾಂಗ್ ಜಂಪ್, ಹೈಜಂಪ್, ಈಜು, ಅಥ್ಲೆಟಿಕ್ಸ್............ ಕ್ರೀಡೆಗಳ ಪಟ್ಟಿ ಬೆಳೆಯುತ್ತದೆ. ಆಟಗಾರರಿಗಿದ್ದ ಅರ್ಹತೆ, ಕೈಗಳಿಲ್ಲ, ಕಾಲ್ಗಳಿಲ್ಲ, ಬೆರಳುಗಳಿಲ್ಲ, ಸೊಟ್ಟ ಕಾಲುಗಳು, ಸ್ವಾಧೀನವಿಲ್ಲದ ಕೈಗಳು, ಸೊಂಟ.....ಆದರೆ ಅವರಲ್ಲಿದ್ದ ಆ sportsmanship? ಆ ಹೋರಾಡುವ ಛಾತಿ? ಸಾಧಿಸುವ ಛಲ? ಜೀವನೋತ್ಸಾಹ? ಕ್ಷಮಿಸಿ, ಎಲ್ಲ ಸರಿಯಿರುವ ನಮ್ಮಲ್ಲಿಲ್ಲ. ಚಿನ್ನದ ಪದಕವನ್ನು ಪಡೆಯಲು ಚಿಗರೆಯಂತೆ ಜಿಗಿಯುತ್ತಾ ಮೆಟ್ಟಿಲಿಳಿದು ಬರುತ್ತಿದ್ದಾಳೆ ಆ ಚೀನಾದ ಯುವತಿ. ಆಕೆಗೆ ಎರಡೂ ಕಾಲುಗಳಿಲ್ಲ ಎಂದು ಯಾರೂ ಹೇಳಲು ಸಾಧ್ಯವಿಲ್ಲ! ಮಡಿಚಲೇ ಆಗದ ಒಂದು ಕಾಲು, ಸ್ವಾಧೀನವೇ ಇಲ್ಲದ ಒಂದು ಕೈ. ೫ ಸೆಟ್ ಗಳ ತನಕ ನಿಲ್ಲದ ಹೋರಾಟ, ಚೀನಾದ ಟೇಬಲ್ ಟೆನ್ನಿಸ್ ಆಟಗಾರನ ಪರಿಯದು. ಅಷ್ಟೇ ರೋಚಕ ಪ್ರತಿಸ್ಪರ್ಧೆಯನ್ನೊಡ್ಡಿದವನು, ಒಂದು ಕೋಲಿನ ಸಹಾಯದಿಂದ ನಿಂತು, ಉಳಿದಿರುವ ಒಂದರ್ಧ ಕೈಯಲ್ಲಿ ಸರ್ವ್ ಮಾಡುತ್ತಾ ಆಡಿದ ಭಾರತೀಯ!  ಸ್ಟೂಲ್ ಮೇಲೆ ಕೂತು ಅಷ್ಟು ದೂರ ಜಾವ್ಲಿನ್ ಎಸೆದ ಆ ಪೋರಿಯನ್ನು, ಮರಳಿ ಆಕೆಯ ಕುರ್ಚಿಯ ಮೇಲೆ ಕೂರಿಸಿದಾಗಲೇ ತಿಳಿದದ್ದು ಆಕೆಯ ದೇಹದ ಕೆಳಾರ್ಧ ಸ್ವಾಧೀನದಲ್ಲಿಲ್ಲವೆಂದು! ಇವರುಗಳನ್ನೇ ವಿಕಲಚೇತರನರೆಂದಿದ್ದು?? ಇಷ್ಟಕ್ಕೂ ಇಂತದೊಂದು ಕ್ರೀಡಾಕೂಟದ ಪರಿಕಲ್ಪನೆ ಶುರುವಾಗಿದ್ದೇ, "ವಿಕೃತ ಚೇತನ"ರ ಯುದ್ಧದಾಹಕ್ಕೆ ಬಲಿಯಾಗಿ ಅಂಗವಿಕಲರಾದವರ ಪುನಶ್ಚೇತನದ ನಿಟ್ಟಿನಲ್ಲಿ.ಗೆಳೆಯ ಗೆದ್ದಾಗ ಚಪ್ಪಾಳೆ ಹೊಡೆದು ಹರ್ಷಿಸಲು ಕೈಗಳಿಲ್ಲ, ಓಡಿ ಹೋಗಿ ತಬ್ಬಿಕೊಳ್ಳಲು ಕಾಲುಗಳಿಲ್ಲ. ಆದರೂ ಕೂಗುತ್ತಾ, ಕಿರಿಚುತ್ತಾ, ಕಣ್ಣುಗಳಲ್ಲೇ ತಮ್ಮದೇ ರೀತಿಯಲ್ಲಿ ಅಭಿವ್ಯಕ್ತಿಸುತ್ತಾ ಅವರನ್ನವರೇ ಅಭಿನಂದಿಸುತ್ತಿದ್ದ ರೀತಿ....! ಅಭಿನಂದಿಸಲು ಹೊರಗಿನ ಪ್ರೇಕ್ಷಕರಾದರೂ ಯಾರಿದ್ದರು ಬಿಡಿ. ರಾತ್ರಿಯೇ ಸರತಿಯಲ್ಲಿ ನಿಂತು ೩ ದಿನಗಳ ನಂತರದ ಮ್ಯಾಚಿಗೆ ನೂಕುನುಗ್ಗಲಿನಲ್ಲಿ ಟಿಕೆಟ್ ತೆಗೆದುಕೊಂಡು ಕ್ರೀಡಾಂಗಣ ಭರ್ತಿಮಾಡುವ ಜನ, ಉಚಿತಪ್ರವೇಶವಿದ್ದರೂ, ಇಂತಹ ಕ್ರೀಡಾಕೂಟಗಳಿಗೆ ಬಾರದಿರವುದು ಆಶ್ಚರ್ಯವೇ ಆಗದಷ್ಟರ ಮಟ್ಟಿಗೆ ನಮಗೆ ಅಭ್ಯಾಸವಾಗಿಬಿಟ್ಟಿದೆ. ಆಯೋಜಕರು ಹೇಳುತ್ತಿದ್ದರು, "ಭಾರತದಲ್ಲಿ ಜನ ಬಂದರೆ ಪವಾಡ, ಚೀನಾದಲ್ಲಿ ಜನ ಬಾರದಿದ್ದಿದ್ದರೆ ಪವಾಡ! ಆದರೆ ಅಲ್ಲಿಯೂ ಪವಾಡವಾಗಿರಲಿಲ್ಲ, ಇಲ್ಲಿಯೂ ಪವಾಡವಾಗಲಿಲ್ಲ!" ಒಮ್ಮೆ ನಮ್ಮ ಪತ್ರಿಕೆಗಳ ಕ್ರೀಡಾಪುಟವನ್ನೊಮ್ಮೆ ನೋಡಿದರೆ ಸತ್ಯ ಕಣ್ಣಿಗೆ ರಾಚುತ್ತದೆ. ಕೆಲಕ್ರೀಡೆಗಳ ವರದಿಗಳು ಪುಟದ ತುಂಬಾ, ಇನ್ಕೆಲವು ಮೂಲೆಗುಂಪು. ಪ್ರೆಸ್ ಮೀಟ್ ಕರೆದು ಮಾಹಿತಿಯನ್ನು ಧಾರಾಳವಾಗಿ ನೀಡಿದ್ದರೂ, ಈ ಕ್ರೀಡಾಕೂಟದ ಕುರಿತು ಪತ್ರಿಕೆಗಳಲ್ಲಿ ಬಂದದ್ದೆಷ್ಟು? ಜನರಿಗೆ ತಲುಪಿದ್ದೆಷ್ಟು? ನಾಯಿ ಬಾಲ ಡೊಂಕು, ಸರಿ, ಚಿಕ್ಕದಾಗಿ ಹಾಕಿದ್ದರೂ ಪರವಾಗಿಲ್ಲ, ಆದರೆ ವಿಕಲಚೇತನರೆಂದು ಯಾಕೆ ಅವಮಾನ ಮಾಡುತ್ತೀರಿ? IWAS (International wheelchair & Amputees Sports Federation) World Games 2009 ಅಂದರೆ "ಅಂತರರಾಷ್ಟ್ರೀಯ ವಿಕಲಚೇತನರ ಕ್ರೀಡಾಕೂಟ" ಎಂತಲೇ??!!ಪಾಶ್ಚಿಮಾತ್ಯ, ಅಭಿವೃಧ್ಧಿ ಹೊಂದಿರುವ ದೇಶಗಳಲ್ಲಿರುವ ಶೇಕಡಾ ಒಂದರಷ್ಟು ಸವಲತ್ತುಗಳು ಇವರಿಗೆ ನಮ್ಮ ದೇಶದಲ್ಲಿ ಇಲ್ಲ. ಸಾರ್ವಜನಿಕ ಸಾರಿಗೆಯಲ್ಲಿ, ಆಸ್ಪತ್ರೆಗಳಲ್ಲಿ, ಅಂಗಡಿ ಮುಗ್ಗಟ್ಟುಗಳಲ್ಲಿ, ಚಲನಚಿತ್ರ ಮಂದಿರಗಳಲ್ಲಿ ಇವರಿಗೆ ಅನುಕೂಲವಾಗುವಂತಹ ವ್ಯವಸ್ಥೆ ಎಷ್ಟಿದೆ ನಮ್ಮಲ್ಲಿ? ಬಸ್ ಗಳಲ್ಲಿ ಮೊದಲೆರಡು ಸೀಟ್ ರಿಸರ್ವೇಷನ್ ನೋಡಿರುತ್ತೇವೆ. ಅಷ್ಟೆತ್ತರ ಮೆಟ್ಟಿಲುಗಳನ್ನು ಆ ಜನಗಳ ತಿಕ್ಕಾಟದ ನಡುವೆಯೂ ಹತ್ತಿಬಂದು ಕೂರುತ್ತಾರೆ, "ವಿಕಲಚೇತನರಿಗೆ" ಎಂಬ ಹೆಸರಿನಡಿಯಲ್ಲಿ!! ಸರ್ಕಾರವನ್ನೂ, ವ್ಯವಸ್ಥೆಯನ್ನೂ ದೂರುವ ಮೊದಲು, ನಮ್ಮ ಧೋರಣೆಯನ್ನು ಬದಲಿಸಿಕೊಳ್ಳುವ ಜರೂರತ್ತಿದೆ. ನಮ್ಮ ದೈನಂದಿನ ಜೀವನದಲ್ಲಿ ಕ್ಷುಲ್ಲಕವೆನಿಸುವ ಎಷ್ಟೋ ಕೆಲಸಗಳು ಅವರಿಗೆ ಮಹತ್ವದ್ದಾಗಿರುತ್ತವೆ ಎನ್ನುವ ಅರಿವು ನಮಗಿರಬೇಕು. "ಪಾಪ.." ಮೊದಲು ಈ ಪದವನ್ನು ಇವರ ಮುಂದೆ ಪ್ರಯೋಗಿಸುವುದನ್ನು ನಿಲ್ಲಿಸಿ ದಯವಿಟ್ಟು! ನಮ್ಮ ಕರುಣೆಯ ಅಗತ್ಯ ಅವರಿಗಿಲ್ಲ. ಅವರ ನ್ಯೂನ್ಯತೆಯನ್ನು ಪದೇಪದೇ ನೆನಪಿಸಿ ಅವರ ಅಂತ:ಶಕ್ತಿಯನ್ನು ಕೊಲ್ಲುವ ಕೆಲಸ ಮೊದಲು ನಿಲ್ಲಬೇಕಿದೆ. "ಮೊದ್ಲೇ ಕೈಯಿಲ್ಲ, ನೀನ್ಯಾಕೆ ಬರ್ಲಿಕ್ಕೆ ಹೋದೆ, ನಾನೇ ತಂದುಕೊಡ್ತಾ ಇರ್ಲಿಲ್ವ?", "ಕೈಕಾಲಿಲ್ಲ, ಆ ಕುರ್ಚಿ ಮೇಲೆ ಕುತ್ಕೊಂಡು ಶಾಪಿಂಗ್ ಮಾಡೋ ಹುಚ್ಚು ಏನು ಇವ್ಳಿಗೆ, ಯಾರ್ಗಾದ್ರು ಹೇಳಿದ್ರೆ ತಂದ್ಕೊಡ್ತಾ ಇರ್ಲಿಲ್ವ?... ಇಂತಹ ಪ್ರಜ್ಞಾಹೀನ ಮಾತುಗಳನ್ನಾಡುವವರಿಗೆ "ವಿಕಲ ಚೇತನ" ಎಂಬ ಪದ ಸರಿಯಾಗಿ ಒಪ್ಪುತ್ತದೆ. ಒಂದು ದಿನ ಬಿಎಮ್ಟಿಸಿ ಬಸ್ಸಿನಲ್ಲಿ, ಕಾಲು ಸ್ವಲ್ಪ ಊನವಾಗಿದ್ದ ಮಹಿಳೆಯೊಬ್ಬರು ಹತ್ತಿದ್ದರು. ಅವರಿಗಾಗಿ ಕಾದಿರಿಸಲಾಗಿದ್ದ ಸೀಟಿನಲ್ಲಿ ಯುವತಿಯೊಬ್ಬಳು ಹ್ಯಾಂಡ್ಸ್ ಫ್ರೀ ಬಳಸಿ ಮಾತನಾಡುವುದರಲ್ಲಿ ನಿರತಳಾಗಿದ್ದಳು. ಆದ್ದರಿಂದ ಸ್ವಲ್ಪ ಜೋರಾಗೇ ಹೇಳಿ ಎಬ್ಬಿಸಿ ಕೂರಬೇಕಾಯಿತು. ಅಷ್ಟಕ್ಕೇ ನನ್ನ ಪಕ್ಕ ನಿಂತಿದ್ದ ವ್ಯಕ್ತಿ, "ಕಾಲು ಸರಿಯಿಲ್ದಲೇ ಇಷ್ಟು ಜೋರು ಬಾಯಿ, ಇನ್ನೇನಾದ್ರು ಅದೂ ಸರಿಯಿದ್ದಿದ್ದ್ರೆ...." ಅಂದ್ರು. ನಾನಂದೆ "ನೀವೊಂದೆರಡ್ನಿಮಿಷ ಅವರ ಥರ ಕಾಲು ಸೊಟ್ಟಗೆ ಮಾಡ್ಕೊಂಡು ನಿಂತ್ಕೊಳಿ ನೋಡೋಣ?". ಆಕೆ ತನ್ನ ಹಕ್ಕು ಚಲಾಯಿಸಿದ್ದೇ ತಪ್ಪೇ?! "Treat people, like the way you want to be treated" - ಒಳ್ಳೆಯ ಜೋಕ್ ಅನ್ಸತ್ತೆ. ನಮ್ಮ ತಟ್ಟೇಲಿ ನಾಯಿನೇ ಸತ್ತು ಬಿದ್ದಿರತ್ತೆ, ಆದರೆ ನಮ್ಮ ಮಾತೆಲ್ಲ ಪಕ್ಕದವರ ತಟ್ಟೆಯಲ್ಲಿ ಬಿದ್ದಿರುವ ನೊಣದ್ದೇ! ಇದೇ ಪಾಶ್ಚಿಮಾತ್ಯ ದೇಶದಲ್ಲಾಗಿದ್ದರೆ.......! ನಮಗೆ ಒಗ್ಗತ್ತೋ ಇಲ್ವೋ, ನಮಗೆ ಬೇಕೋ ಬೇಡ್ವೋ, ಆದ್ರೂ ಪಾಶ್ಚಿಮಾತ್ಯರ ಉಡುಗೆ-ತೊಡುಗೆ, ಆಹಾರ ಕ್ರಮ ಇವೆಲ್ಲವನ್ನೂ ಢಾಳಾಗಿ ಅನುಕರಣೆ ಮಾಡ್ತೀವಿ, ಆದರೆ ಅವರ ಸೃಜನಶೀಲತೆ, ಸಹಾಯಹಸ್ತ, ಶಿಸ್ತು, ಸಮಯಪ್ರಜ್ಞೆ ನಮಗ್ಯಾಕೋ ಬೇಕಿಲ್ಲವಾಗಿದೆ!ಜನರ ಅಲ್ಪ ಪ್ರೋತ್ಸಾಹದ ನಡುವೆಯೂ ಯಶಸ್ವಿಯಾಗಿ ಕ್ರೀಡಾಕೂಟವನ್ನು ನಡೆಸಿದ ಆಯೋಜಕರಿಗೆ ವಂದನೆಗಳು. ಪದಕ ಪಟ್ಟಿಯಲ್ಲಿ ಭಾರತಕ್ಕೆ ಎರಡನೇ ಸ್ಥಾನ. ಎಲ್ಲ ಕ್ರೀಡಾಪಟುಗಳಿಗೂ ಅಭಿನಂದನೆಗಳು. ಯಾರು ಸೋತರೂ, ಯಾರು ಗೆದ್ದರೂ, ಕೊನೆಗೆ ಗೆಲ್ಲುವುದು ಕ್ರೀಡೆಯೇ ಎನ್ನುವ, ದೇಶ ಭಾಷೆಗಳನ್ನುಮೀರಿದ ಆ ಕ್ರೀಡಾಮನೋಭಾವದಿಂದ ಆಡುತ್ತಾ ಕ್ರೀಡಾಕೂಟಕ್ಕೆ ಮೆರುಗು ನೀಡಿದ  ಕ್ರೀಡಾಪಟುಗಳು, ಮಾಕಿ-ಮಂಕಿ ಎನ್ನುತ್ತ ಮೈದಾನವನ್ನು ರಣರಂಗವಾಗಿಸುವ, ಕ್ರೀಡೆಯ ಉದ್ದೇಶಕ್ಕೇ ಮಸಿಬಳಿಯುವಂತಹ "ಡೋಪಿಂಗ್" ನಂತಹ ಅಭ್ಯಾಸವನ್ನು ಹುಟ್ಟು ಹಾಕಿರುವ ಸಕಲಾಂಗರ ಕ್ರೀಡಾಕೂಟಗಳಿಗೆ ನಿಜಕ್ಕೂ ಮಾದರಿಯಾಗಿದ್ದರು. ಜೀವನದಲ್ಲಿ ಸಾಧನೆಗೈಯಲು ಬೇಕಾಗಿರುವುದು ಕೇವಲ ಅಂಗಾಂಗಗಳಲ್ಲ, ಆಸಕ್ತಿ, ಛಲ, ಚೇತನ, ಚೈತನ್ಯ. ಅಂತಹ ಅಂತ:ಶಕ್ತಿಯ ಸದುಪಯೋಗದಲ್ಲಿ ಈ "ಸಚೇತ"ರು ನಮಗೆ ಮಾದರಿ ಎಂದರೆ ಅತಿಶಯೋಕ್ತಿಯಲ್ಲ. ಇಂತಹ ಸಚೇತನರನ್ನು, ವಿಕಲಚೇತನರೆಂದು ಅವಮಾನ ಮಾಡಿದ್ದರೆ, ಹಾಗೆ ಕರೆವನನ್ನು ಪಾಶ್ಚಿಮಾತ್ಯ ದೇಶಗಳಲ್ಲಿ ಹಿಂಡಿ ಹಿಪ್ಪೇಕಾಯಿ ಮಾಡಿಹಾಕುತ್ತಿದ್ದರು (Sue ಮಾಡುತ್ತಿದ್ದರು). ಆದರೆ ಇದು ನಮ್ಮ ಭಾರತ. ಅದರಲ್ಲೂ ಕಸ್ತೂರಿಯ ಕಂಪಿರುವ ಕನ್ನಡದ ಕರ್ನಾಟಕ. ಇಲ್ಲಿ ಸಬ್ ಕುಚ್ ಚಲ್ತಾ ಹೈ! ಭಾಷೆಯನ್ನೂ, ಭಾವನೆಗಳನ್ನೂ any one can take for a ride! It's a silly matter you know!


[ಇಂದು ವಿಶ್ವ ಅಂಗವಿಕಲರ ದಿನ. ಇವರುಗಳು ನಮ್ಮ ಕರುಣೆಯಿಂದಲ್ಲ, ಅವರ ಹಕ್ಕಿನಿಂದ ಅವರು ಸಮಾಜದ ಮುಖ್ಯವಾಹಿನಿಗೆ ಬರುವಂತಾಗಲಿ. ನಮ್ಮಿಂದೇನಾದರೂ ಸಹಾಯವಾಗುವಂತಿದ್ದರೆ ಮನ:ಪೂರ್ವಕವಾಗಿ ಮಾಡೋಣ. ಸಾಧ್ಯವಾಗದಿದ್ದಲ್ಲಿ ಸುಮ್ಮನಿರೋಣ, ಆದರೆ ಅವರ ಆ ಬದುಕೆನೆಡೆಗಿನ ಪ್ರೀತಿಗೆ, ಚಿಮ್ಮುವ ಉತ್ಸಾಹಕ್ಕೆ ತಣ್ಣೀರೆರಚುವುದು ಬೇಡ.]

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4.5 (15 votes)
To prevent automated spam submissions leave this field empty.

ಪ್ರತಿಕ್ರಿಯೆಗಳು

ಈ ಹೆಸರನ್ನು ಇಡಲು ಅಮೋಘ ಸಲಹ ನೀಡಿದವರು "ಪ್ರೊ.ವೆಂಕಟಸುಬ್ಬಯ್ಯ" vk ಭಟ್ಟರ initiative ನಲ್ಲಿ! ಈ ಪದದ ಬಗ್ಗೆ ನನ್ನ (ಸಂಪದದಲ್ಲಿ)ಮೊದಲ ಬರಹದಲ್ಲೇ ಆಕ್ಷೇಪಿಸಿದ್ದೆ! ಇನ್ನೊಂದು ಬೇಸರ ತರುವ ಸಂಗತಿ ಎಂದರೆ ’ಉತ್ತಮ ಸಮಾಜಕ್ಕಾಗಿ’ ತಿಣುಕುವ ಹಾಗೂ ಇತರೆ ಚಾನೆಲ್ ಗಳು ಕ್ರೀಡಾಕೂಟದ ಬಗ್ಗೆ ಕವರೇಜ್ ಕೊಡಲೇ ಇಲ್ಲ. ಕ್ರೀಡಾ ಕೂಟದ ವರದಿ ಮತ್ತು ಭಾರತದ ಸಾಧನೆಯನ್ನು ತಲುಪಿಸಿದ ವಿ.ಕ. ದ ಕೆಲಸ ಅಭಿನಂದನಾರ್ಹ!
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಕೆಲಸವಿಲ್ಲದ ಆಚಾರಿ ಅದೇನೋ ಮಾಡಿದ್ನಂತೆ. ಹಂಗಾಯ್ತು ಭಟ್ಟರ ಕತೆ! ಹೊಸಪದ ಹುಟ್ಟುಹಾಕುವ ಉನ್ಮಾದದಲ್ಲಿ ಇರುವ ಅರ್ಥವನ್ನೂ ಅಪಭ್ರಂಶಗೊಳಿಸಿದ್ದಾರೆ! ಯಾವಾಗ ತಮ್ಮ ಸಾಮಾಜಿಕ ಜವಾಬ್ದಾರಿಯನ್ನು ಅರಿತುಕೊಳ್ಳುತ್ತಾರೋ ಈ ಮಾಧ್ಯಮದವರು?! "ಉತ್ತಮ ಸಮಾಜಕ್ಕಾಗಿ" ನಟನಟಿಯರ ಮದುವೆಯ "ನೇರ" ಪ್ರಸಾರ "ನಿರಂತರ"ವಾಗಿ ನಡೆಯುತ್ತದೆಯೇ ಹೊರತು, ಇಂತಹ ಕ್ರೀಡಾಕೂಟಗಳದ್ದಲ್ಲ!
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ವಿನುತಾ ಅವರೆ, ಲೇಖನ ಓದಿದೆ. ಓದುತ್ತಾ ಹೋದಂತೆ ಒಂದೆರಡು ಬಾರಿ ಕಣ್ಣು ಮಂಜಾಯಿತು. ಏಕೆಂದರೆ, ಅವರ ಉತ್ಸಾಹಕ್ಕೆ ಪ್ರೋತ್ಸಾಹ ಬೇಕೆ ಹೊರತು ಅನುಕಂಪವಲ್ಲ. ಬಸ್ಸಿನಲ್ಲಿನ ಒಂದು ಪುಟ್ಟ ಘಟನೆ ತಿಳಿಸಿದ್ದೀರಿ. ಆಕೆ ಮಾಡಿದ್ದು ಸರಿ. ಆತ ಮಾತನಾಡಿದ ರೀತಿಯಲ್ಲಿರುವ ಕುಹಕ ಯಾರಿಗೇ ಆಗಲಿ ಸಹಿಸಲಾಗದು. ಇದೊಂದು ಕಣ್ತೆರೆಸುವ ಲೇಖನ. ಧನ್ಯವಾದಗಳು. ಚಂದ್ರಶೇಖರ http://kshanachintan...
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಅದೊಂದು ಸಣ್ಣ ಉದಾಹರಣೆಯಷ್ಟೇ ಚಂದ್ರಶೇಖರ ಅವರೇ. ನಮ್ಮ ದೈನಂದಿನ ಜೀವನದಲ್ಲಿ ಇಂತಹ ಏಷ್ಟೋ ಘಟನೆಗಳು! ಸಾರ್ವಜನಿಕ ಶೌಚಾಲಯಗಳಲ್ಲಿ, ನಮಗೇ ಸಹ್ಯವಲ್ಲದ ಪರಿಸ್ಥಿತಿ. ಇನ್ನು ಅವರ ಪಾಡಂತೂ ಹೇಳಲಾಗುವುದಿಲ್ಲ!
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಶಾರೀರಿಕ ನ್ಯೂನತೆ ಉಳ್ಳವರನ್ನು ತಮಾಷೆ ಮಾಡುವುದು, ಗೇಲಿ ಮಾಡುವುದು ಹಿರಿಯರ ಸಮ್ಮುಖದಲ್ಲೇ ನಡೆಯುತ್ತದೆ. ಅಂಗವಿಕಲ ಎನ್ನುವ ಪದವೇ ಅಸಹ್ಯ ಹುಟ್ಟಿಸುವಂಥದ್ದು. ಪಾಶ್ಚಾತ್ಯ ದೇಶಗಳಲ್ಲಿ ನ್ಯೂನತೆಯುಳ್ಳವರನ್ನು physically challenged, people with special needs, ಎಂದು ಕರೆಯುತ್ತಾರೆ. ನಮ್ಮ ದೇಶದಲ್ಲಿ ಭಾವನೆಗಳಿಗೆ ಬೆಲೆ ಇಲ್ಲವಲ್ಲ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಿಜ! ಸಂಸ್ಕೃತಿ, ಸಂಸ್ಕಾರ ಎಂದೆಲ್ಲ ಬೊಬ್ಬೆ ಹೊಡೆಯುವ ನಾವು, ಈ ನಿಟ್ಟಿನಲ್ಲಿ ಕಿಂಚಿತ್ತಾದರೂ ಪಾಶ್ಚಿಮಾತ್ಯರ ಧೋರಣೆಯನ್ನನುಸರಿಸಿದರೆ!
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಒಳ್ಳೇ ಬರಹ. >>ಒಗ್ಗತ್ತೋ ಇಲ್ವೋ, ನಮಗೆ ಬೇಕೋ ಬೇಡ್ವೋ, ಆದ್ರೂ ಪಾಶ್ಚಿಮಾತ್ಯರ ಉಡುಗೆ-ತೊಡುಗೆ, ಆಹಾರ ಕ್ರಮ >>ಇವೆಲ್ಲವನ್ನೂ ಢಾಳಾಗಿ ಅನುಕರಣೆ ಮಾಡ್ತೀವಿ, ಆದರೆ ಅವರ ಸೃಜನಶೀಲತೆ, ಸಹಾಯಹಸ್ತ, ಶಿಸ್ತು, >>ಸಮಯಪ್ರಜ್ಞೆ ನಮಗ್ಯಾಕೋ ಬೇಕಿಲ್ಲವಾಗಿದೆ! ಈ ಮಾತು ಬಹಳ ಹಿಡಿಸಿತು. ಎಲ್ರೂ ಇದೇ ತರಹ ಯೋಚಿಸೋಕೆ ಮೊದಲಾದರೆ ಎಷ್ಟೋ ಬದಲಾವಣೆಗಳನ್ನ ಕಾಣಬಹುದೇನೋ. -ಹಂಸಾನಂದಿ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಮನಮುಟ್ಟುವ ಬರಹ, ಇಂತಹ ಕ್ರೀಡಾಕೂಟಗಳಾಗ್ತಿದ್ದುದನ್ನು, ಮುಂಚಿತವಾಗಿ ತಿಳಿಸಬಹುದಿತ್ತಲ್ವಾ??
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಎಲ್ಲ ಪತ್ರಿಕಾಮಾಧ್ಯಮಗಳಿಗೂ, ಟಿವಿ ವಾಹಿನಿಗಳಿಗೂ ಮಾಹಿತಿಯನ್ನು ಕೊಡಲಾಗಿತ್ತು. ನಗರದ ಅನೇಕ ಸ್ಥಳಗಳಲ್ಲಿ ಹೋರ್ಡಿಂಗ್ ಗಳನ್ನು ಹಾಕಿಸಲಾಗಿತ್ತು. ಸಂಪದದಲ್ಲೂ ಹೇಳುವುದು ನನ್ನ ಕರ್ತವ್ಯವಾಗಿದ್ದಿತೇನೋ! ಮರೆತೆ, ಕ್ಷಮಿಸಿ. ಮುಂದೆ ಹೀಗಾಗಲಾರದು.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಬಹಳ ಅವಶ್ಯಕತೆ ಇದ್ದ ಲೇಖನವನ್ನು ಉತ್ತಮವಾಗಿ ಬರೆದಿದ್ದೀರ ವಿನುತ ಅವರೆ, ಅಭಿನಂದನೆಗಳು ! ಇದನ್ನು ಓದಿ, ಸ್ವಲ್ಪ ಮಟ್ಟಿಗಾದರೂ ಜನ ತಮ್ಮ ನಡೆವಳಿಕೆಯನ್ನು ತಿದ್ದಿಕೊಂಡರೆ ಒಳಿತು. ನನ್ನ ವೃತ್ತಿಯಲ್ಲಿ ದಿನ ನಿತ್ಯ ಇಂತಹ ಮಕ್ಕಳನ್ನು ನಾನು ನೋಡುತ್ತೇನೆ, ಅಮೇರಿಕಾದಲ್ಲಿ ಇಂತಹ ಚೈತನ್ಯ ತುಂಬಿದ ಮಕ್ಕಳಿಗೆ ಒದಗಿಸುವ ಸೌಲಭ್ಯದ ಶೇ೧೦ ರಷ್ಟೂ ನಮ್ಮ ಮಕ್ಕಳಿಗೆ ನಮ್ಮದೇಶದಲ್ಲಿ ದೊರಕುವುದಿಲ್ಲ ಎನ್ನುವುದು ಸಹಿಸಲಾರದ ದುಃಖಕರವಾದ ಸಂಗತಿ. ಕಲಿಯುವಿಕೆಗೆ ಎಲ್ಲ ರೀತಿಯ ಪ್ರೋತ್ಸಾಹ ಎಲ್ಲ ಮಕ್ಕಳಿಗೆ ಭೇದವಿಲ್ಲದೆ ( ಅಂಗವಿಕಲರಾದರೂ, ಅಂಗವಿಕಲರಲ್ಲದಿದ್ದರೂ) ದೊರಕಬೇಕು, ಇದು ಎಲ್ಲರ ಬೇಸಿಕ್ ಹಕ್ಕು ಆಗಬೇಕು, ಆಗಲೇ ಸಮಾಜ ಮತ್ತು ದೇಶ ಮುಂದುವರಿಯಲು ಸಾಧ್ಯ. ಇಲ್ಲಿಯ ಜನರ ಸೇವಾ ಮನೋಭಾವನೆ ನಿಜಕ್ಕೂ ಅಭಿನಂದನಾರ್ಹ, ಎಂತಹ ದೊಡ್ಡ ಹುದ್ದೆಯಲ್ಲಿದ್ದರೂ ಇಲ್ಲಿಯ ಜನ ಈ ತರಹ ಜನರಿಗೆ ಸೇವೆ ಮಾಡಲು ಅವರ ದೈನಂದಿನ ಕೆಲಸದ ವತ್ತಡದಿಂದ ಸಮಯಮಾಡಿಕೊಂಡು ಸೇವೆಯಲ್ಲಿ ತೊಡಗುತ್ತಾರೆ. ಈ ತರಹ ಸೇವೆಗಳಿಗೆ ಹಲವಾರು ಲಾಭರಹಿತ ಸಂಸ್ಥೆಗಳನ್ನು ಕಟ್ಟಿದ್ದಾರೆ. ಕರ್ನಾಟಕದಲ್ಲಿ ಹಣಕಾಸಿನ ತೊಂದರೆ ಇಲ್ಲದಾಗೂ ಇಂತಹ ಸಂಸ್ಥೆಗಳನ್ನು (ಸೇವಾ ಸಂಸ್ಥೆ) ಗಳನ್ನು ಕಟ್ಟುವ ಯೋಜನೆ ಸರ್ಕಾರ (ಸಮಾಜ) ಮಾಡಲಿಲ್ಲ, ಇನ್ನೆಂದು ಮಾಡೀತು?????
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಿಜ ಮೀನರವರೆ. ಪಾರ್ಕಿಂಗ್, ರೆಸ್ಟ್ ರೂಮ್ಸ್, ಮಾಲ್ ಗಳು, ಸಾರ್ವಜನಿಕ ಸಾರಿಗೆಗಳು ಎಲ್ಲ ಕಡೆ ಇವರಿಗೆ ವಿಶೇಷ ಪ್ರಾಶಸ್ತ್ಯವಿರುತ್ತದೆ. ಅಲ್ಲಿರುವ ಸೌಲಭ್ಯ ನಮ್ಮಲ್ಲಿಗೆ ಬರಬೇಕಾದಲ್ಲಿ ಇನ್ನೆಷ್ಟು ದಶಕಗಳು ಕಳೆಯಬೇಕೋ?! ಎಲ್ಲಕ್ಕೂ ಮೊದಲು ಜನರ attitude ಬದಲಾಗಬೇಕಿದೆ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ವಿನುತಾ, ಒಂದು ಒಳ್ಳೆಯ, ಅರಿತುಕೊಳ್ಳಬೇಕಾದವರಿಗೆ, ಮನಮುಟ್ಟುವಂತಹ ಬರಹ. >>ಅಷ್ಟೆತ್ತರ ಮೆಟ್ಟಿಲುಗಳನ್ನು ಆ ಜನಗಳ ತಿಕ್ಕಾಟದ ನಡುವೆಯೂ ಹತ್ತಿಬಂದು ಕೂರುತ್ತಾರೆ, ಹೌದು. ಇದನ್ನು ನಾನು ಕೂಡ ಒಂದೆರೆಡು ಬಾರಿ ಗಮನಿಸಿದ್ದೇನೆ. ಕಮಲ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಅಲ್ವ! ಇನ್ನೊಂದು ಸಣ್ಣ ಉದಾಹರಣೆಯೆಂದರೆ, ಇವರುಗಳು ಓಡಿಕೊಂಡು, ಅಂದರೆ ಅವರಿಂದ ಸಾಧ್ಯವಾದಷ್ಟು ವೇಗದಲ್ಲಿ ಬರುತ್ತಿದ್ದರೂ, ಚಾಲಕ ಬಸ್ಸನ್ನು ಹೊರಡಿಸಿಯೇ ಬಿಡುತ್ತಾನೆ. ಚಲನೆಯಲ್ಲಿರುವ ಬಸ್ಸಿಗೆ ಇವರು ಹೇಗೆ ಹತ್ತಬೇಕು?!
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಕೆಲ ಚಾಲಕರಿಗಿರೋ ದುರಹಂಕಾರ ಅಡಗಿಸಬೇಕು. ಅಬ್ಬ! ಆ ಪರಿಸ್ಥಿತಿ ನೆನೆಸಿಕೊಳ್ಳೋಕೆ ಭಯ ಆಗತ್ತೆ. ಅಷ್ಟೆ ಅಲ್ಲ, ಇದನ್ನು ಸ್ವಲ್ಪ ಮಟ್ಟಿಗೆ ಪ್ರಯಾಣಿಕರು ಹೇಳಬಹುದು. ಎಲ್ಲರೂ ಅವರ ಸಹಾಯಕ್ಕೆ ನಿಂತರೇ ಚಾಲಕ ಬಸ್ಸನ್ನು ನಿಲ್ಲಿಸಿಯೇ ನಿಲ್ಲಿಸುತ್ತಾನೆ ಅಲ್ವ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಅವತ್ತು ಆಗಿದ್ದೂ ಅದೇನ್ನಿ! ನಾವೊಂದ್ ಸ್ವಲ್ಪ ಜನ ಕೂಗ್ಕೊಂಡ್ ಮೇಲೆ ಆತ ಬಸ್ ನಿಲ್ಸಿದ. ಆದ್ರೆ ನನಗೆ ಅರ್ಥ ಆಗದೇ ಇರೋದೇನಂದ್ರೆ, ಬಿಎಮ್ಟಿಸಿ ಚಾಲಕ ಅಂದ್ಮೇಲೆ ಕನಿಷ್ಟ ವಿದ್ಯಾವಂತನಾದ್ರೂ ಆಗಿರ್ತಾನೆ. ಕಣ್ಣು ಸರಿ ಇದ್ದೇ ಇರತ್ತೆ. ಸೈಡ್ ಮಿರ್ರರ್ ನೋಡಕೆ ಬರ್ದೆ ಇರ್ದ್ರೆ ಗಾಡಿ ಓಡ್ಸೋಕೆ ಆಗೋದೆ ಇಲ್ಲ. ಅಂತದ್ರಲ್ಲಿ, ಆತನಿಗೆ ಪ್ರಯಾಣಿಕರು ಹೇಳ್ಬೇಕಾ ಗಾಡಿ ನಿಲ್ಸೋಕೆ? ಸ್ವಂತ ಬುದ್ಧಿನೂ ಬಾಡಿಗೆಗೆ ಕೊಟ್ಟು ಬಂದಿದ್ನಾ?!!
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಹಾಗಾದರೆ ಅವರನ್ನು (physically challenged) ಸೂಕ್ತ ರೀತಿಯಲ್ಲಿ ಗುರುತಿಸಲು ಯಾವ ಪದವನ್ನು ಉಪಯೋಗಿಸಬೇಕು? ಅಂಗವಿಕಲರು ಅನ್ನಬೇಕೇ? ಅಥವಾ ವಿಕಲ ಚೇತನರೇ? ಎರಡೂ ಅಲ್ಲದಿದ್ದರೆ ಇನ್ಯಾವುದು?
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಅಂಗವಿಕಲರು ಎನ್ನಲಿಕ್ಕೆ ಅಡ್ಡಿಯಿಲ್ಲ. ಕೆಳಗೆ ರೂಪಾ ಹೇಳಿರುವಂತೆ "ವಿಶಿಷ್ಟ ಚೇತನರು" ಎಂತಲೂ ಹೇಳಬಹುದು, "ಸಚೇತ" ರೂ ಸರಿಯಾಗಬಹುದು.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

{ ಅಂಗವಿಕಲರು ಎನ್ನಲಿಕ್ಕೆ ಅಡ್ಡಿಯಿಲ್ಲ } - ಇಲ್ಲಿ "ವಿಕಲ" ಅನ್ನುವ ಪದವೇ ಕ್ರೂರವಾಗಿ ಭಾಸವಾಗುವುದಿಲ್ಲವೇ? ವಿಶಿಷ್ಟ ಚೇತನರು ಸರಿಯಾಗಬಹುದು.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಎಲ್ಲೋ ಓದಿದ್ದೆ ವಿಕಲ ಚೇತನ ಎಂಬುವುದಕ್ಕಿಂತ ವಿಶಿಷ್ಟ ಚೇತನ ಎಂದು ಕರೆಯುವುದು ಸೂಕ್ತ . ವಿಕದಲ್ಲೇ ಇರಬೇಕು ವಿಕಲ ಚೇತನ ಎಂದು ಅಂಗವಿಕಲರಿಗೆ ಮಾಡುವ ಅವಮಾನವೇ ಸರಿ. ಯಾವುದೋ ಒಂದು ಅಥವ ಬಹುತೇಕ ಅಂಗ(ಗಳು) ಊನವಾಗಿದ್ದರೂ ಎಲ್ಲಾ ಅಂಗಗಳು ಸರಿಯಾಗಿರುವ ನಮ್ಮಂತಹವರು ನಾಚುವಂತಹ ಸಾಧನೆಗಳನ್ನು, ಚೈತನ್ಯವನ್ನು ತೋರುವ ಅವರುಗಳಿಗೆ ವಿಶಿಷ್ಟ ಚೇತನ ಎಂಬುದೇ ಸರಿಯಾದ ಪದ .
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಥ್ಯಾಂಕ್ಸ್ ರೂಪ. ಒಳ್ಳೆಯ ಪದ ನೆನಪಿಸಿದಿರಿ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಅದ್ಯಾರೋ ಸಿಕ್ಸ್ ಪ್ಯಾಕ್ ಮಾಡಿದ,೮ ಪ್ಯಾಕ್ ಮಾಡಿದ ಹಾಗೆ ಹೀಗೆ ಅಂತೆಲ್ಲ ಕಥೆ ಬರೆಯೋ ಮಾಧ್ಯಮದವರಿಗೆ ಇವೆಲ್ಲ ಕಾಣುವುದಿಲ್ಲ ಬಿಡಿ. ಕೆಲವರು ತಲೆ ಬೋಳಿಸಿಕೊಂಡರು ಸುದ್ದಿ,ಉದ್ದ ಕೂದಲು ಬಿಟ್ರು ಸುದ್ದಿ! ಇವರೆಲ್ಲ ಎಲ್ಲಿ ಕಾಣಬೇಕು. ಅಂಗಾಂಗ ಊನವಾದವರನ್ನ ಗೇಲಿ ಮಾಡುತ್ತಾರಲ್ಲ ಅವರೇ ನಿಜವಾಗಿ ವಿಕೃತರು. ಮನೆಗಳಲ್ಲೇ ಇದು ಶುರುವಾಗುತ್ತದೆ,ಮುಂದುವರಿದು ಶಾಲೆಯಲ್ಲೂ 'ಗುರು'ಗಳು ಅನ್ನಿಸಿಕೊಂದವರಿಂದ ,ಕಡೆಗೆ ಸಮಾಜದಿಂದ .ಇಷ್ಟೆಲ್ಲಾ ಕುಹುಕ - ಕೀಳರಿಮೆಯಿಂದ ಬೆಳೆದವರು ತೋರಿಸುವಾ ಈ ಪರಿ ಉತ್ಸಾಹವಿದೆಯಲ್ಲ ಇದನ್ನ ಎಲ್ಲ ಸರಿಯಿರುವ ಜನರಿಂದ ನಿರೀಕ್ಷಿಸಲು ಸಾಧ್ಯವಿಲ್ಲ ಬಿಡಿ. <<ನಮ್ಮಿಂದೇನಾದರೂ ಸಹಾಯವಾಗುವಂತಿದ್ದರೆ ಮನ:ಪೂರ್ವಕವಾಗಿ ಮಾಡೋಣ. ಸಾಧ್ಯವಾಗದಿದ್ದಲ್ಲಿ ಸುಮ್ಮನಿರೋಣ, ಆದರೆ ಅವರ ಆ ಬದುಕೆನೆಡೆಗಿನ ಪ್ರೀತಿಗೆ, ಚಿಮ್ಮುವ ಉತ್ಸಾಹಕ್ಕೆ ತಣ್ಣೀರೆರಚುವುದು ಬೇಡ>> ಈ ಮಾತುಗಳು ಹಿಡಿಸಿದವು ಒಂದೊಳ್ಳೆ ಲೇಖನಕ್ಕೆ ಥ್ಯಾಂಕ್ಸ್ ರೀ ವಿನುತ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

<< ಇಷ್ಟೆಲ್ಲಾ ಕುಹುಕ - ಕೀಳರಿಮೆಯಿಂದ ಬೆಳೆದವರು ತೋರಿಸುವಾ ಈ ಪರಿ ಉತ್ಸಾಹವಿದೆಯಲ್ಲ ಇದನ್ನ ಎಲ್ಲ ಸರಿಯಿರುವ ಜನರಿಂದ ನಿರೀಕ್ಷಿಸಲು ಸಾಧ್ಯವಿಲ್ಲ ಬಿಡಿ.>> ಸತ್ಯವಾದ ಮಾತು!
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಅದ್ಯಾರೋ ಸಿಕ್ಸ್ ಪ್ಯಾಕ್ ಮಾಡಿದ,೮ ಪ್ಯಾಕ್ ಮಾಡಿದ ಹಾಗೆ ಹೀಗೆ ಅಂತೆಲ್ಲ ಕಥೆ ಬರೆಯೋ ಮಾಧ್ಯಮದವರಿಗೆ ಇವೆಲ್ಲ ಕಾಣುವುದಿಲ್ಲ ಬಿಡಿ. ಕೆಲವರು ಯಾವ ಪ್ಯಾಕೂ ಮಾಡದೇ ಫ್ಯಾಮಿಲಿ ಪ್ಯಾಕ್ ಇಟ್ಕೊಂಡಿದ್ರು ಸುದ್ದಿಯಲ್ಲಿರ್ತಾರೆ!! :P ತುಂಬ ಸಿರೀಯಸ್ ವಿಚಾರ, ’ವಿಕಲ ಚೇತನ’ ಎಂತ ಅಪಾರ್ಥದ ಪದ! ಇದನ್ನು ಮಂದಿ ತುಗೊಳ್ಳೋಕೆ ಕಾರಣಾನೂ ಇದೆ, ಯಾಕಂದ್ರೆ ನಮಗೆ ಸಂಸ್ಕ್ರುತ ಪದಗಳ್ಯಾವೂ ಬೈಗುಳದಂತೆ ಕಾಣೋದೇ ಇಲ್ಲ!. ’differently abled' ಅನ್ನೋದನ್ನೇ ಕನ್ನಡದಲ್ಲೂ ಹೇಳಬಹುದಲ್ಲ, ’ಬೇರೆ ಬಗೆಯಲ್ಲಿ ಮಾಡಬಲ್ಲವ್ರು’ ಅಂತ. ಉದ್ದ ಆದ್ರು ಎಲ್ರಿಗೂ ತಿಳಿಯೋ ಕನ್ನಡ. ಒಂದೇ ಇಡೀ ಪದ ಆಗಿರಬೇಕು ಅನ್ನೋದರ ಬಗ್ಗೆನೂ ನಮ್ಗೆ ಮುನ್ನೊಲವು (prejudice) ಇದೆ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ವಿನುತಾ ರವರೆ ಲೆಖನ ಬಹಳ ಚೆನ್ನಾಗಿ ಬರೆದಿದ್ದೀರಿ ಇದರ ಮೊದಲು ನಾನು ಒನ್ದು ಲೆಖನ ಬರೆದಿದ್ದೆ ಸಾದ್ಯವಾದರೆ ಒಮ್ಮೆ ನೊಡಿ " ನಾವೆಷ್ಟು ಶ್ರೀಮಂತರೆಂದು ನಮಗೆ ಗೊತ್ತಾ ? " http://ismailmkshiva...
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಹೌದು ಇಸ್ಮಾಯಿಲ್ ಅವರೇ. ಅಂತಹ ಕೆಲವು ಅಂಗಾಂಗಗಳಿಲ್ಲದವರನ್ನು ನೋಡಿದಾಗ ನಾವೆಷ್ಟು ಶ್ರೀಮಂತರು ಎನಿಸುತ್ತದೆ. ವಸ್ತುವೊಂದನ್ನು ಕಳೆದುಕೊಂಡಾಗಲೇ ನಮಗದರ ಬೆಲೆ ತಿಳಿಯುವುದು.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಮನಮುಟ್ಟುವ ಬರಹ ವಿನುತಾರವರೆ. ನನಗೂ ಇಲ್ಲಿ ಬ್ಯಾಂಕಾಕಿನ ಪ್ರತಿಯೊಂದು ಸ್ಥಳಗಳಲ್ಲೂ ಅವರಿಗೆ ಅನುಕೂಲಗಳನ್ನು ಮಾಡಿಕೊಟ್ಟಿರುವುದನ್ನು ನೋಡುವಾಗ ಇದೇ ವಿಚಾರ ಕೊರೆಯುತ್ತಿತ್ತು... ನಮ್ಮ ವಿದೇಶಿ ಅನುಕರಣೆಯು ಕುಡಿಯುವ-ತುಡಿಯುವ-ಕುಣಿಯುವ ವಿಚಾರಗಳಿಂದ ಅವರ ಸ್ವಚ್ಚತೆ-ಸಭ್ಯತೆ-ನಡವಳಿಕೆಗಳಂತಹ ಉತ್ತಮ ವಿಚಾರಗಳೆಡೆಗೆ ಹರಿದರೆ ಎಷ್ಟು ಒಳ್ಳೆಯದಿತ್ತು...
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಬಸ್ಸಿನಲ್ಲಿ ಅವರಿಗೆ ಕಾದಿರಿಸಿದ ಸೀಟನ್ನು ಅವರಿಗೆ ಬಿಟ್ಟುಕೊಡುವ ಅಭ್ಯಾಸವಾದರೂ ಇರಲಿ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಡಿಫರೆಂಟ್ಲಿ ಏಬ್‍ಲ್ಡ್ ಎನ್ನುವುದನ್ನು ಕನ್ನಡದಲ್ಲಿ 'ವಿಶಿಷ್ಟ ಚೇತನ' ಎನ್ನಬಹುದು. ಆದರೆ 'ವಿಕಲ ಚೇತನ' ಎನ್ನುವಲ್ಲಿ ಅಮಾನವೀಯತೆಯ ಪ್ರಶ್ನೆ ಬಾರದು. ವೆಂಕಟಸುಬ್ಬಯ್ಯರು 'ಅಂಗಗಳು ವಿಕಲವಾಗಿದ್ದರೂ ವಿಶಿಷ್ಟ ಚೇತನವ ಹೊನ್ದಿರುವಾತ' ಎಂಬ ಅರ್ಥದಲ್ಲಿ ಅದನ್ನು ಬೞಸಿರಬೇಕು. 'ಚೇತನವೇ ವಿಕಲಗೊಣ್ಡಿರುವಾತ' ಅಥವಾ 'ಚೇತನವೇ ಇಲ್ಲದಿರುವಾತ' ಎಂಬ ಅರ್ಥ ಅವರಿಗೆ ಹೊಳೆದಿರಲೊಲ್ಲದು. 'ವಿಶಿಷ್ಟ ಚೇತನ' ಎನ್ನುವಲ್ಲಿ ಇನ್ತಹ ಆಭಾಸಗಳಿಗೆ ಎಡೆಯಿಲ್ಲ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಮನ ಮುಟ್ಟುವ ಲೇಖನ, ನನಗೆ ಬಹಳ ದಿನಗಳಿಂದ ಕಾಡುತ್ತಿರುವ ಸಮಸ್ಯೆಂದರೆ , ನಮ್ಮ ಸಾರ್ವಜನಿಕ ಸಾರಿಗೆಯಲ್ಲಿ ವಿಶಿಷ್ಟ ಚೀತನರಿಗೆ ಹತ್ತಲು ಮತ್ತು ಇಳಿಯಲು ಯಾವ ವ್ಯವಸ್ತೆಯು ಇಲ್ಲ , ವ್ಹೀಲ್ ಚೇರ್ ನಲ್ಲಿ ಇರುವರು ನಮ್ಮ ಸಾರಿಗೆ ಬಳಸಲು ಅಸಾಧ್ಯವಾಗಿದೆ. ನಮ್ಮ ಸಾರಿಗೆಯಾವರು ವ್ಹೀಲ್ ಚೇರ್ ಸಮೇತ ಹತ್ತಿ ಇಳಿಯುವಂತ ಬಾಗಿಲ ವ್ಯವಸ್ಥೆಯನ್ನು ಮಾಡಬೇಕು. ಈ ತರದ ವ್ಯವಸ್ಥೆ ದೆಹಲಿಯ ಮೆಟ್ರೋ ರೈಲಿನಲ್ಲಿದೆ ಅಂತಕೇಳಿದ್ದೀನಿ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.