ವರದಕ್ಷಿಣೆ ಎಂಬ ಕಜ್ಜಾಯ

To prevent automated spam submissions leave this field empty.

ವರದಕ್ಷಿಣೆ ಒಂದು ಸಾಮಾಜಿಕ ಅನಿಷ್ಟ. ಇದು ಅದನ್ನು ಪಡೆಯುವವನಿಗೂ ಗೊತ್ತು. ಆದ್ರೇನು ಮಾಡೋದು ಪುಕ್ಕಟೆ ಸಿಗುವ ಹಣ ಅಲ್ಲವೇ, ಯಾರದೋ ದುಡ್ಡು ಎಲ್ಲಮ್ಮನ ಜಾತ್ರೆ. ಈ ವಿಷಯದಲ್ಲಿ ಎಲ್ಲಾ ಧರ್ಮೀಯರೂ ಸಮಾನರು. ಇಲ್ಲಿ ಮಾತ್ರ ಸಮಾನತೆ ವಿಜ್ರಂಭಿಸುತ್ತದೆ. ಗಂಡಿಗೆ ಲಾಭ ಆಗುವ ಸಮಾನತೆ. ಜಮಾತೆ ಇಸ್ಲಾಮಿನವರು ( ಮುಸ್ಲಿಂ ಸಾಮಾಜಿಕ ಸಂಘಟನೆ ) ಒಂದು ಅಭಿಯಾನ ಆರಂಭಿಸಿದರು. ವರದಕ್ಷಿಣೆ ಪುರುಷ ವೇಶ್ಯಾವಾಟಿಕೆಗೆ ಸಮಾನ ಎಂದು. ಎಲ್ಲ ಧರ್ಮಗಳ ಸುಧಾರಕರು ಈ ಅನಿಷ್ಟದ ವಿರುದ್ಧ ಕೂಗೆತ್ತಿದರು. ಫಲ ಅಷ್ಟಕ್ಕಷ್ಟೇ.

ಸರಿ ಅಷ್ಟೆಲ್ಲಾ ಕೊಟ್ಟು ಮದುವೆಯಾಗುವ ಹೆಣ್ಣಿಗೆ ಸಿಗುವುದು ಏನು? ವಿವಾಹಿತೆ ಅನ್ನೋ ಕಿರೀಟ. ಮದುವೆಯಾದ ಕೂಡಲೇ ತನ್ನ ತಂದೆಯ ಹೆಸರಿನಿಂದ ಗುರುತಿಸಲ್ಪಡುವುದಿಲ್ಲ. ಬದಲಿಗೆ ಇಂಥಹ ಮಹಾತ್ಮನ ಪತ್ನಿ ಎಂದು ಗುರುತಿಸುತ್ತಾರೆ ಜನ. ಅವಳ ವೇಷ ಭೂಷಣಗಳಲ್ಲೂ ಬದಲಾವಣೆ. ಒಂದಿಷ್ಟು ಹೆಚ್ಚುವರಿ ಉಡುಗೆ. ತಾಳಿಯಿಂದ ಹಿಡಿದು ಕಾಳುನ್ಗುರದವರೆಗೆ ಗಂಡನ ಅಸ್ತಿತ್ವ, ಪಾರುಪತ್ಯ ಸಾರಿ ತೋರಿಸುವ ಕುರುಹುಗಳು. ಈ ತ್ಯಾಗ ಹೆಣ್ಣಿನ ತಂದೆ ಸಾಲ ಸೋಲ ಮಾಡಿಯೋ, ಜೀವನ ಪೂರ್ತಿ ಉಳಿಸಿದ ಹಣ ತೆತ್ತೋ ಕೊಟ್ಟ ಕಪ್ಪ ಕಾಣಿಕೆ. ಅಷ್ಟೇ ಅಲ್ಲ, ವರದಕ್ಷಿಣೆ ಕೊಟ್ಟರಷ್ಟೇ ಸಾಲದು. ನೆರೆದ ನೂರಾರು ಜನರ ಮುಂದೆ ಇವನ ಪಾದಾರವಿನ್ದಗಳನ್ನು ಅತ್ತೆ ಮಾವ ತೊಳೆಯಬೇಕು. ಬೆಳ್ಳಿ ಬಟ್ಟಲಿನಲ್ಲೇ ತೀರ್ಥ ಕುಡಿಸಬೇಕು ಕಪ್ಪ ಕಾಣಿಕೆ ಪಡೆದ ದಣಿದ ದೇಹಕ್ಕೆ. ಬೆಳ್ಳಿ ಲೋಟ ಇಲ್ಲವೊ ಮಾವ ಕೊಟ್ಟ ವರದಕ್ಷಿಣೆಯ ಸ್ಕೂಟರಿನಲ್ಲೇ ಜಾಗ ಖಾಲಿ ಮಾಡುತ್ತಾನೆ.

ಒಮ್ಮೆ ಇಂಥ ಒಂದು ಸಂತೆಗೆ ಹೋಗುವ ಭಾಗ್ಯ ನನ್ನದು. ಮದುವೆಗೆ ಮುಂಚೆ ನಡೆಯುವ ಚೊಕಾಸಿ ವ್ಯಾಪಾರ ಕಂಡು ಹೇಸಿಗೆ ಆಯಿತು. ಜನ ಯಾವ ಮಟ್ಟಕ್ಕೆ ಇಳಿಯುವರು ಹಣದ ಆಸೆಯಲ್ಲಿ ಎಂದು ಅಚ್ಚರಿ ಪಟ್ಟೆ. ಕೋಲೆ ಬಸವನಂತೆ ಭಾವಿ ಮಾವನೆದುರು ತನ್ನ ತಂದೆ ಶಾಪಿಂಗ್ ಲಿಸ್ಟ್ ಓದುವುದನ್ನು ಜೊಳ್ಳು ಸುರಿಸುತ್ತಾ ನೋಡುವ ಗಂಡಿಗೆ ಎಕ್ಕಡ ಸೇವೆ ಮಾಡುವ ಮನಸ್ಸಾದರೂ ಭಯದಿಂದ ಸುಮ್ಮನಾಗುತ್ತೇನೆ. ಈ ಕುದುರೆ ವ್ಯಾಪಾರ ನಮ್ಮ ಮೌಲ್ವಿಗಳ ಎದುರಿನಲ್ಲಿ ನಡೆಯುವುದು ಮತ್ತೊಂದು ರೀತಿಯ ಅವಮಾನ.

ಇಸ್ಲಾಮಿನಲ್ಲಿ ವರದಕ್ಷಿಣೆ ಇಲ್ಲ. ಬೂಟಾಟಿಕೆ ಬಹಳಷ್ಟಿದೆ. ಗಂಡು ವಧು ದಕ್ಷಿಣೆ ಕೊಡಬೇಕು. ಓಕೆ, ವೈ ನಾಟ್? ನೆರೆದವರ ಮುಂದೆ ಕವಡೆ ಬಿಸಾಕಿ ಹಿಂದಿನ ಬಾಗಿಲಿನಿಂದ ಲಾರಿಗಟ್ಟಲೆ ಸಾಮಾನು, ನಾಗ ನಾಣ್ಯ ಲೂಟಿ. ದುಡ್ಡಿನ ಮುಂದೆ ಆದರ್ಶಗಳು ಆಲಸ್ಯದಿಂದ ಆಕಳಿಸುತ್ತವೆ.

ತೀರ ಗತಿಕೆಟ್ಟ ಕುಟುಂಬದವರಿಂದಲೂ ಹಣ ಬಯಸುವ ಗಂಡು ಅದ್ಹೇಗೆ ತಾನು ಗಂಡು ಎಂದು ಹೆಮ್ಮೆಯಿಂದ ಎದೆಯುಬ್ಬಿಸಿ ನಡೆಯುತ್ತಾನೋ? ದರೋಡೆಕೋರನಿಗೆ ಕರುಣೆ ಎಲ್ಲಿಂದ ಅಲ್ಲವೇ? ಶ್ರೀಮಂತನ ಮನೆಯಾದರೂ ಸರಿ ದರಿದ್ರದವನ ಮನೆಯಾದರೂ ಸರಿ ತನಗೆ ಬೇಕಿದ್ದು ಸಿಗುವಾಗ ತಾರತಮ್ಯವೇಕೆ?

ಗಂಡಾಗಿ ಹುಟ್ಟುವುದೇ ಒಂದು ಕ್ವಾಲಿಫಿಕೇಶನ್ ಕೆಲವರಿಗೆ. ಈ ಕ್ವಾಲಿಫಿಕೇಶನ್ ಇಟ್ಟುಕೊಂಡು ಅವನು ಕೊಡುವ ಸರ್ವಿಸ್ ಗೊತ್ತೇ ಇದೆಯಲ್ಲ?

ಪ್ರತಿಕ್ರಿಯೆಗಳು

ನಿಜ ಅಬ್ದುಲ್ ಅವರೇ.. ಉತ್ತಮವಾದ ಲೇಖನ ...

ಈಗಲಂತೂ ಈ ಪಿಡುಗು ಇನ್ನಷ್ಟು ಬಲವಾಗಿ ಹರಡಿದೆ... ಮಧ್ಯಮ ಕುಟುಂಬ ಹೆತ್ತವರಿಗೆ ಹೆಣ್ಣು ಹುಟ್ಟಿಸಿದ ಮೇಲೆ ಚಿಂತೆಗೆ ತಳ್ಳುವುದು ಈ ವರದಕ್ಷಿಣೆ ಎಂಬ ಪಿಡುಗು .. ದುರದೃಷ್ಟಕರ ಸಂಗತಿ ಏನೆಂದರೆ ವಿದ್ಯಾವಂತ ಕುಟುಂಬದವರು ಕೂಡ ವರದಕ್ಷಿಣೆ ತಗೊಳ್ಳುವುದು...