ಈಸಲು-ಬಯಲುಸೀಮೆಯ ಜನಪ್ರಿಯ ತಿನಿಸು

To prevent automated spam submissions leave this field empty.

ಹುತ್ತದೀಸಲಮ್ಮಾ ,ಹುತ್ತದೀಸಲು ಎಂದು ನಮ್ಮ ಚಿಕ್ಕಂದಿನ ದಿನಗಳಲ್ಲಿ ಯರಗುಂಟೆಯ ನರಸಿಂಹಪ್ಪ ತಲೆಯ ಮೇಲೆ ಸಣ್ಣಚೀಲವೊಂದನ್ನಿಟ್ಟುಕೊಂಡು ಊರೂರು ತಿರುಗುತ್ತಿದ್ದುದು ನನಗಿನ್ನೂ ಚೆನ್ನಾಗಿ ನೆನಪಿದೆ.ನನಗಂತೂ ಈಸಲೆಂದರೆ ಪಂಚಪ್ರಾಣ.ಹಾಗಾಗಿ ಕೆಲವೊಮ್ಮೆ ನಮ್ಮಮ್ಮ ಕೂಡಾ ರಾಗಿಯನ್ನೋ,ಭತ್ತವನ್ನೋ ಕೊಟ್ಟು ಈಸಲು ತೆಗೆದುಕೊಳ್ಳುತ್ತಿದ್ದರು.

ಏನಿದು ಈಸಲು???

ಮುಂಗಾರು ಮಳೆ ಪ್ರಾರಂಭವಾದ ಕೂಡಲೇ ಗೆದ್ದಲಿನ ಇನ್ನೊಂದು ರೂಪಾಂತರವಾದ ಈಸಲು ಭೂಮಿಯೊಡಲಿನಿಂದ ರೆಕ್ಕೆಧರಿಸಿಕೊಂಡು ಹೊರಬರುತ್ತದೆ.ನೆಲ ತೇವವಾದೊಡನೆ ಹುತ್ತಗಳ ಬಳಿ,ಕೆಲವೊಮ್ಮೆ ನೆಲದಮೇಲಿನ ರಂಧ್ರಗಳ ಬಳಿ ರೆಕ್ಕೆ ಸಹಿತ ಹೊರಬರುವ ಈಸಲು ಹುಳುಗಳನ್ನು ಕಾಣಬಹುದು.ಹೊರಬಂದ ಕೂಡಲೇ ಅಲ್ಲಿಯೇ ಕಾದು ಕುಳಿತ ಓತಿಕ್ಯಾತಗಳಿಗೆ,ಹಲ್ಲಿಗಳಿಗೆ,ಕಾಗೆ ಗೊರವಂಕ,ಮುಂತಾದ ಪಕ್ಷಿಗಳಿಗೆ ದುತ್ತೆಂದು ಆಹಾರವಾಗುವ ಅತಿ ಪಾಪದ ಕೀಟ ಈ ಈಸಲು ಹುಳು.ಮುಂಜಾನೆಯಲ್ಲಿಯೇ ನೆಲದಿಂದ ಹೊರಬಂದರೆ ಈ ರೀತಿ ಅವಸಾನ ಕಾಣುವ ಇವು ರಾತ್ರಿ ವೇಳೆಯಲ್ಲಿ ಬೆಳಕಿನಾಸೆಗೆ ಬಂದು ಮನೆಗಳ ಬಳಿ,ವಿದ್ಯುತ್ ಕಂಬದ ಬಳಿ ಮಾನವನ ಮತ್ತು ಮಂಡರಗಬ್ಬೆ(ಚೇಳಿಗಿಂತ ದೊಡ್ಡದಾದ ಕಪ್ಪನೆಯ ಅಂಗೈ ಅಗಲದ ಚೇಳಿನ ಇನ್ನೊಂದು ಬಗೆ)ಗಳ ಜಿಹ್ವಾ ಚಾಪಲ್ಯಕ್ಕೆ ಗುರಿಯಾಗುತ್ತವೆ.

ಈಸಲನ್ನು ಹಿಡಿಯುವುದರಲ್ಲಿ ಎರಡು ಬಗೆಯಿದೆ.ಹುತ್ತಗಳನ್ನು ಊದಿ ಈಸಲನ್ನು ಹೊರಬರುವಂತೆ ಮಾಡಿ ಹಿಡಿಯುವುದು.(ಇದು ಅತಿ ಅಪಾಯಕಾರಿ,ಹಾಗೂ ಕೌಶಲ್ಯದ ಕೆಲಸ,ಹುತ್ತದೀಸಲು ಹಿಡಿಯುವುದರ ಬಗ್ಗೆ ವಿವರವಾಗಿ ಮತ್ತೊಮ್ಮೆ ಬರೆಯುತ್ತೇನೆ)ಗೆದ್ದಲಿರುವ ಹುತ್ತಗಳನ್ನು ಗುರ್ತಿಸಿ ಅವುಗಳನ್ನು ಕೃತಕವಾಗಿ ನೆನೆಸಿ ಬಲವಂತವಾಗಿ ಮೇಲೆ ಬರುವಂತೆ ಮಾಡಿ ಹಿಡಿಯುವುದು.ತನ್ನಿಂದ ತಾನೇ ನೈಸರ್ಗಿಕವಾಗಿ ಆದ ಮಳೆಗೆ ರೂಪಾಂತರಗೊಂಡು ಈಚೆ ಬರುವ ಈಸಲು ಹುಳುಗಳನ್ನು ಪೊರಕೆಯ ಸಹಾಯದಿಂದ ಗುಡಿಸಿ ಸಂಗ್ರಹಿಸುವುದು.ಈಸಲು ಹುಳುವಿನಲ್ಲಿ ಜಿಡ್ಡಿನ ಅಂಶ ಜಾಸ್ತಿ ಇರುವ ಕಾರಣದಿಂದ ಮನೆಯ ನೆಲವೆಲ್ಲಾ ಎಣ್ಣೆ ಬಳಿದ ರೀತಿ ಆಗುತ್ತದೆ.ಆದ್ದರಿಂದ ಮನೆಯೊಳಗಿನ ದೀಪಗಳನ್ನೆಲ್ಲಾ ಆರಿಸಿ ಬಯಲಿನಲ್ಲಿರುವ ವಿಶಾಲ ಬಂಡೆಗಳ ಬಳಿ ಸುಡಿಗೆ(ತೆಂಗಿನ ಗರಿಗೆ ಬೆಂಕಿ ಹಚ್ಚುವುದು) ಹಿಡಿದು ಈಸಲನ್ನು ಆಕರ್ಷಿಸಿ ಹಿಡಿಯುವುದು.ನೂರಾರು ಬಾರಿ ನಾನು ನಮ್ಮೂರಿನ ದೊಡ್ಡಬಂಡೆ ಮೇಲೆ ಸುಡಿಗೆ ಹಿಡಿದು ಈಸಲು ಗುಡಿಸಿದ್ದೇನೆ.
ಹಸಿಯಾಗಿಯೇ ಈಸಲನ್ನು ತಿನ್ನಲಾಗದು.ಹುತ್ತದಲ್ಲಿ ಹಿಡಿಯುವ ಈಸಲು ಕಪ್ಪು ಬಣ್ಣವುಳ್ಳವಾಗಿರುತ್ತವೆ.ಮಿರಮಿರ ಮಿಂಚುವ ಇವು ಒಣಗಿದ ಮೇಲೆ ಬೀರುವ ಗವುಲು(ವಾಸನೆ) ಹಲ್ಲಿಗಳನ್ನು ,ಕೆಲವೊಮ್ಮೆ ಹಾವುಗಳನ್ನೂ ಆಕರ್ಷಿಸುತ್ತದೆ.ಗುಡಿಸುವಾಗ ಮೆತ್ತಿಕೊಂಡ ಕಡ್ಡಿಕಸ,ಮಣ್ಣು ಮತ್ತಿತರ ವಸ್ತುಗಳನ್ನು ಆಯ್ದು,ಬಿಸಿಲಿನಲ್ಲಿ ಒಂದು ಅಥವಾ ಎರಡು ದಿನ ಒಣಗಿಸಿ ಖಾರದ ಪುಡಿ,ಬೆಳ್ಳುಳ್ಳಿ,ಉಪ್ಪು,ಸೇರಿಸಿ ತಿನ್ನುತ್ತಾರೆ.ಬಿಸಿಲಿಗಿಟ್ಟಾಗ ಬೆಕ್ಕಿನ ಕಾಟವೂ ಜಾಸ್ತಿ.
ಅತ್ಯಂತ ರುಚಿಕರವಾದ ಇದನ್ನು ಜೀವನೋಪಾಯಕ್ಕಾಗಿ ಹಿಡಿದು ಮಾರುತ್ತಿದ್ದ ದಿನಗಳು ಈಗಿಲ್ಲ.ಇದನ್ನೇ ಉಪಕಸುಬಾಗಿ ಮಾಡಿಕೊಂಡಿದ್ದ ಬಹುತೇಕ ಕುಟುಂಬಗಳು ಇನ್ನೂ ಬಯಲು ಸೀಮೆಯ ಅನೇಕ ಹಳ್ಳಿಗಳಲ್ಲಿ ಕಂಡುಬರುತ್ತವೆ.ಈಸಲನ್ನು ತಿನ್ನುವವರ ಸಂಖ್ಯೆಯೂ ಇಳಿಯುತ್ತಿದೆ.ಮೊನ್ನೆ ಊರಿಗೆ ಹೋದಾಗ ನನಗೆ ಅತಿ ಪ್ರಿಯವಾದ ಈಸಲನ್ನು ಎಲ್ಲಾದರೂ ತರಿಸಿಕೊಡುವಂತೆ ನನ್ನಮ್ಮನಿಗೆ ದುಂಬಾಲು ಬಿದ್ದಿದ್ದೆ.ಅದರ ಫಲವಾಗಿ ಕಳೆದ ಭಾನುವಾರ ಅಮ್ಮನಿಂದ ಕರೆ"ನಿನಗಿಷ್ಟವಾದ ಈಸಲು ಗುಂಡುಮಲೆಯಿಂದ ತರಿಸಿದ್ದೇನೆ ಬಾ".ಸರಿ ಮತ್ತಿನ್ನೇನು,..ಸಾಕಾಗುವಷ್ಟನ್ನು ತಿಂದು ಸಂಪದಿಗರಿಗಾಗಿ ಫೋಟೋ ಕ್ಲಿಕ್ಕಿಸಿಕೊಂಡು ಬಂದೆ.
ಈಸಲನ್ನು ಬಾಣಂತಿಗೆ,ಗೂರಲು ಕೆಮ್ಮಿನವರಿಗೆ,ನಾಯಿಕಚ್ಚಿದವರಿಗೆ ನಮ್ಮೂರಿನ ಕಡೆ ತಿನ್ನಲು ಕೊಡುವುದಿಲ್ಲ.

ಲೇಖನ ವರ್ಗ (Category): 

ಪ್ರತಿಕ್ರಿಯೆಗಳು

>>ಮಂಡರಗಬ್ಬೆ(ಚೇಳಿಗಿಂತ ದೊಡ್ಡದಾದ ಕಪ್ಪನೆಯ ಅಂಗೈ ಅಗಲದ ಚೇಳಿನ ಇನ್ನೊಂದು ಬಗೆ)<<

ನಮ್ಮ ಕಡೆ 'ಮಂಡರಗಪ್ಪೆ' ಎನ್ನುತ್ತಾರೆ.

ಹುತ್ತದೀಸಲುಗಳನ್ನು ಬಾಲ್ಯದಲ್ಲಿ ಹಿತ್ತಲೋ ಅಥವಾ ಹೊಲದಲ್ಲಿಯೋ ಇರುವ ಹುತ್ತಗಳಲ್ಲಿ ಹರಿದಾಡುತ್ತಿದ್ದದ್ದನ್ನು ನೋಡಿದ್ದೇನೆ. ಆದರೆ ಇದನ್ನು ತಿನ್ನುತ್ತಾರೆಂದು ನನಗೆ ಇಂದೇ ಗೊತ್ತಾಗಿದ್ದು!

ಮಾಹಿತಿಗೆ ಧನ್ಯವಾದಗಳು..

ಮಂಜುನಾಥ್ರವರೇ,
ಹುತ್ತದೀಸಲನ್ನು ರಾಣಿ ಗೆದ್ದಲು ಎಂದೂ ಕರೆಯುತ್ತಾರೆ.ಹೆಚ್ಚು ಕಡಿಮೆ ರೇಷ್ಮೆ ಹುಳುವಿನ ತರಹ ಇರುತ್ತದೆ.ಲೇಖನ ಓದಿದ್ದಕ್ಕೆ ಧನ್ಯವಾದಗಳು
ಭೂಷಣ್

ನಮ್ ಕಡೆ ಬನ್ನಿ ಮಳೆಗಾಲದಲ್ಲಿ ಇವುಗಳದ್ದು ಬಹಳ ಕಾಟ ನಮಗೆ . ಲೈಟ್ ಹಾಕಿದ ತಕ್ಷಣ ಬುರ್ ಅಂತ ನೆಲದಿಂದ ಎದ್ದು ಬಂದುಬಿಡ್ತಾವೆ . ಮನೆತುಂಬ ಎಲ್ಲ ಇವುಗಳದ್ದೇ ರೆಕ್ಕೆ ಬಿದ್ದಿರುತ್ತೆ . ಇವನ್ನು ಹಿಡಿದು ಹೊರ ಹಾಕಲು ನಾವು ಒಂದು ದೊಡ್ಡ ಪಾತ್ರೆ ಯಲ್ಲಿ ನೀರು ತುಂಬಿಸಿ ದೀಪದ ಕೆಳಗೆ ಇಟ್ಟುಬಿಡುತ್ತೇವೆ . ಅದಕ್ಕೆ ಬಿದ್ದರೆ ಮತ್ತೆ ಎಳೋಲ್ಲ ಅವು . ಸಾಕಾಗಿಬಿಡುತ್ತೆ ಅವನ್ನ ಓಡಿಸೋದು . ಇದನ್ನ ನಮ್ ಮಲೆನಾಡ ಕಡೆ ಮಳೆಹುಳು ಅಂತಾನೆ ಕರಿತೀವಿ , ಹಾಗೆಯೇ ಅವು ಬಂದ್ರೆ ಜೋರಾಗಿ ಮಳೆ ಬರುತ್ತೆ ಅಂತ ನಂಬಿಕೆ ಇದೆ .

ವಿನಯಾ,
ಆ ಕಡೆ ಬಂದಾಗ ನಾನೇನೋ ಬರ್ತೀನಿ,ಆದ್ರೆ ನಮ್ಮ ಈಸಲು ಸಿಗಬೇಕಲ್ಲ.ದೀಪ ಆರಿಸಿ ಹೊರ ಹೋಗುವುದನ್ನು ಬಿಟ್ಟರೆ ಬೇರೆ ಮಾರ್ಗ ಈ ಹುಳುಗಳನ್ನು ತಡೆಯಲು ಇಲ್ಲವೆನ್ನಬಹುದುಧನ್ಯವಾದಗಳು.
ಭೂಷಣ್ಮಿಡಿಗೇಶಿ

ಅಶ್ವಿನಿಯವರೇ,
ಕೆಲವರ ಊಟಕ್ಕೆ ಕೂಡಾ ಇವು ದಾರಿಮಾಡಿಕೊಟ್ಟಿವೆ ,ಆದ್ರೆ ಈಗ ಇವುಗಳನ್ನೇ ಹಿಡಿದು ಜೀವನ ನಡೆಸುವವರು ಕಡಿಮೆ ಬಿಡಿ.ಧನ್ಯವಾದಗಳು
ಭೂಷಣ್ ಮಿಡಿಗೇಶಿ

ಮಲೆನಾಡು ಜಿಲ್ಲೆಗಳಲ್ಲಿ ಸೌಳಿ ಎನ್ನೋ ಇರುವೆಗಳನ್ನ ಚಟ್ನಿ ಮಾಡಿ ತಿನ್ನುತ್ತಾರೆ.
ಸೌಳಿ ಎಂದರೆ ಮರಗಳ ಎಲೆಗಳನ್ನು ಸೇರಿಸಿ ಗೂಡು ಕಟ್ಟುವ ಕೆಂಪು ಇರುವೆಗಳು. ಕಚ್ಚಿದರೆ ಸಿಕ್ಕಾಪಟ್ಟೆ ಉರಿ!
ಸುಮಾರಾಗಿ ಈ ಇರುವೆಗಳ ಥರ ಇರುತ್ತೆ.

(ಚಿತ್ರ ಟಾಪ್ ನ್ಯೂಸ್ ) ಬೇರೆ ಕಡೆಗಳಲ್ಲಿ ಬೇರೆ ಹೆಸರು ಇರಬಹುದು.

ಇರುವೆಗಳು, ಹಸಿಮೆಣಸು, ಹಸಿ ತೆಂಗಿನ ತುರಿ, ಉಪ್ಪು ಸೇರಿಸಿ ಅರೆದರೆ ಆಯಿತು ಸಿಕ್ಕಾಪಟ್ಟೆ ರುಚಿ ಎಂದು ತಿಂದವರು ಹೇಳಿದ್ದಾರೆ.

ಹುಂ, ತೇಜಸ್ವಿಯವರ ಕಥೆಗಳಲ್ಲಿಯೂ ಇದರ ಪ್ರಸ್ತಾಪವಿದೆ.. ಉಡುಪಿ ಕಡೆ ಇದಕ್ಕೆ ಚೌಳಿ ಅಂತೀವಿ.. ಕಚ್ಚಿದ ಕೂಡಲೇ ಫಾರ್ಮಿಕ್ ಆಸಿಡ್ ಗಾಯದ ಮೇಲೆ ಸ್ರವಿಸುವುದರಿಂದ ಉರಿ ಜಾಸ್ತಿ.

ಖಚಿತವಾಗಿ ಹೀಗೆ ಇರುತ್ತೆ:

ಚಿತ್ರ: ನಾನೇ ಕಷ್ಟ ಪಟ್ಟು ತೆಗೆದಿದ್ದು

ಒಟ್ಟಿನಲ್ಲಿ ಮ್ಯಾಕ್ರೋ ಲೆನ್ಸ್ ಗೆ ಪೂರ್ತಿ 'ಪೈಸಾ ವಸೂಲ್' ಮಾಡ್ತಾ ಇದೀರಾ :)
ಚಿತ್ರ ಚನ್ನಾಗಿ ಇದೆ.
ಈ ಫಾರ್ಮಿಕ್ ಆಸಿಡ್ ಇಂದಲೇ ಚಟ್ನಿಗೆ ಹುಳಿ ರುಚಿ ಬರೋದು ಅನಿಸುತ್ತೆ. ಹುಣಸೇ ಹಣ್ಣಿನ ಬದಲು ಇರುವೆ.
(ಫಾರ್ಮಿಕ್ ಆಸಿಡ್ ಹೆಸರು ಬಂದಿರೋದು ಇರುವೆ ಇಂದಲೇ, Formica = ಇರುವೆ, ಲ್ಯಾಟಿನ್ ನಲ್ಲಿ)

>>ಒಟ್ಟಿನಲ್ಲಿ ಮ್ಯಾಕ್ರೋ ಲೆನ್ಸ್ ಗೆ ಪೂರ್ತಿ 'ಪೈಸಾ ವಸೂಲ್' ಮಾಡ್ತಾ ಇದೀರಾ
;)

>>ಫಾರ್ಮಿಕ್ ಆಸಿಡ್ ಹೆಸರು ಬಂದಿರೋದು ಇರುವೆ ಇಂದಲೇ, Formica = ಇರುವೆ, ಲ್ಯಾಟಿನ್ ನಲ್ಲಿ
ನನ್ನಿ ಮಾಹಿತಿಗೆ

ನಮ್ ಕಡೆ ಇದನ್ನು ಚಗಳಿ ಅಂತ ಕರೀತಾರೆ.
ಹಾಗೆ ಇದನ್ನು ಸಾಯಿಸಿದರೆ ಒಂದು ರೀತಿಯ ದುರ್ನಾತ ಬರುತ್ತದೆ .
ಹಾಗೆ ಈಗಲೂ ಕೆಲವರು ಇದರ ಚಟ್ನಿ ಮಾಡಿ ತಿಂತಾರೆ ;)

ನೋ ಫೋಟೊ,ನೋ ಹೆಸ್ರೂ,
ನಾನು ಯಲ್ಲಾಪುರದ ಸಿದ್ದಿಗಳ ಜೊತೆ ಕೆಲಸಮಾಡುವಾಗ ಬಿಸೀ ಅನ್ನದ ಮೇಲೆ ಈ ಚೌಳಿ(ಕಟ್ಟಿರುವೆ)ಗಳನ್ನು ಹಸಿಹಸಿಯಾಗಿಯೇ ಹಿಂಡಿ ಉಪ್ಪು ಹಾಕಿ ಕೊಡುತ್ತಿದ್ದರು.ಒಂಥರಾ ಹುಳಿ ,ಒಂಥರಾ ಉಪ್ಪು .ಒಟ್ನಲ್ಲಿ ಗ್ರೇಟ್ ಟೇಸ್ಟ್.ಇನ್ನೂ ನೆನಪಿನಲ್ಲಿದೆ.ಧನ್ಯವಾದಗಳು.
ಭೂಷಣ್

ಭೂಷಣ್ ಅವರೇ,
ಒಳ್ಳೆಯ ಮಾಹಿತಿ. ಇವನ್ನೆಲ್ಲ ತಿ೦ತಾರೆ ಅ೦ತ ಗೊತ್ತಿರ್ಲಿಲ್ಲ.

ಪಾಲ,
ಫೊಟೋ ಸೂಪರ್! ಇದರ ಚಟ್ನಿ ತಿ೦ತಾರೆ ಅ೦ತ ನ೦ಗೆ "ಮು೦ಗಾರಿನ ಮಿ೦ಚು" ಚಿತ್ರ ನೋಡಿದ್ಮೇಲೆ ಗೊತ್ತಾಗಿದ್ದು!

ಭೂಷಣ್ ಸಾರ್‍

ತೇಜಸ್ವಿ ಯವರ ಪರಿಸರದ ಕಥೆ ಪುಸ್ತಕದಲ್ಲಿ ಮಾಸ್ತಿ ಮತ್ತು ಬೈರ ಎಂಬ ಭಾಗದಲ್ಲಿ ಒಂದು ಪ್ರಸಂಗ ಬರುತ್ತದೆ. ಅದು ಹೀಗಿದೆ

".....ನಾನೊಮ್ಮೆ ತೋಟದಲ್ಲಿ ಹೋಗುತ್ತಿದ್ದಾಗ ದೂರದಲ್ಲಿ ಮಾಸ್ತಿಯ ಮಗ ನೆಲದ ಬಿಲದಲ್ಲಿ ಇಡೀ ಕೈ ಹೋಗುವಷ್ಟು ಆಳಕ್ಕೆ ಭುಜದವರೆಗೂ ಕೈ ತೂರಿಸಿ ನಾನು ನೋಡುತ್ತಿದ್ದಂತೆಯೇ ಏನನ್ನೋ ತೆಗೆದು ಗಬಕ್ಕನೆ ಬಾಯಿಗೆ ಹಾಕಿಕೊಂಡು ಅಗಿದು ತಿಂದ . ದೂರದಿಂದ ಇದನ್ನು ನೋಡಿದ ನಾನು ಅವನ ಬಳಿಗೆ ಹೋಗಿ ಏನನ್ನು ತಿಂದೆ ಎಂದು ಕೇಳಿದೆ. ಅವನು "ಈಚು ಸಾಮಿ" ಎಂದ. ಹಾಗೆಂದರೆ ಏನೆಂದು ನನಗೆ ಗೊತ್ತಾಗದೆ ಒಮ್ಮೆ ಮಾಸ್ತಿಯನ್ನೇ "ಈಚು" ಎಂದರೆ ಏನೆಂದು ಕೇಳಿದೆ. "ಅಯ್ಯೋ ಈಚು ಸಾಮಿ. ಈಚು ಅಂದರೆ ಗೊತ್ತಿಲ್ವಾ. ಒಂದ್ಸಾರಿ ತೋರಿಸ್ತೀನಿ ತಡೀರಿ" ಎಂದ. ಆದರೆ ನಮ್ಮ ಅಸಂಖ್ಯ ಚಟುವಟಿಕೆಗಳಲ್ಲಿ ಮಾಸ್ತಿ ಹತ್ತಿರ ಅದೇನೆಂದು ತಿಳಿದುಕೊಳ್ಳುವುದು ಮರೆತೇ ಹೋಯ್ತು....."

ನಿಮ್ಮ ಈ ಬರಹ ಓದಿದ ಮೇಲೆ "ಈಚು" ಅಂದರೆ ನೀವು ಬರೆದ ಈಸಲು ಇರಬೇಕು ಅಂತ ಅನ್ನಿಸುತ್ತಿದೆ.

ಹೀಗೇ ಬರೀತಾ ಇರಿ. ಸುಮಾರಷ್ಟು ಹೊಸ ವಿಷಯಗಳು ತಿಳಿಯುತ್ತಿವೆ. ಯಾವುದೇ ಅಡುಗೆ ಪುಸ್ತಕದಲ್ಲಿಯೂ ಕಾಣಸಿಗದ ಪದಾರ್ಥ ಇದು :-)

ನಾರಾಯಣ