ಕೂಡ್ಲಿಗಿ ತಾಲೂಕಿನ ಶಿಲಾಯುಗದ ನಿಲುಗಲ್ಲುಗಳು

To prevent automated spam submissions leave this field empty.

ಬಳ್ಳಾರಿ ಜಿಲ್ಲೆಯ ಕೂಡ್ಲಿಗಿ ತಾಲೂಕಿನಲ್ಲಿ ಪ್ರಾಗೈತಿಹಾಸಿಕದ ಕುರುಹುಗಳನ್ನು ಹೊಂದಿರುವ ಅನೇಕ ಸ್ಥಳಗಳಿವೆ. ಇತಿಹಾಸಕಾರರು ಇವುಗಳನ್ನು ಪತ್ತೆಹಚ್ಚುವಲ್ಲಿ ಅಥವಾ ಪ್ರಾಚ್ಯವಸ್ತು ಸಂಶೋಧನಾ ಇಲಾಖೆಯವರು ಗುರುತಿಸುವಲ್ಲಿ ನಿರ್ಲಕ್ಷಿಸಿದ್ದರೂ, ಗ್ರಾಮಸ್ಥರಲ್ಲಿ ಅವುಗಳ ಬಗ್ಗೆ ನಂಬಿಕೆ, ಮುಗ್ಧತೆ ಇನ್ನೂ ಉಳಿದುಕೊಂಡು ಬಂದಿದೆ. ಅವುಗಳಲ್ಲಿ ವಿಶೇಷವಾದುದು ತಾಲೂಕಿನ ಕುಮತಿ ಹಾಗೂ ಹುಲಿಕುಂಟೆ ಗ್ರಾಮಗಳ ಬಳಿಯಿರುವ ಬೃಹತ್ ಗಾತ್ರದ ರಕ್ಕಸಗಲ್ಲು ಅಥವಾ ನಿಲುಗಲ್ಲುಗಳು.

ಕೂಡ್ಲಿಗಿಯಿಂದ ಸುಮಾರು ೪೫ ಕಿ.ಮೀ ದೂರದ್ಲಲಿರುವ ಕುಮತಿ ಗ್ರಾಮದ ಹೊರವಲಯದ ಹೊಲದಲ್ಲಿ ೨ ಒರಟು ಕಲ್ಲಿನ ಮಾನವಾಕೃತಿಗಳನ್ನು ನಿಲ್ಲಿಸಲಾಗಿದೆ. ಪ್ರತಿಯೊಂದು ರಕ್ಕಸಗಲ್ಲು ೧೦ ಅಡಿ ಎತ್ತರ ಇವೆ. ಒರಟು ಬಂಡೆಯಲ್ಲಿ ಕೆತ್ತಲಾಗಿರುವ ಇವಕ್ಕೆ ಯಾವುದೇ ರೀತಿಯ ಕುಶಲ ಕೆತ್ತನೆಯಿಲ್ಲ. ರುಂಡದ ಭಾಗ ಹಾಗೂ ಎರಡು ಕೈಗಳನ್ನು ಸಂಕೇತಿಸುವಂತೆ ಮಾತ್ರ ಒರಟು ಬಂಡೆ ಕಲ್ಲಿನಲ್ಲಿ ಕೆತ್ತಲಾಗಿದೆ. ಇದೇ ಸ್ಥಳದಲ್ಲಿಯೇ ಇನ್ನೂ ೩ ಮಾನವಾಕೃತಿಯ ಶಿಲೆಗಳಿರಬಹುದಾದ ಅವಶೇಷಗಳಿವೆ. ಹುಲಿಕುಂಟೆ ಗ್ರಾಮದ ಹೊರವಲಯದಲ್ಲಿನ ಬೆಟ್ಟದಲ್ಲಿಯೂ ಕುಮತಿ ರೀತಿಯ ನಿಲುಗಲ್ಲುಗಳಿವೆಯಾದರೂ, ಗಾತ್ರದಲ್ಲಿ ಇವು ಚಿಕ್ಕವು. ಇವುಗಳ ಗಾತ್ರ ೪ ಅಡಿ. ಇಲ್ಲಿಯೂ ಸಹ ೧ ನಿಲುಗಲ್ಲು ಸುಸ್ಥಿತಿಯಲ್ಲಿದ್ದು, ಮತ್ತೆರಡು ಕಾಲನ ತುಳಿತಕ್ಕೆ ನಾಶವಾಗಿವೆ. ಅವುಗಳ ತುಂಡುಗಳೂ ಸಹ ಅಲ್ಲಿಯೇ ಇವೆ. ಸ್ಥಳೀಯರು ಇವುಗಳನ್ನು ‘ರಕ್ಕಸಗಲ್ಲು’ ‘ರಕ್ಕಸಮಡ್ಡಿ’ ಎಂದೇ ಕರೆಯುತ್ತಾರೆ. ನುಂಕಮಲ್ಲೇಶ್ವರನು ರಾಕ್ಷಸರಿಗೆ ಬಾಣ ಹೊಡೆದಾಗ, ರಾಕ್ಷಸರು ಈ ರೀತಿಯಲ್ಲಿ ಕಲ್ಲಾಗಿ ನಿಂತರು ಎಂಬ ನಂಬಿಕೆ ಗ್ರಾಮಸ್ಥರಲ್ಲಿದೆ.
ಇವು ಮಧ್ಯಪ್ರಾಚೀನ ಶಿಲಾಯುಗದ ನಿಲುಗಲ್ಲುಗಳಾಗಿವೆ ಎಂಬುದು ಸಂಶೋಧಕರ ಅಭಿಮತ. ೧೯೯೫ರಲ್ಲಿ ಕೇಂದ್ರ ಪುರಾತತ್ವ ಇಲಾಖೆಯ ನಿರ್ದೇಶಕರಾಗಿದ್ದ ಡಾ.ಕೆ.ಪಿ.ಪೂಣಚ್ಚ, ಡಾ.ಎಂ.ಸಿ.ನರಸಿಂಹನ್ ನೇತೃತ್ವದಲ್ಲಿ ಗ್ರಾಮಾಂತರ ಸರ್ವೇಕ್ಷಣ ಸಂದರ್ಭದಲ್ಲಿ ಕುಮತಿಯ ಗ್ರಾಮದ ಕೆ.ಎಂ.ತಿಪ್ಪೇರುದ್ರಯ್ಯನವರ ಹೊಲದಲ್ಲಿ ಈ ಮಾನವಾಕೃತಿಯ ಶಿಲ್ಪಗಳನ್ನು ಪ್ರಥಮ ಬಾರಿಗೆ ಪತ್ತೆ ಹಚ್ಚಲಾಯಿತು. ಇವುಗಳನ್ನು ದೇಶದಲ್ಲಿಯೇ ಅಪರೂಪವೆನ್ನಲಾಗಿದ್ದು, ಈ ರೀತಿಯ ನಿಲುಗಲ್ಲುಗಳು ಆಂದ್ರಪ್ರದೇಶ, ತಮಿಳುನಾಡು, ಉತ್ತರ ಭಾರತದ ಕೆಲವು ಸ್ಥಳಗಳಲ್ಲಿ ಮಾತ್ರ ಈ ರೀತಿಯ ಆಕೃತಿಗಳು ದೊರೆತಿವೆ ಎಂದಿದ್ದಾರೆ, ಆದರೆ ಅವುಗಳಾವವೂ ಈ ರೀತಿಯಲ್ಲಿ ಸುಸ್ಥಿತಿಯಲ್ಲಿ ಇಲ್ಲ ಎಂದು ಅವರು ತಮ್ಮ ಸಂಶೋಧನಾ ಲೇಖನದಲ್ಲಿ ಅಭಿಪ್ರಾಯಪಟ್ಟಿದ್ದಾರೆ. ಇವು ದೇಶದಲ್ಲಿಯೇ ಸುಸ್ಥಿತಿಯಲ್ಲಿರುವ ಅಪರೂಪದ ಮಾನವಾಕೃತಿಯ ಶಿಲ್ಪಗಳೆನ್ನುವುದಕ್ಕೆ ಸಂಶೋಧಕರಾದ ಡಾ.ಅ.ನ.ಸುಂದರ್, ಪ್ರೊ.ಲಕ್ಷ್ಮಣ ತೆಲಗಾವಿ, ಡಾ.ಶೇಷಾದ್ರಿ ಮುಂತಾದವರು ಸಹಮತ ವ್ಯಕ್ತಪಡಿಸಿದ್ದಾರೆ.
ರಕ್ಕಸಗಲ್ಲುಗಳಿರುವ ಸ್ಥಳಕ್ಕೆ ಅನೇಕ ವಿದ್ವಾಂಸರು, ಸಂಶೋಧಕರು ಭೇಟಿ ನೀಡಿದ್ದಾರೆ. ಪತ್ರಿಕೆಯಲ್ಲಿಯೂ ಈ ಕುರಿತು ವರದಿ ಪ್ರಕಟಗೊಂಡಿದೆ. ಆದರೆ ಇದುವರೆಗೂ ಈ ಕುರಿತು ಗಂಭೀರವಾದ ಚರ್ಚೆ ನಡೆದಿಲ್ಲ. ಕುಮತಿ ಹಾಗೂ ಹುಲಿಕುಂಟೆ ಗ್ರಾಮದ ಹೊರವಲಯದಲ್ಲಿ ಉಳಿದಿರುವ ೨ ರಕ್ಕಸಗಲ್ಲುಗಳನ್ನು ಸಂರಕ್ಷಿಸುವಲ್ಲಿ ಪ್ರಾಚ್ಯವಸ್ತು ಸಂಶೋಧನಾ ಇಲಾಖೆಯವರು ಕ್ರಮ ಕೈಗೊಂಡಲ್ಲಿ, ಸಂಶೋಧಕರ ಸಂಶೋಧನೆಗೆ ರಕ್ಕಸಗಲ್ಲುಗಳು ನೆರವಾಗಬಹುದು. ಇಲ್ಲದಿದ್ದಲ್ಲಿ ಉಳಿದಿರುವ ಈ ಅಪೂರ್ವವಾದ ರಕ್ಕಸಗಲ್ಲುಗಳೂ ನಶಿಸಿಹೋಗಬಹುದಾಗಿದೆ. ರಕ್ಕಸಗಲ್ಲುಗಳ ಕುರಿತು ಹೆಚ್ಚಿನ ಮಾಹಿತಿ ಒದಗಿಸುವವರು ಒದಗಿಸಬಹುದಾಗಿದೆ.
-ಸಿದ್ಧರಾಮ ಹಿರೇಮಠ. ಕೂಡ್ಲಿಗಿ

ಲೇಖನ ವರ್ಗ (Category): 

ಪ್ರತಿಕ್ರಿಯೆಗಳು

ಉತ್ತಮವಾದ ಹಾಗೂ ಅಪರೂಪದ ಮಾಹಿತಿ ಹಿರೇಮಠರೇ.....
ಕೂಡ್ಲಿಗಿ, ಕೊಟ್ಟೂರು, ಹೊಸಪೇಟೆಯ ಸುತ್ತಮುತ್ತ ಕಂಡುಬರುವ ಬಲು ವೈಶಿಷ್ಟ್ಯ ಸಂಸ್ಕೃತಿಯನ್ನು ನಾ ಕಣ್ಣಾರೆ ಕಂಡು ಆನಂದಿಸಿದ್ದ ದಿನಗಳು ನೆನಪಿಗೆ ಬಂದವು.

ಪ್ರತಿಕ್ರಿಯೆಗೆ ಧನ್ಯವಾದಗಳು ಮಂಜುನಾಥ್ ಅವರೇ, ಅದರಲ್ಲೂ ನೀವು ಈ ಭಾಗದಲ್ಲಿ ಓಡಾಡಿ ಸಂತೋಷಪಟ್ಟದ್ದು ತಿಳಿದು ತುಂಬಾ ಖುಷಿಯಾಯ್ತು.-ಸಿದ್ಧರಾಮ ಹಿರೇಮಠ. ಕೂಡ್ಲಿಗಿ.

ಅಂದಹಾಗೇ ಪ್ರಜಾವಾಣಿಯಲ್ಲಿ ನಿಮ್ಮ ಲೇಖನ ಇಲ್ಲದೆ ನೋಡಿ http://www.prajavani.net/Archives/mar132003/thua.asp

ಸುಂದರ ಅವರೂ ತೆಲಗಾವಿ ಅವರೂ ಈ ಬಗ್ಗೆ ಮತ್ತಷ್ಟು ಏನೂ ಹೇಳಿಲ್ಲವೇ? ದೇವರಕೊಂಡರೆಡ್ಡಿಯವರಲ್ಲಿ ವಿಚಾರಿಸಿದಿರಾ?

ಪ್ರೀತಿಯಿಂದ
ಸಿ ಮರಿಜೋಸೆಫ್

ಮರಿಜೋಸೆಫ್ ಅವರೆ, ಪ್ರತಿಕ್ರಿಯೆಗೆ ಧನ್ಯವಾದಗಳು. ತಮ್ಮ ಸಲಹೆಯಂತೆ ಅಶೋಕ ಸಿದ್ದಾಪುರದ ಬಗ್ಗೆಯೂ ಬರೆಯಲು ಯತ್ನಿಸುವೆ. ಒಮ್ಮೆ ಅಲ್ಲಿ ಭೇಟಿ ಕೊಟ್ಟೂ ಬಂದಿರುವೆ. ಪ್ರಜಾವಾಣಿಯ ಕರ್ನಾಟಕ ದರ್ಶನದಲ್ಲಿ ಈ ಮೊದಲು ಈ ಲೇಖನ ಪ್ರಕಟಗೊಂಡಿತ್ತು. ಆದರೆ ಅದರಿಂದ ಯಾವ ಪ್ರಯೋಜನವೂ ಆಗಲಿಲ್ಲ. ಅದರ ಮುಂದುವರಿದ ಭಾಗ ಈ ಲೇಖನ. ಅಂದರೆ ಈ ಮೊದಲಿನ ಲೇಖನದಲ್ಲಿ ಹುಲಿಕುಂಟೆ ಬಳಿಯಿರುವ ನಿಲುಗಲ್ಲುಗಳ ಬಗ್ಗೆ ಪ್ರಸ್ತಾಪಿಸಿರಲಿಲ್ಲ. ಅವು ಇತ್ತೀಚೆಗೆ ನನ್ನ ಗಮನಕ್ಕೆ ಬಂದವು. ಲಕ್ಶ್ಮಣ ತೆಲಗಾವಿ, ದೇವರ ಕೊಂಡಾರೆಡ್ದಿಯವರನ್ನು ಈ ಕುರಿತು ಇನ್ನೂ ಸಂಪರ್ಕಿಸಿಲ್ಲ. -ಸಿದ್ಧರಾಮ ಹಿರೇಮಠ. ಕೂಡ್ಲಿಗಿ.