ಮುಳ್ಳು ಕೊನೆಯ ಮೇಲೆ ಮೂರು ಕೆರೆಯ ಕಟ್ಟಿ ..... (ಮತ್ತೊಂದು ಒಗಟಿನ ಪದ)

4.333335

ಕೆಲದಿನಗಳ ಹಿಂದೆ ಪುರಂದರದಾಸರ ಸುಲಭವಲ್ಲವೋ ಎನ್ನುವ ಕೃತಿಯ ಬಗ್ಗೆ ಬರೆದಿದ್ದೆ. ಸುನಿಲ್ ಅವರು ಅದಕ್ಕೆ ಚೆನ್ನಾಗೆ ವ್ಯಾಖ್ಯಾನ ಕೂಡ ಮಾಡಿದ್ದರು. ಇವತ್ತು ಪುರಂದರ ದಾಸರದ್ದೇ ಇನ್ನೊಂದು ದೇವರನಾಮ. ಸುಲಭವಲ್ಲವೋ  ಮಹದಾನಂದ ಎನ್ನುವ ರಚನೆ ನನಗೆ ಸ್ವಲ್ಪವಾದರೂ ಅರ್ಥವಾಗಿತ್ತು. ಆದರೆ, ಇದು ಪೂರ್ತಿ ಒಗಟಾಗಿದೆ!

ಈ ರಚನೆ ಇಲ್ಲಿದೆ. ಇದರ ಅರ್ಥ ಹೇಳಬಲ್ಲವರು ಖಂಡಿತ ಬರೆಯಿರಿ.

೧:  ಮುಳ್ಳು ಕೊನೆಯ ಮೇಲೆ ಮೂರು ಕೆರೆಯ ಕಟ್ಟಿ ಎರಡು ಬರಿದು ಒಂದು ತುಂಬಲೇ ಇಲ್ಲ
೨:  ತುಂಬಲಿಲ್ಲದ ಕೆರೆಗೆ ಬಂದರು ಮೂವರೊಡ್ಡರು ಇಬ್ಬರು ಕುಂಟರು ಒಬ್ಬಗೆ ಕಾಲೇ ಇಲ್ಲ
೩:  ಕಾಲಿಲ್ಲದ ಒಡ್ಡರಿಗೆ ಕೊಟ್ಟರು ಮೂರು ಎಮ್ಮೆಗಳ ಎರಡು ಬರಡು ಒಂದಕ್ಕೆ ಕರುವೇ ಇಲ್ಲ
೪:  ಕರುವಿಲ್ಲದ ಎಮ್ಮೆಗೆ ಕೊಟ್ಟರು ಮೂರು ಹೊನ್ನುಗಳ ಎರಡು ಸವಕಲು ಒಂದು ಸಲ್ಲಲೇ ಇಲ್ಲ
೫:  ಸಲ್ಲದ ಹೊನ್ನುಗಳಿಗೆ ಬಂದರು ಮೂರು ನೋಟಗರು ಇಬ್ಬರು ಕುರುಡರು ಒಬ್ಬಗೆ ಕಣ್ಣೇ ಇಲ್ಲ
೬:  ಕಣ್ಣಿಲ್ಲದ ನೋಟಗರಿಗೆ ಕೊಟ್ಟರು ಮೂರು ಊರುಗಳ ಎರಡು ಹಾಳು ಒಂದಕ್ಕೆ ಒಕ್ಕಲೇ ಇಲ್ಲ
೭:  ಒಕ್ಕಲಿಲ್ಲದ ಊರಿಗೆ ಬಂದರು ಮೂವರು ಕುಂಬಾರರು ಇಬ್ಬರು ಚೊಂಚರು(?) ಒಬ್ಬಗೆ ಕೈಯೇ ಇಲ್ಲ
೮:  ಕೈಯಿಲ್ಲದ ಕುಂಬರರು ಮಾಡ್ಯಾರು ಮೂರು ಮಡಕೆಗಳ ಎರಡು ಒಡಕು ಒಂದಕ್ಕೆ ಬುಡವೇ ಇಲ್ಲ
೯:  ಬುಡವಿಲ್ಲದ ಗಡಿಗೆಗೆ ಹಾಕಿದರು ಅಕ್ಕಿಗಳ ಎರಡು ಹಂಜಕ್ಕಿ ಒಂದು ಬೇಯಲೇ ಇಲ್ಲ
೧೦:  ಬೇಯಲಿಲ್ಲದ ಅಕ್ಕಿಗೆ ಬಂದರು ಮೂವರು ನೆಂಟರು ಇಬ್ಬರು ಉಣ್ಣರು ಒಬ್ಬಗೆ ಹಸಿವೇ ಇಲ್ಲ
೧೧:  ಹಸಿವಿಲ್ಲದ ನೆಂಟರಿಗೆ ಕೊಟ್ಟರು ಮೂರು ಟೊಣೆಪೆಗಳ(?) ಎರಡು ಸೋಕವು ಒಂದು ತಾಕಲೇ ಇಲ್ಲ
೧೨:  ಇನ್ನು ಈ ಅರ್ಥಗಳೆಲ್ಲ ಪುರಂದರ ವಿಟ್ಠಲ ಬಲ್ಲ ಅನ್ಯರು ಯಾರು ತಿಳಿದವರಿಲ್ಲ
(ಅಥವಾ) ತಾಕಲಿಲ್ಲದ ಟೊಣೆಪೆಗಳ ತಾಕಿಸಿ ಸದ್ಗತಿಯನು ಈಯಬೇಕು ಪುರಂದರ ವಿಟ್ಠಲರಾಯ!

ಇದನ್ನು ವಿದ್ಯಾಭೂಷಣರವರ ಧ್ವನಿಯಲ್ಲಿ ಈ ತಾವಿನಲ್ಲಿ ನೀವು ಕೇಳಬಹುದು

 ಮುಳ್ಳುಕೊನೆಯ ಮೇಲೆ

 -ಹಂಸಾನಂದಿ

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4.3 (3 votes)
To prevent automated spam submissions leave this field empty.

ಪ್ರತಿಕ್ರಿಯೆಗಳು

ಸಂತ ಏಕನಾಥರೋ ಅಥವಾ ನಾಮದೇವರೋ ಬರೆದಿರುವ ಮರಾಠೀಕೃತಿಯೊಂದರ ಅನುವಾದವಿದ್ದರೂ ಇರಬಹುದೀಕೃತಿ, ಪುರಂದರದಾಸರು ಬರೆದಿರಲಿಕ್ಕಿಲ್ಲ ಎಂದು ಹಾವನೂರು ಶ್ರೀನಿವಾಸರು ಬರೆದಿದ್ದನ್ನು ಎಲ್ಲೋ ಓದಿದ ನೆನಪು.

ಎನಗಿಂತ ಕಿರಿಯರಿಲ್ಲ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಹೌದೇ? ಈ ವಿಷಯ ನಾನು ಓದಿಲ್ಲ. ಆದರೂ, ಶೈಲಿಯನ್ನು ನೋಡಿದರೆ, ಪುರಂದರ ದಾಸರು ಬರೆದಿದ್ದರೂ ಆಶ್ಚರ್ಯವಿಲ್ಲ ಅನ್ನಿಸುತ್ತೆ. ಅಲ್ಲದೆ, ಸಾಧಾರಣವಾಗಿ, ಪುರಂದರರ ರಚನೆಗಳ ಮುದ್ರಿತ ಪ್ರತಿಗಳಲ್ಲೆಲ್ಲ ಇದು ಕಂಡುಬರುತ್ತದೆ.

ಒಂದು ವೇಳೆ, ಇದರ ವಿಷಯ ಹೆಚ್ಚಾಗಿ ತಿಳಿದುಬಂದರೆ ಬರೆಯಿರಿ.

-ಹಂಸಾನಂದಿ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಡಾ|| ಅರಳುಮಲ್ಲಿಗೆ ಪಾರ್ಥಸಾರಥಿಯವರು ಈ ಪದ್ಯವನ್ನು ವ್ಯಾಖ್ಯಾನಿಸಿದ್ದಾರೆ. ಅದು ಕ್ಯಾಸೆಟ್ ಸಹ ಆಗಿದೆ.

ವೆಂ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಿಮಗೆ ನೆನಪಿದ್ದರೆ, ಅವರ ವ್ಯಾಖ್ಯಾನದ ಸಾರಾಂಶವನ್ನು ಬರೆಯುತ್ತೀರಾ?

-ಹಂಸಾನಂದಿ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

*ಪುರಂದರ ದಾಸರ ಒಗಟಿನ ಕೃತಿ , ' ಮುಳ್ಳು ಕೊನೆಯ ಮೇಲೆ ಮೂರು ಕೆರೆ* ' .
೧: ಮುಳ್ಳು ಕೊನೆಯ ಮೇಲೆ ಮೂರು ಕೆರೆಯ ಕಟ್ಟಿ ಎರಡು ಬರಿದು ಒಂದು ತುಂಬಲೇ ಇಲ್ಲ
ಮುಳ್ಳು ಕೊನೆ ಎಂದರೆ ಜೀವ , ಮೂರು ಕೆರೆಗಳು ನಮ್ಮ ಶರೀರ, ಸೂಕ್ಷ್ಮ ಶರೀರ, ಲಿಂಗ ದೇಹ ಅದರೊಳಗೆ , ಜೀವ . ದೇಹವೆಂಬ ಮೂರು ಕೆರೆಗಳು ಒಳ್ಳೆ ಕರ್ಮಾ ಮಾಡಿ ಪುಣ್ಯ ತುಂಬಿಸಿಕೊಳಲಿಲ್ಲ.
೨: ತುಂಬಲಿಲ್ಲದ ಕೆರೆಗೆ ಬಂದರು ಮೂವರೊಡ್ಡರು ಇಬ್ಬರು ಕುಂಟರು ಒಬ್ಬಗೆ ಕಾಲೇ ಇಲ್ಲ...
ಮೂವರು ವಡ್ಡರು , ಬಾಲ್ಯ, ಯವ್ವನ , ವೃದಾಪ್ಯ , ಇಬ್ಬರು ಕುಂಟರು ಬಾಲ್ಯದಲ್ಲಿ ಮತ್ತು ವಯ್ಯಸ್ಸಾದ ಮೇಲೆ ಕರ್ಮಾಚರಣೆ ಮಾಡಲಾಗುವುದಿಲ್ಲ .. ಯವ್ವನ್ದಲ್ಲಿ ನಮಗೆ ಶಕ್ತಿ ಇದ್ದರು ಮನಸ್ಸು ಇರುವುದಿಲ್ಲ ಚಂಚಲ ಮನಸ್ಸು ಕಾಲೇ ಇಲ್ಲ .
೩: ಕಾಲಿಲ್ಲದ ಒಡ್ಡರಿಗೆ ಕೊಟ್ಟರು ಮೂರು ಎಮ್ಮೆಗಳ ಎರಡು ಬರಡು ಒಂದಕ್ಕೆ ಕರುವೇ ಇಲ್ಲ
ಮೂರು ಎಮ್ಮೆಗಳು ಅಂದರೆ ವ್ಯಾಮೋಹ , ಹಣ ಹೆಂಡತಿ ಮತ್ತು ಮಕ್ಕಳು. ಎರಡು ಬರಡು ಅಂದ್ರೆ ಹೆಂಡತಿ ಮತ್ತು ಮಕ್ಕಳು ಅವರು ನಾವು ಮಾಡುವ ಕರ್ಮಗಳಿಗೆ ಸಹಕಾರಿಯಲ್ಲ ಈ ಇಬ್ಬರು ನಮ್ಮವರಲ್ಲ ಅವರು ಬೇರೊಂದು ಜೀವ . ನಮ್ಮ ಹಣದ ಮೇಲೆ ಸಂಪೂರ್ಣ ಅಧಿಕಾರ ನಮ್ಮ ಮೇಲಿರುತ್ತೆ , ಆ ಹಣದಿಂದ ದಾನ ಧಾರ್ಮ ಮಾಡಿ ನಿರ್ಗತಿಕರಿಗೆ ಸಹಾಯ ಮಾಡುತ್ತ ನೆಂಪುಣ್ಯ ಸಂಪಾದಿಸಬಹುದು ಮೋಕ್ಷ ಪಡೆಯಲು ಸಹಕಾರಿ ಆದರೆ ಯಾರಿಗೂ ಸ್ವಲ್ಪವಾದರೂ ದಾನ ಮಾಡುವ ಮನಸ್ಸು ಇಲ್ಲ ಕರುವೇ ಇಲ್ಲ ಅಂತ .
೪: ಕರುವಿಲ್ಲದ ಎಮ್ಮೆಗೆ ಕೊಟ್ಟರು ಮೂರು ಹೊನ್ನುಗಳ ಎರಡು ಸವಕಲು ಒಂದು ಸಲ್ಲಲೇ ಇಲ್ಲ
ಕರುವಿಲ್ಲದ ಎಮ್ಮೆ ನಮ್ಮ ಸಂಪತ್ತು ಐಶ್ವರ್ಯ , ಮೂರು ಹೊನ್ನುಗಳು ಎರಡು ಸವಕಲು ನಾವು ನಮಗಾಗಿ ಖರ್ಚು ಮಾಡಿದ್ದೂ , ಮೂರನೆಯದು ದಾನ ನಾವು ಮಾಡಲೇ ಇಲ್ಲ , ಸಲ್ಲಲೇ ಇಲ್ಲ .
೫: ಸಲ್ಲದ ಹೊನ್ನುಗಳಿಗೆ ಬಂದರು ಮೂರು ನೋಟಗರು
ಮೂರು ವಿಧದ ಕರ್ಮಗಳು ಸಂಚಿತ ಕರ್ಮ , ಪ್ರಾರಬ್ಧ ಕರ್ಮ , ಆಗಾಮಿ ಕರ್ಮ .ಸಂಚಿತ ಕರ್ಮ ಪೂರ್ವ ಜನ್ಮದ ಪಾಪ ಪುಣ್ಯದ ಫಲ , ಪ್ರಾರಬ್ಧ ಕರ್ಮ ಈ ಜನ್ಮದಲ್ಲಿ ಪೂರ್ವ ಜನ್ಮದ ಫಲವನ್ನು ಅನುಭವಿಸುವುದು , ಆಗಾಮಿ ಕರ್ಮ ಈ ಜನ್ಮದಲ್ಲಿ ಮಡಿದ ಪಾಪ ಪುಣ್ಯಗಳು .
.
೬: ಕಣ್ಣಿಲ್ಲದ ನೋಟಗರಿಗೆ ಕೊಟ್ಟರು ಮೂರು ಊರುಗಳ ಎರಡು ಹಾಳು ಒಂದಕ್ಕೆ ಒಕ್ಕಲೇ ಇಲ್ಲ
ಮೂರು ಊರುಗಳು ರಾಜಸ , ತಾಮಸ , ಸಾತ್ವಿಕ ಗುಣ . ರಾಜಸ ಮತ್ತು ತಮಾಸದಿಂದ ಏನುಪ್ರಯೋಜನ ಇಲ್ಲ , ಸಾತ್ವಿಕ ಗುಣ ಬೆಳೆಸಿಕೊಳ್ಳಲೇ ಇಲ್ಲ ಒಂದಕ್ಕೆ ಒಕ್ಕಲೇ ಇಲ್ಲ .
೭: ಒಕ್ಕಲಿಲ್ಲದ ಊರಿಗೆ ಬಂದರು ಮೂವರು ಕುಂಬಾರರು ಇಬ್ಬರು ಚೊಂಚರು(?) ಒಬ್ಬಗೆ ಕೈಯೇ ಇಲ್ಲ
ಸಾತ್ವಿಕ ಕರ್ಮ ಎಂಬ ಊರಿಗೆ , ಮೂರು ಕುಂಬಾರರು ಹರಿ , ಹರ , ಬ್ರಹ್ಮ . ಈ ಮೂವರಲ್ಲಿ ಇಬ್ಬರು ಹರ ಮತ್ತು ಬ್ರಹ್ಮ ಚೊಂಚರು ಕಾರಣ ಹರಿ ಆಜ್ಞೆಯನ್ನ ಪಾಲಿಸುವವರು . ಹರಿಗೆ ನಮ್ಮಗೆ ಸಹಾಯ ಮಾಡಲು ಕೈ ಇಲ್ಲ ಕಾರಣ ನಾವು ಒಳ್ಳೆ ಪುಣ್ಯ ಕೆಲಸ ಮಾಡಿಲ್ಲ ಕೈ ನೀಡಿ ಎಳೆದುಕೊಳ್ಳಲು .
೮: ಕೈಯಿಲ್ಲದ ಕುಂಬರರು ಮಾಡ್ಯಾರು ಮೂರು ಮಡಕೆಗಳ ಎರಡು ಒಡಕು ಒಂದಕ್ಕೆ ಬುಡವೇ ಇಲ್ಲ
ಹರಿ ಕೈಯಿಲ್ಲದ ಕುಂಬಾರ ಮೂರು ಮಡಕೆ ಜ್ಞಾನ, ಭಕ್ತಿ, ವೈರಾಗ್ಯ . ಜ್ಞಾನ ವೈರಾಗ್ಯ ಎರಡು ಒಡಕು ಮಡಕೆಗಳು , ಬುಡವಿಲ್ಲದ ಮಡಕೆ ಭಕ್ತಿ ನಮಗೆ ಭಕ್ತಿಯೇ ಇಲ್ಲ
೯: ಬುಡವಿಲ್ಲದ ಗಡಿಗೆಗೆ ಹಾಕಿದರು ಅಕ್ಕಿಗಳ ಎರಡು ಬೇಯದು ಒಂದು ಬೇಯಲೇ ಇಲ್ಲ
ಸಾತ್ವಿಕ ಭಕ್ತಿ , ರಾಜಸಿಕ ಭಕ್ತಿ , ತಾಮಸಿಕ ಭಕ್ತಿ ಮೂರು ಅಕ್ಕಿಗಳು , ರಾಜಸಿಕ ತಾಮಸಿಕ ಭಕ್ತಿ ಪ್ರಯೋಜನವಿಲ್ಲ . ಸಾತ್ವಿಕ ಭಕ್ತಿ ನಮಗೆ ಇಲ್ಲವೇ ಇಲ್ಲ ಬೇಯಬಹುದಾಗಿತ್ತು ಆದರೂ ನಾವು ಬೇಯಿಸಬಿಡಲಿಲ್ಲ
೧೦: ಬೇಯಲಿಲ್ಲದ ಅಕ್ಕಿಗೆ ಬಂದರು ಮೂವರು ನೆಂಟರು ಇಬ್ಬರು ಉಣ್ಣರು ಒಬ್ಬಗೆ ಹಸಿವೇ ಇಲ್ಲ
ಮೂರು ನೆಂಟರು ಜೀವ , ರಾಕ್ಷಸ ಗುಣ , ಮತ್ತು ದೇವಾ ಗುಣ ನಮ್ಮಲ್ಲಿನ ಒಳ್ಳೆಯ ಕೆಟ್ಟ ಗುಣಗಳು . ಉಣ್ಣುವವನು ಒಬ್ಬನೇ ಜೀವ ಆದರೆ ನಮ್ಮ ಜೇವನಿಗೆ ಸಾತ್ವಿಕತೆಯ ಹಸಿವೆ ಇಲ್ಲ .
೧೧: ಹಸಿವಿಲ್ಲದ ನೆಂಟರಿಗೆ ಕೊಟ್ಟರು ಮೂರು ಟೊಣೆಪೆಗಳ(?) ಎರಡು ಸೋಕವು ಒಂದು ತಾಕಲೇ ಇಲ್ಲ
ಜೀವ ಹಸಿವಿಲ್ಲದ ನೆಂಟ , ಅವನಿಗೆ ಮೂರು ಏಟು ಆಧ್ಯಾತ್ಮಿಕ , ನೈಸರ್ಗಿಕ ಅವಘಡಗಳು , ಇತರ ಜೀವಿಗಳಿಂದಾಗುವ ಉಪಟಳಗಳು. ಈ ಮೂರಲ್ಲಿ ಎರಡು ನಮ್ಮ ನಿಯಂತ್ರಣದಲಿಲ್ಲ , ನಿಯಂತ್ರಣದಲ್ಲಿರುವುದು ನಮ್ಮೊಳಗಿನ ಆಧ್ಯಾತ್ಮಿಕ. ಆದ್ಯಾತ್ಮಿಕ ಎಂಬ ಒಂದು ಟೊಣಪೆ ನಮಗೆ ತಾಕಲೇ ಇಲ್ಲ
೧೨: ತಾಕಲಿಲ್ಲದ ಟೊಣೆಪೆಗಳ ತಾಕಿಸಿ ಸದ್ಗತಿಯನು ಈಯಬೇಕು ಪುರಂದರ ವಿಟ್ಠಲರಾಯ!
*ತಾಕಲಿಲ್ಲದ ಟೊಣಪೆ ಅಧ್ಯಾತ್ಮ ಚಿಂತನೆ ತಾಕಿಸಿ ಸದ್ಗತಿ ಕರುಣಿಸೋ ಪುರಂದರ ವಿಟ್ಠಲರಾಯ!*

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.