ಆ ನೋವಿನ ಅಮೂರ್ತ ರೂಪ

4.4

ಆಗ ಸುಮಳಿಗೆ ಸುಮಾರು ಎರಡೂವರೆ ತಿಂಗಳ ಬಸಿರು. ಜಯನಗರದ ಆಸ್ಪತ್ರೆಯೊಂದರಲ್ಲಿ ಟೆಸ್ಟ್ ರಿಸಲ್ಟ್ ನೋಡುತ್ತ ಡಾಕ್ಟರರು ನಿಮ್ಮ ಮಗುವಿನ ಹಾರ್ಟ್ ಬೀಟ್ ಕೇಳಿಬರುತ್ತಿಲ್ಲ ಎಂದು ಹೇಳಿದ್ದರು. ಯಾವುದಕ್ಕೂ ಕುಗ್ಗದ ಸುಮಳ ಮುಖದಲ್ಲಿ ನನಗೆ ಗಾಬರಿ ಕಂಡಿತು. ಮತ್ತೆ ಕೆಲವು ಟೆಸ್ಟುಗಳ ನಂತರ ಮಗು ಗರ್ಭದಲ್ಲಿಯೇ ತೀರಿಹೋಗಿದೆ ಎಂದು ತಿಳಿಸಿದರು.  ನಮ್ಮಿಬ್ಬರ ಎದೆಯ ಬಡಿತ ಕೆಲವು ಕ್ಷಣಗಳ ಕಾಲ ನಿಂತು ಹೋದಂತಾಗಿತ್ತು. ಅಮ್ಮನಾಗಲು ಮನಸ್ಸಿನಲ್ಲಿ ತಯಾರಾಗಿದ್ದ ಸುಮಳಿಗೆ ಕ್ಷಣಮಾತ್ರದಲ್ಲಿ ಎಲ್ಲವೂ ತಲೆಕೆಳಗಾಗಿತ್ತು. ಇದೆಲ್ಲ ಸತ್ಯವಿರಲಿಕ್ಕಿಲ್ಲ ಎಂದು ಒಂದೊಮ್ಮೆ ಜಿಗುಟಿ ನೋಡಿಕೊಂಡೆ - ಮತ್ತಷ್ಟು ನೋವಾಯಿತು. ಅವಳ ನೊಂದ ಮನಸ್ಸು, ಮೌನ ನನ್ನ ಮನಸ್ಸನ್ನೂ ಕ್ಷೀಣಿಸಿಬಿಟ್ಟಿತ್ತು. ಮುಂದಿನ ಹಲವು ದಿನಗಳು ದುಃಸ್ವಪ್ನದಂತೆ ನಡೆದುಹೋದುವು. ಆ ಕಷ್ಟದ ದಿನಗಳಲ್ಲಿ ದಾರಿಕಾಣದೆ ಗೊಂದಲದಲ್ಲಿರುವಾಗ ಅದು ಹೇಗೋ ಸಮಯೋಚಿತವಾಗಿ ಮನಸ್ಸಿಗೆ ಹೊಳೆದು - ಸುಮಳ ಚಿಕ್ಕಪ್ಪ ಡಾ. ಕಾಕ್ಕಿಲಾಯರಿಗೆ ಫೋನು ಮಾಡಿದ್ದೆ. ಅವರು ತಕ್ಷಣ ಸಹಾಯ ಮಾಡಿದರು. ಅವರ ಮೂಲಕ ಮಂಗಳೂರಿನ ಡಾ. ಕಾಮತರ ಪರಿಚಯವಾಯಿತು. ಅಮ್ಮೆಂಬಾಳ ಕ್ಲಿನಿಕ್ ನಡೆಸುವ ಕಾಮತ್ ದಂಪತಿಗಳಂತಹ ಡಾಕ್ಟರರು ಭಾರತದಲ್ಲಿ ತೀರ ವಿರಳವಾಗಿ ಸಿಕ್ಕಾರು. ಎಲ್ಲವೂ ಹೊಸತಾಗಿದ್ದ ನಮಗೆ ಕೂಲಂಕುಷವಾಗಿ ವಿವರದಲ್ಲಿ ತಿಳಿಸಿ ಯಾವುದಕ್ಕೂ ಗಾಬರಿಯಾಗದಂತೆ ಅವರು ನೋಡಿಕೊಂಡರು. 
ಹಲವು ವರ್ಷಗಳ ನಂತರ ನಮ್ಮ ಮೊದಲನೆಯ ಮಗು ಹುಟ್ಟಿದಾಗ ಸುಮಳ ಜೊತೆ ನಾನಿದ್ದೆ. ಸುಮ ಹಠ ಮಾಡಿ “ನೀವು ಮಂಗಳೂರಿಗೆ ಬರಲೇಬೇಕು” ಎಂದು ನನ್ನನ್ನು ಕರೆಸಿಕೊಂಡಿದ್ದಳು.  ಮಗು ದಿನಕ್ಕೆ ಹತ್ತು ಬಾರಿಯಾದರೂ ಒದೆಯುತ್ತಿದ್ದರೆ ಉತ್ತಮ ಎನ್ನುವ ಸಲುವಾಗಿ “ಲೆಕ್ಕ ಇಟ್ಟು ನೋಡಿ” ಎಂದು ಡಾಕ್ಟರರು ಹೇಳಿದ್ದರೆ ಗೊತ್ತಿಲ್ಲದೆ ಸುಮ ಪ್ರತಿಯೊಂದು ಒದೆಯ ಲೆಕ್ಕವನ್ನೂ ಇಟ್ಟುಬಿಟ್ಟಿದ್ದಳು. ಹಾಗೆ ಲೆಕ್ಕದಲ್ಲಿ ನಮ್ಮ ಮಗು ದಿನಕ್ಕೆ ನೂರಾರು ಸಾರಿ ಸುಮಳಿಗೆ ಒದೆ ಕೊಟ್ಟಿದ್ದುಂಟು. ನಾನು ಮಂಗಳೂರಿಗೆ ತೆರಳಿದೆ ಮಾರನೆಯ ದಿನವೇ ಸುಮಳಿಗೆ ಡೆಲಿವರಿ ಆಯಿತು. 
ಇನ್ನು ಮಗು ಹುಟ್ಟುವ ಅನುಭವವೇ ಅವಿಸ್ಮರಣೀಯ. ಕಾಲೇಜಿನಲ್ಲಿ ವಿಜ್ಞಾನ ಓದಿದ ನನಗೆ ಪಾಠಗಳಲ್ಲಿ ಈ ಬಗ್ಗೆ ಓದಿ, ಚಿತ್ರಗಳನ್ನು ನೋಡಿ ತಿಳಿದಿದ್ದರೂ ನಿಜ ಅನುಭವ ಜೀವ-ಜೀವನದ ವಿಸ್ಮಯವನ್ನು ಕಣ್ಣೆದುರಿಗೆ ಹೊತ್ತು ತಂದಿತ್ತು. ಜನ್ಮ ನೀಡುವ ತಾಯಿಯ ಆ ಸಮಯದ ಅಗೋಚರ ನೋವು, ಸಂತಸ ಹಾಗು ತಲ್ಲಣಗಳ ಮಿಶ್ರಣ ನಾನೆಂದೂ ನೋಡದ ಸುಮಳ ರೂಪವೊಂದನ್ನು ತೋರಿಸಿತ್ತು. ಡಾ. ಕಾಮತರು ನನಗೆ ಅಲ್ಲಿಯೇ ಇದ್ದು ಸುಮಳಿಗೆ ಮನಸ್ಥೈರ್ಯ ತುಂಬಲು ಹೇಳಿದ್ದರು. ಆದರೆ ನಾನು ಯಾವ ರೀತಿಯಲ್ಲಿ ಸಹಾಯ ಮಾಡಿದೆ ಎಂಬುದು ನನಗೆ ಈಗಲೂ ಗೊತ್ತಿಲ್ಲ.  ಸುಮ ನನ್ನ ಕೈಯನ್ನು ಗಟ್ಟಿಯಾಗಿ ಹಿಡಿದಿದ್ದಳು. ನೋವಿನಲ್ಲಿ ಆಗೊಮ್ಮೆ ಈಗೊಮ್ಮೆ ಅವಳು ನನ್ನ ಕೈಯನ್ನು ಜೋರಾಗಿ ಅಮುಕಿಬಿಡುತ್ತಿದ್ದಳು - ಆಗ ನನಗೆ “ಅಬ್ಬಾ, ಇವಳಿಗೆ ಎಷ್ಟು ಶಕ್ತಿಯಿದೆ!” ಎಂದೋ ಅಥವ “ಇವಳು ನನ್ನ ಕೈ ಮುರಿದುಬಿಟ್ಟಾಳು” ಎಂದೋ ಆಲೋಚನೆಗಳು ಬರುತ್ತಿರುವಂತೆ ಸುಮ ನನ್ನ ಮುಖ ನೋಡಿ “ನೀವು ಯಾವ ಲೋಕದಲ್ಲಿದ್ದೀರಿ?” ಎಂದು ಕೇಳುತ್ತಿದ್ದಾಳೇನೋ ಅನಿಸುತ್ತಿತ್ತು. ಅವಳ ನೋವಿನ ಬಹುಚಿಕ್ಕ ಪಾಲು, ಅದರ ಅಮೂರ್ತ ರೂಪ ನನ್ನದೂ ಆಗಿತ್ತು. ದಪ್ಪ ತಲೆಯ ದೊಡ್ಡ ಗಾತ್ರದ ಮಗು ಹುಣ್ಣಿಮೆಯಂದು ಹುಟ್ಟಿದ್ದಳು. ಹುಟ್ಟಿದ ಮಗಳು ಅತ್ತು ಸುಮ್ಮನಾದಾಗ ಮುಗುಳ್ನಗೆ ಬೀರುತ್ತಿರುವಂತಿತ್ತು. ಹೆಣ್ಣು ಮಗಳೆಂದು ನಮಗೆ ತುಂಬ ಖುಷಿಯಾಗಿತ್ತು. ಮೊದಲ ಬಾರಿಯಾದ್ದರಿಂದ ಎಲ್ಲವೂ ಹೊಸತು ತುಂಬ ಪ್ರಯಾಸಪಟ್ಟೆವು. ವಯಸ್ಸಿನಲ್ಲಿ ಹೆಚ್ಚಿನ ಅಂತರವಿಲ್ಲದ ಎರಡನೆಯ ಮಗು ಇದ್ದರೆ ಮಕ್ಕಳು ಜೊತೆಗೆ ಆಡಿಕೊಂಡಿರುತ್ತಾರೆ ಎಂದು ಡಾಕ್ಟರರು ಹೇಳಿದ್ದರು. ಮತ್ತೊಂದು ಮಗು ಎಂದಾಕ್ಷಣ ಗಾಬರಿ ಬೀಳುತ್ತಿದ್ದೆವಾದರೂ ನಾವು ಮಕ್ಕಳಿಗೆ ಮನೆಯಲ್ಲೇ ಪಾಠ ಮಾಡಬೇಕೆಂದು ಎಣಿಸಿದ್ದೆವಾದ್ದರಿಂದ ಅದು ಸರಿ ಎನಿಸಿತು. ಈ ಬಾರಿಯೂ ಮಗು ಹುಟ್ಟುವಾಗ ನಾನು ಸುಮಳ ಜೊತೆಗಿದ್ದೆ. ಬೆಂಗಳೂರಿನ ಆಸ್ಪತ್ರೆಯೊಂದರಲ್ಲಿ  ಮತ್ತೊಂದು ಹುಣ್ಣಿಮೆಯಂದು ಎರಡನೆಯ ಮಗಳು ಹುಟ್ಟಿದಳು. ಆದರೆ ಮಗು ಹುಟ್ಟಿದ ಸಮಯ ಸುಮ ಅತೀವ ವೇದನೆಯಲ್ಲಿದ್ದಳು. ಮಗು ಗೆಲುವಾಗಿದೆ ಎಂದು ಡಾಕ್ಟರರು ಹೇಳುವಾಗ ಅವರ ಮಾತಿನಲ್ಲಿ ಒಂದಷ್ಟು ದುಗುಡ ಇತ್ತು. ಸುಮ ತೀರ ರಕ್ತ ಕಳೆದುಕೊಳ್ಳುತ್ತಿದ್ದಳು. ಅವಳು ಚೀರುತ್ತಿದ್ದುದು ಹೊರಗೆ ಕುಳಿತವರಿಗೂ ಕೇಳುವಷ್ಟು ವೇದನೆಯಲ್ಲಿ ಅವಳಿದ್ದಳು. ಡಾಕ್ಟರರು ಕೂಡ ಗಾಬರಿ ಬಿದ್ದು ಒಂದಷ್ಟು ಹೊತ್ತು ನನ್ನನ್ನೂ ಹೊರಗೆ ಕಳುಹಿಸಿಬಿಟ್ಟರು. ಇನ್ನಷ್ಟು ರಕ್ತ ಕಳೆದುಕೊಂಡರೆ ಏನಾಗುತ್ತಿತ್ತೋ? ಗಟ್ಟಿ ಹುಡುಗಿ - ತಳೆದುಕೊಂಡಳು. ಇಬ್ಬರೂ ಹೆಣ್ಣುಮಕ್ಕಳೆಂದು ನಾವು ತುಂಬ ಖುಷಿಪಟ್ಟಿಕೊಂಡೆವು. ಹೊರಗೆ ಈ ಸುದ್ದಿ ತಿಳಿಸಿದಾಗ ಮಾತ್ರ ಅಲ್ಲಿದ್ದ ಹೊರಗಿನೊಬ್ಬರು - “ತೊಂದರೆಯಿಲ್ಲ. ಮುಂದಿನ ಸಾರಿ ಸರಿಯಾಗತ್ತೆ ಬಿಡಿ” ಎಂದುಬಿಟ್ಟರು. ನಾನು ಅವರನ್ನು ದುರುಗುಟ್ಟಿ ನೋಡಿದೆ. ನಾವು ಹಂಚುತ್ತಿದ್ದ ಸ್ವೀಟು ಅವರಿಗೆ ಸಿಗಲಿಲ್ಲ. 
 
(ಲೇಖನ ವಿಜಯ ಕರ್ನಾಟಕದಲ್ಲಿ ೧೩-೦೫-೨೦೧೮ ರಂದು ಪ್ರಕಟವಾಗಿತ್ತು. ಶೀರ್ಷಿಕೆ - ವಿದ್ಯಾ ರಶ್ಮಿ)
 

ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.
ಲೇಖನ ವರ್ಗ (Category): 

ಪ್ರತಿಕ್ರಿಯೆಗಳು

ಹಳೆಯ ನೋವಿನ ನೆನಪು ಮರುಕಳಿಸಿತು. ಹೆರಿಗೆಯ ಟೇಬಲ್ ಮೇಲೆ ಮಲಗಿದ್ದ ಪತ್ನಿಯನ್ನು ಡಾಕ್ಟರರು ಅರೆಬರೆ ಪ್ರಯತ್ನದ ನಂತರ ’ಇಲ್ಲಿ ಆಗಲ್ಲ, ಜಿಲ್ಲಾಸ್ಪತ್ರೆಗೆ ಕರೆದುಕೊಂಡು ಹೋಗಿ’ ಎಂದಾಗ ಹೇಗಾಗಬೇಕು. ಅರಕಲಗೂಡಿನಿಂದ ಆ ಸ್ಥಿತಿಯಲ್ಲಿ ಹಾಸನದ ಖಾಸಗಿ ಆಸ್ಪತ್ರೆಗೆ ಕರೆದೊಯ್ದ ಆ ಕರಾಳ ದೈಹಿಕ ಮತ್ತು ಮಾನಸಿಕ ನೋವಿನ ಅನುಭವ ಅನುಭವಿಸಿದವರಿಗೆ ಮಾತ್ರ ಗೊತ್ತು. ದೇವರು ದೊಡ್ಡವನು. ಆ ರೀತಿ ಭೂಮಿಗೆ ಬಂದ ನನ್ನ ಮಗಳಿಗೆ ಈಗ ಎರಡು ಮುದ್ದಾದ ಹೆಣ್ಣುಮಕ್ಕಳಿವೆ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.