ಮನೆಗೆ ಬಂದದ್ದು: ಕಾಫ್ಕಾ ಕಥೆ

To prevent automated spam submissions leave this field empty.

ವಾಪಸ್ಸು ಬಂದಿದೇನೆ. ಚಪ್ಪರ ದಾಟಿದೆ. ಸುತ್ತಲು ನೋಡಿದೆ. ನಮ್ಮಪ್ಪನ ಮನೆಯ ಅಂಗಳ. ಅಲ್ಲಿ ನಡೂ ಮಧ್ಯೆ ಒಂದಿಷ್ಟಗಲ ಕೆಸರು ನೀರು. ಮಹಡಿ ಮೆಟ್ಟಿಲಿಗೆ ಅಡ್ಡವಾಗಿ ಕೆಲಸಕ್ಕೆ ಬಾರದ ಹಳೆಯ ಸಾಮಾನುಗಳ ರಾಶಿ. ಮೆಟ್ಟಿಲ ಮೇಲೆ ಮಲಗಿರುವ ಬೆಕ್ಕು. ನಾವು ಆಟವಾಡುವಾಗ ಕೋಲಿಗೆ ಸುತ್ತಿಕೊಳ್ಳುತ್ತಿದ್ದ ಬಟ್ಟೆ ಚೂರು ಹಳೆಯದಾಗಿ ಗಾಳಿಯಲ್ಲಿ ಅಲ್ಲಾಡುತ್ತಾ ಬಿದ್ದಿದೆ. ಬಂದುಬಿಟ್ಟೆ. ಬಾ ಅಂತ ಕರೆಯುವವರು ಯಾರು? ಅಡುಗೆ ಮನೆಯ ಬಾಗಿಲ ಹಿಂದೆ ಇರುವವರು ಯಾರು? ಚಿಮಣಿಯಿಂದ ಹೊಗೆ ಏಳುತಿದೆ. ಕಾಫಿಯ ಪರಿಮಳ. ಈ ಮನೆಯವನಾ ನಾನು? ನನ್ನದೇ ಮನೆ ಅನ್ನಿಸುತಿದೆಯಾ? ಗೊತ್ತಿಲ್ಲ. ಹೇಳಲಾರೆ. ನಮ್ಮಪ್ಪನ ಮನೆ. ಒಂದೊಂದು ವಸ್ತುವೂ ಇನ್ನೊಂದರ ಪಕ್ಕದಲ್ಲಿ ತಮ್ಮದೇ ಕೆಲಸದಲ್ಲಿ ಮಗ್ನವಾದ ಹಾಗೆ ನಿಶ್ಚಲವಾಗಿ ನಿಂತಿದೆ. ಯಾವುದಕ್ಕೆ ಏನು ಕೆಲಸವೋ ಮರೆತೇ ಹೋಗಿದೆ. ಎಷ್ಟೋ ಕೆಲಸ ಗೊತ್ತೇ ಇರಲಿಲ್ಲ. ನನ್ನಿಂದ ಅವಕ್ಕೆ ಏನು ಉಪಯೋಗ? ನಾನು ಅಪ್ಪನ ಮಗನೇ ಇರಬಹುದು, ಹಳೆಯ ರೈತ ಅಪ್ಪ. ಅವುಗಳ ಪಾಲಿಗೆ ನಾನು ಯಾರು? ಅಡುಗೆ ಮನೆಯ ಬಾಗಿಲು ತಟ್ಟಲು ಧೈರ್ಯವಾಗಲಿಲ್ಲ. ದೂರದಿಂದಲೇ ಕೇಳಿಸಿಕೊಂಡೆ. ದೂರದಿಂದಲೇ. ಯಾರಾದರೂ ಬಂದು ನೋಡಿಬಿಟ್ಟರೆ ಎಂದು ಹುಷಾರಾಗಿ ನೆಟ್ಟಗೆ ನಿಂತೇ ದೂರದಿಂದ. ದೂರವಾದ್ದರಿಂದಲೇ ನನ್ನ ಚಿಕ್ಕಂದಿನ ಕಾಲದ ಗಡಿಯಾರದ ಸದ್ದು ಸಣ್ಣಗೆ ಕೇಳುತ್ತಿದೆ. ಇಲ್ಲ. ಕೇಳುತ್ತಿದೆ ಅಂತ ಊಹೆ ಮಾಡಿಕೊಳ್ಳುತಾ ಇದೇನೆ ಅಂತ ಕಾಣುತದೆ. ಅಡುಗೆ ಮನೆಯಲ್ಲಿ ಏನಾಗುತಿದೆಯೋ ಅದು ಅಲ್ಲಿರುವವರಿಗೆ ಮಾತ್ರ ಗೊತ್ತಿರುವ ಗುಟ್ಟು. ನನಗೆ ಗೊತ್ತಾಗದ ಹಾಗೆ ಕಾಪಾಡಿಕೊಂಡಿರುವ ರಹಸ್ಯ. ಬಾಗಿಲ ಹತ್ತಿರ ಹಿಂಜರಿದು ಹಾಗೇ ನಿಂತುಕೊಂಡಷ್ಟೂ ನನಗೇ ಅಪರಿಚಿತನಾಗುತಾ ಇದ್ದೇನೆ. ಯಾರಾದರೂ ಬಂದು ಬಾಗಿಲು ತೆಗೆದು ನನ್ನ ಕೇಳಿದರೆ ಏನಾದೀತು? ನನ್ನ ಗುಟ್ಟು ನಾನೇ ಕಾಪಾಡಿಕೊಳ್ಳುವವನ ಹಾಗೆ ನಾನೂ ವರ್ತಿಸಬಹುದಾ?

ಲೇಖನ ವರ್ಗ (Category): 

ಪ್ರತಿಕ್ರಿಯೆಗಳು

ಸರ್,

ಒಂಚೂರು ಭಾಷ್ಯದೊಡನೆ ಪ್ರಕಟಿಸಿದ್ದರೆ ಆಸ್ವಾದಿಸಲು ಸುಲಭವಾಗುತ್ತಿತ್ತು. ನನಗೆ ಅಷ್ಟಾಗಿ ಅರ್ಥವಾಗಲಿಲ್ಲ.
ಜಯದೇವ ಪ್ರಸಾದ.
’ಮೊಳೆಯಾರ’ , ಉಡುಪಿ.

dear OLN I would add my own story, drawn from Kakka ನಾನು ವಾಪಸ್ಸು ಬಂದಿದ್ದೆ. ವಿಸ್ತಾರ ಅಂಗಳ ದಾಟಿದೆ. ಸುತ್ತಲು ನೋಡಿದೆ. ನಮ್ಮಪ್ಪನ ಮನೆಯ ಅಂಗಳ. ಅಲ್ಲಿ ಅಲ್ಲಲ್ಲಿ ಕೆಸರು ನೀರು.ಅಂಗಳದಲ್ಲಿ ನಮ್ಮದಲ್ಲದ ಬೆಕ್ಕು, ನಾಯಿ. ನಾ ಬಂದರೂ ಬೊಗಳಲಿಲ್ಲ. ಅದೇನೋ ಆಪತ್ತು ಬಂದಂತೆ ಓಡಿಹೋಯಿತು. ನಾವು ಆಟವಾಡುವಾಗ ಇದ್ದ ಬದ್ದುಗಳು ಮಳೆ ಮಣ್ಣಿನಿಂದ ತುಂಬಿಹೋಗಿವೆ. ಮುಸುರೆ ಬಟ್ಟೆ, ಒರೆಸುವ ಬಟ್ಟೆ ಹಳೆಯದಾಗಿ ಕಟ್ಟಿದ ಹಗ್ಗದಲ್ಲಿ ಗಾಳಿಯಲ್ಲಿ ಅಲ್ಲಾಡುತ್ತಾ ಬಿದ್ದಿವೆ. ಹೋದವನು ಅಂತೂ ಬಂದುಬಿಟ್ಟೆ. ಬಾ ಅಂತ ಕರೆಯುವವರು ಯಾರು?ಬಾಗಿಲ ಹಿಂದೆ ಇರುವವರು ಯಾರು? ಚಿಮಣಿಯಿಂದ ಹೊಗೆ ಏಳುತಿದೆ. ಹುಳಿಸೊಪ್ಪು, ಮುದ್ದೆ ಬೇಯಿಸುವ ಪರಿಮಳ. ಅದು ನನ್ನ ಅಪ್ಪನ ಮನೆಯದದೋ, ತಾತನ ಮನೆಯದೋ, ದೊಡ್ಡಪ್ಪನ ಮನೆಯದೋ? ಅವೆಲ್ಲ ಒಂದೇ ಮತ್ತು ಬೇರೆ ಬೇರೆ. ಈ ಮನೆಯವನಾ ನಾನು? ನನ್ನದೇ ಮನೆ ಅನ್ನಿಸುತಿದೆಯಾ? ಗೊತ್ತಿಲ್ಲ. ಹೇಳಲಾರೆ. ನಮ್ಮಪ್ಪನ ಮನೆ. ಒಂದೊಂದು ವಸ್ತುವೂ ಇನ್ನೊಂದರ ಪಕ್ಕದಲ್ಲಿ ತಮ್ಮದೇ ಕೆಲಸದಲ್ಲಿ ಮಗ್ನವಾದ ಹಾಗೆ ನಿಶ್ಚಲವಾಗಿ ನಿಂತಿದೆ. ಯಾವುದಕ್ಕೆ ಏನು ಕೆಲಸವೋ ಮರೆತೇ ಹೋಗಿದೆ. ಎಷ್ಟೋ ಕೆಲಸ ಗೊತ್ತೇ ಇರಲಿಲ್ಲ. ನನ್ನಿಂದ ಅವಕ್ಕೆ ಏನು ಉಪಯೋಗ? ನಾನು ಅಪ್ಪನ ಮಗನೇ ಇರಬಹುದು, ಅಪ್ಪ. ಅವುಗಳ ಪಾಲಿಗೆ ನಾನು ಯಾರು? ದೂರದಿಂದಲೇ ಕೇಳಿಸಿಕೊಂಡೆ. ದೂರದಿಂದಲೇ. ಯಾರಾದರೂ ಬಂದು ನೋಡಲಿ ಎಂದು ಹುಷಾರಾಗಿ ನೆಟ್ಟಗೆ ನಿಂತೆ. ನನ್ನ ಚಿಕ್ಕಂದಿನ ಕಾಲದ ಎದೆಬಡಿತದ ಸದ್ದು ಸಣ್ಣಗೆ ಕೇಳುತ್ತಿದೆ. ಇಲ್ಲ. ಕೇಳುತ್ತಿದೆ ಅಂತ ಊಹೆ ಮಾಡಿಕೊಳ್ಳುತಾ ಇದೇನೆ ಅಂತ ಕಾಣುತದೆ. ಅಡುಗೆ ಮನೆಯಲ್ಲಿ ಏನಾಗುತಿದೆಯೋ ಅದು ಅಲ್ಲಿರುವವರಿಗೆ ಮಾತ್ರ ಗೊತ್ತಿರುವ ಗುಟ್ಟು. ನನಗೆ ಗೊತ್ತಾಗದ ಹಾಗೆ ನನಗೇ ಅಪರಿಚಿತನಾಗುತಾ ಇದ್ದೇನೆ. ಯಾರಾದರೂ ನನ್ನ ಕೇಳಿದರೆ ಏನಾದೀತು? R.Vijayaraghavan