ಗುಲಗಂಜಿ ನಿಮಗೆಷ್ಟು ಗೊತ್ತು... ?

To prevent automated spam submissions leave this field empty.

ಗುಲಗಂಜಿ ಎಂದರೆ ಬಹಳಷ್ಟು ಜನರಿಗೆ ತಿಳಿದಿದೆಯೋ ಇಲ್ಲವೋ ಗೊತ್ತಿಲ್ಲ.ನಗರವಾಸಿಗಳಿಗೆ ಇದರ ಪರಿಚಯ ಕಡಿಮೆಯೇ ಎನ್ನಬಹುದು.ಬಂಗಾರದ ಕೆಲಸ ಮಾಡುವವರಿಗೆ ಇದು ಚಿರಪರಿಚಿತ.ಹಿಂದಿನ ದಿನಗಳಲ್ಲಿ ಬಂಗಾರವನ್ನು ಗುಲಗಂಜಿ ತೂಕದಲ್ಲಿಯೇ ತೂಗುತ್ತಿದ್ದರಂತೆ.
ಗುಲಗಂಜಿ ದ್ವಿದಳ ಸಸ್ಯದಲ್ಲಿ ಬಿಡುವ ಒಂದು ಬೀಜ.ಇವುಗಳಲ್ಲಿ ಮೂರು ವಿಧಗಳಿವೆ.ಹಾಲಿನಕೆನೆ ಬಣ್ಣದ ಗುಲಗಂಜಿ, ಕೆಂಪು ಬಣ್ಣದ ಗುಲಗಂಜಿ,ಮತ್ತು ಕಪ್ಪು ಬಣ್ಣದ ಗುಲಗಂಜಿ.ಸಂಪದಿಗರಿಗಾಗಿ ಕೆಂಪು ಬಣ್ಣದ ಗುಲಗಂಜಿಯ ಚಿತ್ರ ಹಾಕಿದ್ದೇನೆ. (ಉಳಿದೆರಡು ರೀತಿಯ ಗುಲಗಂಜಿಗಳನ್ನು ಮುಂಬರುವ ದಿನಗಳಲ್ಲಿ ಅಪ್ಲೋಡ್ ಮಾಡ್ತೀನಿ).
ಗುಲಗಂಜಿ ತುಂಬಾ ಮನಮೋಹಕ ಬಣ್ನವುಳ್ಳದ್ದಾಗಿದ್ದು,ಇದರ ಗಾತ್ರ ತೊಗರಿ/ಹಲಸಂದೆ ಕಾಳಿನಷ್ಟಾಗಿರುತ್ತದೆ.ಮೈತುಂಬಾ ಕೆಂಪು ಇರುವ ಇದರ ಸೌಂದರ್ಯಕ್ಕೆ ಮನಸೋಲದ ಮಕ್ಕಳಿಲ್ಲ .ಇದನ್ನು ಬಾಯಿಯಲ್ಲಿಟ್ಟು ಕಡಿದರೆ ಕಹಿ.ಸುಮಾರು ಜನರಿಗೆ ಇದೊಂದು ಕೃತಕ ವಸ್ತುವಿನಂತೆ ಕಂಡರೂ ಇದೂ ಒಂದು ಪ್ರಕೃತಿಯ ಕೊಡುಗೆಯೆಂದು ತಿಳಿದಿಲ್ಲ.
ಗುಲಗಂಜಿಯ ಬಗ್ಗೆ ಪ್ರಚಲಿತವಾದ ಕಥೆಯೊಂದು ಹೀಗಿದೆ.ಗುಲಗಂಜಿ ಒಮ್ಮೆ ನನಗಿಂತಾ ಸುಂದರಿಯಿಲ್ಲ ಎಂದು ಬೀಗುತ್ತಿತ್ತಂತೆ.ಬೇರೆಯವರ ಬಣ್ಣ ನೋಡಿ ನಗುತ್ತಿದ್ದ ಗುಲಗಂಜಿಗೆ ತನ್ನ ಕೆಳಗಿರುವ ಕಪ್ಪು ಬಣ್ಣದ ಬಗ್ಗೆ ತಿಳಿದಿರಲಿಲ್ಲ.ಇದನ್ನು ಮಾರ್ಮಿಕವಾಗಿ ಹಳ್ಳಿಗಳಲ್ಲಿ ಬೀಗುವ ಜನರಿಗೆ ಹಿರಿಯವರು ಬುದ್ದಿ ಹೇಳುವಾಗ ಬಳಸುತ್ತಾರೆ.

"ಕೋತಿ ಕೈಗೆ ಗುಲಗಂಜಿ ಕೊಟ್ಟಂಗೆ" ಎಂಬ ಗಾದೆ ಕೂಡಾ ಇದೆ.ಬೆಲೆ ಗೊತ್ತಿಲ್ಲದವರ ಕೈಯಲ್ಲಿ ಬೆಲೆಬಾಳುವ ವಸ್ತುವೊಂದನ್ನು ಕೊಟ್ಟ್ರೆ ಏನಾಗಬಹು ಎನ್ನುವುದಕ್ಕೆ ಈ ಗಾದೆಯನ್ನು ಬಳಸುತ್ತಾರೆ. ಬಯಲು ಸೀಮೆಯ ಕುರುಚಲು ಕಾಡಿನ ಮುಳ್ಳು ಪೊದೆಗಳಲ್ಲಿ ಈ ಗಿಡ ಬೆಳೆಯುತ್ತದೆ. ಅರಿತವರಿಗೆ ಮಾತ್ರ ಗುಲಗಂಜಿಯ ಜಾಡು ತಿಳಿದು ಇದನ್ನು ಸಂಗ್ರಹಿಸುತ್ತಾರೆ.ಔಷಧೀಯ ಗುಣವಿರುವ ಗುಲಗಂಜಿಯ ವೈಜ್ನಾನಿಕ ಹೆಸರು ನನಗೆ ತಿಳಿಯದು.ಸಾಮಾನ್ಯವಾಗಿ ಬಿಳಿ ಗುಲಗಂಜಿಯನ್ನು ನಾಟಿ ವೈದ್ಯದಲ್ಲಿ ಬಳಸುತ್ತಾರೆ.(ನಾ.ಸೋಮೇಶ್ವರರವರು ಈ ವಿಷಯದಲ್ಲಿ ಸಹಕರಿಸಬಹುದು)

ಲೇಖನ ವರ್ಗ (Category): 

ಪ್ರತಿಕ್ರಿಯೆಗಳು

ಪಾಳೆಯಗಾರರೆ, ದುರ್ಗದ ಹಾಗು ಹಿರಿಯೂರಿನ ಹಳೆಯ ನೆನಪುಗಳನ್ನು ಕೆದಕಿದಿರಿ! ಮಾಮ ಮನೆಯ ಮುಂದೆ ಗುಲಗಂಜಿ ಗಿಡ ಹಾಕಿದ್ರು. 'ಗುಲಗಂಜಿ ತೂಕ' ಎಂಬ ಮಾತು ನೆನಪಿಲ್ಲದಿರದು. :-)

ನಾಡಿಗ್,
ಚೆನ್ನಾಗಿದ್ದೀರಾ?? ಮೊನ್ನೆ ಊರಿಗೆ ಹೋಗಿದ್ದಾಗ ಅಪರೂಪದ ಗುಲಗಂಜಿ ಗಿಡ ಸಿಕ್ತು,ಗೊತ್ತಲ್ಲಾ ನಮ್ ಕಥೆ.ಲಟ್ ಅಂತಾ ಫೊಟೋ ತೆಗೆದು ಸಂಪದಕ್ಕೆ ಅಪ್ಲೋಡ್.ವಸಂತ್,ಮುರಳಿ ಅನಿಲ್,ಶಿವು ಎಲ್ಲಾ ಚೆನ್ನಾಗಿದ್ದಾರೆ ತಾನೆ.
ಭೂಷಣ್

ನಮ್ಮಕಡೆ ಹೀಗೆ ಹೇಳ್ತಾರೆ "ಗುಲಗಂಜಿಗೆ ತನ್ನ ತಲೇಮೇಲಿರೋ ಕಪ್ಪು ಕಾಣೋದೇ ಇಲ್ವಂತೆ." ನಾವು ಚಿಕ್ಕವರಾಗಿದ್ದಾಗ ಅದರ ಬಣ್ಣಕ್ಕೆ ಮನಸೋತು ಸಂಗ್ರಹಿಸಿ ಇಟ್ಕೋತಿದ್ವು.

ಸೀತ ಆರ್. ಮೊರಬ್

ಚೆನ್ನಾಗಿದೆ ಚಿತ್ರ ಮತ್ತು ಪರಿಚಯ. ಗುಲಗಂಜಿ ಗಿಡ ಸಿಕ್ಕಾಪಟ್ಟೆ ಮುಳ್ಳಿರುತ್ತೆ. ಮತ್ತೆ ನಾನು ನೋಡಿರುವ ಗುಲಗಂಜಿಯಲ್ಲಿ ಕಪ್ಪು ಭಾಗ ಈ ಚಿತ್ರದಲ್ಲಿದ್ದಕ್ಕಿಂತ ಚಿಕ್ಕದಾಗಿತ್ತು -ಒಂದು . ಅದೂ ಅಲ್ಲದೆ, ಬೂದಿಗಂದು ಬಣ್ಣದ ಗುಲಗಂಜಿಯನ್ನೂ ನೋಡಿದ್ದೀನಿ.

ಹಂಸಾನಂದಿರವರೇ,
ಸಾಮಾನ್ಯವಾಗಿ ಒಳ್ಳೆಯ ವಾತಾವರಣದಲ್ಲಿ ಬೆಳೆದಿರುವ ಗುಲಗಂಜಿ ಬಣ್ಣ,ತೂಕ ಕಪ್ಪು ಮಚ್ಹೆ ಎಲ್ಲಾ ಒಂದೇ ತರಹ ಇರುತ್ತದೆ.ಬೂದು ಬಣ್ಣದ್ದೂ ಇರಬಹುದು, ಮಾಹಿತಿಗೆ ಧನ್ಯವಾದಗಳು,ಬೂದು ಬಣ್ಣದ್ದು ಪೊಟೊ ಸಿಕ್ಕರೆ ಹಾಕಿ.
ಭೂಷಣ್

ಕಪ್ಪು ಬಣ್ಣದ್ ನೋಡಿಲ್ಲ, ಉಳಿದೆರಡು ನಮ್ ಫೇವರೇಟ್ ಸಂಗ್ರಹ ವಸ್ತು ಆಗಿತ್ತು ಚಿಕ್ಕಂದಿನಲ್ಲಿ.. ಮತ್ತೆ ಮಂಜುಟ್ಟಿ ಅಂತ ಇನ್ನೊಂದ್ ಬೀಜ ಇದೆ,, ಹುಣಸೇ ಬೀಜದ ತರ ಚಪ್ಪಟೆ ಆದ್ರೆ ಕೆಂಪು ಬಣ್ಣದ್ದು, ಅದೂ ನನಗೆ ತುಂಬಾ ಇಷ್ಟ..

ಗುಲಗಂಜಿ, ಕುದುರೆಮಣಿ , ಶಂಖ ಮೊದಲಾದುವನ್ನು ಇಟ್ಟುಕೊಂಡು ನಾವು ಚಿಕ್ಕವರಿದ್ದಾಗ ಚೌಕ ಬಾರ ಆಟವನ್ನು ಆಡುತ್ತಿದ್ದೆವು. ಗುಲಗಂಜಿ ಬೀಜಗಳನ್ನು ನನ್ನ ಅಕ್ಕಂದಿರು ಮಹಾರಾಣಿ ಕಾಲೇಜಿನಿಂದ ತರುತ್ತಿದ್ದರು. ಈಗ ಆ ಗಿಡ ಅಲ್ಲಿ ಇದೆಯೋ ಇಲ್ಲವೋ ಗೊತ್ತಿಲ್ಲ. ಇತ್ತೀಚಿಗೆ ನಾನು ಮೈಸೂರಿಗೆ ಒಂದು ಶಾಲೆಗೆ (ಆಚಾರ್ಯ ಗುರುಕುಲ) ಹೋಗಿದ್ದಾಗ ಅಲ್ಲಿ ನೆಲದ ತುಂಬಾ ಕೆಂಪಗೆ ಚಿತ್ತಾರವನ್ನು ಕಂಡು ಹತ್ತಿರದಿಂದ ನೋಡಿದಾಗ ಅವು ಗುಲಗಂಜಿ ಬೀಜಗಳು. ಬಹಳ ಆಕರ್ಷಕ ಬೀಜಗಳು. ಕಪ್ಪು ಚುಕ್ಕೆ ಇರುವ ಬೀಜ ವಿಷ ಎಂದು ಕೇಳಿದ್ದೇನೆ.

ಗುಲಗಂಜಿಯಾ ಎಲ್ಲಾ ಕಾಳುಗಳು (ಬೀಜಗಳು) ಒಂದೇ ತೂಕ ಇರುತ್ತವಂತೆ. ಕೊಂಚವೂ ಹೆಚ್ಚು ಕಡಿಮೆ ಇರುವುದಿಲ್ಲವಂತೆ. ಹಾಗಾಗಿಯೇ ಗುಲಗಂಜಿಯನ್ನು ತೂಕಕ್ಕೆ ಬಳಸುತ್ತಿದ್ದರು.

ಹಂಪಿ ಮತ್ತು ಕಾಶಿಯ ಪಾವಿತ್ರ್ಯತೆಯನ್ನು ತೂಕ ಮಾಡುವಾಗ ಹಂಪಿಯ ತೋಕ ಕಾಶಿಗಿಂತ ಒಂದು ಗುಲಗಂಜಿ ಹೆಚ್ಚು ಬಂತಂತೆ. ತೂಕ ಮಾಡಿದ ಕೃಷ್ಣನನ್ನು "ಗುಲಗಂಜಿ ಕೃಷ್ಣ" ಎನ್ನುತ್ತಾರೆ, ಈ ಗುಡಿ ಹಂಪಿಯ ವಿರೂಪಾಕ್ಷ ದೇವರ ಗುಡಿಯ ಆವರಣದಲ್ಲಿದೆ.

ಭೂಷಣ್ ಅವರಿಗೆ ಧನ್ಯವಾದಗಳು.

ನೀವು ಚಿತ್ರದಲ್ಲಿ ತೋರಿಸಿರುವ ಗುಲಗಂಜಿಯ ಸಸ್ಯಶಾಸ್ತ್ರೀಯ ನಾಮಧೇಯ ‘ಏಬ್ರಸ್ ಪ್ರಿಕಟೋರಿಯಸ್’. ಇಂಗ್ಲೀಷಿನಲ್ಲಿ ಇದನ್ನು ಇಂಡಿಯನ್ ಲಿಕೋರಿಸ್ ಅಥವ ಕ್ಯಾಟ್ಸ್ ಐ ಎಂದು ಕರೆಯುವರು. ಸಂಸ್ಕೃತದಲ್ಲಿ ಇದು ‘ಗುಂಜ‘ ಎಂಬ ಹೆಸರಿದೆ. ಇದರ ತವರು ಮಲೇಶಿಯ. ಭಾರತದ ಕಾಡುಗಳಲ್ಲಿ ಮಧ್ಯಮ ಮಟ್ಟದ ಮರವಾಗಿ ಬೆಳೆಯುತ್ತದೆ.

ಗುಲಗಂಜಿಯ ರೂಪು ಬಣ್ಣ ಆಕರ್ಷಕ. ಆದರೆ ಇದು ಅಪಾಯಕಾರಿ. ನಮ್ಮ ವೈದ್ಯಕೀಯ ಶಿಕ್ಷಣದಲ್ಲಿ ವಿಷಶಾಸ್ತ್ರ (ಟಾಕ್ಸಿಕಾಲಜಿ) ಎನ್ನುವ ವಿಷಯ ಒಂದಿದೆ. ಅದರಲ್ಲಿ ವಿಷ ಸಸ್ಯಗಳನ್ನು ಅಧ್ಯಯನ ಮಾಡುತ್ತೇವೆ. ಅದರಲ್ಲಿ ಗುಲಗಂಜಿ ಒಂದು ಮುಖ್ಯ ಅಧ್ಯಾಯವಾಗಿದೆ. ಇದೊಂದು ವಿಷ ಬೀಜ. ಜೀವಹಾರಕ ಗುಣವನ್ನು ಹೊಂದಿದೆ. ಏಬ್ರಿನ್ ಎಂಬ ವಿಷವಿದೆ. ಗ್ರಾಮೀಣ ಪ್ರದೇಶಗಳಲ್ಲಿ ಇದರ ದುರುಪಯೋಗ ಹೆಚ್ಚು. ಯಾವ ಯಾವ ರೀತಿ ಗುಲಗಂಜಿಯ ವಿಷಪ್ರಯೋಗವನ್ನು ಮಾಡಬಹುದು ಎನ್ನುವುದು ಕುತೂಹಲಕರ ವಿಚಾರ. ಇದೊಂದು ಅಪಾಯಕರ ಅರಿವು ಆದ ಕಾರಣ, ಅವನ್ನೆಲ್ಲ ಇಲ್ಲಿ ಬರೆಯಲು ಹೋಗುವುದಿಲ್ಲ. ಈ ಅರಿವು ಇರುವವರೂ ಸಹಾ, ಅದನ್ನು ಪ್ರಸ್ತಾಪಿಸಬಾರದು ಎಂದು ನನ್ನ ವಿನಂತಿ. ಒಟ್ಟಿನಲ್ಲಿ ಇಷ್ಟು ಹೇಳಬಯಸುವೆ. ಗುಲಗಂಜಿ ವಿಷಬೀಜ. ಹಾಗಾಗಿ ಇದನ್ನು ತಿನ್ನಬಾರದು. ಗುಲಗಂಜಿಯನ್ನು ಬಾಯಿಯಲ್ಲಿ ಹಾಕಿಕೊಳ್ಳದಂತೆ ಮಕ್ಕಳಿಗೆ ಕಟ್ಟಾಜ್ಞೆ ನೀಡಿ.

ಜಾನಪದದಲ್ಲಿ ಗುಲಗಂಜಿ ವಿಶೇಷ ಸ್ಥಾನ ಪಡೆದಿದೆ. ಇದರ ಸುತ್ತಲೂ ಅನೇಕ ಒಗಟುಗಳಿವೆ. ಕೆಲವು ಸಂದರ್ಭಗಳಲ್ಲಿ ಹೆಣ್ಣನ್ನು ಗುಲಗಂಜಿಗೆ ಹೋಲಿಸುವುದುಂಟು.

-ನಾಸೋ

ಡಾಕ್ಟ್ರೇ,
ಎಂತಹ ಒಳ್ಳೆಯ ಮಾಹಿತಿ ನೀಡಿದ್ದೀರಿ.ನಿಜಕ್ಕೂ ಈ ಬೀಜದ ಆಕರ್ಷಣೆಗೆ ಒಳಗಾಗದ ಹಳ್ಳಿಗಾಡಿನ ಮಕ್ಕಳೇ ಅಪರೂಪ.ನಾನೂ ಚಿಕ್ಕವನಿದ್ದಾಗ ಇದನ್ನು ಬಾಯಿಯಲ್ಲಿ ಹಾಕಿ ಕಡಿದು ಇದರ ಬೇಳೆಯನ್ನು ಬೇರ್ಪಡಿಸಿದ ಜ್ನಾಪಕವಿದೆ.ಆಗಲೇ ಅದರ ವಿಷದ ಅನುಭವವಾಗಿದ್ದದ್ದು.
ಅಂದಹಾಗೆ ತಾವು "ಥಟ್ ಅಂತ ಹೇಳಿ " ನಾ .ಸೋ.ರವರೇ,???? ನಮ್ಮ ಸಂಪಾದಕೀಯದ "ತಲಪರಿಗೆ-- ಜೀವ ಪೊರೆಯುವ ಜಲನಿಧಿ"ಪುಸ್ತಕವನ್ನು ನಿಮ್ಮ ಕಾರ್ಯಕ್ರಮಕ್ಕೆ ಉಡುಗೊರೆಯಾಗಿ ನೀಡಬಹುದೇ, ತಿಳಿಸಿ.
ಧನ್ಯವಾದಗಳು.
ಭೂಷಣ್ ಮಿಡಿಗೇಶಿ

ಭೂಷಣ್ ಅವರೆ!

ಖಂಡಿತಾ ಪುಸ್ತಕವನ್ನು ನೀಡಬಹುದು.
೧೦ ಪ್ರತಿಗಳನ್ನು ನೇರವಾಗಿ ದೂರದರ್ಶನಕ್ಕೆ ಕಳುಹಿಸಿ. ಈ ಪುಸ್ತಕಗಳನ್ನು ಉಚಿತವಾಗಿ ನೀಡಬೇಕಾಗುತ್ತದೆ. ಸಾವಕಾಶವಾಗಿ ಪುಸ್ತಕಗಳನ್ನು ಬಹುಮಾನವಾಗಿ ನೀಡುವರು.

-ನಾಸೋ

ಸರ್‍,
ಇದು ನಮಗೆ ಚಿರಪರಿಚಿತ.
ಹೇಳಿ ಕೇಳಿ ನಮ್ಮೂರು ಗುಳೇದಗುಡ್ಡ, ನಮ್ಮೂರಿನ ಗುಡ್ಡದಾಗ ಇವು ಕಂಡು ಬರ್ತಾವು. ಗುಲಗಂಜಿಯನ್ನ ಮನೆಯಲ್ಲಿ ಮಾತಿದ ಕೆಲವು ಕಸೂತಿ ಕೆಲಸಗಳಲ್ಲಿ ಬಳಸುತ್ತಾರೆ. ಮತ್ತೆ ಮಣ್ಣೆತ್ತಿನ ಅಮಾವಾಸೆಯಲ್ಲಿ ಮಣ್ಣಿಂದ ಎತ್ತುಗಳನ್ನು ಮಾಡುತ್ತಾರಲ್ಲ ಅವಾಗ ಈ ಕಣ್ಣುರೂಪ ಕೊಡಲು ಈ ಗುಲಗಂಜಿಯನ್ನು ಬಳಸುತ್ತಾರೆ. ನಾವು ಸಣ್ಣವರಿದ್ದಾಗ ಗುಡ್ಡ ಗುಡ್ಡ ತಿರಗ್ಯಾಡಿ ಇವನ್ನ ತಗೊಂಡು ಬರತಿದ್ವಿ. ನಮ್ಮಕಡೆ ಕೆಂಪು ಬಣ್ಣದ ಗುಲಗಂಜಿ ಸಿಗುತ್ತವೆ. ಬಿಳಿ ಗುಲಗಂಜಿ ನೋಡಿದ್ದು ನೆನಪಿಲ್ಲ.

ನಲ್ಮೆಯ,
ಗಿರೀಶ ರಾಜನಾಳ.

ರಾಜನಾಳರವರೇ
ಒಳ್ಳೆಯ ಮಾಹಿತಿ,ಈಗ ಪ್ರತಿಕ್ರಿಯೆಗಳನ್ನು ನೋಡುವಾಗ ನಮ್ಮ ಸಹೋದ್ಯೋಗಿ ಬಾದಾಮಿಯ ಪೂರ್ಣಿಮಾರವರು ಇದೇ ವಿಷಯವನ್ನು ಪ್ರಸ್ತಾಪ ಮಾಡುತ್ತಿದ್ದರು.ಗೌರಿಹುಣ್ಣಿಮೆಯಂದು ಗೌರಿಗೆ ಕೂಡಾ ಇದರಲ್ಲೇ ಕಣ್ಣನ್ನೂ ಇಡುತ್ತಾರೆ ಎಂಬ ಮಾಹಿತಿ ಕೂಡಾ ನೀಡಿದರು.ಧನ್ಯವಾದಗಳು.
ಭೂಶಣ್

ಚಿಕ್ಕವನಿದ್ದಾಗ ನಮ್ ಅಕ್ಕಸಾಲಿಗ ಗುಲಗಂಜಿ ಹಿಡಿದು ಅಳೆಯೋದನ್ನ ಕುತೂಹಲದಿಂದ ನೋಡ್ತಿದ್ದೆ...
ಅದನ್ನ ನೋಡ್ದಾಗ್ಲೆಲ್ಲ, ನಂಗೂ ಗುಲಗಂಜಿ ಜೊತೆ ಆಡಕ್ಕೆ ತುಂಬಾ ಆಸೆ ಆಗ್ತಿತ್ತು...
ಇಂದಿನವರೆಗೂ ನನಗೆ ಗುಲಗಂಜಿ ಕೈಲಿ ಹಿಡಿಯೋ ಭಾಗ್ಯ ಸಿಕ್ಕಿಲ್ಲ :(

ಧನ್ಯವಾದಗಳು! ನಮ್ ಹಳ್ಳಿ ಕೂಡ ನಿಮ್ ಮಿಡಗೇಶಿ ಹತ್ರಾನೇ...
ಕೊಡಿಗೇ ಹಳ್ಳಿ ಹೋಬಳಿ, ಮಧುಗಿರಿ ತಾಲ್ಲೂಕು...
ನಮ್ ಊರಿನಲ್ಲಿ ಗುಲಗಂಜಿ ಗಿಡ ನೋಡಿಲ್ಲ...ಮುಂದಿನ್ ಬಾರಿ ಗಮನಿಸಿ ನೋಡ್ಬೇಕು...

ಶ್ರೀನಿವಾಸ್
ನಿಮ್ಮುದ್ ಯಾವೂರ್ ಹೇಳಿ,ಕೊಡಿಗೇನಳ್ಳಿ ನನಗೆ ಚೆನ್ನಗ್ಗೊತ್ತು,ನಮ್ಮಕ್ಕ ಅಲ್ಲೇ ಇದಾರೆ,ನಿಮ್ ಹೋಬ್ಳಿ ತುಂಬಾ ಪರಿಚಯ ಜಾಸ್ತಿನೇ ಇದೆ,
ಭೂಷಣ್ ಮಿಡಿಗೇಶಿ

ಅಕ್ಕಸಾಲಿಗ ಅಥವಾ ಸೊನೆಗಾರ ನಿಮ್ಮ ಹತ್ತಿರ ಬಂಗಾರ ತೆಗೆದುಕೊಂಡು ಆಭರಣ ತಯಾರಿಸಲು ನೀವು ಕೊಟ್ಟ ಬಂಗಾರವನ್ನು ತನ್ನ ಸಲಕರಣೆಯಿಂದ ಕುಟ್ಟಲು ತೊಡಗಿದಾಗ ಬರುವ ಸದ್ದೇನು ಗೊತ್ತೆ? "ಕೊಟ್ಟೊಂ ಕೆಟ್ಟಂ" ಅಂದರೆ (ಬಂಗಾರ ತನ್ನ ಕೈಗೆ) ಕೊಟ್ಟವನು ಕೆಟ್ಟ.

ಗುಲಗಂಜಿಯ ಕಾಳಿನಲ್ಲಿ ಕೆಂಪು-ಕಪ್ಪು ಬಣ್ಣಗಳ ಅಳತೆಗಳು ಭೂಮಿಯ ಮೇಲಿನ ನೀರು-ಭೂಮಿಗಳ ಪ್ರಮಾಣದ ಅನುಪಾತವನ್ನು ಸೂಚಿಸುತ್ತದಂತೆ. ಇದನ್ನು ಬಹಳ ಮಂದಿಯಿಂದ ಕೇಳಿದ್ದೇನೆ.
೭೦%-೩೦% ನೀರು-ಭೂಮಿ ಎಂದು ಓದಿದ್ದೇವೆ. ಹಾಗೆಯೇ ಗುಲಗಂಜಿಯಲ್ಲೂ ಸರಿ ಸುಮಾರು ಅಷ್ಟೇ ಪ್ರಮಾಣದಲ್ಲಿ ಕೆಂಪು-ಕಪ್ಪು ಇದೆ. ಆ ಗಿಡ ಬೆಳೆಯುವ ಬೇರಿನ ಮೂಲಕವೇ ಇಡೀ ಭೂಮಿಯ ಸೂಕ್ಷ್ಮವನ್ನು ಅದು ಗ್ರಹಿಸುತ್ತದಂತೆ !!

ಸುಬ್ಬಿ ರವರೇ,
ಹಳ್ಳಿಗಾಡಿನ ಹುಡುಗರಿಗೆ ಈ ತರಹದ ಬೋನಸ್ ವಿಶಯಗಳು ಜಾಸ್ತಿ ಇರ್ತವೆ.ಅಗಾಗ ಹಲ್ಳಿಗೆ ಬಂದರೆ ನಿಮಗೂ ಸಿಗಬಹುದು.
ಧನ್ಯವಾದಗಳು.
ಭೂಷನ್

ವಾ..ಗುಲಗಂಜಿಗೆ ದೇವರು ಅದೆಂಥಾ ಸುಂದರ ರೂಪ ಕೊಟ್ಟಿದ್ದಾನೆ. ನಿಜಕ್ಕೂ ಅದ್ಭುತ..ನನ್ನ ಬಳಿ ಇಂದಿಗೂ ಸಾಕಷ್ಟು ಗುಲಗಂಜಿಗಳಿವೆ, ಚಿತ್ರ ಬರೆದು ಅದರಿಂದ ಅಲಂಕಾರ ಮಾಡಿದರೆ ತುಂಬಾ ಅಂದವಾಗಿರುತ್ತದೆ.. ನಮ್ಮ ಊರಲ್ಲಿ ಹಾಗೂ ಮನೆಯಲ್ಲೂ ಸಾಕಷ್ಟು ಇದರ ಗಿಡಗಳಿವೆ....