ಱ ಮತ್ತು ರ ಹಾಗೂ ೞ ಮತ್ತು ಳ ಗಳ ನಡುವಿನ ಉಚ್ಚಾರವ್ಯತ್ಯಾಸ

5

ಹೞಗನ್ನಡದಲ್ಲಿ ಬೞಸುವ ರ, ಱ, ಳ, ೞ ಇವುಗಳಲ್ಲಿ ಉಚ್ಚಾರವ್ಯತ್ಯಾಸ ಬಹಳಷ್ಟು ಕನ್ನಡಿಗರಿಗೆ ತಿಳಿದಿಲ್ಲ. ಆದ್ದರಿಂದ ಪಕ್ಕದ ತಮಿೞರು ಹಾಗೂ ಮಲಯಾಳಿಗಳು ಈ ಎರಡು ಅಕ್ಷರಗಳು ತಮ್ಮ ಭಾಷೆಯಲ್ಲಿ ಮಾತ್ರ ಇವೆಯೆಂದು ಬೆನ್ನು ತಟ್ಟಿಕೊಳ್ಳುತ್ತಾರೆ. ಅಚ್ಚಕನ್ನಡಿಗನಾದ ನಾನು ಈ ಅಕ್ಷರಗಳ ನಡುವಿನ ವ್ಯತ್ಯಾಸ ತಿಳಿಸುತ್ತೇನೆ.

ರ: ಮಾಮೂಲಿನಂತೆ ದಂತಮೂಲ(ಹಲ್ಲಿನ ಬುಡ)ದಲ್ಲಿ ಹೊರಡುವ ವ್ಯಂಜನ. ಇದು ತಾಡಿತ. ಅಂದರೆ ನಾಲಿಗೆ ದಂತಮೂಲವನ್ನು ಹೊಡೆಯುತ್ತದೆ.

ಱ: ಇದು ದಂತಮೂಲೀಯ ಕಂಪಿತ. ಅಂದರೆ ಈ ಅಕ್ಷರ ’ರ’ ದ ಉಚ್ಚಾರಕ್ಕಿಂತ ಸ್ವಲ್ಪ ಕೆೞಗೆ ಇದ್ದು ಉಚ್ಚರಿಸುವಾಗ ನಾಲಿಗೆ ಕಂಪಿಸಬೇಕು. ಉದಾಹರೆಣೆಗೆ ಕನ್ನಡಿಗರು ಒಬ್ಬ ವ್ಯಕ್ತಿ ತೀರಾ ಕಪ್ಪಗಿದ್ದಾನೆಂದು ಹೇೞುವಾಗ ’ಆತ ಕಱಿಯ’ ಎಂದು ಸರಿಯಾಗಿ ನಾಲಿಗೆ ಕಂಪಿಸಿ ಉಚ್ಚರಿಸುತ್ತಾರೆ. ಹಾಗೆಯೇ ’ಬಱಿ ತಲೆಹಱಟೆ’ ಎನ್ನುವಾಗ ಕೂಡ ನೀವು ಗಮನಿಸಬಹುದು.

ಳ: ಮಾಮೂಲಿನಂತೆ ಮೂರ್ಧನ್ಯವಾಗಿದ್ದು ಟ ಠ ಡ ಢ ಣ ಉಚ್ಚರಿಸುವ ಸ್ಥಳದಲ್ಲೇ ಉಚ್ಚರಿಸುತ್ತೇವೆ. ಳ ಪ್ರತಿವೇಷ್ಟಿತ ಅಂದರೆ ನಾಲಿಗೆ ಮೇಲ್ಮುಖವಾಗಿ ಸುರುೞಿಗೊಳ್ಳುತ್ತದೆ.
ೞ: ಇದು ತಾಲವ್ಯವಾಗಿದ್ದು ಚ ಛ ಜ ಝ ಞ ಉಚ್ಚರಿಸುವ ಸ್ಥಳದಲ್ಲೇ ಉಚ್ಚರಿಸಲ್ಪಡುತ್ತದೆ. ಇದು ಈಷತ್ಪ್ರತಿವೇಷ್ಟಿತ ಅಂದರೆ ’ಳ’ ಕ್ಕಿಂತ ’ೞ’ ಉಚ್ಚರಿಸುವಾಗ ತುಸುವೇ ನಾಲಿಗೆ ಸುರುೞಿಗೊಳ್ಳುತ್ತದೆ. ಇದನ್ನು ಆಕ್ಷೇಪಿಸುವುದು ಅಥವಾ ಹೆಚ್ಚಿನ ವಿಚಾರವನ್ನು ತಿಳಿಸುವುದಾದರೆ kannadamaga@gmail.com ಗೆ ದಯವಿಟ್ಟು ಪತ್ರ ಬರೆಯಿರಿ.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಕನ್ನಡಕಂದರೆ,

>>>ತಮಿೞರು ಹಾಗೂ ಮಲಯಾಳಿಗಳು ಈ ಎರಡು ಅಕ್ಷರಗಳು ತಮ್ಮ ಭಾಷೆಯಲ್ಲಿ ಮಾತ್ರ ಇವೆಯೆಂದು ಬೆನ್ನು ತಟ್ಟಿಕೊಳ್ಳುತ್ತಾರೆ.

ಈ ಅಕ್ಷರಗಳು ಇರುವುದಾಗಲೀ, ಇರದೇ ಇರುವುದಾಗಲಿ, ಯಾವುದೇ ನುಡಿಯನ್ನು ಹಿರಿದು ಅಥವಾ ಕಿರಿದಿ ಮಾಡುವುದಿಲ್ಲ. ಅವರ ಮಾತಿಗೆ ಆ ಸೊಲ್ಲು ಬೇಕಾದರೆ ಇಟ್ಟುಕೊಳ್ಳಲಿ. ಸಂತೋಷ. ಅದರಲ್ಲಿ ಬೆನ್ನು ತಟ್ಟಿಕೊಳ್ಳುವ ಅಂಶ ಏನಿದೆ? ಅಲ್ಲವೇ?

>>>ಇದನ್ನು ಆಕ್ಷೇಪಿಸುವುದು ಅಥವಾ ಹೆಚ್ಚಿನ ವಿಚಾರವನ್ನು ತಿಳಿಸುವುದಾದರೆ

ಇದು ಆಕ್ಷೇಪಣೆಯೇ? ಗೊತ್ತಿಲ್ಲ. ಆದರೆ, ಇಂದು ನಾವು ಕನ್ನಡದಲ್ಲಿ ಆಡುವ ಯಾವ ಮಾತಿನಲ್ಲೂ ರ ಮತ್ತು ಱ ಗಳ ನಡುವೆ, ಹಾಗೇ, ಳ ಮತ್ತು ೞ ಗಳ ನಡುವೆ ವ್ಯತ್ಯಾಸ ಕಂಡುಬರದು ಅನ್ನುವುದು ನನ್ನ ನಂಬುಗೆ. ಇದು ಈ ಅಕ್ಷರಗಳ ಮೂಲ ಉಚ್ಚಾರಣೆಯನ್ನು ನಾನು ಅರಿತಿರುವುದರಿಂದ (ನಾನು ತಮಿಳನ್ನು, ಕ್ಷಮಿಸಿ, ತಮಿೞನ್ನು ಚೆನ್ನಾಗಿಯೇ ಮಾತಾಡಬಲ್ಲೆ) ಹೇಳುವ ಮಾತು. ಯಾವ ಕನ್ನಡಿಗನೂ ಕೆಳಗೆ ಅನ್ನುವುದನ್ನು ಕೆೞಗೆ ಎಂದು ಹೇಳುವುದನ್ನು ಇಲ್ಲಿಯವರೆಗೂ ನಾನು ಕೇಳಿಲ್ಲ!

ತಮಿಳುನಾಡಿನಲ್ಲೇ ಕೆಲವು ಭಾಗಗಳಲ್ಲಿ ೞ ಮರೆಯಾಗಿ, ಅದರ ಎಡೆಯಲ್ಲಿ ಳ ಉಪಯೋಗಿಸುವ ರೂಢಿಯಿದೆ (ಉದಾಹರಣೆಗೆ ವಾೞಪೞಮ್ ಬದಲು ವಾಳಪಳಂ).

-ಹಂಸಾನಂದಿ
ನನ್ನ (mostly) ಇಂಗ್ಲಿಷ್ ಬ್ಲಾಗ್ - ಅಲ್ಲಿದೆ ನಮ್ಮ ಮನೆ:- http://neelanjana.wordpress.com/
ನನ್ನ ಪಾಡ್ ಕಾಸ್ಟ್ ಗಳು :- http://hamsanandi.mypodcast.com/

ನಮ್ಮಮ್ಮ ಹೇಳುದ್ರು. ಬಿದಿರು ಮೆಳೆ ನೆ ಕರೆಕ್ಟ್ ಅಂತ :)
ನಮ್ಮಮ್ಮನೇ ಹಿಣಿಲು, ವೋನಿಸು ಈ ಪದಗಳ ಬಗ್ಗೆ ನಂಗೆ ಹೇಳಿಕೊಟ್ಟಿದ್ದು. ಅವರ ಪದಾರಿಮೆ ಬಗ್ಗೆ ನನಗೆ ನಂಬುಗೆ ಹೆಚ್ಚು.
ಹಿಣಿಲು( ಎತ್ತಿನ ಬೆನ್ನಿನ ಮೇಲಿನ ಗುಪ್ಪೆ)
ವೋನಿಸು( ರಾಗಿ ಮುದ್ದೆಯನ್ನು ವೋನಿಸುವುದು)

--
ಕನ್ನಡಕ್ಕೆ ಬೇಕು ಕನ್ನಡದೇ ಸೊಬಗು,ಸೊಗಡು

ಕನ್ನಡದ ಜಾಣ ಜಾಣೆಯರೇ,
ರ ಮತ್ತು ಱ(ಕಂಪಿತ ನಡುಗುವ ಱಗಳ ನಡುವಿನ ವ್ಯತ್ಯಾಸಗಳನ್ನು ಈ ಕೆೞಗಿನ ಉದಾಹರಣೆಯಲ್ಲಿ ತೋಱಿಸುತ್ತೇನೆ.

ಮೞೆಗಾಲದ ದಿನ. ಹೊಱಗಡೆ ಮೞೆಯೆಲ್ಲಾ ಹೊೞೆಯಾಗಿ ಹರಿದಿತ್ತು. ನಮ್ಮನೆಯ ಪಾಪು ಮನೆಯೊಳಗೆ ಕಾಗದವೊಂದನ್ನು ಪಱ್‍ ಎಂದು ಹಱಿದಿತ್ತು. (ಹರಿ=ಹೊೞೆ ಹರಿ, ಹಱಿ=ಕಾಗದ ಹಱಿ) ಛಾವಣಿಯಲ್ಲಿ ಮೞೆನೀರು ಸುರಿದಿತ್ತು. ನಾವೊಳಗಡೆ ಪಾಯಸವನ್ನು ಸುಱ್‍ ಎಂದು ಸುಱಿದಿದ್ದೆವು (ಸುರಿ=ದ್ರ್ವವ ಪದಾರ್ಥ ಸುರಿಯುವುದು, ಸುಱಿ=ಶಬ್ದ ಮಾಡುತ್ತಾ ಹೀರುವುದು). ಬೇಸಱ ಕಳೆಯಲು ಜನರೆಲ್ಲ ಬಱಿ ಹಱಟೆ ಹೊಡೆಯುತ್ತಿದ್ದರು. ಈ ಹೊತ್ತಿಗೆ (ಹೊೞ್ತಿಗೆ) ಕಾದಿದ್ದ ಕಱಿಯ ಬೆಕ್ಕೊಂದು ಮನೆಯಲ್ಲಿದ್ದ ಹಾಲನ್ನೆಲ್ಲ ಹೀರಿತ್ತು. (ಈ ಬಱಿ ಮತ್ತು ಕಱಿಯ ನಾವು ವಿಶೇಷಣವನ್ನು ಹೇೞುವಾಗ ನಾಲಿಗೆಯನ್ನು ನಡುಗಿಸಿ ಱ ಬೞಸುತ್ತೇವೆ). ನೀಱನೀಱೆಯರು (ನಾಚಿಕೆಯಿಂದಲೋ ಚಳಿಯಿಂದಲೋ ನಡುಗುವುದಱಿಂದ ನೀಱನೀಱೆಯರಿಗೆ ನಡುಗುವ ಱ) ಒಬ್ಬರನ್ನೊಬ್ಬರು ನೋಡಿ ನೀರಾದರು. ಬಂದ ಅತಿಥಿಗಳಿಗೆ ಅಮ್ಮ ಆಡಿಗೆಗೆಂದು ಹೆಸಱ ತೊವ್ವೆ ಮಾಡಲು ಹೆಸಱುಬೇಳೆಯನ್ನು ಈ ಮುಂಚೆ ಇದನ್ನು ನೋಡದ ಅತಿಥಿಯೊಬ್ಬ ಕೇಳಿದ ಇದಕ್ಕೇನು ಹೆಸರು. ನಾವೆಂದೆವು ಅದಱ ಹೆಸರು ಹೆಸಱುಬೇಳೆ. (ಹೆಸರು= ನಿನ್ನ ಹೆಸರೇನು? ಹೆಸಱು= ಹೆಸಱುಬೇಳೆ ಅಥವಾ ಹೆಸಱುಕಾಳು ಸಂದರ್ಭಕ್ಕೆ ತಕ್ಕಂತೆ). ನೀವು ಇನ್ನು ಕೆಲವು ಉದಾಹರಣೆಗಳನ್ನು ಕೊಡಬಹುದು

ಗುಱುಱಾಜ
www.kannadaguru.blogspot.com

ಧನ್ಯವಾದಗಳು ಸರ್, ನನಗೆ ಇವುಗಳ ಬಗ್ಗೆ ಬಹಳ ಗೊ೦ದಲವಿತ್ತು .ಹಳೆಗನ್ನಡದ ಱ ದ ಬದಲಾಗಿ ರ ಈಗ ಉಪಯೋಗಿಸಲ್ಪಡುತ್ತದೆ ಎ೦ದು ನಾನು ತಿಳಿದಿದ್ದೆ.ಆದರೆ ಮೊನ್ನೆ "ರನ್ನನ ಗದಾಯುಧ್ಧ"ವನ್ನು ಓದುವಾಗ ಕೆಲವು ಶ್ಲೋಕಗಳಲ್ಲಿ ಎರಡೂ ರ ಗಳು ಬಳಕೆಯಲ್ಲಿರುವುದು ನೋಡಿ ತು೦ಬಾ ಗೊ೦ದಲಕ್ಕೀಡಾಗಿದ್ದೆ.

ಕನ್ನಡ ಜಾಣ ಜಾಣೆಯರೆ,

ೞ ಮತ್ತು ಳಕಾರದ ಬೞಕೆಯ ಭಿನ್ನತೆಗಳನ್ನು ನಿಮಗೀಗ ತಿಳಿಸುತ್ತೇನೆ.

ಮೞೆ ಹೊೞೆಯಾಗಿ ಹರಿದಿತ್ತು. ಮೞೆಯ ನೀರು ಎಲೆಯ ತುದಿಯಲ್ಲಿ ಸೂರ್ಯನ ಬೆಳಕಿಂದ ಮುತ್ತಂತೆ ಹೊಳೆದಿತ್ತು. (ಹೊೞೆ= ನದಿ, ಹೊಳೆ=ಬೆಳಕಿನಿಂದ ಪ್ರಕಾಶಿಸು)

ಬಾೞೆಯ ಗಿಡ ಹಣ್ಣಿನ ಭಾರದಿಂದ ತೊನೆದಿತ್ತು. ನೀಱನ ನೋಟದಿಂದ ನೀಱೆಯ ಮನ ಬಾಳೆಯಂತೆ ಚಲಿಸಿತ್ತು. (ಬಾೞೆ= ಬಾೞೆಹಣ್ಣಿನ ಗಿಡ, ಬಾಳೆ= ಒಂದು ಜಾತಿ ಸಣ್ಣ ಮೀನು. ಇದು ನೀರಿನಲ್ಲಿ ತುಂಬಾ ಚಂಚಲವಾಗಿ ಚಲಿಸುತ್ತಂತೆ).
ಬವರದಲ್ಲಿ ಸೈನಿಕನು ಬಾಳಿಂದ ಎದುರಿನ ಬಾೞ್‍ಗೆಡವಿದನು (ಬಾಳ್‍=ಕತ್ತಿ, ಬಾೞ್‍=ಬದುಕು ಜೀವ)

ಮುಂದುವರೆಸಿ ನನ್ನ ಕಿಡಿಗೇಡಿ ಮಿತ್ರನೊಬ್ಬ ಕೊಟ್ಟ ಇನ್ನೊಂದು ಉದಾಹರಣೆ ’ಱ’ ಮತ್ತು ’ರ’ಗಳ ಉಪಯೋಗ ವ್ಯತ್ಯಾಸಕ್ಕೆ ಇಲ್ಲಿ ಕೊಡುತ್ತಿದ್ದೇನೆ. ಇಲ್ಲಿರುವ ಶ್ಲೇಷೆಯನ್ನು ಗಮನಿಸಿ. (ಮಾನ್ಯ ಮಾನಿನಿಯರ ಕ್ಷಮೆ ಕೇಳಿ)
’ಒಟ್ಟಿಗೆ (ಮೈ) ನೆಱೆದ ಹೆಣ್ಣುಮಕ್ಕಳೆಲ್ಲ ಒಟ್ಟಿಗೆ ನೆರೆದಿದ್ದಾರೆ. (ನೆಱೆ=ತುಂಬು, ಪೂರ್ಣವಾಗು. ಇಲ್ಲಿ (ಮೈ)ನೆಱೆ=ಪುಷ್ಪವತಿಯಾಗು, ನೆರೆ=ಸೇರು, ಗುಂಪುಗೂಡು)
ಇದಱ ಒಟ್ಟು ಅರ್ಥ (ಕಿಡಿಗೇಡಿ ಮಿತ್ರನ ಪ್ರಕಾರ);"ಒಂದೇ ಹೊತ್ತಿಗೆ (ಒಟ್ಟಿಗೆ)ಪುಷ್ಪವತಿಯರಾದ ಹೆಣ್ಣುಮಕ್ಕಳೆಲ್ಲ ಒಂದೇ ಕಡೆ (ಒಟ್ಟಿಗೆ) ಸೇರಿದ್ದಾರೆ (ಗುಂಪುಗೂಡಿದ್ದಾರೆ).

’ೞ’ ಕನ್ನಡದಲ್ಲಿ ೧೨ನೇ ಶತಮಾನದ ಅಂತ್ಯದಲ್ಲಿ ಶಿಷ್ಟಪ್ರಯೋಗದಿಂದ ಮಱೆಯಾಯಿತು. ’ಱ’ ಸುಮಾರು ೧೮ನೇ ಶತಮಾನದ ಕೊನೆಗೆ ಕಣ್ಮಱೆಯಾದರೂ ಈಗಲೂ ಜನರ ನಿಜ ಜೀವನದಲ್ಲಿ ’ಕಱಿಯ’ ’ಬಱಿ’ ಎಂದು ಒತ್ತಿಹೇೞುವಾಗ ’ಱ’ ವನ್ನು ನಾಲಿಗೆ ನಡುಗಿಸಿ ಹೇೞುತ್ತೇವೆ. ಹಾಗೆಯೇ ಇದಱಿಂದ ಸಾಧಿತವಾದ ಶಬ್ದಗಳಾದ ’ಬಱ’ ’ಬಱಸಿಡಿಲು’ ಇತ್ಯಾದಿಗಳಲ್ಲೂ ’ಱ’ ವನ್ನೇ ಬೞಸಬೇಕು. ಆದರೆ ಕೆಲವು ಶಬ್ದಗಳಲ್ಲಿ ಅವುಗಳ ಅರ್ಥಕ್ಕನುಸಾರವಾಗಿಯೂ ತಿಳಿದುಕೊಳ್ಳಬಹುದು. ಉದಾಹರಣೆಗೆ. ನೀರು ಹರಿಯುತ್ತದೆ. ಕಾಗದವೂ ಹಱಿಯುತ್ತದೆ (’ಪಱ್’ ಎಂಬಲ್ಲಿ ಕಾಗದ ಹಱಿಯುವ ಶಬ್ದವನ್ನು ಸೂಚಿಸಬೇಕಾವುದಱಿಂದ ಕಂಪಿತ ಱ). ಮೞೆ ಸುರಿಯುತ್ತದೆ. ಪಾಯಸವನ್ನು ಸುಱ್ ಎಂದು ಸುಱಿಯುತ್ತೇವೆ. (ಸುರಿ=(ನೀರು) ಸುರಿ. ಸುಱಿ=’ಸುಱ್’ ಎಂದು ಶಬ್ದ ಮಾಡಿ ಹೀರು) ಇತ್ಯಾದಿ. ಹೀಗೆ ಕೆಲವು ಕಡೆ ’ಱ’ ಬೞಕೆಯನ್ನು ಬುದ್ಧಿವಂತಿಕೆಯಿಂದ ತಿಳಿಯಬೇಕಾಗುತ್ತದೆ. ಹಾಗಲ್ಲದಿದ್ದರೆ ನೆರೆಯ ಭಾಷೆಯ ಜ್ಞಾತಿ ಶಬ್ದಗಳಿಂದಲೂ ಹೞಗನ್ನಡದ ಶಬ್ದಗಳಿಂದಲೂ ’ಱ’ ವನ್ನು ತಿಳಿಯಬಹುದು.
ಆದರೆ ’ೞ’ ಬಹಳ ಹಿಂದಿನಿಂದಲೇ ಬೞಕೆಯಿಂದ ನಿಂತುಹೋಗಿದೆ. ಇದಕ್ಕೆ ಕಾರಣ ಶಿವಶರಣರು ಹಾಗೂ ನಡುಗನ್ನಡದ ಕವಿಗಳು ಇದನ್ನು ಬೞಸುವ ಗೋಜಿಗೆ ಹೋಗಲಿಲ್ಲ. ಹರಿಹರನಂತೂ ಹೀಗೆಂದ:

ನೋಡುವೊಡೊಂದಕ್ಕರಮದು
ಮಾಡುವೊಡುಚ್ಚರಣೆಗಱಿದು ಮೂಱುತೆಱನಂ
ಕೂಡೆ ಕವಿತತಿ ವಿಚಾರಿಸ
ಬೇಡದಱಿಂ ಱೞಕುಳಕ್ಷಳಂಗಳನಿದಱೊಳ್||

ಆದರೆ ಈಗಲೂ ಕೆಲವು ಕನ್ನಡದಲ್ಲಿ ಈ ’ೞ’ ಬೞಕೆ ತಿಳಿಯಬಹುದು. ಉದಾಹರಣೆಗೆ ಸೋಲಿಗರ ಕನ್ನಡದಲ್ಲಿ ’ೞ’ ಬೞಕೆ ಇನ್ನೂ ಇದೆ. ಅವರು ಬಾೞೆಹಣ್ಣು, ಹೊೞೆ=ನದಿ, ಕೊೞವೆ ಮುಂತಾದ ಶಬ್ದಗಳಲ್ಲಿ ಬೞಸುವ ’ೞ’ ’ಳ’ಕ್ಕಿಂತ ಭಿನ್ನವಾಗಿರುವುದು ತೋಱುತ್ತದೆ. ಹಾಗೆಯೇ ಮೆೞಸು=ಮೆಣಸು, ಗೆೞಸು=ಗೆಣಸು ಏೞಿ=ಏಣಿ ಮೊೞ=ಮೊಣ ಇತ್ಯಾದಿ ಶಬ್ದಗಳಲ್ಲಿ ’ೞ’ ಸಾನುನಾಸಿಕ. ’ೞ’ ಕೂಡ ’ಯ’, ’ರ’, ’ಲ’, ’ವ’, ’ಳ’ ಗಳಂತೆ ಸಾನುನಾಸಿಕ ಹಾಗೂ ನಿರನುನಾಸಿಕವೆಂದು ಎರಡು ತೆಱ.

ಉದಾಹರಣೆಗೆ ಕೊಳ್‍ ಧಾತು ಸಾನುನಾಸಿಕ ಆಗ ಭೂತಕಾಲದಲ್ಲಿ ಕೊಂದ ಆಗುತ್ತದೆ. ಹಾಗೆಯೇ ಉಳ್ ಕೂಡ. ಉಂಟು ಎಂಬುದು ಅದಱ ಆಸನ್ನಭೂತರೂಪ. ಬೇಯ್‍, ನೋಯ್‍, ಬರ್‍, ತರ್‍, ಕೊಲ್‍, ಸಲ್‍ ಇವೆಲ್ಲ ಕ್ರಮವಾಗಿ ಸಾನುನಾಸಿಕ ಯ ರ ಲಗಳು. ಹಾಗಾಗಿ ಇವುಗಳ ಭೂತಕಾಲಗಳ ರೂಪ ಬೆಂದ, ನೊಂದ, ಬಂದ, ತಂದ, ಕೊಂದ, ಸಂದ ಇನ್ನೂ ಮುಂತಾದುವು. ತಾಮರೆ=ತಾವರೆ, ಕಿಮಿ=ಕಿವಿ, ಸಮಱು=ಸವಱು, ಚಿಮುಟು=ಚಿವುಟು ಇವುಗಳ ಆಡುಭಾಷೆಯ ಬೞಕೆಯಲ್ಲಿ ಗಮನಿಸಿದಾಗ ’ವ’ ಕಾರದ ಹಿಂದೆ ಅನುನಾಸಿಕವನ್ನು ಬೞಸುವುದು ಕಾಣುತ್ತೇವೆ. ಹಾಗೆಯೇ ಕೆಲವು ಎರಡು ಶಬ್ಗಗಳ ರೂಪದಲ್ಲುಂಟು. ಲೆತ್ತ=ನೆತ್ತ (ಪಗಡೆ) ಇಲ್ಲಿ ’ಲ’ ನಿಜವಾಗಿ ಸಾನುನಾಸಿಕ ’ಲ’ ಆದರೆ ’ನೆತ್ತ’ ಎಂದಾಗ ಅದಱ ಉಚ್ಚಾರೈಕಸ್ಥಾನಿಯಾದ ಅನುನಾಸಿಕ ’ನ್’ (’ಲ್’, ’ನ್’ ಎರಡೂ ದಂತ್ಯ) ಬೞಕೆಯಾಗಿದೆ. ಗಿಳಿ=ಗಿಣಿ, ನೊಳ(ವು)=ನೊಣ(ವು) ಇಲ್ಲಿ ’ಳ’ ಸಾನುನಾಸಿಕ. ಹಾಗಾಗಿ ಅದಱ ಉಚ್ಚಾರೈಕಸ್ಥಾನಿಯಾದ ಅನುನಾಸಿಕ ’ಣ್’ ದಿಂದಲೂ ಸೂಚಿತವಾಗಿದೆ.
ಹಾಗಾಗಿ ಕನ್ನಡದಲ್ಲಿ ’ೞ’ ಸಂಪೂರ್ಣ ನಶಿಸದೇ ಕೆಲವು ಆಡುಭಾಷೆಯಲ್ಲಿ ಇನ್ನೂ ಇದೆ. ಜನಸಾಮಾನ್ಯರು ’use and disuse' ಸಿದ್ಧಾಂತದಂತೆ ಕೆಲವು ಆಕ್ಷರಗಳ ಉಚ್ಚಾರವನ್ನು ಕಲಿಯುತ್ತಾರೆ. ಕೆಲವನ್ನು ಬಿಡುತ್ತಾರೆ. ಉದಾಹರಣೆಗೆ ನಮಗೆ ಸಹಜವಾದ ’ೞ’ ಉಚ್ಚಾರವನ್ನು ನಾವು ಮಱೆತಿದ್ದೇವೆ. ನಮ್ಮದಲ್ಲದ ಜ಼ ಹಾಗೂ ಫ಼ ಉಚ್ಚಾರವನ್ನು ಅಳವಡಿಸಿಕೊಂದಿದ್ದೇವೆ. ಯಾಕೆಂದರೆ ನನ್ನ ತಾಯಿ ಇಂಗ್ಲಿಷಿನ fix ಹಾಗೂ zinc ನಲ್ಲಿರುವುದನ್ನು ಪಿ಼ಕ್ಸ್‍ ಎಂಬುದನ್ನು ಪಿಕ್ಸ್ ಎಂದೇ ಉಚ್ಚರಿಸುತ್ತಾರೆ. ಜಿಂಕ್‍ ಎಂದೇ ಉಚ್ಚರಿಸುತ್ತಾರೆ. ಹಾಗಾಗಿ ನಾವು ಕೆಲವು ಉಚ್ಚಾರಗಳು ಕನ್ನಡದಲ್ಲಿ ಇವೆ ಬೇಡ ಎಂಬ ವಿಷಯಕ್ಕೇ ಅರ್ಥವೇ ಇಲ್ಲ. ಉತ್ತರಭಾರತದ ಬಹಳಷ್ಟು ಮಂದಿ ತಮಗೆ ಅಪರಿಚಿತವಾಗಿರುವ ’ಳ’ ವನ್ನು ಪ್ರಾರಂಭದಲ್ಲಿ ’ಲ’ ಎಂದೇ ಉಚ್ಚರಿಸುತ್ತ ಕ್ರಮೇಣ ನಮ್ಮೊಂದಿಗೆ ’ಳ’ ಉಚ್ಚಾರ ಕಲಿತಿರುವುದಕ್ಕೆ ಸಾಕಷ್ಟು ನಿದರ್ಶನಗಳು ನಮ್ಮಲ್ಲೇ ಇವೆ. ಹಾಗಾಗಿ ಹಿಂದಿಯಲ್ಲೂ ಕೂಡ ’ಳ’ ಕ್ಕೆ ’ळ’ ಸಂಕೇತವನ್ನು ಅಳವಡಿಸಿಕೊಂಡಿದ್ದಾರೆ. ಒರಿಯಾ, ಮರಾಠಿ ಹಾಗೂ ಕೊಂಕಣಿಗಳಲ್ಲಿ ಪಕ್ಕದ ತೆನ್ನುಡಿಗಳಾದ ತೆಲುಗು ಮತ್ತು ಕನ್ನಡಗಳ ಪ್ರಭಾವದಿಂದ ಅವುಗಳಲ್ಲಿ ’ಳ’ ಸಹಜವಾಗೇ ಇದೆ.

ಮೇಲಿನ "ೞ" ಉಚ್ಚಾರ ಹೊೞೆ, ಬಾೞೆಹಣ್ಣು, ಕೊೞವೆ, ಗೆೞಸು, ಮೆೞಸು, ಮೊೞ ಇತ್ಯಾದಿ ಶಬ್ದಗಳ ವಿಚಾರವಾಗಿ ತಮ್ಮ ಅಮೂಲ್ಯ ವಿಚಾರವನ್ನು ಸಹೋದ್ಯೋಗಿಯಾದ ಸೋಲಿಗರ ಪಂಗಡದವರೇ ಆದ ಎಂ ಜಡೆಯಗೌಡರು ಕೊಟ್ಟಿರುತ್ತಾರೆ. ಹಾಗೆಯೇ ನಾನು ’ೞ’ ಉಚ್ಚರಿಸುವುದನ್ನು ಕೇಳಿ ವಿಸ್ಮಯ ಹಾಗೂ ಕುತೂಹಲಿಗಳೂ ಆಗಿರುತ್ತಾರೆ. ಅವರ ಈ ವಿಚಾರಗಳಿಗೆ ನಾನು ಚಿರಋಣಿ.

ಭೂತಸೂಚಿಯಾದ ’ದ’ಕ್ಕೆ ’ತ’ ಕೆಲವು ಕಡೆ ಬರುವುದುಂಟು. ಕೆಲವು ಕಡೆ ಎರಡೂ ರೂಪಗಳುಂಟು. ’ಱ’ ಬೞಕೆಯಾದ ಕಡೆಯೆಲ್ಲ ’ತ’ ಬರಬೇಕೆಂಬ ನಿಯಮವಿಲ್ಲ. ಉದಾಹರಣೆಗೆ ಅಱಿತು/ಅಱಿದು, ನಿಂತು/ನಿಂದು ಹೀಗೇ ಎರಡೆರಡೂ ರೂಪಗಳುಂಟು ಆದರೆ ತೊಱೆದು=ಬಿಟ್ಟು ರೂಪೈದೆ. ಮಱೆತು/ಮಱೆದು ಎರಡೂ ರೂಪಗಳುಂಟು. ಹಱಿದು=ಛಿದ್ರವಾಗಿ ಎಂಬಲ್ಲಿ ಹಱಿತು ರೂಪ ಜನಬೞಕೆಯಲ್ಲೂ ಇಲ್ಲ. ಸಾಹಿತ್ಯದಲ್ಲೂ ಇಲ್ಲ. ಇದ್ದರೆ ನಮಗೆ ತಿಳಿಸಿ. ಪಂಪನ ಪದ್ಯದ "ನೆಱೆದಂದಱಿದು" ರೂಪ ನೋಡಿ. ಹಾಗೆಯೇ ಕನಕದಾಸರ "ಮಱೆದೆನಭ್ಹ್ಯುದಯದಲಿ" ರೂಪ ನೋಡಿ.

ಮೇಲಿನ ಪ್ರತಿಕ್ರಿಯೆಯಲ್ಲಿ ಏಕೋ ಕೆಲವು ತಪ್ಪುಗಲಾಗಿವೆ. ಸರಿ ಮಾಡಿ ತೋಱಿಸುತ್ತಿದ್ದೇನೆ.
ಭೂತಸೂಚಿಯಾದ ’ದ’ಕ್ಕೆ ’ತ’ ಕೆಲವು ಕಡೆ ಬರುವುದುಂಟು. ಕೆಲವು ಕಡೆ ಎರಡೂ ರೂಪಗಳುಂಟು. ’ಱ’ ಬೞಕೆಯಾದ ಕಡೆಯೆಲ್ಲ ’ತ’ ಬರಬೇಕೆಂಬ ನಿಯಮವಿಲ್ಲ. ಉದಾಹರಣೆಗೆ ಅಱಿತು/ಅಱಿದು, ನಿಂತು/ನಿಂದು ಹೀಗೇ ಎರಡೆರಡೂ ರೂಪಗಳುಂಟು ಆದರೆ ತೊಱೆದು=ಬಿಟ್ಟು ರೂಪವಿದೆ. ಮಱೆತು/ಮಱೆದು ಎರಡೂ ರೂಪಗಳುಂಟು. ಹಱಿದು=ಛಿದ್ರವಾಗಿ ಎಂಬಲ್ಲಿ ಹಱಿತು ರೂಪ ಜನಬೞಕೆಯಲ್ಲೂ ಇಲ್ಲ. ಸಾಹಿತ್ಯದಲ್ಲೂ ಇಲ್ಲ. ಇದ್ದರೆ ನಮಗೆ ತಿಳಿಸಿ. ಪಂಪನ ಪದ್ಯದ "ನೆಱೆದಂದಱಿದು" ರೂಪ ನೋಡಿ. ಹಾಗೆಯೇ ಕನಕದಾಸರ "ಮಱೆದೆನಭ್ಯುದಯದಲಿ" ರೂಪ ನೋಡಿ.

ಇದನ್ನ ವಸಿ ನೋಡಿ. ಆಮೇಲೆ ನಿಮ್ಮ ಅಭಿಪ್ರಾಯ ತಿಳಿಸಿ
’ಱ’ ಕಾರಕ್ಕೆ
ಕನ್ನಡಕಂದ ಬಱಿ ’ಱ’ ಮತ್ತು ’ೞ’ ಕುಱಿತೇ ಮಾತಾಡುತ್ತಾನೆ. ಅವನಿಗೇನ್ ಬೇಱೆ ಕೆಲಸವಿಲ್ಲವಾ? (ನೀವು ಅಸಡ್ಡೆ ತೋಱಿ ಈ ’ಬಱಿ’ ಮತ್ತು ’ಬೇಱೆ’ ಶಬ್ದಗಳನ್ನು ನಾಲಿಗೆ ನಡುಗಿಸಿ ಉಲಿಯುತ್ತೀರಾ?
ಅಂತಹ ಕಱ್ಱನೆ ಕಱಿಯನ್ನ ಹೇಗೆ ಮದುವೆಯಾಗಲಿ ಹೇೞೆ?
ಇದೊಂದು ಮಗು ಬಱಿ ’ಬಟಱ್’ ಅಂತ ಭೇದಿ ಮಾಡಿಕೊಳ್ಳುತ್ತೆ. ಕಿಱ್ ಅಂತ ಕಿಱುಚತ್ತೆ.
ಅವನ್ಣ ನೋಡು ಹೇಗೆ ಮಜ್ಜಿಗೆಯನ್ನು ಸುಱ್ ಅಂತ ಸುಱಿತಾನೆ. ಹಾಗೇ ಗೊಱ್ ಅಂತ್ನೂ ಗೊಱಕೆ ಹೊಡೆಯುತ್ತಾನೆ. ಅದಕ್ಕೇ ಏನೋ ಈ ಗಾದೆಯೇನೋ? ’ಸುಱಿದುಣ್ಣಬೇಕು. ಗೊಱೆದು ನಿದ್ದೆ ಮಾಡಬೇಕು’. (ಇಲ್ಲಿ ಸುಱಿ ಎಂದರೆ ಸುಱ್ ಅಂತ ಹೀರು)

ಹಕ್ಕಿ ಪುಱ್ ಎಂದು ಹಾಱಿತು.
ಬಸು ಬುಱ್ ಎಂದು ಹೊಱಟಿತು.
ಮಗು ಪಱ್ ಎಂದು ಹಾಳೆ ಹಱಿಯಿತು.

ೞ ಕಾರಕ್ಕೆ

ಗೞಗೞನೆ ಗುೞುಗುೞುವೆನುತುಂ ಪರಿವವೊನಲ್ ಸೊಗಯಿಸುಗುಂ
ಪೆರ್ಜುೞಿಯೊಳ್ ಪೊೞೆ ಜುೞುಜುೞುವೆನುತುಂ ಪರಿವುದು
ಗೞಗೞನೆ ಗೞಪುವನ ನುಡಿಗೇಳವೇಡ.
ಪೞಪೞವೆಂದು ಗಾಜು ಒಡೆಯಿತು
ಗಗನಸ್ಥಳದಿಂದುಡುಗಳ್ ಪೞಪೞನುದುರ್ವವೊಲ್ ಎಡೆವಿಡದಿೞಿವ ಆಲಿವರಲ ಮೞೆ.
(ಆಕಾಶದಿಂದ ನಕ್ಶತ್ರಗಳು ಪೞಪೞನೆ ಉದುರುವ ಹಾಗೆ ಆಲಿಹರಳ (ಆಲಿಕಲ್ಲಿನ) ಮೞೆ).
ಇಲ್ಲಿನ ಱ ಉಚ್ಚರಿಸುವಾಗ ನಾಲಿಗೆ ನಡುಗಬೇಕು. ಹಾಗೆಯೇ ’ೞ’ ಉಚ್ಚರಿಸುವಾಗ ನಾಲಿಗೆ ಅಂಗುಳಿನ ಹತ್ತಿರವಿರಬೇಕು (ಲ ಹಲ್ಲಿಗೆ ತಾಗುತ್ತದೆ. ಳ ತುಂಬಾ ಮೇಲಕ್ಕೆ ಹೋಗಿ ಸುರುಳಿಗೊಳ್ಳುತ್ತೆ. ’ೞ’ ದ ಉಚ್ಚಾರ ಸ್ಥಾನ ’ಲ’ ಮತ್ತು ’ಳ’ ನಡುವೆ. ಹೆಚ್ಚು ಕಡಿಮೆ ಅಂಗುಳಿನ ಬೞಿ ನಾಲಿಗೆ ತಾಗಬೇಕು. ಇನ್ನೂ ಮೇಲಕ್ಕೆ ಹೋಗಬಾರದು).

ಗುೞುಗುೞುವೆನುತ ಬಿಂದಿಗೆ ನೀರೊಳು ಮುೞುಗಿತು
ಗೞಗೞೆಂದು ಗೞಪವೇಡ
ಜುೞುಜುೞನೆ ಸುೞಿಯೊಳು ಹೆಬ್ಬೊೞೆ ಹರಿವುದು
ಪೞಪೞೆಂದು ಗಾಜೊಡೆವುದು||೧||

ಗುಱುಗುಱೆಂದು ಬೊಗಳುವ ನಾಯ್ಗೆ ಹೆದಱುವೆ
ಚಿಱುಚಿಱು ಚಿಟ್ಟನೆ ಮಗು ಚೀಱಿತು
ಚಿಱುಚಿಱು ಚಿಟಿರೆಂದು ಬಱಸಿಡಿಲು ಬಡಿವುದು
ಪಱಪಱೆಂದು ತಱಗೆಲೆ ಬಿತ್ತು||೨||

ಱೞ(ೞ) ಕುಱಿತಂತೆ ಶೃಂಗಾರ ಕವಿಯ ವಿಚಾರವನ್ನು ಸೇರಿಸುತ್ತಾ ಹೋಗುತ್ತೇನೆ.
ಪಾೞಿ ಮಿಗೆ ರೞಕುಳದ ಶಬ್ದಂಗಳೊಳಗಯ್ದು
ಸೂೞನೆಗಮರ್ಥಮಿರೆ ಷಟ್ಪದ್ಯದಿಂದ ರಸಿ-
ವಾೞೆಱೆಯ ಬೊಮ್ಮರಸನಾಯಕನ ಸುತನೆನಾಂ ಶೃಂಗಾರಕವಿ ರಚಿಸಿದೆಂ||

ಶ್ರೀದಿವಿಜವಲ್ಲಭಕಿರೀಟಚುಂಬಿತದಿವ್ಯ-
ಪಾದಕಮಲಂ ವಿಶ್ವವಿಸ್ತಾರಕೃತವಚ-
ಶ್ಶ್ರೀದೇವಿರಾಜಿತಶ್ರೀಮುಖಂ ರಾಗಾದಿ ಪದಿನೆಂಟು ದೋಷವಿಜಯಂ|
ಪೋದ ವರ್ತಿಪ ಬರ್ಪ ಕಾಲದನುಭವಮುಖ್ಯ-
ಮಾದ ಸಕಲಾರ್ಥಮಂ ಕರತಲಸ್ಫಟಿಕವೆಂ-
ದಾದರಿಪ ಮೋಹಲಕ್ಷ್ಮೀಕಾಂತನೆಮಗೀಗೆ ರತ್ನತ್ರಯಾಭರಣಮಂ||

ಉೞುಗೆನಲ್ ಬೇಟಮುೞಿಗಿದನೆಂದೊಡೊಲ್ದವಂ
ಪೞಿ ತೆಗೞ್ ನಿಂದೆ ಪೞಿ ವಸ್ತ್ರಭೇದಂ ಬೞಿಕೆ
ಬೞಿಕಂ ಬೞಿಕ್ಕೆ ಬೞಿಯಂ ಮತ್ತೆನಿಪ್ಪ್ಪುದಾ ಪೊಂಪುೞಿಯೆನಲ್ ಸಂತಸಂ|
ಘೞಿಯಮೆನೆ ಸಮಕಟ್ಟು ಬಾೞ್ತೆಯೆನೆ ಯೋಗ್ಯಮದು
ಪೞಯಿಗೆ ಪತಾಕೆ ಜಳಯಂತ್ರಮದು ಜೀರ್ಕೊೞವಿ
ಬೞಿವೞಿಯೆನಲ್ ಕೊಟ್ಟವಸ್ತುವಿನ ಬೞಿವಿಡಿದು ಬಱಿದೆ ಪೋಪೊಡವೆಯಕ್ಕುಂ||೧||

ದೞದುೞಂ ಬಲ್ಸೂಱೆ ಪುಚ್ಚೞಿಯೆನಲ್ ಕೇಡು
ಪುೞಿಲಮೆಂದೊಂದು ಶಕುನದ ಪಕ್ಕಿಯುೞಿಕೆನಲ್
ಮೊೞಗೆನಲ್ ವಾದ್ಯಮವನಿಜಭೇದದಲ್ಲಿಯುಂ ಗುಡುಗಿನೊಳ್ ಮೊೞಗೆನಿಕ್ಕುಂ
ಉೞಿವು ಕೞಿವೆನೆ ಭಾವವಾಚಿಗಳ್ ಭೀತಿ ತ-
ಲ್ಲೞಮೆನಿಪ್ಪುದು ಕೞಕುೞಂ ತಾಣಬಾಗುಳತೆ
ಗುೞಮಾನೆಕುದುರೆಗಳ ಪಕ್ಕರೆ ಕಿಮುೞ್ಚೆನಲ್ ಕರಮರ್ದನಕ್ಕೆ ನಾಮಂ|| ೨||

ಕ್ರಮ ತಪ್ಪಿ ಱೞ ಕುಳದ ಶಬ್ದಗಳಲ್ಲಿ ಬಹಳ ಅರ್ಥವಿರುವುದಱಿಂದ ರಸಿವಾೞಿಗೆಯರಸ ಬೊಮ್ಮರಸನ ಮಗನಾದ ನಾನು ಶೃಂಗಾರಕವಿಯಾದ ನಾನು ಷಟ್ಪದಿಯಲ್ಲಿ ಈ ಕಾವ್ಯವನ್ನು (ಕರ್ಣಾಟಕಸಂಜೀವನಂ) ರಚಿಸಿದ್ದೇನೆ.

ಉೞುಗು=ಪ್ರೀತಿ, ಪ್ರೀತಿಹೊಂದು, ಉೞುಗಿದಂ=ಪ್ರೀತಿಹೊಂದಿದವನು
ಪೞಿ, ತೆಗೞ್=ನಿಂದಿಸು, ನಿಂದೆ
ಪೞಿ=ವಸ್ತ್ರವಿಶೇಷ. ಉದಾ: ವೀರಪೞಿ
ಬೞಿಕೆ, ಬೞಿಕ್ಕೆ, ಬೞಿಕ್ಕಂ, ಬೞಿಯಂ= ಆಮೇಲೆ, ತಱುವಾಯ
ಪೊಂಪುೞಿ=ಸಂತೋಷ
ಘೞಿಯಂ=ಹೊಂದಿಸುವಿಕೆ, ಸರಿಮಾಡುವಿಕೆ, ಓರಣ
ಬಾೞ್ತೆ=ಪ್ರಯೋಜನ, ಯೋಗ್ಯತೆ
ಪೞಯಿಗೆ=ಬಾವುಟ
ಜೀರ್ಕೊೞವಿ=ಪಿಚಕಾರಿ (ಹಾಗೆಯೇ ನೋಡಿ ಕೊೞವೆ, ಕೊೞಲು=ವೇಣು, ಕೊೞಾಯ್=ನಲ್ಲಿ)
ಬೞಿವೞಿ=ದಾರಿಯಲ್ಲಿ ಖರ್ಚಿಗೆ ಕೊಟ್ಟ ಉಡುಗೊರೆ
ದೞದುೞಂ=ದರೋಡೆ, ಪುಚ್ಚೞಿ=ಕೇಡು, ನಾಶ
ಪುೞಿಲ=ಶಕುನದ ಹಕ್ಕಿ (ಗಿಳಿ?)
ಉೞಿಕು=ಉೞಿದದ್ದು
ಮೊೞಗು=ವಾದ್ಯ (ನಿಜವಾಗಿ ಹಾಗೂ ಅನುಕರಿಸಿದರೂ) ಗುಡುಗು
ಉೞಿವು=ಉೞಿಯುವಿಕೆ, ಕೞಿವು=ನಾಶ
ತಲ್ಲೞ=ಭಯ
ಕೞಕುೞ=ತೊಳಲಾಟ (ನೀರ್ಬಿಟ್ಟ ಮೀಂ ಕೞಕುೞಿಗುಂ)
ಗುೞ=ಆನೆ ಕುದುರೆಗಳ ಎರಡುಬದಿಗೆ ಹಾಕಿದ ಜೀನು
ಕಿಮುೞ್ಚು=ಕಿವುಚು (ನಿಂಬೆ ಹಣ್ ಕಿಮುೞ್ಚಿದಂ)

ಮುಂದುವರೆಸುತ್ತೇನೆ.

ಎೞವಿದಂ ನೀವಿದಂ ಕಿೞವನೆನೆ ಮುದುವನುಸ
ಕೞಿದನೆನೆ ಕೈಮೀಱಿದಂ ಮಣ್ಮುೞಿಯೆನೆ ರೂ-
ಪೞಿದು ಸಾವುದು ಪೆೞಕೆನಲ್ ಜಗೞಾವಗೞಿಯಮೆಂದೊಡುರವಣೆಕಾರ್ತನಂ|
ಪೞುಪೆನಲ್ ನರೆಗಿಡುವ ಕರ್ಪು ಪೞುವೆನಲಡವಿ
ಪೞಗಮೆನಲೊಣಗಿದೆಲೆ ಗೞಪನೆನೆ ಸೊರಹುವಂ
ಬೞಿಯನೆಂದೆನೆ ವಿಧೇಯಂ ದಂಡದೊಳ್ಪಡೆದವಂ ದಂಡುೞಿಗನೆನಿಕ್ಕುಂ||೪||

ತಿಪ್ಪುೞೆನೆಱಂಕೆ ತೊೞ್ತುೞಿ ತುೞಿಕಲೆಂದೆನಲ್
ಸೊಪ್ಪಾದುದರ್ಕೆ ನಾಮಂ ತೆಗೞೆನಲ್ನಿಂದೆ
ತುಪ್ಪುೞೆನೆ ಖಗದ ರೋಮಂ ತೊೞಲಿಕಲ್ಲೆನಲ್ ಸಂಘಟೆಗೆ ನಾಮ ಮಕ್ಕುಂ|
ಚಪ್ಪೞಿಯೆನಲ್ಕೆ ಚಪ್ಪಟಿ ಚಾೞೆನಲ್ ಚಾವ
ನಿಪ್ಪುದೞವೞಿಸಿತ್ತೞಲ್ದುದೆನೆ ಕಣ್ಕದಡಿ-
ದೊಪ್ಪಮದವೞಲೆನಲ್ ಮಱುಕಮುಂಬೞಿ ಕೊಡುಗೆ ನೆೞಲೆನಲ್ಕೊಂದು ವೃಕ್ಷಂ||೫||

ಎೞವು= ನೀವು
ಕಿೞವ=ಮುದುಕ
ಕೞಿದ=ಸತ್ತ, ಕೈಮೀಱಿದ
ಮಣ್ಮುೞಿ=ಅಸಹಜವಾಗಿ ಗುಪ್ತವಾಗಿ ಸಾಯು
ಪೆೞಕು, ಜಗೞ=ಹೋರಾಟ, ಯುದ್ಧ, ಜಗೞ
ಅವಗೞಿ=ದುಂಡಾವರ್ತಿ, ಗೂಂಡಾಗಿರಿ
ಪೞುಪು=ನರೆಗೂದಲಿಗೆ ಹಚ್ಚುವ ಕಪ್ಪು
ಪೞು=ಹೞು, ಕಾಡು
ಪೞಗ=ಒಣಗಿದೆಲೆ, ತಱಗೆಲೆ
ಗೞಪು, ಸೊರಹು= ಸುಮ್ಮನೆ ಹರಟು
ಬೞಿಯ=ಹಿಂಬಾಲಕ, ವಿಧೇಯ
ದಂಡುೞಿಗ=ಜೀತದಾಳು, ದಂಡಕೊಟ್ಟು ಪಡಕೊಂಡ ಆಳು
ತಿಪ್ಪುೞ್=ಱೆಕ್ಕೆ
ತೊೞ್ತುಳಿ, ತುೞಿಕಲ್=ತೊತ್ತು, ದಲಿತ
ತುಪ್ಪುೞ್=ಹಕ್ಕಿಯ ಕೂದಲು
ತೊೞಲಿಕಲ್=ಬೀಸುವ ಕಲ್ಲು
ಚಪ್ಪೞಿ=ಚಪ್ಪಟೆ
ಚಾೞ್=ರಾಹು, ದೇವತೆ
ಅೞವೞಿಸು=ದುಃಖ ಪಡು
ಅದವೞಲ್=ಮಱುಕ, ಪಶ್ಚಾತ್ತಾಪ
ಉಂಬೞಿ=ಕೊಡುಗೆ, ದಾನ, ದತ್ತಿ
ನೆೞಲ್=ಒಂದು ಜಾತಿಯ ಮರ, ಪ್ರಿಯಂಗು ಮರ, ನೆರಳು

ಮೞೆ ಬಿೞಲ್ ಪುೞು ತೞಲ್ ಪೞದು ಮೊೞಕಾಲ್ಗೆೞಸು
ಕೞಿಲೆ ತೇೞ್ ಬೆಂಬೞಿ ಮೊೞಂ ಪೆೞವು ಪೊರ್ಕುೞುಂ
ಕುೞಿ ಬೋೞತರಮೆಸೆವ ಕೌಂಕುೞಾಪಾೞ್ ನೇಗಿಲಿಂದುೞುವ ಕುೞು ಪೋೞ್ಗಳುಂ
ಖೞಿಲೆಂಬ ಥೞಿಲೆಂಬ ಘೞಿಲೆಂಬ ಘುೞಿಲೆಂಬ
ಧೞಿಲೆಂಬವೋಲ್ ಮಹಾಪ್ರಾಣಾಕ್ಷರಂಗಳೊಳ್
ಸುೞಿವುತಿರ್ಪನುಕರಣೆಯೆಲ್ಲವುಂ ನಿತ್ಯಱೞನೆಂಬರಾದಿಯಕವೀಂದ್ರರ್||೧||

ಪೞಪೞಂ ಪೞ್ಪೞನೆ ವಿರಳಾರ್ಥಮೆನಿಸುಗುಂ
ಗೞಗೞನೆ ಬೇಗಮಾಕಾಸುವರಸಂಗಳೊಳ್
ತೞತಗುದಿ ತೞ್ತೞಗುದಿಗಳೆನಿಕ್ಕುಂ ತರಣಿ ತೞತೞನೆ ಮೂಡಲೊಗೆದಂ|
ಕೞಕೞಸಿತರ್ಕನಾನೀರ್ವೊನಲ್ಗುೞುಗುೞನೆ
ಗೞಗೞನೆ ಪರಿದತ್ತು ಗೋೞಿಟ್ಟನೆನೆ ಮನಂ-
ಗೊಳಿಸುವಲ್ಪಪ್ರಾಣದನುಕರಣೆಗಳ್ ಕುಳಱೞಂಗಳೊಳ್ವರ್ತಿಸಿರ್ಕುಂ||೨||

ಪುೞು=ಹುೞು
ತೞಲ್=ಒಣಗಿದ ಹೞೆಯ ಹಣ್ಣು
ಪೞದು=ಹೞೆಯದು
ಮೊೞಕಾಲ್=ಮೊಣಕಾಲು
ಕೞಿಲೆ=ಕೞಲೆ, ಬಿದಿರಿನ ಚಿಗುರು ಕಾಂಡ
ತೇೞ್=ಚೇೞು
ಬೆಂಬೞಿ=ಹಿಂಬಾಲಿಸುವಿಕೆ
ಮೊೞಂ=ಮೊಣ (ಒಂದು ಅಳತೆ ಮೊೞಕೈಯಷ್ಟು)
ಪೆೞವು=ಹೆೞವು, ಕುಂಟು
ಪೊರ್ಕುೞ್=ಹೊಕ್ಕುೞು
ಕುೞಿ=ಗುೞಿ, ಗುಂಡಿ
ಬೋೞತರ=ಒಂದು ಗಿಡ ಬೋೞ=ಬಕ್ಕತಲೆಯವ
ಕೌಂಕುೞ್=ಕವುಂಕುೞ್, ಕಂಕುೞು
ಪಾೞ್=ಹಾೞು, ಹಾೞಾದದ್ದು
ಕುೞು=ನೇಗಿಲಬಾಯಿಯ ಕಬ್ಬಿಣ
ಪೋೞ್=ಹೋೞಾದದ್ದು, ಹೋೞು (ತುಂಡು)
ಖೞಿಲ್=ಉಚ್ಚವಾಗಿ ಕಿಱುಚುವ ಧ್ವನಿಯ ಅನುಕರಣೆ
ಘೞಿಲ್, ಘುೞಿಲ್=ವೇಗವೆಂದು ಸೂಚಿಸುವ ಅನುಕರಣೆ
ಧೞಿಲ್=ಧಡಂ ಎಂಬ ಅನುಕರಣೆ
ಸುೞಿಯುವ ಅನುಕರಣೆಯೆಲ್ಲವು ಱೞ(ೞ)ಗಳೆಂದು ಮುಂಚಿನ ಕವಿಗಳು ಹೇೞುವರು.

ಪೞಪೞಂ, ಪೞ್ಪೞನೆ= ಗಾಜು, ಆಲಿಕಲ್ಲು ಮುಂತಾದುವು ಚೂರಾಗುವಾಗ ಆಗುವ ದನಿ.
ಗೞಗೞನೆ=ಬೇಗ ಎಂಬುದರ ಅನುಕರಣೆ
ತೞತಗುದಿ, ತೞ್ತೞಗುದಿ=ನೀರು ಕುದಿಯುವುದನ್ನು ಸೂಚಿಸುವ ಅನುಕರಣೆ
ತೞತೞ, ಕೞಕೞ= ಫಳಫಳ ಹೊಳೆ
ಗುೞುಗುೞುನೆ= ನೀರು ಹರಿಯುವಾಗ ಅಥವಾ ನೀರಲ್ಲಿ ಬಿಂದಿಗೆ ಅಥವಾ ಕಲ್ಲು ಇತ್ಯಾದಿ ಮುೞುಗುವಾಗ ಆಗುವ ಅನುಕರಣ ಧ್ವನಿ.
ಗೋೞಿಡು=ಗೋೞು ಹೇೞಿಕೊಳ್ಳು. ಗೋಳ್ ಎಂದು ಕುಳವೂ ಉಂಟು.

ಸೂೞೆನಲ್ ಬಾರಿ ಗೞೆಯೆನೆ ಸರಳಭೇದಮಾ-
ೞಾೞಿಗಂ ಸಾಮಾನ್ಯದಾಮಾಲ್ಯಬಂಧಮದು
ಬಾೞುಕಂ ಪುರಿದ ತೊಟ್ಟಿಯ ಫಲಂ ಪೊೞವು ಸಾಮಾನ್ಯಾಕೃತಿಗೆ ಸಂಜ್ಞಕಂ|
ಖೂೞನೆಗ್ಗಂ ಪಾೞಿ ಪಾಟಿ ಪೞಯರಮೆನಲ್
ಕೋೞ ಸಂಕಲೆಯೞಲ್ದೞಮೆನಿಪುದುಡಿಗೆಯದು
ಸಾೞಿಗೆ ಕಿಮುೞ್ಚೆನಲ್ ತುೞಿವುದು ತುಡುಂಗುಣಿಯೆ ಹಾೞ್ಮನೆಯ ಹಾೞನಕ್ಕುಂ||೧||

ಪೞ್ತಿಯೆನೆ ಕಾರ್ಪಾಸಮೞ್ಕೆಯೆನೆ ರೋದನಂ
ಕೞ್ತೆಯೆನೆ ಗರ್ದಭಂ ತೞ್ಗುಬೞ್ಗೆನೆ ಕುಸಿವು-
ದೞ್ತಿಯೆನೆ ಲೀಲೆಯದನರ್ತಿಯೆನಬಾರದು ಪೊಗೞ್ತೆಯೆನೆ ಕೀರ್ತನಾಖ್ಯಂ|
ಮೞ್ತಿ ಮುೞ್ತುಗಮೆನಲವೊಂದೊಂದು ವಿಟಪಿಗಳ್
ಕಿೞ್ತುದೆನೆ ನಿರ್ಮೂಲಿಸಿದುದು ಬೆಳಗಿನ ವೇಳೆ
ಪೊೞ್ತಱೆಯಗೞ್ತೆ ಗುದ್ದಲಿಯ ಕೆಲಸಂ ಮರ್ಬು ಕೞ್ತಲೆಯೆನಿಪ್ಪುದಱಿಯಲ್||೨||

ಬಿೞ್ಕೆಯೆನಲೊಂದು ವೃಕ್ಷಂ ಹೊಯಿಲ ಬೞಿ ಬಾಸು-
ೞೊೞ್ಕೆನೆ ನದೀಪ್ರವಾಹಂ ನೇಗಿಲಿಂ ಗೆಯ್ವು-
ದುೞ್ಕೆ ಬೞ್ದಂ ಜಗುೞ್ದನೆನೆ ಜಾಱಿದವನೞ್ದನಗುೞ್ದನೆ ಮುೞುಗಿದವಂ
ಅೞ್ಕರ್ತನೆ ಪ್ರೀತಿವಟ್ಟನಾಕಸ್ಮಿಕಂ
ಕೞ್ಕನೆಯೆನಿಪ್ಪುದೞ್ಕಮೆಯಱಮೆಯೆನೆಯುೞಿವು
ದರ್ಕೆ ಪೆಸರೀ ಸೂೞೆ ವರ್ತಮಾನಂ ಸೆಳೆದವಂಗೀೞ್ದನೆಂಬ ನಾಮಂ||೩||

ಸೂೞ್=ಬಾರಿ
ಗೞೆ=ನೆಟ್ಟಗಿರುವ ಬಿದುರಿನ ಕೋಲು
ಆೞಾೞಿಗ=ಮಾಲೆ
ಬಾೞುಕ=ಒಣಗಿ ಹುರಿದಿಟ್ಟ ತರಕಾರಿ ಹಣ್ಣು ಇತ್ಯಾದಿ
ಪೊೞವು=ಸಾಮಾನ್ಯರೂಪ
ಖೂೞ=ಒಱಟ, ಅನಾಗರೀಕ
ಪಾೞಿ, ಪಾಟಿ, ಪೞಯರ?=ಸರಿಯಾದ ರೀತಿ, ಕ್ರಮ
ಕೋೞ=ಸಂಕೋಲೆ (ಅೞಲ್ದೞ?)
ಸಾೞಿಗೆ=ಜಾೞಿಗೆ=ಉಡುಗೆ
ಕಿಮುೞ್ಚು=ತುೞಿ, ಕಿವುಚು
ಹಾೞ್ಮನೆಯ ಹಾೞ=ತೀರ ಹದಗೆಟ್ಟ ಪರಿಸ್ಥಿತಿಯಲ್ಲಿದ್ದು ಕಳ್ಳತನ ಮಾಡುವವನು, ತುಡುಗುಣಿ
ಪೞ್ತಿ=ಹತ್ತಿ (ಪೞ್ತಿ->ಪರ್ತಿ(ಕೊಡವರು ಹೇೞುವುದು)->ಪತ್ತಿ->ಹತ್ತಿ)
ಅೞ್ಕೆ=ಅೞುವುದು, ರೋದನ
ಕೞ್ತೆ=ಕತ್ತೆ
ತೞ್ಗುಬೞ್ಗು=ತಗ್ಗಿಬಗ್ಗು
ಅೞ್ತಿ=ಪ್ರೀತಿ (ಅರ್ತಿಯೆನಬಾರದೆಂದರೂ ಅರ್ತಿ=ಪ್ರೀತಿ ಎಂಬ ಬೞಕೆಯಿದೆ)
ಪೊಗೞ್ತೆ=ಹೊಗೞಿಕೆ, ಕೀರ್ತಿ
ಮೞ್ತಿ=ಮತ್ತಿಯ ಮರ
ಮುೞ್ತುಗ=ಮುತ್ತುಗದ ಮರ
ಕೀೞ್=ಕೀೞು, ಬೇರು ಸಮೇತ ತೆಗೆ
ಪೊೞ್ತಱೆ=ಹೊತ್ತಾಱೆ, ಬೆಳಿಗ್ಗೆ
ಅಗೞ್=ತೋಡು, ಅಗೞ್ತೆ=ತೋಡುವಿಕೆ
ಕೞ್ತಲೆ=ಕತ್ತಲೆ, ಮಬ್ಬು
ಬಿೞ್ಕೆ=ಬಿಕ್ಕೆಯ ಗಿಡ
ಬಾಸುೞ್= ಬಾಸುಂಡೆ
ಒೞ್ಕು=ನದೀಪ್ರವಾಹ
ಉೞ್ಕೆ=ಉೞುವುದು, ಉೞ್ಮೆ, ಉೞುಮೆ
ಬೞ್, ಜಗುೞ್=ಜಾಱು
ಆೞ್, ಅಗುೞ್=ಮುೞುಗು (ಆೞ್+ದನ್=ಅೞ್ದನ್->ಅದ್ದನ್=ಮುೞುಗಿದನ್)
ಅೞ್ಕರ್ತ=ಅಕ್ಕಱೆ ತೋಱುವವನು, ಅೞ್ಕಱ್, ಅೞ್ಕಱೆ=ಪ್ರೀತಿ
ಕೞ್ಕನೆ=ಕಕ್ಕನೆ, ಗಕ್ಕನೆ, ಒಮ್ಮೆಗೆ, ಆಕಸ್ಮಿಕ
ಅೞ್ಕಮೆ, ಅಱಮೆ=ಅಜೀರ್ಣ
ಈ ಸೂೞ್= ಈ ಸಾರಿ, ಈಗ
ಈೞ್=ಸೆಳೆ,

ಕುೞಿದನೆನೆ ಬಡವಾದವಂಗಮೞ್ದಂಗೆ ಪೆಸ-
ರೞಿಪನೆನಲೞಿಪದಂಗೆಯುಮೞಿಪುವಂಗೆ ಪೆಸ-
ರಿೞಿದನೆನೆ ಮೆಯ್ಗುಂದಿದಂಗೆಯುಂ ಕೆೞಗಣ್ಗೆ ಬಂದ ಮನುಜಂಗೆ ನಾಮಂ|
ತುೞಿಲೆನಲ್ಪೊಡವಡಿಕೆಗಂ ವೀರಕಂ ಪೆಸರ್
ತುೞಿಲಸಂದಂ ಪಂಚಮಂಗೆ ವೀರಂಗೆ ಪೆಸ-
ರೞಿಯೆನಲ್ಬಳ್ಳದೞಿಗಂ ಕೆಡಿಪುದರ್ಕೆಯುಂ ನಾಮ ಮಧುಕರನೊಳ್ ಕ್ಷಳಂ||೧||

ಬೆಸದವರ ನೆರವಿ ಕಾಗೆಗೆ ತೊೞ್ತುೞಿಯೆನಿಪ್ಪ
ಪೆಸರೇೞ್ವನೆನೆ ನಿದ್ರೆದಿಳಿದಂಗೆ ನೆಗೆದಂಗೆ
ಪೆಸರೞಲ್ದತ್ತೆನಲ್ ಜೋಲ್ದುದಱ ಮತ್ತಾ ಬೞಲ್ದುದಱ ನಾಮಮಕ್ಕುಂ|
ಅಸುವೞಿದುದರ್ಕೆಯುಂ ಸೊಪ್ಪಾದುದರ್ಕೆಯುಂ
ಪೆಸರೞ್ಗಿತೆನಿಸುಗುಂ ಘಾಸಿಯೊಳ್ ಪದದೆ ಮ-
ರ್ದಿಸುವಲ್ಲಿಯುಂ ತುೞಿವೆಸರ್ ಮರದ ಪೋಟೆಯೇ ಪೋೞಲ್ ಪುರಂ ಪೊೞಲೆನಲ್||೨||

ಕುೞಿ=ಬಡವಾಗು, ಮುೞುಗು
ಅೞಿಪು=ನಾಶಮಾಡು. ಅೞಿಪ=ನಾಶಮಾಡುತ್ತಿರುವವ, ನಾಶಮಾಡುವವ
ಇೞಿ=ಕೃಶವಾಗು, ಕೆೞಗೆ ಬರು
ತುೞಿಲ್=ನಮಸ್ಕಾರ, ವೀರ
ತುೞಿಲಸಂದ=ಪಂಚಮ (ಹೊಲೆಯ), ವೀರ
ಅೞಿ=ಬಳ್ಳ, ಕೇಡು(ನಾಶ) ಅಳಿ=ದುಂಬಿ (ಸಂಸ್ಕೃತದ ಅಲಿ)
ತೊೞ್ತುೞಿ=ಸೇವೆ, ಕಾಗೆ
ಏೞ್=ಮೇಲೇಱು, ನಿದ್ರೆಯಿಂದ ಎಚ್ಚಱಗೊಳ್ಳು
ಅೞಲ್=ಜೋಲಾಡು, ದುಃಖಪಡು, ಬೞಲು
ಅೞ್ಗು=ನಾಶವಾಗು, ಕೊೞೆ, ಕರಗು
ತುೞಿ=ಪೆಟ್ಟು, ಕಾಲಿಂದ ಒತ್ತು
ಪೋೞಲ್=ಮರದ ಪೊಟರೆ
ಪೊೞಲ್=ಊರು

ಆವರ್ತಗಮನಾಂಕುರದೊಳೆ ಸುೞಿಯೆನಿಸುಗುಂ
ಜೀವಿಪಬಿಡಲ್ಪಡುವುದರ್ಕೆ ಬೞ್ದುಂಕುವೆಸ-
ರಾವುಜದ ಮುಟ್ಟಿನೊಳ್ ಲಾಳವಿಂಡಿಗೆಯೊಳಂ ಬಲ್ಲರಿಂದಗೞಿಯಕ್ಕುಂ
ಸೇವಕಂ ದಾಸಿಯುಂ ತೊೞ್ತಕ್ಕುಮಾೞಿಯೆನ-
ಲಾವಂಚನೆಯೊಳಮೇಕಗ್ರಾಹಿಕದೊಳಕ್ಕು-
ಮಾವಳಿಯೊಳಂ ಸಖಿಯೊಳಂ ಕ್ಷಳನೆನಿಪ್ಪುದದು ನೆೞಲೆನಲ್ ಛಾಯೆ ಬಿಂಬಂ||

ತುರಗಬಲದೊಳಮಲ್ಪಬಲದೊಳಂ ದೞವೆಸರ್
ಸರಸಿರುಹದೆಸಳೊಳ್ ಕುಳಂ ಪೞಹಮೆನೆ ಬೇಂಟೆ-
ದೆರೆಗೆ ವಾದ್ಯವಿಶೇಷಕಂ ಪೆಸರ್ ಘೞಿಯಿಸಿದನೆಂದೆನಲ್ ದೊರೆಕೊಂಡನುಂ
ದೊರೆಕೊಳಿಸಿದನುಮಕ್ಕುಮೆೞೆಯೆನಲ್ ನೂಲೊಳಂ
ಬರೆತೆಗೆವುದಱೊಳಕ್ಕುಮುರ್ವರಾರ್ಥದೆ ಕುಳಂ
ಗರವಟಿಗೆವಂದಂಗೆ ಮತಿಗೆಟ್ಟವಂಗಂ ತೊೞಲ್ದನೆಂದೆಂಬ ನಾಮಂ||
ಅರ್ಥ: ಸುೞಿ=ನೀರಿನ ಸುೞಿ, ಗಿಡದ ಎಳೆಚಿಗುರು (ಉದಾಹರಣೆಗೆ ಬಾೞೆಯ ಸುೞಿ, ತೆಂಗಿನ ಸುೞಿ), ಬೞ್ದುಂಕು=ಜೀವಿಸು, ಬದುಕು, ಸಾವಿನ ಅಪಾಯದಿಂದ ತಪ್ಪಿಸಿಕೊಂಡು ಉೞಿ(ಬದುಕು), ಅಗೞಿ=ತಾಪಾಳ, ಮೆಡ, ತೊೞ್ತು=ಸೇವಕ ಅಥವಾ ಸೇವಕಿ(ದಾಸಿ), ಆೞಿ=ಮೋಸ, ಆೞಿ=ಮೋಸ, ಆಳಿ(ಕ್ಷಳ)=ಸಾಲು, ಗೆಳತಿ, ನೆೞಲ್=ಛಾಯೆ, ಪ್ರತಿಬಿಂಬ, ದೞ=ಸಣ್ಣಸೈನ್ಯ, ಕುದುರೆಗಳ ಪಡೆ(ಸೈನ್ಯ), ದಳ=ಕಮಲದ ಎಸಳು, ಪೞಹ=ಭೇರಿ(ರಣಭೇರಿ), ಪಟಹ, ಘೞಿಯಿಸಿದಂ=ಸಿಕ್ಕವನು, ಗೞಿಸಿಕೊಂಡವನು, ಪಡೆದುಕೊಂಡವನು (ಪಡಕೊಂಡವನು), ಎೞೆ=ಬಟ್ಟೆತೆಗೆಯುವ ದಾರ, ಎಳೆ=ಭೂಮಿ, ತೊೞಲ್ದಂ= ಗರಬಡಿದವನು, ಮತಿಗೆಟ್ಟವನು

ನಿಮ್ಮ ಮಾತನ್ನು ನಾನು ಸಂಪೂರ್ಣವಾಗಿ ಒಪ್ಪುವೆ,ಆದರೆ ಈ ಅಕ್ಷರಗಳ ಬಲಾಕ್ ಮಾಡಲು ನಮಗೆ ಇವುಗಳ ಸರಿಯಾದ ಉಚ್ಛಾರಣೆ ಶಾಲೆಯಿಂದಲೆ ಕಲ್ಲಿಸಿದ್ದಿದರೆ ಚೆನ್ನಾಗಿರುತ್ತಿತ್ತು.ಈಗ ನಮಗೆ ಯಾವ ಪದಕ್ಕೆ ಯಾವ ಅಕ್ಷರೋಚ್ಚಾರಣೆ. ಸರಿ ಎನ್ನುವುದೇ ತಿಳಿಯದಾಗಿದೆ.