ನಾಗಜ್ಜಿಯ ಬಿಡಾರ ಪ್ರಕರಣ (ಭಾಗ ೧)

4.5

ಆ ಸಂಜೆ ಮೊದಲ ಮಳೆಯ ಆರ್ಭಟ. ಶಾಕ್‌ ಹೊಡೆದ ಹಾಗೆ ಆಕಾಶವೆಲ್ಲ ಕಪ್ಪು - ಕಪ್ಪು ಎಲ್ಲೋ ಇದ್ದಾನೆ ಸೂರ್ಯ, ಹರಿದ ಚಾದರದಲ್ಲಿ ತೂರಿ ಬರುವ ಚಳಿಯ ಹಾಗೆ ಎಲ್ಲೋ ತೆಳುವಾದ ಮೋಡದ ಮಧ್ಯೆ ತನ್ನ ಒಂದೊಂದೇ ಬಾಣಗಳನ್ನು ಬಿಡುತ್ತಾನೆ. ಆಕಾಶದ ತುಂಬ ಕಪ್ಪು - ಬಿಳಿಪು - ನಸುಗೆಂಪು ಚಿತ್ತಾರ. ಪ್ರಕೃತಿ ಅದೆಂಥ ಅದ್ಭುತ ಕಲಾವಿದ!

ಒಳಗೆ ಕುಳಿತಿರಲಾಗದೇ ಈ ಬದಲಾವಣೆಯ ಚಂದ ನೋಡುವ ಸಲುವಾಗಿ ಚಪ್ಪಲಿ ಮೆಟ್ಟಿ ಹೊರಟೆ. ಮೊದಲೆ ಮಳೆಯ ಸೂಚನೆಗೆ ಮೈಯೆಲ್ಲ ಪುಳಕ . ಒಮ್ಮೊಮ್ಮೆ ಆಕಾಶ ಗುಡುಗುವಾಗ, ಮತ್ತೊಮ್ಮೆ ಜಾಮಿತಿಯ ನಾನಾ ರೇಖೆಗಳಲ್ಲಿ ಆಕಾಶದ  ಭಿತ್ತಿಯ ಮೇಲೆ ಚಿತ್ರ ಬಿಡಿಸುವಾಗ, ಭಯ ....ಪ್ರೀತಿ....ಆಸೆ.... ಗರಿಗೆದರುವ ಅಮೂರ್ತ ಭಾವಗಳು.

ಹಾಗೇ ಹೊಳೆದಾಟಿ ಗದ್ದೆಗೆ ಇಳಿದೆ. ನಾಕು ಮಾರು ನಡೆದರೆ ಕೆಲಸದವರ ಬಿಡಾರ. ತಾತ್ಪೂರ್ತಿಕ ವಾಸಕ್ಕಾಗಿ ಕಟ್ಟಿಕೊಂಡ ಸೋಗೆಯ ಗುಡಿಸಲು.ಈ ಸಾರಿ ಇನ್ನೂ ಹೊಸ ಸೋಗೆ ಹೊದೆಸಿ ಆಗಿಲ್ಲ. ಮಾಡೆಲ್ಲ ಸೋರಬಹುದು. ಪಾಪ! ಮಲಗಿದವರ ಮೇಲೇ ಮಾಡು ಬೀಳಬಹುದು. ತಕ್ಷಣ ಈ ಬಿಡಾರ ರಿಪೇರಿ ಮಾಡಿಸಬೇಕು ಎಂಬ ಯೋಚನೆಯಲ್ಲಿ ಬಿಡಾರದ ಬಳಿ ಬಂದರೆ.....

ಕೋಳಿ ಕಾವು ಕೊಡಲು ಕುಳಿತ ರೀತಿ ಕುಳಿತಿದ್ದಳು ಮುದುಕಿ, ಕರಿನಾಗಜ್ಜಿ. ಕ್ಷಣಕ್ಷಣಕ್ಕೂ ಹೆಚ್ಚುತ್ತಿದ್ದ ಗುಡುಗಿನ ಆರ್ಭಟ ಆಕೆಯ ಎದೆಯಲ್ಲಿ ಕಂಪನಗಳನ್ನೆಬ್ಬಿಸುತ್ತಿದ್ದಿರಬೇಕು. ನನ್ನ ಕಂಡವಳೇ ಓಡಿಬಂದು ದಬಾರನೆ ಕಾಲಿಗೆ ಬಿದ್ದು ಗೋಳೋ ಎಂದು ಅಳತೊಡಗಿದಳು!

ಈ ಆಕಸ್ಮಿಕ ಆಘಾತದಿಂದ ನಾನು ತತ್ತರಿಸಿದೆ. ಕರಿನಾಗರ ಹಾವು ತುಳಿದ ಹಾಗೆ ಬೆಚ್ಚಿ ಬಿದ್ದೆ. ಮತ್ತೊಮ್ಮೆ ನೋಡುತ್ತೇನೆ. ಕರಿನಾಗಜ್ಜಿ ಅಡ್ಡ ಬಿದಿದ್ದಾಳೆ. (ನಾಗಜ್ಜಿ ಎಂಬುದು ಅವಳ ಹೆಸರಾದರೂ 'ಕರಿ' ಎಂಬುದು ಅವಳ ಬಣ್ಣಕ್ಕೆ ಸೇರಿಕೊಂಡಿದ್ದಿರಬೇಕು. ಆಕೆ ಕಾಲಿಗೆ ಬಿದ್ದಾಗ ಮಾತ್ರ ಕರಿನಾಗರ ನೆನಪಾದದ್ದು ಕಾಕತಾಳೀಯ ಎಂದುಕೊಳ್ಳ!) ನನಗಿಂತ ಮೂರು ಪಟ್ಟು ವಯಸ್ಸಾದವಳು, ಸಿಕ್ಕಾಗಲೆಲ್ಲ ಬೊಚ್ಚು ಬಾಯಿ ತುಂಬಾ ಒಡೇರೇ...' ಎಂದು ಮಾತನಾಡಿಸಿ ನಾನು ಯಾವ ಸೀಮೆಯ ಒಡೆಯ ಎಂದು ಕಸಿವಿಸಿಯನ್ನು ನನ್ನಲ್ಲಿ ಉಂಟುಮಾಡುವವಳು, ಬಿಡಿಸಿದ ಅರಳೆಯನ್ನು ಕರಿಯ ಡೊಂಕು ರೆಂಬೆಯ ತುದಿಗೆ ಹೊದಿಸಿದಂತಿರುವವಳು, ಬಿಡಾರದ ಬುಡದಲ್ಲಿ ನನ್ನ ಕಾಲ್ಲಿಗೆ ಬೀಳುವುದೆಂದರೆ...?

ಅವಳಿಗೇನಾಗಿರಬಹುದೆಂದು ನನಗೆ ಅರ್ಥವಾಗಲಿಲ್ಲ. ಗೋಳೋ ಎಂದು ಎಡೆಬಿಡದೆ ಅಳುತ್ತಿದ್ದಳು ಬೇರೆ. “ಏನಾಯ್ತು ಮಾರಾಯ್ತೀ ಮೇಲೆ ಏಳು" ಎಂದೆ. ಅವಳು ಅಳುವಿನ ಮಧ್ಯೆಯೆ ಹೇಳಿಕೊಂಡ ಪುರಾಣದಲ್ಲಿ "ನನ್ನ ಮನೆಯವ್ರು ಸತ್ತೋದ. ವಾಸಕ್ಕೆ ಮನೆಯಿಲ್ಲ. ಈ ಮಳೆಗಾಲಕ್ಕೊಂದು ಜಾಗಮಾಡಿ ಕೊಡಿ" ಎಂದದ್ದು ಮಾತ್ರ ಗೊತ್ತಾಯಿತು. ಉಳಿದ ಮಾತುಗಳು ಬಿಕ್ಕಳಿಕೆಯಲ್ಲೇ ಇಂಗಿಹೋದವು.

ನಾನು ಊರಿಗೆ ಬಂದಾಗಲೆಲ್ಲ ಆಯಿಯ ಬಳಿ ಊರಲ್ಲಿ ಯಾರ್ಯಾರು ಸತ್ತರು, ಯಾರಿಗೆ ಮಗು ಹುಟ್ಟಿತು ಮುಂತಾಗಿ ತಪ್ಪದೇ ಲೆಕ್ಕ ಕೇಳುವುದುಂಟು. ಊರಿನ ವಿದ್ಯಮಾನ ಗೊತ್ತಿರಲಿ ಎಂಬ ದೃಷ್ಟಿಯಿಂದ. ಹಿಂದಿನ ಸಾರಿ ಆಯಿ ನೆನಪು ಮಾಡಿ ಹೇಳಿದ ಲಿಸ್ಟಲ್ಲಿ ಕೋಲಿಗದ್ದೆ ಸುಬ್ಬನ ಹೆಸರೂ ಸೇರಿತ್ತು. ಉದ್ದಕ್ಕೆ ಕೋಲಿನ ಹಾಗೇ ಇದ್ದ ಅವನನ್ನು ನಾನು ಈಚೆಗೆ ಕಂಡಿದ್ದು ಎಂದೂ ತುಂಬಿದ ಸಾರಾಯಿ ಪೀಪಾಯಿಯ ಹಾಗೆ ಮಾತ್ರ!

ಈ ನಾಗಜ್ಜಿ ಸುಬ್ಬನ ಹೆಂಡತಿ. ಆದರೆ ಇಬ್ಬರಿಗೂ ಸರ್ಕಾರ ನೀಡುವ 'ವೃದ್ದಾಪ್ಯ ವೇತನ' ಬರುತ್ತಿತ್ತು. ಗಂಡ ಇರುವ ಮುದುಕಿಗೆ ಹಣ ಬರುವುದು ಹೇಗೆ? ಕೇಳಿದಾಗ ಸತ್ಯ ಹೊಳೆಯಿತು. ಸುಬ್ಬ ಕಟ್ಟಿಕೊಂಡ ಹೆಂಡತಿಯೇನೂ ಅಲ್ಲ ನಾಗಜ್ಜಿ. ಬೇರೆ ಆಶ್ರಯ, ಆರೈಕೆ ಇಲ್ಲದ ಇಬ್ಬರು ಮುದುಕರು ಅನುಕೂಲಕ್ಕಾಗಿ ಪರಸ್ಪರ ಕೂಡಿದ್ದರು. ಹಾಗೇ ಕೂಡುವಾಗಲೇ ಅವರು ಮುದುಕರಾಗಿದ್ದರು. 'ನಮ್ಮ ಮನೆಯವ್ರು' ಎಂದು ಪರಸ್ಪರ ಪ್ರೀತಿಯಿಂದ ಹೇಳಿಕೊಂಡ ಬಿಡಾರ ಮಾಡಿಕೊಂಡ ಬದುಕಿದ್ದರು.

ಸುಬ್ಬ ಸತ್ತ ಮೇಲೆ ನಾಗಜ್ಜಿ ಮತ್ತೆ ಒಂಟಿಯಾದಳು. ಬಿಡಾರದಲ್ಲಿ ಒಬ್ಬಳೇ ಇರಲು ಭಯವಾಗಿಬಿಟ್ಟರಬೇಕು. ಏಕಾಂಗಿ ಮುದಿಜೀವ. ಎಲ್ಲಿಗೆ ಹೋದಾಳು? ಅದೂ ಮಳೆ ಬರುವ ಹೊತ್ತು. ಸಿಕ್ಕ ಬಿಡಾರವನ್ನೇ ಹೊಕ್ಕಿಕೊಳ್ಳುವಾ ಅಂತ ಬಂದಾಗ ಎದುರಿಗೆ ನಾನು ಬಂದೆ. ನಾಗಜ್ಜಿಗೆ ಹಾಲು ಕುಡಿದಂತಾಯಿತು. ದೊಪ್ಪನೆ ಕಾಲಿಗೆ ಬಿದ್ದಳು!

ನನಗೆ ಒಳ್ಳೇ ಪೀಕಲಾಟ. ಇನ್ನೇನು ಮಳೆ ಬರಿತ್ತದೆ, ಮದುಕಿ ತೋಯುತ್ತಾಳೆ, ಏನು ಮಾಡಬೇಕು? ಹಾಗಂತ ನಮ್ಮ ಕೆಲಸದವರ ಒಂದು ಕುಟುಂಬ ಆಗಲೇ ವಾಸವಾಗಿರಿವ ಚಿಕ್ಕ ಗುಡಿಸಲಿನಲ್ಲಿ 'ನೀನೂ ಇರು' ಎನ್ನುವುದು ಹೇಗೆ? ಒಮ್ಮ ಒಳ  ಹೊಕ್ಕರೆ ಕನಿಷ್ಠ ಮಳೆಗಾಲ ಮುಗಿಯುವವರಗೆ ಈ ಮುದುಕಿ ಏಳುವವಳಲ್ಲ. ಆ ಬಿಡಾರವೇ ಮುದಿಯಾದದ್ದು. ಅಲ್ಲಿ ಈ ಮುದುಕಿ ಸೇರಿಕೊಂಡ ಆಕಸ್ಮಿಕವಾಗಿ ಸತ್ತರೆ ಏನು ಮಾಡುವುದು? ಅಷ್ಟಾಗಿ ಆಗಲೇ ಅಲ್ಲಿ ಉಳಿದಿರುವವರನ್ನು ಕೇಳದೇ ಇವಳನ್ನು ಒಳ ಸೇರಿಸುವುದು ಹೇಗೆ? ... ಮುಂತಾಗಿ ಯೋಚನೆಯಲ್ಲಿರುವಾಗಲೇ ಎರಡು ಹನಿ ಮಳೆ ಬಿತ್ತು.

ಆಕೆ ಕೂಗಿದಳು. “ನಿಮ್ಮ ಕೆಲಸದವರನ್ನು ನಾನು ಅತ್ತೂ ಕರೆದೂ ಒಪ್ಪಿಸ್ತೀನಿ. ನಿಮ್ಮ ಅಪ್ಪಯ್ಯನವರನ್ನು ಒಪ್ಪಿಸಿ ಒಡೇರೇ...” ಅಷ್ಟರಲ್ಲಿ ಮಳೆ ಜೋರಾಗಿ ಬರತೊಡಗಿದ್ದರಿಂದ "ಏನಾದ್ರೂ ಮಾಡಿಕೋ ಮಾರಾಯ್ತಿ ನಂಗೊತ್ತಿಲ್ಲ" ಎಂದವನೇ ಓಟಕಿತ್ತೆ. ನಾನು ಏನಾದ್ರೂ ಮಾಡಿಕೋ ಮಾರಾಯ್ತಿ ನಂಗೊತ್ತಿಲ್ಲ" ಎಂದವನೇ ಓಡಕಿತ್ತೆ. ನಾನು ಏನಾದ್ರೂ ಮಾಡಿಕೊ ಎಂದದ್ದು ಆಕೆಗೆ ಆಪತ್ಕಾಲದ ಅಭಯದ ಹಾಗೇ ಕಂಡಿರಬೇಕು. ತನ್ನ ಹರಕು ಚೀಲ ತೆಗೆದುಕೊಂಡು, ದೂಡಿದರೆ ಒಳಹೋಗುವ ಬಾಗಿಲನ್ನು ತಳ್ಳಿಕೊಂಡ , ಗುಡಿಸಲ ಒಳಹೊಕ್ಕಳು.

ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಪ್ರತಿಕ್ರಿಯೆಗಳು

ವಾನಳ್ಳಿಯವರೇ ,
ಮುಂದಿನ ಕಂತು ಬೇಗ ಬರಲಿ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.