ರಾಗಗಳ ಜೊತೆಗೆ ಯಕ್ಷಗಾನದ ಮಟ್ಟುಗಳನ್ನೂ ಕಲಿಯಬೇಕು

0

ಮಟ್ಟು ಲಯಕ್ಕೆ ಸಂಬಂಧಿಸಿದ್ದು ಎಂದೂ ಸ್ವರ ಕದಂಬಗಳನ್ನು (arrangement of notes) ಬೇರೆ ಬೇರೆ ಲಯರಚನೆಗಳಿಗೆ ಹೊಂದಿಸಿದಾಗ ಬೇರೆ ಬೇರೆ ಮಟ್ಟುಗಳು ಹುಟ್ಟುತ್ತವೆ ಎಂದೂ ನನ್ನ ನಂಬಿಕೆ. ನಾನು ಅರ್ಥೈಸಿಕೊಂಡಿದ್ದು ಸರಿಯಾದರೆ ನಂಬಿಯಾರರು ಹೊಸತೋಟದವರು ಇದನ್ನೇ ಹೇಳಿದ್ದಾರೆ. ಮಟ್ಟುಗಳನ್ನು ಪ್ರತ್ಯೇಕವಾಗಿ ಕಲಿಯಬೇಕಾಗುತ್ತದೆ. ಸ್ವರ, ತಾಳ, ಶೈಲಿ, ರಾಗ, ಕಲಿಯುವುದರ ಜೊತೆಗೆ, ಕಲಿಯಬೇಕಾದ ಇನ್ನೊಂದು ಅಂಶ ಇದು. ಅದರ ಜೊತೆಗೆ ಸಂದರ್ಭಕ್ಕೆ ಸರಿಯಾಗಿ ಮಟ್ಟು ಗತಿ ಇತ್ಯಾದಿಗಳನ್ನು ಬಳಸುವುದನ್ನೂ ಕಲಿಯಬೇಕಾಗುತ್ತದೆ. ರಾಗ ರೈಲ್ವೇ ಹಳಿ ಇದ್ದಂತೆ. ಹಳಿ ದಿಲ್ಲಿಯವರೆಗೂ ಹೊಗುತ್ತದೆ ಆದರೆ ನಮಗೆ ಬೇಕಾದಲ್ಲಿ ಬೇಕಾದಾಗ ಹತ್ತಿ ನಾವು ಇಳಿದು ಕೊಳ್ಳಬೇಕು ಇಲ್ಲದಿದ್ದರೆ ಬೇಡದಲ್ಲಿಗೆ ಹೋಗಿಬಿಡುವ ಸಂಭವ ಇದೆ!

ಒಂದೊಂದು ಭಾವನೆಗೆ ಒಂದೊಂದು ಸಮಯದ ಮಿತಿ ಇದೆ. ಸಿಟ್ಟು ಅತಿವೇಗ, ದು:ಖ ಅತಿವಿಲಂಬ, ಲವಲವಿಕೆ ಉತ್ಸಾಹಗಳಲ್ಲಿನ ಚುರುಕು, ಆಶ್ಚರ್ಯ ಕ್ಷಣಿಕ, ಸಂತೋಷ ಕ್ಷಣಿಕವಲ್ಲದಿದ್ದರೂ ಸೀಮಿತ ಸಮಯ, ಹೀಗೆ. ಈ ಭಾವನೆಗಳ ಸಮರ್ಥ ತೋರ್ಪಡಿಕೆಯಿಂದ ರಸೋತ್ಪತ್ತಿಯಾಗುತ್ತದೆ (Rasa is an abstraction one level above emotion, Raga is an abstraction one level above melody). ಇವೆಲ್ಲ ಭಾವನೆಗಳನ್ನು ತೋರ್ಪಡಿಸುವ ಒಂದೇ ರಾಗದ ಹಲವು ಪದ್ಯಗಳನ್ನು ಕ್ರೋಢೀಕರಿಸಿದಾಗ ಯಕ್ಷಗಾನದ ರಾಗಗಳ ಪೂರ್ಣ ರೂಪ ನಮಗೆ ಕಾಣಿಸುತ್ತದೆ. ಹಾಗಾಗಿ ರಾಗ ಮತ್ತು ಮಟ್ಟು ಅಲ್ಲದೇ ಬೇರೆ ಬೇರೆ ಭಾವನೆಗಳಿಗೆ ಪದವನ್ನು ಹೇಗೆ ಹೇಳಬೇಕೆಂದು ಕಲಿಯಬೇಕು. ಇದು ಸ್ವಪ್ರತಿಭೆಯಿಂದಲೂ ಸಾಧ್ಯ ಆದರೆ ಪ್ರತಿಭೆಗೆ ಮಿತಿ ಇರುವುದರಿಂದ ಹಿರಿಯರಿಂದ ಇವನ್ನು ಕೇಳಿ ನಾವು ಕಲಿಯಬೇಕು.

ರಾಗ ಮತ್ತು ಮಟ್ಟುಗಳ ಕಲಿಕೆ ಬೇರೆ ಆದ್ದರಿಂದ ರಾಗಗಳನ್ನು ಶುದ್ಧವಾಗಿ ಬಳಸಲು ಮಾಡುವ ಪ್ರಯತ್ನ ಬಹಳ ಒಳ್ಳೆಯದು. ಅಭ್ಯಾಸ ಮಾಡಿದ ರಾಗಗಳನ್ನು ಮಟ್ಟಿಗೆ ಹೊಂದಿಸಬಾರದು. ಕಲಿತ ಮಟ್ಟನ್ನು ರಾಗ ತಪ್ಪದಂತೆ ಹಾಡಬೇಕು. ಹಾಗೆ ಮಾಡಲು ಅತಿವೇಗವಾಗಿ ಸ್ವರ ಬದಲಿಸುವುದನ್ನು ಮತ್ತು ಕಡಿಮೆ ಸ್ವರಗಳಲ್ಲಿ ಹೆಚ್ಚು ಸಾಹಿತ್ಯ ಬಳಸುವುದನ್ನೂ ಕಲಿಯಬೇಕಾಗುತ್ತದೆ. ರಾಗ ತಿಳಿದು ತಿದ್ದಿಕೊಳ್ಳುವುದರಿಂದ ಮಟ್ಟಿಗೆ ಯಾವಹಾನಿಯೂ ಇಲ್ಲ. ಆದರೆ ಮಟ್ಟಿನ ಲಯಬಂಧವನ್ನು ಹಾಗೇ ಉಳಿಸಿಕೊಳ್ಳುವ ಎಚ್ಚರಿಕೆ ಬೇಕು. ಅದರ ಜೊತೆಗೆ ಮಿಶ್ರರಾಗ, ಸ್ವಂತ ಹೊಸರಾಗದ ಬಳಕೆ ಎಲ್ಲವನ್ನೂ ಗೌರವಿಸಬೇಕು. ಯಕ್ಷಗಾನದ ಸ್ವಾಭಾವಿಕ ಬಳಕೆಯನ್ನು "ಸರಿ" ಮಾಡುವುದು ತಪ್ಪು ಮತ್ತು ಅದರಿಂದ ಪ್ರತಿಭೆಗೆ ಅಡ್ಡಿಯುಂಟಾಗುತ್ತದೆ. ರಾಗದ ಹೆಸರು ಹೇಳಿ ತಪ್ಪು ಮಾಡುವುದೂ ಸರಿಯಲ್ಲ.
ಕರ್ನಾಟಕಿ ಹಿಂದೂಸ್ತಾನಿಗಳನ್ನು ಈ ವಿಷಯದ ಸಲುವಾಗಿ ಬದಿಗಿಡೋಣ. ಯಕ್ಷಗಾನದ ರಾಗ ಹೀಗೆ ಎಂದು ಈಗಾಗಲೇ ಹಳೆ ಭಾಗವತರನ್ನು ಕೇಳಿ ದಾಖಲಾಗಿದೆ. ಹಾಗಿರುವಾಗ, ಮೊಹನದಲ್ಲಿ ಹೇಳಿ ಮಾರವಿ ಎಂದರೆ ಅದನ್ನು ತಿದ್ದಬೇಕಾಗುತ್ತದೆ. ಮಾರವಿ-ಏಕ ಮಟ್ಟು ಎಂದರೆ ತೊಂದರೆ ಇಲ್ಲ. ತಿದ್ದಬೇಕು, ಇಲ್ಲದಿದ್ದರೆ ನಾವು ಹೇಳಿದ್ದೇ ಹಾಡು, ಆಡಿದ್ದೇ ಆಟ, ಮಾಡಿದ್ದೇ ಮಾಟ ಆಗುತ್ತದೆ. ಕರ್ನಾಟಕಿಯ ರಾಗ ತಂದು, ಹಾಗೇ ಹೇಳಿ ಎಂದಲ್ಲ. ಯಕ್ಷಗಾನದ ರಾಗವನ್ನೇ ಸರಿ ಹಾಡಿ ಎನ್ನುವುದು. ಅಲ್ಲದೇ ಮಿಶ್ರವಾಗಿ ಅಥವಾ ಅಲಾಪನೆ ಮಾಡುವಾಗ ಮನೋವೃತ್ತಿಗೆ ಹೊಂದಿ ಬೇರೆ ಬಂದರೆ ತೊಂದರೆ ಇಲ್ಲ ಆದರೆ ಶುದ್ಧವಾಗಿ ಯಕ್ಷಗಾನದ ರಾಗದಲ್ಲೇ ಹಾಡಲು ಬರುವುದು ಅಭ್ಯಾಸ ಮತ್ತು ನಿಪುಣತೆಯ ಸಂಕೇತ. ಇದಕ್ಕೂ ವಿದ್ಯೆ ಗೊತ್ತಿಲ್ಲದವರಿಂದ ಹೊಗಳಿಸಿಕೊಂಡು ಪಡೆದ "ಖ್ಯಾತಿ"ಗೂ ಯಾವ ಸಂಬಂಧವೂ ಇಲ್ಲ.

ಬಡಗಿನ ಪದಕ್ಕೂ ತೆಂಕಿನ ಪದಕ್ಕೂ ಹಿಂದೆ ಹೆಚ್ಚು ವ್ಯತ್ಯಾಸ ಇರಲಿಲ್ಲ. ಈಗ ೫೦-೬೦ ವರ್ಷಗಳಲ್ಲಿ ಕರ್ನಾಟಕಿಯ ಪ್ರಭಾವ ಯಕ್ಷಗಾನದ ಅಭಾವವಾಗುವಷ್ಟರಮಟ್ಟಿಗೆ ಆಗಿ ಮೂಲ ತೆಂಕಿನ ಶೈಲಿ ಕೇಳಲೇ ಇಲ್ಲ ಎನ್ನುವಂತಾಗಿದೆ. ಅಗರಿ ಭಾಗವತರ ಪದಕೇಳಿದರೆ ಹಳೇ ಬಡಗು ತೆಂಕುಗಳ ಪದ ಸಮೀಪ ಇತ್ತು ಎನ್ನುವುದು ಅರ್ಥವಾಗುತ್ತದೆ. ಈಗ ಇರುವ ಸಾಮಿಪ್ಯ ಬೇರೆ! ಇದು ಎರಡೂ ಕರ್ನಾಟಕಿಯಂತೆ ಆಗಿ ಬಡಗಿನವರೂ ತೆಂಕಿನವರ ಕಲಬೆರೆಕೆ ಆಗಿ ಆದದ್ದು. ಹೀಗೆಯೇ ತೆಂಕಿನ ಹಳೆ ಮದ್ದಲೆ ಮಾಯವಾಗಿ ಈಗ ಕರ್ನಾಟಕಿಯ ಶೈಲಿಯ ಮದ್ದಲೆ ಬಂದಿದೆ. ನುಡಿಸುವುದೂ ಬದಲಾಗಿದೆ. ನನಗೆ ಯಾವಾಗಲೂ ತೆಂಕಿನ ಮದ್ದಲೆ ಏಕೆ ಬೇರೆ ಎಂದು ಅನ್ನಿಸುತ್ತಿತ್ತು. ನಂಬಿಯಾರರ ಪುಸ್ತಕ ಓದಿದ ಮೇಲೆ ತಿಳಿದಿದ್ದು, ಇದು ಕರ್ನಾಟಕಿಯ "ಪ್ರಭಾವ". ಯಕ್ಷಗಾನದ ಅಭಾವವನ್ನು ನೀಗಿಸಲು ಯಕ್ಷಗಾನ ಬಯಲಾಟದ ಮೂಲ ಅಂಶಗಳನ್ನು ಸತತ ಬಳಕೆ ಮತ್ತು ಅಧ್ಯಯನದ ಮೂಲಕ ಸದೃಢಗೊಳಿಸಬೇಕು. ಅಧ್ಯಯನ ಬೇಕಷ್ಟು ಆಗಿದೆ. ಈಗ ಹೆಚ್ಚು ಬಾಕಿ ಇರುವುದು ಸರಿಯಾದ ಬಳಕೆ. ಕರ್ನಾಟಕಿಯಂತೆ ಬಳಸಿ ಎಂದು ಹೇಳುವವರು ಹೆಚ್ಚಿಲ್ಲ ಆದರೆ ಸ್ವರ, ರಾಗಗಳನ್ನು ಬೇಕಾದಂತೆ ಬಳಸಲು ಕಲಿಯಿರಿ ಎಂದಷ್ಟೇ ಹಲವು ಹಿರಿಯ ಯಕ್ಷಗಾನ ವಿದ್ವಾಂಸರ ಆಗ್ರಹ. ಆದರೆ ಹಾಗೆ ಹೇಳಿ ಕೊಡುವ ಗುರುಗಳೇ ಸುಲಭವಾಗಿ ಸಿಗುವುದಿಲ್ಲ, ಸಿಕ್ಕವರಲ್ಲಿ ನಾವು ಕಲಿಯುವುದಿಲ್ಲ! ಕಲಿಯುವುದನ್ನು ತಪ್ಪಿಸಿಕೊಳ್ಳಲು ನಾವು ಹೇಳುವುದೇ ಯಕ್ಷಗಾನ ಎನ್ನುವ ಮನೋಭಾವ ಮೂಡುತ್ತಿದೆ. ಕರ್ನಾಟಕಿಯ ಪ್ರಭಾವ ಬೇಡ ಆದರೆ ಅದರ ಹೆದರಿಕೆಯಲ್ಲಿ ಇದ್ದ ಯಕ್ಷಗಾನವೂ ಹಾಳಾಗುವುದು ಬೇಡ. ಇದೆಲ್ಲಕ್ಕಿಂತ ದೊಡ್ಡ ದು:ಖವೆಂದರೆ ಚೆನ್ನಾಗಿ ಬಲ್ಲವರನ್ನು ಗೌರವಿಸುವ ಅವರಿಂದ ಕಲಿಯುವ ಪರಂಪರೆ ನಾಶವಾಗಿದೆ. ಹಾಗೆ ಬೇರೆಯವರು ತಮಗಿಂತ ಶ್ರೇಷ್ಠರೆಂದು ಜನಕ್ಕೆ ತಿಳಿದರೆ "ಖ್ಯಾತಿ"ಕೆ ದಕ್ಕೆ ಬರುತ್ತದಲ್ಲ!

ಶಾಸ್ತ್ರೀಯ ಸಂಗೀತ ಕಲಿಯದಿದ್ದರೆ ಯಕ್ಷಗಾನ ಹಾಡಲು ಬರದು ಇತ್ಯಾದಿ ಹೇಳುವವರೂ ಇದ್ದಾರೆ. ಆದೇನು ಅಗತ್ಯವಿಲ್ಲ. ಸ್ವರ ಕಲಿಯಬೇಕು, ಯಕ್ಷಗಾನದ ರಾಗಗಳನ್ನು ಅಭ್ಯಾಸ ಮಾಡಬೇಕು. ಪರಂಪರೆಯಿಂದ ಕೇಳಿ ಹಾಡಿದರೆ ಅಡ್ಡಿ ಇಲ್ಲ. ಕೇವಲ ಕೇಳಿ ಹಾಡಿದರೆ ಸೂಕ್ಷ್ಮ ಅಂಶಗಳು ಹಾಳಾಗುತ್ತವೆ. ತಾವು ತಪ್ಪಾಗಿ ಹಾಡುವುದನ್ನೇ ಪರಂಪರೆ ಎಂದು ಹೇಳುವುದನ್ನು ತಪ್ಪಿಸಲು ಶುದ್ಧವಾದ ರಾಗ ಜ್ಞಾನದ ಅವಶ್ಯಕತೆಯಿದೆ. ಮಟ್ಟು, ಚಲನೆ ಮತ್ತು ಬಳಕೆ ಇತ್ಯಾದಿಗಳನ್ನು ಗುರುಗಳಿಂದ ಹೇಳಿಸಿಕೊಂಡು ಕಲಿಯಬೇಕು ಕೂಡ. ಎಂದ ಮಾತ್ರಕ್ಕೆ ಸ್ವಂತ ಪ್ರತಿಭೆಯಿಂದ ಹಾಡುವವರ ಹಾಡು ಕಡಿಮೆಯಾಗಬೇಕಿಲ್ಲ. ಇಂಪಾಗಿ ಚಂದವಾಗಿ ಹಾಡುವುದೆಲ್ಲ ಬೇಕು. ನಾನೂ, ನಾನು ಹಾಡುವುದೇ ಯಕ್ಷಗಾನ ಎಂದು ಒಂದುಕಾಲದಲ್ಲಿ ಅಂದು ಕೊಂಡಿದ್ದೆ. ಆದರೆ ಅದನ್ನು ಹಿರಿಯರಿಂದ ಕೇಳಿ ಕಲಿತು ಸರಿಪಡಿಸಿ ಕೊಳ್ಳಬೇಕು ಎನ್ನುವ ಬುದ್ಧಿ ಕೆಲವು ಹಳೇಯ ಪದಗಳನ್ನು ಕೇಳಿ ಬಂದಿದೆ. ರಾಮಚಂದ್ರ ನಾವುಡರು, ಅಗರಿ ಭಾಗವತರು, ಮರಿಯಪ್ಪಾಚಾರರು ಇವರ ಪದ ಕೇಳಿ ಈಗಿನ ಪದದ ಶೈಲಿಗೆ ಹೋಲಿಸಿದಾಗ ನಾವು ಏನೋ ಕಳೆದುಕೊಂಡಿದ್ದೇವೆ ಎಂದು ನಿಮಗೆ ಅನ್ನಿಸದಿದ್ದರೆ ನಿಮಗೆನೋ ತಿಳಿಯಲಿಲ್ಲ ಎಂದೇ ಅರ್ಥ!

ರಾಗು ಕಟ್ಟಿನಕೆರೆ
ಯಕ್ಷಮಿತ್ರ ಟೊರೋಂಟೋ

Image from: Wikimedia

ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.
ಸರಣಿ: 
ಲೇಖನ ವರ್ಗ (Category): 

ಪ್ರತಿಕ್ರಿಯೆಗಳು

ನಾನು ಕಂಡಂತೆ ಯಕ್ಷಗಾನದ‌ ರಾಗಗಳೆಲ್ಲ‌ ಸಾಧಾರಣವಾಗಿ ಕರ್ನಾಟಕ ಸಂಗೀತದ‌ ರಾಗಗಳೇ ಆಗಿರುತ್ತವಲ್ಲ‌? ಅಂದರೆ ಯಕ್ಷಗಾನದ‌ ರಾಗಗಳೆಂದು ನೀವು ಹೇಳುವುದು ಯಾವುದಕ್ಕೆಂದು ವಿವರಿಸುವಿರಾ ರಾಗು ಅವರೆ?

‍ಹಂಸಾನಂದಿ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ನಮಸ್ಕಾರ ಹಂಸಾನಂದಿ ಅವರೆ, ನಿಮಗೆ ತಿಳಿದಿರಬಹುದು ಆದರೂ ವಿಷಯ ಸ್ಪಷ್ಟವಾಗಲಿಕ್ಕೆ ಹೇಳ್ತೇನೆ. ಕರ್ನಾಟಕಿ, ಹಿಂದೂಸ್ತಾನಿ, ಬಯಲಾಟ (ಯಕ್ಷಗಾನ) ಎಲ್ಲವೂ ದೇಸೀ ಪರಂಪರೆಯ ಸಂಗೀತ. ಕರ್ನಾಟಕಿ ಮತ್ತು ಹಿಂದೂಸ್ತಾನಿ ಗಳಲ್ಲಿ ರಾಗ ಬೇಧ ಇರುವಂತೆ ಕರ್ನಾಟಕಿ ಮತ್ತು ಬಯಲಾಟದಲ್ಲೂ ಇದೆ. ಬಯಲಾಟದ ಸಂಗೀತ ಕರ್ನಾಟಕಿಯಂತೆ ಒಂದು ಬೇರೆಯೆ ಆದ ಪರಂಪರೆ. ಬಯಲಾಟ ಪುರಂದರದಾಸರು/ವಿಜಯನಗರದ ಕಾಲದಲ್ಲಿ ಉಚ್ಛ್ರಾಯದಲ್ಲಿತ್ತು ಎನ್ನುವುದಿದೆ. ಹಲವು ರಾಗಗಳನ್ನು ಬೇರೆ ಪದ್ದತಿಯಿಂದ ತಂದು ಬಯಲಾಟದ ಶೈಲಿಗೆ ಹೊಂದಿಸಿ ಬಳಸಿ ತನ್ನದಾಗಿಸಿ ಕೊಂಡುದೂ ಇದೆ. ತುಜಾವಂತು ರಾಗದಂತಹ ಕರ್ನಾಟಕಿಯಲ್ಲಿ ಬಳಕೆಯಲ್ಲಿ ಇಲ್ಲದ ರಾಗಗಳು ಇಲ್ಲಿ ಬಳಕೆಯಲ್ಲಿವೆ. ಕರ್ನಾಟಕಿಯಲ್ಲಿ ಇಲ್ಲದ ಹೊಸ ರಾಗಗಳೂ ಇವೆ ಎಂದು ಕೇಳಿದ್ದೇನೆ. ಒಂದೇ ಹೆಸರಿನ ರಾಗದ ಬಳಕೆ ಬೇರೆ ಇರುವುದೂ ಇದೆಯಂತೆ. ಇದನ್ನು ನಾನು ಗ್ರಹಿಸ ಬಲ್ಲೆನಾದರೂ, ಸ್ವರ ಪ್ರಸ್ತಾರ ಮಾಡಿ ವಿವರಿಸುವುದು ನನಗೆ ಮೀರಿದ್ದು. ಹಾಗಾಗಿ ಶ್ರೀ ರಾಮ ಹೆಗಡೆಯವರು ಮತ್ತು ವಿದೂಷಿ ಸತ್ಯವತಿಯವರ ಈ ಸಂವಾದ ಕೇಳಿ ಕೆಲವು ವಿವರಗಳು ತಿಳಿಯಬಹುದು. ಇದರ ಬಗ್ಗೆ ನಿಮಗೆ ಏನನ್ನಿಸುತ್ತದೆ ದಯವಿಟ್ಟು ತಿಳಿಸಿ. ಧನ್ಯವಾದಗಳು.
http://new.livestream.com/shaalelive/19jan2014/videos/39995054

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ಹಾಗೆಯೇ ವಿದ್ವಾನ್ ರಾಜಗೋಪಾಲ ಆಚಾರ್ಯರು (ಯಕ್ಷಗಾನ ಸಂಗೀತ) ಮತ್ತು ಶಿವರಾಮ ಕಾರಂತರೂ ಯಕ್ಷಗಾನದ ರಾಗಗಳನ್ನು ಪ್ರಸ್ತಾರ ಮಾಡಿ ದಾಖಲೆ ಸೃಷ್ಟಿಸಿ ಯಾವರೀತಿ ಬೇರೆ ಇತ್ಯಾದಿ ವಿವರಗಳನ್ನು ಕೊಟ್ಟಿದ್ದಾರೆ. ನಿಮಗ ಆಸಕ್ತಿ ಇದ್ದರೆ ಪುಸ್ತಕ ಗೋವಿಂದ ಪೈ ಸಂಶೋಧನಾ ಕೇಂದ್ರ, ಉಡುಪಿಯಲ್ಲಿ ಲಭ್ಯ. ನನ್ನ ಬಳಿ ಪ್ರತಿ ಇದೆ ಅದರಿಂದ ಅಭ್ಯಾಸಕ್ಕೆ ಬಳಸುವುದೂ ಇದೆ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ಲೈವ್ ಸ್ಟ್ರೀಮ್ ಕೊಂಡಿಗೆ ಧನ್ಯವಾದಗಳು!

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.