ಅಪರೇಷನ್ ಗಣೇಶ - ಖೆಡ್ಡಾ 2

3
 
ಅದು ಪುತ್ತೂರಿನಿಂದ ಸುಳ್ಯದ ಕಡೆ ಹೋಗುವ ರಸ್ತೆ , ಸಪ್ತಗಿರಿ ಎಂಬ ತರುಣ ಸೈಕಲ್ಲನ್ನು ತಳ್ಳುತ್ತ , ಕಷ್ಟ ಬಿದ್ದು ನಡೆಯುತ್ತ ಹೊರಟಿದ್ದಾರೆ, ಹಾಗೆ ಎಷ್ಟೋ ದೂರ ನಡೆದಾಗ, ಸ್ವಲ್ಪ ತಿರುವು ಇರುವ ಜಾಗಕ್ಕೆ ತಲುಪಿದರು, ಸ್ವಲ್ಪ ಸುಸ್ತು ಆಗಿತ್ತು, ಸೈಕಲ್ ತಳ್ಳಿ. ರಸ್ತೆಯ ಪಕ್ಕ   ಹೋಟೆಲ್ ಕಾಣಿಸಿತು, ಅಸಲಿ ಎಂದರೆ ಅದು ದೊಡ್ಡ ಹೋಟೆಲ್ ಏನಲ್ಲ, ರಸ್ತೆ ಪಕ್ಕ ಇರುವ ಡಾಬಾದಂತಹ ಚಿಕ್ಕ ಹೋಟೆಲ್
 
ಇಬ್ಬರು ಮೂವರು ಮಾತ್ರ ಕುಳಿತಿದ್ದರು, ಹೋಟೆಲ್ ಎದುರಿಗೆ ಒಂದು ಲಾರಿ ನಿಂತಿತ್ತು, ಬಹುಷಃ ಅದರ ಡ್ರೈವರ್ ಮತ್ತು ಕ್ಲೀನರ್ ಮಾತ್ರ ಅಲ್ಲಿದ್ದರು ಅನ್ನಿಸುತ್ತೆ. ಹೋಟೆಲ್ ಗಲ್ಲದ ಮೇಲೆ,  ಗುಡಾಣ ಹೊಟ್ಟೆಯ ಯಜಮಾನ ಕುಳಿತಿದ್ದ. ಪಂಚೆ ಉಟ್ಟಿದ್ದು, ಮೇಲೆ ಬನಿಯನ್ ಮಾತ್ರ ಹಾಕಿದ್ದು,  ದೂರಕ್ಕು ಎದ್ದು ಕಾಣುತ್ತ ಇದ್ದಿದ್ದು ಅವನ ಹೊಟ್ಟೆ. ನೋಡಲು ಸಿನಿಮಾನಟ ದೊಡ್ಡಣ್ಣ ತಕ್ಷಣ ನೆನಪಿಗೆ ಬರುವಂತಿತ್ತು ಅವನ ಆಕಾರ. ಅವನ ದೃಷ್ಟಿಗೆ ದೂರದಿಂದ ಸೈಕಲ್ ತಳ್ಳುತ್ತ ಬರುತ್ತಿದ್ದ ಸಪ್ತಗಿರಿ ಕಾಣಿಸಿದರು. ಹತ್ತಿರ ಬಂದು ಸೈಕಲ್ ನಿಲ್ಲಿಸಿ ಒಳಬಂದವರನ್ನು , ಕುರಿತು, 
"ಏನ್ ಸಾರ್, ಸೈಕಲ್ ಪಂಚರಾ, ತಳ್ತಾ ಬರ್ತಾ ಇದ್ದೀರಿ, ನಮ್ಮ ಬಷೀರ್ ಸೈಕಲ್ ಶಾಪ್ ದು ಇದ್ದಾಗಿದೆ" ಎಂದ.
"ಹೌದು , ಇವರೆ, ಬಷೀರ್ ಸೈಕಲ್ ಶಾಪ್ದೆ,   ಸೈಕಲ್ ಪಂಚರ್ರ್  ಗಿಂಚರ್ ಏನಾಗಿಲ್ಲ, ಆದರೆ ನನಗೆ ಸೈಕಲ್ ಓಡಿಸಲು ಬರಲ್ಲ, ಹಾಗಾಗಿ ತಳ್ತಾ ಬಂದೆ" ಎಂದರು ಸಪ್ತಗಿರಿ
ಇವರ ಮುಖವನ್ನು ವಿಚಿತ್ರವಾಗಿ ದಿಟ್ಟಿಸಿದ ಹೋಟೆಲ್ ಮಾಲಿಕ,  
 
"ಸರಿ ಹೋಯ್ತೇಳಿ, ನಿಮ್ಮಂತಾವ್ರನ್ನ ಇದೆ ಮೊದ್ಲ ಸಲಾ ನೋಡ್ತಾ ಇರಾದು,  ಏನ್ ಕೊಡ್ಲಿ, ತಿನ್ನಾಕೆ, ಕುಡಿಯಾಕೆ, ಏ ಮಂಜಾ ನೋಡೋ ಯಜಮಾನ್ರು ಬಂದಾರೆ, ಏನ್ ಬೇಕು ವಿಚಾರ್ಸೋ " ಎಂದ ದೊಡ್ಡ ದ್ವನಿಯಿಂದ . ತಕ್ಷಣ ಸಪ್ತಗಿರಿ
"ಏ ಇಲ್ಲ ತಿನ್ನಕ್ಕೆ ಕುಡಿಯಾಕೆ ಏನು ಬೇಡ" ಎಂದ.
"ಮತ್ತೆ ಇಲ್ಲೇನ್ ಮಾಡಾಕ್ ಬಂದ್ರಿ,  ನೆಳ್ಳಿದೆ ಅಂತಾನಾ" ಎಂದ.
"ಹಾಗೇನಿಲ್ಲ, ಒಂದು ವಿಷ್ಯ  ಬೇಕಿತ್ತು,  ಈ ರಸ್ತೇಲಿ  ಯಾವುದೋ ಜಾಗ ಇದೆ ಅಂತಲ್ಲ, ತುಂಬಾ ಆಕ್ಸಿಡೆಂಟ್ ಆಗುತ್ತ ಇರುತ್ತಂತೆ ಅದು ಎಲ್ಲಿ " ಎಂದ.
"ರೀ ಸ್ವಾಮಿ, ಇದೇನು ಕೆ ಎಸ್ ಅರ್ ಟಿ ಎನ್ ಕ್ವರಿ ಕೌಂಟ್ರಾ, ಇಲ್ಲ ಪೋಲಿಸ್ ಸ್ಟೇಷನ್ನ,  ನಾನೇನು ಹೋಟ್ಲಿ ಇಲ್ಲಿ ಇಟ್ಟಿರೋದು, ನಿಮ್ಮಗೆ  ಇನ್ ಫರ್ ಮೇಶನ್ ಕೊಡೋ ಸೆಂಟರ್ ಅಂದ್ಕಡ್ರಾ , ಮೊದಲು ಜಾಗ  ಖಾಲಿ ಮಾಡಿ" ಎಂದ ಒರಟಾಗಿ.
ಸಪ್ತಗಿರಿ ಜಾಗೃತರಾದರು,
 
"ಸರಿ ಯಜಮಾನ್ರೆ ಅದೇಕೆ ಕೋಪ,  ಹೋಗ್ಲಿ ಬಿಡಿ, ಅದೇನು ತಿಂಡಿ ಮಾಡ್ಸಿದ್ದೀರಿ ಇವತ್ತು, ನನಗು ಸೈಕಲ್ ತಳ್ಳಿ ಹಸಿವಾಗ್ತ ಇದೇ ನೋಡಿ " ಎಂದ.
"ಅದಪ್ಪ ಬದುಕೋ ಮಕ್ಕಳ ಲಕ್ಷಣ, ಬೇಗ ಅರ್ಥ ಮಾಡ್ಕೋಂಡ್ ಬಿಟ್ರಿ,  ಅಲ್ಲೋಗ್ ಕುತ್ಕಳ್ಳಿ " ಅಂತ ಬೆಂಚ್ ಕಡೆ ಕೈ ತೋರಿಸಿದ.
ಸರಿ ಅಂತ ಅಲ್ಲಿ ಹೋಗಿ ಕೂತ, ಸಪ್ತಗಿರಿಯವರಿಗೆ, ಒಳಗಿನಿಂದ ಬಂದ ಸಣಕಲ ಆಸಾಮಿ,
"ಏನ್ ತಿಂತೀರ ಸ್ವಾಮಿ, ಅವಲಕ್ಕಿನ, ಇಡ್ಲೀನ " ಎಂದು ಕೇಳಿದ, ಏನು ಹೇಳೋದು ಅಂತ ಯೋಚಿಸುವ ಸಪ್ತಗಿರಿಗೆ ಅವನು ಕೇಳಿದ 
"ಏನ್ ನೀವು ಇಲ್ಲಿಯೋರ ತರಾ ಕಾಣಲ್ಲ,   ಯಾಜಮಾನರ ಹತ್ತಿರ  ಏನು ಮಾತಾಡಿದ ಹಾಗಿತ್ತು" ಎಂದ.  
ಸಪ್ತಗಿರಿಯವರಿಗೆ ರೇಗಿ ಹೋಯಿತು, ಈ ಮಾಣಿ ಹತ್ರ ಎಂತ ಮಾತು,
 
"ಅದೆಲ್ಲ ನಿನಗೇಕಯ್ಯ,  ನನಗೆ ಒಂದು ಅವಲಕ್ಕಿ, ಒಂದು ಕಾಫಿ ತಾ, ನಿನ್ನ ಕೆಲಸ ನೋಡು" ಎಂದು ರೇಗಿದರು.
 
"ಸರಿ ನಿಮ್ಮ ಹಣೇಬರ" ಎಂದು ಗೊಣಗುತ್ತ ಅವನು ಹೋಗಿ, ಅವಲಕ್ಕಿ ತಂದು ಟೇಬಲಿನ್ನ ಮೇಲೆ ಬಡಿದು ಹೋದ, ಅದನೆಲ್ಲ ತಿಂದು, ಕಾಫಿ ಕುಡಿದು, ಪುನಃ ಗಲ್ಲ ಪೆಟ್ಟಿಗೆ ಹತ್ತಿರ ಬಂದವರು,
 
"ಸರಿ ಸ್ವಾಮಿ ತಿಂಡಿ ತಿಂದೆ ತುಂಬಾನೆ ಚೆನ್ನಾಗಿತ್ತು, ಎಷ್ಟಾಯ್ತು ಬಿಲ್ಲು ಹೇಳಿ" ಎಂದವನು ಜೋಬಿಗೆ ಕೈ ಹಾಕುತ್ತಿದ್ದಾಗ, 
 
"ಸರಿ ಮೊದಲು ಅದೇನೊ ಕೇಳಿದ್ರಿ, ಆಕ್ಸಿಡೆಂಟು ಅಂತ ಎಂತದೋ ಏನದು "  ಎಂದ  ಆ ಪೈಲವಾನ್ ದೊಡ್ಡಯ್ಯ.
"ಅದೇನಪ್ಪ,  ಪುತ್ತೂರು ಸುಳ್ಯ ನಡುವೆ ಪದೇ  ಪದೇ  ಅಪಘಾತ ಆಗುತ್ತ ಇರುತ್ತಂತಲ್ಲ,  ಆ ಜಾಗ ಯಾವುದು ಅಂತ " ಎಂದು ಕೇಳಿದ,
"ಸರಿ ಸ್ವಾಮಿ, ಇದನ್ನ ಕೇಳಕ್ಕೆ ಬೆಂಗಳೂರಿನಿಂದ ಬಂದ್ರ, ಇದೇ ಜಾಗ ಅಂದುಕೊಳ್ಳಿ, ನೋಡಿ, ಇದೇ ರಸ್ತೆ ತಿರುವಿನಲ್ಲಿಯೆ, ಆ ಕಡೆ ಅನೇಗುಂಡಿ  ಕಡೆಯಿಂದ ಬರುತ್ತಲ್ಲ ಆ ರಸ್ತೆ ಇಲ್ಲಿ ಸ್ವಲ್ಪ ತಿರುವು ಪಡೆಯುತ್ತೆ, ನಾವು ನೋಡಿ ನೋಡಿ ಸಾಕಾಯ್ತು, ದಿನಾ ಒಂದಾದರು ಕೇಸ್ ಇರುತ್ತೆ ಬಿಡಿ, ಅದು ಸರಿ ನಿಮಗೆ ಏಕೆ ಅಷ್ಟೊಂದು ಆಸಕ್ತಿ, ನಿಮ್ಮ ಸೈಕಲ್ ಗೆ ಏನು ಆಗಲ್ಲ ಬಿಡಿ" ಎಂದು ಜೋರಾಗಿ ನಕ್ಕ.
 
"ಅದಕ್ಕಲ್ಲಪ್ಪ, ಅಂದ ಹಾಗೆ ನಿಮ್ಮ ಹೆಸರೇನು,  ನನಗೆ ಒಂದು ವಿಷಯ ಬೇಕಾಗಿತ್ತು, ಈಗ ಸುಮಾರು ನಾಲಕ್ಕು ಐದು ತಿಂಗಳ ಕೆಳಗೆ ಅಂತ ಇಟ್ಕೋಳ್ಳೀ ಒಂದು ಕಾರ್ ಆಕ್ಸಿಡೆಂಟ್ ಆಯ್ತು, ಕಾರಿಗೆ ಒಂದು ಬಸ್ಸು ತಗಲಿ , ಕಾರಿನಲ್ಲಿದ್ದವರೆಗೆಲ್ಲ ಏಟಾಯ್ತು ಆ ವಿವರ ಬೇಕಿತ್ತು " ಎಂದರು, ಸಪ್ತಗಿರಿ.
 
"ನನ್ನ ಹೆಸರು ದೊಡ್ಡಯ್ಯ ಅಂತ ಇಟ್ಕೊಳ್ಳೀ,  ನನಗೆ ಗೊತ್ತಾಯ್ತು, ಬಿಡಿ,  ಗಣೇಶ್ ಅಂತ ಇದ್ದಾರಲ್ಲ , ಅದೇನೊ ಸಂಪದ ಅಂತ ಇದೆಯಂತಲ್ಲ ಅದರಲ್ಲಿ ಬರೆಯೋರು, ಅವರೆ ತಾನೆ ನೀವು ಕೇಳ್ತಾ ಇರೋರು"  ಅಂದ ಆ ದೊಡ್ಡಯ್ಯ!
ಸಪ್ತಗಿರಿ ಆಶ್ಚರ್ಯದಿಂದ ಕಣ್ಣು ಬಾಯಿ ಗಳನ್ನು ಅಗಲಿಸಿ,  ಗರ ಬಡಿದವನಂತೆ ನೋಡಿದರು, ನಂತರ ಸುದಾರಿಸಿಕೊಂಡು,
"ಗಣೇಶ, ಅಷ್ಟು ಸರಿಯಾಗಿ ನಾನು ಅವರನ್ನೆ ಹುಡಿಕಿ ಬಂದಿರುವೆ ಎಂದು ನಿಮಗೆ ಹೇಗೆ ತಿಳಿಯಿತು" ಕೇಳಿದರು ಸಪ್ತಗಿರಿ.
"ಅಯ್ಯ ನೀವು ಬರ್ತೀರಿ ಅಂತ ಮೊದಲೆ ಗೊತ್ತಿತ್ತು ರೀ, ಆ ಯಪ್ಪ ಅವತ್ತೆ ಹೇಳಿ ಹೋಗಿದ್ರು,   ಹೀಗೆ ನನ್ನ ಯರಾರ ಹುಡುಕಿ ಬರ್ತಾರೆ,  ಯರಾರ ಏಕೆ, ಬಂದರೆ ಆ ಸಪ್ತಗಿರಿ,  ಪಾರ್ಥಸಾರಥಿ ಅಂತ ಇದ್ದಾರೆ, ಅವರಲ್ಲಿ ಒಬ್ಬರು ಬರ್ತಾರೆ,  ಅವೆರಡು ಸುಮ್ಮನಿರುವ ಗಿರಾಕಿಗಳಲ್ಲ, ಅವರು ಬಂದು ನನ್ನ ಗುರುತು ಕೇಳ್ತಾರೆ, ನನಗೆ ಅಯ್ಯೋ ಪಾಪ ಅನ್ನಿಸಿದೆ, ಎಷ್ಟು ದಿನ ಅಂತ ಗುಟ್ಟಾಗಿ ಇರಕ್ಕೆ ಆಗುತ್ತೆ ಅವರು ಬಂದರೆ ಎಲ್ಲ ಹೇಳಿ ನನ್ನ  ಅಡ್ರೆಸ್ ಇರೋ ಈ ಕಾರ್ಡ್ ಕೊಟ್ಟುಬಿಡು" ಅಂತ ಹೇಳಿ ಒಂದು ಕಾರ್ಡ್ ಕೊಟ್ಟು ಹೋಗಿದ್ರು ಅಂದ ನಗುತ್ತ .
"ಏನು ನಾವು ಬರ್ತೀವಿ ಅಂತ ಅವತ್ತೆ, ಆಕ್ಸಿಡೆಂಟ್ ಆದ ದಿನಾನೆ ಹೇಳಿ ಹೋಗಿದ್ರ, " ಅಂದರು ಸಪ್ತಗಿರಿ.
"ಏ ಇಲ್ಲ , ಅವತ್ತು ಅಯಪ್ಪ ನನ್ನ ಕಾಲು ನನ್ನ ಕಾಲು ಅಂತ ಬಡ್ಕೋತಿದ್ದ, ಪಕ್ಕದಲ್ಲಿ ಬೇರೆ ಅವರ ಹೆಂಡ್ರೋ ಯಾರೊ ಗೊತ್ತಿಲ್ಲ ಆ ಯಮ್ಮ ಕುಳಿತಿದ್ರು, ಈ ಮನುಷ್ಯನಿಗೆ ಆಕೆ ಎದುರು ಮಾತನಾಡಲು ಭಯ, ಎಲ್ಲಿ ಆಡ್ತಾರೆ,  ಈಗ ಒಂದು ತಿಂಗಳ ಹಿಂದೆ , ಅವರು ಬಂದು ನನಗೆ ಎಲ್ಲ ಹೇಳಿ ಕಾರ್ಡ್ ಕೊಟ್ಟು ಹೋದ್ರು, ಅದೇನೊ, ಸಂಪದದಲ್ಲಿ ಬರೆದಿದ್ದರಂತಲ್ಲ, ಹೀಗೆ ಹೀಗೆ ಆಕ್ಸಿಡೆಂಟ್ ಆಯ್ತು ಅಂತ,  ಅದಕ್ಕೆ ನೀವು ಯಾರಾದರು ಬರ್ತೀರಿ ಅಂತ ಅವರ ಲೆಕ್ಕಚಾರ" ಅಂದ ಆ ದೊಡ್ಡಣ್ಣ.
 
"ಪರವಾಗಿಲ್ಲ ಗಣೇಶಣ್ಣ ನ ತಲೆ, ಬರಿ ದೇಹ ಮಾತ್ರ ದೊಡ್ಡದು ಅಂದುಕೊಂಡೆ, ಬುದ್ದಿಯು ಚುರುಕು ಇದೆ " ಅಂದರು ಸಪ್ತಗಿರಿ.
 
"ಏನು ದೇಹ ದೊಡ್ಡದೆ....ಹ್ಹಹ್ಹ್ಹ್ಹಹ್ಹ್ಹ್ಹಹ್ಹ್ಹಾಆ" ಅಂತ ಜೋರಾಗಿ ನಗಲು ತೊಡಗಿದ ದೊಡ್ಡಣ್ಣ. 
 
"ಏಕೆ ನಗುತ್ತೀರಿ" ಆಶ್ಚರ್ಯದಿಂದ ಕೇಳಿದರು ಸಪ್ತಗಿರಿ.
 
"ಏನು ಇಲ್ಲ   ದೊಡ್ಡ ದೇಹ ಅಂದರಲ್ಲ ಅದಕ್ಕೆ, ನಗು ಬಂತು, ನಿಮ್ಮ ಗಣೇಶಣ್ಣ ನಿಮ್ಮೆಲ್ಲರಿಗು ಸರಿಯಾಗಿಯೆ ಯಾಮಾರಿಸಿದ್ದಾರೆ, ಬಿಡಿ, ಅಯಪ್ಪಂದು ಒಳ್ಳೆ ಉಫ್ ಅಂದರೆ ಹಾರಿ ಹೋಗೋರು ಅಂತಾರಲ್ಲ ಅಂತ ಸಣಕಲ ಆಸಾಮಿ, ತಕ್ಕಡೀಲಿ ಹಾಕಿ ತೂಗಿದರು,  ಇಪ್ಪತೈದು , ಮೂವತ್ತು ಕೇಜಿ ಇರಬಹುದೇನೊ,  ನಾಲಕ್ಕುವರೆ ಅಡಿ ದಾಟದ ಎತ್ತರ, ಸಣ್ಣ ದೇಹ, ಆದರೆ ಅವರ ಪಕ್ಕ ಇತ್ತಲ್ಲಪ್ಪ ಅದೆಂತದೊ ಬಾರಿಮುತ್ತ ಎಂದೊ ಅದೇನೊ ಹೆಸರು ಆ ಯಮ್ಮ ಅದೇನು ದೇಹಾರಿ,  ಈ ಗಣೇಶ ಇದ್ದರಲ್ಲ ಅವರ ಹತ್ತರಷ್ಟು ಇದೆಯೊ ಏನೊ ಆಯಮ್ಮ, ಅವತ್ತು ಆಗಿದ್ದು ನೆನೆದರೆ ಈಗಲು ನಗು ಬರುತ್ತೆ...., ..., ಹ್ಹಹ್ಹಹಹ್ಹ ..." ಎಂದು ದೊಡ್ಡದಾಗಿ ನಗಲು ಪ್ರಾರಂಬಿಸಿದ ದೊಡ್ಡಣ್ಣ.
 
ಸಪ್ತಗಿರಿಗೆ ಆಶ್ಚರ್ಯ ಜಾಸ್ತಿ ಆಗುತ್ತಿತ್ತು . ಕಡೆಗೆ ನಮ್ಮೆಲ್ಲರ ಅನುಮಾನ ಸರಿ ಆಯಿತು, ಗಣೇಶ ಅಂದರೆ ಬೃಹತ್ ಆಕಾರದ ಅಸಾಮಿ ಅನ್ನೋದು ಸುಳ್ಳು , ಸಣಕಲ ಅನ್ನೋದೆ ನಿಜ ಅನ್ನಿಸುತ್ತೆ.
 
"ಸರಿ ದೊಡ್ಡಣ್ಣೋರೆ,  ಅವತ್ತು ಏನಾಯಿತು, ಅವರು ಸಂಪದದಲ್ಲಿ ಬರೆದಿದ್ದರು, ಅದೇನೊ ಕಾರು ಬಸ್ಸಿಗೆ ಗುದ್ದಿಬಿಟ್ಟಿತು, ಹಾಗಾಗಿ ಎಲ್ಲರಿಗು ಏಟು ಬಿತ್ತು, ಅವರ ಕಾಲಿಗು ನೋವಾಯಿತು ಎಂದೇನೊ ಓದಿದ ನೆನಪು ನಿಜಕ್ಕು ಏನಾಯಿತು" ಅಂತ ಕೇಳಿದರು ಸಪ್ತಗಿರಿ.
 
"ಅಯ್ಯೋ ಎಲ್ಲ ಬಂಡಲ್ , ಅವತ್ತು ಆಗಿದ್ದು ಬೇರೆ, ಕಾರಿನಲ್ಲಿ  ನಿಮ್ಮ ಗಣೇಶಣ್ಣನೆ ಡ್ರೈವರ್, ಪಕ್ಕದಲ್ಲಿ ಯಾವಾಗಲು ಆಯಮ್ಮ ಬಾರಿಮುತ್ತು ಅಂತ, ಅವರ ಕಾವಲು, ಹಿಂದೆ ಯಾರೊ ಇಬ್ಬರಿದ್ದರು, ಕಾರು   ಎಂದು ಮೂವತ್ತಕ್ಕಿಂತ ಹೆಚ್ಚು ವೇಗವಾಗಿ ಓಡ್ಸಲ್ಲ ಈ ಯಪ್ಪ, ಏಕೆ ಅಂದರೆ ಅವರ ಕಾರಿನ ಆಕ್ಸೀಲೇಟರ್ ಇವರಿಗೆ ಹೆಚ್ಚು ಅದುಮಲು ಆಗಲ್ಲ ಅವತ್ತು ಅಷ್ಟೆ, ತಿರುವಿನಿಲ್ಲಿ ಕಾರು ಬರುತ್ತಿದೆ, ಎದುರಿಗೆ ಬಸ್ ಬಂದಿದೆ,  ಪಕ್ಕದಲ್ಲಿದ್ದ ಆ ಯಮ್ಮ ಗಾಭರಿಯಾಗಿ ಅಯ್ಯೊ ಬಸ್ , ಬ್ರೇಕ್ ಬ್ರೆಕ್ ಹಾಕಿ ಅಂತ ಕಿರುಚಿದೆ,   ಗಣೇಶರು ನಿದಾನಕ್ಕೆ ಬ್ರೇಕ್ ಅದುಮುತ್ತಾರೆ ಇನ್ನು ನಿಲ್ಲುತ್ತೊ ಇಲ್ಲವೊ ಅನ್ನೊ ಗಾಭರಿಗೆ, ಪಕ್ಕದಲ್ಲಿದ್ದ ಈ ಯಮ್ಮ ತನ್ನ ಕಾಲನ್ನೆ ಸಂದೀಲಿ ತೂರಿಸಿ ಬ್ರೇಕ್ ಅದುಮಿದ್ದಾರೆ, ಪಾಪ ಬ್ರೇಕ್ ಮೇಲೆ ಗಣೇಶರ ಕಾಲು, ಅವರ ಕಾಲಿನ ಮೇಲೆ ಆಯಮ್ಮ ಬಾರಿಮುತ್ತುವಿನ ಕಾಲು, ಕಾರೇನೊ ನಿಂತಿತು, ಪಾಪ ಗಣೇಶರ ಕಾಲು ಅಪ್ಪಚ್ಚಿ,  ಇವರು ನೋವಿನಿಂದ ಅಯ್ಯೋ ನನ್ನ ಕಾಲು , ನನ್ನ ಕಾಲು ಅಂತ ಕಿರುಚುತ್ತ ಇದ್ದಾರೆ, ಬಸ್ ಡ್ರೈವರ್ ಗು ಪಾಪ ಗಾಭರಿನೆ, ಬಸ್ ಕಾರಿಗೆ ತಗಲೆ ಇಲ್ಲ ಇದ್ಯಾಕೆ ಹೀಗೆ ಕಿರುಚುತ್ತ ಇದ್ದಾರೆ ಅಂತ, ನಾನು ಈಚೆ ನಿಂತಿದ್ನಲ್ಲ,  ಏನಾಯ್ತು ಅಂತ ಹತ್ತಿರ ಹೋಗಿ ನೋಡಿದೆ, ಪಾಪ ನಿಮ್ಮ ಗಣೇಶಣ್ಣನ ಕಾಲು ಅಪ್ಪಚ್ಚಿ, ನಾನು ಕಾರಿನ ಒಳಗ್ಗೆ ಬಗ್ಗಿ ನೋಡಿ, ಏ ತೆಗಿಯಮ್ಮ ನಿನ್ನ ಕಾಲ, ಹೋಗಲಿ ಪಾಪ ಎಂದೆ, ಆಕೆ ನನ್ನತ್ತ ದುರು ದುರು ನೋಡುತ್ತ ಕಾಲು ತೆಗೆದಳು,  ಆಮೇಲೆ ಕಾರು ಪಕ್ಕಕ್ಕೆ ತಗೊಂಡರು, ಬಸ್ ಡ್ರೈವರ್ ನಗುತ್ತ ಹೊರಟು ಹೋದ, ನಾನೆ ಹೋಟೆಲ್ ಒಳಗೆ ಕರೆದು, ನೀರು ಕೊಟ್ಟು ಕಾಫಿಕೊಟ್ಟು ಸುದಾರಿಸಿಕೊಳ್ಳಿ ಅಂತ ಹೇಳಿ ಸ್ವಲ್ಪ ಕಾಲು ನೋವು ಕಡಿಮೆ ಆದ ಮೇಲೆ ಮುಂದೆ ಕಳಿಸಿದೆ" ಎಂದು ನಿಲ್ಲಿಸಿದ.
 
ಸಪ್ತ ಗಿರಿಗೆ ಆಶ್ಚರ್ಯ, ಮತ್ತೆ ಗಣೇಶಣ್ಣ ಹೇಗೆ ನಮಗೆಲ್ಲ ಟೋಪಿ ಹಾಕಿದ್ದಾರೆ,ಇರಲಿ ನಾನು ಅವರ ಮೂಲ ಶೋಧಿಸಿ, ಅವರ ಫೋಟೋ ಸಂಪದದಲ್ಲಿ ಹಾಕದೆ ಬಿಡಲ್ಲ ಅಂದುಕೊಂಡು
 
"ಅಷ್ಟೆಲ್ಲ  ಆಯ್ತಾ,  ದೊಡ್ಡಣ್ಣ, ನೋಡಿ ಆ ಗಣೇಶಣ್ಣ ನಮ್ಮನ್ನೆಲ್ಲ ಹೇಗೆ ಯಾಮಾರಿಸಿದ್ದಾರೆ, ಹೋಗಲಿ ಅವರೇನೊ ಅಡ್ರೆಸ್ ಇರೋ ಕಾರ್ಡ್ ಕೊಟ್ಟಿದಾರಲ್ಲ ಇದೆಯ, ಏನದಾರು ಗುರುತು ಹೇಳಿದ್ದಾರೆ ಮನೆಯದು " ಅಂತ ಕೇಳಿದರು
 
"ಸ್ವಲ್ಪ ತಡೀರಿ ಅಂದವರು ಗಲ್ಲ ಪೆಟ್ಟೆಗೆ ತೆಗೆದು ಕೆಳಗೆಲ್ಲ ಕೈ ಆಡಿಸಿ ಒಂದು ವಿಸಿಟಿಂಗ್ ಕಾರ್ಡ್ ತೆಗೆದ ದೊಡ್ಡಣ್ಣ ಆಕಾರ್ಡನ್ನು ಸಪ್ತಗಿರಿ ಕೈಗೆ ಕೊಟ್ಟಾಗ ಸಪ್ತಗಿರಿಗೆ ಕನ್ನಡದ ಕೋಟ್ಯಾದಿಪತಿ ಗೆದ್ದಷ್ಟು ಸಂತಸವಾಯಿತು, ಆ ಕಾರ್ಡನ್ನು ಅಪ್ಯಾಯಮಾನವಾಗಿ ನೋಡುತ್ತ ಇರುವಾಗ,
 
"ಅದೇನೊ ಈಗ ಬೆಂಗಳೂರಿನಲ್ಲಿ ಕಸವೆ ಸರಿಯಾಗಿ ತೆಗೆಯುತ್ತಿಲ್ಲವಂತಲ್ಲಪ್ಪ,  ಈಗ ಅವರ ಮನೆ ಗುರುತು ಹಿಡಿಯುವುದು ಸುಲುಭವಂತೆ ,ಅವರ ಮನೆ ಎದುರಿಗೆ ಸರಿಯಾಗಿ ದೊಡ್ಡ ಕಸದ ಗುಡ್ಡೆ ಇರುತ್ತಂತೆ, ಅದರಲ್ಲಿ ನಾಯಿ ಹಸು ಗಳು ಇರುತ್ತಂತೆ , ಅದೇ ಗುರುತು ಅಂತಹೇಳಿದರು"   
 
ಸಪ್ತಗಿರಿ ಮತ್ತೇನನ್ನು ಕೇಳಿಸಿಕೊಳ್ಳಲಿಲ್ಲ, ಇನ್ನೇನು ಗಣೇಶಣ್ಣನ ವಿಳಾಸ ಹಿಡಿದು ಆಯ್ತು, ಬೆಂಗಳೂರಿಗೆ ಹೋಗಿ ಬಸ್ ಇಳಿದ ತಕ್ಷಣ ಕ್ಯಾಮರ ಜೊತೆ ಅವರ ಮನೆಗೆ ಹೋಗಿಬಿಡೋದು,  ಒಂದು ಫೋಟೊ ಎತ್ತಾಕಿ ಸಂಪದದಲ್ಲಿ ಹಾಕಿ ಎಲ್ಲರಿಗು ಸರ್ಪ್ರೈಸ್ ಕೊಡೋದು ಅನ್ನೊ ಖುಷೀಲಿ,
 
"ಸರಿ ಬಿಡಿ ದೊಡ್ಡಣ್ಣನವರೆ   ಬಳಾ ಉಪಕಾರ ಆಯ್ತು, ನಾನಿನ್ನು ಬರಲೆ " ಎಂದು ಹೊರಟರು, ಹೋಟೆಲಿನ ಮಾಲಿಕ ದೊಡ್ಡಣ್ಣ ಮೀಸೆಯಲ್ಲಿಯೆ ನಗುತ್ತಿದ್ದರೆ,  ಮಾಣಿ ಮಾತ್ರ  ಮರುಕದಿಂದ ಸಪ್ತಗಿರಿಯನ್ನೆ ನೋಡುತ್ತಿದ್ದ.
 
--------------------------------------------
 
ಮರುದಿನ ನನಗೆ ಮತ್ತೆ ಕಾಲ್ ಬಂದು ಸಪ್ತಗಿರಿ ಯಿಂದ 
 
"ಏನು ಸಪ್ತಗಿರಿಯವರೆ ಎಲ್ಲ ವರ್ಕೌಟ್ ಆಯ್ತಾ " ಎಂದೆ , ಸಪ್ತಗಿರಿ ಮಾತ್ರ ಸಪ್ಪೆಯಾಗಿ 
"ಎಲ್ಲ ಸರಿಯಾಯ್ತು, ನೀವು ಹೇಳಿದಂತೆ ಅಲ್ಲಿಗೆ ಹೋಗಿದ್ದೆ, ಎಲ್ಲ ವಿಷಯ ಸಂಗ್ರಹಿಸಿದೆ, ಗುರುಗಳೆ, ಗಣೇಶರ ವಿಳಾಸವು ಸಿಕ್ಕಿತು" ಎಂದರು
ನನಗೆ ಆಶ್ಚರ್ಯ 
"ಏನು ಗಣೇಶರ ವಿಳಾಸವು ಸಿಕ್ಕಿತೆ,   ನಿಜವೆ , ಹೇಗೆ ಎಲ್ಲ ಹೇಳಿ " ಎಂದೆ, ಸಪ್ತಗಿರಿ ಪುತ್ತೂರಿಗೆ  ಹೋದಲ್ಲಿಂದ ಪ್ರಾರಂಬಿಸಿ ಎಲ್ಲವನ್ನು ವಿಶದವಾಗಿ ತಿಳಿಸಿದರು, 
ನಾನು "ಮತ್ತೇನು, ಎಲ್ಲ ಸರಿ ಆಯ್ತಲ್ಲ, ನೀವು ಎಲ್ಲಿದ್ದೀರಿ ಹೇಳಿ, ನಾನು ಜೊತೆಗೆ ಬರುವೆ ಇಬ್ಬರು ಹೋಗಿ ಗಣೇಶರನ್ನ ಬೇಟಿ ಮಾಡೋಣ ಆಮೇಲೆ ಸಂಪದದಲ್ಲಿ ಹಾಕೋಣ " ಎಂದೆ, ನನಗೆ ದುರಾಸೆ ಸಪ್ತಗಿರಿಯ ಕೆಲಸದ ಕ್ರೆಡಿಟ್ ನನಗು ಸ್ವಲ್ಪ ಸಿಕ್ಕುತ್ತಲ್ಲ ಎಂದು.
"ಇಲ್ಲ ಗುರುಗಳೆ ನಾನು ಆ ವಿಳಾಸ ಹಿಡಿದು ಹೋಗಿದ್ದೆ ಏನು ಪ್ರಯೋಜನವಾಗಲಿಲ್ಲ " ಎಂದರು.
 
"ಏನು ನೀವು ಆಗಲೆ ಹೋಗಿದ್ರ ಅಲ್ಲಿ ಅವರು ಸಿಕ್ಕಲಿಲ್ಲವ, ಅದು ಹೇಗೆ, ವಿಳಾಸ ಎಂತದು " ಎಂದೆ
 
"ವಿಳಾಸವೇನೊ ಸರಿ ಇದೆ,  ನಂಬರ್ 420 ,  7  ರಸ್ತೆ ಆಶೋಕನಗರ ಬೆಂಗಳೂರು, ಅಂತ ಇತ್ತು , ಅದನ್ನೆ ಹುಡುಕಲು ಹೋದೆ ಆಗಲಿಲ್ಲ" ಎಂದು ನಿಲ್ಲಿಸಿದರು ಸಪ್ತಗಿರಿ.
"ಅದೇಕೆ  ಆ ವಿಳಾಸ ಸರಿ ಇಲ್ಲವೆ , ಅವರ ಮನೆ ಮುಂದೆ ಕಸದ ತೊಟ್ಟಿ ಇದೆಯಲ್ಲ ಗುರುತಿಗೆ" ಎಂದೆ.
"ಅದೇ ಎಡವಟ್ಟು , ನಾನು ಹುಡುಕಲು ಸೋತು, ಕಡೆಗೆ ಒಬ್ಬ ಪೋಸ್ಟ್ ಮಾನ್ ಅನ್ನು ಹಿಡಿದು ವಿಳಾಸ ತೋರಿಸಿದೆ, ಅವನು ವಿಳಾಸ ನೋಡಿ, ನನ್ನತ್ತ ತಿರುಗಿ,  ಸ್ವಾಮಿ ಬೆಂಗಳೂರಿನಲ್ಲಿ ಅಶೋಕನಗರ ಅನ್ನುವ ಜಾಗ ಎಷ್ಟಿದೆ ಗೊತ್ತಾ, ಒಳ್ಳೆ ಎಡವಟ್ಟು ವಿಳಾಸ, ಕಡೆಗೆ ಪಿನ್ ಆದರು ಇರಬೇಕು, ಇಲ್ಲ ಸರಿಯಾದ ವಿಳಾಸ ಬೇಕು, ಅಶೋಕ ನಗರ ಎಂದು ಹೊರಟರೆ ಬೆಂಗಳೂರಿನಲ್ಲಿ ಹತ್ತಾದರು ಸಿಕ್ಕೀತು , ವಿಳಾಸದಲ್ಲಿ ೪೨೦ ನೋಡಿಯೆ ನೀವು ತಿಳಿಯಬೇಕು, ತಪ್ಪು ವಿಳಾಸ ಅಂತ" ಎಂದು ಹಂಗಿಸಿದ.
 
ನಾನು ತಡವರಿಸುತ್ತ " ಮತ್ತೆ ಮನೆಯ ಎದುರಿಗೆ ತೊಟ್ಟಿ.... " ಅನ್ನಲು ಹೋದವನು ನಿಲ್ಲಿಸಿದೆ, ಸಪ್ತಗಿರಿ ರೇಗುತ್ತ
 
"ಗುರುಗಳೆ,  ಬೆಂಗಳೂರಿನಲ್ಲಿ ಕಡಿಮೆ ಎಂದರು ಹತ್ತು ಸಾವಿರ ಮನೆಮುಂದೆ ಕಸದಗುಡ್ಡೆ ಇರಬಹುದೇನೊ " ಎಂದರು, 
 
ನನಗೇಕೊ ಅನುಮಾನವಾಗಿ ಕೇಳಿದೆ "ನೀವು ಪುತ್ತೂರಿಗೆ ಹೋಗೊ ವಿಷ್ಯ ಯಾರಿಗು ಹೇಳಿರಲಿಲ್ಲ ತಾನೆ?" 
 
ಅದಕ್ಕೆ ಸಪ್ತಗಿರಿ "ಇಲ್ಲ ಗುರುಗಳೆ, ಕೆಲವರಿಗೆ ಮಾತ್ರ ಹೇಳಿದ್ದೆ, ಜಯಂತ್, ರಾಮೊ, ಹೊ.ಮ. , ಚಿಕ್ಕು ಇವರಿಗೆ ಮಾತ್ರ ಹೇಳಿ ಯಾರಿಗು ಹೇಳಬೇಡಿ ಅಂತ ಹೇಳಿದ್ದೆ" 
 
ಸರಿ ಅಲ್ಲಿಗೆ ಸರಿಯಾಯ್ತು, ಇಷ್ಟು ಜನರಲಿ ಯಾರೊ ಗಣೇಶರಿಗೆ ಇನ್ ಫರ್ಮರ್ ಇರಬಹುದು, ಅಥವ ಇವರು ಇನ್ಯಾರಿಗೋ ಹೇಳಿರ್ತಾರೆ, ಅಲ್ಲಿಗೆ ಪ್ಲಾನ್ ಪ್ರಾರಂಭದಲ್ಲೆ ನೆಗೆದುಬಿದ್ದಿತ್ತು, ಅಂತ ಅರ್ಥ ಆಯ್ತು.
 
"ಸರಿ, ಮತ್ತೆ ಸೋತವು ಅನ್ನಿಸುತ್ತೆ, ತಿರುಗಿ ಪುತ್ತೂರಿಗೆ ಹೋಗ ಬೇಕಷ್ಟೆ " ಎಂದೆ ಬೇಸರದಿಂದ
 
"ಅದು ಆಯ್ತು ಗುರುಗಳೆ , ಮತ್ತೆ ಪುತ್ತೂರಿಗೆ   ಆ ಹೋಟೆಲ್ ಅನ್ನು ಹುಡುಕಿ ಹೋಗಿದ್ದೆ,  ಆದರೆ ಅಲ್ಲಿ ಹೋಟೆಲ್ ಯಜಮಾನ ಇರಲಿಲ್ಲ, ಮಾಣಿ ಮಾತ್ರ ಇದ್ದ ಗಲ್ಲಾ ಪೆಟ್ಟಿಗೆಯ ಮೇಲೆ, ನಿಮಗೆ ಗೊತ್ತಾ ಗುರುಗಳೆ, ಆ ಮಾಣಿ ಇದ್ದಾನಲ್ಲ ಅವನೆ ನಿಜವಾದ ಹೋಟೆಲ್ ಯಜಮಾನ" ಎಂದರು.
 
"ಮತ್ತೆ ಅವತ್ತು ಇದ್ದ ಅಂತ ಹೇಳಿದ್ದೀರಲ್ಲ, ಆ ದೊಡ್ಡಣ್ಣ ಅವರು ಇರಲಿಲ್ಲವೆ"  ಕನ್ ಪ್ಯೂಸ್ ಆಗುತ್ತ ಕೇಳಿದೆ
 
"ಇಲ್ಲ ಗುರುಗಳೆ ,  ಆ ದೊಡ್ಡಣ್ಣ ಅವತ್ತು ಮಾತ್ರ ಅಲ್ಲಿ ಬಂದಿದ್ದರಂತೆ, ಆ ಹೋಟೆಲ್ ಯಜಮಾನನನ್ನು ಒಪ್ಪಿಸಿ ಅಲ್ಲಿ ಕುಳಿತ್ತಿದ್ದರಂತೆ,  ಅದಕ್ಕೆ ಅವನಿಗೆ ದುಡ್ಡು ಕೊಟ್ಟಿದ್ದಾರೆ ಅನ್ನಿಸುತ್ತೆ,  ನಾನು ಅಲ್ಲಿಂದ ಹೊರಟ ತಕ್ಷಣ , ಹೋಟೆಲ್ ಹಿಂದೆ ಇದ್ದ ಕಾರು ತೆಗೆದು , ಅಲ್ಲಿಂದ ಹೊರಟು ಹೋದರಂತೆ, ಆದೆ ಮಾಣಿ ಹೇಳಿದ, ನನ್ನನ್ನು  ಯಾಮಾರಿಸಲು ಅಲ್ಲಿ ಬಂದಿದ್ದಂತೆ, ನನಗೆ ಅನ್ನಿಸುತ್ತೆ  ಆ ದೊಡ್ಡಣ್ಣ ಅನ್ನುವ ವ್ಯಕ್ತಿಯೆ ಗಣೇಶಣ್ಣ ಅಂತ" ನಿರಾಸೆಯಿಂದ ಹೇಳಿದರು ಸಪ್ತಗಿರಿ.
 
"ಮತ್ತೆ ನಾವು ಟೋಪಿ ಬಿದ್ದೆವು, ಅನ್ನಿಸುತ್ತ ಇದೆಯಲ್ಲ, ನೀವು ಆ ಮಾಣಿಯನ್ನೆ ದಬಾಯಿಸಬೇಕಿತ್ತು " ಎಂದೆ.
 
"ಸರಿಯಾಗಿ ಬೈದೆ, ಬಿಡಿ, ಆದರೆ ಅವನು ನನಗೆ ಅಂದ, ನಾನು ಹೇಳಲು ಪ್ರಯತ್ನಿಸಿದೆ, ನನ್ನ ಬಾಯಿ ಮುಚ್ಚಿಸಿದಿರಿ ಅಂತ , ಇನ್ನೆನು ಮಾಡೋದು ಸುಮ್ಮನಾದೆ" ಎಂದರು ಸಪ್ತಗಿರಿ
 
"ಛೇ! ಸ್ವಲ್ಪದರಲ್ಲಿ ಮಿಸ್ ಆಯ್ತಲ್ಲ," ಎಂದು ಚಿಂತಿಸುತ್ತ .
 
"ಸರಿ ನೀವು ಆ ಮಾಣಿಯನ್ನು ಕೇಳಿದಿರ, ಆ ಗಣೇಶರು ಯಾವುದೋ ಕಾರಿನಲ್ಲಿ ಹೋದರು ಎಂದಿರಲ್ಲ ಅದರ ನಂಬರ್ ಕೇಳಿದಿರ " ಎಂದೆ  ಬುದ್ದಿ ಉಪಯೋಗಿಸುತ್ತ.
 
"ಇಲ್ಲ ಗುರುಗಳೆ ಆ ಮಾಣಿ ದಡ್ಡ ಎಂತದು ಗೊತ್ತಿಲ್ಲ ಅಂದ, ಕೆಂಪು ಕಾರು ಅಂತ ಮಾತ್ರ ಗೊತ್ತಂತೆ, ಕಡೆಗೆ ಯಾವ ಕಾರು ಅನ್ನುವುದು ಗೊತ್ತಿಲ್ಲ ಅಂದ" 
 
 ಆಯ್ತು ಒಟ್ಟಿನಲ್ಲಿ , ಆಪರೇಶನ್ ಗಣೇಶ ಖೆಡ್ಡಾ .... ಗ್ರಾಂಡಾಗಿ ಫೈಲ್ ಆಗಿತ್ತು.
 
 
 
 
 
 
 
ಬ್ಲಾಗ್ ವರ್ಗಗಳು: 
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 3 (1 vote)
To prevent automated spam submissions leave this field empty.

ಪ್ರತಿಕ್ರಿಯೆಗಳು

"ಏ ಇಲ್ಲ ತಿನ್ನಕ್ಕೆ ಕುಡಿಯಾಕೆ ಏನು ಬೇಡ" ಎಂದ
"ಮತ್ತೆ ಇಲ್ಲೇನ್ ಮಾಡಾಕ್ ಬಂದ್ರಿ, ನೆಳ್ಳಿದೆ ಅಂತಾನಾ" ಎಂದ
:()))

"ಅದೇನೊ ಈಗ ಬೆಂಗಳೂರಿನಲ್ಲಿ ಕಸವೆ ಸರಿಯಾಗಿ ತೆಗೆಯುತ್ತಿಲ್ಲವಂತಲ್ಲಪ್ಪ, ಈಗ ಅವರ ಮನೆ ಗುರುತು ಹಿಡಿಯುವುದು ಸುಲುಭವಂತೆ ,ಅವರ ಮನೆ ಎದುರಿಗೆ ಸರಿಯಾಗಿ ದೊಡ್ಡ ಕಸದ ಗುಡ್ಡೆ ಇರುತ್ತಂತೆ, ಅದರಲ್ಲಿ ನಾಯಿ ಹಸು ಗಳು ಇರುತ್ತಂತೆ , ಅದೇ ಗುರುತು ಅಂತಹೇಳಿದರು"

;()))) ())))))

ಇಷ್ಟು ಜನರಲಿ ಯಾರೊ ಗಣೇಶರಿಗೆ ಇನ್ ಫರ್ಮರ್ ಇರಬಹುದು, ಅಥವ ಇವರು ಇನ್ಯಾರಿಗೋ ಹೇಳಿರ್ತಾರೆ

;()))

ಗುರುಗಳೇ-

ನಿಮ್ಮ 2 ನೆ ಭಾಗ ಓದಲು ನಾಡಿದ್ದೆ ಮುಹೂರ್ತ ಅಂದುಕೊಂಡಿದ್ದೆ ಆದರೆ ಈಗ ಆಫೀಸಿಂದ ಮನೆಗೆ ಹೋಗದೆ ಇಲ್ಲೇ ನೋಡುತ್ತಾ ಓದುತ್ತಿರುವೆ...ನಾಳೆ ರಜಾ ಅಲ್ವ ಅದ್ಕೆ..!

>>>>ಗಣೇಶ್ ಅಣ್ಣ ತಾವಾಗೆ ಮುಂದೆ ಬರ್ಬೇಕು.....
ನಾವ್ ಹಿಡ್ಯೋಕೆ ಆದೀತೆ?....
ಇದು ಉತ್ರ ಸಿಗದ ಪ್ರಶ್ನೆ...!!

ಓದಿ ಫ್ಫುಲ್ ಖುಷ..ಹುವ ..

ಸಂಜೆ ಮುದ ನೀಡಿತು...
ಖುಷಿಯಲ್ಲೇ ಮನೆಗೆ ಹೊರಟಿರುವೆ..

ಶುಭವಾಗಲಿ..

\|/

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಅಪರೇಷನ್ ಗಣೇಶ** ಸಪ್ತಗಿರಿಯವರೆ , ಸದ್ಯ ನೀವು ಮೆಚ್ಚಿದಿರಲ್ಲ, ನನಗೆ ಭಯವಾಗಿತ್ತು, ಕೇಳದೆ ನಿಮ್ಮ ಹೆಸರು ಬಳಸಿದೆ ಅಂತ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಅಂ.ಭಂ.ಸ್ವಾಮಿಗಳು ಇನ್ನು ಒಂದು ತಿಂಗಳು ಯಾರಿಗೂ ಕಾಣಿಸಿಕೊಳ್ಳುವುದಿಲ್ಲ - ಇಂದು ಪ್ರಳಯ ಆಗುತ್ತೆ ಅಂತ ಹೇಳಿದ್ದರಲ್ಲಾ, ಅದಕ್ಕೆ ಜನ ಅವರನ್ನು ಹುಡುಕುತ್ತಿದ್ದಾರೆ!!!

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನನ್ನ ತಪಸ್ಸು-ಮನವಿಗೆ-ಬೆದರಿಕೆಗೆ ಪ್ರಳಯ ಹೆದರಿ ಆಗದೆ ಹೋಯ್ತು...
ಎಂದೂ ಪ್ಲೇಟ್ ಬದಲಿಸಬಹದು...
ಪಾತ್ರವೂ ಬಹುಶ ಬದಲಾಗಬಹ್ದು...(ಅದಾಗಲೇ ಹೋಟೆಲ್ ಓನರ್ ಆಗಿ ಆಯ್ತು.!!)

ಹೆಸರೇ ಅಂ.ಭಂ....ಅಲ್ಲವೇ..!

ಶುಭವಾಗಲಿ...

\|/

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಜ್ಯೋತಿಷ್ಯ ಎಂದೂ ಸುಳ್ಳಾಗದು. ನಾವು ನೇರ .. ನಿರಂತರ. ನಾವು ಜಾತಕ ನೋಡಿ, ಪಂಚಾಂಗ ನೋಡಿ ,ಕುಂಡಲಿ ನೋಡಿ, ನಕ್ಷತ್ರ ನೋಡಿ, ಮುಖ...ನೋಡಿ ಭವಿಷ್ಯ ಹೇಳುತ್ತಿದ್ದೆವು. ಶನಿಕಾಟ, ಕುಜರಾಹು, ಸರ್ಪದೋಷ ಹಾಗೇ ಹೀಗೆ ಎಂದು ದೇವಸ್ಥಾನ ಸುತ್ತಿಸಿ, ಎರಡೂ ಕಡೆಯಿಂದ ಅಲ್ಪ ಸ್ವಲ್ಪ ಕಾಣಿಕೆ ಸ್ವೀಕರಿಸುತ್ತಾ ನೆಮ್ಮದಿಯಾಗಿದ್ದೆವು.
ಜ್ಯೂಸೀ ನ್ಯೂಸ್ ಚಾನಲ್‌ನವರು ಯಾವುದೋ"ಕ್ಯಾಲಂಡರ್" ತಂದು ಪ್ರಳಯದ ಬಗ್ಗೆ ಹೇಳಿ ಎಂದಾಗ ನಮಗೆ ಗೊತ್ತಿಲ್ಲ ಎಂದೆವು. ಅದನ್ನೆಲ್ಲಾ "ಕವಿ"ಗಳಿಂದ ಬರೆಸಿ ಬಂದಿದ್ದೇವೆ,ನೀವು ಓದಿದರೆ ಸಾಕೆಂದರು.:) ಹಾಗೇ ಓದಿದೆವು. ಈಗ ಪ್ರಳಯವನ್ನು ಒಂದೆರಡು ವರ್ಷಕ್ಕೆ ಮುಂದೆ ಹಾಕಿದ್ದೇವೆ. ಚಾನಲ್‌ನವರಿಗೆ ಯಾವುದೇ ವಿಷಯ ಸಿಗದಿದ್ದರೆ ಮಾಯಾ ಮಂತ್ರದ ಕ್ಯಾಲಂಡರ್ ತಂದು ಪುನಃ ಪ್ರಳಯ ಬರಿಸುವೆವು.
ಅಂದ ಹಾಗೇ ಗಣೇಶರ ಹೋಟಲ್ ಓನರ್ ಪಾತ್ರ ಹೇಗಿತ್ತು? :)
ಅಂ.ಭಂ.ಸ್ವಾಮಿ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

:)) ಸ್ಟಿಂಗ್ ಆಪರೇಷನ್??

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಅಪರೇಷನ್ ಗಣೇಶ** ಕವಿನಾಗರಾಜರೆ ಹಾಗೆಲ್ಲ ಹೆದರುವ ಕುಳ ಅಲ್ಲ ಅವರು ಹೇಗು ನಿಭಾಯಿಸುತ್ತಾರೆ, ಮುಖ ತೋರಿಸಲು ಮಾತ್ರ ನಾಚಿಕೆ ಅಷ್ಟೆ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

:) ಪಾರ್ಥರೆ, ಈ "ದೊಡ್ಡಣ್ಣ ಐಡಿಯಾ" ಮಾತ್ರ ಸೂಪರ್.:) ಹಾಗೇ ಬ್ರೇಕ್ ವಿಷಯ ಕೂಡಾ... :) ಹಳೇ ಒಂದು ವಿಷಯ- ನನ್ನ ಬೈಕ್‌ಗೆ ಎರಡು ಬ್ರೇಕ್ ಅಲ್ಲದೇ ಪಿಲಿಯನ್ ಬ್ರೇಕ್ ಸಹ ಇತ್ತು. ಏನಾದರೂ ಅಡ್ಡಬಂದರೆ ನಾನು ಬ್ರೇಕ್ ಹಾಕುವ ಮೊದಲೇ ಹಿಂದೆ ಕುಳಿತ ನನ್ನಾಕೆ ಕಾಲರ್ ಪಟ್ಟಿಯನ್ನೇ ಗಟ್ಟಿಯಾಗಿ ಹಿಡಿದು ಜಗ್ಗುತ್ತಿದ್ದಳು. ಕತ್ತಿನ ಪಟ್ಟಿ ಬಿಟ್ಟು ಎಲ್ಲರಂತೆ ಸೊಂಟ ಹಿಡಕೊಳ್ಳಲು ಹೇಳಿದೆ- ಹಿಡಿದ ಪಟ್ಟಿಗೆ ಸೊಂಟನೇ ಬ್ರೇಕ್ ಆಗುವುದೋ ಅಂತನಿಸಿತು. ನಂತರ ಕಾರು ತೆಗೆದುಕೊಂಡ ಮೇಲೆ ಸಮಾಧಾನವಾಯಿತು. ಈ ದಿನದವರೆಗೆ..........
>>>> ಪಕ್ಕದಲ್ಲಿದ್ದ ಈ ಯಮ್ಮ ತನ್ನ ಕಾಲನ್ನೆ ಸಂದೀಲಿ ತೂರಿಸಿ ಬ್ರೇಕ್ ಅದುಮಿದ್ದಾರೆ, ಪಾಪ ಬ್ರೇಕ್ ಮೇಲೆ ಗಣೇಶರ ಕಾಲು, ಅವರ ಕಾಲಿನ ಮೇಲೆ ಆಯಮ್ಮ ಬಾರಿಮುತ್ತುವಿನ ಕಾಲು, ಕಾರೇನೊ ನಿಂತಿತು, ಪಾಪ ಗಣೇಶರ ಕಾಲು ಅಪ್ಪಚ್ಚಿ...., ---ಪಾರ್ಥರೆ, ಈ ವಾಕ್ಯ ಓದಿ ನಕ್ಕಿದ್ದೇ ನಕ್ಕಿದ್ದು...ನನ್ನ "ಭಾಮು" ಏನ್ರೀ ನಗ್ತಿದ್ದೀರಿ.." ಎಂದು ವಿಚಾರಿಸಿದ್ದು ನನಗೆ ಕೇಳಲೇ ಇಲ್ಲ. ಹಿಂದೆ ಬಂದು ನಿಂತು ಎಲ್ಲಾ ಓದಿ..ಕಣ್ಣು "ರೊಂಯ್ಯ ರೊಂಯ್ಯ.."ತಿರುಗಿಸಿ, "ಯಾರ್ರೀ ಅದು ಪಾರ್ಥಸಾರಥಿ? ನಿಮ್ಮ ಮೀಟಿಂಗ್ ಯಾವತ್ತು?" ಅಂತ ವಿಚಾರಿಸಿದಳು............................................ ಅಂತ ತಿಳಿದಿರಾ? ಇಲ್ಲಾ....ಈ ಬ್ರೇಕ್ ಐಡಿಯಾ ಅವಳಿಗೆ ಗೊತ್ತಾಗಿ ಬಹಳ ಖುಷಿಯಲ್ಲಿದ್ದಾಳೆ. ಪಾರ್ಥರೆ...ಆರಾಮ ಕಾರು ಬಿಡುತ್ತಿದ್ದವನನ್ನು ನೀವು ಖೆಡ್ಡಾದಲ್ಲಿ ಕೆಡವಿದಿರಿ:(

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಅಪರೇಷನ್ ಗಣೇಶ** ಗಣೇಶರೆ ನಿಮ್ಮ ಪಿಲಿಯನ್ ಬ್ರೇಕ್ ವಿಷಯ ತಿಳಿದು ಖುಷಿ ಆಯ್ತು, ನಿಮ್ಮನ್ನು ಹಾಗೆ ಹಗ್ಗ ಹಾಕಿ ಜಗ್ಗುವರಿದ್ದಾರಲ್ಲ ಅಂತ :-) , ಈಗ ಕಾರಿನಲ್ಲಿ ಹುಷಾರು !

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಪಾರ್ಥರೆ, ಆಪರೇಷನ್ ಗಣೇಶ- ಖೆಡ್ಡಾ 1&2 ನ್ನು ಓದಿ ಮನಸಾರೆ ನಕ್ಕೆ. ಜೊತೆಗೆ ಗಣೇಶ್ ,ಸಪ್ತಗಿರಿ, ಕವಿನಾಗರಾಜ ರ ಪ್ರತಿಕ್ರಿಯೆಗಳು ಸಹ ಓದಲು ಮುದ ಕೊಟ್ಟವು. ವಾರಕ್ಕೊಮ್ಮೆ ಇಂಥಹ ನಗೆ ಟಾನಿಕ್ ನ್ನು ನಮಗೆ ನೀವುಗಳು ಕೊಡುತ್ತಿದ್ದರೆ ನಮ್ಮ ಮನಸ್ಸನ್ನು ಸದಾ ಉಲ್ಲಾಸಭರಿತವಾಗಿರಿಸಲು ಅನವುಮಾಡಿಕೊಡುತ್ತದೆ....ವಂದನೆಗಳು..........ರಮೇಶ್ ಕಾಮತ್.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಅಪರೇಷನ್ ಗಣೇಶ** ಸ್ವರಕಾಮತ್ ರವರೆ , ನಿಮ್ಮ ಮೆಚ್ಚುಗೆ ಸಂತಸ ತಂದಿತು, ಹಿಂದೆಲ್ಲ ಸಂಪದದಲ್ಲಿ ಅನುದಿನ ಬರುತ್ತಿದ್ದ ರೀತಿ ಲೇಖನಗಳಿವು, ಚಲೋ ಮಲ್ಲೇಶ್ವರ ಎಲ್ಲವು ಕೊಖೋ ಆಟದ ರೀತಿ ಬೇರೆಬೇರೆ ಯವರು ಮುಂದುವರೆಸುತ್ತಿದ್ದರು, ಈಗೆಲ್ಲ ಸ್ವಲ್ಪ ಕಡಿಮೆಯಾಯ್ತು, :(

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಪಾರ್ಥ ಸರ್,
ನಿಮ್ಮ ಆಪರೇಷನ್ ಖೆಡ್ಡಾ ಗಣೇಶರನ್ನು ಹಿಡಿಯಲು ವಿಫಲವಾದರೂ ಸಹ ಸಂಪದಿಗರನ್ನು ನಗೆಗಡಲಿನಲ್ಲಿ ಕೆಡವುದರಲ್ಲಿ ಸಫಲವಾಗಿದೆ. ಸುಮಾರು ಎಂಟು ದಿನಗಳಷ್ಟು ಕಾಲ ಊರಿನಲ್ಲಿ ಇರಲಿಲ್ಲ; ಈ ದಿನ ಸಂಪದ ನೋಡಿದಾಕ್ಷಣ ನಿಮ್ಮ ಲೇಖನ ಕಣ್ಣಿಗೆ ಬಿತ್ತು; ಓದಿ ಇಷ್ಟು ದಿನದ ಕೆಲಸದ ಒತ್ತಡದಿಂದ ಉಂಟಾದ ಶ್ರಮ ಕಡಿಮೆಯಾಯಿತು. ಒಳ್ಳೇ ನಗೆ ಬರಹಕ್ಕೆ ಧನ್ಯವಾದಗಳು.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.