ಬಯಲಾಟದ ಬೆರಗು

4.333335

 


ಹಿತವಾದ ಚಳಿ; ದಾರಿಯುದ್ದಕ್ಕೂ ಇಬ್ಬನಿ ಬಿದ್ದ ಗದ್ದೆ ಅಂಚಿನ ಹುಲ್ಲುಸಾಲು; ಅದರ ಮೇಲೆ ನಿಂತ ಹನಿಗಳಿಂದ ಕಾಲಿಗೆ ಥಂಡಿ ನೀರಿನ ಪ್ರಾಕ್ಷಾಳನ. ಒಬ್ಬರ ಹಿಂದೆ ಒಬ್ಬರು ನಿಧಾನವಾಗಿ ನಡೆಯುತ್ತಿದ್ದರೂ, ಬೇಗಬೇಗನೆ ಬಯಲಾಟದ "ಗರ" ಸೇರುವ ಧಾವಂತ. ಕತ್ತಲನ್ನು ಎದುರಿಸಲು ಒಣ ತೆಂಗಿನ ಗರಿಗಳಿಂದ ಮಾಡಿದ "ಸೂಡಿ" ಬೆಳಕು. ಕೆಲವರ ಕೈಯಲ್ಲಿ ಪುಟ್ಟ ಪುಟ್ಟ ಬ್ಯಾಟರಿಗಳು. ಗದ್ದೆಯ ಅಂಚನ್ನು ದಾಟಿ, ಪುಟ್ಟ ಏರನ್ನು ಏರಿ ಗುಡ್ಡೆ - ಹಾಡಿಯಲ್ಲಿ ಒಂದು ದಾರಿ. ಕಲ್ಲುಕಟ್ರ‍ ಅಣೆಯ ಹತ್ತಿರದ ಇಳಿಜಾರಿನಲ್ಲಿ ದಟ್ಟವಾದ ಕಾಡು; ಅಲ್ಲಿನ ಬೋಗಿ ಮರದ ತುದಿಯಲ್ಲಿ ಕುಳಿತಿದ್ದ ಗೂಬೆಗಳೆರಡು "ಹೂಂ" ಗುಡುವ ಸದ್ದು; ಎರಡೂ ಗುಡ್ಡಗಳ ಇಳಿಜಾರಿನ ಮಧ್ಯೆ ಸಾಗುವ ದಾರಿಯು ಸ್ವಲ್ಪ ಅಗಲವಾಗಿದ್ದುದರಿಂದ, ಒಬ್ಬರನ್ನೊಬ್ಬರು ಹಿಂದಿಕ್ಕಿ ಮುಂದೆ ಓಡುವ ಆತುರ. ಆ ಮಧ್ಯೆ ಅದ್ಯಾರಿಗೋ ಕಾಲು ಎಡವಿ, ಹೆಬ್ಬೆರಳಿನ ಉಗುರು ಕಿತ್ತು ಬಂದರೂ, ಆ ಕತ್ತಲೆಯಲ್ಲಿ ಅದ್ಯಾವುದೂ ಕಾಣುತ್ತಲೂ ಇರಲಿಲ್ಲ, ಗಮನಿಸಲೂ ಯಾರಿಗೂ ಪುರಸೊತ್ತಿಲ್ಲ.

" ಹಾಂ, ಚಂಡೆ ಕೇಂತಾ ಇತ್. ಬೇಗ ಬೇಗ ಹೊರಡುವ"

" ಸ್ತ್ರೀ ವೇಷ ಆಗಲೇ ಬಂತಾ ಕಾಣತ್, ಬರಾಕೆಬರಾಕೆ ನಡೀನಿ ಮಕ್ಕಳೆ!"

ಎನ್ನುತ್ತಾ ತಟ್ಟುವಟ್ಟಿನತ್ತ ನಮ್ಮ ಪಡೆ ಸಾಗುತ್ತಿತ್ತು. ರಾತ್ರಿಯ ಊಟ ಮುಗಿಸಿ, ತಡಬಡಾಯಿಸುತ್ತಾ ಆ ಕತ್ತಲಿನಲ್ಲಿ ನಾವೆಲ್ಲಾ ಓಡುತ್ತಿದ್ದುದು ಬಯಲಾಟವನ್ನು ನೋಡಲು.

"ಮಾರನಕಟ್ಟೆ ಮೇಳದವರಿಂದ, ತಟ್ಟುವಟ್ಟಿನಲ್ಲಿ ಇವತು ಆಟ ಅಂಬ್ರು" ಎಂದು ಬೆಳಗಿನಿಂದಲೂ, ಎಲ್ಲರ ಬಾಯಲ್ಲೂ ಆ ಸುದ್ದಿ ಸಿಕ್ಕಿ, ಸಂಜೆ ಹೊತ್ತಿಗೆ ಸುದ್ದಿಯು ಚರ್ವಿತಚರ್ವಣವಾಗಿತ್ತು. ಬಯಲಾಟವನ್ನು "ಆಟ" ಅಥವಾ "ಧರ್ಮದ ಆಟ" ಎಂದು ಕರೆಯುವ ರೂಢಿ. "ಆಟ ಕಾಂಬುಕೆ ನೀನ್ ಬತ್ಯಾ" ಎಂದು ಮಕ್ಕಳೆಲ್ಲಾ ಪರಸ್ಪರ ಪ್ರಶ್ನಿಸಿಕೊಂಡಿದ್ದು ಅದೆಷ್ಟೋ ಬಾರಿ.

ಆದರೆ ನಾನು ಬಯಲಾಟಕ್ಕೆ ಹೋಗಿ ಆಟ ನೋಡಬಹುದೆಂದು ಅನುಮತಿ ದೊರೆತದ್ದು ಸಂಜೆಯ ನಂತರವೇ.

"ರಾತ್ರಿ ಇಡೀ ಆಟ ಕಂಡು ಕಂಡು ಬಂದರೆ, ನಿಂಗೆ ನಾಳೆ ಶಾಲೆಗೆ ಹೋಪುಕೆ ಆತಿಲ್ಲೆ. ಅಲ್ಲ್ ಶಾಲೆಯಾಂಗೆ ಕಣ್ ಕೂರುದಾತ್. ಆಟಕ್ಕೆ ಹೋಪುದು ಬೇಡ"ಎಂದು ಅಮ್ಮಮ್ಮ ಬೆಳಿಗ್ಗೆಯೇ ಕಟ್ಟುನಿಟ್ಟಾಗಿ ಹೇಳಿಬಿಟ್ಟಿದ್ದರು. ಅವರ ಅನುಮತಿ ಇಲ್ಲದೇ, ಕದ್ದು ಆಟ ನೋಡಲು ನನಗೆ ಧೈರ್ಯ ಸಾಲದು. ಯಕ್ಷಗಾನ ಬಯಲಾಟದ ಕುರಿತು, ಅವರಿಗೆ ಅದೇನೋ ಒಂದು ರೀತಿಯ ಅಸಡ್ಡೆ, ತಿರಸ್ಕಾರ ಮತ್ತು ಸ್ವಲ್ಪ ಕೋಪವೂ ಇತ್ತೆಂದು ಕಾಣುತ್ತದೆ. ನಮ್ಮ ಹಿರಿಯರಲ್ಲಿ ಕೆಲವರು, ಯಕ್ಷಗಾನದ ಗೀಳನ್ನು ಅಂಟಿಸಿಕೊಂಡು, ಪದ ಕಲಿಯುತ್ತಾ, ಪದ ಹೇಳುತ್ತಾ, ಮದ್ದಲೆ ಬಾರಿಸುತ್ತಾ, ಮನೆಯ ಜವಾಬ್ದಾರಿಯನ್ನೇ ಮರೆತಿದ್ದರಂತೆ. ಅದರಿಂದಾಗಿ, ಕೃಷಿ ಕೆಲಸಗಳೆಲ್ಲಾ ಹಾಳುಬಿದ್ದು, ಅಂದು ನಮ್ಮ ಮನೆಯವರಿಗೆಲ್ಲಾ ಕಷ್ಟ,ನಷ್ಟಗಳುಂಟಾಗಿ, ಬಡತನದ ಬೇಗೆ ಅನುಭವಿಸಬೇಕಾಗಿತ್ತಂತೆ. ಇದೆಲ್ಲಾ ನಮ್ಮ ಅಮ್ಮಮ್ಮ ಆಗಾಗ ಹೇಳುತ್ತಿದ್ದ ವರಾತ. ಅದಕ್ಕೆಂದೇ, ಈ ಯಕ್ಷಗಾನ, ತಾಳಮದ್ದಲೆ, ಆಟ ಮೊದಲಾದುವುಗಳಿಂದ ನಮ್ಮನ್ನೆಲ್ಲಾ ದೂರವಿಡಬೇಕೆಂಬ ಇರಾದೆ ಅವರಿಗಿತ್ತು. ಅಪರೂಪಕ್ಕೊಮ್ಮೆ ಕಲ್ಲಟ್ಟೆಯ ಭಾಗವತರ ಮನೆಯಲ್ಲಿ ತಾಳಮದ್ದಲೆ ಇದೆ, ನಿಮ್ಮ ಹುಡುಗನನ್ನ ಸಂಜೆ ಕಳಿಸಿ ಎಂದು ಅವರ ಮನೆಯವರು ಬಂದು ಹೇಳಿದರೆ, "ಅವನಿಗೆ ತಾಳಮದ್ದಲೆ ಕಾಂಬುಕೆ ಇಷ್ಟ ಇಲ್ಲೆ" ಎಂದು ಅಮ್ಮಮ್ಮನೇ ಹೇಳಿ, ತಾಳಮದ್ದಲೆ ಎಂದರೇನು ಎಂಬ ಪರಿಚಯವೇ ಇಲ್ಲದಂತೆ ನನ್ನನ್ನು ಬೆಳೆಸಿದ್ದರು! "ಆಟವಾ, ಪೇಚಾಟವಾ?" ಎಂಬುದು, ಅವರು ಯಕ್ಷಗಾನವನ್ನು ವ್ಯಂಗವಾಗಿ ಟೀಕಿಸುತ್ತಾ, ನಮ್ಮನ್ನು ಗದರಿಸುವ ಶೈಲಿ.

ರಾತ್ರಿ ಊಟವಾಗುವ ಸಮಯದಲ್ಲಿ ಸುತ್ತಮುತ್ತಲಿನ ಕೆಲವು ಮನೆಗಳ ಮಕ್ಕಳು ಬಯಲಾಟ ನೋಡಲು ಹೋಗುವರೆಂದು ತಿಳಿಯಿತು. ಎಲ್ಲ ಕಡೆ ಆಟಕ್ಕೆ ಹೋಗುವ ಗೌಜು, ಸಂಭ್ರಮ ಕಂಡು, ಅಮ್ಮಮ್ಮ ನನಗೂ ಆಟಕ್ಕೆ ಹೋಗಲು ಅನುಮತಿ ನೀಡಿದರು. ಊಟವಾದ ಕೂಡಲೇ, ಉತ್ಸಾಹದಿಂದ ನಾನೂ ಬಯಲಾಟ ನೋಡಲು ಹೊರಟೆ. "ಒಂದು ಟವೆಲ್ ತಕಂಡು ಹೋಗು, ರಾತ್ರಿ ಹನಿ ಬಿದ್ದ ಕೂಡಲೆ ಚಳಿ ಸುರು ಆದ್ರೆ, ತಲೆಗೆ ಕಟ್ಕೊ" ಎಂದು ಬಾತ್ ಟವಲ್ಲನ್ನು ಚಳಿ ತಡೆಯಲೆಂದು ಕೊಟ್ಟು ಕಳಿಸಿದರು. ಅದುವರೆಗೆ ನಾನು ಯಕ್ಷಗಾನ ನೋಡಿದ್ದೇ ಇಲ್ಲ - ಟೆಂಟ್ ಆಟವಾಗಲಿ, ಬಯಲಾಟವಾಗಲಿ ಹೇಗಿತ್ತೆಂದು ನನಗೆ ಗೊತ್ತಿರಲೇ ಇಲ್ಲ. ಇದೊಂದು ಬಾರಿ, ನೋಡಿ ಅನುಭವ ಪಡೆಯಲಿ ಎಂದು ಅಮ್ಮಮ್ಮ ನನ್ನನ್ನು ಆಟಕ್ಕೆ ಕಳಿಸಿದ್ದರು.

"ಎಂತ ಪ್ರಸಂಗ?"

"ಉದ್ದಿನಮಕ್ಕಿ ಕಲ್ಯಾಣ!"

ತಟ್ಟುವಟ್ಟಿನಿಂದಾಚೆ, ಮಕ್ಕಿ ಗದ್ದೆಗಳ ಸಾಲಿನಲ್ಲಿ, ಉದ್ದಿನಮಕ್ಕಿ ಎಂಬ ಗದ್ದೆಯಿದ್ದು, ಅದರಿಂದಾಗಿ, ಉದ್ದಿನಮಕ್ಕಿ ಕಲ್ಯಾಣ ಎಂಬ ಕಥೆಯನ್ನು ಆಡುತ್ತಿದ್ದಾರೆಂದು ನಾನು ಅರ್ಥೈಸಿಕೊಂಡಿದ್ದೆ. ನೆನಪಿಸಿಕೊಂಡರೆ, ಈಗಲೂ ನಗು ಬರುತ್ತದೆ. ಆಟದ "ಗರ"ದಲ್ಲಿ ಹೋಗಿ ನೋಡಿದರೆ, ಅದು "ಉದ್ದಿನಮಕ್ಕಿ ಕಲ್ಯಾಣ"ವಲ್ಲ, "ವಿದ್ಯುನ್ಮತಿ ಕಲ್ಯಾಣ"ಎಂಬ ಕಥಾಪ್ರಸಂಗ ಎಂದು ಗೊತ್ತಾಯಿತು.

ಬಯಲಿನ ಮಧ್ಯ, ಎತ್ತರವಾದ ಜಾಗದಲ್ಲಿದ್ದ ವಿಶಾಲವಾದ ಗದ್ದೆಯಲ್ಲಿ ರಂಗಸ್ಥಳವನ್ನು ಹಾಕಿದ್ದರು. ಗದ್ದೆಯ ಕೊಯ್ಲು ಮುಗಿದು, ಗದ್ದೆಗಳೆಲ್ಲಾ ಆಟದ ಮೈದಾನಗಳ ರೀತಿ ಇದ್ದುದ್ದರಿಂದ, ತೊಂದರೆಯಿರಲಿಲ್ಲ. ಗದ್ದೆಯ ಮಧ್ಯೆ, ಮಣ್ಣನ್ನು ಹಾಕಿ, ಜಾಗವನ್ನು ಎತ್ತರಿಸಿ, ರಂಗಸ್ಥಳದ ವೇದಿಕೆ ಸಿದ್ಧಪಡಿಸಿದ್ದರು. ರಂಗಸ್ಥಳದ ಹಿಂದೆ ಚೌಕಿ. ವಿದ್ಯುತ್ ದೀಪಗಳು ಇನ್ನೂ ಆ ಬಯಲನ್ನು ಪ್ರವೇಶಿಸಿರಲಿಲ್ಲ. ನಾಲ್ಕಾರು ಪೆಟ್ರೋಮ್ಯಾಕ್ಸ್ ಲೈಟುಗಳನ್ನು ಒಂದು ಗಳಕ್ಕೆ ಸಿಕ್ಕಿಸಿದ್ದರು. ನಾವು ಹೋಗುವಾಗಲೇ, ದಾರಿಯುದ್ದಕ್ಕೂ ಚಂಡೆ ಬಡಿತದ ಗಂಡುದನಿ ಅನುರಣನಿಸುತ್ತಿತ್ತು. ಬಹುದೂರದ ತನಕ ಆ ಚಳಿಗಾಲದ ರಾತ್ರಿಯಲ್ಲಿ ಕೇಳಿಬರುವ ಚಂಡೆ ಬಡಿತದ ಲಯಬದ್ದವಾದ ಶಬ್ದವು, ಎಂಥವರ ಮನಸ್ಸಿನಲ್ಲೂ ತಾಳ ಹಾಕಿಸುತ್ತಿತ್ತು.

ಆಟ ನಡೆಯುವ ಗದ್ದೆಯತ್ತ ಸಾಲಾಗಿ, ಗದ್ದೆ ಅಂಚಿನಲ್ಲೇ ಹೊರಟಿತ್ತು ಹಳ್ಳಿಜನರ ದಂಡು. ಹಲವು ಹೆಂಗೆಳೆಯರ ಕೈಯಲ್ಲಿ ಚಾಪೆಗಳು, ಹೊದಿಕೆಗಳು! ಬಯಲಾಟ ನೋಡಲು ಚಾಪೆ ಯಾಕೆ? ಯಕ್ಷಗಾನ ಆರಂಭವಾಗಿ, ನಡುರಾತ್ರಿಯಾದಂತೆಲ್ಲ,ಮಕ್ಕಳು ರಾತ್ರಿ ನಿದ್ರಿಸಲು ತೊಡಗಿದರೆ, ಚಾಪೆ ಮೇಲೆ ಮಲಗಿಸಿ ದೊಡ್ಡವರು ಹಾಯಾಗಿ ಆಟ ನೋಡುತ್ತಾರೆ. ಬೆಳಗಿನ ಜಾವ, ನಿದ್ದೆ ಬಂದಂತಾದಾಗ, ದೊಡ್ಡವರಲ್ಲೂ ಕೆಲವರು ಅದೇ ಚಾಪೆ ಮೇಲೆ ಉರುಟಿಕೊಂಡು, ಸ್ವಲ್ಪ ನಿದ್ರಿಸಿ, ಬಣ್ಣದ ವೇಷ ಆರ್ಭಟಿಸುತ್ತಾ ಬಂದಾಗ, ದಡಬಡಾಯಿಸಿ, ಎದ್ದು ಕೂತು, ಬಣ್ಣದ ವೇಷದ ನಾಟಕೀಯ ಮಾತುಗಳನ್ನು ಬೆರಗಿನಿಂದ ನೋಡುತ್ತಾ, ಮೈಮರೆಯುತ್ತಾರೆ. ಹೇಳಿ ಕೇಳಿ ಬಯಲಾಟ, ಯಾರೂ ಹಣ ಕೊಡಬೇಕಾಗಿಲ್ಲ, ಮನೆಯಲ್ಲಿ ಮಲಗಿ ನಿದ್ರಿಸುವ ಬದಲು, ಗದ್ದೆಬಯಲಿನಲ್ಲಿರುವ ಆಟದ "ಗರ"ದಲ್ಲಿ ನಿದ್ರಿಸಿದರಾಯಿತು ಎಂಬ ಲೆಕ್ಕಾಚಾರ ಹಲವರದು. ರಂಗಸ್ಥಳದ ಎದುರಿನ ಗದ್ದೆಯೇ ಎಲ್ಲರೂ ಕುಳಿತು ನೋಡುವ ಸ್ಥಳ - ಎಷ್ಟು ಜನ ಬೇಕಾದರೂ ಆ ಗದ್ದೆಬಯಲಿನಲ್ಲಿ ಕುಳಿತೋ, ಮಲಗಿಯೋ ಆಟ ನೋಡಬಹುದಿತ್ತು. ಅವಕಾಶ ಇದ್ದವರು, ತಮಗೆ ಬೇಕಾದ ಕುರ್ಚಿ ಅಥವಾ ಪುಟ್ಟಮಂಚಗಳನ್ನು ತಾವೇ ತಂದು, ಅಲ್ಲಲ್ಲಿ ಹಾಕಿಕೊಂಡು, ಕುಳಿತುಕೊಳ್ಳುತ್ತಿದ್ದರು. (ಇತ್ತೀಚೆಗೆ, ಪ್ಲಾಸ್ಟಿಕ್ ಕುರ್ಚಿಗಳು ಜನಪ್ರಿಯಾಗಿರುವುದರಿಂದ, ಎಲ್ಲರಿಗೂ ಕುರ್ಚಿಯ ವ್ಯವಸ್ಥೆ ಮಾಡುವ ಪರಿಪಾಠ ಇದೆ. ಹಿಂದೆಲ್ಲಾ ನೆಲವೇ ಗತಿ)

ಭಾಗವತರು ಬಂದು ಪದ್ಯಗಳನ್ನು ಹೇಳಲು ಪ್ರಾರಂಭಿಸಿದರು. ಮೊದಲಿಗೆ ಯುವ ಭಾಗವತರು, ಇನ್ನೂ ಹೊಸದಾಗಿ ಪದ ಹೇಳಲು ಕಲಿತವರು, ಸಂಗೀತಗಾರಿಕೆ ಮತ್ತು ಪದಗಳನ್ನು ಹೇಳಿದರು; ನಂತರ ದೊಡ್ಡ ಭಾಗವತರ ಕಂಚಿನಕಂಠದ ಪದಗಳು; ಚಂಡೆ - ಮದ್ದಲೆಗಳ ಹಿಮ್ಮೇಳ. ಇಬ್ಬರು ಬಾಲಗೋಪಾಲರ ವೇಷದವರು ಬಂದು ಸ್ವಲ್ಪ ಹೊತ್ತು ಕುಣಿದರು; ನಂತರ ಸ್ತ್ರೀ ವೇಷ ಬಂದು, ಹಾವ ಭಾವ ಪ್ರದರ್ಶನ. ಗಣಪತಿ ಪೂಜೆ ಆಗಿ, ಕಥಾಭಾಗ ಆರಂಭ. ನಡುರಾತ್ರಿ ಕಳೆದ ನಂತರ, ಬೆಳಗಿನಜಾವದಲ್ಲಿ ಬರುವ ಬಣ್ಣದ ವೇಷದ ಗರ್ಜನೆಗೆ ಮಕ್ಕಳಿಗೆಲ್ಲಾ ಬೆರಗು; ವಿದ್ಯುನ್ಮತಿ ಕಲ್ಯಾಣದ ಕಥೆ ಯಾವ ರೀತಿ ಸಾಗಿತೋ, ಈಗ ನೆನಪಿಲ್ಲ. ಆದರೆ, ಬಣ್ಣದ ವೇಷವು ದೂರದಿಂದ ಕೇಕೆ ಹಾಕಿಕೊಂಡು, ಜನಗಳ ಮಧ್ಯದಿಂದ ಓಡುತ್ತಾ ಬಂದು ರಂಗಸ್ಥಳ ಏರಿದ್ದು , ರಾಕ್ಷಸ ಕುಣಿತವನ್ನು ಪ್ರದರ್ಶಿಸಿದ್ದು ಇಂದಿಗೂ ನೆನಪಿದೆ.

ಬಯಲಾಟ ನಡೆಯುತ್ತಿದ್ದ ಗದ್ದೆಯ ಅಂಚಿನಲ್ಲಿ, ಸಾಲಾಗಿ ಸಂಚಾರಿ ಅಂಗಡಿ ಮತ್ತು ಹೋಟೆಲ್ ಗಳು ಸ್ಥಾಪಿತವಾಗಿದ್ದವು. ತಿಂಡಿ ತಿನಿಸುಗಳನ್ನು ಮಾರುವ ಅಂಗಡಿಗಳು, ಚಹಾ ಕಾಫಿ ನೀಡುವ ಚಾಹೋಟೆಲ್ ಗಳು ಸಾಕಷ್ಟು ಇದ್ದವು. ಕೆಲವು ಅಂಗಡಿಗಳವರು ಗ್ಯಾಸ್ ಲೈಟ್ ಉರಿಸಿದ್ದರೆ, ಪುಟ್ಟ ಪುಟ್ಟ ಅಂಗಡಿ-ಹೋಟೆಲ್ ಗಳಲ್ಲಿ ಲಾಟೀನು, ದೀಪಗಳನ್ನು ಬೆಳಗಿಸಿಕೊಂಡಿದ್ದರು. ಬಯಲಾಟ ನೋಡುತ್ತಿದ್ದವರೆಲ್ಲಾ, ಆಗಾಗ ಎದ್ದು ಹೋಗಿ, ಚಾ, ಕಾಪಿ, ಬೋಂಡ, ಮಡ್ಕಕ್ಕಿಉಪ್ಕರಿ, ಚಕ್ಕುಲಿ ಮೊದಲಾದವುಗಳನ್ನು ಸೇವಿಸಿ ಬರುತ್ತಿದ್ದರು. ಗುರುತಿದ್ದವರೆಲ್ಲಾ ಸೇರಿ, ಹರಟೆ ಹೊಡೆಯಲು, ಕುಶಾಲು ಮಾಡಲು ಅದೊಂದು ಅವಕಾಶ.

ಇವರೆಲ್ಲರ ಮಧ್ಯೆ, ನೆಲಗಡಲೆಯನ್ನು ಪುಟ್ಟ ಪುಟ್ಟ ಕಾಗದದ ಲಕೋಟೆಯಲ್ಲಿಟ್ಟುಕೊಂಡು ಮಾರುತ್ತಿದ್ದ ಒಬ್ಬ ಹುಡುಗ ಅತ್ತಿತ್ತ ಓಡಾಡುತ್ತಾ, ವ್ಯಾಪಾರ ಮಾಡುತ್ತಿದ್ದ. ಅವನನ್ನು ಎಲ್ಲೋ ಕಂಡಂತೆ ಇದೆಯಲ್ಲಾ ಎಂದು ಗಮನಿಸಿ ನೋಡಿದರೆ, ಅವನು ಬೆರಾರೂ ಅಲ್ಲ, ನನ್ನ ಕ್ಲಾಸ್ ಮೇಟ್ ಶೆಣೈ! ತರಗತಿಯಲ್ಲಿ ಒಳ್ಳೆಯ ಅಂಕ ಗಳಿಸಿ ಓದುತ್ತಿದ್ದ, ಅವನು ಕಡಲೆ ಕಾಯಿ ಮಾರುತ್ತಿದ್ದುದನ್ನು ಕಂಡು, ನನಗಾದ ಅಚ್ಚರಿ ಅಷ್ಟಿಷ್ಟಲ್ಲ! ಅವರ ಮನೆಯಲ್ಲೂ ಅಂಗಡಿ ಇದ್ದುದ್ದರಿಂದ, ವ್ಯಾಪಾರವು ಅವನಲ್ಲಿ ರಕ್ತಗತವಾಗಿತ್ತೆಂದೇ ಹೇಳಬಹುದು.

ಬಯಲಾಟವು ಬೆಳಗಿನ ತನಕ ನಡೆಯಿತು. ಬೆಳಗಿನ ಜಾವದ ಸಮಯದಲ್ಲಿ ಆ ಗದ್ದೆಯಲ್ಲಿ ಕುಳಿತು ನೋಡುವಷ್ಟೇ ಜನರು, ಅಲ್ಲಲ್ಲಿ ಚಾಪೆ-ಹೊದಿಕೆ ಹಾಸಿ ಮಲಗಿಯೂ ಇದ್ದರು! ಅತ್ತ ಸೂರ್ಯ ಉದಯಿಸುವಾಗ, ಇತ್ತ ಪ್ರಸಂಗದಲ್ಲಿ ಮಂಗಳಪದವನ್ನು ಭಾಗವತರು ಹಾಡಿದರು, ಆಟ ಮುಗಿಯಿತು. "ಅಡ್ಡಿಲ್ಲ, ಒಳ್ಳೆದಾಯಿತ್ತು, ಬಣ್ಣದ ವೇಷದ ಸ್ವರ ಹ್ಯಾಂಗಿದ್ದಿತ್" ಎಂದು ಚರ್ಚಿಸುತ್ತಾ, ನಾವೆಲ್ಲಾ ಪುನ: ಮನೆಯತ್ತ ನಡೆಯುವಾಗ, ಚಳಿಯ ಕೊರೆತ. ಮನೆಗೆ ಬಂದು, ಸ್ನಾನ ಮಾಡಿ, ತಿಂಡಿ ತಿಂದು, ಶಾಲೆಗೆ ಹೋಗಿ, ಪಾಠ ಕೇಳುತ್ತಾ ಕುಳಿತರೆ, ಕಿವಿಯ ತುಂಬಾ ಚಂಡೆಯ ಸದ್ದು ಮಾತ್ರ ಕೇಳುತ್ತಿತ್ತು!

(ಸೂಡಿ= ದೊಂದಿ. ಮಕ್ಕಿ = ಎತ್ತರದ ಗದ್ದೆ, ಗರ= ಬಯಲಾಟ ನಡೆಯುವ ಸ್ಥಳ)

ಚಿತ್ರಕೃಪೆ: ಕಟೀಲದೇವಿ.ಕಾಂ, ಇಂಡಿಯಾಟ್ರೆಶರ್ಸ್-ಬ್ಲಾಗ್ ಸ್ಪಾಟ್.ಕಾಂ.

ಬ್ಲಾಗ್ ವರ್ಗಗಳು: 
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4.3 (3 votes)
To prevent automated spam submissions leave this field empty.

ಪ್ರತಿಕ್ರಿಯೆಗಳು

ಮಣಿಪಾಲಲೆ ಒಮ್ಮೆ, ದೊಡ್ಡಮ್ಮನ ಮನೆ ಹಕ್ಕಯ್ ಹಿಂಗೆ ಆಟ ಕಂಡಿದ್ದ ನೆನಪಾತ್.. :)
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಬರಹಗಳನ್ನು ನೇರ MS Word ನಿಂದ copy-paste ಮಾಡಿದಲ್ಲಿ ಹೀಗೆ ಪುಟಗಳ formatting ಕೆಡುತ್ತದೆ. ಸಂಪದದಲ್ಲಿನ rich text editor ಬಳಸಿ MS Word ನಲ್ಲಿರುವ ಲೇಖನಗಳನ್ನು ಇಲ್ಲಿ ಸೂಚಿಸಿದಂತೆ http://sampada.net/a... ಪ್ರಕಟಿಸಿದರೆ, ಪುಟಗಳ formatting ಕೆಡುವುದಿಲ್ಲ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಿಮ್ಮ ಸೂಚನೆಯಂತೆ, ರಿಚ್ ಟೆಕ್ಸ್ ಬಳಸಿ ಪುನ: ಪುಟವನ್ನು ಅಪ್ ಲೋಡ್ ಮಾಡಿದೆ; ಈಗ ಸರಿಯಾಗಿ ಬಂದಿದೆ. ಈ ವಿಧಾನ ನನ್ನ ಗಮನಕ್ಕೆ ಇದುವರೆಗೆ ಬಂದಿರಲಿಲ್ಲ; ನೀವು ಸೂಚಿಸಿದ್ದಕ್ಕಾಗಿ, ಧನ್ಯವಾದಗಳು.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಾನೂ ಆಟ ಕಾಂಬುಕ್ ಹೋದಂಗಾಯ್ತ್! :)
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

:) :) ಶಾಲೆಯಂಗೆ ಪಾಟ ಕೇಂತಾ ಕೂಕಂಡಾಗ, ಚಂಡೆ ಶಬ್ದ ಕಿಮಿಯಾಂಗೆ ರಿಂಗಣ ಗುಟ್ಟುದು ನಿಮ್ಗೂ ಆಯಿತ್ತಾ?
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಲೇಖನ ಓದಿ ಖುಷಿಯಾಯ್ತು. ಚಿಕ್ಕಂದಿನಲ್ಲಿ ನಮ್ಮ ಊರಿನ ಮನೆಯಲ್ಲಿ ಆಡಿಸಿದ ಹರಕೆಯ ಬಯಲಾಟದ ಸವಿನೆನಪುಗಳು ಸ್ಮøತಿಪಟಲದಲ್ಲಿ ಹಾದುಹೋದವು. ಲೇಖಕರಿಗೆ ಧನ್ಯವಾದಗಳು.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಿಮ್ಮ ಪ್ರತಿಕ್ರಿಯೆಗಾಗಿ ಧನ್ಯವಾದಗಳು. ಈಗ ಕರಾವಳಿಯಲ್ಲಿ ಹರಕೆ ಆಟ ಮತ್ತು ವರಾಡ ಆಟ ಮಾತ್ರ ಜಾಸ್ತಿ ಇವೆಯಂತೆ; ಟೆಂಟ್ ಆಟ ಹೆಚ್ಚು ಕಡಿಮೆ ನಿಂತೇ ಹೋಗಿದೆಯಂತೆ! ಆದ್ದರಿಂದ, ಈಗ ಬಯಲಾಟಕ್ಕೆ ಹೆಚ್ಚಿನ ಪ್ರಾಶಸ್ತ್ಯ ಎನ್ನಬಹುದು.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಿಮ್ಮ ಮಾತು ಖಂಡಿತಾ ಸತ್ಯ. ಈಗಲೂ ಹರಕೆಯ ಆಟಕ್ಕಾಗಿ ಧರ್ಮಸ್ಥಳ, ಕಟೀಲು ಮೇಳದ ತಂಡಗಳನ್ನು ಸಂಪರ್ಕಿಸಿದರೆ ವರ್ಷಗಟ್ಟಲೆ ಬುಕಿಂಗ್ ಮುಗಿದುಹೋಗಿರುತ್ತದಂತೆ. ಕರಾವಳಿಯ ಜನರ ಈ ಯಕ್ಷಗಾನದ ಪ್ರೀತಿ ಎಂದಿಗೂ ಬತ್ತದಿರಲಿ.. ಯುವಜನರೂ ಇತ್ತ ಒಮ್ಮೆ ಕಣ್ಣು ಹಾಯಿಸಿದರೆ, ಥಿಯೇಟರ್ ನಲ್ಲಿ ಸಿನಿಮಾಗಳಲ್ಲಿ ಕಾಣದ ಅದ್ಭುತ ಪ್ರಪಂಚವೊಂದರ‌ ಅನಾವರಣವಾಗುವುದು...
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಹರಕೆ ಬಯಲಾಟಕ್ಕೆ ಈಗ ಭಾರೀ ಡಿಮಾಂಡ್. ಉಡುಪಿ ಹತ್ತಿರದ ಮಂದರ್ತಿ ದೇವಸ್ಥಾನದ ಆಶ್ರಯದಲ್ಲಿ ಐದು ಯಕ್ಷಗಾನ ಮೇಳಗಳಿವೆಯಂತೆ ‍ ; ಅವುಗಳಿಂದ ಯಾರಾದರೂ ಹರಕೆ ಆಟಆಡಿಸಬೇಕಾದರೆ, ಹತ್ತಾರು ವರ್ಷ ಮೊದಲೇ ಬುಕ್ ಮಾಡಿಸಬೇಕಂತೆ. ಮತ್ತೆ, ನೀವೆಂದಂತೆ, ಕರಾವಳಿಯ ಯಕ್ಷಗಾನದ ಅದ್ಭುತ ಪ್ರದರ್ಶನ ಎಲ್ಲರ ಗಮನಕ್ಕೆ ಬರಬೇಕಾದ ಅವಶ್ಯಕತೆ ಇದೆ. ಆದರೆ, ರಾತ್ರಿ ಹತ್ತರಿಂದ ಬೆಳಗ್ಗೆ ಆರರ ತನಕ ,ಇಡೀ ರಾತ್ರಿ ಯಕ್ಷಗಾನ ನೋಡಲು 21ನೆಯ ಶತಮಾನದಲ್ಲಿ ಹೆಚ್ಚಿನವರಿಗೆ ಸಾಧ್ಯವಾಗದೇನೊ ‍, ಯುವಜನರೇ ಆಗಲಿ, ಬೇರೆಯವರೇ ಆಗಲಿ. ಅದಕ್ಕೆಂದೇ ಮೂರು ಗಂಟೆಗಳ ಪ್ರದರ್ಶನ ಈಗ ಜನಪ್ರಿಯವಾಗುತ್ತಿದೆ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಹೆಬ್ಬಾರ್ರೆ ಲಾಯ್ಕ್ ಇತ್ತ್, ಸಣ್ಣಪ್ಪಗೆ ಗಂಗೊಳ್ಳಿಲ್ ಕಂಡ ಆಟದ ನೆಮ್ಪಾಯ್ತ್. ಮತ್ತೆ ಕುಂದ ಕನ್ನಡ ಓದಿ ಕುಶಿ ಆಯ್ತ್.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

:) :)
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಶಶಿಧರ್ ಅವ್ರೆ ನಿಮ್ಮ ಬಯಲಾಟಕ್ಕೋ ನಮ್ಮ ಉತ್ತರ ಕರುಣಾಟಕದ ಬಯಲಾಟಕ್ಕೂ ವ್ಯತ್ಯಾಸ ಇದೆ ಅನ್ಸುತ್ತೆ.. ನಮ್ ಬಯಲಾಟ ನಮ್ಮ ಊರಲ್ಲಿ ನಮ್ಮ ಊರಿನ ಅಗಸೀಯ(ಅದೇ ಹಳ್ಳಿಗಳಲ್ಲಿ ಪ್ರವೇಶ ಧ್ವಾರ ಅಂತ) ಪಕ್ಕದ ಖಾಲಿ ಜಾಗದಲ್ಲಿ ಜಗಮಗಿಸುವ ರಂಗು ರಂಗಿನ ಬೆಳಕಲ್ಲಿ ಶುರು ಆಗುತ್ತಿತ್ತು.. ನಾವಂತೂ ೫ ಘಂಟೆಗೆ ಸಂಜೆ ಅಲ್ಲಿ ನಮ್ ಮಂಚ(ಎಲ್ರೂ ತಮ್ಮ ಮನೆಯ ಮಂಚ ಅಲಿ ಹಾಕಿ ಕುಟುಂಭ ಸಮೇತ ನೋಡ್ತಿದ್ದರು) ಹಾಕಿ ಅಲ್ಲಿ ಕಾಯ್ತಿದ್ದೆ.. ಆಮೇಲೆ ಕ್ರಮೇಣ ಬಯಲಾಟ ಮರೆ ಆಗಿ ಅಪಬ್ರಂಶ ಹಾಡುಗಳೂ ಪಾತ್ರಗಳೂ ಸೇರಿದ ನಾಟಕದ ಹುಚ್ಚು ನಮ್ಮ ಊರಿನ ಕೆಲ್ವರ್ಗೆ ಹತ್ತಿ ಆವ್ರು ನಾಟಕ ಆಡಲು ಶುರು ಮಾಡಿದರು .. ಈಗೀಗ ಬಯಲಾಟ ಉಹೂ ಇಲ್ಲವೇ ಇಲ್ಲ... ನಾ ಇದ್ವರ್ಗೂ ಯಾವ್ಡೇ ಬಯಲಾಟದಲ್ಲಿ ಖುದ್ದಾಗಿ ಪಾತ್ರ ಮಾಡಿಲ್ಲ ಆದರೆ ಆ ಪಾತ್ರ ಮಾಡುವವರಿಗೆ ಸಹಾಯ ಮಾಡಿರ್‍ವೇ...! ಹೇಗೆ? ಅವರು ಬಾಯಾತ್ ಹೊಡೆದು (ಕಂಠ ಪಾಠ) ಅದ್ನ ಸ್ಟೇಜ್ ಮೇಲೆ ಹೇಳಬೇಕಲ್ಲ, ಅದ್ನ ನಾ ಅವ್ರಿಗೆ ಹೆಲ್ತಿದೀ, (ಅವ್ರೆಲ್ಲಾ ಅನಕ್ಚರಸ್ತರು ಆದರೂ ನಾ ಹೇಳಿದ್ದನ್ನ ಕಂಠ ಪಾಠ ಮಾಡಿಟ್ಟಿದ್ದರು) - ಆವ್ರು ಆಡಿದ ಕೆಲ ಬಯಲಾಟಗಲ್ಲ್ಲಿ - ಮಾರ್ಕಂಡೇಯ ಮಹಾತ್ಮೆ- ಮಾತ್ರ ನಂಗೆ ನೆನಪಿರೋದು... ಆವ್ರು ಅದ್ನ ಕಂಠ ಪಾಠ ಮಾಡಿ, ಸ್ಟೇಜ್ ಮೇಲೆ ಹೇಳುತ್ತಿದ್ದರು, ಅವ್ರಿಗಿಂತ ನನಗೆ ಹೆಚ್ಛ್ಕು ಆ ಪಾತ್ರದ ವಾಕ್ಯಗಳು ಕಂಠ ಪಾಠ ಆಗಿದ್ದವು.. ನಿಮ್ಮ ಅನುಭವ ಮುದ ನೀಡಿತು.. ಹಾಗೆಯೇ ಸಂಪದ ಸದಸ್ಯರ ಪ್ರತಿಕ್ರಿಯೆಗಳೂ.. ಒಳ್ಳೆಯ ಬರಹ..
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ವಿಸ್ತ್ರತ ಪ್ರತಿಕ್ರಿಯೆಗೆ ಧನ್ಯವಾದಗಳು. ನೀವಂದಂತೆ, ಉತ್ತರ ಕರ್ನಾಟಕದ ಬಯಲಾಟಕ್ಕೂ, ಕರಾವಳಿಯ ಬಯಲಾಟಕ್ಕೂ ಬಹಳ ವ್ಯತ್ಯಾಸವಿದೆ ಅನಿಸುತ್ತೆ. (ಉತ್ತರ ಕರ್ನಾಟಕದ ಬಯಲಾಟವನ್ನು ನಾನು ನೋಡಿಲ್ಲವಾದರೂ, ಆ ಕುರಿತು ಕೇಳೀದ್ದೇನೆ.) ಕರಾವಳಿಯ ಬಯಲಾಟವು ಈಗಲೂ ಇಡೀ ರಾತ್ರಿ ನಡೆಯುತ್ತದೆ. ರಾತ್ರಿ ಹತ್ತು ಗಂಟೆಗೆ ಆರಂಭವಾದರೆ, ಬೆಳಿಗ್ಗೆ ಆರು ಗಂಟೆಗೆ ಮಂಗಳ. ಒಂದು ಅಥವಾ ಎರಡು ಪ್ರಸಂಗಗಳನ್ನು ಆಡುತ್ತಾರೆ. ಮೊದಲೆಲ್ಲ, ದಶಾವತಾರದ ಕತೆಗಳು, ಕ್ಱಷ್ಣಾರ್ಜುನ ಕಾಳಗ, . . . ಕ್ಷೇತ್ರ ಮಹಾತ್ಮೆ, ಭೀಷ್ಮ ವಿಜಯ ....ಮೊದಲಾದ ಕತೆಗಳನ್ನು ಆಡುತ್ತಿದ್ದರು. ಈಗ, ಚಲನಚಿತ್ರದ ಕತೆಗಳನ್ನು ಆಧರಿಸಿದ ಹೊಸ ಪ್ರಸಂಗಗಳನ್ನು ಆಡುತ್ತಾರಂತೆ. ಈ ವರ್ಷ ನಾನು ನೋಡಿದ ಒಂದು ಬಯಲಾಟದ ಒಂದು ಗಂಟೆಯ ಅವಧಿಯಲ್ಲಿ, (ಇಡೀ ರಾತ್ರಿ ನೋಡಲು ಅವಕಾಶವಿರಲಿಲ್ಲ, ಮತ್ತು ಈಗಿನ ಕಾಲಮಾನಕ್ಕೆ ಅದು ಸ್ವಲ್ಪ ಕಷ್ಟ) ಹಲವು ಎರಡು ಅರ್ಥದ ಸಂಭಾಷಣೆಗಳನ್ನು ಕೇಳಬೇಕಾಯಿತು! ಕರಾವಳಿಯ ಬಯಲಾಟ ಈಗಲೂ ಉಳಿದುಕೊಂಡಿರುವುದಕ್ಕೆ, ಒಂದು ಮುಖ್ಯ ಕಾರಣವೆಂದರೆ, ದೇವರ ಹೆಸರಿನಲ್ಲಿ ಹರಕೆ ಹೇಳಿಕೊಂಡು, ಭಕ್ತರು ಹಣ ನೀಡಿ ತಮ್ಮ ಮನೆಯ ಹತ್ತಿರ ಬಯಲಾಟ ಮಾಡಿಸುವ ಸಂಪ್ರದಾಯ ಉಳಿದುಕೊಂಡು ಬಂದಿರುವುದು. ಅಲ್ಲದೆ, ಟಿಕೆಟ್ ಕೊಟ್ಟ ಟೆಂಟ್ ಮೇಳಗಳೂ ಕಳೆದ ದಶಕದ ತನಕ, ಯಕ್ಷಗಾನದ ಉಳಿವಿಗೆ ತಮ್ಮದೇಶೈಲಿಯ "ಕೊಡುಗೆ"ಯನ್ನು ನೀಡಿದವು. ಈಗ ಟೆಂಟ್ ಆಟದ ಯುಗ ಮುಗಿಯುತ್ತಾ ಬಂದಿದೆ, ಮುಖ್ಯ ಕಾರಣ ಡಿಷ್ ಟಿ.ವಿ.ಯ ಜನಪ್ರಿಯತೆ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಶಶಿಧರ‌ ಹೆಬ್ಬಾರರೇ, ನಿಮ್ಮ‌ ಹೆಸರಿನ ಮುoದೆ ಇರುವ‌ 'ಹಾಲಾಡಿ' ಪದ‌ ಕ‌oಡಾಗಲೆಲ್ಲ‌ ನನಗೆ ನನ್ನ‌ ಅಜ್ಜಯ್ಯ‌ ಒಬ್ಬರು (ಅಪ್ಪನ‌ ಮಾವ‌) )ನೆನಪಾಗುತ್ತಾರೆ. ಅವರನ್ನು ನಾವೆಲ್ಲ‌ "ಹಾಲಾಡಿ ಅಜ್ಜಯ್ಯ‌" ಎoದೇ ಕರೆಯುತ್ತಿದ್ದುದು. ಅವರ‌ ಹೆಸರು ನನಗೆ ಇoದಿಗೂ ಗೊತ್ತಿಲ್ಲ‌. ಚಿಕ್ಕ‌oದಿನಲ್ಲಿ ಕೇಳುವ‌ ಅವಷ್ಯಕತೆ ಇರಲಿಲ್ಲ‌. ಈಗ‌ ಕೇಳಲು ಹಿರಿಯರಾರೂ ಇಲ್ಲ‌. ಅವರು ನಮ್ಮ‌ ಮನೆಯಲ್ಲಿದ್ದಷ್ಟು ದಿನಗಳೂ ನನ್ನನ್ನು ಮತ್ತು ನನ್ನ‌ ಚಿಕ್ಕಪ್ಪನ‌ ಮಗಳು ಪ್ರಭಾವತಿಯನ್ನು "ಹಳ್ಳಿ ಮುಕ್ಕ‌""' ಎoದು ಕರೆಯುತ್ತಿದ್ದ‌ ನೆನಪು ಹಸಿರಾಗಿದೆ. "ಮೇಯರ್ ಮುತ್ತಣ್ಣ‌"' ಚಿತ್ರದ‌ "ಅಯ್ಯಯ್ಯೋ ಹಳ್ಳಿ ಮುಕ್ಕ‌'" ಹಾಡಿನಿoದ‌ ಅವರು ಪ್ರಭಾವಿತರಾಗಿದ್ದರು.

ನಿಮ್ಮ‌ ಬರಹಗಳು ನನ್ನಲ್ಲಿ ನನ್ನ‌ ಊರಿನ‌ ನೆಲ‌, ನೀರು, ಭಾಷೆ, ಇವುಗಳ‌ ನೆನಪನ್ನು ಮೂಡಿಸುತ್ತವೆ. ಈ ನಗರದ‌ ಯಾoತ್ರಿಕ‌ ಬದುಕಿನಿoದ‌ ದೂರಾಗಿ ನಮ್ಮೂರಿನಲ್ಲೇ ನೆಲೆಸುವ‌oತಿದ್ದರೆ ಎಷ್ಟು ಚೆನಾಗಿರುತ್ತಿತ್ತು ಎನಿಸುತ್ತದೆ. ಎಲ್ಲವೂ ಬರೀ "ರೆ" ರಾಜ್ಯದ‌ ಸುoದರ‌ ಕನಸುಗಳು ಮಾತ್ರ‌.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.