ಮಳೆಕಾಡಿನ ಮಡಿಲಲ್ಲಿ ಅಪರೂಪದ ಅಬ್ಬಿ

To prevent automated spam submissions leave this field empty.

ಈ ಸಲ ನಮ್ಮ ಸುತ್ತಾಟಕ್ಕೆ ಅಯ್ದುಕೊಂಡದ್ದು ವಾರಾಹಿ ವಿದ್ಯುತ್ ಯೋಜನೆಯ ಆಸುಪಾಸಿನ ಪ್ರದೇಶ. ಸರಿ, ಬೈಕ್ ಹತ್ತಿ ತೀರ್ಥಹಳ್ಳಿ ತಲುಪಿದ್ದಾಯಿತು. ಅಲ್ಲಿಂದ ೨೩ ಕಿಮೀ ದೂರದಲ್ಲಿ ಯಡೂರು, ಅಲ್ಲೊಂದು ಅಪರೂಪದ ಜಲಪಾತವಿದೆ.
ಶಿವಮೊಗ್ಗ ಜಿಲ್ಲೆಯನ್ನು ಜಗತ್ಪ್ರಸಿದ್ಧ ಜೋಗ ಜಲಪಾತದೊಂದಿಗೆ ಗುರುತಿಸುವುದು ಸಾಮಾನ್ಯ. ಆದರೆ ಇಲ್ಲಿ ಹೆಸರಿಲ್ಲದ, ಹೊರಜಗತ್ತಿನ ಕಣ್ಣಿಗಿನ್ನೂ ಬೀಳದ ಹಲವಾರು ಜಲಪಾತಗಳಿವೆ. ಮಳೆಕಾಡಿನ ನಡುವೆ ಅಡಗಿ ಕುಳಿತಿರುವ ಯಡೂರು ಜಲಪಾತ ಅವುಗಳಲ್ಲೊಂದು.
ಹೊಸನಗರ ತಾಲೂಕಿನ ಯಡೂರು ಹಳ್ಳಿಯಿಂದ ೧.೫ ಕಿಮೀ ದೂರದಲ್ಲಿದೆ ‘ಅಬ್ಬಿ’ ಎಂದೇ ಹಳ್ಳಿಗರಿಂದ ಕರೆಯಲ್ಪಡುವ ಈ ತಾಣ. ತುಂಬ ಎತ್ತರದ ಜಲಪಾತವೇನಲ್ಲ, ಬರೀ ೭೫ ಅಡಿ. ಆದರೆ ಸ್ರಷ್ಟಿ ಸೌಂದರ್ಯದ ವಿಸ್ಮಯಕ್ಕೆ ಎಣೆಯುಂಟಾ? ಮೂರು ಹಂತಗಳಲ್ಲಿ ಧುಮುಕುವ ಹಾಲಿನಂತಹ ಜಲಧಾರೆಯನ್ನು ತಲುಪುವುದೂ ಕಷ್ಟದ ಕೆಲಸವೇನಲ್ಲ.
ಮಕ್ಕಳಿಗಂತೂ ಇದೊಂದು ಆದರ್ಶ ಮೋಜಿನ ತಾಣ. ಅಪಾಯಕಾರಿಯಲ್ಲದ ಈ ಜಲಪಾತದ ಪರಿಸರದಲ್ಲಿ ಮನುಷ್ಯನ ಹಸ್ತಕ್ಷೇಪದ ಗುರುತಿನ್ನೂ ಮೂಡಿಲ್ಲ. ಕಾಡಿನಲ್ಲಿ ಹುಟ್ಟಿ ವಾರಾಹಿಯನ್ನು ಸೇರುವ ಅನಾಮಿಕ ಹೊಳೆಯೊಂದು ನಿರ್ಮಿಸಿರುವ ಈ ಜಲಪಾತದ ತಲೆಯ ಮೇಲೆ ಒಂದು ನೈಸರ್ಗಿಕ ಸ್ವಿಮ್ಮಿಂಗ್ ಪೂಲ್ ಸಹ ಇದೆ.
ಯಡುರಿನಲ್ಲೊಂದು ಸಂಕಷ್ಟಹರ ಗಣಪತಿ ದೇಮಸ್ಥಾನವಿದೆ. ವಿಶೇಷವೆಂದರೆ ಹುಲಿಕಲ್ಲು ಎಂಬಲ್ಲಿ ವಾರಾಹಿ ಹಿನ್ನೀರಿನಲ್ಲಿ ಮುಳುಗಿಹೋಗಿದ್ದ ಈ ಕಲ್ಲಿನ ದೇಗುಲವನ್ನು ಹಾಗೆಯೇ ತಂದು ಇಲ್ಲಿ ಸ್ಥಾಪಿಸಲಾಗಿದೆ.
ಮಾಣಿ ಆಣೆಕಟ್ಟು ಇಲ್ಲಿಂದ ೪ ಕಿಮೀ, ಕವಲೆದುರ್ಗದ ಕೋಟೆ ೧೬ ಕಿಮೀ.
ಯಡೂರಿನಿಂದ ಮುಂದಿನ ನಮ್ಮ ಪ್ರವಾಸದ ಬಗ್ಗೆ ಇನ್ನೊಮ್ಮೆ ಹೇಳುತ್ತೇನೆ....

ಲೇಖನ ವರ್ಗ (Category): 

ಪ್ರತಿಕ್ರಿಯೆಗಳು