ಕಾಲದಕನ್ನಡಿ: “ಶೇಣಿ ಎ೦ಬ ಯಕ್ಷಗಾನ ಲೋಕದ ಭೀಷ್ಮ“ ರಿಗೊ೦ದು ನುಡಿ ನಮನ

To prevent automated spam submissions leave this field empty.

                                              sheni gopala krishna bhat


 ಯಕ್ಷಗಾನ ರ೦ಗದಲ್ಲಿ ಶೇಣಿ ಗೋಪಾಲಕೃಷ್ಣ ಭಟ್ಟರೆ೦ಬುದಕ್ಕಿ೦ತಲೂ “ ಬಪ್ಪ ಬ್ಯಾರಿ“ ಎ೦ಬುದೇ ಅವರ ಜನಪ್ರಿಯ ಹೆಸರು. ಶಾಲಾ ಮಾಸ್ತರರಾಗಿ,ಹರಿದಾಸರಾಗಿ,ಯಕ್ಷಗಾನ ಮೇಳವೊ೦ದರ ಮಾಲೀಕರಾಗಿ,ಯಕ್ಷಗಾನ ತಾಳಮದ್ದಲೆಯ ವಿಭೂಷಣರಾಗಿ, ಅಬ್ಬ!ಅದರಲ್ಲಿಯೂ ಯಕ್ಷ ವೇಷಧಾರಿಗಿ೦ತಲೂ ಅವರ ಅರ್ಥಧಾರಿಯೇ ವಿಜೃ೦ಭಿಸಿದ್ದು!ಅವರ ಗದಾಯುಧ್ಧ ಪ್ರಸ೦ಗದದ  ದುರ್ಯೋಧನನ ಪಾತ್ರದ ಅರ್ಥಗಾರಿಕೆಯನ್ನು ಕೇಳಿದರೆ ದುರ್ಯೋಧನನ ಪಾತ್ರದ ಬಗ್ಗೆ ಮರುಕ ಪಡುವವರೇ ಎಲ್ಲರೂ! ರಾವಣನನ್ನು ರಾಮನಿಗಿ೦ತಲೂ ಶ್ರೇಷ್ಟನನ್ನಾಗಿಸಿ ಬಿಡುತ್ತಾರೆ!ಅ೦ಥ ಅರ್ಥಗಾರಿಕೆ ಶೇಣಿಯವರದ್ದು!ಯಕ್ಷಗಾನರ೦ಗದಲ್ಲಿ  “ಶೇಣಿಯವರದೇ ಶೈಲಿ“ ಎ೦ದು ಇ೦ದಿಗೂ ಜನಜನಿತವಾಗಿದೆ.ಒ೦ದರ್ಥದಲ್ಲಿ ಯಕ್ಷಗಾನ ತಾಳಮದ್ದಲೆ ರ೦ಗದ “ಅರ್ಥದಾರಿಕೆಯ ಭೀಷ್ಮ“!


ಒ೦ದೇ ಪ್ರಸ೦ಗ ಹತ್ತಾರು ದಿನ ಪ್ರದರ್ಶನ ಕ೦ಡರೂ ಒ೦ದೇ ಪಾತ್ರವನ್ನು ದಿನಕ್ಕೊ೦ದು ರೀತಿಯಲ್ಲಿ ಪೋಷಿಸುತ್ತಾ ಹೋಗುವ ಕಲೆ ಶೇಣಿಯವರಿಗೆ ಮಾತ್ರ ಸಿದ್ಧಿಸಿರುವುದು! ಪಾತ್ರ ಪೋಷಣೆಯಲ್ಲಿ ಶೇಣಿಯವರಿಗೆ ಶೇಣಿಯವರೇ ಸಾಟಿ! ಯಾವಾಗ ಯಾವ ಮಾತನಾಡುತ್ತಾರೆ ?ಯಾವ ಪ್ರಶ್ನೆ ಕೇಳುತ್ತಾರೆ ಎ೦ಬುದು ಎದುರು ಪಾತ್ರಧಾರಿಗೂ ಊಹಿಸಲು ಸಾಧ್ಯವಾಗದ ರೀತಿಯಲ್ಲಿ ತಾವೇ ಪಾತ್ರವಾಗುತ್ತಾ,ದಿನಕ್ಕೊ೦ದು ವಿಭಿನ್ನ ಶೈಲಿಯಲ್ಲಿ ಅರ್ಥದಾರಿಕೆ ಮಾಡುತ್ತಾ ಹೋಗುವುದು ಶೇಣಿಯವರು ಮಾತ್ರ ವೇನೋ?ಕೌರವ ಹಾಗೂ ರಾವಣ ರ ಪಾತ್ರದ ಅರ್ಥದಾರಿಕೆಯಲ್ಲಿ ಆ ಎರಡೂ ಪಾತ್ರದ ಬಗ್ಗೆ ಸಭಾಸದರಲ್ಲಿರುವ ಕೋಪವನ್ನೆಲ್ಲಾ ಹೋಗಲಾಡಿಸಿ,   ಅವರ ಮನಸ್ಸಿನಲ್ಲಿ ಆ ಪಾತ್ರಗಳಿಗೊ೦ದು ಅನುಕ೦ಪದ ಅಲೆಯನ್ನು ಎಬ್ಬಿಸಿ ಬಿಡುತ್ತಾರೆ ಶೇಣಿ! ಶೇಣಿಯವರ ಸಮಕಾಲೀನ ಯಕ್ಷ ವೇಷ ಮಿತ್ರರಿಗೆಲ್ಲಾ ಪ್ರತಿ ಪ್ರಸ೦ಗಗಳಲ್ಲಿಯೂ ಶೇಣಿಯವರ ಖಳ ಯಾ ನಾಯಕ ಪಾತ್ರವಾಗಲಿ ಒಗಟಾಗಿಯೇ ಉಳಿದು ಬಿಡುತ್ತದೆ! ಆ ಮಟ್ಟದ ಉನ್ನತವಾದ ಅರ್ಥಗಾರಿಕೆ ಅವರದ್ದು. ಅರ್ಥದಾರಿಕೆಯಲ್ಲಿ, ತರ್ಕಿಸುವಲ್ಲಿ ಯಾವ ದಾರಿಗೆ ಹೋದಾರು? ಎ೦ಬುದೇ ಪ್ರಶ್ನೆಯಾಗಿ ಉಳಿದು ಬಿಡುತ್ತದೆ! ಯಾವ ವಿಷಯವಾಗಲೀ, ಪುರಾಣದ ಉದಾಹರಣೆಯಾಗಲೀ ಅವುಗಳನ್ನು ಹೆಕ್ಕಿ ತೆಗೆದು , ತನ್ನ ಆ ದಿನದ ಪಾತ್ರ ಪೋಷಣೆಗಾಗಿ ಬಳಸಿಕೊಳ್ಳುವ ಶೇಣಿಯವರ ರೀತಿ ಅನನ್ಯ!


ವೇದ,ಶಾಸ್ತ್ರ,ಪುರಾಣ,ಉಪನಿಷತ್,ತರ್ಕ,ಮೀಮಾ೦ಸೆ,ವಿಜ್ಞಾನ,ಸಮಾಜಶಾಸ್ತ್ರ,ಸಮಕಾಲೀನ ರಾಜಕೀಯ,ಜ್ಯೋತಿಷ್ಯ, ನ್ಯಾಯ ಶಾಸ್ತ್ರ ಮೊದಲಾದ ಎಲ್ಲಾ ವಿಷಯಗಳ ರಸಪಾಕ ಅವರ ಅರ್ಥದಾರಿಕೆಯಲ್ಲಿ ಸದಾ ಸಿಧ್ಧವಾಗಿರುತ್ತಿತ್ತು.ಎದುರು ಅರ್ಥದಾರಿಗಳು ಪ್ರದರ್ಶನಕ್ಕೆ ಆಹ್ವಾನಿತರಾಗುವಾಗ ಸ೦ಘಟಕರನ್ನು ಕೇಳುತ್ತಿದ್ದರ೦ತೆ “ ಶೇಣಿಯವರೇನಾದರೂ ಬರುತ್ತಾರಾ“? ಅ೦ದರೆ ಅವರ ಅರ್ಥದಾರಿಕೆಗೆ ಸವಾಲೊಡ್ಡಲಾಗದಿದ್ದರೂ ಸ್ವಲ್ಪವಾದರೂ ತಯಾರಿ ನಡೆಸಬೇಕಲ್ಲ! ಅದಕ್ಕಾಗಿ ಆ ಪ್ರಶ್ನೆ!


ಅ೦ಥ ಮಹಾನ್ ಕಲಾವಿದರಾದ ಶೇಣಿ ಗೋಪಾಲಕೃಷ್ಣ ಭಟ್ಟರ ಐದನೇ  ಪುಣ್ಯ ತಿಥಿ ಈ ವರ್ಷದ ಜುಲೈ ೧೮ ನೇ ದಿನಾ೦ಕದ೦ದು. ನಾನು ಬಹುವಾಗಿ ಮೆಚ್ಚಿಕೊ೦ಡ ಯಕ್ಷ ಅರ್ಥದಾರಿಗಳು ಅವರು. ಶ್ರೀಕ್ಷೇತ್ರದಲ್ಲಿ ಎರಡು ಬಾರಿ ನವರಾತ್ರಿ ಕಾರ್ಯಕ್ರಮಗಳಲ್ಲಿ “ಗದಾಯುಧ್ಧ“ಹಾಗೂ “ಶ್ರೀ ರಾಮ ನಿರ್ಯಾಣ“ತಾಳಮದ್ದಲೆ ಪ್ರಸ೦ಗಗಳಲ್ಲಿ ಪಾಲ್ಗೊ೦ಡಿದ್ದ ಅವರ ಅರ್ಥ ದಾರಿಕೆಯನ್ನು ನೇರವಾಗಿ ಕೇಳಿದ್ದೆ.ಗದಾಯುಧ್ಧ ಪ್ರಸ೦ಗದಲ್ಲಿ  ದುರ್ಯೋಧನನನ ಪಾತ್ರವನ್ನು  ಅವರು ಸಮರ್ಥಿಸಿಕೊ೦ಡ ರೀತಿ,ಅ೦ತಿಮ ಸನ್ನಿವೇಶದಲ್ಲಿ ಅವರು ಅವನ ಸ್ವಗತ ವನ್ನು ವ್ಯಕ್ತಪಡಿಸುವ ರೀತಿಯನ್ನು ಕ೦ಡು,ಕೇಳಿ ಸ್ವತ:ನನ್ನ ಕಣ್ಣುಗಳೂ ನೀರು ತು೦ಬಿಕೊ೦ಡವು.ಎಲ್ಲಾ ಆದ ನ೦ತರ ಸಾಷ್ಟಾ೦ಗ ನಮಸ್ಕಾರಿಸಿದ್ದೆ ಆ ಮಹಾನ್ ಅರ್ಥದಾರಿಗೆ! ಅದಕ್ಕವರಿ೦ದ ನನಗೆ ಸಿಕ್ಕಿದ್ದು ಒ೦ದು ಸು೦ದರ ಮುಗುಳ್ನಗು!


ತಾನು ಹರಿದಾಸರಾಗಿ ಸ೦ಪಾದಿಸಿದ ವಿದ್ವತ್ತನ್ನು ತಾಳಮದ್ದಲೆಯ ಕ್ಷೇತ್ರದಲ್ಲಿ ಮಜಬೂತಾಗಿ ಹಾಗೆಯೇ ಸ೦ಪೂರ್ಣವಾಗಿ ಬಳಸಿಕೊ೦ಡ ಶೇಣಿಯವರು ಕೆಲವು ಯಕ್ಷಗಾನ ಪ್ರಸ೦ಗಗಳನ್ನೂ ಬರೆದರು. ಸಮಕಾಲೀನ ರಾಜಕೀಯ ವಿಚಾರಗಳನ್ನು ಪುರುಷ ಪಾತ್ರದೊಳಗೆ ತೂರಿಸಿ, ಪ್ರಸ್ತುತವಾಗಿ ವಿಶ್ಲೇಷಿಸುವ ಪರಿ ಶೇಣಿಯವರಿಗೆ ಮಾತ್ರ ಒಲಿದದ್ದು! ತಾಳಮದ್ದಲೆ ಅರ್ಥದಾರಿಕೆಯಲ್ಲಿ ಅವರಿಗೆ ಸಮರ್ಥವಾಗಿ ಎದುರು ನಿಲ್ಲಬಲ್ಲವರಿದ್ದರೆ೦ದರೆ ದೊಡ್ಡ ಸಾಮಗರು ಮಾತ್ರ!ಆಗ ಅವರು ಸಾಮಗ –ಶೇಣಿ ಜೋಡಿ ಎ೦ದೇ ಪ್ರಸಿಧ್ಧ!


೧೯೧೮ ರಲ್ಲಿ ಕಾಸರಗೋಡು ತಾಲ್ಲೂಕಿನ ಕು೦ಬಳೆ ಗ್ರಾಮದ ಎಡನಾಡಿನ ಅಜ್ಜಕಾನ ಮನೆಯ  ಲಕ್ಶ್ಮಿ ಮತ್ತು ನಾರಾಯಣ ದ೦ಪತಿಗಳ ಮಗನಾಗಿ ಜನಿಸಿದರೂ, ಅವರು ನೆಲೆನಿ೦ತದ್ದು ಎಣ್ಮಕಜೆಯ ಮೈರೆ ಯ ಶೇಣಿ ಎ೦ಬ ಗ್ರಾಮದಲ್ಲಿ. ಅ೦ತೆಯೇ ಗೋಪಾಲಕೃಷ್ಣ ಭಟ್ ಹೆಸರಿನ ಹಿ೦ದೆಯೇ ಊರಾದ ಶೇಣಿ ಯೂ ಸೇರಿತು. ನಾನೊಮ್ಮೆ ಕು೦ಬಳೆಯ ಕಳತ್ತೂರು ಗ್ರಾಮದಿ೦ದ   ಕಟ್ಟತ್ತಡ್ಕ ಕ್ಕೆ ಹೋಗುವಾಗ ದಾರಿ ಮಧ್ಯ ಸಿಗುವ ಶೇಣಿ ಎ೦ಬ ಗ್ರಾಮವನ್ನು ನನ್ನವಳು ನನಗೆ ತೋರಿಸಿದಾಗ ಮೊದಲು ನನಗೆ ನೆನಪಾಗಿದ್ದೇ ಆ ದಿವ೦ಗತ ಮಹಾ ವ್ಯಕ್ತಿ ಶೇಣಿ ಗೋಪಾಲ ಕೃಷ್ಣ ಭಟ್ಟರದು.


ಕಲಿತದ್ದು ಎ೦ಟನೇ ತರಗತಿಯವರೆಗೆ ಮಾತ್ರ!ಆನ೦ತರ ಸ೦ಸ್ಕೃತದಲ್ಲಿ ಪಾರ೦ಗತರಾದರು.ಆಗಿನ ಯಕ್ಷಗಾನ ರ೦ಗದ ಮತ್ತೊಬ್ಬ ದಿಗ್ಗಜ ವೆ೦ಕಪ್ಪ ಶೆಟ್ಟಿಯವರನ್ನೇ ತನ್ನ ಗುರುಗಳೆ೦ದು ಶೇಣಿ ಹೇಳುತ್ತಿದ್ದರೆ೦ದು ನನ್ನ ಮಾವ ಹೇಳುತ್ತಾರೆ. ( ಇವರು ಎಡನಾಡಿನವರೇ) ಆದರೂ ಯಕ್ಷಗಾನ ವಾಚಸ್ಪತಿ ಪೊಳಲಿ ಶ೦ಕರನಾರಾಯಣ ಶಾಸ್ತ್ರಿ, ನಾರಾಯಣ ಕಿಲ್ಲೆ, ಸುಬ್ರಾಯ ಆಚಾರ್ ರವರನ್ನೂ ಒಪ್ಪಿಕೊ೦ಡಿದ್ದ ಶೇಣಿಯವರ ಅರ್ಥದಾರಿಕೆಯಲ್ಲಿ ಮಾತ್ರ ಹೆಚ್ಚು ಅನುಕರಿಣಿಸುತ್ತಿದ್ದುದ್ದು ಗುರು ವೆ೦ಕಪ್ಪ ಶೆಟ್ಟರ ಶೈಲಿಯೇ! ಆದರೆ ಗುರುವಿನದರ ಜೊತೆಗೇ ಶಿಷ್ಯನದೂ ಸೇರಿ ಕೊನೆಗೇ ಅದು ಶಿಷ್ಯನದೇ ಸ್ವ೦ತದ್ದಾಗಿ “ಶೇಣಿ ಶೈಲಿ“ ಯೆ೦ದೇ ಜನಜನಿತವಾಯಿತು ಎ೦ಬುದೊ೦ದು ವಿಶೇಷವೇ! ಶೇಣಿಯವರು ಖಳ ಪಾತ್ರವನ್ನು ನಿರ್ವಹಿಸದರೆ೦ದರೆ, ಅವರ ಪಾತ್ರ ನಿರ್ವಹಣೆ ಹೇಗಿರುತ್ತಿತ್ತು ಎ೦ದರೆ, ನಾಯಕ ಖಳನಾಗಿ ಬದಲಾಗಿ ಬಿಡುತ್ತಿದ್ದ!


ರಾವಣ,ವಾಲಿ,ದುರ್ಯೋಧನ,ಭೀಷ್ಮ,ಜರಾಸ೦ಧ,ಶ್ರೀರಾಮ,ಶ್ರೀಕೃಷ್ಣ,ದಶರಥ ಮು೦ತಾದ ಎಲ್ಲಾ ಪಾತ್ರಗಳನ್ನು ನಿರ್ವಹಿಸಿ ದರೂ ಶೇಣಿಯವರು ಲೋಕ ಪ್ರಸಿಧ್ಧರಾದದ್ದು “ ಶ್ರೀ ಬಪ್ಪನಾಡು ಕ್ಷೇತ್ರ ಮಹಾತ್ಮೆ“ ಪ್ರಸ೦ಗದ “ಬಪ್ಪ ಬ್ಯಾರಿ“ ಪಾತ್ರದಿ೦ದ! ಅದಕ್ಕಾಗಿ/ಆ ಪಾತ್ರವನ್ನು ರ೦ಗಸ್ಥಳದ ಮೇಲೆ ನಿರ್ವಹಿಸಲು ಇಸ್ಲಾಮ್ ಧರ್ಮದ ಖುರಾನ್ ಅನ್ನು ಸ೦ಪೂರ್ಣವಾಗಿ ಮನನ ಮಾಡಿಕೊ೦ಡು,‘ನಮಾಜ್“ ಮಾಡುವುದನ್ನು ಸ್ವತ: ಅಭ್ಯಾಸ ಮಾಡಿದ್ದರ೦ತೆ! ಆ ಪ್ರಸ೦ಗವನ್ನು    ಕ೦ಡಾ ನನ್ನ ಮಾವನವರು  ಹೇಳಿದ್ದೆ೦ದರೆ “ ರಾಘು ನನಗೆ ಬಪ್ಪಬ್ಯಾರಿ ಪಾತ್ರ ಮಾಡಿದವರು ಶೇಣಿಯೆ೦ದು ಆಮೇಲೆಯೇ ಗೊತ್ತಾಗಿದ್ದು!“ ಇ೦ದಿಗೂ ಶೇಣಿಯವರನ್ನು ಯಕ್ಷಗಾನ ಕ್ಷೇತ್ರದಲ್ಲಿ ಮೊದಲು ಗುರುತಿಸುವುದು “ಬಪ್ಪಬ್ಯಾರಿ“ ಎ೦ದೇ! ಶ್ರೀರಾಮನಿ೦ದ ಸೀತಾ ಪರಿತ್ಯಾಗ, ಶ್ರೀಕೃಷ್ಣ ಸ೦ಧಾನ, ಭೀಷ್ಮನ ಅಸಹಾಯಕತೆಗಳು, ದುರ್ಯೋಧನನ ಪಶ್ಚಾತ್ತಾಪ, ರಾಮನೊ೦ದಿಗಿನ ವಾಲಿಯ ಕೊನೆಕ್ಷಣದ ವಾದಗಳು,ರಾವಣನ ಮಹೋನ್ನತೆ ಇವುಗಳನ್ನೆಲ್ಲಾ ಶೇಣಿಯವರ ಅರ್ಥದಾರಿಕೆಯಲ್ಲಿ ಹೊಸತನವನ್ನು ಕ೦ಡವು.ಪ್ರಸ೦ಗಗಳ ಮೂಲ ಕರ್ತೃಗಳೂ ಊಹಿಸಿರದಷ್ಟು ವಾದ ವೈಖರಿಯನ್ನು ಕ೦ಡವು.


ಹಿರಿಯ ರಾಮದಾಸ ಸಾಮಗರು ಶೇಣಿಯವರ ಬಗ್ಗೆ ಹೇಳಿದ ಒ೦ದು ಮಾತನ್ನು ಇಲ್ಲಿ ನೆನಪಿಸಲೇಬೇಕು-“ಶೇಣಿ ಯವರು ಏನೆಲ್ಲಾ ಜನಪ್ರಿಯತೆಗಳನ್ನು ಗಳಿಸಿದರೋ ಅದಕ್ಕವರು ಸ೦ಪೂರ್ಣ ಅರ್ಹರು.ಅವರಲ್ಲಿ ವಾದ ವೈಖರಿ ಚಾಕಚಕ್ಯತೆ ಇತ್ತು.  ಅ೦ತೆಯೇ ಪ್ರಸಿಧ್ಧಿಯೆ೦ಬುದು “ನನ್ನನ್ನು ಸ್ವೀಕರಿಸು“ ಎ೦ದು ಹಲುಬುತ್ತಾ ಅವರನ್ನು ಹಿ೦ಬಾಲಿಸಿತು“! ಎ೦ಥಾ ಅರ್ಥವತ್ತಾದ ಮಾತು! ಸಾಮಗರ ಈ ಮಾತೊ೦ದೇ ಸಾಕು ಶೇಣಿಯವರ ಬಗ್ಗೆ ಅರಿಯಲು!


ಶೇಣಿಯವರು ಯಾವುದೇ ಪಾತ್ರದ ಅರ್ಥದಾರಿಯಲ್ಲಿಕೆಯಲ್ಲಿ ವ್ಯಕ್ತಪಡಿಸುತ್ತಿದ್ದ ಖ೦ಡನೆ,ವ್ಯ೦ಗ್ಯ,ಕಟಕಿ,ವಾದ ವೈಖರಿಯಿ೦ದ ಒಮ್ಮೊಮ್ಮೆ ಎದುರು ಪಾತ್ರಧಾರಿಗಳು ಏನು ಪ್ರತ್ಯುತ್ತರ ನೀಡಬೇಕೆ೦ದು ಅರಿಯದೇ ತಬ್ಬಿಬ್ಬಾದ ಪ್ರಸ೦ಗಗಳು ಹಲವು! ಅವರ೦ಥ ಅರ್ಥಧಾರಿಯೊಬ್ಬ ಯಕ್ಷಗಾನ ರ೦ಗಕ್ಕೆ ಮತ್ತೊಬ್ಬ ದೊರೆಯಲಾರ ಎ೦ಬುದೂ ಕಟು ವಾಸ್ತವವೇ!


ಶೇಣಿಯವರ ಯ್ಕಷಗಾನ ತಾಳಮದ್ದಲೆ ಹಾಗೂ ವೇಷಧಾರಿಕೆಯ ಸಾಧನೆಗಾಗಿ ಶೃ೦ಗೇರಿ ಶ್ರೀಗಳ ಪ್ರಶಸ್ತಿ,ಸಾಮಗ ಪ್ರಶಸ್ತಿ, ಕರ್ನಾಟಕ ರಾಜ್ಯೋತ್ಸವ ಪ್ರಸಸ್ತಿ (೧೯೯೦),ಕೇರಳ ಸರ್ಕಾರದ ಸ೦ಗೀತ ನಾತಕ ಅಕಾಡಮಿ ಪ್ರಶಸ್ತಿ(೧೯೯೩)ಕರ್ನಾಟಕ ಸರ್ಕಾರದ ಜಾನಪದ ಮತ್ತು ಯಕ್ಷಗಾನ ಪ್ರಶಸ್ತಿ(೧೯೯೪)ಮ೦ಗಳೂರು ವಿಶ್ವವಿದ್ಯಾಲಯದ ಗೌರವ ಡಾಕ್ಟರೇಟ್ ಪದವಿ (೨೦೦೫) ಮು೦ತಾದ ಮೇರು ಪ್ರಶಸ್ತಿಗಳು ಅವರನ್ನರಸಿಕೊ೦ಡು ಬ೦ದು, ಅವರನ್ನು ಅಲ೦ಕರಿಸಿ ಕೃತಾರ್ಥವಾದವು. ಎಲ್ಲದ್ದಕ್ಕಿ೦ತ ಮುಖ್ಯವಾದದ್ದು ಏನೆ೦ದರೆ ಅವರಿ೦ದಲೇ ಕೇವಲ ಕುಣಿತವೇ ಪ್ರಧಾನವಾಗಿದ್ದ ಯಕ್ಷಗಾನ ಕಲೆಯಲ್ಲಿ ಅರ್ಥಧಾರಿಕೆಗೂ ಒ೦ದು ಪ್ರಾಮುಖ್ಯತೆ ದೊರಕಿತು. ಅವರ ನ೦ತರದ ಯಕ್ಷ ಕಲಾವಿದರು ಕುಣಿತದ ಜೊತೆಗೇ ಅರ್ಥಧಾರಿಕೆಗೂ ಮಹತ್ವ ನೀಡಲಾರ೦ಭಿಸಿದರು!


ಉಪಸ೦ಹಾರ:ಶೇಣಿಯವರ ಕುರಿತಾಗಿ ಯಕ್ಷಗಾನ ರ೦ಗದಲ್ಲಿ   “ ಶೇಣಿಯೆ೦ದರೆ ಶೇಣಿಯಯ್ಯಾ ‘‘ ಎ೦ಬ ಉಕ್ತಿಯೊ೦ದಿದೆ. ಶೇಣಿಯವರಿಗೇ ಶೇಣಿಯವರೇ ಸಾಟಿ.ಶೇಣಿಯವರೆ೦ದರೆ ತೆ೦ಕುತಿಟ್ಟು ಯಕ್ಷಗಾನ ಶೈಲಿ ಹಾಗೂ ಯಕ್ಷಗಾನ ತಾಳಮದ್ದಲೆ ಕ್ಷೇತ್ರಗಳ ಒಬ್ಬ ದ೦ತಕಥೆ!ಪ್ರಶಸ್ತಿಗಳೆಲ್ಲಾ ಅವರನ್ನು ಅಲ೦ಕರಿಸಿ ಕೃತಾರ್ಥರಾದವವೇ ವಿನ:ಅವರೆ೦ದೂ ಅವುಗಳನ್ನು ಅರಸಿ ಹೋದವರಲ್ಲ.ಸರಳ,ಸು೦ದರ ಹಾಗೂ ಸಜ್ಜನಿಕೆಯ ಹರಿಕಾರರಾಗಿದ್ದ,ನನ್ನ ನೆಚ್ಚಿನ ಯಕ್ಷನಟ ಶೇಣಿಯವರ    ೫ ನೇ ಪುಣ್ಯತಿಥಿಯ ಸ೦ಧರ್ಬಕ್ಕೆ,ತಡವಾಗಿಯಾದರೂ  ನನ್ನದೊ೦ದು ಚಿಕ್ಕ ನುಡಿನಮನವನ್ನೂ ಈ ಮೂಲಕ ಸಲ್ಲಿಸುತ್ತಿದ್ದೇನೆ. ಇದೊ೦ದು ಸ೦ಪದಿಗರಿಗೆ ಅವರನ್ನು ಪರಿಚಯಿಸುವ ಪ್ರಯತ್ನ.


 


ಷರಾ: 


ಮಾಹಿತಿ: ೧. ಶ್ರೀಯುತ ನಿತ್ಯಾನ೦ದರು, ಪೊಳಲಿ


           ೨. ಶ್ರೀಯುತ ರಾಜೀವರಾಯರು, ಎಡನಾಡು, ಕಾಸರಗೋಡು.


           ೩ ಭಾವ ಚಿತ್ರ: http://www.ourkarnataka.com/images/others/shenibhat.jpg   

ಪ್ರತಿಕ್ರಿಯೆಗಳು

<<ಕಾಲದಕನ್ನಡಿ: “ಶೇಣಿ ಎ೦ಬ ತಾಳಮದ್ದಲೆ ಅರ್ಥದಾರಿಕೆಯ ಭೀಷ್ಮ“ ರಿಗೊ೦ದು ನುಡಿ ನಮನ>> ಕಾಲದಕನ್ನಡಿ: “ಶೇಣಿ ಎ೦ಬ ಯಕ್ಷಗಾನಲೋಕದ ಭೀಷ್ಮ" ರಿಗೊ೦ದು ನುಡಿನಮನ ಆತ ಬರೀ ತಾಳಮದ್ದಲೆ ಅರ್ಥಗಾರಿಕೆಯಲ್ಲಲ್ಲ, ಯಕ್ಷಗಾನಲೋಕಕ್ಕೇ ಭೀಷ್ಮರೆನಿಸಿಕೊಂಡವರು.

ಹೆಗಡೆಯವರೇ, ಶೇಣಿಯವರು ವೇಷಧಾರಿಯೂ ಹೌದು! ಅರ್ಥಧಾರಿಯೂ ಹೌದು! ಆದರೆ ಅವರನ್ನು ಹೆಚ್ಚಾಗಿ ಗುರುತಿಸುವುದು ತಾಳಮದ್ದಲೆ ಕ್ಷೇತ್ರದ ಅರ್ಥಧಾರಿಯೆ೦ದೇ! ವೇಷಧಾರಿ ಶೇಣಿಯವರಿಗಿ೦ತ ಅರ್ಥಧಾರಿ ಶೇಣಿಯವರೇ ಹೆಚ್ಚು ಪ್ರಸಿಧ್ಧರು. ಹಾಗೇ ಅವರು ಮನೆ ಮಾತಾದರು ಕೂಡಾ. ಅದಕ್ಕೆ ಶೀರ್ಷಿಕೆಯಲ್ಲಿ ತಾಳಮದ್ದಲೆ ಎ೦ಬುದನ್ನೇ ಸೇರಿಸಿದ್ದೇನೆ. ನಮಸ್ಕಾರಗಳೊ೦ದಿಗೆ,

ಹಾಗೆ ಮಾಡಿದಲ್ಲಿ, ಅವರ ವ್ಯಕ್ತಿತ್ವವನ್ನು ಕುಬ್ಜಗೊಳಿಸಿದಂತಾಗುತ್ತದೆ. ಅವರನ್ನು ಎಲ್ಲರೂ ಕರೆಯುತ್ತಿದ್ದುದು "ಯಕ್ಷಗಾನ ಲೋಕದ ಭೀಷ್ಮ"ನೆಂದೇ. ಅವರನ್ನಲ್ಲದೇ ಕೆರೆಮನೆ ಮಹಾಬಲ ಹೆಗಡೆಯವರನ್ನೂ ಇದೇ ಹೆಸರಿನಿಂದ ಸಂಬೋಧಿಸುತ್ತಾರೆ. http://mangalorean.c...

ಶೇಣಿಯವರದ್ದು ಅದ್ಭುತ ಮಾತುಗಾರಿಕೆ ಎನ್ನುವುದೇನೋ ಸರಿಯೇ. ಆದರೆ ಅವರು ರಾವಣನ ಯಾ ಯಾವುದೇ ಖಳ ನಾಯಕನ ಪಾತ್ರವನ್ನು ಮಾಡುತ್ತಿದ್ದರೂ ಆ ಪಾತ್ರವೇ ನಾಯಕನ ಪಾತ್ರಕ್ಕಿಂತಲೂ ಮೇಲಿನದು ಎಂದು ಸಾಧಿಸಲು ಪ್ರಯತ್ನ ಮಾಡುತ್ತಿದ್ದರು.. ಇದು ಎಷ್ಟು ಸರಿ ಎಂಬುದೇ ಪ್ರಶ್ನೆ.. ಆ ಖಳ ನಾಯಕನನ್ನು ವೈಭವಯುತವಾಗಿ ಚಿತ್ರಿಸಲೆಂದು ಇತರ ಪಾತ್ರಗಳನ್ನೂ ಅನಗತ್ಯವಾಗಿ ಅವಹೇಳನ ಮಾಡುತ್ತಿದ್ದುದು, ವಿತಂಡ ವಾದ ಮಾಡುವುದು ಸರಿಯೇ?

>>ಆದರೆ ಅವರು ರಾವಣನ ಯಾ ಯಾವುದೇ ಖಳ ನಾಯಕನ ಪಾತ್ರವನ್ನು ಮಾಡುತ್ತಿದ್ದರೂ ಆ ಪಾತ್ರವೇ ನಾಯಕನ ಪಾತ್ರಕ್ಕಿಂತಲೂ ಮೇಲಿನದು ಎಂದು ಸಾಧಿಸಲು ಪ್ರಯತ್ನ ಮಾಡುತ್ತಿದ್ದರು.. ಇದು ಎಷ್ಟು ಸರಿ ಎಂಬುದೇ ಪ್ರಶ್ನೆ.. ಆ ಖಳ ನಾಯಕನನ್ನು ವೈಭವಯುತವಾಗಿ ಚಿತ್ರಿಸಲೆಂದು ಇತರ ಪಾತ್ರಗಳನ್ನೂ ಅನಗತ್ಯವಾಗಿ ಅವಹೇಳನ ಮಾಡುತ್ತಿದ್ದುದು, ವಿತಂಡ ವಾದ ಮಾಡುವುದು ಸರಿಯೇ?<< ಕೆಲವು ಟೀಕಾಕಾರರೂ ಈ ಪ್ರಶ್ನೆಯನ್ನು ಶೇಣಿಯವರ ಬಗ್ಗೆ ಎತ್ತಿದ್ದಾರೆ. ಆದರೆ ಅವರು ಪಾತ್ರಗಳ ಒಳಹೊಕ್ಕು, ತಪ್ಪುಗಳನ್ನು ಯಾ ಸರಿಗಳನ್ನು ವಿಶ್ಲೇಷಿಸುತ್ತಿದ್ದರು. ದುರ್ಯೋಧನ ಹಾಗೂ ರಾವಣ ಎ೦ದ ಕೂಡಲೇ ನಮ್ಮ ಮು೦ದಿರುವುದು ದುಷ್ಟರೆ೦ಬ ಕಲ್ಪನೆ.ಆದರೆ ಅವರು ಅವರಲ್ಲಿನ ಒಳ್ಳೆಯತನವನ್ನೂ ವಿಮರ್ಶಿಸುತ್ತಾ, ಸನ್ನಿವೇಶಗಳಿಗೆ ತಕ್ಕ೦ತೆ ಪಾತ್ರಗಳ ವಿಶ್ಲೇಷಣೆ ಮಾಡುತ್ತಿದ್ದರೆ೦ಬುದು ಹೆಚ್ಚು ಸಮ೦ಜಸವೆನಿಸುತ್ತದೆ. ವೈಯಕ್ತಿಕ ಅವಹೇಳನ ಮಾಡುತ್ತಿರಲಿಲ್ಲ ಎನ್ನುವುದು ಮಾತ್ರ ಸತ್ಯವಾದದ್ದು! ಪಾತ್ರಗಳ ಅವಹೇಳನವೆ೦ದರೆ, ಸೀತಾ ಪರಿತ್ಯಾಗದಲ್ಲಿ ಅವರೊಮ್ಮೆ ಪ್ರಶ್ನೆ ಕೇಳುತ್ತಾರೆ ರಾಮನ ಪಾತ್ರಧಾರಿಗೆ! ನಿನ್ನ ಹೆ೦ಡತಿಯ ಮೇಲೆ ನಿನಗೆ ನ೦ಬಿಕೆ ಇಲ್ಲವೆ? ಹಾಗಾದರೆ ನೀನು ಹೇಗೆ ಸ೦ಸಾರ ನಡೆಸುವೆ? ಈ ಪ್ರಶ್ನೆ ಸಮಕಾಲೀನವೂ ಹೌದು! ಶ್ರೀ ರಾಮನ ಆಗಿನ ಸ೦ಶಯಾತ್ಮಕ ವ್ಯಕ್ತಿತ್ವಕ್ಕೂ ಸಮ೦ಜಸವಾಗುತ್ತದೆ! ಇದನ್ನು ಕೆಲವು ಟೀಕಾಕಾರರು ವಿತ೦ಡವಾದವೆ೦ದು, ಎದುರು ಪಾತ್ರಗಳ ಅವಹೇಳನವೆ೦ದು ಹೇಳಿದ್ದಾರೆ!

ಅದ್ಭುತ ಕಲೆಯುಳ್ಳ ಅಪರೂಪದ ವ್ಯಕ್ತಿ ಪರಿಚಯಕ್ಕೆ ಧನ್ಯವಾದಗಳು. ಅರ್ಥಗಾರಿಕೆ ಎಂದರೇನು?ತಿಳಿಯಲಿಲ್ಲ ಸ್ವಲ್ಪ ವಿವರಿಸಿ..

>>ಅರ್ಥಗಾರಿಕೆ ಎಂದರೇನು?ತಿಳಿಯಲಿಲ್ಲ ಸ್ವಲ್ಪ ವಿವರಿಸಿ..>> ಶ್ರೀಕಾ೦ತರೇ, ತಾಳಮದ್ದಲೆ ಎ೦ಬುದೊ೦ದು ಯಕ್ಷಗಾನದ ಮತ್ತೊ೦ದು ಪ್ರಾಕಾರ.ಮಲೆನಾಡು ( ಹೆಚ್ಚಾಗಿ ಶಿವಮೊಗ್ಗ),ಧಕ್ಷಿಣ ಕನ್ನಡ ಮತ್ತು ಉತ್ತರಕನ್ನಡ ಜಿಲ್ಲೆಗಳಲ್ಲಿ ಇದು ಹೆಚ್ಚಾಗಿ ಕ೦ಡುಬರುತ್ತದೆ.ಯಕ್ಷಗಾನದ ಒ೦ದು ಅ೦ಗವಾದ ಇದು ಯಕ್ಷಗಾನದೊ೦ದಿಗೇ ಬೆಳೆದು ಬ೦ದಿದ್ದರೂ ಕೆಲ ಯಕ್ಷಗಾನ ಸ೦ಶೋಧಕರು, ಯಕ್ಷಗಾನಕ್ಕಿ೦ತಲೂ ಮೊದಲೇ ಇದರ ಅಸ್ತಿತ್ವವೆತ್ತೆ೦ದು ವಿಮರ್ಶಿಸುತ್ತಾರೆ.ಒಬ್ಬ ಭಾಗವತರು, ಮದ್ದಲೆಗಾರ, ಹಾರ್ಮೋನಿಯಂ ಮತ್ತೆ ಜೊತೆಗಿಬ್ಬರು ಅರ್ಥಧಾರಿಗಳಿದ್ದರೆ,( ಅರ್ಥಧಾರಿಗಳ ಸ೦ಖ್ಯೆ ಹೆಚ್ಚಾಗಲೂ ಬಹುದು) ತಾಳಮದ್ದಲೆ ಕಾರ್ಯಕ್ರಮ ಆರ೦ಭವೆ೦ದರ್ಥ. ಮಾತಿಗೆ ಮತ್ತು ಚರ್ಚೆಗೆ ಹೆಚ್ಚು ಅವಕಾಶವಿರುವ ಪ್ರಸಂಗಗಳನ್ನು ಆಯ್ದುಕೊಂಡು ತಾಳಮದ್ದಲೆ ಜರುಗುತ್ತದೆ. ಪಂಚೆ-ಶಾಲು ಹೊದ್ದುಕೊಂಡು ಎದುರು ಬದರಾಗಿ ಕುಳಿತುಕೊಳ್ಳುವ ಅರ್ಥಧಾರಿಗಳು, ಪ್ರಸ೦ಗದ ಪಾತ್ರಧಾರಿ ಗಳಾಗುತ್ತಾರೆ. ಭಾಗವತರು ಹಾಡಿದ ಪ್ರಸ೦ಗದ ಪದ್ಯಗಳ ಭಾವಾರ್ಥವನ್ನು ತಮ್ಮದೇ ಅದ್ದ ದೃಷ್ಟಿಕೋನದಲ್ಲಿ,ಪ್ರಸ೦ಗದ ಮೂಲ ಕಥೆಗೆ ಯಾವುದೇ ಲೋಪ ಬರದ ಹಾಗೇ ಸಮಕಾಲೀನ ಸಮಸ್ಯೆಗಳು,ನ್ಯಾಯ ಶಾಸ್ತ್ರ,ವೇದ, ಉಪನಿಷತ್ಗಳಿ೦ದಾಯ್ದ ಶ್ಲೋಕ, ಕಥೆ ಮು೦ತಾದ ಉದಾಹರಣೆಗಳ ಸಮೇತ ಭಾವಾರ್ಥವನ್ನು ಹೇಳುತ್ತಾ ಹೋಗುತ್ತಾರೆ. ಇದೇ ಅರ್ಥದಾರಿಕೆ. ಅರ್ಥಧಾರಿಗಳು ಸದಾ ಅಧ್ಯಯನಶೀಲ ರಾಗಿರುತ್ತಾರಲ್ಲದೆ,ಪ್ರಸ೦ಗಗಳ ಪಾತ್ರಗಳ ಹೊಳಪನ್ನು ಒರೆಗೆ ಹಚ್ಚುತ್ತಾ ಹೋಗುತ್ತಾರೆ. ಒಮ್ಮೊಮ್ಮೆ, ಅರ್ಥಧಾರಿಗಳ ನಡುವೆ ಪ್ರಸ೦ಗ ದಲ್ಲಿನ ಯಾವುದೋ ವಿಚಾರಕ್ಕಾಗಿ ತೀವ್ರ ವಾಗ್ವಾದವಾಗುವುದು೦ಟು. ಜಬ್ಬಾರ್ ಸುಮೋ ( ಮುಸ್ಲಿ೦ ಅರ್ಥಧಾರಿ, ಇತ್ತೀಚೆಗೆ ತು೦ಬಾ ಪ್ರಸಿಧ್ಧರಾಗಿರುವ ಅರ್ಥಧಾರಿಗಳಲ್ಲೊಬ್ಬರು) ಒಮ್ಮೆ ವಾಲಿ ವಧೆ ಯಲ್ಲಿ ಶ್ರೀ ರಾಮನಿಗೆ “ಅಲ್ಲಯ್ಯಾ ಶ್ರೀರಾಮ, ಅಯೋಧ್ಯೆಯ೦ಥಾ ಪವಿತ್ರಭೂಮಿಯನ್ನು ಮ೦ಥರೆಯ೦ಥಹ ದಾಸಿಯ ಕೈಗೆ ನೀಡಿದರಲ್ಲಯ್ಯಾ?“ ಎ೦ಬ ಪ್ರಶ್ನೆ ಕೇಳುತ್ತಾರೆ. ಶ್ರೀ ರಾಮನ ಪಾತ್ರಧಾರಿ ನಿರುತ್ತರನಾಗುತ್ತಾನೆ. ಸಮಜಾಯಿಷಿ ನೀಡುತ್ತಾನೆ ಕೂಡಾ. ಆದರೆ ಜಬ್ಬಾರ್ ಸಿಉಮೋ ರವರು ಕೇಳಿದ ಪ್ರಶ್ನೆಯ ಗೂಡಾರ್ಥ ಎಷ್ಟು ಎ೦ಬುದು ನಮಗೆ ಸಮ ಕಾಲೀನವಾಗಿ ನೋಡಿದರೂ, ಪ್ರಸ೦ಗಾರ್ಥವಾಗಿ ನೋಡಿದರೂ ಮನದಟ್ಟಾಗುತ್ತದೆ. ಹೀಗೆ ತಾಳಮದ್ದಲೆ ಯೆ೦ಬುದು ಅರ್ಥಧಾರಿಗಳ ಅಧ್ಯಯನ ದಕ್ಷತೆಯ ಮೇಲೆ ಅವಲ೦ಬಿತವಾಗಿರುತ್ತದೆ. ಭಾಗವತರು ಹಾಡಿದ ಪ್ರಸ೦ಗದ ಪದ್ಯಗಳ ಭಾವಾರ್ಥವನ್ನು ಸ್ವಲ್ಪವೂ ಲೋಪವಿಲ್ಲದ೦ತೆ ಅರ್ಥೈಸುವುದೇ ಅರ್ಥದಾರಿಕೆ. ಇಲ್ಲಿ ಬಣ್ಣ-ಬಣ್ಣದ ವೇಷಗಳ ಕುಣಿತದ ಅಬ್ಬರವಿರುವುದಿಲ್ಲ. ಕೇವಲ ಚರ್ಚೆಯಷ್ಟೇ. ನಮಸ್ಕಾರಗಳೊ೦ದಿಗೆ,

ಅರ್ಥಗಾರಿಕೆ ಬಗ್ಗೆ ನಾವಡರು ಹೇಳಿದ್ದಕ್ಕೆ ನನ್ನದೊಂದಿಷ್ಟು.. ಅರ್ಥಗಾರಿಕೆ ಎಂಬುದು ಯಕ್ಷಗಾನ ಪ್ರದರ್ಶನಗಳಲ್ಲೂ, ಯಕ್ಷಗಾನ ತಾಳಮದ್ದಲೆಗಳಲ್ಲೂ ಇರುತ್ತದೆ. ಆದರೆ ತಾಳಮದ್ದಲೆಯಲ್ಲಿ ಕುಣಿತ ಇರುವುದಿಲ್ಲವಾಗಿ ಸಂಭಾಷಣೆ ಹಾಗೂ ಹಿಮ್ಮೇಳಗಳೇ ಪ್ರಧಾನ. ಹಿಮ್ಮೇಳದವರು (ಅಂದರೆ ಮುಖ್ಯವಾಗಿ ಭಾಗವತರು) ಸಂದರ್ಭಕ್ಕನುಗುಣವಾಗಿ ಹೇಳುವ ಪದ್ಯಕ್ಕೆ ಸಂಬಂಧಿಸಿದ ವಿಚಾರಗಳನ್ನು ಸಂಭಾಷಣೆಯ ಮೂಲಕ ಚರ್ಚೆ ಮಾಡುವುದಕ್ಕೆ ಅರ್ಥಗಾರಿಕೆ ಎನ್ನುತ್ತಾರೆ. ನಾವಡರು ಜಬ್ಬಾರ್ ಸಮೋ ರವರ ಬಗ್ಗೆ ಮಾಹಿತಿ ಉಲ್ಲೇಖಿಸಿದ್ದು ಅಭಿನಂದನಾರ್ಹ. ಏಕೆಂದರೆ ಸಣ್ಣ ಸಣ್ಣ ವಿಷಯಗಳಿಗೂ ಕೋಮು ಗಲಭೆಗಳಾಗುತ್ತಿರುವ ಕರಾವಳಿಯಲ್ಲಿ, ವಿದೇಶಿ ದುಡ್ಡಿನ ಮಹಿಮೆ ಏನೆಲ್ಲಾ ಅವಾಂತರ ಸೃಷ್ಟಿಸುತ್ತಿರುವ ಇಂಥಾ ಸನ್ನಿವೇಶದಲ್ಲಿಯೂ ಸಹ ಜಬ್ಬಾರ್ ಸಮೋ ಎಂಬ ಮುಸ್ಲಿಂ ಕಲಾವಿದರು ಸಕ್ರಿಯವಾಗಿ ಇನ್ನೂ ತಾಳಮದ್ದಲೆಗಳಲ್ಲಿ ಗುರುತಿಸಿಕೊಂಡಿರುವುದು ನಿಜಕ್ಕೂ ಗಮನಾರ್ಹ. ನನ್ನ ನೆನಪು ಸರಿಯಿದ್ದಲ್ಲಿ, ಅವರೇ ಒಮ್ಮೆ ಹೇಳಿದಂತೆ ರಮಾದಾನ್ ವ್ರತಾಚರಣೆ ಮಾಸವೊಂದನ್ನು ಹೊರತುಪಡಿಸಿ ಇತರೆ ಎಲ್ಲಾ ಸಮಯದಲ್ಲೂ ಅವರು ತಾಳಮದ್ದಲೆಗೆ ಹಾಜರ್. ಇನ್ನು ಶೇಣಿಯವರ ಮಾತುಗಾರಿಕೆ ಬಗ್ಗೆ ನನ್ನ ಈ ಹಿಂದಿನ ಕಾಮೆಂಟು: ನಾನೂ ಶೇಣಿಯವರ ಅನೇಕ ತಾಳಮದ್ದಲೆ ಕ್ಯಾಸೆಟ್ ಕೇಳಿದ್ದೇನೆ. ನನಗೆ ಇನ್ನೂ ಚೆನ್ನಾಗಿ ನೆನಪಿರುವುದು "ಮಾಗಧ ವಧೆ"ಯ ಮಾಗಧ, "ವಿಭೀಷಣ ನೀತಿ"ಯ ಇಂದ್ರಜಿತು, "ವಾಲಿ ಮೋಕ್ಷ"ದ ವಾಲಿ, "ಶರಸೇತು ಬಂಧನ"ದ ಆಂಜನೇಯ ಇತ್ಯಾದಿ. ಕೆಲವೊಮ್ಮೆ ಅವರ ಮಾತುಗಾರಿಕೆ ಅತಿ ಎನಿಸುವುದು ನನ್ನ ತಿಳುವಳಿಕೆಯ ಮಿತಿಯಲ್ಲಿ ನಿಜವೆನಿಸುತ್ತದೆ. ಯಕ್ಷಗಾನದ ಅಭಿಮಾನಿಗಳಾದ ಕೆಲವರು ಹೇಳುವಂತೆ ಶೇಣಿ ಹಾಗೂ ಸಾಮಗರ ನಡುವಿನ ಮಾತಿನ ಯುದ್ದ ಬಿಸಿಯೇರಿದಂತೆ ಸಮಯ ಹೋಗುವುದೇ ಗೊತ್ತಾಗುತ್ತಿರಲಿಲ್ಲವಂತೆ. ಬಹುಶಃ ಮಾತುಗಾರಿಕೆಯಲ್ಲಿ ಶೇಣಿಯವರನ್ನು ಸರಿಗಟ್ಟುವ ಕೆಲವೇ ಗಣ್ಯರ ಪೈಕಿ ಸಾಮಗರೂ (ಮಲ್ಪೆ ರಾಮದಾಸ ಸಾಮಗ) ಒಬ್ಬರು. ಕುಂಬ್ಳೆ ಸುಂದರ ರಾವ್ ಅವರದೂ ಕೂಡ ಉತ್ತಮ ಮಾತುಗಾರಿಕೆಯೇ. ಪ್ರಾಥಮಿಕ ಶಾಲೆಯಲ್ಲಿದ್ದಾಗ ಒಮ್ಮೆ ನಮ್ಮ ಮನೆಯ ಹತ್ತಿರದ ಜಾಗದಲ್ಲೇ ನಡೆದ ಆಟವೊಂದರಲ್ಲಿ ವೇಷಧಾರಿಯಾಗಿ ಶೇಣಿಯವರು ಆಗಮಿಸಿದ್ದಿದು ಹಾಗೂ ಅವರನ್ನು ಹತ್ತಿರದಿಂದ ನೋಡುವ ಅವಕಾಶ ಸಿಕ್ಕಿದ್ದು ನನಗಿನ್ನೂ ನೆನಪಿದೆ. ಏನೇ ಆಗಲಿ, ಕುಣಿತದಲ್ಲಿನ ತಮ್ಮ ನ್ಯೂನತೆಯನ್ನು ಮಾತುಗಾರಿಕೆಯಿಂದ ಸ್ವಲ್ಪ ಜಾಸ್ತಿಯೇ ಎನಿಸುವಂತೆ ಸರಿದೂಗಿಸುತ್ತಿದ್ದರು ಎನ್ನುವುದು ಸರಿಯಾಗಬಹುದು.

ನಾವಡರೆ,ಹಣ್ಣು ಕೇಳಿದ್ದಕ್ಕೆ ಪೂರ್ತಿ ಮರವನ್ನೇ ನೀಡಿದಿರಿ. ಅರ್ಥಗಾರಿಕೆಯ ಬಗ್ಗೆ ಮಾಹಿತಿಯನ್ನು ಸಂಭಾಷಣೆ(ಉದಾಹರಣೆ)ಯ ಜೊತೆಗೆ ತಿಳಿಸಿದ ನಾವಡರಿಗೆ ,ಹೆಚ್ಚಿನ ಮಾಹಿತಿಯನ್ನು ನೀಡಿದ ಪ್ರಸನ್ನರಿಗೆ ನಾನು ಆಭಾರಿ. ಇನ್ನು ಒಮ್ಮೆ ಕ್ಯಾಸೆಟ್ ನಲ್ಲಿ ಕೇಳಿದರೆ ತಿಳುವಳಿಕೆ ಪಕ್ವವಾಗುವುದು.

>>ಏನೇ ಆಗಲಿ, ಕುಣಿತದಲ್ಲಿನ ತಮ್ಮ ನ್ಯೂನತೆಯನ್ನು ಮಾತುಗಾರಿಕೆಯಿಂದ ಸ್ವಲ್ಪ ಜಾಸ್ತಿಯೇ ಎನಿಸುವಂತೆ ಸರಿದೂಗಿಸುತ್ತಿದ್ದರು ಎನ್ನುವುದು ಸರಿಯಾಗಬಹುದು<< ಹೌದು ಪ್ರಸನ್ನರೇ, ಶೇಣಿಯವರು ಕುಣಿತದಲ್ಲಿ ಭಾರೀ ಡಲ್ಲು. ತನಗೆ ಕುಣಿತ ಸಾಧ್ಯವಿಲ್ಲವೆ೦ದೂ, ಅಥವಾ ಅದು ತನ್ನ ನ್ಯೂನತೆಯೆ೦ದೂ ತಿಳಿದೇ ಅವರು ಅರ್ಥಗಾರಿಕೆಯತ್ತ ಹೆಚ್ಚೆಚ್ಚು ಒಲವು ತೋರಿಸತೊಡಗಿದರು.ಅಧ್ಯಯನಶೀಲರಾಗತೊಡಗಿಸ್ದರು. ಹಿ೦ದಿನ ಹರಿಕಥ ದಾಸರಗಿದ್ದ ಹಿನ್ನೆಲೆಯೂ ಇತ್ತಲ್ಲ.ಎಲ್ಲಸೇರಿ ಶೇಣಿ ಎ೦ಬ ಆಧ್ಬುತ ಅರ್ಥಧಾರೀ ವಾಕ್ಪಟುವಿನ ಉದಯವಾಯಿತು. ಇನ್ನು ಜಬ್ಬಾರ್ ಸುಮೋ ಬಗ್ಗೆ ಹೇಳುವುದಾದರೆ ಅವರೊ೦ದು ಅಧ್ಬುತ. ರಾಮಾಯಣ, ಮಹಾಭಾರತ, ಭಾಗವತ, ಹಾಗೂ ಉಪನಿಷತ್ಗಳನ್ನು ಅಧ್ಯಯನ ಮಾಡಿದ್ದಾರೆ.ಅವರೂ ಸಹ ಅವುಗಳನ್ನು ಪ್ರಸ೦ಗದ ಅರ್ಥಗಾರಿಕೆಯ ನಡುವೆ ಬಳಸಿಕೊಳ್ಳುವುದೊಮ್ಮೊಮ್ಮೆ ಶೇಣಿಯವರನ್ನು ನೆನಪಿಸುತ್ತದೆ. ಪೂರಕ ಮಾಹಿತಿಗೆ ಧನ್ಯವಾದಗಳನ್ನು ಅರ್ಪಿಸುತ್ತಿದ್ದೇನೆ. ನಮಸ್ಕಾರಗಳೊ೦ದಿಗೆ, ನಿಮ್ಮವ ನಾವಡ.