ಅನಿಷ್ಟಕ್ಕೆಲ್ಲ ಶನೀಶ್ವರನೇ ಹೊಣೆಯೆನ್ನುವ ಪ್ರತಾಪ....

0

(ಪ್ರತಾಪ ಸಿಂಹರ ’ಕುರುಡು ಕಾಂಚಾಣ...’ ಲೇಖನದ ಕುರಿತು)

ತೋಳ ಹಳ್ಳಕ್ಕೆ ಬಿದ್ರೆ ಆಳಿಗೊಂದು ಕಲ್ಲು ಅನ್ನುವ ಹಾಗೆ, ಈಗ recession ನೆವ ಆಗಿಟ್ಟುಕೊಂಡು ಎಲ್ಲರೂ ಐಟಿ ಕ್ಷೇತ್ರದತ್ತ ಬೆರಳು ತೋರಿಸ್ತಾ ಇದ್ದಾರೆ. ಆರ್ಥಿಕ ಹಿಂಜರಿತ ಅನ್ನೋ ಕಾರಣಕ್ಕೆ ಐಟಿ ಕ್ಷೇತ್ರ ಜ್ಞಾಪಕ ಬಂದಿದೆ. ನಮ್ಮ ದೇಶದ ಮಾರುಕಟ್ಟೆಯನ್ನು ವಿದೇಶೀಯರಿಗೆ ಮುಕ್ತವಾಗಿ ತೆರೆದಿಟ್ಟು, ಅವರೆಲ್ಲ ಎಲ್ಲೆಲ್ಲಿಂದಲೋ ಬಂದು ನಮ್ಮ ಹಣದಿಂದ ಅವರ ಜೇಬನ್ನ ತುಂಬಿಸಿಕೊಳ್ಳುತ್ತಿರುವಾಗ, ನಾವು ಸ್ವಲ್ಪ ಅವರ ಹಣವನ್ನು ನಮ್ಮೆಡೆಗೆ ಸೆಳೆಯುವುದರಲ್ಲಿ ತಪ್ಪು ಕಾಣಿಸ್ತಾ ಇದೆ! ಭಾರತವನ್ನು ಜಾಗತಿಕ ಮಟ್ಟದಲ್ಲಿ ಗುರುತಿಸಿಕೊಳ್ಳುವಂತೆ ಮಾಡಿದ ಹೆಮ್ಮೆಯ ಕ್ಷೇತ್ರ ಇಂದು ದುರಹಂಕಾರದ ಗೂಡಿನಂತೆ ಕಾಣುತ್ತಿದೆ. ಸಮಸ್ಯೆಯೊಂದು ರೂಪುಗೊಳ್ಳಲು ಎಲ್ಲರೂ ಜೊತೆಗಿದ್ದರು. ಅದರ ಪರಿಣಾಮವನ್ನೆದುರಿಸುವಾಗ ಹೊಣೆಗೇಡಿತನ. ಸರ್ವಜ್ಞ ಸರಿಯಾಗೇ ಹೇಳಿದಾನೆ

ಮಾಡಿದುದ ಒಪ್ಪದನ | ಮೂಡನಾಗಿಪ್ಪವನ |

ಕೂಡಿ ತಾ ಮಾಡಿ ಇದಿರಾಡಿಕೊಳ್ಳುವನ |

ನೋಡಿದರೆ ತೊಲಗು ಸರ್ವಜ್ಞ |

ಇಂದು ಐಟಿ ಕ್ಷೇತ್ರದ ವೃತ್ತಿ ಪರತೆ ಮತ್ತದರ ಸಾಮಾಜಿಕ ಜವಾಬ್ದಾರಿಯ ಬಗ್ಗೆ ಪ್ರಶ್ನೆಗಳೆದ್ದಿವೆ, ಬೇರೆ ಯಾವ ಕ್ಷೇತ್ರಗಳಿಗೂ ಇವು ಅನ್ವಯಿಸುವುದಿಲ್ಲದಂತೆ??! ಇಂದು ಮಾಧ್ಯಮದವರೆಂದರೆ ಯಾವ ಚಿತ್ರ ಕಣ್ಣಿಗೆ ಬರುತ್ತದೆ? ಅವರ ಸಾಮಾಜಿಕ ಜವಾಬ್ದಾರಿ ಏನು? ಕಂಡದ್ದು ಕಾಣದ್ದು ಎಲ್ಲದಕ್ಕೂ ಮಸಾಲೆ ಸೇರಿಸಿ, ಜನರಿಗೆ ಬೇಕೋ ಬೇಡವೋ, ದೇಶದ, ಸಮಾಜದ ಹಿತರಕ್ಷಣೆಯ ದೃಷ್ಟಿಯಿಂದ ಒಳ್ಳೆಯದೋ, ಕೆಟ್ಟದ್ದೋ, ಕೇವಲ ತಮ್ಮ TRP ಗಳಿಗಾಗಿ, circulation ಗಳಿಗಾಗಿ ವರದಿ ಮಾಡುವ ವ್ಯಕ್ತಿಗಳೆಂದೇ? ಇಂದು ವೈದ್ಯ ವೃತ್ತಿ ಎತ್ತ ಸಾಗುತ್ತಿದೆ? ಹಣ ಕೊಡದಿದ್ದರೆ ಶವವೂ ಇಲ್ಲ, ಅಂತ್ಯಸಂಸ್ಕಾರವೂ ಇಲ್ಲ. ಹಣಕ್ಕಾಗಿ, ಸತ್ತವರನ್ನೂ ಬದುಕಿದ್ದಾರೆಂದು ಹೇಳಿ, ಕಾಲಿನುಗುರಿನಿಂದ ತಲೆಕೂದಲವರೆಗೆ ಎಲ್ಲ ರೀತಿಯ Tests ಗಳನ್ನೂ ಮಾಡಿ, ಕೊನೆಗೆ ದೇವರು ನಮ್ಮೊಂದಿಗಿಲ್ಲವೆಂದು ಹೇಳಿ, ದೊಡ್ಡ ಬಿಲ್ಲ್ ಒಂದನ್ನು ಕೈಗಿಡುತ್ತಾರೆ. ಇದರಲ್ಲೇನಿದೆ ವೃತ್ತಿಪರತೆ? ೩ ನ್ನು ೬ ಮಾಡಿ, ೬ ನ್ನು ೩ ಮಾಡಿ, ಕಳ್ಳಕಾಕರೆಲ್ಲ ಜೈಲಿನಿಂದಲೇ ಸ್ಪರ್ಧಿಸಿ ಗೆಲ್ಲುವಂತೆ ಮಾಡುವ ನ್ಯಾಯವೃತ್ತಿಯಲ್ಲೇನಿದೆ ವೃತ್ತಿಪರತೆ? ಯಾರಿಗಿದೆ ವೃತ್ತಿ ನಿಷ್ಠೆ? ಗಾಳಿ ಬಂದಾಗ ತೂರಿಕೋ. ಇದು ಐಟಿ ಕ್ಷೇತ್ರಕ್ಕೆ ಮಾತ್ರ ಮೀಸಲಾಗಿಲ್ಲ. ’ಮದ’ ದುಡ್ಡಿನದು ಸ್ವಾಮಿ, ವೃತ್ತಿಯದಲ್ಲ.

ಸಾಮಾಜಿಕ ಜವಾಬ್ದಾರಿಯೆನ್ನುವುದು ಒಂದು ವೃತ್ತಿಗೆ ಮೀಸಲೇ? ಇಂದು ಸಾಮಾಜಿಕ ವೃತ್ತಿಯಲ್ಲಿರುವವರಿಗೇ (ಆರಕ್ಷಕರು, ಮಾಧ್ಯಮಗಳು ಇತ್ಯಾದಿ) ಅವುಗಳ ಬಗ್ಗೆ ಅರಿವಿಲ್ಲದಿರುವಾಗ ಸಾಮಾನ್ಯ ’Salary Oriented’ ಗುಂಪಿನಿಂದ ಅದರ ನಿರೀಕ್ಷಣೆ ಎಷ್ಟು ಸರಿ. ಹಾಗೆಂದ ಮಾತ್ರಕ್ಕೆ ಅವರಿಗೆ ಇಲ್ಲವೆಂದಲ್ಲ. ತಪ್ಪುಗಳನ್ನೇನು ಯಾರು ಬೇಕಾದರೂ ಎತ್ತಾಡಬಹುದು. ಆದರೆ, ಒಂದು ಸಂಸ್ಥೆಯನ್ನು ಹುಟ್ಟು ಹಾಕಿ ಅದು ಜಾಗತಿಕ ಮಟ್ಟದಲ್ಲಿ ತನ್ನನ್ನು ಗುರುತಿಸಿಕೊಳ್ಳುವಂತೆ ಮಾಡಬೇಕಾದಲ್ಲಿ ಇರಬೇಕಾದ ಪರಿಶ್ರಮ, ಸಾಧನೆ, ಚಾಕಚಕ್ಯತೆ ಬಗ್ಗೆ ಅರಿಯದ ಅಜ್ಞಾನಿಗಳು ಮಾತ್ರ ಹೀಗೆ ಮೂಗೆಳೆಯಲು ಸಾಧ್ಯ. ಇನ್ನೊಮ್ಮೆ ಈ ಸಂಸ್ಥೆಗಳಿಂದ ಎಷ್ಟು ಶಾಲೆಗಳು ಎಷ್ಟು ಹಳ್ಳಿಗಳು ದತ್ತು ತೆಗೆದು ಕೊಳ್ಳಲ್ಪಟ್ಟಿವೆ, ಎಷ್ಟು ವಿದ್ಯಾರ್ಥಿಗಳು ಫಲ ಪಡೆದುಕೊಳ್ಳುತ್ತಿದ್ದಾರೆ, ಎಷ್ಟು ಜನ ಉದ್ಯೋಗಿಗಳು ಇಂತಹ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿದ್ದಾರೆ ಇವೆಲ್ಲದರ ವಿವರಗಳನ್ನು ತಿಳಿದುಕೊಳ್ಳಿ. ಇಂದು ಒಂದು ಕಂಪನಿ ಲಾಭ-ನಷ್ಟಗಳು ಎಲ್ಲರಿಗೂ ಗೊತ್ತಾಗುತ್ತದೆ, ಆದರೆ ಅದೇ ಸಂಸ್ಥೆಯ ಸಾಮಾಜಿಕ ಕಾರ್ಯಗಳು ಗೊತ್ತಾಗುವುದಿಲ್ಲ. ಕಾರಣ ಅವುಗಳನ್ನು ಪ್ರಚಾರದ ದೃಷ್ಟಿಯಿಂದ ಮಾಡಿರುವುದಿಲ್ಲ, ಜವಾಬ್ದಾರಿ ದೃಷ್ಟಿಯಿಂದ ಮಾಡಲಾಗಿರುತ್ತದೆ. ವಿಪರ್ಯಾಸವೆಂದರೆ, ಇಂದು ಸೇವೆಯೆ ವೃತ್ತಿಯಾಗಿರುವ ವೈದ್ಯವೃತ್ತಿಯಲ್ಲೇ ಗ್ರಾಮ ಸೇವೆಯನ್ನು ಕಡ್ಡಾಯಗೊಳಿಸಬೇಕಾಗಿದೆ.

ಸ್ವಾತಂತ್ರ್ಯ ಹೋರಾಟದ ಸಮಯವನ್ನೂ, ಇಂದಿನ ಪರಿಸ್ಥಿತಿಯನ್ನೂ ಮತ್ತು ಐಟಿ ಉದ್ಯೋಗಿಗಳನ್ನು ಹೋಲಿಸುತ್ತಿದ್ದೀರಿ. ಆದರೆ ಯಾವ ಅರ್ಥದಲ್ಲಿ ಎಂಬುದೇ ಅರ್ಥವಗಲಿಲ್ಲವಷ್ಟೆ. ಬೇರೆ ಯಾವುದಾದರೂ ಕ್ಷೇತ್ರದ ಉದಾಹರಣೆಯನ್ನು ಈ ನಿಟ್ಟಿನಲ್ಲಿ ತೋರಿಸಿದರೆ, ಅರಿತುಕೊಳ್ಳಬಹುದು. ಬೇರಾವ ಉದ್ಯಮ ಕ್ಷೇತ್ರದಿಂದ ’Social Empowerment’ ಆಗಿದೆ? ಎಷ್ಟು ಆಗಿದೆ?

ಇಂದು ಎಲ್ಲ ವ್ಯವಹಾರಗಳೂ ಕೂತಲ್ಲೇ ಆಗಬೇಕು, ಅದೂ ತಕ್ಷಣ. ಯಾರಿಗೂ ಎಲ್ಲಿಯೂ ಕ್ಯೂ ನಲ್ಲಿ ನಿಂತು ಕೆಲಸ ಮಾಡಿಕೊಳ್ಳುವಷ್ಟು ವ್ಯವಧಾನವಿಲ್ಲ. ಎಲ್ಲಕ್ಕೂ ಧಾವಂತ. ಇಂತದೊಂದು ಜೀವನದಲ್ಲಿ ಐಟಿ ಎನ್ನುವುದು ಹಾಸು ಹೊಕ್ಕಾಗಿದೆ. ಎಲ್ಲೋ ಕುಳಿತುಕೊಂಡು ಕಾಫಿ ಹೀರುತ್ತಾ, ಒಬಾಮ ನ ಭಾಷಣ ಕೇಳಿ, ಮಾರ್ಟಿನ್ ಲೂಥರ್ ಕಿಂಗ್ ಮಾತನಾಡಿದಂತೆ ಆಯಿತು ಎಂದು ಲೇಖನ ಬರಿಯುವಾಗ ಐಟಿ ಇತ್ತು. ಭಾರತದ ಮೂಲೆಯಲ್ಲಿರುವ ರೋಗಿಯೊಬ್ಬನಿಗೆ ಆಸ್ಟ್ರೇಲಿಯಾದ ವೈದ್ಯನೊಬ್ಬನ ನೆರವು ಸಿಗೋವಾಗ್ಲು ಐಟಿ ಇದೆ. ಸುಮ್ನೆ ಹೋಗೋ Long Drive ನಲ್ಲು ಐಟಿ ಇದೆ. Late ಅಗತ್ತೆ, Traffic ನಲ್ಲಿ ಸಿಕ್ಕಿ ಹಾಕೊಂಡಿದಿನಿ, ಅಂತ ಅಮ್ಮನಿಗೆ ಸಮಾಧಾನ ಹೇಳೋ ಮೊಬೈಲ್ ಫೋನ್ ನಲ್ಲು ಐಟಿ ಇದೆ. ಸುಮ್ನೆ ಯಾರಿಂದಲೋ ತಪ್ಪಿಸ್ಕೊಳ್ಳೊಕೆ ಊರಲ್ಲಿಲ್ಲ ಅಂತ ಸುಳ್ಳು ಹೇಳೊ ಮೊಬೈಲ್ ಫೋನ್ ನಲ್ಲು ಐಟಿ ಇದೆ. ಮೊದಲು ಐಟಿ ಕ್ಷೇತ್ರದ ಆಳ ವಿಸ್ತಾರಗಳನ್ನ ತಿಳಿದುಕೊಳ್ಳಿ. ನಂತರ ಜನ ಸಾಮಾನ್ಯರಿಗೆ ತಿಳಿಸಿ. ಒಂದು ಸಾಮಾಜಿಕ ಸ್ಥಾನದಲ್ಲಿರೊ ನಿಮ್ಮಂತವರಿಗೇ ಅದು ತಿಳಿದಿಲ್ಲವಾದಲ್ಲಿ, ಜನ ಸಾಮಾನ್ಯರಿಗೆ ತಿಳಿಯದೆ ಇರುವುದರಲ್ಲಿ ಆಶ್ಚರ್ಯವೇನಿಲ್ಲ.

ಇಂದು ಹಾಲುಮಾರುವವನ, Corporation ಕಸ ಗುಡಿಸುವವನ, ಮನೆಕೆಲಸ ಮಾಡುವವಳ ಮಕ್ಕಳೂ ಕೂಡ ನಿಷ್ಟೆಯಿಂದ ಓದಿ, ಆ ನಿಮ್ಮ 'Welfare Oriented' ಸರ್ಕಾರದ ಖಜಾಂಜಿಗಳ Personal ಬೊಕ್ಕಸಕ್ಕೆ ಹಣ ಸುರಿಯದೆ, ವಿದ್ಯೆ, ಯೋಗ್ಯತೆಯ ಆಧಾರದ ಮೇಲೆ ದೊರೆಯುವ ಐಟಿ ಕೆಲಸಗಳಿಂದ ಸ್ವಂತ ಕಾಲುಗಳ ಮೇಲೆ ನಿಂತಿದ್ದಾರೆ. ಇವರಿಗಿಂತಲೂ ಹಣದ ಬೆಲೆಯನ್ನು ಅರಿತವರು ಬೇಕಿಲ್ಲ. ಇಂದು ಐಟಿ ಕ್ಷೇತ್ರ ಮಾತ್ರವಲ್ಲ, ಎಲ್ಲವೂ ನಡೆಯುತ್ತಿರುವುದಲ್ಲ, ಓಡುತ್ತಿರುವುದು ಆ ಕುರುಡು ಕಾಂಚಾಣದೊಂದಿಗೇ. ಅದರ ’ಮೌಲ್ಯ’ವೇ ಕಳೆದು ಹೋಗಿದೆ.

ಲೇಖನದ ತುಂಬಾ ಆಪಾದನೆಗಳೇ ಕಾಣುತ್ತವೆಯೆ ಹೊರತು ಆಧಾರಗಳೇ ಸಿಗುವುದಿಲ್ಲ. ಯಾವ ಒಂದು ಹಂತದಲ್ಲೂ ಇನ್ನೊಂದು ದೃಷ್ಟಿಯಿಂದ ನೋಡಲಾಗಿಲ್ಲ. ಎಲ್ಲೆಡೆಯೂ ಎಲ್ಲವೂ ಸರಿಯಿರುವುದಿಲ್ಲ. ಸತ್ಯಮ್ ಎಂದು ಹೆಸರಿಟ್ಟುಕೊಂಡು ಮಾಡಿದ ದ್ರೋಹ ಕಣ್ಣಮುಂದಿದೆ. ಆದರೆ ಹುಳುಕುಗಳನ್ನು ಹೇಳುವುದರ ಜೊತೆಗೆ ಹೂವುಗಳನ್ನು ತೋರಿಸಬೇಕು. ಸಮಸ್ಯೆಯಿದೆ ಎಂದು ಹೇಳುವಾಗ ಪರಿಹಾರ ಕಂಡು ಕೊಳ್ಳುವ ಆಸಕ್ತಿ, ಚಿಂತನೆಯಿರಬೇಕು. ಇಂದು ವಿಜ್ಞಾನದಿಂದ ನಮಗೆ ಸಾಧಕ ಭಾದಕಗಳೆರಡೂ ಇವೆ. ಬಾಂಬ್ ಕೂಡ ತಯಾರಿಸಬಹುದು, ಬೆಣ್ಣೆಯನ್ನೂ ಸಹ. ಹಾಗಾದರೆ ವಿಜ್ಞಾನವೇ ತಪ್ಪೆನ್ನುವುದು ಎಷ್ಟು ಸರಿ? ಹಾಲು, ನೀರಾ ಒಂದೇ ಎನ್ನುವುದೆಷ್ಟು ಸರಿ?

ಲೇಖನದಲ್ಲಿ ಹೇಳಿರುವುದು ಬಹುಪಾಲು ಮಂದಿಗೆ. ನೀವೇಕೆ Personal ಆಗಿ ತಗೋಳ್ತೀರಿ ಎಂದು ನುಣುಚಿಕೊಳ್ಳಬಹುದು. ಬೆತ್ತಲೆ ಜಗತ್ತು ಎಂಬ ಶೀರ್ಷಿಕೆಯಡಿ ನೀವು ಬರೆಯುವುದು ನಗ್ನ ಸತ್ಯವೆಂದು ನಂಬುವವರಿದ್ದಾರೆ. ಅನ್ನವಾಗಿದೆಯೇ ಎಂದು ಒಂದು ಅಗಳು ನೋಡಿದರೆ ಸಾಕು ಎನ್ನುವ ಅತಿ ’ವಿವೇಚನೆ’ಯಿಂದ, ಯಾವ ಅಭಿಪ್ರಾಯ ಇಲ್ಲದವರೂ ನಿಮ್ಮ ಅಭಿಪ್ರಾಯವನ್ನೇ ರೂಪಿಸಿಕೊಳ್ಳುವ ಸಾಧ್ಯತೆ ಇದೆ. Cooling Glass ಹಾಕಿಕೊಂಡು ನೋಡಿ ಹಗಲನ್ನೇ ಕತ್ತಲೆಂದು ಬರೆಯುವುದು ನಗ್ನ ಸತ್ಯವಾಗುವುದಿಲ್ಲ. ಸರಿ ತಪ್ಪುಗಳ ಪೂರ್ಣ ವಿಮರ್ಶೆಯಿರಬೇಕಲ್ಲವೇ? ವೃತ್ತಿಯೊಂದರ ಬಗ್ಗೆ ಬರೆಯುವಾಗ, ’ಬಹುಪಾಲು’ ಅನ್ನುವುದನ್ನು ಸಮರ್ಥಿಸುವಂತೆ, ಎಲ್ಲ ಮಜಲುಗಳನ್ನು ವಿಮರ್ಶಿಸಿ. ಮನೆಯೊಂದು ಹತ್ತಿ ಉರಿಯುವಾಗ ಅದರಲ್ಲಿ ಬೀಡಿ ಹೊತ್ತಿಸಿಕೊಳ್ಳುವ ಕಾಯಕ ಬಿಡಿ. ನಾಳೆ ಅದು ನಿಮ್ಮ ಮನೆಯೇ ಆಗಬಹುದು ಎಚ್ಚರವಿರಲಿ. ನಿಮಗೆ ಆರಿಸಲು ಸಾಧ್ಯವಾಗದಿದ್ದಲ್ಲಿ ಸುಮ್ಮನಿರಿ. ತುಪ್ಪ ಸುರಿಯದಿರಿ.

ಬ್ಲಾಗ್ ವರ್ಗಗಳು: 
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ಪ್ರತಿಕ್ರಿಯೆಗಳು

ವಿನುತ ರವರೆ,
ಚೆನ್ನಾಗಿ ಬರೆದಿದ್ದೀರಿ. ಇವನು ವಿಷಯಗಳನ್ನು sensationlize ಮಾಡಿ ಸಮಾಜದ ಒ೦ದು ಸ್ಥರದ ಜನಗಳಿಗೆ ಮಾತ್ರ ರುಚಿಸುವ೦ತೆ ಬರೆಯುತ್ತಾನೆ. ಎಲ್ಲಾ ವಿಷಯಗಳಿಗೂ, ನೀವು ಹೇಳಿದ೦ತೆ flipside ಇರುತ್ತದೆ, ಅದು ಈ ಮಹಾಶಯನಿಗೆ ತಿಳಿದಿಲ್ಲ. ಬೈರಪ್ಪನವರ "ಆವರಣ" ಪುಸ್ತಕ ಬಿಡುಗಡೆ ಸಮಾರ೦ಭದಲ್ಲಿ ಇವನ ಭಾಷಣ ಕೇಳಿರಬೇಕಲ್ಲವೆ? ಅಲ್ಲೆ ತಿಳಿಯುವುದು ಇವನ ಸಮತೋಲನ.

ನಾನು ಕೆಲವೇ ಘ೦ಟೆಗಳ ಕೆಳಗೆ ಈ ಲೇಖನವನ್ನು ನನ್ನ ಕೆಲವು ಸ್ನೇಹಿತರಿಗೆ ನನ್ನ ಟಿಪ್ಪಣಿಗಳೊ೦ದಿಗೆ ಕಳುಹಿಸಿದ್ದೆ. ಅದನ್ನು ಇಲ್ಲಿ ಹಾಕುತ್ತಿದ್ದೇನೆ:
ಪ್ರತಾಪ್ ಸಿ೦ಹನ ಇನ್ನೊ೦ದು ಪ್ರತಾಪವನ್ನು ನೋಡಲು ಈ ಲೇಖನವನ್ನು ಓದಿ. ಇವನ ಬರೆವಣಿಗೆಯಲ್ಲಾಗಲಿ ಅಥವಾ ಮಾತಿನಲ್ಲಾಗಲಿ ಒಬ್ಬ ಕಳಕಳಿಯಿರುವ ಪತ್ರಕರ್ತನಿಗಿರಬೇಕಾದ ಗಾ೦ಭೀರ್ಯವೇ ಇಲ್ಲ. ಉದ್ರೇಕಕ್ಕೊಳಗಾಗಿ ಏನೋ ಗೀಚುತ್ತಾನೆ ಇವನು. ಈ ಲೇಖನದಲ್ಲೂ ಹಾಗೆ ಐ.ಟಿ ಸೆಕ್ಟರ್ ಬಗ್ಗೆ ಬರೆಯುವಾಗ ಅದರ ಲಾಭ ಐ.ಟಿ. ಉದ್ಯೋಗಿಗಳನ್ನು ಬಿಟ್ಟು ಇನ್ನ್ಯಾರೂ ಅನುಭವಿಸಲೇ ಇಲ್ಲ ಅನ್ನುವ೦ತೆ ಬರೆದಿದ್ದಾನೆ. ಈ ಉದ್ದಿಮೆಗೆ ಬೇಕಾದ ಕಟ್ಟಡ ನಿರ್ಮಾಣ ಕಾಮಗಾರಿಗೆ ಕಾರ್ಮಿಕರು, ರಿಯಲ್ ಎಸ್ಟೇಟ್, ಕಟ್ಟಡದೊಳಗೆ ಶುಚಿತ್ವ ಕಾಪಾಡಲು janitors, security guards, ಓಡಾಡಲು ಕ್ಯಾಬ್ ಸರ್ವೀಸ್. ಇವೆಲ್ಲದರಿ೦ದ ಬೇರೆಯವರಿಗೆ ಉಪಯೋಗವಾಗಲಿಲ್ಲವೆ? ಒಬ್ಬ ಮಾಮೂಲಿ ಕ್ಯಾಬ್ ಡ್ರೈವರ್ ಕೂಡ ರಾತ್ರೋರಾತ್ರಿ ೩-೪ ಕಾರ್ ಖರಿದಿಸಿ ಟ್ರ್ಯಾವಲ್ಸ್‍ನ ಮಾಲೀಕನಾಗಲಿಲ್ಲವೆ? ಹೆಚ್ಚಾಗಿ ಓದಿಲ್ಲದವರಿಗೂ ಉದ್ಯೋಗಾವಕಾಶಗಳು ಸಿಗಲಿಲ್ಲವೆ? ಒಬ್ಬ ಬಿ.ಎಸ್.ಸಿ ಮಾಡಿದವನಿಗೆ ಮು೦ಚೆ ಎಲ್ಲಿ ೧೫-೨೦ ಸಾವಿರ ಸಿಗುತ್ತಿತ್ತು. ಈಗ ಅವನು ತನ್ನ ಪದವಿಗೆ ಯೋಗ್ಯವಾದ ಜೀವನವನ್ನು ನಡೆಸುವುದು ತಪ್ಪೆ? ಎಲ್ಲರ ಜೊತೆ ಮೊಸರನ್ನ ತಿ೦ದು ಮ೦ಗ ಈಗ ಕುರಿ ಬಾಯಿಗೆ ಹಚ್ಚುತ್ತಾ ಇದೆ ಅಷ್ಟೆ. ಇಷ್ಟಕ್ಕೂ ಈ meltdown ನ ಕಾರಣ ಭಾರತೀಯರಲ್ಲವಲ್ಲ. ಇವರ ಮೇಲೇಕೆ ಧೂಷಣೆ. ಪತ್ರಕರ್ತನಿಗಿರಬೇಕಾದ ನಿಷ್ಟೂರ ಸ್ವಭಾವವೇನೋ ಇದೆ ಇವನಲ್ಲಿ ಆದರೆ ಅವನಿಗೂ ಸೂಕ್ಶ್ಮತೆ ಹಾಗೂ ಆರ್ಧ್ರತೆ ಇರಬೇಕು, ಅದು ಇವನಲ್ಲಿಲ್ಲ. ನಾವು ಕೆಲಸ ಕಳೆದುಕೊ೦ಡಿರುವವರ ಮೇಲೆ ಕನಿಕರ ತೋರಿಸೋಣ. "ಮೆತ್ತಗಿದ್ದವರಿಗೆ ಮತ್ತೊ೦ದು ಗುದ್ದು" ಅನ್ನುವ ಹಾಗೆ ಈ ಸಮಯದಲ್ಲಿ ಅವರನ್ನು ಧೂಷಿಸುವುದು ಬೇಡ.

"He that has never known adversity is but half acquainted with others, or with himself." ಅನ್ನುವ ಒಬ್ಬ ಮಹಾನಭಾವನ ಯುಕ್ತಿಯ೦ತೆ ಈ recessionನ ಅನುಭವದಿ೦ದ ಸಮಾಜಕ್ಕೆ ಕ್ರಮೇಣ ಒಳಿತೇ ಆಗಬಹುದು.

ದಯವಿಟ್ಟು ಮು೦ದಿನ ಬಾರಿ ಪ್ರತಾಪ ಸಿ೦ಹನ ಲೇಖನ ಓದುವಾಗ ಎಚ್ಚರ!!
ವಿ.ಸೂ: ನಾನು genericಆಗಿ ಅವನನ್ನು ತೆಗಳುತ್ತಿಲ್ಲ. ನನ್ನ ವಿಮರ್ಷೆ ಈ ಲೇಖನಕ್ಕೆ ಮಾತ್ರ ಸೀಮಿತ!

ಇವನು ಸುಮ್ಮನೆ ಹೀಗೆ ಧೂಳೆಬ್ಬಿಸಿ ಹೆಸರು ಮಾಡಿ ಕೊನೆಗೆ ಸ್ವತ೦ತ್ರ ಪತ್ರಿಕೆ ಪ್ರಾರ೦ಭಿಸುವ ಆಲೋಚನೆಯಿರಬೇಕು. ಇ೦ತಹವನಿಗೂ ಮೇವು ಹಾಕುವ ಓದುಗರಿರುವವರೆಗೂ ಇವನ ಆರ್ಭಟ ಹೀಗೆ ಮು೦ದುವರಿಯುತ್ತದೆ.

ಧನ್ಯವಾದಗಳು.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಹೌದು ರವೀಂದ್ರ ಅವರೇ, ಇದೊಂದು ಅರೆಬೆಂದ ಮಾಲಷ್ಟೆ. ಲೇಖನ ಬರೆದಿರುವ ಉದ್ದೇಶವೇನೋ ತಿಳಿದಿಲ್ಲ, ಆದರೆ ಎಲ್ಲ ಮಗ್ಗಲುಗಳನ್ನೂ ವಿಶ್ಲೇಷಿಸಿಲ್ಲ ಎನ್ನುವುದಂತೂ ಸತ್ಯ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಪ್ರತಾಪ್ ಸಿಂಹರ ಬರವಣಿಗೆಯಲ್ಲಿ ಒಂದು ಪಕ್ವತೆಯೇ ಇರುವುದಿಲ್ಲ. ಮೊದಲು ಟೈಮ್ಸ್ ನವರಿಗೆ ಅಕ್ಷರ ವ್ಯಭಿಚಾರ ಮಾಡುವವರು ಎಂದು ಬೈಯುತ್ತಿದ್ದವರು ಈಗ ಯಾಕೋ ಅದರ ಸುದ್ದಿಯನ್ನೇ ಎತ್ತುತ್ತಿಲ್ಲ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಚೆನ್ನಾಗಿ ಬರೆದಿದೀರಿ.

ಒಂದು ವಿಷಯ. ’ದುಡ್ಡಿಗೋಸ್ಕರ ಕೆಲಸ ಮಾಡ್ತಾರೆ’ ಅಂತ ದೂಷಿಸ್ತಾ ಇದಾರಲ್ಲ, ಯಾರು ಹಾಗೆ ಮಾಡೋದಿಲ್ಲ ಹೇಳಿ?

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಸರಿಯಾದ ಮಾತು ಹಂಸಾನಂದಿಯವರೇ. ಎಲ್ಲರೂ ಮಾಡುವುದು ಹಣಕ್ಕಾಗಿಯೇ. ಉಪನ್ಯಾಸಕ್ಕೇನು ಎಷ್ಟು ಬೇಕಾದರೂ ಕೊಡಬಹುದು. ಆದರೆ ವಾಸ್ತವದಲ್ಲಿ ಎಲ್ಲವೂ ನಡೆಯುವುದು ಆ ಕುರುಡು ಕಾಂಚಾಣದಿಂದಲೇ..

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಇಂದಿನ "ಬೆತ್ತಲೆ ಜಗತ್ತು " , ಓದಿ ಬಹುಶಃ ಕಳೆದ ವಾರ ಭಾಗ-೧ ಹಾಗು ಈ ವಾರ ಭಾಗ-೨ ಅಂತ ಓದಿ ಕೊಂಡರೆ ಸರಿ ಅನ್ನಿಸುತ್ತೆ...

ಲೇಖನದ ಕಡೆ ಸಾಲುಗಳು ಒಮ್ಮೆ ನೋಡಿ.. "ನಮ್ಮ Software Engineer ಗಳ Top Notch talent ಬಗ್ಗೆ ಖಂಡಿತ ವಿಶ್ವಾಸ ಇದೆ, ನಮ್ಮ ದೇಶಕ್ಕೆ ಒಳ್ಳೆಯ ಹೆಸರು ತಂದು ಕೊಟ್ಟ ಐಟಿ ಬಗ್ಗೆ ನಮ್ಮೆಲ್ಲರಿಗೂ ಅಭ್ಹಿಮಾನ ಇದೆ ಅನುಮಾನ ಬೇಡ"

ಬಹುಶಃ ಇದು ಲೇಖಕನ ಮನಸ್ಸಿನ ಭಾವನೆಗಳೆ.. ವಾರನ್ನ / ಚಿತ್ರಾನ್ನ ಅಂತ ಬರೆದವರು ಬಹುಶಃ ಯಾಕೆ ಗೇಟ್ಸ್ ಜಾಬ್ಸ್ ಡೆಲ್ ಹುಟ್ಟಲಿಲ್ಲ ಅನ್ನುವದರ ಬಗ್ಗೆ ಸಹಾ ಉತ್ತರಿಸಿ , ಹಾಗು ಈ ಲೇಖನದ ಬಗ್ಗೆ ಸಹಾ ಹಲವಾರು ಕವಿತೆ ಶಾಯರಿ ಬರೆಯಬಹುದು.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಮುಂದುವರೆಯುವುದು.... ಎಂದು ಹಾಕಿದ್ದರೆ ಯಾರೂ ಇಷ್ಟು ಪ್ರತಿಕ್ರಿಯಿಸುತ್ತಿರಲಿಲ್ಲವೇನೋ! :)
ಇಷ್ಟಕ್ಕು ಪ್ರತಿಕ್ರಿಯೆ ಬಂದದ್ದು ಆರ್ಥಿಕತೆಯ ಹಿನ್ನೆಲೆಯಲ್ಲಿ, ಬೇರೆ ಯಾವ ವೃತ್ತಿಯಲ್ಲಿಯೂ ಇಲ್ಲದ, ಅಥವ ಎಲ್ಲ ವೃತ್ತಿಗಳಲ್ಲು ಇರಬೇಕಾದ ಗುಣಗಳನ್ನು ಕೇವಲ ಐಟಿಕ್ಷೇತ್ರಕ್ಕೆ ಮೀಸಲಿಟ್ಟು ಬರೆದಿರುವುದಕ್ಕಾಗಿ. ಇಡೀ ದೇಶದ ಆರ್ಥಿಕ ವ್ಯವಸ್ಥೆಗೆ ಒಂದು ಗುಂಪನ್ನು ದೂಷಿಸುವುದು ಎಷ್ಟು ಸರಿ ಎಂಬ ಪ್ರಶ್ನೆಯಷ್ಟೇ. ಟಾಟಾ, ಬಿರ್ಲಾ, ವಿಶ್ವೇಶ್ವರಯ್ಯ ನಂತರ ಒಬ್ಬ Vision ಇರುವ ಔದ್ಯೋಗಿಕ ಪ್ರಭುವೂ ಬರಲಿಲ್ಲ?? ಇದು ನನಗೂ ಪ್ರಶ್ನೆ. ನಮ್ಮನ್ನು ನಾವು ಗುರುತಿಸಿಕೊಳ್ಳುವ ಮೊದಲೇ ವಿದೇಶೀ ಮಾರುಕಟ್ಟೆಗೆ ನಮ್ಮನ್ನು ತಳ್ಳಲಾಗಿತ್ತೇ? ನಮ್ಮ ’Products’ ಗಳು ನಮ್ಮ ಮಾರುಕಟ್ಟೆಯಲ್ಲಿ Sustain ಆಗಬಲ್ಲವೇ? ಹೀಗೆ Competition ನೀಡಲು ನಿಂತಿದ್ದ, Videocon, BPL ಎಲ್ಲವು ಎಲ್ಲಿ ಹೋದವು? ISRO, DRDO ಗಳು ಸೃಷ್ಟಿಸಿರುವ ಉದ್ಯೋಗಗಳೆಷ್ಟು? ಅದರಲ್ಲಿ ಕೆಲಸ ಮಾಡಿ, ವ್ಯವಸ್ಥೆಯ ರಾಜಕೀಯಕ್ಕೆ ಬೇಸತ್ತು ಹೊರಬಂದವರೆಷ್ಟು? ಇಂದು ಸರಿಪಡಿಸಲಾರದಷ್ಟು ದೊಡ್ಡ ತಪ್ಪು ಜರುಗಿ ಹೋಗಿದೆಯೇ? ನಡೆದದ್ದೆಲ್ಲವೂ ತಪ್ಪೇ? ಹಾಗಾದರೆ ತಪ್ಪು ನಡೆಯುವಾಗ ಯಾರೂ ಎಚ್ಚರಿಸುವವರಿಲ್ಲವೇ? ಎಲ್ಲವೂ ಮುಗಿದು ಹೋಯಿತೇ? ಪ್ರಶ್ನೆಗಳ ಪಟ್ಟಿ ದೊಡ್ಡದಿದೆ. ಪರಸ್ಪರ ಹಳಿದುಕೊಳ್ಳದೆ, ಮುಕ್ತ ಚರ್ಚೆಗೆ ನಮ್ಮದೂ ಸ್ವಾಗತವಿದೆ. ನಮ್ಮ ಆಶಯವೂ ಇದೇ ಆಗಿತ್ತು.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಾನು ಈವರೆಗೆ ಪ್ರತಾಪನ ಲೇಖನ ಓದಿರಲಿಲ್ಲ, ಉತ್ತಮ ಲೇಖಕ ಪ್ರತಿಬಾವಂತ ಚೆನ್ನಾಗಿ ಬರೆಯುತ್ತಾನೆ.
ಆದರೆ ಕೊನೆಯಲ್ಲಿ "ಅಮರ್ತ್ಯ ಸೇನ್" ಮಾತು ಹಾಕಿದ್ದಾರೆ ಸಾಕಾಗಲ್ಲ "His whole Article is lacking Basic Economic Fundamentals"!!!

ಅವರು ಹೇಳಿರುವ ಮಾತು ಕೂಡ ಸತ್ಯ, ITಯಲ್ಲಿ 50 % ಮಂದಿ ಅವರು ಹೇಳಿರುವ ಗುಂಪಿಗೆ ಸೇರುತ್ತಾರೆ, ಒಬ್ಬ ಉತ್ತಮ ಲೇಖಕನಾಗಿದ್ದು ಹಾಗೂ ಸಾಮಾಜಿಕ ಜವಾಬ್ದಾರಿ ಇರುವ ಪತ್ರಕರ್ತನಿಗೆ, ITಅವರು ಮಾಡಿರುವ ಒಳ್ಳೆ ಕೆಲಸಗಳು ಅವರ ಕಣ್ಣಿಗೆ ಕಾಣದಿದ್ದುದೇಕೆ ಎಂದು ಯೊಚಿಸಿದಾಗ ... ಅವರ ಕುರುಡು ಕಾಂಚಾಣ ಅವರ ಕಡೆಗೆ ತಿರುಗಿತ್ತು!!!

ಎಲ್ಲರಿಗೂ ಸಂಬಳದ ಅವಶ್ಯಕತೆ ಇದೆ ನಿಜ, ಆದರೆ ಎಲ್ಲರೂ ಕೆಲಸಮಾಡುವ ಉದ್ದೇಶ ಸಂಬಳವಲ್ಲ.
"Salary is just a requirement, not the purpose of Work."

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಸತ್ಯವಾದ ಮಾತು ವಾಸುರವರೇ. ಅವರ ಪ್ರತಿಭೆಯ ಬಗ್ಗೆ ನಮಗೂ ಹೆಮ್ಮೆಯಿದೆ. ಎಲ್ಲವೂ ಸರಿಯಿದೆಯೆಂದು ನಾವೂ ಹೇಳುವುದಿಲ್ಲ. ಹಾಗೆಂದ ಮಾತ್ರಕ್ಕೆ ಎಲ್ಲವೂ ತಪ್ಪಲ್ಲ. ಆರ್ಥಿಕತೆಯ ಹಿನ್ನೆಲೆಯಲ್ಲಂತೂ ಲೇಖನ ಪಕ್ವತೆಯನ್ನು ಕಳೆದುಕೊಂಡಿದೆಯೆಂದಷ್ಟೆ ಹೇಳಬಹುದು.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಲೇಖನದ ತುಂಬಾ ಆಪಾದನೆಗಳೇ ಕಾಣುತ್ತವೆಯೆ ಹೊರತು ಆಧಾರಗಳೇ ಸಿಗುವುದಿಲ್ಲ...ಇದು ಸತ್ಯವಾದ ಮಾತು...ಅವರ ಆ ಲೇಖನಕ್ಕೆ ಇದೊಂದು ಪ್ರತಿಕ್ರಿಯೆ ಸಾಕಿತ್ತು, ನಾವುಗಳು ಸುಮ್ನೆ ಅದು ಇದು ಅಂತ ಹೇಳ್ತಿದೀವಿ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.