ದೀಪಕ

5

ಜುಳು ಜುಳು ನಿನಾದದೊಂದಿಗೆ ಸಾಗಿದ್ದಳು ತುಂಗೆ
ಕಲರವದೊಂದಿಗೆ ಮರಳುತಿದ್ದವು ಹಕ್ಕಿಗಳು ಗೂಡಿಗೆ
ಕೇದಗೆಯ ಕಂಪಿನೊಂದಿಗೆ ಬೀಸಿತ್ತು ತಂಗಾಳಿ
ಮುಸ್ಸಂಜೆಯಾಗಿತ್ತು ರವಿ ಜಾರಿರಲು ಬಾನಂಚಿನಲ್ಲಿ

ವಿರಮಿಸಿರಲು ನಾ ಮರಳ ದಂಡೆಯಲ್ಲಿ
ನೀ ಕಂಡೆ ದೃಷ್ಟಿಗೆ ಅನತಿ ದೂರದಲ್ಲಿ
ಎತ್ತಲೋ ನೋಡುತಾ ಮುಗ್ಗರಿಸುತ್ತಿದ್ದೆ ನೀನು
ಕಂಡೆನೆಂತಹ ಚೆಲುವು ಬಳಿ ಧಾವಿಸಲು ನಾನು

ನೀಳ ನಾಸಿಕ, ಹವಳದಂತಹ ತುಟಿಗಳು
ತುಂಬುಗೆನ್ನೆಗಳು, ತೀಡಿದ ಹುಬ್ಬುಗಳು
ಕಂಗೊಳಿಸುತ್ತಿದ್ದ ಆ ಬಟ್ಟಲುಗಣ್ಣುಗಳು
ಮಿಡಿಯದಿರಲು ಸಾಧ್ಯವೇ ಹೃದಯಗಳು

ನೀ ನುಡಿದ ಮಧುರ ಸಿಹಿಮಾತುಗಳು
ಉಲಿದಂತಿತ್ತು ಸರಸ್ವತಿಯೇ ಸಪ್ತಸ್ವರಗಳು
ಆ ನಿನ್ನ ಸೌಂದರ್ಯದ ಅದಮ್ಯತೆ
ನಾಚಿಸುವಂತಿತ್ತು ನಿಸರ್ಗದ ರಮ್ಯತೆ

ಕಳೆಯಲು ಸಮಯ, ತಿಳಿಯಲು ವಿಷಯ
ಅರಿವಾಗಲು ವಿಧಿಯ ಒಳಸಂಚು
ಬಡಿದಂತಾಗಿತ್ತು ಮಿಂಚು, ಬರಸಿಡಿಲು
ಗೋಚರಿಸಿತ್ತು ಸೃಷ್ಟಿಯ ಕ್ರೂರ ಮಜಲು

ಹಣತೆಯ ಅಡಿಯಲ್ಲೆ ಅಂಧಕಾರದ ತವರು
ಬ್ರಹ್ಮನ ಸೃಷ್ಟಿ ಸ್ವಾತಂತ್ರ್ಯ ಪ್ರಶ್ನಿಸುವರ್‍ಯಾರು
ಸೂರ್ಯನಿಲ್ಲದಿದ್ದರೇನು, ಚಂದ್ರನಿಹನು ರಾತ್ರಿಗೆ
ಬೆಳಕಿಲ್ಲದಿದ್ದರೇನು, ನಾದವಿದೆ ನಿನ್ನ ಬಾಳಿಗೆ

ಅಜ್ಞಾನದ ಅಂಧಕಾರದೊಳು ನಾವು ಗಾವಿಲರು
ನ್ಯೂನ್ಯತೆಯ ಮೀರಿ ಬದುಕುವ ಇವರೇ ಧನ್ಯರು
ಶುಭಕೋರಿ ಯೋಚಿಸುತ್ತ ನಾ ನಿಂತಿರಲು ನಿಶ್ಚಲಳಾಗಿ
ನೀ ಸಾಗಿದ್ದೆ ಮುಂದೆ, ಕಟು ಸತ್ಯಕ್ಕೆ ಸಾಕ್ಷಿಯಾಗಿ.....

-ವಿನುತ

ಬ್ಲಾಗ್ ವರ್ಗಗಳು: 
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 5 (1 vote)
To prevent automated spam submissions leave this field empty.

ಪ್ರತಿಕ್ರಿಯೆಗಳು

ವಿನುತಾ ಕವನ ಚೆನ್ನಾಗಿದೆ.
ನಮ್ಮನ್ನು ಎಲ್ಲೆಂದೆಲ್ಲಿಗೋ ಒಯ್ಯುತ್ತದೆ.

>>"ಸೂರ್ಯನಿಲ್ಲದಿದ್ದರೇನು, ಚಂದ್ರನಿಹನು ರಾತ್ರಿಗೆ
>>ಬೆಳಕಿಲ್ಲದಿದ್ದರೇನು, ನಾದವಿದೆ ನಿನ್ನ ಬಾಳಿಗೆ"

ಅವರಿಗೆ ಸೂರ್ಯನೂ ಇಲ್ಲ ಚಂದ್ರನೂ ಇಲ್ಲ, ಅಲ್ಲವೇ?

>>"ಅಜ್ಞಾನದ ಅಂಧಕಾರದೊಳು ನಾವು ಗಾವಿಲರು"

"ಗಾವಿಲರು" ಶಬ್ದ ಹಿಡಿಸಿತು.

>>"ನ್ಯೂನ್ಯತೆಯ ಮೀರಿ ಬದುಕುವ ಇವರೇ ಧನ್ಯರು"

"ನ್ಯೂನತೆಯ ಮೀರಿ ಬದುಕುವ ನೀವೇ ಧನ್ಯರು"

ಇದು ಹೆಚ್ಚು ಸೂಕ್ತವಾಗಬಹುದೇನೋ ಅನ್ನಿಸುತ್ತೆ.

ಇಡೀ ಕವನ ಆ ವ್ಯಕ್ತಿಯನ್ನು ಉದ್ದೇಶಿಸಿ ಬರೆದಂತಿರುವಾಗ ಈ ಒಂದು ಸಾಲು ಭಿನ್ನ ಏಕೆ?

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಧನ್ಯವಾದಗಳು ಆಸು ರವರೇ.

ಹೌದು, ಅವರಿಗೆಲ್ಲವೂ ಕತ್ತಲು. ಆ ಸಾಲುಗಳಲ್ಲಿ ನನ್ನ ಸಮಾಧಾನವನ್ನು ಹೇಳಲು ಹೊರಟಿದ್ದೆನಷ್ಟೆ, ಒಂದಿಲ್ಲದಿದ್ದಲ್ಲಿ ಇನ್ನೊಂದಿದೆಯೆಂದು, ಹೋಲಿಕೆ ಸರಿಹೊಂದಲಿಲ್ಲವೇನೊ..
’ಇವರೇ’ ಎನ್ನುವ ಪದ, ಅಂತಹ ಅನೇಕ ವ್ಯಕ್ತಿಗಳ ನೆನಪಾಗಿ ಬಳಸಿದ್ದೆ..ಕವನದ ಹರಿವಿನೊಂದಿಗೆ ಸೇರಲಿಲ್ಲವೇನೊ..

ನಿಮ್ಮೆಲ್ಲ ಸಲಹೆಗಳಿಗೆ ಧನ್ಯವಾದಗಳು, ಮುಂದಿನದಕ್ಕೆ ಸಹಾಯವಾಗುತ್ತವೆ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ವಿನುತಾ, ನನ್ನ ಪ್ರತಿಕ್ರಿಯೆಗೆ ಸ್ಪಂದಿಸಿರುವುದಕ್ಕೆ ಧನ್ಯವಾದಗಳು.
ನಾವು ಯಾರನ್ನು ಉದ್ದೇಶಿಸಿ ಮಾತನಾಡುತ್ತಿದ್ದೇವೆ ಅನ್ನುವುದು ಸ್ಪಷ್ಟವಾಗಿರಬೇಕು ಅಲ್ಲದೆ ಅದು ಕೊನೆ ತನಕವೂ ಹಾಗೇ ಉಳಿಯಬೇಕು ಅನ್ನುವುದು ನನ್ನ ಅನಿಸಿಕೆ.

"ಫಸ್ಟ್ ಪರ್ಸನ್, ಸೆಕೆಂಡ್ ಪರ್ಸನ್ ಮತ್ತು ಥರ್ಡ್ ಪರ್ಸನ್" ಅಂತ ಆಂಗ್ಲ ಭಾಷೆಯಲ್ಲಿ ಹೇಳ್ತಾರಲ್ಲಾ ಹಾಗೆ.
ಮಾತಾಡುವವರು ಅಥವಾ ಬರೆಯುವವರು, ಯಾರನ್ನು ಉದ್ದೇಶಿಸಿ ಮಾತಾಡುತ್ತೇವೋ ಅವರು ಹಾಗೂ ಯಾರ ಬಗ್ಗೆ ಮಾತಾಡುತ್ತೇವೋ ಅವರು.
ನಿಮ್ಮ ಕವನದಲ್ಲಿ ನೀವು ಉದ್ದೇಶಿಸಿ ಮಾತನಾಡಿದ್ದು ಕಣ್ಣ ಜ್ಯೋತಿ ಇಲ್ಲದ ಆ ವ್ಯಕ್ತಿಯನ್ನು.
ಅದು ಕೊನೇ ತನಕ ಹಾಗೇ ಉಳಿದಿದ್ದರೆ ಒಳ್ಳೆಯದಿತ್ತು ಅನ್ನುವುದು ನನ್ನ ಅಭಿಪ್ರಾಯ ಅಷ್ಟೆ.
ನೀವು ಆ ವ್ಯಕ್ತಿಯನ್ನು ಉದ್ದೇಶಿಸಿ ಮಾತನಾಡುವಾಗ, "ಅವರೇ" ಅಂದಾಗ, ಆ ವ್ಯಕ್ತಿ "ಯಾರು" ಅಂತ ಕೇಳಬಹುದಲ್ಲವೇ?
ಆ ವ್ಯಕ್ತಿಯನ್ನು "ಅವರೇ" ಇಂದ ಹೊರಗುಳಿಸಿದಂತೆ ಆಗುವುದಿಲ್ಲವೇ?
ಆ ವ್ಯಕ್ತಿಯನ್ನು ಸೇರಿಸಿಕೊಂಡು ಆ ವ್ಯಕ್ತಿಯನ್ನೇ ಉದ್ದೇಶಿಸಿ ಮಾತನಾಡುವಾಗ "ನೀವೇ" ಅನ್ನುವುದೇ ಸೂಕ್ತ ಅಂತ ನನ್ನ ಅನಿಸಿಕೆ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.