ಆ ಬೇಸಿಗೆಯ ದಿನಗಳು....

5

'ಇನ್ನೊಂದು ಗುಕ್ಕು ತಿನ್ಕೊಂಡು ಹೋಗೇ..' ಅಮ್ಮ ಕೂಗ್ತಾ ಇದ್ರು. 'ಇಲ್ಲಮ್ಮ, ಆಗ್ಲೇ ಲೇಟಾಗಿದೆ' ನಾನಂದೆ. 'ಸರಿ ನೀರಾದ್ರೂ ಕುಡಿ' ಅಮ್ಮ ಬಾಗಿಲಿನ ಹತ್ರ ತಂದಿದ್ದ ನೀರನ್ನ ಅಲ್ಲೇ ಅರ್ಜೆಂಟಲ್ಲಿ ಕುಡೀತಾ ಮೈಮೇಲೆ ಒಂದು ಸ್ವಲ್ಪ ಚೆಲ್ಕೊಂಡು, 'ಇನ್ನಾ ನೀರು ಕುಡಿಯೋಕೆ ಬರೋಲ್ಲ' ಅಂತ ಬೈಸ್ಕೊಂಡು, 'ಸರಿ ಬರ್ತೀನಮ್ಮ' ಅಂತ ಹೇಳಿ ಹೊರಟೆ. ಹೆಚ್ಚು ಕಡಿಮೆ ದಿನಾ ಇದೇ ಗೋಳು. ಬೆಳಿಗ್ಗೆ 6.50 ಕ್ಕೆ ಬಸ್. 4.30 ಗೇ ಎದ್ರೂ ಸಮಯ ಸಾಕಾಗಲ್ಲ.

ನಾನು ಹಚ್ಚು ಕಮ್ಮಿ ಓಡ್ಕೊಂಡೇ ಬರ್ತಾ ಇದ್ದೆ, ದಾರಿಯಲ್ಲಿ ಮಕ್ಕಳು ಜೂಟಾಟ ಆಡ್ತಾ ಇದ್ರು. ಇದೇನು ಇಷ್ಟು ಬೆಳಿಗ್ಗೆ ಎದ್ದು ಬಿಟ್ಟಿದಾವೆ ಅಂದುಕೊಳ್ತಾ ಇದ್ದೆ, ಅಷ್ಟರಲ್ಲಿ ಒಬ್ಳು ಬಂದು ನನ್ನ ಸುತ್ತೋಕೆ, ಅವಳ್ನ ಹಿಡಿಯೋಕೆ ಇನ್ನೊಬ್ಬ. ಮಧ್ಯದಲ್ಲಿ ನಾನು ಎಡ್ಬಿಡಂಗಿ. ಮೇಲಿಂದ ಅವ್ರಮ್ಮ ಕೂಗ್ಕೊಳ್ತಾ ಇದ್ರು, 'ಅವ್ರು ಆಫೀಸಿಗೆ ಹೋಗ್ತಾ ಇದಾರೆ ದಾರಿ ಬಿಡ್ರೋ'. ಅದು ಆ ಮಕ್ಕಳಿಗೆ ಕೇಳಿಸ್ತೋ ಇಲ್ವೋ ಗೊತ್ತಿಲ್ಲ, 'ಹಿಡಿಯೋ ನೋಡೋಣ ಧಡಿಯ' ಅಂತ ಇವ್ಳು, 'ಎಲ್ಲೋಗ್ತೀಯ ಸಿಗ್ತೀಯ' ಅಂತ ಇವ್ನು ಅಟ್ಟಿಸ್ಕೊಂಡು ಹೋದ. ಒಂದು ನಿಮಿಷ ಅಲ್ಲೇ ಕಳೆದು ಹೋಗಿದ್ರೂ, ಬಸ್ ನೆನಪಾಗಿ ಮತ್ತೆ ಒಡೋಕೆ ಶುರು ಮಾಡ್ದೆ. ಬಸ್ ಸಿಗ್ತು.

ಬಸ್ಸಿನಲ್ಲಿ ಕುಳಿತ ಮೇಲೆ, ದಾರಿಯ ಆ ಘಟನೆ, ನನ್ನನ್ನ ಆ ಬೇಸಿಗೆಯ ರಜಾದಿನಗಳ ನೆನಪಿನಂಗಳಕ್ಕೆ ಕರೆದೊಯ್ತು. ಆಹಾ! ಏನು ದಿನಗಳವು..

ಇನ್ನೂ ಪರೀಕ್ಷೆಗಳು ಪ್ರಾರಂಭವಾಗುವ ಮೊದಲೇ, ತಾತನ ಕಾಗದ ಬಂದಿರುತ್ತಿತ್ತು ಮಗಳಿಗೆ (ನಮ್ಮಮ್ಮನಿಗೆ). ಪರೀಕ್ಷೆ ಮುಗಿದ ಕೂಡಲೇ ಬರುವಂತೆ ಆಹ್ವಾನ. ಪ್ರೀತಿಪೂರ್ವಕ ಆಗ್ರಹ. ನನ್ನ ಪರೀಕ್ಷೆ ಮುಗಿದ ಮಧ್ಯಾಹ್ನವೇ ಪ್ರಯಾಣ. ಇದುವರೆಗೂ ಪರೀಕ್ಷೆಯ ಫಲಿತಾಂಶವನ್ನು ನಾನೇ ಖುದ್ದು ನೋಡಿದ ಅನುಭವವಿಲ್ಲ. ಪ್ರತಿವರ್ಷ ತಂದೆಯವರೇ ಏಪ್ರಿಲ್ 10 ರಂದು ಫಲಿತಾಂಶ ನೋಡಿ ಬಂದು ಕಾಗದ ಬರೆಯುತ್ತಿದ್ದರು. (ಹೌದು, ಅದೇ ನೀಲಿ ಬಣ್ಣದ 'ಇಂಗ್ಲೆಂಡ್' ಲೆಟರ್ ಆಗಿದ್ದ 'Inland' letter. ಪತ್ರದ ಸೊಗಡನ್ನು ವಿವರಿಸಲು ಇನ್ನೊಂದು ಬ್ಲಾಗ್ ಬೇಕು!) ಕಳುಹಿಸಲು ತಂದೆಯವರಿಗೆ ಸಂಕಟ. ಅವರಿಗೆಲ್ಲಿಂದ ಬರಬೇಕು 2 ತಿಂಗಳು ರಜ. ಅಡುಗೆ ಮಾಡಲು ಬರುತ್ತಿತ್ತಾದ್ದರಿಂದ, ಸ್ವಯಮ್ಪಾಕದ ಬಗ್ಗೆ ಚಿಂತೆಯಿರಲಿಲ್ಲವಾದರೂ, ಮಕ್ಕಳನ್ನು ಬಿಟ್ಟಿರಬೇಕಲ್ಲಾ ಅಂತ. ಹೊರಡುವ ಮುಂಚೆ Do's & Dont's ಗಳ ದೊಡ್ಡ ಭಾಷಣ. ಅಮ್ಮನಿಗೆ (ಹೌದು ಅಮ್ಮನಿಗೇ!) ಮಕ್ಕಳನ್ನು ನೋಡಿಕೊಳ್ಳುವ ಬಗೆ, 'ಎಲ್ಲೆಲ್ಲೋ ನೀರು ಕುಡಿಯಲು ಬಿಡಬೇಡ, ಅಲ್ಲಿ ಇಲ್ಲಿ ಹಾಳು ಮೂಳು ತಿನ್ನೋಕೆ ಬಿಡಬೇಡ'.. ಇತ್ಯಾದಿ. ಅಮ್ಮ ಕೇಳೊತನಕ ಕೇಳಿಸಿಕೊಂಡು, 'ನನಗೂ ಗೊತ್ತು' ಅಂತ ಸ್ವಲ್ಪ ದನಿಯೇರಿಸಿ ಹೇಳ್ತಾ ಇದ್ರು!

ಹಳ್ಳಿಯಲ್ಲಿ ಬಸ್ ಸ್ಟ್ಯಾಂಡ್ ಹತ್ರಾನೇ ಮನೆ. ತಾತ ರೂಮಿನ ಹೊರಗೆ ಕಟ್ಟೆ ಮೇಲೆ ಕುತ್ಕೊಂಡು ಕಾಯ್ತಾ ಇರ್ತಿದ್ರು. ಬಸ್ಸಿನಿಂದ ಇಳಿದ ತಕ್ಷಣ ಅಲ್ಲಿಗೇ ಓಟ. ತಾತನ ಕಣ್ಣಿನ ಹೊಳಪು, ಮೊಮ್ಮಗಳಿಗಾಗೋ, ಮಗಳಿಗಾಗೋ ಇನ್ನೂ ಪ್ರಶ್ನೆ! ಬಾಗಿಲ್ಲಲ್ಲಿ ಕೈಕಾಲು ತೊಳೆದುಕೊಂದು ಒಳಗೆ ಹೋದ ಮೇಲೆ ಉಭಯಕುಶಲೋಪರಿ. ನಾನು ಸೀದಾ ಅಲ್ಲಿಂದ ದನದ ಕೊಟ್ಟಿಗೆಗೆ ಹೋಗ್ತಾ ಇದ್ದೆ. ನಮ್ಮ ಕೆಂಪಿ, ಕೆಂಚಿ, ಗಂಗಿ... ಮತ್ತವರ ಮಕ್ಕಳನ್ನು ಮಾತನಾಡಿಸಿಕೊಂಡು ಬರುವಷ್ಟರಲ್ಲಿ ಅವ್ವ (ನಾವು ಅಜ್ಜಿಯನ್ನು ಹೀಗೇ ಕರೆಯೋದು) ಹಾಲು, ಮಂಡಕ್ಕಿ ರೆಡಿ ಮಾಡಿರೋರು. ಅಪ್ಪ ನಮ್ಮನ್ನು ಬಿಟ್ಟು ಅವತ್ತು ರಾತ್ರಿನೇ ವಾಪಸ್ ಹೊರಡೋರು. ಅಲ್ಲಿ ತನಕ Silent & Good Girl!

ಮೊದಲು ಸ್ವಲ್ಪ ಸಣ್ಣವರಿದ್ದಾಗ (ಇನ್ನೂ ಸ್ನೇಹಿತರು ಅಂತ ಗುಂಪು ಮಾಡಿಕೊಳ್ಳೋ ಮೊದಲು) ಬೆಳಿಗ್ಗೆ ಅವ್ವನ ಜೊತೆಗೇ ಎದ್ದು ಬಿಡ್ತಾ ಇದ್ದೆ. ಅಮೇಲೆ ಅವರ ಹಿಂದೆ ಸುತ್ತೋದು. ದನಗಳ ಬಾನಿಗೆ ಹುಲ್ಲು ಹಾಕೋದು, ಮುಸುರೆ ಹೀಗೆ ಎಲ್ಲಕೂ ಒಂದು ಕೈ ಹಾಕೋದು. ಇನ್ನ ಹಾಲು ಕರೆಯೋಕೆ ಹೋಗಿರ್ತಾರಷ್ಟೆ, ಹಾಲು ಬೇಕು ಅಂತ ಅವರ ಹಿಂದೆ ಹೋಗೋದು. ಆಗ ತಾನೆ ಕರ್ದಿದ್ದ ಬೆಚ್ಚಗಿನ ಹಾಲನ್ನ ಒಂದು ದೊಡ್ಡ ಭವಾನಿ ಲೋಟಕ್ಕೆ ಹಾಕಿ ಕೊಡೋರು.. ಒಂದು ಸಲ ಲೋಟ ಎತ್ತಿದ್ರೆ, ಪೂರ್ತಿ ಖಾಲಿ ಆಗೋ ತನಕ ಕೆಳಗೆ ಇಳಿಸುತ್ತಿರಲಿಲ್ಲ. ಅದೇನು ಹಾಗೆ 'ಗೊಟಕ್, ಗೊಟಕ್' ಅಂತ ಕುಡಿತೀಯೇ ಅಂತ ಅಮ್ಮ ಬೈತ ಇದ್ರೂ, ಅದೆಲ್ಲ ಕೇಳಿಸ್ಕೊತಾ ಇರ್ಲಿಲ್ಲ. ಎಲ್ಲ ಕುಡಿದು ಮುಗಿಸಿದ ಮೇಲೆ, ಮೂಡಿರ್ತಿದ್ದ ಆ ಮೀಸೇನ ಕೈಯಲ್ಲೇ ಒರೆಸಿಕೊಂಡು, ತಾತನಿಗೆ ಕಂಪ್ಲೇಂಟ್ ರವಾನೆ. ಅಮ್ಮನ ಕೋಪ ಅವರಿಗೆ ಹಿಂದಿರಿಗಿಸುವ ಯಶಸ್ವೀ ಪ್ರಯತ್ನ! ಆಮೇಲೆ ಮನೆಯೆಲ್ಲ ಒಂದು ರೌಂಡ್ ಹೊಡೆಯೋದು. ಸ್ವಲ್ಪ ಹೊತ್ತು ಅಟ್ಟದಲ್ಲಿ ಅನ್ವೇಷಣೆ. ದನ ಮೇಯಿಸ್ಲಿಕ್ಕೆ ಕರ್ಕೊಂಡು ಹೋಗಕ್ಕೆ ಬರ್ತಿದ್ದ ಮಂಜಣ್ಣನ ಹತ್ತಿರ ಸ್ವಲ್ಪ ಹರಟೆ. ತಾತ ಹೊರಡುವ ಮುನ್ನ ಅವರ ಹತ್ರ ಸ್ವಲ್ಪ ಕಥೆ. ಅಲ್ಲಿಂದ ಮಜ್ಜಿಗೆ ಕೋಣೆಗೆ ಸವಾರಿ. ನಾನೂ ಮಜ್ಜಿಗೆ ಕಡೀತೀನಿ ಅಂತ ಗಲಾಟೆ. ಕಡೆಗೋಲು ನನಗಿಂತಾ ಎರಡು ಪಟ್ಟು ಎತ್ತರವಾಗಿತ್ತು. ಒಂದು ಕಡೆ ಹಗ್ಗ ಎಳೆದರೆ, ಇನ್ನೊಂದರ ಜೊತೆಗೆ ನಾನೂ ಹೋಗಿ ಮಜ್ಜಿಗೆ ಕೊಳಗದಲ್ಲೇ ಬೀಳುವ ಎಲ್ಲ ಸಾಧ್ಯತೆ ಇತ್ತು. ಅವ್ವ 'ಮಾಡುವಾಗ ಎಲ್ಲಿ ಹೋಗಿರ್ತೀರೋ' ಅಂತ ಗೊಣಗ್ತಾ, ಅವರೇ ಕೈ ಹಿಡಿಸಿಕೊಂಡು ಒಂದೆರಡು ಸಲ ಕಡೆಸಿ ಕೈಬಿಡ್ತಾ ಇದ್ರು. ದನಗಳೆಲ್ಲ ಹೋದಮೇಲೆ ಕೊಟ್ಟಿಗೆ ಕ್ಲೀನಿಂಗ್. ಅವ್ವನ ಜೊತೆ ಕುಳ್ಳು ತಟ್ತೀನಿ ಅಂತ ಕುತ್ಕೋತಾ ಇದ್ದೆ. ಸಗಣಿ ಮುದ್ದೇನ ಗೋಡೆಗೆ ಬಡಿಯೋದ್ರಲ್ಲಿ ಏನೋ ಖುಷಿ. ನನ್ನ ಪುಟಾಣಿ ಕೈಯಲ್ಲಿ ಒಂದು ಕುಳ್ಳು ತಟ್ಟೊ ಹೊತ್ತಿಗೆ ಅವ್ವ ಪೂರ್ತಿ ಮಾಡಿ ಮುಗಿಸಿರ್ತಿದ್ರು! ಮತ್ತೆ ಅವ್ವ ಹೊಲಕ್ಕೆ ಬುತ್ತಿ ತಗೊಂಡು ಹೋಗುವಾಗ ಅವರ ಜೊತೆ. ಅಮ್ಮ ಸ್ಯಾಂಡಲ್ ಎಲ್ಲ ಹಾಕಿ, ಬಟ್ಟೆ ಕೊಳೆ ಮಾಡ್ಕೊಂಡ್ರೆ ನೋಡು ಅಂತೆಲ್ಲ ತಾಕೀತು ಮಾಡ್ತಾ ಇದ್ರು. ಅವ್ವ ಚಪ್ಪಲಿ ಇಲ್ಲದೇ ಬರೀ ಕಾಲಲ್ಲಿ ನಡ್ಕೊಂಡು ಬರ್ತಾ ಇದ್ರು! ಯಾವ ನೆರವಿಲ್ಲದೇ ಅವ್ವ ತಲೆಮೇಲೆ ಬುತ್ತಿನ ಬ್ಯಾಲೆನ್ಸ್ ಮಾಡ್ಕೊಂಡು ನಡಿತಾ ಇದ್ದದ್ದು ಒಂದು ಅಚ್ಚರಿಯಾಗಿತ್ತು. ಜೊತೆಗೆ ಅವರ ಸೆರಗು ನನ್ನ ತಲೆಮೇಲೆ ಇರ್ತಿತ್ತು. ನಾನೂ ಹೊತ್ಕೋತೀನಿ ಅಂತ ಹಠ ಮಾಡಿದಾಗ, ಒಂದು ಸಣ್ಣ ಚೌಕವನ್ನ ಸಿಂಬೆ ಮಾಡಿ ಪುಟ್ಟ ಹರಿವಾಣವನ್ನ (ನನ್ನ ಬುತ್ತಿ) ನನ್ನ ತಲೆ ಮೇಲೆ ಇಟ್ಟು ಕರ್ಕೊಂಡು ಹೋಗ್ತಾ ಇದ್ರು. ಸಂಜೆ ಮುಂದೆ ದನಗಳು ಮನೆಗೆ ಬರೋ ಹೊತ್ತಿಗೆ ಬಾಗಿಲಿಗೆ ನೀರು ಹಾಕಿ ಕಾಯೋದು. ಮತ್ತೆ ಅವ್ವನ ಹಿಂದೆ ಸುತ್ತೋದು, ದನ ಬಂದ್ವಲ್ಲಾ, ಹಾಲೆಲ್ಲಿ ಅಂತ! ಸಾಯಂಕಾಲ ತಾತನ ಜೊತೆ ಒಂದು ರೌಂಡ್ ವಾಕಿಂಗ್. ತಾತನ್ನ ಅದೂ ಇದೂ ಪ್ರಶ್ನೆ ಕೇಳ್ತಾ ಇದ್ದೆ, ಈಮರ ಇಲ್ಲ್ಯಾಕಿದೆ? ಚಾನೆಲ್ ನಲ್ಲಿ ನೀರು ಯಾಕೆ ಇಲ್ಲ? ಎರಡು ಎತ್ತು ಸಾಕಾಗತ್ತಾ? ಹೀಗೆ.. ತಾತ ನನ್ನ ಶಾಲೆ ಬಗ್ಗೆ, ಊರಿನ ಬಗ್ಗೆ ಕೇಳೋರು. ಕಥೆ ಹೇಳೋರು.

ಸ್ವಲ್ಪ ದೊಡ್ಡವರಾದ ಮೇಲೆ ಸ್ವಲ್ಪ ಬದಲಾವಣೆ. ಆಟ, ಆಟ,ಆಟ!! ಬೆಳಿಗ್ಗೆ ತಿಂಡಿ ತಿಂದು ಮನೆಯಿಂದ ಹೊರಟ್ರೆ, ಹಿಂತಿರುಗುತ್ತಿದ್ದುದು ಸಾಯಂಕಾಲವೇ. ಅಬ್ಬಾ! ಅದೆಷ್ಟು ಆಟಗಳು! ಲಗೋರಿ, ಗೋಲಿ, ಚಿನ್ನಿದಾಂಡು, ಮರಕೋತಿ, ಕಣ್ಣಮುಚ್ಚೇ, ಜೂಟಾಟ, ಕಳ್ಳಪೋಲಿಸ್, ರತ್ತೊ ರತ್ತೋ ರಾಯನ ಮಗಳೆ.. ಬಿಡುವಿಲ್ಲದಾಟಗಳು. ಹೊಟ್ಟೆ ಹಸೀತಾ ಇದೆ ಅನ್ಸಿದ್ರೆ, ಯಾರದಾದ್ರೂ ಹೊಲಕ್ಕೆ ನುಗ್ಗೋದು. ಮಾವಿನ ಮರ, ಪೇರಲೆ ಮರ, ಪಪ್ಪಯಿ ಹಣ್ಣು, ಬೇಲಿಲಿ ಸಿಕ್ತಾ ಇದ್ದ ತೊಂಡೆ ಹಣ್ಣು, ಕಾರೆಹಣ್ಣು, ಬೋರೆ ಹಣ್ಣು.., ಹುಣಸೆಕಾಯಿ... ಆಮೇಲೆ ಒಂದು ಎಳನೀರು. ಹುಡುಗರು ಮರಹತ್ತಿ ತಮಗೆ ಬೇಕಾದ ಹಣ್ಣು ಕಿತ್ಕೊಳ್ತಾ ಇದ್ರು. ಒಂದ್ಸಲ ಅಣ್ಣ ನಾನು ಕೇಳಿದ ಹಣ್ಣು ಕಿತ್ತು ಕೊಡ್ಲಿಲ್ಲ. ಆಗ ಹಟಕ್ಕೆ ಕಲ್ತಿದ್ದು ಮರ ಹತ್ತೋದನ್ನ. ನಾನು ಮರ ಹತ್ತಿದಾಗ ಬೇಕಂತ ಮರ ಅಲ್ಲಾಡಿಸ್ತಾ ಇದ್ದ. 'ತಡಿ, ತಾತಂಗೆ ಹೇಳ್ತೀನಿ' ಅಂತಿದ್ದೆ. 'ಹೋಗೇ, ತಾತನ ಮೊಮ್ಮಗಳೇ, ನಾನು ಅವ್ವನಿಗೆ ಹೇಳ್ತೀನಿ, ಹುಡಿಗೀರನೆಲ್ಲ ಗುಂಪು ಕಟ್ಕೊಂದು ಮರ ಹತ್ತಾಳೆ ಅಂತ' ಅಂತಿದ್ದ. ಆದ್ರೆ, ನಾನು ಅಲ್ಲೇ ಯಾರ್ದಾದ್ರು ಮನೆಗೆ ನುಗ್ಗಿ, ಉಪ್ಪುಖಾರ ಹಾಕ್ಕೊಂಡು ಹದ ಮಡ್ಕೊಂಡು ಹಣ್ಣು ತಿನ್ತಾ ಇರ್ಬೇಕಾದ್ರೆ ಹಲ್ಕಿರ್ಕೊಂಡು ಬರ್ತಾ ಇದ್ದ. ಮನೆಗೆ ಹೋಗೋಶ್ಟರಲ್ಲಿ ಎಲ್ಲ ಮರೆತು ಹೋಗಿರ್ತಿತ್ತು. ಹೊಲ ಬೇಜಾರಾದಾಗ ಚಾನೆಲ್ ಗೆ ಹೋಗ್ತಾ ಇದ್ವಿ. ನೀರಲ್ಲಾಡೋಕೆ. ಈ ಹುಡುಗ್ರು ಎಲ್ಬೇಕಾದ್ರು ಈಜೋಕೆ ಹೋಗೋರು. ಆದ್ರೆ ಹುಡಿಗೀರಿಗೆ ಆ ಸ್ವಾತಂತ್ರ್ಯ ಇರ್ಲಿಲ್ಲ. ಆಗೆಲ್ಲ ದೇವ್ರನ್ನ ಚೆನ್ನಾಗಿ ಬೈಕೊಂಡಿದ್ದೀನಿ. ನಾನು ಸೈಕಲ್ ಹೊಡೆಯೋದು ಕಲೀಬೇಕಾಗಿತ್ತು. ಸುಮ್ನೆ ಹೇಳಿದ್ರೆ ಇವ್ರು ಕಲಿಸ್ತಾ ಇರ್ಲಿಲ್ಲ. ದೊಡ್ಡಪ್ಪನಿಂದ ಶಿಫಾರಸು ತಂದಿದ್ದೆ. ಅಕ್ಕನಿಗೆ ಕಲಿಸುವಾಗ ಹತ್ತಿಸಿ ಕೈಬಿಟ್ಟು, ಅವಳು ಇವರು ಹಿಡ್ಕೊಂಡಿದಾರೆ ಅನ್ಕೊಂಡೇ ಓಡಿಸ್ತಾ, ಒಂದ್ಸಲ ಹಿಂದೆ ನೋಡಿ, ಮುಂದಿದ್ದ ಮನೆಯ ಗೋಡೆಗೆ ಗುದ್ದಿ ಗದ್ದ ಗಾಯ ಮಡ್ಕೊಂಡಿದ್ಲು. ನಾನು ಸ್ವಲ್ಪ ಮುಂಜಾಗ್ರತೆ ವಹಿಸಿ Open Field ಗೆ ಕರ್ಕೊಂಡು ಹೋಗಿದ್ದೆ. ಸೈಕಲ್ ಹತ್ಕೊಂಡೆ. 'ತುಳಿಯೇ, ತುಳಿದ್ರೆ ತಾನೇ ಮುಂದಕ್ಕೆ ಹೋಗೋದು, ಎಷ್ಟು ಅಂತ ತಳ್ಳಲಿ' ಅಂತ ಬೈತಾ ಇದ್ದ. ನಾನು ಹತ್ಕೊಂಡು ಬರೀ ರೆವೆರ್ಸೆ ತುಳಿತಾ ಇದ್ದೆ, easy ಅಲ್ವ! ಕೊನೆಗೂ ಮುಂದಕ್ಕೆ ತುಳಿದೆ. ನಂಗೂ ಒಂದ್ಸಲ ಹಾಗೇ ಮಾಡಿದ್ರು. ಹಿಡ್ಕೊಂಡಿದಾರೆ ಅಂತ ತುಳಿತಾ ಇದ್ದೋಳು, ತಿರುಗಿಸಿಕೊಂಡು ಬರ್ತಾ ಇದ್ದೆ, ಅಣ್ಣ ಮುಂದೆ ನಿಂತಿದ್ದ. ಅಷ್ಟೇ! ಸೈಕಲ್ ಒಂದ್ಕಡೆ, ನಾನೊಂದ್ಕಡೆ!

ಯಾವಾಗ್ಲೂ ತಾತನ ಕಣ್ತಪ್ಪಿಸಿ ಆಟಕ್ಕೆ ಹೋಗ್ತಾ ಇದ್ದದ್ದು. ಇಲ್ಲಾಂದ್ರೆ ಬಿಸ್ಲಲ್ಲಿ ಹೋಗಿದ್ದಕ್ಕೆ ಬೈತಾ ಇದ್ರು. ಎಲ್ಲೇ ಹೋಗಿದ್ರೂ ಸಾಯಂಕಾಲ ದೀಪಮುಡ್ಸೋ ಹೊತ್ತಿಗೆ ಸರಿಯಾಗಿ ಮನೆಲಿ ಇರ್ತಾ ಇದ್ವಿ. ಆಮೇಲೆ ತಾತನವರೊಂದಿಗೆ ಪಗಡೆ, ಚಾವಂಗ, ಕವಡೆ, ಆನೆ ಮನೆ, ಹಾವು ಏಣಿ, ಅಳ್ಗುಳಿಮಣೆ, ಕಡ್ಡಿ ಆಟ, ಕಲ್ಲಾಟ, ಸೆಟ್ ಹೀಗೇ ಈನಾದ್ರೊಂದು. ಆಮೇಲೆ ಊಟ. ಆದ್ಮೇಲೆ ಎಲ್ಲರೂ ಒಟ್ಟಿಗೇ ಕುತ್ಕೊಂಡು ಏನಾದ್ರು ಹರಟೆ. ಸ್ವಲ್ಪ ಪ್ರತಿಭಾ ಪ್ರದರ್ಶನ. ಅಕ್ಕ ಚೆನ್ನಾಗಿ ಹಾಡು ಹೇಳೋಳು. ಭರತನಾಟ್ಯ ಕೂಡ. ನಂದು average. ನಮ್ಮಿಬ್ರಿಗೂ ಚೆನ್ನಾಗಿದೆ ಅಂತ ಶಭಾಷ್ಗಿರಿ ಕೊಟ್ರೆ, ಅಣ್ಣನಿಗೇನೋ ಸಂಕಟ. ನಾನೂ ಹಾಡ್ತೀನಿ, ಕುಣಿತೀನಿ ಅಂತ ನಮ್ಗೆಲ್ಲ torture ಕೊಡ್ತಾ ಇದ್ದ. ತಾತ 'ಬಾರಿಸ್ತೀನಿ' ಅಂದ್ರೆ, ನಮ್ಮಮ್ಮ 'ಬಾರೋ ರಾಜ' ಅಂತ ಮುದ್ದಾಡೋರು.

ಅಪ್ಪ ಸ್ವಲ್ಪ ದಿನ ರಜೆ ಹಾಕಿ ಬಂದಾಗ, ಸ್ವಲ್ಪ ದಿನದ ಮಟ್ಟಿಗೆ ಇನ್ನೊಂದು ತಾತನ ಮನೆಗೆ ಪಯಣ. ರಾಣೆಬೆನ್ನೂರಿನ ತನಕ ಆರಾಮವಾಗಿ ಹೋಗಿದ್ದು ತಿಳಿದಿದೆ. ಆದರೆ ಅಲ್ಲಿಂದ ಹಳ್ಳಿಗೆ ಹೋಗಿದ್ದೇ ಮೆಟಡೋರ್ ಇತ್ಯಾದಿ ವಾಹನಗಳಲ್ಲೇ. ಅದರಲ್ಲಿ ಕೆಲವೊಮ್ಮೆ ಲಂಬಾಣಿ ತಾಂಡ್ಯಾದ ಹೆಂಗಸರು ಪರಮಾತ್ಮನ್ನ ಇಳಿಸಿಕೊಂಡು, ಮೀನು ಇತ್ಯಾದಿಗಳನ್ನು ತಗೊಂಡು ಬರ್ತಾ ಇದ್ರು. ಅವರ ಭಾಷೆ, ವೇಷಗಳೆಲ್ಲವೂ ಒಂಥರಾ ಮೋಜು. ಮಲ್ನಾಡ್ ಕಡೆ ನಮ್ದೊಂಥರಾ ಗ್ರಾಂಥಿಕ ಭಾಷೆ. ದಾವಣಗೆರೆ ಭಾಷೆ ಬೇರೆ. (ಏ ಪಾಪಿ ಬಾ ಇಲ್ಲಿ ಅಂತ ಕರೆದವರನ್ನ ಬೈಯುವ ಮುನ್ನ ಸ್ವಲ್ಪ ಯೋಚಿಸಿ!) ಬ್ಯಾಡಗಿಗೆ ಹೋದ್ರೆ ಇನ್ನೊಂಥರಾ. ಆದರೆ ನನಗೆ ಇಂದಿಗೂ ಆಶ್ಚರ್ಯ ಆಗುವ ವಿಷಯವೆಂದರೆ,. ಅಲ್ಲಲ್ಲಿಗೆ ಹೋದಾಗ ಆ ಭಾಷೆ ಹಾಗೇ ಬಂದು ಬಿಡುತ್ತದೆ. (ಭಾಷೆನೂ ರಕ್ತದಲ್ಲಿರತ್ತಾ!) ಈ ಹಳ್ಳಿಯಲ್ಲಿ ಇನ್ನೊಂತರಾ ಮಜಾ. ಕಪ್ಪು ಮಣ್ಣು, ಜೋಳದ ಹೊಲ. ಮೆಣಸಿನ ಮಂಡಿ (ಜಾಸ್ತಿ ಹೋಗೋಕೆ ಬಿಡ್ತಾ ಇರ್ಲಿಲ್ಲ, ಘಾಟು ಅಂತ). ಗುಡ್ಡಕ್ಕೆ ಹೋಗೋದು. ಹೊಂಡಕ್ಕೆ ಹೋಗೋದು. ತಂದೆಯವರ ಜೊತೆ ಅವರ ಶಾಲೆಗೆ ಹೋಗೋದು. ಅವರ ಮಾಸ್ತರರನ್ನು ಮಾತನಾಡಿಸುವುದು. ಸಂತೆ, ವೀರಭದ್ರನ ಗುಡಿ ಹೀಗೆ ಸುತ್ತಾಡೋದು. ಆ ಪುಟಾಣಿ ಅಡುಗೆ ಮನೆಯಲ್ಲಿ ದೊಡ್ಡಮ್ಮ ಪಟ ಪಟ ಅಂತ ರೊಟ್ಟಿ ಬಡಿಯೋದನ್ನ ನೋಡೋದೇ ಸಂಭ್ರಮ. ಜೋಳದ ರೊಟ್ಟಿಗಳ stack. ಏನ್ ಛಂದ ಜೋಡ್ಸಿರ್ತಾರಂತ! ಅದಕ್ಕೆ ಕರಿಂಡಿ, ಬಣ್ಣಬಣ್ಣದ ಚಟ್ನಿಪುಡಿಗಳು.. ಉಳ್ಳಾಗಡ್ಡಿ, ಹಸಿಮೆಣಸಿನಕಾಯಿ.. ಆ ಕಟಿಕಟಿ ರೊಟ್ಟಿ ನನ್ಗೆ ಉಣ್ಣಾಕ್ಬರಾಂಗಿಲ್ಲಾಂತ ಬಿಸಿ ಬಿಸಿ ರೊಟ್ಟಿ ಮಾಡ್ಕೊಡ್ತಾ ಇದ್ರು. ಉಂಡ್ಕೊಂಡು ಉಡಾಳಾಗಿದ್ದೇ ಬಂತು ಇಲ್ಲಿ. ಪಾಪ ತಮ್ಮಂದ್ರು/ ಕಾಕಾ ಎಲ್ಲ ಹೊಂಡದಿಂದ, ಮತ್ತೆಲ್ಲಿಂದಲೋ ನೀರು ತರ್ತಾ ಇದ್ರು. ತುಂಗೆ ಮಡಿಲಲ್ಲಿ ಬೆಳೆದಿರೋ ನಂಗೆಲ್ಲಿಂದ ಗೊತ್ತಾಗ್ಬೇಕು ನೀರಿನ ಬವಣೆ!

ಇನ್ನೊಂದ್ ಸ್ವಲ್ಪ ದೊಡ್ಡೋರಾದ ಮೇಲೆ ಸ್ವಲ್ಪ ಜವಾಬ್ದಾರಿ. ಮನೆ ಕಸ ಮುಸುರೆ ಎಲ್ಲ ಮುಗಿಸಿದ ಮೇಲೇ ಹೊರಗೆ ಹೊಗ್ತಾ ಇದ್ದದ್ದು. ಅಷ್ಟು ದೊಡ್ಡ ಪಡಸಾಲೆ, ಅಟ್ಟ, ಅಡುಗೆ ಮನೆ, ದೇವರ ಮನೆ, ಎಲ್ಲ ಗುಡಿಸಿ ಸಾರ್ಸೋ ಅಷ್ಟು ಹೊತ್ತಿಗೆ ಒಳ್ಳೇ ವ್ಯಾಯಾಮ. ಸಾಯಂಕಾಲ ನೀರು ಬಿಡೋ ಅಷ್ಟು ಹೊತ್ತಿಗೆ ಮನೆಗೆ ಬಂದ್ಬಿಡ್ಬೇಕು. ಇಲ್ಲಾಂದ್ರೆ ಅಮ್ಮನ ಪೊರಕೆ/ಸೌಟು ಕಾಯ್ತಾ ಇರ್ತಿತ್ತು. ಬೇಕಂತಲೇ ತಾತನ ಕೋಣೆ ಮುಂದೆನೇ ಸೊಂಟದ ಮೇಲೆ ಆ ದೊಡ್ಡ ದೊಡ್ಡ ಕೊಡ ಹೊತ್ಕೊಂಡು ಬರ್ತಾ ಇದ್ದೆ. ಅವ್ವನ ಹತ್ರ ಬೈಸ್ಕೊತಾ ಇದ್ದೆ.

ಎಲ್ಲಾ ದೊಡ್ಡೋರಾಗ್ತಾ ಅಗ್ತಾ ಊರಿಗೆ ಹೋಗೋ Frequency ಕಮ್ಮಿ ಆಗೋಯ್ತು. ಅಕ್ಕ ಅಣ್ಣಂಗೆ ಪರೀಕ್ಷೆ ಅಂತ ದೊಡ್ಡಮ್ಮ ಬರ್ತಾ ಇರ್ಲಿಲ್ಲ. ಇವ್ರು ಬರಲ್ಲ ಅಂತ ಅವ್ರು, ಅವ್ರಿಗೆ ಪರೀಕ್ಷೆ ಅಂತ ಇವ್ರು, ಇವ್ರು ಬರಲ್ಲ ಅಂತ ಅವ್ರು.. ಹೀಗೇ ಆಗೋಯ್ತು...

ಇಂದಿನ ನಗರವಾಸಿ ಪೀಳಿಗೆಗೆ ಇದೆಲ್ಲ ಲಭ್ಯವಿದೆಯಾ? ಗೊತ್ತಿಲ್ಲ. ಅಥವಾ ಅವರ 'ಮಜಾ' ಪದದ ಅರ್ಥವೇ ಬೇರೆನಾ ಗೊತ್ತಿಲ್ಲ. ಏನೇ ಆದ್ರೂ, ನಿಸರ್ಗದ ಮಡಿಲಲ್ಲಿ. ಸ್ನೇಹಿತರೊಡನೆ ಆಡಿದ ಆ ದಿನಗಳು, ಹಂಚಿತಿಂದ ಆ ಹಣ್ಣಿನ, ತಿಂಡಿಗಳ ರುಚಿ, ಅವ್ವ, ತಾತರ ಅನುಭವದ ಸಾರದೊಡನೆ ಕಳೆದ ಆ ಕಾಲ ಮತ್ತೆ ಬರಲಾರದು. ಏನಿದ್ದರೂ ಸವಿ ನೆನಪುಗಳು ಮಾತ್ರ...

ಆ ಲೋಕದಿಂದ ಹೊರಬರುವಷ್ಟರಲ್ಲಿ ಆಫೀಸು ಬಂತು. ಮತ್ತದೇ ಕಚೇರಿ.. ಮತ್ತದೇ ಕೆಲಸ... ಮತ್ತವೇ ಪರೀಕ್ಷೆಗಳು.... ನಿರ್ಧರಿಸಿಬಿಟ್ಟೆ! ಈ ಕೆಲಸ, ಪರೀಕ್ಷೆಗಳು ಯಾವತ್ತಿಗೂ ಮುಗಿಯದ ಕಥೆ. ಇಂದು ಬೇರೇನಾದ್ರು ಓದಲೇಬೇಕು... (ಸಂಪದವಿದೆಯಲ್ಲ ಸಹಾಯಕ್ಕಾಗಿ..!)

[ಚಿತ್ರ]

ಬ್ಲಾಗ್ ವರ್ಗಗಳು: 
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 5 (5 votes)
To prevent automated spam submissions leave this field empty.

ಪ್ರತಿಕ್ರಿಯೆಗಳು

>>>ಇಂದಿನ ನಗರವಾಸಿ ಪೀಳಿಗೆಗೆ ಇದೆಲ್ಲ ಲಭ್ಯವಿದೆಯಾ? ಗೊತ್ತಿಲ್ಲ. ಅಥವಾ ಅವರ 'ಮಜಾ' ಪದದ ಅರ್ಥವೇ ಬೇರೆನಾ ಗೊತ್ತಿಲ್ಲ. <<<

ನಾಳೆ ಸುಟ್ಟಿ ಇದೆ ಮರಿ, ನಾಳೆ ಫುಲ್ ಡೇ ಮಲಗಿ ಹಾಯಾಗಿ ಮಲ್ಕೊಳ್ಳೋಣ ಕಣೋ ಅಂತಾರೆ ಎಲ್ಲ ನನ್ ಗೆಳೆಯರು. ಅವ್ರಿಗೆ ರಜೆ ಅಂದ್ರೆ ಬರಿ ನಿದ್ದೆ.
ನನಗ್ಯಾಕೋ ನಮ್ ಮನೆ ಬಿಟ್ಟು ಬೇರೆ ಯಾರ ಮನೆಯು ಇಸ್ಟಾನೆ ಆಗ್ಲಿಲ್ಲಾ, ಅದಕ್ಕೆ ೨ ದಿನ ರಜಾ ಸಿಕ್ರು ಸಾಕು ಊರಿನ ಬಸ್ ಹಿಡಿತೀನಿ

ಶಶಿ ಬಿರ್ಗೆ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಎಲ್ಲದಕ್ಕೂ ವೀಕೆಂಡ್ ಕಾಯೋ ಪರಿಸ್ಥಿತಿನೇ ಬಹುತೇಕ ಎಲ್ಲಾರ್ದು ಬೆಂಗಳೂರಲ್ಲಿ. :(
ಎಷ್ಟಾದ್ರೂ ನಮ್ಮನೆ ನಮ್ಮನೇನೆ ಅಲ್ವಾ? ಎಲ್ಲಿದ್ರೂ ನಮ್ಮನೇಲಿ ಇದ್ದಷ್ಟು ಸಂತೋಶ ಆಗಲ್ಲ ಬಿಡಿ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಇಷ್ಟೊಂದೆಲ್ಲಾ ನೆನಪು ಮಾಡಿಕೊಂಡ್ರಲ್ಲ ಆಫೀಸಿಂದ ಮನೆ ಸಿಕ್ಕಾಪಟ್ಟೆ ದೂರಾನೆ ಇರ್ಬೇಕು :)
ಒಳ್ಳೆ ಬೇಸಿಗೆಯ ದಿನಗಳನ್ನು ನೆನಪು ಮಾಡಿ ಕೊಟ್ರಿ, ನಂಗೂ ಬರೀಬೇಕನ್ನಿಸ್ತಿದೆ..

>>ಇಂದಿನ ನಗರವಾಸಿ ಪೀಳಿಗೆಗೆ ಇದೆಲ್ಲ ಲಭ್ಯವಿದೆಯಾ? ಗೊತ್ತಿಲ್ಲ. ಅಥವಾ ಅವರ 'ಮಜಾ' ಪದದ ಅರ್ಥವೇ ಬೇರೆನಾ ಗೊತ್ತಿಲ್ಲ
ಹಳ್ಳಿವಾಸಿಗಳೂ ಬದಲಾಗ್ತಾ ಇದಾರೆ. ನನ್ನಕ್ಕ ಇರೋದು ಹಳ್ಳೀಲೆ, ನನ್ನಳಿಯನಿಗೆ (೪ ಪಾಸಾಗಿ ೫) ಕಂಪ್ಯೂಟರ್, ಟಿ.ವಿ. ಬಿಟ್ರೆ ಬೇರೇನೂ ಬೇಡ. ಮೊನ್ನೆ ಊರಿಗೆ ಹೋಗಿದ್ದಾಗ ಅಕ್ಕಂಗೆ ತೋಟಕ್ಕೆ ನೀರು ಬಿಡೋಕೂ ಸಮಯ ಇರ್ಲಿಲ್ಲ. ನಾನದಕ್ಕೆ ಅಳಿಯಂಗೆ ನೀರು ಬಿಡು ಅಂತ ಹೇಳಿದೆ. ನಂಗೀಗ ಕಾರ್ಟೂನ್ ನೋಡ್ಬೇಕು ನಾನು ಬಿಡೋದಿಲ್ಲ ಅಂದ. ಸರಿ ಅಂತ ನಾನೇ ನೀರು ಬಿಡೋಕೆ ಹೋದೆ. ನಮ್ಮೂರಲ್ಲಿ ನೀರಿಗೇನೂ ಬರ್ಗಾಲ ಇಲ್ಲ, ಪೈಪಲ್ಲಿ ಬಿಡೋ ನೀರನ್ನ ಮಳೆ ತರ ಗಿಡದ ಮೇಲೆ ಹಾಕೋಕೆ ಆರಂಭಿಸಿದ ಸ್ವಲ್ಪ ಹೊತ್ತಿನಲ್ಲೇ ಅವನೂ ಬಂದ. ಇಬ್ಬರೂ ಸೇರಿ, ಗಿಡ ಮರಕ್ಕೆಲ್ಲಾ ನೀರ್ಬಿಟ್ಟು, ಸರಿಯಾಗಿ ನೀರಾಟ ಆಡಿ ಮನೆಗೆ ಹೋಗಿ ನೋಡಿದ್ರೆ ಟಿವಿಲಿ ಕಾರ್ಟೂನ್ ಅದ್ರಪಾಡಿಗೆ ಅದು ಬರ್ತಾ ಇತ್ತು :)

ಪಾಪ ಗೊತ್ತಿರೋದಿಲ್ಲ ಅವ್ಕೆ, ಸಂತೋಷವಾಗುತ್ತೆ ಅವ್ರಿಗೂ..

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಹೂ.. ಆಫೀಸಿಂದ ಮನೆ ಸಿಕ್ಕಾಪಟ್ಟೆ ದೂರ, ಉತ್ತರ ಧೃವದಿಂ ದಕ್ಷಿಣ ಧೃವಕೂ.... :)
ಬರೀರಿ, ನಿಮ್ಮ ರಜಾದಿನಗಳ ಮಜಾ ನಮ್ಗೂ ಸಿಗಲಿ :)

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಚಿಕ್ಕಂದಿನಿಂದಲೇ ನನ್ನ ಓದು ಪಟ್ಟಣದಲ್ಲದರು ನಾನು ಮೂಲತಃ ಹಳ್ಳಿಯವನು ಹಾಗಾಗಿ ವರ್ಷದ ೩ ತಿಂಗಳು ಖಾಯಂ ಮೊಕ್ಕಾಂ ಹೂಡುತ್ತಿದ್ದು ನಮ್ಮ ಹಳ್ಳಿಯಲ್ಲೇ. ನಮ್ಮದು ದೊಡ್ಡ ಕುಟುಂಬ ಆಗಿದ್ದರಿಂದ ಅತ್ತೆ ಮತ್ತು ಮಕ್ಕಳು ಎಲ್ಲ ಬೇಸಿಗೆ ರಜೆಗೆ ಟಿಕಾಣಿ ಹೂಡುತ್ತಿದ್ದು ನಮ್ಮ ಮನೆಯಲ್ಲಿ ಹಾಗಾಗಿ ಚಿಕ್ಕ ಮಕ್ಕಳನ್ನ ರೇಗಿಸುತ್ತಾ ಕಳ್ಳ ಪೋಲಿಸ್ ಆಟ, ಕಣ್ಣ ಮುಚ್ಚಾಲೆ, ಚೌಕ ಬಾರಾ, ಚಿನ್ನಿ ದಾಂಡು, ಹೋಟೆಲ್ ಆಟ,ಬೂಗುರಿ ಒಂದೇ ಎರಡೇ ಪಟ್ಟಿ ಮಾಡುತ್ತ ಹೋದರೆ ಅದು ಹನುಮಂತನ ಬಾಲದ ಹಾಗೆ.ಆದರೆ ಕ್ರಮೇಣ ಎಲ್ಲರದು ಅವಿಭಕ್ತ ಕುಟುಂಬದಿಂದ ವಿಭಾಕ್ತವಾಗಿ ಮನೆಯ ಜವಾಬ್ದಾರಿಯಲ್ಲ ಹೆಚ್ಚ್ಚಾಗಿ ಅತ್ತೆಯ ಮಕ್ಕಳು ದೊಡ್ಡವರಾಗುತ್ತಾ ನಮಗೂ ಅವರಿಗೂ ರಜೆಯ ಸಮಯ ಕೂಡದೆ ಎಷ್ಟೋ ವರುಷ ಕಳೆದಿವೆ ಎಲ್ಲ ಜತೆಗೂಡಿದೆ.ಇಂದಿನ ಬೇಸಿಗೆಯ ದಿನಗಳಲ್ಲಿ ಕಾಂಕ್ರೀಟ್ ಕಾಡಲ್ಲಿ ಆಫೀಸಿಗೆ ಹೋಗುವಾಗ ನೆನಪಿಗೆ ಬರುವದು ಆ ಬಾಲ್ಯದ ಶುಭ ಸುದಿನಗಳು.ಅದೇನು ಅಂತಾರಲ್ಲ ಇಂಗ್ಲೀಷಲ್ಲಿ ಮಿಲಿಯನ್ ದಾಲ್ಲರ್ ಕ್ಷಣಗಳು ಅಂತ ಹಾಗೆ ಆ ದಿನಗಳು. ತುಂಬಾ ಧನ್ಯವಾದಗಳು ಅ ದಿನಗಳನ್ನ ನೆನಪಿಸಿದ್ದಕ್ಕೆ. ಆ ದಿನಗಳು ಪ್ರತಿ ಕ್ಷಣ ನನ್ನ ಒಳಗೆ ....................

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಿಜ, ಕೋಟಿ ಕೊಟ್ರೂ ಮತ್ತೆ ಸಿಗಲ್ಲ ಆ ಕ್ಷಣಗಳು. ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

<ಮೆಣಸಿನ ಮಂಡಿ>

ದೀಪಾವಳಿಗೆ ಬನ್ನಿ, ಮೆಣಸಿನ ಮಂಡಿಗೆ. ಸಕ್ಕತ್ ಪಟಾಕಿ ಹಾರಿಸ್ತಾರೆ.
:)
ನಮ್ಮಮ್ಮನ ಊರು ಬ್ಯಾಡಗಿ. ನಿಮ್ಮ ಬರಹ ಎಲ್ಲಾ ನೆನಪಿಸ್ತು. :)

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ದೀಪಾವಳಿಯಲ್ಲಿ ಮೆಣಸಿನ ಮ೦ಡಿಗೆ? ಒ೦ದು ಸಲದ ಅನುಭವ ಸಾಕು :)
ನನ್ನಿ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ವಿನುತಾ ಅವರೇ,
ಬೇಸಿಗೆ ದಿನಗಳ ನೆನಪಿನ ಮಾಲೆ ಚೆನ್ನಾಗಿ ಬಂದಿದೆ. ಈ ಲೇಖನ ಓದಿ ನಮ್ಮ ಬೇಸಿಗೆ ದಿನಗಳ ನೆನಪೂ ಒತ್ತರಿಸಿಕೊಂಡು ಬಂದಿತು!
<<ಏನೇ ಆದ್ರೂ, ನಿಸರ್ಗದ ಮಡಿಲಲ್ಲಿ. ಸ್ನೇಹಿತರೊಡನೆ ಆಡಿದ ಆ ದಿನಗಳು, ಹಂಚಿತಿಂದ ಆ ಹಣ್ಣಿನ, ತಿಂಡಿಗಳ ರುಚಿ, ಅವ್ವ, ತಾತರ ಅನುಭವದ ಸಾರದೊಡನೆ ಕಳೆದ ಆ ಕಾಲ ಮತ್ತೆ ಬರಲಾರದು. ಏನಿದ್ದರೂ ಸವಿ ನೆನಪುಗಳು ಮಾತ್ರ... >>
ಸದ್ಯ ನಮ್ಮನ್ನ ಬೇಸಿಗೆ ರಜೆ ಶಿಬಿರ ಗಿಬಿರ ಅಂತ ಎಲ್ಲೂ ಅಟ್ತಾ ಇರ್ಲಿಲ್ಲ! ಲಂಗು ಲಗಾಮಿಲ್ದೆ ಕುಣಿದಾಡಿಕೊಂಡು ಅಜ್ಜಿ ತಾತರ ಕೈಲಿ ಉಪಚಾರ ಮಾಡಿಸ್ಕೊಂಡು ಖುಶ್ಯಾಗಿ ಇರ್ತಿದ್ವಿ! ಈ ಸರ್ತಿ ನನ್ ಮಕ್ಳೂ ಬೇಸ್ಗೇಗೆ ಅಜ್ಜಿ ಮನೆಗೆ ಹೋಗ್ತಾರೆ, ಹಳ್ಳಿ ಅಲ್ಲದಿದ್ರೂ ಅಜ್ಜಿ ಮನೇನ್ತು ಇದೆ :)

ಶಾಮಲ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಬೇಸಿಗೆ ಶಿಬಿರ ಅ೦ದಾಗ ಜ್ಞಾಪಕ ಬ೦ತು ಶಾಮಲ ಅವರೇ, ನನ್ನ ಸಹುದ್ಯೋಗಿಗಳನ್ನ, 'ರಜ ಇದ್ಯಲ್ಲ ಎಲ್ಲಿಗೆ ಹೋಗಿದ್ರಿ' ಅ೦ದ್ರೆ, 'ಎಲ್ಲಿದೆ ರಜ, ಸುಮ್ಮೆರ್ ಕ್ಯಾಂಪ್ ಇದೆ, ಸ್ಪೋರ್ಟ್ಸ್ (cricket, tennis) ಕೋಚಿ೦ಗ ಇದೆ, ಇನ್ನೇನೋ ಕ್ಲಾಸ್ ಇದೆ, ಮತ್ತೆ ಶಾಲೆ ಶುರು ಆದ್ಮೇಲೆ ಓದೋದಿರತ್ತೆ, ಹೋಗೋಕಾಗತ್ತಾ?' ಅ೦ತಾರೆ! ಮು೦ದೊ೦ದು ದಿನ ಅಜ್ಜಿಮನೆ ಅನ್ನೋ ಕಾನ್ಸೆಪ್ಟ್ ಕೂಡ ಕಾಣೆಯಾಗತ್ತೇನೋ! :(

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

>>ಅಜ್ಜಿಮನೆ ಅನ್ನೋ ಕಾನ್ಸೆಪ್ಟ್ ಕೂಡ ಕಾಣೆಯಾಗತ್ತೇನೋ
ಏನಿಲ್ಲಾ, ಅದನ್ನೂ ಕಮರ್ಷಿಯಲೈಸ್ಮಾಡಿ 'ಅಜ್ಜಿಮನೆ ಸಮ್ಮರ್ಹೋಂ' , 'ತಾತಾಸ್ ಕ್ಯಾಂಪ್' ಇಂಥವು ಶುರುವಾಗ್ತವೆ. /* ಆಗ್ಲೇ ಆಗ್ಬುಟ್ಟಿದ್ಯೋ ಹೆಂಗೇ! */ ಆಮೇಲದ್ಕೂ ನಮ್ಮ್ಹೈಕ್ಕ್ಲಾಸ್ಸೋವರ್ಪ್ರಿಟೆನ್ಶಿಯಸ್ಮಂದಿ ಮುಗಿಬಿದ್ದು ಜಾತ್ರೆ ಮಾಡ್ತಾವೆ! :)

ನಂಗಿನ್ನೂ ನೆನ್ಪಿದೆ. ತಾತನ್ಮನೇಗೆ (ಗೊರೂರಿನಲ್ಲಿ) ಹೋಗಿದ್ದೆ. ಆಗ್ತಾನೆ ಬುದ್ಧಿ ಬೆಳ್ಯೋಕ್ಶುರು ಆಗಿತ್ತು. ಸ್ನಾನಕ್ಕೆ ಹೋಗೋ ಅಂತ ಹೇಳ್ದ್ರು. ಬಚ್ಲುಮನೇಗ್ನುಗ್ದೆ. ಒಲೆ ನೋಡ್ಗೊತ್ತಿರ್ಲಿಲ್ಲ ಅದ್ವರ್ಗೂ. :D ಚೊಂಬಲ್ನೀರ್ತಗಂಡೇ ಒಲೆ ಆರ್ಸ್ದೇ, ಓಡ್ ಹೋಗಿ ಎಲ್ಲಾರ್ಗು ' ಬಚ್ಲುಮನೇಗೆ ಬೆಂಕಿ ಬಿದ್ಬಿಟ್ಟಿತ್ತೂ, ಆರ್ಸಿದೀನಿ. ಏನ್ನಿಮ್ಗೊಂದ್ಸ್ವಲ್ಪಾನೂ ಜವಾಬ್ದಾರೀನೇ ಇಲ್ವಾ' ಅಂತ ಕೂಗಾಡಿದ್ದೆ! :D
ತಾತ/ಅಜ್ಜಿ/ಮಾಮಂದ್ರು/ಚಿಕ್ಕಪ್ಪ/ದೊಡ್ಡಪ್ಪ/ಚಿಕ್ಕಮ್ಮ/ದೊಡ್ಡಮ್ಮಂದ್ರೆಲ್ಲಾ ಬಿದ್ಬಿದ್ನಗೋಕ್ಶುರುಮಾಡ್ದಾಗ್ಲೇ ನಂಗೊತ್ತಾಗಿದ್ದು ಅದು ಒಲೆ, ನೀರ್ಬಿಸಿ ಮಾಡತ್ತೇಂತಾ!

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಈಗಲೇ ಆಗಿದ್ಯೋ ಇಲ್ವೋ ಗೊತ್ತಿಲ್ಲ. ನೀವ೦ತೂ ಐಡಿಯಾ ಕೊಟ್ಟಿದೀರ :)
ನಿಮ್ಮ ಒಲೆ (ಬೆ೦ಕಿ) ಆರಿಸೋ ಪ್ರಸ೦ಗ... ನಾವೆಲ್ಲಾ ಇಲ್ಲಿ ಇನ್ನೂ ಹೊಟ್ಟೆ ಹಿಡ್ಕೊ೦ಡು ನಗ್ತಾ ಇದೀವಿ :) ಫ್ರೈಡೆ ಇವಿನಿಂಗ್ ಬೇರೆ, ತುಂಬಾ ಥ್ಯಾಂಕ್ಸ್ :)

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಫೋಟೋ- ಲೇಖನ ಎರಡೂ ಚೆನ್ನಾಗಿದೆ.. ಇಂಗ್ಲೆಂಡ್ ಲೆಟರ್ ಕುರಿತ ಬರಹ ಯಾವಾಗ ಹಾಕ್ತೀರಿ?
ಕಾಯ್ತಿರ್ತೀವಿ..

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಮತ್ತೊಮ್ಮೆ ಬಿಡುವಾದಾಗ ಬರೀತೀನಿ. ಧನ್ಯವಾದಗಳು :)

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಚೆನ್ನಾಗಿ ಬರ್ದಿದ್ದೀರ ... ಎಲ್ಲರ ಅನುಭವವೂ ಹೆಚ್ಚು ಕಮ್ಮಿ ಇದೆ ಇರುತ್ತೆ ಅನ್ಸುತ್ತೆ ....

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಹೌದು. ಬಹುತೇಕ ಇ೦ತವೇ ಅನುಭವಗಳು.
ನನ್ನಿ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ವಿನುತಾ,
ಬಾಳ ಚಂದ ಬರದೀರಿ...ನನ್ನ ಸಣ್ಣವರಿದ್ದಾಗಿನ ನೆನಪುಗಳು, ಬೇಸಿಗೆ ರಜೆಗಳು.. ನಿಮ್ಮ ನೆನಪುಗಳಿಗಿಂತ ಹೊರತಲ್ಲ..
ಈ ಲೇಖನ ಓದುತ್ತಾ ಹೊಂದಂಗ ಮತ್ತೆ ನಾನು ನನ್ನ ಬಾಲ್ಯದ ದಿನಗಳಿಗೆ ಹೋದ್ಯಾ...
ಸವಿ ಸವಿ ನೆನಪು...ಸಾವಿರ ನೆನಪು.....:)
ನಿಮಗೊಂದು ಸಿಹಿಸಿಹಿ ಥ್ಯಾಂಕ್ಸ... :)

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನನ್ನಿ :)

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ವಿನುತ,
ಚೆನ್ನಾಗಿದೆ ಬೇಸಿಗೆ ದಿನಗಳ ಅನುಭವ.
ನನ್ನನ್ನು ಆ ದಿನಗಳಿಗೆ ಕರೆದೊಯ್ಯಿತು.

>>ಒಂದು ದೊಡ್ಡ ಭವಾನಿ ಲೋಟಕ್ಕೆ ಹಾಕಿ ಕೊಡೋರು..
ನಮ್ಮ ಮನೆಯಲ್ಲಿ ಪೈಪ್ ಲೋಟಗಳಿದ್ದವು. ಅದರಲ್ಲಿ ನಾವು ಹಾಲು ಕುಡಿಯುತ್ತಿದ್ದೆವು. ’ಸೊರ್‌‍ ಸೊರ್‌’‍ ಅಂತ ಶಬ್ದ ಮಾಡ್ಕೊಂಡು ಹಾಲು ಕುಡೀತಿದ್ವಿ.
ಅಮ್ಮ, ದೊಡ್ಡಮ್ಮ ಇಬ್ಬರ ಬಳಿಯೂ ’ಎಷ್ಟು ಶಬ್ದ ಮಾಡ್ತೀರ್ರೋ’ ಅಂತ ಬೈಯಿಸಿಕೊಳ್ಟಿದ್ವಿ.

ಹಳೆಯದನ್ನು ನೆನೆಪಿಸಿಕೊಂಡು ಒಂದು ಬ್ಲಾಗ್‌ ಬರೆಯಬೇಕು (ಸಮಯ ಸಿಕ್ಕಾಗ)...

-ಅನಿಲ್.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ವಿನುತಾ ಎಂಥದ್ದದು ಭವಾನಿ ಲೋಟ ... ನನ್ನ ಹೆಸರಲ್ಲೂ ಲೋಟ ಇತ್ತೇ ?? ಖುಶ್ ಖುಶಿ... :) ನಿಮ್ಮ ನೆನಪಿನ ಸರಮಾಲೆ ಅದ್ಭುತವಾಗಿದೆ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಹೌದು ಭವಾನಿಯವರೇ, ಆಗಿನ ಕಾಲದ ಒ೦ದು ದೊಡ್ಡ ಸ್ಟೀಲ್ ಲೋಟ. ಒ೦ಥರಾ ಆಕಾರ ಅದರದ್ದು, ಕೆಳಗಡೆ ಅಗಲ, ಮತ್ತೆ ಸಣ್ಣ, ಮತ್ತೆ ಅಗಲ. ಚೆನ್ನಾಗಿತ್ತು :)

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

>>ಕೆಳಗಡೆ ಅಗಲ, ಮತ್ತೆ ಸಣ್ಣ, ಮತ್ತೆ ಅಗಲ.
ಐಸ್‌ಕ್ರೀಮ್ ಲೋಟ ಅಂತಿದ್ವಿ ನಾವು. :)
ಯಾಕೆ?
ಕಾರಣ ಗೊತ್ತಿಲ್ಲ.

-ಅನಿಲ್

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಅನಿಲ್,
ಇವಾಗೇನಾದ್ರೂ ಆ ಥರ ಶಬ್ದ ಮಾಡಿದ್ರೆ, ಮಾನ್ನೆರ್ಸ್ ಇಲ್ಲ ಅ೦ತಾರೆ! ಒ೦ದೊ೦ದ್ಸಲ ಕಪ್ಪು-ಬಸಿ ಯಲ್ಲಿ ಬೆಲ್ಲದ ಚಹಾ ಕುಡಿತಾ ಇದ್ವಿ. ಅದರ ಮಜಾನೆ ಬೇರೆ :)
ಆದಷ್ಟು ಬೇಗ ನಿಮ್ಮ ನೆನಪುಗಳನ್ನೂ ಪದಗಳಲ್ಲಿಡುವ೦ತಾಗಲಿ. ನಾವೂ ಓದುವ೦ತಾಗಲಿ.
ನನ್ನಿ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

>>ಇವಾಗೇನಾದ್ರೂ ಆ ಥರ ಶಬ್ದ ಮಾಡಿದ್ರೆ, ಮಾನ್ನೆರ್ಸ್ ಇಲ್ಲ ಅ೦ತಾರೆ!
ಹೌದು. :)

>>ಒ೦ದೊ೦ದ್ಸಲ ಕಪ್ಪು-ಬಸಿ ಯಲ್ಲಿ ಬೆಲ್ಲದ ಚಹಾ ಕುಡಿತಾ ಇದ್ವಿ. ಅದರ ಮಜಾನೆ ಬೇರೆ.
ಆಹಾ! ಅವೆಲ್ಲಾ ಈಗ ನೆನಪುಗಳು ಮಾತ್ರ.

ಈಗಿನ Generation ತುಂಬಾ ಬದಲಾಗಿದೆ.
ಈ ಕಾಲದ ಮಕ್ಕಳಿಗೆ ಇದೆಲ್ಲಾ ಗೊತ್ತೇ ಇರೋದಿಲ್ಲ ಅನ್ಸುತ್ತೆ.

-ಅನಿಲ್

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

>>ಈಗಿನ Generation ತುಂಬಾ ಬದಲಾಗಿದೆ.
ಈ ಕಾಲದ ಮಕ್ಕಳಿಗೆ ಇದೆಲ್ಲಾ ಗೊತ್ತೇ ಇರೋದಿಲ್ಲ ಅನ್ಸುತ್ತೆ.

ನನ್ನಜ್ಜಾನೂ ನನ್ನಪ್ಪಂಗೆ ಹಿಂಗೇ ಹೇಳ್ತಾ ಇದ್ರು :)

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಸಮಯ ಸಿಗಲ್ಲಾ, ಮಾಡಿಕೊಂಡು ಬೇಗ ಬರೀರಿ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನೀವು BIET ನಲ್ಲಿ E&C ಓದಿದ್ರ?

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಇಲ್ಲ :)

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

>> ಆದರೆ ನನಗೆ ಇಂದಿಗೂ ಆಶ್ಚರ್ಯ ಆಗುವ ವಿಷಯವೆಂದರೆ,. ಅಲ್ಲಲ್ಲಿಗೆ ಹೋದಾಗ ಆ ಭಾಷೆ ಹಾಗೇ ಬಂದು ಬಿಡುತ್ತದೆ. (ಭಾಷೆನೂ ರಕ್ತದಲ್ಲಿರತ್ತಾ!)

ಅಲ್ವ? ಮೈಸೂರಲ್ಲಿ ಚುರುಮುರಿ, ಶಿವಮೊಗ್ಗದಲ್ಲಿ ಮಸಾಲ ಮಂಡಕ್ಕಿ, ದುರ್ಗದಲ್ಲಿ ಖಾರ ಮಂಡಕ್ಕಿ, ಚೌಚೌ instinctive ಆಗಿ ಕೇಳೋ ಹಾಗೆ!

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಖರೆ! ಧಾರವಾಡದ ಮಡಾಳ ಮ೦ಡಕ್ಕಿ, ತುಮಕೂರಿನ ಕಡಲೆಪುರಿ :)

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಮಂಗಳೂರಿನ ಗೋಳಿಬಜೆ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಸಾಬರೇ, ನಿಮ್ ಸಲುವಾಗೇ ನಾನು ದೋನ್ ಕಿಲೋಮೀಟರು ನಡಕೋತಾ ಬಂದೀನ್ರೀ, ಮತ್ತ ದೀಡ ತಾಸು ಕಾದೀನ್ರೀ, ನೀವ್ ಹೇಳೋದು ಖರೆ ಅದರೀ, ಮಗರ‍್ ನನ್ ಕಡೀ ಜರಾ ನೋಡ್ರೀ, ಹಫ್ತಾಗೊಂದ್ಸಾರಿ ದೇಖರೇಖೀ ಮಾಡುವಲ್ದ್ಯ, ವ್ಯಾಪಾರ‍್ ಭೀ ನುಕ್ಸಾನ್ ಆಗೇದರೀ, ನೀವು ಬೆಹೇಸ್ ಮಾಡಬ್ಯಾಡರೀ, ನಡೀರಿ ಮುಂದ ಗಾಡಿ ಚಾಲೂ ಮಾಡ್ರೀ, ನಿಮಗೂ ಭೀ ನಮಗೂ ಭೀ ದೇವರು ನಜರು ಮಡಗಿದಾನ್ರೀ - ಈ ರೀತಿಯಾಗಿ ಬೀದರದ ಆಡುಮಾತು ನಡೆದಿರುತ್ತೆ.

ಅಲ್ಲಿಗೆ ಹೋದ ಕೂಡಲೇ ನಮ್ಮ ಕಿವಿಯೊಂದಿಗೆ ನಾಲಗೆ ಸಹ ಅದಕ್ಕೆ ಟ್ಯೂನ್ ಆಗಿಬಿಡುತ್ತೆ. ಲಾಜಿಂಗಿಗೆ ಬಂದು ದೋಸೌದಸ್ ಕೀಲಿ ಕೊಡ್ರೀ ಅನ್ತೀನಿ. ಅಲ್ಲಲ್ಲಿಗೆ ಹೋದಾಗ ಆ ಭಾಷೆ ಹಾಗೇ ಬಂದು ಬಿಡುತ್ತದೆ ಅನ್ನೋ ಈ ಸಂಗತಿ ಬಗ್ಗೆ ಯಾರಾದರೂ ಸಂಶೋಧನೆ ಮಾಡಿದ್ದಾರೇನೋ?

ಪ್ರೀತಿಯಿಂದ
ಸಿ ಮರಿಜೋಸೆಫ್

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಮರಿಜೋಸೆಫ್ ಅವರೇ, ಬೀದರದ 'ಭೀ' ಭಾಷೆಯನ್ನು ಸೊಗಸಾಗಿ ಬರೆದಿದ್ದೀರಿ. ಈ ಕುರಿತು ಯಾರಾದರು ಸ೦ಶೋಧನೆ ಮಾಡಿದ್ದಾರೋ ಇಲ್ಲವೊ ಗೊತ್ತಿಲ್ಲದಿದ್ದರೂ, ಮನುಷ್ಯನ ಮನಸ್ಸಿನ ಕುರಿತು ಅಚ್ಚರಿಯನ್ನು೦ಟು ಮಾಡುವ ವಿಷಯಗಳಲ್ಲಿ ಇದೂ ಒಂದು ನನಗೆ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನೆನಪುಗಳು!!
ತುಂಬಾ ಸರಳವಾಗಿ ಶಬ್ದಗಳನ್ನ ಬಳಸ್ತಾ ಹೇಳಬೇಕಾದದ್ದನ್ನ ಮನಸ್ಸಿಗೆ ಹತ್ತಿರವಾಗೋ ತರ ಹೇಳ್ತೀರಾ. ನನಗೂ ರಜೆ ದಿನಗಳು ನೆನಪಾದ್ವು.
ಕೆಲ್ಸದಲ್ಲು ಹೀಗೆ ಬೇಸಿಗೆ ರಜಾ ಇರ್ತಿದ್ರೆ :). ಬಿಟ್ಟಾಕಿ, ಇರೋ ರಜ ಕೊಡೋಕೂ ಒದ್ದಾಡ್ತಾರೆ. ಏನಾದ್ರು ಮಾಡ್ಬೇಕು, ಇದ್ರಿಂದ ಹೊರಗೆ ಬರ್ಬೇಕು.
ತುಂಗೆ ಮಡಿಲು ಅಂದ್ರೆ ಶಿವಮೊಗ್ಗದ ಹತ್ರ ಎಲ್ಲಾದ್ರುನಾ?

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನನ್ನಿ..

>> ಕೆಲ್ಸದಲ್ಲು ಹೀಗೆ ಬೇಸಿಗೆ ರಜಾ ಇರ್ತಿದ್ರೆ
ಒಳ್ಳೇ ಕಲ್ಪನೆ, ಕೇಳೋಕೇ ಎಷ್ಟು ಹಿತವಾಗಿದೆ :)

>>ತುಂಗೆ ಮಡಿಲು ಅಂದ್ರೆ ಶಿವಮೊಗ್ಗದ ಹತ್ರ ಎಲ್ಲಾದ್ರುನಾ?
ಹೌದು :)

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.