ನಮ್ಮೂರಿನ ಪೋಸ್ಟಾಫೀಸ್ ನಲ್ಲೊಂದು ದುಃಖದ ಪ್ರಸಂಗ :(

4.714285

ಜಾಗತೀಕ ಹಿಂಜರಿತದಿಂದ ನಾನು ಕೆಲಸ ಮಾಡೋ ಕಂಪನಿಯಲ್ಲೂ ಹತ್ತು ದಿನ ರಜೆ ಕೊಟ್ಟಿದ್ರು. ತುಂಬಾ ದಿನದಿಂದ ಊರಿಗೆ ಹೋಗದೆ ಇದ್ದ ನಾನು, ಇದೇ ಅವಕಾಶಾ ಬಳಸ್ಕೊಂಡು ಕೆಲ ಮಟ್ಟಿಗೆ ಕರ್ನಾಟಕ ಸುತ್ತಿದೆ. ಎಲ್ಲ ಕಡೆ ಮುಖ್ಯವಾಗಿ ಗಮನಿಸಿದ್ದೆನೆಂದರೆ, ರಾಷ್ಟ್ರೀಯ ಹೆದ್ದಾರಿಗಳಲ್ಲಿ, ಸಣ್ಣ ಸಣ್ಣ ಊರಲ್ಲೂ ಹಿಂದಿ ಹೇರಿಕೆಯ ನಿರಂತರ ಪ್ರಯತ್ನ ನಡಿತಾ ಇದೆ. ಮೊನ್ನೆ ದಿನ ಊರಲ್ಲಿ ಅಪ್ಪನ ಜೊತೆ ನನ್ನೂರು ಕಲಘಟಗಿಯ ( ಧಾರವಾಡ ಜಿಲ್ಲೆಯಲ್ಲಿದೆ) ಅಂಚೆ ಕಛೇರಿಗೆ ಹೋಗಿದ್ದೆ. ನಮ್ಮಮ್ಮ ಅಂಚೆ ಇಲಾಖೆಯ ಉಳಿತಾಯ ಖಾತೆಯಲ್ಲಿ ಚಿಕ್ಕದೊಂದು ಹೂಡಿಕೆ ಮಾಡಿದ್ದಾಳೆ. ಆಕೆಗೆ ಹುಶಾರಿಲ್ಲದ ಕಾರಣ ನಾನು, ಅಪ್ಪ ಒಂದು ಡಿಪಾಸಿಟ್ ಮಾಡೋಕೆ ಅಂತ ಹೋಗಿದ್ವಿ. ಅಲ್ಲಿ ನೋಡಿದ ಒಂದು ದೃಶ್ಯದಿಂದ ನಿಜಕ್ಕೂ ಅವಕ್ಕಾದೆ !

ನಾನು ಹಣ ಡಿಪಾಸಿಟ್ ಮಾಡೋಕೆ ಅರ್ಜಿ ಹುಡುಕುತ್ತಾ ಇದ್ದೆ. ಅಷ್ಟರಲ್ಲಿ ಒಬ್ಬ ಮಧ್ಯ ವಯಸ್ಸಿನ ಹಳ್ಳಿಯ ಹೆಣ್ಣು ಮಗಳು ಬಂದು " ಅಣ್ಣಾರೆ, ಈ ಫಾರಮ್ ಸ್ವಲ್ಪ ತುಂಬಿಸಿ ಕೊಡ್ರಿ " ಅಂದ್ರು. ನಾನು ಅಕ್ಷರ ಕಲಿತಿಲ್ಲವೇನೋ ಅಂದುಕೊಂಡು ಆಕೆಯ ಅರ್ಜಿ ಇಸಿದುಕೊಳ್ಳಲು ಹೋದೆ, ಆ ಕ್ಷಣ ಕಂಡದ್ದು ಆಕೆಯ ಇನ್ನೊಂದು ಕೈಯಲ್ಲಿ ಆವತ್ತಿನ ಕನ್ನಡ ಪ್ರಭ ಪತ್ರಿಕೆ. ಅದನ್ನು ನೋಡಿ, ಆಶ್ಚರ್ಯಗೊಂಡು ನಾನು ಕೇಳಿದೆ " ಅಲ್ರಿ ಅಕ್ಕಾರೆ, ನಿಮಗೆ ಓದಾಕ್ ಬಂದ್ರೂ ನನ್ನ ಕಡೆ ಏದಕ್ ತುಂಬಸಾಕ್ ಕೊಟ್ರಿ ಅರ್ಜಿ?"  ಅಂತ, ಅದಕ್ಕೆ ಆಕೆ ಉತ್ತರಿಸಿದ್ದು, " ನಾನು ಐದನೆತ್ತ ತಂಕ ಶಾಲಿಗೆ ಹೋಗೆನ್ರಿ.  ನನಗ್ ಓದಾಕ್, ಬರೆಯಾಕ್ ಎರಡು ಬರತೆತ್ರಿ.. ಆದ್ರ ಬರೇ ಕನ್ನಡ ಒಂದಾ ರೀ,, ಆದ್ರ ಇಲ್ಲಿ ಅರ್ಜಿ ಇಂಗ್ಲೀಶ್ ಬಿಟ್ರ ಹಿಂದಿದಾಗ್ ಐತ್ರಿ, ಹಿಂಗಾಗಿ ನಿಮ್ಮ ಕಡೆ ತುಂಬಸಾಕ ಕೊಟ್ಟೆ ರೀ" ಎಂದು ಹಿಂದಿ, ಇಂಗ್ಲಿಷ್ ಕಲಿಯದೇ ಜೀವನದಲ್ಲೆನೋ ದೊಡ್ಡ ತಪ್ಪು ಮಾಡಿದೆ ಅನ್ನುವಂತ ಮುಖಭಾವ ತೋರಿಸಿದರು

( ಜೊತೆಗಿರುವ ಚಿತ್ರ ನೋಡಿ, ಆ ಅರ್ಜಿಯ ಪ್ರತಿಯೊಂದನ್ನು ಹಾಕಿರುವೆ). ಧಾರವಾಡ ಜಿಲ್ಲೆಯ, ಅತ್ತ ಮಲೆನಾಡು ಅಲ್ಲದ, ಇತ್ತ ಬಯಲುಸೀಮೆಯಲ್ಲದ ಊರು ಕಲಘಟಗಿ. ವರ್ಷಕೊಮ್ಮೆ ಬರುವ ಮಳೆರಾಯನ ಮೇಲೆ ಇಲ್ಲಿನ ಜನ ಜೀವನ ನಿಂತಿದೆ. ಇಂತ ಅಚ್ಚ ಕನ್ನಡದ ಊರಲ್ಲಿ, ಕನ್ನಡತಿಯೊಬ್ಬಳಿಗೆ, ಅಲ್ಲೆಲ್ಲೋ 2000 ಕಿ.ಮೀ ದೂರದಲ್ಲಿ ಮಾತಾಡೋ ಹಿಂದಿ ಭಾಷೆ ಕಲಿಯಬೇಕು ಅನ್ನುವ ಅನಿವಾರ್ಯತೆ ತಂದಿರುವ ನಮ್ಮ ಒಕ್ಕೂಟ ವ್ಯವಸ್ಥೆ ಬಗ್ಗೆ ಎಲ್ಲಿಲ್ಲದ ಸಿಟ್ಟು ಬಂತು ಗೆಳೆಯರೇ.

ಆ ತಕ್ಷಣ ಅಲ್ಲಿಯ ಅಂಚೆ ಕಛೇರಿಯ ಪ್ರಧಾನ ಅಧಿಕಾರಿಯನ್ನು ಕಾಣಲು ಹೋದೆ. ಅವರಿಗೆ ಅಲ್ಲೇ ಇದ್ದ ಅರ್ಜಿಯನ್ನು ತೋರಿಸಿ, ಇದು ಯಾಕೆ ಕನ್ನಡದಲ್ಲಿಲ್ಲ ?? ಇಲ್ಲಿ ಅದ್ಯಾವ ಹಿಂದಿಯವನು ಬರ್ತಾನೆ ಅಂತ ಹಿಂದಿಯಲ್ಲಿ ತಂದಿದೆ ನಿಮ್ಮ ಇಲಾಖೆ? ನಿಮ್ಮ ಇಲಾಖೆಯ ಇಂತಹ ಧೋರಣೆಗಳಿಂದ ಕನ್ನಡಿಗನಿಗೆ ತನ್ನ ನೆಲದಲ್ಲೇ ಕನ್ನಡ, ಯಾವ ಕೆಲಸಕ್ಕೆ ಬಾರದ ಭಾಷೆ ಅಂತ ಸಾಧಿಸೋದು ನಿಮ್ಮ ಉದ್ದೇಶಾನಾ? ಅಂತ ಸ್ವಲ್ಪ ಜೋರಾಗೇ ಬಾಯಿ ಮಾಡಿದೆ. ಅದಕ್ಕೆ ಅಲ್ಲಿಯ ಅಧಿಕಾರಿ ಕೇಳಿದ ಪ್ರಶ್ನೆ ಇನ್ನೂ ವಿಚಿತ್ರವಾಗಿತ್ತು. ಆತ ಹೇಳಿದ್ದು, " ಅಲ್ರೀ ಸರ್ರ್,, ಬ್ಯಾಂಕು, ಫೈನಾನ್ಸು ಇಂತಾ ಕಡೆಯಲ್ಲ ವ್ಯವಹಾರ್ ಮಾಡಬೇಕ್ ಅಂದ್ರ ಹಿಂದಿ/ ಇಂಗ್ಲೀಷ್ ಕಲಿಬೇಕ್ರಿ, ಕಲತಿಲ್ಲ ಅಂದ್ರ ಅದಕ್ಕ ನಾವೇನ್ ಮಾಡಾಕ ಆಗತೇತ್ರಿ ? ನಮಗ ಮ್ಯಾಲಿಂದ ಆರ್ಡರ್ ಐತ್ರಿ, ಎಲ್ಲ ವ್ಯವಹಾರ, ಅರ್ಜಿಗೋಳು ಇಂಗ್ಲೀಷ ಬಿಟ್ರ ಹಿಂದಿದಾಗ್ ಇರಬೇಕು ಅಂತ. ಶಾಲಿನಾಗ್ ಹಿಂದಿ ಕಲಸುದ್ ಇಂತಲ್ಲೆಲ್ಲ ಉಪಯೋಗಕ್ಕ ಬರಲಿ ಅಂತ, ಆ ಹೆಣ್ ಮಗಳು ಐದನ್ನೆತ ಕಲತಿದ್ರ ನಾವೇನ್ ಮಾಡಾಕ್ ಆಗತೇತ್ರಿ?. ಬೇಕಿದ್ರ ಧಾರವಾಡದ ಹೆಡ್ಡಾಫೀಸಿಗೆ ಒಂದು ಕಂಪ್ಲೇಂಟ್ ಬರೀರಿ " ಎನ್ನುವ ಉಡಾಫೆಯ ಉತ್ತರ ಕೊಟ್ಟ. ಆ ಹೆಣ್ಣು ಮಗಳು ಅವಳಿಂದಾಗಿ ಇಷ್ಟೆಲ್ಲ ಗಲಾಟೆ ಆಯ್ತು ಅನ್ನುವ ಹಾಗೇ ತನ್ನ ನೆಲದಲ್ಲೇ, ತನ್ನದಲ್ಲದ ಭಾಷೆಯೊಂದನ್ನು ಕಲಿಯದ ಒಂದೇ ಕಾರಣಕ್ಕೆ ತಪ್ಪಿತಸ್ಥ ಭಾವದಲ್ಲಿ ನಿಂತಿದ್ದನ್ನು ನೋಡಿ ಹೇಳಲಾರದಷ್ಟು ಸಂಕಟವಾಯ್ತು :( .

ಹೆಣ್ಣೊಂದು ಕಲಿತರೆ ಶಾಲೆಯೊಂದು ತೆರೆದಂತೆ ಅನ್ನುವ ಮಾತನ್ನು ಬದಲಾಯಿಸಿ, ಹೆಣ್ಣೊಂದು ಹಿಂದಿ ಕಲಿತರೆ, ಕರ್ನಾಟಕದಲ್ಲಿ ವ್ಯವಹರಿಸೋಕೆ ಅರ್ಹಳು ಅಂತ ಬದಲಾಯಿಸಬೇಕೆನೋ. ಶಿಕ್ಷಣ, ಮನರಂಜನೆ, ದಿನ ನಿತ್ಯದ ವ್ಯವಹಾರದಲ್ಲಿ, ಹೀಗೆ ಹಿಂದಿ ಹೇರಿಕೆ ಮುಂದುವರೆಯಲು ಬಿಟ್ರೆ, ಕನ್ನಡ ಅಡುಗೆಮನೆ, ಬಚ್ಚಲುಮನೆ ಭಾಷೆ ಆಗಿ ಬದಲಾಗೋದ್ರಲ್ಲಿ ಎಳ್ಳಷ್ಟು ಅನುಮಾನವಿಲ್ಲ.

ಹಿಂದಿ ಹೇರಿಕೆಯ ಮೂಲಕ ಕನ್ನಡದಂತ ಭಾಷೆಯನ್ನು ಕಾಲ ಕಸವನ್ನಾಗಿ ಕಾಣುವ, ಆ ಮೂಲಕ ಇಲ್ಲದ ಒಗ್ಗಟ್ಟು ತರಲು ಪ್ರಯತ್ನಿಸುತ್ತಿರುವ ಭವ್ಯ ಭಾರತದ ವ್ಯವಸ್ಥೆಯನ್ನು ಎಷ್ಟು ಹೊಗಳಿದರೂ ಸಾಲದು ! ಏನಂತೀರಾ ಗೆಳೆಯರೇ ?

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4.7 (7 votes)
To prevent automated spam submissions leave this field empty.

ಪ್ರತಿಕ್ರಿಯೆಗಳು

ನೀವು ಏನೂ ಮಾಡಲಾಗಲಿಲ್ವೆ ?

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಾನು ಧಾರವಾಡದ ಕಛೇರಿಗೆ ಒಂದು ಪತ್ರ ಹಾಕಿದೆ. ಅಲ್ಲದೇ, ಮುಂದಿನ ಬಾರಿ ಹೋದಾಗ ಆ ಪತ್ರದ ಪರಿಣಾಮ ಏನಾಗಿದೆ ಅಂತ ಖಂಡಿತ ವಿಚಾರಿಸುವೆ.
-
ವಸಂತ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಭವ್ಯ ಭಾರತದ ಕನಸನ್ನು ನುಚ್ಚು ನೂರು ಮಾಡುತ್ತಲಿರುವ ಈ ಒಕ್ಕೂಟದ ವ್ಯವಸ್ಥೆಯನ್ನು ವಿರೋಧಿಸಬೇಕು. ಕನ್ನಡ ಕೀಳು ಅನ್ನುವ ಮನೋಭಾವವನ್ನು ಹುಟ್ಟಿಹಾಕ್ಕುತ್ತಿರುವ ಹಿ೦ದಿ ಹೇರಿಕೆಯು ಬಹುರೂಪಗಳಲ್ಲಿ ಆಗುತ್ತಿದೆ, ಬ್ಯಾ೦ಕ್ ಗಳಲ್ಲಿ, ಮನರ೦ಜನೆಯ ಮಾಧ್ಯಮವಾಗಿ, ಶಿಕ್ಷಣದಲ್ಲಿ etc., ಇದು ಹೀಗೆ ಮು೦ದುವರೆದರೆ ಆ ಮೇಲಿನಿ೦ದ ಆರ್ಡರ್ ಕೊಡೋರು ಸ೦ಪೂರ್ಣ ಶಿಕ್ಷಣವನ್ನು ಹಿ೦ದಿಯಲ್ಲಿ ರೂಪಿಸುವುದರಲ್ಲಿ ಸ೦ಶಯವಿಲ್ಲ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಇದು ಬರೆ ಧಾರವಾಡದಲ್ಲೋ ಅಥವ ಎಲ್ಲ ಕಡೆನೋ? ಅಂಚೆ ಕಚೇರಿ ಸೆಂಟ್ರಲ್ govt ಕೆಳಗೆ ಬರುತ್ತ? ಹಾಗಾದ್ರೆ ಎಲ್ಲ ರಾಜ್ಯದಲ್ಲೂ ಇದೇ ರೀತಿ ಇಂಗ್ಲಿಷ್/ಹಿಂದಿ ಉಪಯೋಗಿಸುತ್ತಾರೆನೋ?

ನನಗೆ ಹಿಂದೊಮ್ಮೆ ಸಂಪದದಲ್ಲಿ ಹಿಂದಿ ರಾಷ್ಟ್ರಭಾಷೆಯಲ್ಲಾಂತ ಒಬ್ಬರು ಹೇಳುವವರೆಗೂ ತಿಳಿದಿರಲಿಲ್ಲ. ಏಕೆಂದರೆ, ನಾನು ಅಲ್ಲಿ ಇದ್ದಾಗ, ಸೆಂಟ್ರಲ್ govt ಕೆಳಗಿನ ಎಲ್ಲ ಆಫೀಸುಗಳಲ್ಲಿ ಇಂಗ್ಲಿಷ/ಹಿಂದಿ ಹೀಗೆ ಕಡ್ಡಾಯವಾಗಿ ಬಳಕೆಯಲ್ಲಿತ್ತು. ಮತ್ತು ಇಲ್ಲಿ ನನ್ನ ಮಕ್ಕಳಿಗೆ ಸ್ಕೂಲಿನಲ್ಲಿ ಸಹ ಹಿಂದಿ ಭಾರತದ ರಾಷ್ಟ್ರ ಭಾಷೆಯೆಂದೆ ಹೇಳಿಕೊಟ್ಟಿರೋದು! official ವ್ಯವಹಾರದಲ್ಲಿ ಇಷ್ಟೊಂದು ಹಿಂದಿ ಬಳಕೆಯಲ್ಲಿದ್ದರೆ ಯಾರಿಗಾದರೂ ಅದು ರಾಷ್ಟ್ರಭಾಷೆಯಂತ ಅನ್ನಿಸುತ್ತೆ!

~ಕಲ್ಪನ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಎಲ್ಲ ಕಡೆ ಅ೦ಚೆ ಕಚೇರಿ ಆಗಿರಲಿ, ನ್ಯಾಶನಲೈಸ್ಡ್ ಬ್ಯಾ೦ಕ್ ಗಳಿರಲಿ.. ಎಲ್ಲೆಡೆ ಇದೇ ಗೋಳು.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಸುಮಾರು ವರ್ಷಗಳ ಹಿಂದೆ ನಾನು ನಮ್ಮ ಊರು ಹೊಸಪೇಟೆ ಅಲ್ಲಿ ಓದುತ್ತಿರುವಾಗ ನನ್ನ ಕೈ ಖರ್ಚಿಗೆಂದು ನಮ್ಮ ಅಪ್ಪ ಕೆಲಸ ಮಾಡುತಿದ್ದ ಹೋಟೆಲ್/ಲಾಡ್ಜ್ ಅಲ್ಲಿ ಬಂದು ತಂಗುತ್ತಿದ್ದ ಜನರಿಗೆ ರೈಲ್ ಟಿಕೆಟ್ ಬುಕ್ ಮಾಡಿಸಿ ಕೊಟ್ಟು ಅವರಿಂದ ಒಂದು ಟಿಕೆಟ್ಗೆ ಸುಮಾರು ೧೦ ರುಪಾಯಿ ಅಂತ ಕಮಿಶನ ತೊಗೊಳ್ತಾ ಇದ್ದೆ :), ಮಜ ಅಂದ್ರೆ ಆಗ ನಮ್ಮ ಹೊಸಪೇಟೆ ದಕ್ಷಿಣ-ಮಧ್ಯೆ ರೈಲ್ವೇಸ್ಗೆ ಒಳಪಡುತಿತ್ತು ಹಾಗು ಅದರ ಪ್ರಧಾನ ಕಚೇರಿ ಸಿಕಂದರಾಬಾದ್ ಆಗಿತ್ತು. ಅಲ್ಲಿ ಸಿಗುತ್ತಿದ್ದ ಅರ್ಜಿಗಳು ಇಂಗ್ಲಿಶ್ ಹಾಗು ತೆಲುಗು ಅಲ್ಲಿ ಮುದ್ರಿತವಾಗಿರುತಿತ್ತು, ನನಗೆ ಇಂಗ್ಲಿಶ್ ಬರುತಿದ್ದರು ನಾನು ನನಗೆ ಇಂಗ್ಲಿಶ್ ಮತ್ತೆ ತೆಲುಗು ಬರಂಗಿಲ್ಲ ನಂಗ ಕನ್ನಡ ಅರ್ಜಿನೇ ಬೇಕು ಅಂತ ಜಗಳ ಆಡ್ತಿದ್ದೆ. ಅಲ್ಲಿ ಟಿಕೆಟ್ ಬುಕ್ ಮಾಡೋರು ಅಪ್ಪಗ ಪರಿಚಯದವರೇ ಅವರು ನಿನ್ನ ಮಗ ಹಿಂಗೆಲ್ಲ ಗಲಾಟಿ ಮಾಡ್ತಾನ ಸಲ್ಪ ಅವಂಗ ಬುದ್ಧಿ ಹೇಳಪ್ಪ ಅಂತ ಹೇಳ್ತಾ ಇದ್ದರು, ಅದಕ್ಕ ಅಪ್ಪ ಬೇಸತ್ತು ಅವರ ಲಾಡ್ಜ್ ನಾಗೆ ಸಿಗೋ ಇಂಗ್ಲಿಶ್/ಕನ್ನಡ ಅರ್ಜಿ ನಂಗ ಕೊಟ್ಟು ಕಳಿಸ್ತ್ತಿದ್ರು ಆದರು ನಾ ಅಲ್ಲಿ ಹೋಗಿ ಮತ್ತ ಗಲಾಟಿ ಮಾಡ್ತಿದ್ದೆ. ಹಿಂಗ ನಡಿತಿತ್ತು, ಅದಾಗಿ ನಾ ಮುಂದೆ ಓದಲಿಕ್ಕೆ ಊರು ಬಿಟ್ಟ್ ಮ್ಯಾಲೆ ಬಳ್ಳಾರಿ ರೈಲ್ವೆ ಹಿತರಕ್ಷಣ ಸಮಿತಿ ಹುಟ್ಟಿಕೊಂಡಿತು ಅದರ ಹೋರಾಟದ ಫಲವಾಗಿ ನಮ್ಮ ಹೊಸಪೇಟೆ, ಬಳ್ಳಾರಿ, ತೋರಣಗಲ್ಲು ಹೊಸದಾಗಿ ರಚಿಸಿದ ಸೌತ್-ವೆಸ್ಟರ್ನ್ ರೈಲ್ವೇಸ್ (ಇದರ ಪ್ರಧಾನ ಕಚೇರಿ ಹುಬ್ಬಳ್ಳಿನಾಗ ಅದ) ಸೇರಿಕೊಂಡವು. ಆದರೆ ಈಗ ನಾ ಹೆಚ್ಚಾಗಿ ಊರಿಗೆ ಹೋದ್ರೆ ಬಸ್ನಾಗೆ ಹೋಗ್ತೀನಿ, ಈಗ ಅಲ್ಲಿ ಸಿಗೋ ಅರ್ಜಿಗಳು ಯಾವ ಭಾಷೆನಾಗ ಅವೋ ಗೊತ್ತಿಲ್ಲ, ಈ ಸರ್ತಿ ಹೋದ್ರೆ ನೋಡಿ ಹೇಳ್ತೀನಿ :)

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಕೊಂಡಿ ಗೊತ್ತಯ್ತಲ್ವ ಯಾವ್ದು ಅಂತ...
ದೂರು ಸಲ್ಲಿಸಲು ಇರುವ ನೇರ ಕೊಂಡಿ...
http://www.indiapost.gov.in/Ccc/PCData.aspx

ಇದು ಅಸ್ತ್ರ ಆದ್ರೆ attack ಮಾಡಲು ಮತ್ತೊಂದು ಇರೊದು tracking ಕೊಂಡಿ
http://www.indiapost.gov.in/Ccc/PCStatus.aspx

ಇದು ಕೆಲ್ಸ ಮಾಡ್ಲಿಲ್ಲಾಪ್ಪ ಅಂದ್ರೆ ತೊಗೊಳ್ಳಿ ಬ್ರಹ್ಮಾಸ್ತ್ರದ ಲಿಂಕ್...

http://rti.india.gov.in/
ದೂರಿನ ಬಗ್ಗೆ ಧೊರಣೆ ಎಂಥಾದ್ದು ಅಂತ ತಿಳಿಯಲು...

ಮಿಕ್ಕಿದ್ದು ......
ನಿಮ್ ಜೊತೆ ಕನ್ನಡಿಗರು ಇದಾರೆ.. ಇದನ್ನ ಇಲ್ಲಿಗೆ ಬಿಡಬಾರ್ದು...

ಇದ್ರಲ್ಲಿ political mileage ಇರೊದ್ರಿಂದ "ಬೇರೆಯವರ" ಸಹಕಾರ ಸಿಗಬಹುದು ಅಂತ ನನ್ನ ಅನಿಸಿಕೆ. ಏನಿದ್ರು ಕನ್ನಡಿಗರಿಗೆ ಒಳ್ಳೆಯದಾಗ್ಬೇಕು ಅಷ್ಟೆ..
ಹೆಜ್ಜೆ ಹಾಕಿ..........................

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.