ಸುದ್ದಿ ಅಂದ್ರೆ ಹೀಗೇನಾ ?

0

ಸುದ್ದಿ ಮಾಧ್ಯಮಗಳು ಎಂದರೆ ಸದಾ ಕಣ್ಣು ಕಿವಿ ಜಾಗೃತವಾಗಿರಬೇಕು ಎಂದು ಹೇಳುತ್ತಾರೆ ಹಿರಿಯ ಪತ್ರಕರ್ತರು. ಆದರೆ ಕರ್ನಾಟಕದಲ್ಲಿ ನಡೆಯುತ್ತಿರುವುದಾದರೂ ಏನು ? ಒಮ್ಮ ಸೂಕ್ಷ್ಮವಾಗಿ ಗಮನಿಸಿದರೆ ಸಾಕು... ಪ್ರಚಾರಕ್ಕಾಗಿ ಕೆಲವು ರಾಜಕೀಯ ಪಕ್ಷಗಳು, ಸಂಘಟನೆಗಳು ನಡೆಸುವ ಕಸರತ್ತಿಗಿಂತ ಸುದ್ದಿ ಮಾಧ್ಯಮಗಳ ಸುದ್ದಿಯೇ ಬಹುಪಾಲು ಕೆಲಸ ಮಾಡುವಂತೆ ಕಾಣುತ್ತಿದೆ. ಇದೆಲ್ಲಾ ಗಮನಿಸಿದ್ರೆ ಸುದ್ದಿ ಅಂದ್ರೆ ಹೀಗೇನಾ ? ಸ್ವಲ್ಪ ಸಿಹಿ ಸ್ವಲ್ಪ ಕಹಿ ಎಂಬಂತೆ ಪರ ವಿರೋಧ ಚರ್ಚೆ ನಡೆಯಲೇ ಬೇಕಲ್ಲವೇ ?

ಕಳೆದ ಆರು ವರ್ಷಗಳಿಂದ ಸುದ್ದಿ ಮಾಧ್ಯಮದಲ್ಲಿ ಕೆಲಸ ಮಾಡುತ್ತಿದ್ದರೂ ನನಗೆ ಅರ್ಥವಾಗದ ಪ್ರಶ್ನೆ ಎಂದರೆ ಇದೇ. ಯಾವುದೇ ಸುದ್ದಿ ಇರಲಿ. ಅದನ್ನು ವಸ್ತು ನಿಷ್ಠವಾಗಿ ಕೊಡಬೇಕೋ ಅಥವಾ ರಂಗು ರಂಗಾಗಿ ರಂಜಿತವಾಗಿ ಕೊಡಬೇಕೇ ?

ಮಂಗಳೂರಿನಲ್ಲಿ ಪಬ್‌ ಮೇಲಿನ ದಾಳಿ ಎಲ್ಲರಿಗೂ ಗೊತ್ತಿರುವ ವಿಚಾರ. ಶ್ರೀರಾಮ ಸೇನೆ ಕೂಡಾ ಇದರ ಜವಾಬ್ದಾರಿ ಹೊತ್ತುಕೊಂಡಿತು. ಮಾಧ್ಯಮಗಳು ಮುತಾಲಿಕ್‌ ಅವರನ್ನು ರಾಷ್ಟ್ರೀಯ ಮಟ್ಟದಲ್ಲಿ ಬಿಂಬಿಸಿದವು. ಇದರ ಬಗ್ಗೆ ಸಾಕಷ್ಟು ಪರ ವಿರೋಧ ಚರ್ಚೆ ಕೂಡಾ ನಡೆಯಿತು. ಇನ್ನೂ ನಡೆಯುತ್ತಲೇ ಇದೆ. ಅದೇನೇ ಇರಲಿ.

ಶ್ರೀರಾಮ ಸೇನೆ ಕಾರ್ಯಕರ್ತರನ್ನು ಸಮರ್ಥಿಸಲು ಸಾಧ್ಯವಿಲ್ಲ. ನಿಜ. ಇದೇ ಅವಧಿಯಲ್ಲಿ ಇನ್ನೊಂದು ಘಟನೆ ಕೂಡಾ ಮಂಗಳೂರಿನಲ್ಲಿ ನಡೆಯಿತು. ಅದು ಕೂಡಾ ಚರ್ಚೆಗೆ ಈಡಾಯಿತು. ಕೇರಳದ ಮಂಜೇಶ್ವರ ವಿಧಾನ ಸಭಾ ಕ್ಷೇತ್ರದ ಶಾಸಕ ಸಿ.ಎಚ್. ಕುಞಂಬು ಪುತ್ರಿ ಮತ್ತು ಆಕೆಯ ಪಕ್ಕ ಕುಳಿತಿದ್ದ ಹುಡುಗನನ್ನು ಮಂಗಳೂರು ಬಳಿ ದುಷ್ಕರ್ಮಿಗಳು ಅಪಹರಿಸಿ, ಥಳಿಸಿ, ಬಿಟ್ಟಿದ್ದರು. ತಕ್ಷಣವೇ ಮಾಧ್ಯಮಗಳು ಶಾಸಕ ಹೇಳಿಕೆ ಪಡೆದವು. "ಈ ಕೃತ್ಯದ ಹಿಂದೆ ತಮ್ಮ ಮಗಳು ಪಯಣಿಸಿದ್ದ ಬಸ್‌ ಕಂಡಕ್ಟರ್ ಬಗ್ಗೆ ಹೆಚ್ಚಿನ ಗುಮಾನಿ ಇದೆ. ಆತ ತನ್ನ ಮಗಳನ್ನು ಕೆಟ್ಟ ದೃಷ್ಟಿಯಿಂದ ನೋಡಿದ್ದ ಎಂಬುದನ್ನು ಮಗಳು ತನಗೆ ತಿಳಿಸಿದ್ದಾಳೆ. ಆದರೂ ತನಗೆ ಬಜರಂಗದಳದವರು ಇದರಲ್ಲಿ ಭಾಗಿಯಾಗಿದ್ದಾರೋ ಎಂಬ ಸಂಶಯ ತನ್ನನ್ನು ಕಾಡಿದೆ " ಎಂದು ಹೇಳಿಕೆಯಲ್ಲಿ ಶಾಸಕ ಕುಞಂಬು ಸ್ಪಷ್ಟವಾಗಿ ಹೇಳ್ತಾರೆ.

ಇದೇ ಸಂದರ್ಭದಲ್ಲಿ ಮಾಧ್ಯಮಗಳಲ್ಲಿ ಈ ಘಟನೆ ಹಿಂದೆ ಶ್ರೀರಾಮ ಸೇನೆ ಕೈವಾಡ ಇದೆ ಎಂದು ವರದಿಯಾಗಿತ್ತು. ಕೆಲವು ಮಾಧ್ಯಮಗಳು ಕೂಡಲೇ ಶ್ರೀರಾಮ ಸೇನೆ ಮುಖ್ಯಸ್ಥನಿಗೆ ದೂರವಾಣಿ ಕರೆ ಕೂಡಾ ಮಾಡಿ ಅವರ ಹೇಳಿಕೆಯನ್ನು ಪ್ರಸಾರ ಮಾಡಿದವು. ಆದರೆ ಅದೇಕೋ ಮಂಗಳೂರು ಪಬ್‌ ದಾಳಿ ಬಳಿಕ ಮಾಧ್ಯಮಗಳು ಕೂಡಾ ಸಂಯಮ ಕಳೆದುಕೊಂಡಂತೆ ಕಂಡು ಬಂದಿತ್ತು. ಯಾಕೆಂದ್ರೆ ಶಾಸಕ ಕುಞಂಬು ಹೇಳಿಕೆ ಪೂರ್ತಿಯಾಗಿ ಕೇಳಿಸಿಕೊಳ್ಳದೇ ಶ್ರೀರಾಮ ಸೇನೆ ಮೇಲೆ ಗೂಬೆ ಕೂರಿಸಿದರು. ಇದು ಶ್ರೀರಾಮ ಸೇನೆಯನ್ನು ಸಮರ್ಥಿಸುವ ವಿಚಾರವಲ್ಲ. ಆದರೆ ಸಂಯಮ ಕಳೆದುಕೊಂಡರೆ ವಾಸ್ತವಾಂಶ ಹೇಗೆ ಮುಚ್ಚಿಹೋಗುತ್ತದೆ ಎಂಬುದಕ್ಕೆ ಉದಾಹರಣೆ ಅಷ್ಟೆ.

ಇದೇ ಸಂದರ್ಭ ಎಂದು ಕಾದಿದ್ದ ರಾಜಕೀಯ ಪಕ್ಷದ ಮುಖಂಡರು ಹೇಳಿಕೆ ನೀಡಲಾರಂಭಿಸಿದರು. ಇದಕ್ಕೆ ಕರ್ನಾಟಕದ ಬಿಜೆಪಿ ಸರಕಾರದ ಕುಮ್ಮಕ್ಕಿದೆ ಎಂಬ ಹೇಳಿಕೆಯನ್ನು ಕೇರಳದ ರಾಜಕಾರಣಿಗಳು ನೀಡತೊಡಗಿದರು. ಇದೇ ಸಂದರ್ಭದಲ್ಲಿ ದಕ್ಷಿಣ ಕನ್ನಡ ಪಾಂಡೇಶ್ವರ ಪೊಲೀಸರು ಶಾಸಕರ ಪುತ್ರಿ ಮತ್ತು ಆಕೆ ಜೊತೆ ಹೋದ ಯುವಕನನ್ನು ಅಪಹರಿಸಿ ಥಳಿಸಿ ಕಳುಹಿಸಿದ ಪ್ರಕರಣದ ಆರೋಪಿಗಳನ್ನು ಬಂಧಿಸುತ್ತಾರೆ. ಇವರು ಶಾಸಕ ಕುಞಂಬು ಪುತ್ರಿ ಪ್ರಯಾಣಿಸಿದ್ದ ಬಸ್‌ನ ಉದ್ಯೋಗಿಗಳು. ಶಾಸಕರ ಅನುಮಾನವೂ ತಾಳೆಯಾಗಿತ್ತು.

ಪೊಲೀಸರೂ ಪ್ರಕರಣದಲ್ಲಿ ಶ್ರೀರಾಮ ಸೇನೆ ಅಥವಾ ಸಂಘ ಪರಿವಾರದ ಕೈವಾಡ ಇಲ್ಲ ಎಂದರು. ಆದರೆ ಬಂಧಿತರು ಎಡ ಪಕ್ಷಗಳ ಸಂಘಟನೆಗೆ ಸೇರಿದವರು ಎಂಬ ಮಾಹಿತಿ ಹೊರಬೀಳುತ್ತದೆ. ಇದನ್ನು ಕೇರಳದ ಎಡಪಕ್ಷದ ಮುಖಂಡರು ಅಲ್ಲಗಳೆಯುತ್ತಾರೆ. ಹಾಗೇನೆ ಬಿಜೆಪಿ ಕಾರ್ಯಕರ್ತರೊಬ್ಬರ ಪುತ್ರನೂ ಇದರಲ್ಲಿ ಭಾಗಿಯಾಗಿದ್ದ. ಆತನನ್ನೂ ಪೊಲೀಸರು ಬಂಧಿಸಿದ್ದಾರೆ. ಇದನ್ನೂ ಮಾಧ್ಯಮಗಳು ಬಿತ್ತರಿಸುತ್ತವೆ.

ಅದೇನೇ ಇರಲಿ. ಅಪಹರಣ ಮತ್ತು ಥಳಿತದಂತಹ ಅಪರಾಧ ಪ್ರಕರಣ ಕೂಡಾ ರಾಜಕೀಯ ಬಣ್ಣ ಪಡೆಯುವುದಕ್ಕೆ ಕಾರಣ ಏನು ಎಂಬುದಕ್ಕೆ ಪ್ರತ್ಯೇಕ ವಿವರಣೆ ಬೇಕಾಗಿಲ್ಲ ತಾನೆ? ಆದರೆ, ಈ ಎಲ್ಲ ಬೆಳವಣಿಗೆಗಳು ಅದೆಂಥ ಅತಿರೇಕಕ್ಕೆ ಹೋಗಿದ್ದವೆಂದರೆ, ಮಾಧ್ಯಮಗಳ ಮೇಲೆ ನಿಯಂತ್ರಣ ಹೇರುವ ಓಂಬುಡ್ಸ್‌ಮನ್‌ ಸ್ಥಾಪನೆ ಬಗ್ಗೆ ಗೃಹಸಚಿವ ಡಾ. ಆಚಾರ್ಯ ಚಿಂತನೆ ಹರಿಬಿಡುವಷ್ಟರ ಮಟ್ಟಿಗೆ. ಬಿಜೆಪಿ ಸರಕಾರ ಅಧಿಕಾರಕ್ಕೆ ಬಂದ ದಿನದಿಂದ ಇಲ್ಲಿತನಕ ಮಾಧ್ಯಮಗಳಲ್ಲಿ ಬಿಜೆಪಿ ಸರಕಾರದ ಅಚಾತುರ್ಯಗಳೇ ಹೈಲೈಟ್‌ ಆಗಿದ್ದವು. ಅನೇಕ ಸಂದರ್ಭದಲ್ಲಿ ಡಾ. ಆಚಾರ್ಯ ಇದನ್ನು ತಮ್ಮ ಖಾಸಗಿ ಬ್ಲಾಗ್‌ನಲ್ಲಿ ಖಂಡಿಸುತ್ತಾ ಅಸಮಾಧಾನ ವ್ಯಕ್ತಪಡಿಸುತ್ತಲೇ ಬಂದಿದ್ದಾರೆ. ಇದರ ಒಂದು ಭಾಗವಾಗಿ ಓಂಬುಡ್ಸ್‌ಮನ್ ವಿಚಾರ ಪ್ರಸ್ತಾಪವಾಗಿದ್ದರೆ ಅಚ್ಚರಿಯೇನಿಲ್ಲ. ಇದೇ ವೇಳೆ ಮುಖ್ಯಮಂತ್ರಿ ಯಡಿಯೂರಪ್ಪ ಇದರ ಸಾಧ್ಯತೆ ಅಲ್ಲಗಳೆದಿರುವುದರಿಂದ ಡಾ. ಆಚಾರ್ಯ ಅವರಿಗೆ ಮುಖಭಂಗವಾದಂತಾಗಿದೆ.

ಏನೇ ಆಗಲಿ, ಮಾಧ್ಯಮ ಸಂಯಮದಿಂದ ವರ್ತಿಸಬೇಕಿತ್ತು. ಅಂದರೆ, ಪತ್ರಕರ್ತರು ಕೊಂಚ ವಿವೇಕದಿಂದ ಕೆಲಸ ಮಾಡಿದ್ದರೆ ಇವೆಲ್ಲ ಬೆಳವಣಿಗೆಗಳು ಮಿತಿಯಲ್ಲಿರುತ್ತಿದ್ದವು, ಅಲ್ವಾ?

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ಪ್ರತಿಕ್ರಿಯೆಗಳು

ಮಾಧ್ಯಮದ ಅತಿರೇಕಕ್ಕೆ ಇದು ಒಂದು ಉತ್ತಮ ಉದಾಹರಣೆ ಅನಿಸುತ್ತದೆ. ಮರು ಪರಿಶೀಲಿಸುವ ವ್ಯವಧಾನ ಎಷ್ಟು ಜನರಿಗಿದೆ? ಅತಿ ರಂಜಿತವಾಗಿದೆ ಅನಿಸಿದರೂ, ಬೇರೆಯವರು ಕೊಡುವುದಕ್ಕಿಂತ ಮೊದಲು ನಾವೇ ಕೊಡೋಣ ಎಂದು ಕಸವನ್ನು ಸುದ್ದಿಯನ್ನಾಗಿ ಕೊಡಲಾಗುತ್ತಿದೆ. ತಪ್ಪು ತಿಳಿದ ಮೇಲಾದರೂ ತಿದ್ದಿಕೊಳ್ಳುತ್ತಾರೆಂದರೆ ಅದೂ ಇಲ್ಲ. ಇದಕ್ಕೆ ಕಾರಣ, ಕೇಳುವವರು ಯಾರೂ ಇಲ್ಲದಿರುವುದು. ತಪ್ಪು ಮಾಡಿಯೂ ತಲೆ ಎತ್ತಿ ಓಡಾಡುವ ಅವಕಾಶ ಸದ್ಯಕ್ಕೆ ಪತ್ರಿಕೋದ್ಯಮದಲ್ಲಿ ಮಾತ್ರ ಇದೆ ಅಂತ ಕಾಣುತ್ತದೆ. ಬಾಧ್ಯತೆ ಇಲ್ಲದ ಮಾಧ್ಯಮಕ್ಕೆ ಬಣ್ಣದ ಕನ್ನಡಕ ಬಂದುಬಿಡುತ್ತದೆ. ಆಗ ಕಾಣುವುದೆಲ್ಲ ರಂಗೀನ್‌ ಸುದ್ದಿಗಳೇ.

ಜನ ಕ್ಯಾಕರಿಸಿ ಉಗಿಯುತ್ತಿರುವ ಸದ್ದೂ ಕೇಳುತ್ತಿಲ್ಲ ಎಂದರೆ, ಅದೆಂಥ ಭಂಡನತದಲ್ಲಿದ್ದಾರೋ ನಮ್ಮ ಮಾಧ್ಯಮ ಸಹೋದ್ಯೋಗಿಗಳು.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.