ಸಿಟ್ಟು ಬಂದಾಗ ಮೌನವೇ ಒಳ್ಳೆಯದು

4.272725

ಕಳೆದ ಒಂದು ವಾರದ ಹಿಂದೆ. ನಮ್ಮ ಮನೆಯಲ್ಲಿನ ಎರಡು ಮೊಬೈಲ್ ಕಳೆದು ಹೋಗಿತ್ತು. ಮನೆಯಲ್ಲಿ ಎಲ್ಲೋ ಇರಬೇಕು ಎಂದುಕೊಂಡು ಮಡದಿ, ಅಪ್ಪ, ನಾನು ಮನೆಯಲ್ಲಿನ ಮೂಲೆ ಮೂಲೆಯನ್ನೂ ಶೋಧಿಸಿದೆವು. ಆದರೆ ಎಲ್ಲೂ ಸಿಗಲಿಲ್ಲ. ದಿನ ನಿತ್ಯ ಮನೆಗೆ ಹಲವರು ಬರುವುದರಿಂದ ಯಾರೋ ತೆಗೆದುಕೊಂಡು ಹೋಗಿರಬೇಕು, ಹೋಗಲಿ ಬಿಡು ಎಂದು ಮಡದಿಗೆ ತಿಳಿಸಿದೆ. ನಿಮಗೆ ದುಡ್ಡು ಹೆಚ್ಚಾಗಿದೆ ಅದಕ್ಕೆ ನೀವು ಹಾಗೆ ಹೇಳ್ತೀರಾ ಅಂದು ಮಂಚದ ಅಡಿಯಲ್ಲಿ, ಸೋಫಾದ ಅಡಯಲ್ಲಿ ಶೋಧದ ಕಾರ್ಯ ಮುಂದುವರೆಸಿದ್ದಳು. ಇದರ ಮಧ್ಯೆ ನನ್ನ ಚಿಕ್ಕ ಮಗಳು ಅಲ್ಲಿದೆ, ಇಲ್ಲಿದೆ ಎನ್ನುತ್ತಿದ್ದಳು. ಅವಳು ಹೇಳಿದ ಕಡೆಯೆಲ್ಲಾ ನೋಡಿದ್ದಾಯಿತು. ಅಂತೂ ಎಲ್ಲೂ ಸಿಗಲಿಲ್ಲ. ಹೋಗಲಿ ಮತ್ತೊಂದು ಸೆಟ್ ಹಾಗೂ ಹಳೇ ನಂಬರ್ ನೀಡುವಂತೆ ಏರ್ ಟೆಲ್ ಕಂಪೆನಿಯವರಿಗೆ ಹೇಳಿ ಎಂದಿನಂತೆ ನನ್ನ ಕಾರ್ಯದಲ್ಲಿ ತೊಡಗಿಕೊಂಡೆ.

ನಮ್ಮದು ವಟಾರದ ಮನೆ. ಚಿಕ್ಕಪ್ಪ, ದೊಡ್ಡಪ್ಪ ಎಲ್ಲಾ ಅಕ್ಕಪಕ್ಕದಲ್ಲಿಯೇ ಇದ್ದಾರೆ. ನನ್ನ ದೊಡ್ಡಪ್ಪನ ಮೊಮ್ಮಗ 8ನೇ ಕ್ಲಾಸ್ ಓದುತ್ತಿದ್ದಾನೆ. ಒಂದು ದಿನ ಸಂಜೆ ಅವನು ಸಂತೆ ಮೈದಾನದಲ್ಲಿ ಹಲವು ಹುಡುಗರ ಜೊತೆ ಸೈಕಲ್ ಹಿಡಿದುಕೊಂಡು ಮಾತನಾಡುತ್ತಿದ್ದುದನ್ನು ನೋಡಿದೆ. ಅಷ್ಟೊತ್ತಿಗೆ ಅಲ್ಲಿ ಬೇರೆ ಬೇರೆ ಘಟನೆಗಳು ನಡೆಯುವುದರಿಂದ ದೊಡ್ಡವರೇ ಹೋಗಲು ಸ್ವಲ್ಪ ಹಿಂಜರಿಯುತ್ತಾರೆ. ಅಂತಹುದರಲ್ಲಿ ಇವನು ಯಾಕೆ ನಿಂತಿದ್ದಾನೆ ಎನ್ನುವ ಅನುಮಾನ ಬಂತು. ಮಾರನೆಯ ದಿನ ಬೆಳಗ್ಗೆ ಅವನನ್ನ ಕರೆದು ಸಂಜೆ ಏನೋ ಸಂತೆ ಮೈದಾನದಲ್ಲಿ ಮಾಡುತ್ತಿದ್ದೆ ಎಂದು ಗದರಿಸಿದೆ. ಅದಕ್ಕೆ ಅವನಿಂದ ಸಕಾರಾತ್ಮಕ ಉತ್ತರ ಬರಲಿಲ್ಲ.  ನಮ್ಮನೆ ಮೊಬೈಲ್ ನೀನೆ ಅಂತೆ ತೆಗೆದುಕೊಂಡು ಹೋಗಿರುವುದು. ನಿನ್ನ ಸ್ನೇಹಿತ ನನಗೆ ಎಲ್ಲಾ ಹೇಳಿದ್ದಾನೆ ಎಂದು ತಮಾಷೆ ಮಾಡಿದೆ. ತಕ್ಷಣವೇ ಅವನ ಮುಖಚಹರೆ ಬದಲಾಯಿತು. ಹಾಗಾದರೆ ಇವನಿಂದಲೇ ಮೊಬೈಲ್ ಎಲ್ಲೋ ಹೋಗಿದೆ ಎನ್ನುವ ಯೋಚನೆಗಳು ಆರಂಭವಾಗಲು ಪ್ರಾರಂಭವಾಯಿತು. ಯಾರಿಗೂ ಹೇಳಲಿಲ್ಲ. ರಾದ್ದಾಂತವಾಗುತ್ತದೆ ಎನ್ನುವ ಕಾರಣಕ್ಕೆ.

ಅವನ ಸ್ನೇಹಿತರ ಶಾಲೆಗಳಿಗೆ ಹೋಗಿ ಇಬ್ಬರನ್ನು ಬೆದರಿಸಿ ಪೊಲೀಸ್ ಗೆ ಕಂಪ್ಲೇಟ್ ನಿಡುತ್ತೇನೆ ಎಂದೆ. ಅಣ್ಣಾ ನಾವಲ್ಲಾ ಕದ್ದಿರುವುದು ಮತ್ತೊಬ್ಬ ಮಧು ಅಂತಾ ಇದಾನೆ, ಅವನು ಅಂದ್ರು. ಮಧು ಮನೆಗೆ ಹೋದೆ. ಅದನ್ನು ಮತ್ತೊಬ್ಬ ತೆಗೆದುಕೊಂಡು ಹೋಗಿದ್ದಾನೆ ಅಂದ. ಸರಿ ಹೀಗೆ ಹತ್ತು ಮನೆ ತಿರುಗಿದ ಮೇಲೆ ಕಡೆಯ ಹುಡುಗ ನಮ್ಮ ಮನೇಲ್ಲಿ ಇದೆ. ಆದರೆ ಅದನ್ನು ನಿಮ್ಮ ಹುಡುಗ  ತಂದು ಕೊಟ್ಟಿದ್ದಾನೆ ಎಂದ.

ತೆಗೆದುಕೊಂಡು ಬಾ ಅಂದೆ. ನೋಡಿದ್ರೆ ನಮ್ಮ ಮನೇ ಮೊಬೈಲ್ ಗಳು. ಆಶ್ಚರ್ಯವಾಯಿತು. ಎಲ್ಲಾ ಸ್ಕ್ರಾಚ್ ಮಾಡಿ, ಬ್ಯಾಟರಿ ಹಾಳು ಮಾಡಿದ್ರು. ಸಿಮ್ ಬಿಸಾಕಿದ್ರು. ನಿಮಗೆಲ್ಲಾ ಪೊಲೀಸ್ ಗೆ ಕೊಡ್ತೀನಿ ಅಂತಿದ್ದಾಗೆನೇ ಕಾಲು ಹಿಡಿದು ಅಣ್ಣಾ ಇನ್ನು ಮೇಲೆ ತಪ್ಪು ಮಾಡುವುದಿಲ್ಲ ಎಂದು ಬೇಡಿ ಕೊಂಡರು. ನೀವಿನ್ನೂ ಚಿಕ್ಕ ಹುಡುಗರು ಹೀಗೆಲ್ಲಾ ಮಾಡಿದರೆ ನಿಮ್ಮ ಜೀವನವೇ ಹಾಳಾಗುತ್ತದೆ. ಪುಸ್ತಕ, ಪೆನ್ನು ಬೇಕಾದರೆ ಹೇಳಿ ನಾನೇ ಕೊಡಿಸುತ್ತೇನೆಂದು ಹೇಳಿ ಅಲ್ಲಿಂದ ಸೀದಾ ನನ್ನ ದೊಡ್ಡಪ್ಪನ ಮೊಮ್ಮಗನ ಶಾಲೆಗೆ ಮೊಬೈಲ್ ತೆಗೆದುಕೊಂಡೇ ಹೋದೆ.

ಏಕಾಏಕಿ ಶಾಲೆಗೆ ಹೋದವನೇ ಅವನನ್ನ ಹೊರ ಕರೆದು. ನಿಧಾನವಾಗಿ ನೀನು ಮೊಬೈಲ್ ಕದ್ದಿದ್ದರೆ ಹೇಳು. ನೀನು ನನ್ನ ಮಗನಿದ್ದ ಹಾಗೆ. ಹಾಗೆಲ್ಲಾ ಮಾಡಬಾರದು ಅಂದೆ. ಮತ್ತದೇ ಸುಳ್ಳು ಹೇಳಿದ. ಸಿಟ್ಟು ತಡೆಯಲಾಗಲೇ ಇಲ್ಲ. ಕೆನ್ನೆಗೆ ಒಂದು ನಿಧಾನವಾಗಿ ಹೊಡೆದೆ. ನಡುಗಲು ಆರಂಭಿಸಿದ. ತಕ್ಷಣವೇ ತಪ್ಪನ್ನು ಒಪ್ಪಿಕೊಂಡ. ನಿಮ್ಮ ಮನೆಯಲ್ಲಿ ಪೇಪರ್ ಬಂಡಲ್ ಕಟ್ಟಲು ಬಂದಾಗ ತೆಗೆದುಕೊಂಡು ಹೋಗಿದ್ದೇ ಅಂತಾ, ಗೇಮ್ಸ್ ಆಡುವುದಕ್ಕೋಸ್ಕರ ಕದ್ದಿರುವುದು ಎಂದು ತಪ್ಪು ಒಪ್ಪಿಕೊಂಡ. ಅಷ್ಟರಲ್ಲಾಗಲೇ ನನ್ನ ಸುತ್ತ ಶಾಲೆಯ ಶಿಕ್ಷಕರು ಮತ್ತುವರೆದಿದ್ದರು. ಸುರೇಶ್ ಯಾವತ್ತು ನೀವು ದುಡುಕುವರಲ್ಲ. ಯಾಕೆ ಏಕಾಏಕಿ ಸಿಟ್ಟಾದಿರಿ ಎಂದು. ಇವರ ಮನೆಯಲ್ಲಿ ಸಾಕಷ್ಟು ಬಡತನವಿದೆ. ಒಬ್ಬನೇ ಮಗ ಬೇರೆ, ಇವನು ಕಳ್ಳತನಕ್ಕೆ ಇಳಿದರೆ ಮನೆಗೆ ಕೆಟ್ಟು ಹೆಸರು ಬರುವುದಲ್ಲದೆ, ಇವನ ಜೀವನವೇ ಹಾಳಾಗುತ್ತದಲ್ಲಾ ಎಂದು ಈ ರೀತಿ ಮಾಡಿದೆ ಎಂದು ಹೇಳಿದೆನಾದರೂ ಯಾಕೆ ಕೈ ಮಾಡಿದೆ ಎನ್ನುವ ಪ್ರಶ್ನೆ ಒಳಗೆ ಕಾಡುತ್ತಲೇ ಇತ್ತು.ನನ್ನಲ್ಲಿ ಕಣ್ಣಲ್ಲಿ ನೀರು ತುಂಬಿತ್ತು. ಹೊಡೆಯಲು ನಾನ್ಯಾರು.

ತಕ್ಷಣ ಅವನನ್ನು ಶಾಲೆಯ ಕೊಠಡಿಯೊಳಗೆ ಕರೆದೊಯ್ದು. ಇವರ ಚಿಕ್ಕಪ್ಪನಿಗೆ ಹುಷಾರಿಲ್ಲ. ಆಸ್ಪತ್ರೆಗೆ ಹೋಗು ಎಂದರೆ ಇಲ್ಲಿಗೆ ಬಂದಿದ್ದಾನೆ ಎನ್ನುವ ಕಾರಣಕ್ಕೆ ಅವನನ್ನು ಗದರಿಸಿದೆ ಎಂದು ಆತನ ಶಾಲೆಯ ವಿದ್ಯಾರ್ಥಿಗಳಿಗೆ ತಿಳಿಸಿದೆ. ಕಾರಣ ನಾಳೆ ಶಾಲೆಯಲ್ಲಿ ಯಾವುದೇ ಕಳ್ಳತನವಾದರೂ ಇವನ ಮೇಲೆ ಬರಬಾರದು ಎನ್ನುವ ಕಾರಣಕ್ಕೆ. ಹಾಗೇ ಶಿಕ್ಷಕರಿಗೆ ಗೊತ್ತಿಲ್ಲದೆ ಮಾಡಿದ್ದಾನೆ. ನಮ್ಮದು ತಪ್ಪಿದೆ. ಇದನ್ನು ಬೆಳಸಬೇಡಿ ಎಂದು ಮನವಿ ಮಾಡಿದೆ.

ನಂತರ ಮನೆಗೆ ಬಂದು ಮಡದಿಗೆ ಮೊಬೈಲ್ ಸೆಟ್ ಗಳನ್ನು ಕೊಟ್ಟೆ. ಖುಷಿಯಾದಳು. ಹಾಗೇ ನಡೆದ ಘಟನೆ ತಿಳಿಸಿದೆ. ಯಾಕೆ ಹೊಡೆಯೋಕ್ಕೆ ಹೋದ್ರಿ, ಅವನು ಅವಮನಾಕ್ಕೆ ಏನಾದ್ರೂ ಮಾಡಿಕೊಂಡರೆ ಅಂದ್ಲು. ಮನಸ್ಸು ತಡೆಯಲಾಗಲಿಲ್ಲ ಮತ್ತೆ ಶಾಲೆಗೆ ಹೋಗಿ ಅವನನ್ನು ಮನೆಗೆ ಕರೆದುಕೊಂಡು ಬಂದು ದೇವರಿಗೆ ಅವರ ಅಮ್ಮನಿಗೆ ನಮಸ್ಕಾರ ಮಾಡಿಸಿ ಇನ್ನು ಮುಂದೆ ಇಂತಹ ತಪ್ಪು ಮಾಡುವುದಿಲ್ಲ ಎಂದು ಹೇಳಿಸಿದೆ. ಆದರೆ ಅವನಿಗೆ ಹೊಡೆದದ್ದೂ ಇನ್ನೂ ನನ್ನನ್ನ ಕಾಡುತ್ತಲೇ ಇದೆ. ತಿಳಿದಂತನವಾಗಿ ಈ ರೀತಿ ಮಾಡಿದನಲ್ಲಾ ಎಂದು. ದುಡುಕಬಾರದಿತ್ತು. ಮೊಬೈಲ್ ಹೋದರೆ ಮತ್ತೊಂದು ಸಿಗುತ್ತದೆ. ಅಕಸ್ಮಾತ್ ಅವನು ಏನಾದರೂ ಮಾಡಿಕೊಂಡಿದ್ದರೆ ಸಾಯುವ ತನಕ ನನ್ನನ್ನು ಕಾಡುತ್ತಲೇ ಇರುತ್ತಿತ್ತು. ಎಂತಹ ಪ್ರಮಾದವಾಗುತ್ತಿತ್ತಲ್ಲಾ ಎನ್ನಿಸಿರುತ್ತದೆ. ಇದೀಗ ಸಿಟ್ಟು ಬಂದರೆ ಕೆಲಕಾಲ ಸುಮ್ಮನೆ ಕೂತು ಬಿಡುತ್ತೇನೆ. ಸಿಟ್ಟಿನಲ್ಲಿ ಮೂಗು ಕೊಯ್ದುಕೊಂಡರೆ ಮತ್ತೆ ಬರುತ್ತದೆಯೇ ಎನ್ನುವ ಗಾದೆ ಜ್ಞಾಪಕ ಬಂದಿದ್ದು ಅಂತೂ ಸುಳ್ಳಲ್ಲ.

ಬ್ಲಾಗ್ ವರ್ಗಗಳು: 
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4.3 (11 votes)
To prevent automated spam submissions leave this field empty.

ಪ್ರತಿಕ್ರಿಯೆಗಳು

ಒಳ್ಳೆಯ ಬರಹ. ನಾನೂ ಸಾಕಷ್ಟು ಬಾರಿ ಸಿಟ್ಟಿನಿಂದ ಪ್ರತಿಕ್ರಿಯಿಸಿ ನಂತರ ಪಶ್ಚಾತ್ತಾಪ (ಪಶ್ಚಾತಾಪ?) ಪಟ್ಟಿದ್ದೇನೆ. ಈಗ ಸಿಟ್ಟು ಬಂದರೆ ಒಂದೆರಡು ಲೋಟ ನೀರು ಕುಡಿಯುತ್ತೇನೆ ಹಾಗೂ ಮನಸ್ಸನ್ನು ಒಳ್ಳೆಯ ಯೋಚನೆಯೆಡೆಗೆ ತಿರುಗಿಸುತ್ತೇನೆ. ಅದಕ್ಕಿಂತಲೂ ಹೆಚ್ಚಾಗಿ ಸಿಟ್ಟನ್ನೇ ಕಡಿಮೆ ಮಾಡಿಕೊಳ್ಳಲು ಪ್ರಯತ್ನಿಸುತ್ತಿದ್ದೇನೆ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ದಂಡಿಸದೆ ಯಾವ ಮಕ್ಕಳು ಉದ್ದಾರ ಆಗುವುದಿಲ್ಲ, ದಂಡನೆ ಆಗತ್ಯ ಆದರೆ ಅದಕ್ಕೂ ಮುಂಚೆ ಮಕ್ಕಳು ಈ ರೀತಿ ಮಾಡಲು ಕಾರಣವೇನು ಮತ್ತು ಪ್ರೇರೇಪಣೆ ಏನು ಎಂಬುದನ್ನು ಅರಿತು ಅದನ್ನು ಬುಡ ಸಮೇತ ಕಿತ್ತು ಹಾಕಬೇಕು.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಹೌದು ದುಡುಕುತ ಪ್ರತಿಯೊಬ್ಬರಲ್ಲು ಇರುತ್ತದೆ..ಇದರಿಂದ ಯಾರು ಹೊರತಲ್ಲ..ಆದರೆ ಸ್ವಲ್ಪ ಮುಂದಾಲೋಚನೆ ಅಗತ್ಯ..ಹೋಗಲಿ ಬಿಡಿ..ಕೊನೆಗೆ ಒಳ್ಳೆಯ ಕೆಲಸವನ್ನೆ ಮಾಡಿದ್ದೀರಿ..
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಸುರೇಶ್ ಅವರೇ, ನನ್ನದೊಂದು ಸಲಹೆ. ಈ ಬರಹವನ್ನು ಸಂಬಂಧಪಟ್ಟವರೆಲ್ಲರೂ ಓದಬಹುದಾದ್ದರಿಂದ ಲೇಖನದಲ್ಲಿ ಕೆಲವೊಂದು ತಿದ್ದುಪಡಿ ಮಾಡಿ, ಲೇಖನ ಓದಿದವರಿಗೆ ಆ ಹುಡುಗ ಯಾರೆಂದು ಗೊತ್ತಾಗದಂತೆ ನೋಡಿಕೊಳ್ಳಿ. ಬೇರೆ ಹೆಸರುಗಳನ್ನೂ ತೆಗೆದುಬಿಡಿ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಿಜಾ ಸರ್....ನನ್ನ ಒಂದು ಇಂಥಾ ಅನುಭವವನ್ನ ನಾನಿಲ್ಲಿ ಹೇಳಬಯಸುತ್ತೇನೆ....ಮನೆ-ಕಛೇರಿ ಕೆಲಸದ ಒತ್ತಡದಲ್ಲಿದ್ದ ನಾನು, ನನ್ನ ಮೂರು ವರ್ಷದ ಮಗಳು, ನನ್ನ ಮಾತು ಕೇಳಲಿಲ್ಲವೆಂಬ ಒಂದು ಚಿಕ್ಕ ಕಾರಣಕ್ಕಾಗಿ, ಅವಳ ಕೆನ್ನೆಗೆ ಜೋರಾಗೇ ಬಾರಿಸಿದ್ದೆ..ಅವಳ ಕೆನ್ನೆ ಕೆಂಪಾಗಿ ಬಾರು ಮೂಡಿತ್ತು...ಅನಂತರದ ಎರಡು ದಿನಗಳವರೆಗೆ ಅವಳು ನನ್ನ ಜೊತೆ ಮಾತನಾಡಿಸದೇ ಇದ್ದದ್ದು ತುಂಬಾ ಸಂಕಟ ಕೊಟ್ಟಿತ್ತು. ಕಿವಿ-ಒಳಗೆ ನೋವಾಗಿರಬಹುದೆಂಬ ಭಯ ಕಾಡುತ್ತಲೇ ಇತ್ತು...ಅವಳ ಮನ ಗೆಲ್ಲುವ ತನಕ...ಆ ಎರಡು ದಿನಗಳು, ನನಗೆ ಯಾವ ಪ್ರಾಯಶ್ಚಿತ ಮಾಡಿದರೂ ಅಳಿಸಲಾಗದ ಪಾಪ ದಂತೆ ಕಾಡಿತ್ತು. ಆ ಕ್ಷಣ 'ಸಿಟ್ಟಿನಿಂದ ಯಾವ ಪ್ರಯೋಜನೆಯೂ ಇಲ್ಲಾ, ಇದರಿಂದ ಆಗೋದು ಬರ್‍ಈ ಕೆಟ್ಟದ್ದು' ಅನ್ನೋ ಪಾಠ ಕಲಿತೆ.....ಬಿಡುವಿದ್ದಾಗ ಓಶೊ ರವರ ' ವಿನೂತನ ಶಿಶು' ಓದಿನೋಡಿ...
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ವಾಸುಕಿ ಅವರೇ, ನನ್ನದೊಂದು ಚಿಕ್ಕ ಸಲಹೆ. ಯಾವುದೇ ಲೇಖನ/ಬ್ಲಾಗ್ ಬರಹಕ್ಕೆ ಪ್ರತಿಕ್ರಿಯಿಸುವುದಾದರೆ ಲೇಖನದ ಕೆಳಗೆ ಇರುವ "ಹೊಸ ಪ್ರತಿಕ್ರಿಯೆ ಸೇರಿಸಿ" ಕೊಂಡಿಯನ್ನು ಕ್ಲಿಕ್ಕಿಸಿ ನಂತರ ಪ್ರತಿಕ್ರಿಯೆ ಬರೆಯಬಹುದು. ಆದರೆ ಬೇರೆಯವರು ಬರೆದ ಪ್ರತಿಕ್ರಿಯೆಗೆ ನೀವು ಮತ್ತೆ ಪ್ರತಿಕ್ರಿಯಿಸುವುದಾದರೆ, ಆ ಕಾಮೆಂಟಿನ ಕೆಳಗಿರುವ "ಇದಕ್ಕೆ ಪ್ರತಿಕ್ರಿಯೆ ಸೇರಿಸಿ" ಒತ್ತಿ ಪ್ರತಿಕ್ರಿಯಿಸಬಹುದು. ಬಹುಷಃ ನೀವು ನಾಡಿಗರ ಲೇಖನಕ್ಕೆ ಪ್ರತಿಕ್ರಿಯಿಸಿದ್ದೀರ. ಆದರೆ ನೀವು ಆರಿಸಿಕೊಂಡಿದ್ದು ಶಿವರಾಮ ಶಾಸ್ತ್ರಿಗಳ ಪ್ರತಿಕ್ರಿಯೆಯ ಕೆಳಗಿದ್ದ "ಇದಕ್ಕೆ ಪ್ರತಿಕ್ರಿಯೆ ಸೇರಿಸಿ" ಲಿಂಕ್‌ನ್ನು. ಹಾಗಾಗಿ ನೀವು ಹೇಳಿರುವ ಮಾತುಗಳು ಶಿವರಾಮ ಶಾಸ್ತ್ರಿಗಳ ಕುರಿತು ಬರೆದಿರುವುದು ಎಂಬಂತೆ ಬಿಂಬಿತವಾಗಿದೆ. ಧನ್ಯವಾದಗಳೊಂದಿಗೆ, -ಪ್ರಸನ್ನ.ಎಸ್.ಪಿ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಓ...ಥ್ಯಾಂಕು ಪ್ರಸನ್ನ..., ಇದರ ಜೊತೆಗೆನೇ ಇನ್ನೂ ಒಂದು ವಿಷಯ ತಿಳಿಸಿಬಿಡಿ....ನಮ್ಮ ಪ್ರತಿಕ್ರಿಯೆ ಎಡಿಟ್ / ಡಿಲಿಟ್ ಮಾಡೊದು ಹೇಗೆ..?
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಪ್ರತಿಕ್ರಿಯೆಗಳನ್ನು ಡಿಲಿಟ್ ಮಾಡಲು ಸಾಧ್ಯವಿಲ್ಲ, ಆದರೆ ಪ್ರತಿಕ್ರಿಯಿಸಿದ ಹತ್ತು ನಿಮಿಷದ ಒಳಗಾಗಿ ಎಡಿಟ್ ಮಾಡಲು ಸಾಧ್ಯವಿದೆ. ಅದಕ್ಕಾಗಿ ನಿಮ್ಮ ಪ್ರತಿಕ್ರಿಯೆಯ ಎಡ-ಕೆಳಭಾಗದಲ್ಲಿ edit ಎಂಬ ಕೊಂಡಿ ಇರುತ್ತದೆ. ಅದನ್ನು ಕ್ಲಿಕ್ಕಿಸಿ ಪ್ರತಿಕ್ರಿಯೆಗಳನ್ನು ಬದಲಾವಣೆ ಮಾಡಬಹುದು.

(ಚಿತ್ರ ಕಾಣಿಸದಿದ್ದಲ್ಲಿ ತಿಳಿಸಿ)

-ಪ್ರಸನ್ನ.ಎಸ್.ಪಿ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಒಳ್ಳೆಯ ಲೇಖನ. ನಿಮ್ಮ ಪ್ರತಿಕ್ರಿಯೆ ಸಹಜವೇ, ಆಮೇಲೆ ಮಾಡಿದ ಕಾರ್ಯ ಮೆಚ್ಚುವಂತಹದ್ದೆ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನನಗನ್ನಿಸಿದ್ದು ಸ್ವಲ್ಪ ವಿಚಿತ್ರ ಎನ್ನಿಸಬಹುದು.ನೀವು ಮಾಡಿದ್ದು ತಪ್ಪೇನಿಲ್ಲ ಅಂತ ಆನ್ನಿಸುತ್ತೆ.ನಮ್ಮ ಸ್ವಂತ ಮಕ್ಕಳಿಗೇ ನಾವೊಂದು ಏಟು ಕೊಟ್ಟರೆ ನಮಗೆ ಇಂತಹ ಪಶ್ಚಾತ್ತಾಪ ಕಾಡದು. ಎಲ್ಲರ ಮುಂದೆ ಮಕ್ಕಳಿಗೆ ಅವಮಾನವೆನಿಸಬಹುದೇನೋ.ಆದರೆ "ಮಾಡಿದುಣ್ಣೋ ಮಹರಾಯ" ಅನ್ನೋದು ಮನದಟ್ಟಾಗುತ್ತೆ. ಬೇರೆಯವರ ಮಕ್ಕಳಿಗೆ ಹೊಡೆಯಲು ನಾವ್ಯಾರು ಅನ್ನೋ ಪ್ರಶ್ನೆ ಹೆಚ್ಚು ಕಾಡುತ್ತೆ. ಆದರೆ ಇದು ಈ ತಲೆಮಾರಿನಲ್ಲಿ ಮಾತ್ರ ಹುಟ್ಟಿರುವ ರೂಲು.ಹಿಂದಿನ ಕಾಲದಲ್ಲಿ ಇದ್ದದ್ದು ಕಾಣೆ. ಮಕ್ಕಳ ಸ್ವಂತ ಪೋಷಕರಿಗೆ ನಯವಾಗಿ ತಿಳಿಸಬಹುದು. ಪರಿಣಾಮ ಅವರ ಪ್ರಬುದ್ಧತೆಯ ಮಟ್ಟದ ಮೇಲೆ ನಿಂತಿದೆ. ಮೋಬೈಲು ಕದಿಯುವಂಥ ಕೆಲಸ ಅಂತಹ ಸಣ್ಣ ಅಪರಾಧವೇನಲ್ಲ.ಉತ್ತರ ಭಾರತದ ಎಷ್ಟೋ ಕಡೆ ಮೋಬೈಲು ಕಳ್ಳರಿಗೆ ಬೀದಿಯಲ್ಲಿ ಜನ ರಕ್ತ ಕಾರುವಂತೆ ಚಚ್ಚುತ್ತಾರೆ.೮ನೇ ಕ್ಲಾಸಿನ ಹುಡುಗನೂ ಚಿಕ್ಕ ಮಗುವೇನಲ್ಲ.ಒಂದು ಏಟು ಬಿದ್ದರೆ ಒಳ್ಳೆಯದೆ. ನಮ್ಮ ಓರಗೆಯ ಹುಡುಗನೊಬ್ಬ( ಸುಮಾರು ೧೫ ವರುಷಗಳ ಹಿಂದೆ) ಬೇರೆ ಊರಿಗೆ ಇಂಜಿನಿಯರಿಂಗ್ ಓದಲು ಹೋದವನು ಪೋಲಿಯಾಗಿ ಅಲೆಯುತಿದ್ದ. ಆ ಊರಿಗೆ ನಮ್ಮ ಬಳಗದವರ ಮನೆಗೆ ಹೋಗಿದ್ದಾಗ ನಮ್ಮಪ್ಪನಿಗೆ ಇದರ ಸುಳಿವು ಹತ್ತಿತು. ಮಧ್ಯಮವರ್ಗದ ಹುಡುಗ ಅನ್ಯಾಯವಾಗಿ ಹಾಳಾಗುತ್ತಾನೆ ಎಂಬ ಭಾವನೆಯಿಂದ ಅವನ ತಂದೆತಾಯಿಗೆ ವಿಷಯ ತಿಳಿಸಲು ಹೋದರು. ಆದರೆ ಅಲ್ಲಿ ಕೇಳುವ ಇಂಗಿತವೇ ಇರಲಿಲ್ಲ. ಅವನಿಂದಾಗಿ ಮುಂದೆ ಕುಟುಂಬದ ಪಾಡು ನಾಯಿಪಾಡಾಯಿತು ಅನ್ನುವುದು ಮುಂದಿನ ಚರಿತ್ರೆ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಕೋಪ ಸಹಜ ನಾಡಿಗರೇ ಆದರೆ ಅದನ್ನು ನಿಯಂತ್ರಿಸುವುದನ್ನು ಕಲಿಯಬೇಕಾಗುತ್ತದೆ ಈ ಪ್ರಪಂಚದಲ್ಲಿ ಸೂಕ್ತ ಕೋಪವನ್ನು ಸೂಕ್ತ ವ್ಯಕ್ತಿಯೊಂದಿಗೆ ಸೂಕ್ತ ಸಮಯದಲ್ಲಿ ಸೂಕ್ತ ರೀತಿಯಲ್ಲಿ ವ್ಯಕ್ತಪಡಿಸಿದ ವ್ಯಕ್ತಿ ಇಲ್ಲವೇ ಇಲ್ಲ. ಆದುದರಿಂದ..........
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಕೋಪ ಬಂದಾಗ ಒಮ್ಮೊಮ್ಮೆ ಮೌನ ಒಳ್ಳೆಯದು ಆದರೆ ಮೌನ ದೌರ್ಬಲ್ಯದಂತೆ ಕಾಣಿಸಬಾರದು ಕೋಪದ ಮೇಲಿನ ಹಿಡಿತವೇ ಮುಖ್ಯವಾಗುತ್ತದೆ ಆ ಮೌನವೇ ಎಲ್ಲದಕ್ಕೂ ಉತ್ತರ ಎಲ್ಲಾಗುತ್ತದೆ? ಕಾರ್ಯಕೆಡಿಸುವ ಮೌನವೂ ಸಮ್ಮತವಲ್ಲ ಕೇಳಿ ಸದಾ ವಿಮರ್ಶಾಶಕ್ತಿಯೇ ಮುಖ್ಯ ಅಲ್ಲವೇ ಹೇಳಿ - ಆಸು ಹೆಗ್ಡೆ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಸುರೇಶ್, ನಿಮ್ಮ ತಳಮಳ ಲೇಖನದಲ್ಲಿ ಚೆನ್ನಾಗಿ ವ್ಯಕ್ತವಾಗಿದೆ. ಕೋಪ ಅಷ್ಟು ಸುಲಭವಾಗಿ ನಿಯಂತ್ರಿಸುವುದು ಕಷ್ಟ ಎಂಬುದು ನನ್ನ ಸ್ವಾನುಭವ. ನಿಯಂತ್ರಿಸಿದ ಕೋಪ ಇನ್ನೊಂದು ಸಂದರ್ಭದಲ್ಲಿ ಬಡ್ಡಿ ಸಮೇತ ಹೊರಬಂದುಬಿಡುತ್ತದೆ. ನಿಯಂತ್ರಿಸಲು ಸಾಧ್ಯವಾದವರು ನಿಜವಾಗಿಯೂ ಸಾಧಕರು.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಲೇಖನಕ್ಕೆ ಪ್ರತಿಕ್ರಿಯಿಸಿ ತಮ್ಮ ಅನುಭವಗಳನ್ನು ಹಂಚಿಕೊಂಡ ಎಲ್ಲಾ ಮಿತ್ರರಿಗೂ ಧನ್ಯವಾದಗಳು. ನಿಮ್ಮಗಳ ಪ್ರೋತ್ಸಾಹ ಹೀಗೆ ಇರಲಿ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.