ಮಾಸ್ಟರ್ ಹಿರಣ್ಣಯ್ಯ ಪತ್ರ, ಈವಾರದ ಪರಾಗಸ್ಪರ್ಶಕ್ಕೆ ಪ್ರತಿಕ್ರಿಯೆ!

4

ಸಂಪದ ಸ್ನೇಹಿತರಿಗೆಲ್ಲ ನಮಸ್ಕಾರ.

ಈ ವಾರದ ಪರಾಗಸ್ಪರ್ಶ ಲೇಖನ ("ಅಮೆರಿಕದ ಹವೆಯಲ್ಲಿ ಕನ್ನಡದ ಕಂಪು ಬೆರೆತಾಗ" - ವಿಜಯ ಕರ್ನಾಟಕ, 31 ಮೇ 2009, ಭಾನುವಾರ) ತಂದುಕೊಟ್ಟ ಪ್ರತಿಕ್ರಿಯೆ-ಪತ್ರಗಳ ಪೈಕಿ ಡಾ. ಮಾಸ್ಟರ್ ಹಿರಣ್ಣಯ್ಯ ಅವರ ಪತ್ರವನ್ನು ನಿಮ್ಮೊಡನೆ ಹಂಚಿಕೊಳ್ಳಲು ಖುಶಿಪಡುತ್ತಿದ್ದೇನೆ.

- ಶ್ರೀವತ್ಸ ಜೋಶಿ

=========================

||ಶ್ರೀಮಾತಾ||

01 ಜೂನ್ 2009 ಬೆಂಗಳೂರು.

ಆತ್ಮೀಯ ಬಂಧು, ಶ್ರೀಯುತ ಶ್ರೀವತ್ಸಜೋಶಿಯವರಿಗೆ, ನಿಮ್ಮ ಮಾಸ್ಟರ್ ಹಿರಣ್ಣಯ್ಯನ ಅನಂತಾನಂತ ಅಭಿವಂದನೆಗಳು.

ಎಲ್ಲಿಂದ ಹೇಗೆ ಆರಂಭಿಸಲಿ? ಸರಿ-ಸಾಂಪ್ರದಾಯಕವಾಗಿಯೇ ಪ್ರಾರಂಭಿಸೋಣ.

ಸ್ವಾಮಿ, ನಾನೊಬ್ಬ ಅಚ್ಚ ಕನ್ನಡಿಗ. ರಂಗ ಕಲಾವಿದ. ನನ್ನ ನಾಮಧೇಯ, ವಂದನೆಗಳಿಗೆ ಹಿಂದೆಯೇ ತಿಳಿಸಿದ್ದೇನೆ. ಇನ್ನು ನಿಮ್ಮ ಪರಿಚಯ ನನಗಾದದ್ದು, ನೆನ್ನೆಯ "ವಿಜಯ ಕರ್ನಾಟಕ"ದಲ್ಲಿ, ತಮ್ಮ ಅನಿಸಿಕೆ ಹಾಗೂ ನಮ್ಮ ನಾಡ ನುಡಿಯ ಬಗೆಗಿನ ತಮ್ಮ ಅಗಾಧ ಅಭಿಮಾನ, ಕಳಕಳಿ ಮತ್ತು ಆಶಾಭಾವನೆಯ ಅನಿಸಿಕೆಯ ಲೇಖನ ಓದಿ, ಹೆಮ್ಮೆಯೆನಿಸಿ ಕೃತಜ್ಞತಾ ಭಾವದಿಂದ- "ಶಿರಸಾ ನಮಾಮಿ, ಮನಸಾ ಸ್ಮರಾಮಿ" ಅಂದೆ.

ಇಲ್ಲಿಯ ಕನ್ನಡ ನಾಡಲ್ಲೇ ಜನಿಸಿ, ಕನ್ನಡದ ಭಾಷೆಯಲ್ಲೇ ಉಂಡುಡುತ್ತಾ ಇದ್ದರೂ, ಅವುಗಳ ಬಗ್ಗೆ ಕಿಂಚಿತ್ತೂ ಅಭಿಮಾನವನ್ನಾಗಲೀ, ಆಶಾಭಾವನೆಯನ್ನಾಗಲೀ, ಕೃತಜ್ಞತಾ ಭಾವವನ್ನಾಗಲೀ, ಯಾವುದನ್ನೂ ಕಾಯಾವಾಚಾಮನಸಾ ಇಟ್ಟುಕೊಳ್ಳದೇ, ಅದರ ಬುಡಕ್ಕೇ ಕೊಡಲಿಯನ್ನು ಹಾಕುತ್ತಿರುವ ಜನ ನಾಯಕರನ್ನೂ, ಬುದ್ಧಿಜೀವಿಗಳನ್ನೂ, ನಾಗರಿಕರೆಂದು ತೋರಿಸಿಕೊಳ್ಳಲು, ಮಹಾ ಅನಾಗರೀಕರಂತೆ ವರ್ತಿಸುತ್ತಾ, ಇಲ್ಲಿ ಬಿಟ್ಟರೆ ಬೇರೆ ಕಡೆ, ಕವಡೆಯ ಕಿಮ್ಮತ್ತಿಗೂ ಬಾಳಲಾರದ, ಅಚ್ಚ ಕನ್ನಡಿಗರನ್ನು, ಅರವತ್ತು ವರ್ಷಗಳಿಂದ ನೋಡುತ್ತಾ, ಅವರ ಜೊತೆಜೊತೆಯಲ್ಲೇ ಬೆರೆಯುತ್ತಾ, ಅವರಿತ್ತ-ಈಯುತ್ತಿರವ ಕೃಪಾನ್ನದಲ್ಲೇ ಉಳಿದಿರುವ ನಾನು, ಅವರನ್ನು ಅತ್ತ ಹಳಿಯಲೂ ಆಗದೇ, ಇತ್ತ ಅವರನ್ನು ಸತ್ಯನ್ಯಾಯಗಳ ಹಳಿಯ ಮೇಲೆ ಎಳೆಯಲೂ ಆಗದೇ, ಉಳಿದಿರುವ ನಾನು, ನಿಮ್ಮ ಅಮೂಲ್ಯ ಅನುಭವಾಮೃತದ ಅಮೃತಬಿಂದುಪೂರಿತ ಮಾತುಗಳಿಂದ ಅಭಿಷಿಕ್ತನಾದೆ-ಅದಕ್ಕಾಗಿಯೇ ಈ ಅಭಿವಂದನಾ ಪತ್ರ.

ಸರ್ಕಾರದ ಭಾಷಾಂಧತೆಗೆ ಇಲ್ಲಿ ಒಂದೆರಡು ಉದಾಹರಣೆ-ಪಕ್ಕದ ತಮಿಳ್ ನಾಡಿನವರು ನಮ್ಮ ಭಾಷೆಗಿಂತ ಕಿರಿಯ ಚಾರಿತ್ರೆಯ ಒಡೆಯರವರಾದರೂ, ತಮ್ಮ ಅನನ್ಯ ಭಾಷಾಭಿಮಾನದ ಕುರುಹಾಗಿ ಕೇಂದ್ರ ಸರ್ಕಾರದಿಂದ ತಮಿಳನ್ನು "ಶಾಸ್ತ್ರೀಯ ಭಾಷೆ"ಯನ್ನಾಗಿ ಗುರುತಿಸಿಸಿ ಕೊಂಡು ಬೀಗುತ್ತಿದ್ದರೂ, ನಮ್ಮ ಪವಿತ್ರ ೨೮ ಸಂಸದ ಜನನಾಯಕರಿಗೆ ಅದರ ಪರಿವೆಯೇ ಇಲ್ಲದೇ, ಕನ್ನಡಿಗರ ತೆರಿಗೆಯ ಹಣವನ್ನು ಬ್ಯಾಟಾ-ಕೋಟಾ ರೂಪದಲ್ಲಿ ತಿಂದು ತೇಗಿದರು ಕಳೆದೈದು ವರ್ಷಗಳು. ಇಲ್ಲಿನ ಅನೇಕ ಸಂಘ ಸಂಸ್ಥೆಗಳು, ನಾಡನುಡಿಯ ಅಭಿಮಾನಿಗಳೂ ಗದ್ದಲ ಎಬ್ಬಿಸಿದ ಮೇಲೆ, ಕಾಟಾಚಾರಕ್ಕೆ ಮತ್ತು ಮುಂದಿನ ಚುನಾವಣೆಯಲ್ಲಿನ ಮತದಾಸೆಗೆ, ನೆಪಕ್ಕೆ ಕನ್ನಡವನ್ನು ಶಾಸ್ತ್ರಿಯ ಭಾಷೆಯೆಂದು ಕೇಂದ್ರದಿಂದ ಹೇಳಿಸಿದರೂ, ಇನ್ನೂ ಅದು ಅಧಿಕೃತವಾಗಿಲ್ಲ. ಕಾರಣ ತಮಿಳು ನಾಡಿನ ನ್ಯಾಯವಾದಿಯೊಬ್ಬರು(ಶ್ರೀಗಾಂಧಿ ಎಂಬುವವರು) ಚನ್ನೈನ ಉಚ್ಚನ್ಯಾಯಾಲಯದಲ್ಲಿ, ಕನ್ನಡದ ಶಾಸ್ತ್ರೀಯ ಭಾಷಾ ಸ್ಥಾನಕ್ಕೆ ಕೊಟ್ಟಿರುವ ಮನ್ನಣೆಯನ್ನು ರದ್ದು ಪಡಿಸುವಂತೆ ಕೋರಿದ್ದಾರೆ. ಅದಕ್ಕೆ ಆಕ್ಷೇಪಣಾ ಅರ್ಜಿಯನ್ನು ಹಾಕುವಲ್ಲಿಯೂ ಸಹ ನಮ್ಮ ಘನ ಸರ್ಕಾರದವರು ಅನಗತ್ಯ ಆಲಸ್ಯವನ್ನೂ, ವಿಳಂಬ ನೀತಿಯನ್ನೂ ಅನುಸರಿಸುತ್ತಾ ಇರುವುದು, ಸರ್ಕಾರದ ಅಜ್ಞಾನಕ್ಕೆ ಹಾಗೂ ನಮ್ಮ ದೌರ್ಭಾಗ್ಯಕ್ಕೆ ಹಿಡಿದ ಕನ್ನಡಿಯಂತಿದೆ. ಇನ್ನು ಅದು ಇತ್ಯರ್ಥವಾಗುವವರೆಗೂ ನಮ್ಮ ಸ್ಥಿತಿ ಅಧೋಗತಿ. ಇನ್ನೊಂದು ಉದಾಹರಣೆ-ಸರ್ಕಾರದ ನಾಮ ಫಲಕಗಳು. "ಹೆಂಗಸರ ಹೆರಿಗೆ ಆಸ್ಪತ್ರೆ". "ಸರ್ಕಾರದ ಬೀಜ ನಿಗಮ", ವಿದ್ಯುತ್ ಚಿತಾಗಾರದ ದುರಸ್ತೆಗೆ ಮುನ್ನ ಫಲಕ "ವಿದ್ಯುತ್ ಚಿತಾಗಾರ ದುರಸ್ಥಿ ಮಾಡಲ್ಪಡುತ್ತಿದೆ, ಸರ್ವರೂ ಸಹಕರಿಸಿ" ಆನಂತರ "ವಿದ್ಯುತ್ ಚಿತಾಗಾರ ಸಿದ್ಧವಾಗಿದೆ, ಸರ್ವರೂ ಸಹಕರಿಸಿ". ಇದಲ್ಲದೆ ನಮ್ಮ ಶಿಕ್ಷಣದಲ್ಲಿ ಆಗಲೀ, ನ್ಯಾಯಾಂಗದಲ್ಲಾಗಲೀ ಅಥವಾ ಸರ್ಕಾರದಲ್ಲಾಗಲೀ ಕನ್ನಡವನ್ನು ಇನ್ನೂ ಅಧಿಕೃತ ಭಾಷೆಯನ್ನಾಗಿ ಘೋಷಿಸಿಯೂ ಇಲ್ಲಾ, ಆಚರಣೆಗಂತೂ ತಂದೇ ಇಲ್ಲಾ. ತಮ್ಮ ಗಮನಕ್ಕೆ ತರಲು ಅಪೇಕ್ಷಿಸುತ್ತೇನೆ-ನಮ್ಮ ಸರ್ಕಾರದ ಚುನಾಯಿತ ಪ್ರತಿ ನಿಧಿಗಳಿಗೆ, ಮಂತ್ರಿಮಹೋದಯರನೇಕರಿಗೆ ಸರಿಯಾದ ಕನ್ನಡವೇ ಬರೋಲ್ಲಾ. ಒಬ್ಬ ಕಾಡುಮಂತ್ರಿಗಳು(ಅರಣ್ಯ ಖಾತಾ ಮಂತ್ರಿ) ರಾಜ್ಯೋತ್ಸವ ಅನ್ನುವ ಬದಲು "ರಾಜ್ಯೋಶವ" ಎಂದೇ ಹೇಳುವುದು. ಇನ್ನು ಸರ್ಕಾರದ ಅಧಿಕಾರಿಗಳಿಗಂತೂ, ಮೇಲಿಂದ ಹಿಡಿದು ಮಧ್ಯದವರವರೆಗೂ ಕನ್ನಡ ಗಂಧವೇ ಇಲ್ಲ ಹಾಗೂ ಅದರ ಮೇಲೆ ಅಭಿಮಾನಕ್ಕಿಂತಾ ದ್ವೇಷವೇ ಹೆಚ್ಚು. ಹೀಗೆ ಪಟ್ಟಿ ಮಾಡುತ್ತಾ ಹೋದರೆ ನಾವಿರುವುದು ಎಲ್ಲಿ ಎಂಬ ಪ್ರಶ್ನೆ ಕಾಡುತ್ತೆ. ನಮ್ಮ ಗ್ರಾಮಾಂತರದತ್ತ ಹೋದಾಗ ಮಾತ್ರಾವೇ ನಾವು ಶುದ್ಧ ಗ್ರಾಮೀಣ ಕನ್ನಡವನ್ನು ಕೇಳಲು ಸಾಧ್ಯ.

ನನ್ನ ಮಗ ಅಮೆರಿಕಾದ ವರ್ಜೀನಿಯಾದ ವಿಡಾಟ್-(ವರ್ಜೀನಿಯಾ ಡಿಪಾರ್ಟ್ಮೆಂಟ್ ಆಫ್ ಟ್ರಾನ್ಸ್‌ಪ್ರೊಟೇಷನ್)ನಲ್ಲಿ ಉನ್ನತ ಹುದ್ದೆಯಲ್ಲಿದ್ದಾನೆ. ನಾನು ನಮ್ಮ ಪವಿತ್ರ ಮಣ್ಣಿನ ಸಾಂಸ್ಕೃತಿಕ ಹರಿಕಾರನಾಗಿ, ಅಲ್ಲಿಗೆ ೧೯೮೩ ರಿಂದ ಈವರೆಗೆ ೯ ಬಾರಿ ಬಂದಿದ್ದೇನೆ. ಅಲ್ಲಿಯ ಎಲ್ಲಾ ಸ್ಥಳಗಳಲ್ಲೂ, ಎಲ್ಲೆಲ್ಲಿ ನಮ್ಮ ಕನ್ನಡಿಗರಿದ್ದಾರೆ ಅಲ್ಲೆಲ್ಲಾ ನಮ್ಮ ನಾಟಕಗಳನ್ನೂ ಮತ್ತು ನನ್ನ ಉಪನ್ಯಾಸಗಳನ್ನೂ ನೀಡಿ, ಅಲ್ಲಿಯ ಎಲ್ಲ ಅನ್ನದಾತರ ಆಶೀರ್ವಾದಕ್ಕೂ ಭಾಗಿಯಾಗಿದ್ದೇನೆ. ಅಲ್ಲಿ ನನಗೆ ಅತ್ಯಮೂಲ್ಯವಾದ ಅನೇಕಾನೇಕ ಪ್ರಾಣಮಿತ್ರರಿದ್ದಾರೆ. ಅಲ್ಲಿಯವರ ಭಾಷಾಭಿಮಾನಕ್ಕೆ ಮಾರುಹೋಗಿದ್ದೇನೆ. ಎಲ್ಲೋ ಒಂದೆರಡು ಕಡೆಯ ಈ ಕಾಕ್‌ಟೈಲ್ ಪಾರ್ಟಿಗಳಲ್ಲಿ, ಕೆಲವು ಭಾರತೀಯರು ಮಾತ್ರಾ ನಮ್ಮ ಪವಿತ್ರ ಭಾರತವನ್ನು ಹೀಗಳೆಯುವದನ್ನೂ ಸಹ ಕೇಳಿ, ಅವರ ಅಜ್ಞಾನ-ಕೃತಘ್ನತೆ ಕಂಡು ಸಿಟ್ಟು ಬಂದು ನುಂಗಿಯೂ ಇದ್ದೇನೆ. ನಾವು ಯಾವ ದೇಶದವರೇ ಆಗಿರಲಿ, ಎಲ್ಲಿ ನಮ್ಮ ಜೀವನ ನಿರ್ಭಾಧಿತವಾಗಿ ನಡೆಯುತ್ತಾ, ನಮಗೆ ಅನ್ನ, ಜ್ಞಾನಗಳನ್ನು ನೀಡುತ್ತಾ ಇರುತ್ತೋ,ಅದನ್ನು ನಮ್ಮ ತಾಯಿನಾಡಿನಷ್ಟೇ ಪ್ರೀತಿ ಗೌರವಗಳಿಂದ ಪೂಜಿಸಬೇಕಲ್ಲವೇ? ನಮ್ಮಮ್ಮನಂತೆಯೇ ಅನ್ಯರಮ್ಮನವರನ್ನೂ ಸಹ ಗೌರವಿಸುವುದಲ್ಲವೇ ಮಾನವ ಸಂಸ್ಕೃತಿಯ ಸಂಕೇತ. ಅದನ್ನೇ ಪಂಪ ಮಹಾಕವಿಯಿಂದ ಹಿಡಿದು ಕುವೆಂಪು ವರೆಗೂ ಸಾರಿಸಾರಿ ಹೇಳಿರುವುದು. "ಮಾನವಕುಲಂ ಒಂದೆ ಒಲಂ" ಮತ್ತು "ಮನುಜಮತ ವಿಶ್ವಪಥ" ಎಂದು.

ಎನೇ ಆದರೂ ಒಟ್ಟಿನಲ್ಲಿ ಕನ್ನಡಿಗರಾದ ನಮ್ಮ ಸಹನೆ, ಔದಾರ್ಯ, ಹೊಂದಾಣಿಕೆ ಮತ್ತು ವಿಶ್ವಾಸ ನಂಬಿಕೆಗಳು ಸ್ವಲ್ಪ ಹೆಚ್ಚೆನ್ನುವಷ್ಟನ್ನೇ ಬೆಳೆಸಿಕೊಂಡಿದ್ದವೇ ಅಲ್ಲವೆ ಜೋಶಿಯವರೆ? "ಆಲಸ್ಯಂ ಅಮೃತಂ ವಿಷಂ" ಎಂದವರೇ "ಅತಿಯಾದರೆ ಅನ್ನವೂ ಸಹ ವಿಷವಾದೀತು" ಎಂದಿದ್ದಾರೆ. ನಾನಂತೂ ಆಶಾವಾದಿ. ಆದರ್ಶವಾದಿಯೂ ಆಗಬೇಕೆಂದೇ ಆಸೆ. ನಮ್ಮ ಬಳ್ಳಾರಿ ಬೀಚಿ ಉವಾಚದಂತೆ-"ಜಗದಲ್ಲಿ ಎರಡೇ ಜಾತಿ. ಒಂದು ಸತ್ತಂತೆ ಬದುಕಿರುವವರು, ಇನ್ನೊಂದು ಸತ್ತ ಮೇಲೂ ಬದುಕಿರುವವರು". ನನಗೆ ಎರಡನೆಯ ಜಾತಿಯವನಾಗುವ ಆಸೆ.

ಶುಭಮಸ್ತು. ವಂದನೆಗಳು.,

ಎಂದೂ ನಿಮ್ಮವ,.

ಡಾ| ಮಾಸ್ಟರ್ ಹಿರಣ್ಣಯ್ಯ.

=====================================

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4 (4 votes)
To prevent automated spam submissions leave this field empty.

ಪ್ರತಿಕ್ರಿಯೆಗಳು

ಮಾಸ್ಟರ್ ಹಿರಣ್ನಯ್ಯನವರ ಅಭಿಮಾನಿಯಾದ ನನಗೆ ಅವರ ಪತ್ರವೊಂದನ್ನು ಓದುವ ಅವಕಾಶ ಮಾಡಿಕೊಟ್ಟದ್ದಕ್ಕೆ ಧನ್ಯವಾದಗಳು.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಮಾಸ್ಟರ್ ಹಿರಣ್ಣಯ್ಯನವರ ಪ್ರತಿಕ್ರಿಯೆ ಹಂಚಿಕೊಂಡಿದ್ದಾಗಿ ಧನ್ಯವಾದಗಳು ,

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಮಸ್ಕಾರ ಜೋಶಿ ಸಾರ್
ನಿಮ್ಮ ಅಂಕಣ ತಪ್ಪದೇ ಓದುವ ಅಭಿಮಾನಿ ನಾನು. ಮಾ| ಹಿರಣ್ಣಯ್ಯನವರ ಪತ್ರ ನಮಗೂ ಓದುವ ಅವಕಾಶ ಮಾಡಿಕೊಟ್ಟಿದ್ದಕ್ಕೆ, ಧನ್ಯವಾದಗಳು ಸಾರ್.

ಶ್ಯಾಮಲ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

:)

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

>>> ನೆಪಕ್ಕೆ ಕನ್ನಡವನ್ನು ಶಾಸ್ತ್ರಿಯ ಭಾಷೆಯೆಂದು ಕೇಂದ್ರದಿಂದ ಹೇಳಿಸಿದರೂ, ಇನ್ನೂ ಅದು ಅಧಿಕೃತವಾಗಿಲ್ಲ. ಕಾರಣ ತಮಿಳು ನಾಡಿನ ನ್ಯಾಯವಾದಿಯೊಬ್ಬರು(ಶ್ರೀಗಾಂಧಿ ಎಂಬುವವರು) ಚನ್ನೈನ ಉಚ್ಚನ್ಯಾಯಾಲಯದಲ್ಲಿ, ಕನ್ನಡದ ಶಾಸ್ತ್ರೀಯ ಭಾಷಾ ಸ್ಥಾನಕ್ಕೆ ಕೊಟ್ಟಿರುವ ಮನ್ನಣೆಯನ್ನು ರದ್ದು ಪಡಿಸುವಂತೆ ಕೋರಿದ್ದಾರೆ. ಅದಕ್ಕೆ ಆಕ್ಷೇಪಣಾ ಅರ್ಜಿಯನ್ನು ಹಾಕುವಲ್ಲಿಯೂ ಸಹ ನಮ್ಮ ಘನ ಸರ್ಕಾರದವರು ಅನಗತ್ಯ ಆಲಸ್ಯವನ್ನೂ, ವಿಳಂಬ ನೀತಿಯನ್ನೂ ಅನುಸರಿಸುತ್ತಾ ಇರುವುದು, ಸರ್ಕಾರದ ಅಜ್ಞಾನಕ್ಕೆ ಹಾಗೂ ನಮ್ಮ ದೌರ್ಭಾಗ್ಯಕ್ಕೆ ಹಿಡಿದ ಕನ್ನಡಿಯಂತಿದೆ. ಇನ್ನು ಅದು ಇತ್ಯರ್ಥವಾಗುವವರೆಗೂ ನಮ್ಮ ಸ್ಥಿತಿ ಅಧೋಗತಿ. <<<

ಅ೦ದರೆ ಕನ್ನಡಕ್ಕೆ ಇನ್ನೂ ಶಾಸ್ತ್ರೀಯ ಸ್ಥಾನ ಅಧಿಕೃತವಾಗಿ ಸಿಕ್ಕಿಲ್ಲವೇ?

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಹಿಂದಿನ ಕೇಂದ್ರ ಸರಕಾರ ಮೇ ತಿಂಗಳಲ್ಲಿ ಚುನಾವಣಾ ಫಲಿತಾಂಶ ಘೋಷಣೆಯಾಗುವ ನಾಲ್ಕೈದು ದಿನಗಳ ಮೊದಲು ಕನ್ನಡ ಮತ್ತು ತೆಲುಗು ಭಾಷೆಗಳಿಗೆ ಶಾಸ್ತ್ರೀಯ ಸ್ಥಾನಮಾನ ನೀಡುವ ನಿರ್ಧಾರಕ್ಕೆ ಅಧಿಕೃತವಾಗಿ ಸಮ್ಮತಿ ನೀಡಿದೆ ಎನ್ನುವುದನ್ನು ಓದಿದ ನೆನಪು.
ಈ ಕೊಂಡಿ ನನಗಿಲ್ಲಿ ತೆರೆಯುತ್ತಿಲ್ಲವಾದರೂ ನೀವುಗಳು ಪ್ರಯತ್ನಿಸಿ ನೋಡಿ ಹೇಳಿ.

http://www.expressbuzz.com/edition/story.aspx?title=Cabinet%20formally%2...

http://www.google.co.in/search?hl=en&q=Cabinet+formally+approves+Classic...

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಈ ಅರ್ಜಿ ರದ್ದಾಗಿತ್ತೆಂದು ಪತ್ರಿಕೆಯಲ್ಲಿ ಓದಿದ್ದೆ...

--ಶ್ರೀ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

[quote]ನಾವು ಯಾವ ದೇಶದವರೇ ಆಗಿರಲಿ, ಎಲ್ಲಿ ನಮ್ಮ ಜೀವನ ನಿರ್ಭಾಧಿತವಾಗಿ ನಡೆಯುತ್ತಾ, ನಮಗೆ ಅನ್ನ, ಜ್ಞಾನಗಳನ್ನು ನೀಡುತ್ತಾ ಇರುತ್ತೋ,ಅದನ್ನು ನಮ್ಮ ತಾಯಿನಾಡಿನಷ್ಟೇ ಪ್ರೀತಿ ಗೌರವಗಳಿಂದ ಪೂಜಿಸಬೇಕಲ್ಲವೇ? ನಮ್ಮಮ್ಮನಂತೆಯೇ ಅನ್ಯರಮ್ಮನವರನ್ನೂ ಸಹ ಗೌರವಿಸುವುದಲ್ಲವೇ ಮಾನವ ಸಂಸ್ಕೃತಿಯ ಸಂಕೇತ.[/quote]

ಈ ಸಾಲುಗಳು ಬಹಳ ಹಿಡಿಸಿದವು.
ಹಿರಣ್ಣಯ್ಯನವರ ಬರಹ ನಮ್ಮೊಂದಿಗೆ ಹಂಚಿಕೊಂಡಿದ್ದಕ್ಕೆ ಧನ್ಯವಾದಗಳು, ಜೋಶಿಯವರೆ :)

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಮಾಸ್ಟರ್ ಹಿರಣ್ಣಯ್ಯನವರು ಎಂದಿನಂತೆ ತಮ್ಮ ಸಮಾಜದ ಕಳಕಳಿಯನ್ನ ಒಬ್ಬ ಸಾಮಾನ್ಯರಲ್ಲಿ ಸಾಮಾನ್ಯರಾಗಿ ಅಭಿವ್ಯಕ್ತಿಪಡಿಸಿದ್ದಾರೆ.
ಅವರ ಅರ್ಥಪೂರ್ಣ ವಿಚಾರ ಧಾರೆಗಳಿಗೆ, ಅಭಿಪ್ರಾಯ ಮಂಡನೆಗೆ ಇದೂ ಒಂದು ಹಿಡಿದ ಕನ್ನಡಿಯಷ್ಟೆ..
ಇಂತಹ ಅಮೂಲ್ಯ ವೈಚಾರಿಕತೆಯನ್ನು ಈ ವೇದಿಕೆಯಲ್ಲಿ ನಮ್ಮೊಂದಿಗೆ ಹಂಚಿಕೊಂಡದ್ದಕ್ಕೆ ಜೋಶಿಯವರಿಗೆ ನಾನು ಚಿರ ಋಣಿ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಆಸು ಹೆಗ್ಡೆ, ಪ್ರಭಾಕರ್, ಶ್ಯಾಮಲಾ ಜನಾರ್ಧನನ್, ಶಾಮಲ, ರಾಕೇಶ್, ಮಂಜುನಾಥ್, ಶೈಲಾಸ್ವಾಮಿ (ವೈಯಕ್ತಿಕ ಪತ್ರ), ವೆಂಕಟೇಶ್ (ವೈಯಕ್ತಿಕ ಪತ್ರ) - ಧನ್ಯವಾದಗಳು.

ಮಾಸ್ಟರ್ ಹಿರಣ್ಣಯ್ಯನವರ ಪತ್ರವನ್ನು ನಾನು ಇಲ್ಲಿ ಪ್ರಕಟಿಸಿದ್ದು, ಅವರ ಕನ್ನಡಕಳಕಳಿ, ವಿಚಾರ‍ಧಾರೆ ಹೆಚ್ಚುಹೆಚ್ಚು ಜನರಿಗೆ ತಲುಪಲಿ, ಇಷ್ಟು ಆತ್ಮೀಯವಾಗಿ ಅವರು ಬರೆದಿರುವ ಪತ್ರವನ್ನು ನಾನು ಮಾತ್ರ ಅಲ್ಲ, ಇನ್ನೂ ನಾಲ್ಕಾರು ಜನ ಓದುವಂತಾಗಲಿ ಎಂದು. :-)

ನಾನು ಹಿರಣ್ಣಯ್ಯ ಅವರಿಗೆ ಮೊನ್ನೆಯೇ ಉತ್ತರವನ್ನೂ ಬರೆದಿದ್ದೇನೆ (ಬಂದ ಇಮೇಲ್‌ಗಳಿಗೆಲ್ಲ ತಪ್ಪದೆ ಉತ್ತರಿಸುವ ನನ್ನ ಪರಿಪಾಠದಂತೆ), ಹೀಗೆ-

===================================
ವಾಷಿಂಗ್ಟನ್ ಡಿಸಿ
ಜೂನ್ 1, 2009

ಗೌರವಾನ್ವಿತ ಡಾ. ಮಾಸ್ಟರ್ ಹಿರಣ್ಣಯ್ಯ ಅವರಿಗೆ ನಮಸ್ಕಾರ!

ಸ್ವಾಮೀ, ನನ್ನ ಲೇಖನದಲ್ಲಿದ್ದ ಮಾತುಗಳಿಂದ ಅಭಿಷಿಕ್ತನಾದಿರಿ ಎಂದು ಬರೆದಿರಲ್ಲ, ನಿಮ್ಮಂಥ ಹಿರಿಯರು, ಪ್ರಕಾಂಡ ಪ್ರತಿಭೆಯ ಗಣಿ (ಗಣಿ ಧಣಿ ಅಲ್ಲ) ನನ್ನಂಥ ಕಿರಿಯನೊಬ್ಬನ ಲೇಖನ ಓದಿ, ಮನಸಾರೆ ಮೆಚ್ಚಿ ಹೃದಯದಾಳದಿಂದ ಪತ್ರ ಬರೆದು (ಅದೂ ಬರಹ ಲಿಪಿ ಉಪಯೋಗಿಸಿ!) ಆಶೀರ್ವದಿಸಿ ನನ್ನ ಇಮೇಲ್ ಬಾಕ್ಸನ್ನು ಅಲಂಕರಿಸಿದ್ದೀರಾದರೆ ನನಗೆಷ್ಟು ಧನ್ಯತೆಯ ಸಂತೃಪ್ತಿ ಆಗಿರಬೇಡ!?

ಸರ್, ನಿಮಗೆ ಶಿರಸಾಷ್ಟಾಂಗ ಪ್ರಣಾಮಗಳು, ಗೌರವದಿಂದ ಮತ್ತು ಅಷ್ಟೇ ಪ್ರೀತಿಯಿಂದ!

ಅಲ್ಲಾ ಸ್ವಾಮೀ, ನಿಮ್ಮ ಪರಿಚಯವನ್ನೂ ಬರೆಯುವುದುಂಟಾ? ಮಾಸ್ಟರ್ ಹಿರಣ್ಣಯ್ಯ ಎಂಬ ಹೆಸರು ಗೊತ್ತಿರದ ಕನ್ನಡಿಗರೂ ಇರ್ತಾರಾ? ಇರಲಿ, ನಿಮ್ಮನ್ನು ಪ್ರಶ್ನಿಸಿ ಉದ್ಧಟತನ ತೋರಿಸುವುದು ಬೇಡ. ನಿಮ್ಮ ಪತ್ರ ಕಂಡು ನನಗೆ ಅದ್ಭುತ ಖುಶಿ ಆಯ್ತು ಎಂದು ಹೇಳುತ್ತೇನೆ, ಆದರೆ ಹಾಗೆ ಹೇಳುವಾಗಲೇ ನಿಮ್ಮ ಹೃದಯಸ್ಪರ್ಶಿ ಕನ್ನಡಪ್ರೀತಿಯನ್ನೂ ಗಮನಿಸಿದೆ, ಕಟುಸತ್ಯಗಳನ್ನೂ ನೀವು ಹಾಸ್ಯಶೈಲಿಯಲ್ಲಿ (ಕಾಡುಮಂತ್ರಿಯ ರಾಜ್ಯೋಶವ ಕ್ಕೆ ಅದೆಷ್ಟು ನಕ್ಕೆನೋ ನನಗೇ ಗೊತ್ತಿಲ್ಲ) ಬರೆದಿದ್ದನ್ನು ಅರ್ಥಮಾಡಿಕೊಂಡೆ ಎಂದೂ ತಿಳಿಸುತ್ತೇನೆ.

ನಾನು ಇರುವುದು ವರ್ಜೀನಿಯಾ ರಾಜ್ಯದಲ್ಲೇ. ನಿಮ್ಮ ಮಗನ ಸಂಪರ್ಕ ವಿವರ ತಿಳಿಸಿದರೆ ಖಂಡಿತವಾಗಿಯೂ ಅವರನ್ನು ಸಂಪರ್ಕಿಸುತ್ತೇನೆ. ಅಂದಹಾಗೆ ನಿಮಗೆ ಇಲ್ಲಿ ನಮ್ಮ ಕಾವೇರಿ ಕನ್ನಡ ಸಂಘದಲ್ಲಿ ಬಹಳಷ್ಟು ಜನ ಪ್ರಾಣಸಖರಿದ್ದಾರೆ ಎಂದು ನನಗೆ ಗೊತ್ತು. ಅವರಿಗೆಲ್ಲ ನಿಮ್ಮ ಪತ್ರವನ್ನು ಹೆಮ್ಮೆಯಿಂದ ತೋರಿಸಿದೆ. ಕಾವೇರಿಗರೆಲ್ಲರೂ ನಿಮಗೆ ನಮಸ್ಕಾರ ತಿಳಿಸಲು, ನಿಮ್ಮ ಕುಶಲ ವಿಚಾರಿಸಲು ಹೇಳಿದ್ದಾರೆ. ನೀವು ನೆಕ್ಸ್ಟ್ ಟೈಮ್ ಇಲ್ಲಿಗೆ ಯಾವಾಗ ಬರುತ್ತೀರಿ?

ಆಯ್ತು, ಇಲ್ಲಿಗೆ ನನ್ನ ಪತ್ರ ಮುಗಿಸುತ್ತೇನೆ. ನಿಮ್ಮ ಪತ್ರ-ಪ್ರತಿಕ್ರಿಯೆ ಬಂದಿದೆ ಎನ್ನುವ ಸಡಗರದಲ್ಲಿ ಇವತ್ತು ನನಗೆ ಹೆಚ್ಚು ಬರೆಯಲಿಕ್ಕಾಗುತ್ತಿಲ್ಲ, ಇನ್ನಾವಾಗಾದರೂ ಬರೆಯುತ್ತೇನೆ.

ಅಲ್ಲಿಯವರೆಗೆ ನಿಮಗೆ ಮತ್ತೊಮ್ಮೆ ಮನಃಪೂರ್ವಕ ಕೃತಜ್ಞತೆ ಮತ್ತು ಗೌರವಗಳೊಂದಿಗೆ,

ಶ್ರೀವತ್ಸ ಜೋಶಿ
===================================

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಾನು ಮಾಸ್ಟರ್ ಹಿರಣ್ಣಯ್ಯ ನವರ ಅಭಿಮಾನಿ, ಅವರ ಪತ್ರವೊಂದನ್ನು ಓದುವ ಅವಕಾಶ ಮಾಡಿಕೊಟ್ಟದ್ದಕ್ಕೆ ಧನ್ಯವಾದಗಳು

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಜೋಶಿಯವರೆ,
ಮಾ.ಹಿರಣ್ಣಯ್ಯನವರು ತಮ್ಮ ಲೇಖನ ಮೆಚ್ಚಿ ಪ್ರತಿಕ್ರಿಯೆ ಬರೆದುದನ್ನು ಓದಿ ಸಂತೋಷವಾಯಿತು. ತಮ್ಮ ಪರಾಗಸ್ಪರ್ಶ ಅಂಕಣ ಬರಹಗಳು ಒಂದಕ್ಕಿಂತ ಒಂದು ಚೆನ್ನಾಗಿದೆ. ಈ ಲೇಖನಕ್ಕೂ ಹಿಂದಿನ ಸಂಡೆ(೨೪-೫-೨೦೦೯) ಬರೆದ ಲೇಖನ ಸೂಪರ್.

ಲೇಖನದ ಶೀರ್ಷಿಕೆಯೇ ಚಂದ-"ಮೂಗುತಿ ಮುತ್ತು ಚಂದ...ವಾಲೆ ಜುಮ್ಕಿ ಗತ್ತು ಚಂದ"
ಇದನ್ನು ಈಗಿನ ಹೆಣ್ಣು ಮಕ್ಕಳು ಚೆನ್ನಾಗಿ ತಿಳಿದಿದ್ದಾರೆ. ಬೊಟ್ಟು ಇಲ್ಲ,ಜಡೆ ಇಲ್ಲ ,ಹೂ..,ಬಳೆ..ಇಲ್ಲ. ಆದರೆ ವಿಧವಿಧದ ವಾಲೆಜುಮುಕಿ ಹಾಕುವುದನ್ನು ಮರೆಯುವುದಿಲ್ಲ.
ವಾಲೆ ಜುಮುಕಿಯೊಂದಿಗೆ ಕತ್ತನ್ನು ಹೊರಳಿಸಿ ಹೊರಳಿಸಿ ಮಾತನಾಡಿ ಹುಡುಗರ ಹೃದಯಕ್ಕೆ ಲಗ್ಗೆ ಹಾಕುವರು!

ಜೋಶಿಯವರೆ, ಸ್ಯಾಕ್ಸಫೋನ್‌ನಿಂದ ಸುರುಮಾಡಿ, ಪತಾಕೆಗಳು, ಹೂಮಾಲೆ, ತೋರಣ, ದಸರಾ ಅಂಬಾರಿ, 'ಗಂಟೆಕಡ್ಡಿ'ಗಳು, ಯಕ್ಷಗಾನ ಭೂತದ ಕೋಲ..ಗಳ ಬಗ್ಗೆ ನೀವು ಹೇಳುತ್ತಾ ಹೋದ ಹಾಗೆ 'ಹೌದಲ್ವಾ..ಹೌದಲ್ವಾ..' ಎಂದು ತಲೆ ತೂಗಾಡುತ್ತಾ ಇತ್ತು. :) ಈ ತೂಗಾಡುವ ಆಭರಣ/ವಸ್ತುಗಳ ಮಹತ್ವ ನಿಮ್ಮ ಲೇಖನ ಓದಿದ ಮೇಲೇ ಅರಿವಾಯಿತು.
-ಗಣೇಶ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.