ಮರಗಳು ಧರೆಗೆ ಉರುಳುವುದೋ? ಹಸಿರು ಕಂಗಳಿಸುವುದೋ??

1

ಕಳೆದ ಕೆಲವು ದಿನಗಳಿಂದ, ಮೇಖ್ರಿ ವೃತ್ತದಿಂದ ಟಿ.ವಿ.ಗೋಪುರಕ್ಕೆ ಮುಟ್ಟುವ ದಾರಿಯನ್ನು ಅಗಲಿಸುವ ಕೆಲಸ ಶುರು ಮಾಡಿದ್ದಾರೆ ಎಂದು ಕಾಣುತ್ತದೆ. ಇಲ್ಲಿಯವರೆಗೂ, ರಸ್ತೆಯ ಪಕ್ಕದ ಜಾಗದಲ್ಲಿ ಪಾದಚಾರಿಗಳಿಗೆಂದು ಸುಮಾರು ಅಗಲವಾದ ಜಾಗವನ್ನೇ ಬಿಟ್ಟಿದ್ದರು. ಅಷ್ಟು ಅಗಲದ ಜಾಗದಲ್ಲಿ ನಡೆಯುತ್ತಿದ್ದವರು ತೀರ ಕಡಿಮೆ ಎನ್ನಬಹುದು. ಹಾಗಾಗಿ, ಈ ಜಾಗವನ್ನು ಉಪಯೋಗಿಸಿಕೊಳ್ಳುತ್ತಿರುವುದು, ಇಲ್ಲಿ ರಸ್ತೆ ಅಗಲಿಸುವ ಕೆಲಸವನ್ನು ಕೈಗೊಂಡಿರುವುದು ಒಳ್ಳೆಯದೇ ಎನಿಸುತ್ತದೆ. ಈ ರಸ್ತೆ, ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಹೋಗುವ ಬಳ್ಳಾರಿ ರಸ್ತೆಯ ಕೂಡು ರಸ್ತೆ ಆಗಿರುವುದರಿಂದ, ವಾಹನ ದಟ್ಟಣೆ ಇತ್ತೀಚಿನ ದಿನಗಳಲ್ಲಿ ತುಸು ಹೆಚ್ಚೇ ಆಗಿದೆ ಅನ್ನಬಹುದು.

ಹೆಚ್ಚು ಕಡಿಮೆ, ದಿನ-ನಿತ್ಯ ಇಲ್ಲಿ ಟ್ರಾಫಿಕ್ ಜ್ಯಾಮ್ ಆಗುವುದರಿಂದ, ಈ ರಸ್ತೆಯನ್ನು ಅಗಲಿಸುವ ಕೆಲಸದಿಂದ, ಜನರಿಗೆ ಅನುಕೂಲವಾಗಲಿದೆ. ಬೆಂಗಳೂರಿನ ಹಳೆಯ ಪ್ರದೇಶಗಳಲ್ಲಿ ಸಾಮಾನ್ಯವಾಗಿ ಕಾಣುವಂತೆ, ಈ ರಸ್ತೆಯಲ್ಲೂ ಹಲವಾರು ದೊಡ್ಡ ಮರಗಳಿವೆ. ಈ ರಸ್ತೆಯಲ್ಲಿ, ದೊಡ್ಡ ಮರಗಳ ಪಕ್ಕ ಸಾಕಷ್ಟು ಜಾಗವಿರುವುದರಿಂದ, ದೊಡ್ಡ ಮರಗಳನ್ನು ಕಡಿಯದೇ ಹಾಗೇ ಉಳಿಸಿ, ಅದನ್ನು ಸಣ್ಣ ವಾಹನಗಳಿಗೆ,ದ್ವಿಚಕ್ರದವರಿಗೆ ಮಾತ್ರ ಉಪಯೋಗಿಸುವಂತೆ ಮಾಡಬಹುದು. ಈ ಜಾಗದಲ್ಲಿ ಒಂದು ಕಾರು ಸುಲಭವಾಗಿ ಹೋಗುವಷ್ಟು ಜಾಗವಿದೆ. ದೊಡ್ಡದಾದ ವಾಹನಗಳ ಬಳಕೆಗೆ, ಈಗ ಇರುವ ರಸ್ತೆಯನ್ನು ಹಾಗೆ ಬಳಸಬಹುದು ಎಂಬುದು ನನ್ನ ಅನಿಸಿಕೆ.

ಸಮೂಹ ಮಾಧ್ಯಮದವರು, ಎಂದಿನಂತೆ ಈ ಕೆಲಸಕ್ಕೂ, ಸಕಾರಾತ್ಮಕವಾದ ಸಲಹೆಗಳನ್ನು ಈವರೆಗೆ ನೀಡಿರುವುದಿಲ್ಲ. ಟಿ.ವಿ.ಯಲ್ಲಾಗಲೀ, ಪತ್ರಿಕೆಗಳಲ್ಲಾಗಲಿ, ಇದರ ಬಗ್ಗೆ ಸುದ್ದಿ ಪ್ರಕಟಗೊಂಡದ್ದು ನನಗೆ ತಿಳಿದು ಬಂದಿಲ್ಲ. ಇತ್ತೀಚಿಗೆ ಡೆಕ್ಕನ್ ಹೆರಾಳ್ಡ್ ನಲ್ಲಿ, ಬೆಂಗಳೂರ ವಾತಾವರಣ ಎಷ್ಟು ಬದಲಾವಣೆ ಆಗಿದೆ, ಬೆಂಗಳೂರಲ್ಲಿ ಮರಗಳನ್ನು ಎಷ್ಟು ಹೆಚ್ಚು ಕಡಿದಿದ್ದಾರೆ ಎಂಬ ಒಂದು ಸಣ್ಣ ಲೇಖನ ಬಂದಿತ್ತು. ಉದ್ಯಾನ ನಗರಿ ಹೋಗಿ, ಧೂಳಿನ ನಗರಿಯಾಗಿದೆ ಎಂಬುದು ಆ ಬರಹದ ಸಾರಾಂಶ. ಈ ರೀತಿಯ ಬರಹಗಳ ಬದಲಾಗಿ, ಹೇಗೆ ನಮ್ಮಲ್ಲಿರುವ ಹಸಿರನ್ನು ಉಳಿಸಬಹುದು, ಹಾಗೂ ಇಂತಹ ರಸ್ತೆ ಅಗಲಿಸುವ, ಮೇಲ್ಸೇತುವೆಗಳ, ಅಂಡರ್ ಪಾಸ್ ಗಳ ಕಾರ್ಯಕ್ರಮಗಳನ್ನು ಹಮ್ಮಿಕೊಂಡಾಗ, ಸರ್ಕಾರ ಯಾವ ಯಾವ ರೀತಿಯಲ್ಲಿ ಉತ್ತಮ ಕೆಲಸವನ್ನು ಮಾಡಬಹುದು ಎಂಬುದಾಗಿ ಬರೆದರೆ, ನಮ್ಮ ಊರನ್ನು-ನಾಡನ್ನು ಇನ್ನಷ್ಟು ಉತ್ತಮಗೊಳಿಸಬಹುದು. ನಾನು ಇಲ್ಲಿ ಕೊಡುತ್ತಿರುವುದು ಡೆಕ್ಕನ್ ಹೆರಾಳ್ಡ್ ಬರಹ ಉದಾಹರಣೆಯಷ್ಟೆ. ಹೆಚ್ಚು ಕಡಿಮೆ ಎಲ್ಲ ಮಾಧ್ಯಮದವರೂ ಊರು ಕೊಳ್ಳೆ ಹೊಡೆದ ಮೇಲೆ ದಿಡ್ಡಿ ಬಾಗಿಲು ಹಾಕುವ ಕೆಲಸವನ್ನಷ್ಟೇ ಮಾಡುತ್ತಿದ್ದಾರೆ ಎಂಬುದು ನನ್ನ ಅಭಿಪ್ರಾಯ. ಮರಗಳು ಕಡಿದ ಮೇಲೆ, ನಾಡು ಬರಡಾದ ಮೇಲೆ, ಎಷ್ಟು ಬೊಬ್ಬೆ ಹೊಡೆದರೆ ಏನು ಪ್ರಯೋಜನ?

ಈ ಮೇಖ್ರಿ ವೃತ್ತದ ಬಳಿಯ ರಸ್ತೆಯನ್ನು ಅಗಲಿಸುವಾಗಾದರೂ, ನಮ್ಮ ಪಾಲಿಕೆ, ಮಾಧ್ಯಮ, ಜನ ಪರಿಸರದ ಬಗ್ಗೆ ಗಮನ ಕೊಡುವರೇನೋ ಎಂಬ ದೂರದ ಆಸೆ ನನಗೆ. ಮರಗಳು ಧರೆಗೆ ಉರುಳುವುದೋ, ಹಸಿರು ಕಂಗಳಿಸುವುದೋ, ಇದನ್ನು ಸಮಯವೇ ಹೇಳಬೇಕು...

--ಶ್ರೀ

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 1 (1 vote)
To prevent automated spam submissions leave this field empty.