ಬರವಣಿಗೆಯ ಕನ್ನಡದ ದಿಕ್ಕು

0

ಕನ್ನಡದಲ್ಲಿ ಸಂಸ್ಕೃತದ ಅತಿಬಳಕೆಯಿಂದ , ಸಂಸ್ಕೃತದ ಕಾಗುಣಿತ(ಸ್ಪೆಲ್ಲಿಂಗ್ಸ್ ) ನಿಂದಾಗಿ ಹಳ್ಳಿಗರಿಗೆ ಮತ್ತು ಸಂಸ್ಕೃತದ ಪರಿಚಯ ಇಲ್ಲದವರಿಗೆ ( ಅಂದರೆ ’ಕೆಳ’ ಎಂದು ತಿಳಿದಿರುವ ಜಾತಿಯ ಜನಕ್ಕೆ) ತೊಂದರೆ ಆಗಿದೆಯಂತೆ . ಅದಕ್ಕಾಗಿ ಮಹಾಪ್ರಾಣ , ಷ ಇತ್ಯಾದಿ ಅಕ್ಷರಗಳನ್ನು ತೆಗೆದು ಹಾಕಿ ಎಂಬ ವಾದ ಒಂದೆಡೆ ಎದ್ದಿದೆ .

( ಅಂದ ಹಾಗೆ ಚಾಯನೀಸ್ ಭಾಶೆಯಲ್ಲಿ ಸಾವಿರಾರು ಅಕ್ಶರಗಳಂತೆ ; ಅವರಿಗೆ ಏನು ತೊಂದರೆ / ಎಷ್ಟು ತೊಂದರೆ ಆಗಿದೆಯೋ ಏನೋ ; ಅವರು ಬಳಸ್ತಾ ಇಲ್ವೀ ; ನೂರಾರು ವರುಷ ಅದು ಬಾಳಿ ಬದುಕಿಲ್ವೇ? -- ನನಗೆ ಸರಿಯಾಗಿ ಗೊತ್ತಿಲ್ಲ)

ಸರಿ ಈ ವಾದಾನೂ ಒಪ್ಕೊಳ್ಳೋಣ ; ಶಂಕರ ಭಟ್ಟರ ವಾದಾನೂ ಒಂತರ ಸರೀನೇ ; ಭಾಶೆಯ ಕಠಿಣತನವನ್ನು ಕಡಿಮೆ ಮಾಡಿ , ಪರಸ್ಪರ ಓದಿ , ಬರೆಯಲು , ಹೆಚ್ಚಿನ ತಿಳಿವು ಪಡೆದು , ಬದುಕನ್ನು ಶ್ರೀಮಂತಗೊಳಿಸಲು ಸರಳಗೊಳಿಸೋಣ ; ಅದಕ್ಕೆ ನನ್ನ ಒಪ್ಪಿಗೆಯೂ ಇದೆ ; ಆದರೆ ಈಗಾಗಲೇ ಬಳಕೆಯಲ್ಲಿರೋ ಎಲ್ಲಾ ಸಂಸ್ಕೃತ ಶಬ್ದಗಳನ್ನ ಬದಲಿಸಲೇಬೇಕೆಂಬ ಹಟ ಏಕೆ ? ಎಲ್ರಿಗೂ ತಿಳಿಯೋ ಕನ್ನಡ ಶಬ್ದ ಇದ್ರೆ ಸರಿ , ಅದನ್ನು ಸಂಸ್ಕ್ರುತ ಶಬ್ದಕ್ಕೆ ಬದಲಾಗಿ ಬಳಸೋಣ ; ಸಂಸ್ಕೃತದ ಮೇಲಿನ ದ್ವೇಶದಿಂದ ಎಲ್ಲರಿಗೂ ತಿಳಿಯೋ ಶಬ್ದಗಳನ್ನು , ಅವು ಸಂಸ್ಕ್ರುತ ಎಂಬ ಒಂದೇ ಕಾರಣಕ್ಕೆ , ಅದಕ್ಕೆ ಬದಲಿಯಾಗಿ ಯಾರಿಗೂ ಗೊತ್ತಿಲ್ಲದ ಶಬ್ದಗಳನ್ನು ಹೆಕ್ಕಿ ತೆಗೆಯೋದು ಏಕೆ ? ದಿನ , ವರ್ಷ ಎಲ್ರಿಗೂ ಗೊತ್ತು ; ಬೇಕೆಂದರೆ ವರುಶ , ವರಶ ಎಂದೆಲ್ಲಾ ಉಚ್ಚಾರಕ್ಕೆ ತಕ್ಕಂತೆ ಬರೆಯಲಿ ; ಆದರೆ ಅದಕ್ಕೆ ಏಡು , ನಾಳು , ಪದುಳ ಗಳೆಂಬ ಶಬ್ದ ಚಲಾವಣೆಗೆ ತಂದರೆ ಇದನ್ನೆಲ್ಲಾ ಕಲಿಯಬೆಕಾಗುತ್ತದೆ ; ನೆನಪಿನಲ್ಲೂ ಇಟ್ಟುಕೊಳ್ಳಬೇಕಾಗುತ್ತದೆ . ಇದು ಎಲ್ಲರಿಗೂ ಸುಲಭವೇ ? ಸಾಧ್ಯವೇ ? ಲಾಭವದರೂ ಏನು ?

ಮತ್ತೆ ಆಶ್ಚರ್ಯ ಎಂದರೆ ಈ ತರಹ ಯೋಚಿಸುವ ಜನಗಳಲ್ಲಿ ಕೆಲವರು ಹಳೆಯ ರ , ಳ ಗಳನ್ನು ಬಳಕೆಗೆ ತರ್ತಿದ್ದಾರೆ ; ಇದರಿಂದ ಜನಕ್ಕೆ ಕಷ್ಟ ಆಗುಲ್ವೇ? ಎಷ್ಟು ಜನ ಈ ಹಳೆಯ ರ - ಳ ಬಲ್ಲರು ? ಷ-ಶ ನಡುವೆ ಏನೂ ವ್ಯತ್ಯಾಸ ಇಲ್ಲ ; ಷ ಕೈ ಬಿಡಬೇಕು ಎನ್ನೋರಿಗೆ ಹೊಸ ಹಳೆಯ ರ-ಳ ಗಳ ನಡುವೆ ಏಕೆ ಭೇದ ಕಲ್ಪಿಸುತ್ತಾರೋ ? ಇದರಿಂದ ಭಾಷೆಯ ಕ್ಲಿಷ್ಟತೆ ಹೆಚ್ಚುಲ್ಲವೋ ?

ಈಗಾಗಲೇ ಕನ್ನಡ ಓದು , ಬರಹ , ಬಳಕೆ ಕಡಿಮೆ ಆಗುತ್ತಿರುವಾಗ ಇಂಗ್ಲೀಷು ಹಿಂದಿ ಜನಜೀವನದಲ್ಲಿ ಹಾಸುಹೊಕ್ಕಾಗುತ್ತಿರುವಾಗ , ನಾನು ಮೇಲೆ ಹೇಳಿದ ಬೆಳವಣಿಗೆಗಳಿಂದ ಜನ ಇನ್ನಷ್ಟು ಕನ್ನಡದಿಂದ ದೂರ ಆಗುಲ್ವೇ ?

ಇನ್ನೂ ಒಂದು ವಿಷಯ ನಾನು ಗಮನಿಸಿದ್ದೀನಿ ; ಈ ತರಹ ಯೋಚಿಸುವ ಜನಗಳಲ್ಲಿ ಕೆಲವರು ಬರಹಕ್ಕೆ ಬೇಕಾದ ಶಿಸ್ತನ್ನು ರೂಢಿಸಿಕೊಂಡಿಲ್ಲ ; ತಾವು ಬರೆದ ಬರಹವನ್ನು ಬೆಳಕಿಗೆ ತರುವ ಮೊದಲು ಇನ್ನೊಂದು ಸಲ ಓದಿ , ತಮ್ಮ ಮನಕ್ಕೆ ಒಪ್ಪುವಂತೆ ಇದೆಯೇ , ತಾವು ಬರೆದದ್ದು ತಮ್ಮ ಅನಿಸಿಕೆಯನ್ನ ಓದುವವರಿಗೆ ತಲುಪಿಸುತ್ತದೆಯೋ ಇಲ್ಲವೋ ಎಂದೂ ನೋಡುವದಿಲ್ಲ ;
ಇಂಥವರಿಂದ ಕನ್ನಡಕ್ಕೆ ಹಾನಿಯೇ ಹೆಚ್ಚಾದೀತು .

ಸೆಂಟು ಎಂದು ಬರೆಯುವವರು ಬರೆಯಲಿ ; ಅದನ್ನಾದರೂ ಸರಿಯಾಗಿ ಬರೆಯಬೇಕಲ್ವೇ ಮತ್ತೇನೋ ಬರೆದರೆ ಅಪಾರ್ಥ ಆಗಲ್ವೆ ?

ಈ ಗತಿಯನ್ನು ಇಂಗ್ಲೀಶಿನಲ್ಲೂ ಗಮನಿಸಿದ್ದಾರೆ ;
ಕಾಗುಣಿತದಿಂದ ,ವ್ಯಾಕರಣದಿಂದ , ನಯ-ನಾಜೂಕಿನಿಂದ ಭಾಶೆಯನ್ನು ಬಿಡುಗಡೆಗೊಳಿಸ್ತಿದಾರೆ !

ಇಂಗ್ಲೀಷು ಲಿಪಿಯಲ್ಲಿ ಕನ್ನಡ ಬರೆವವರು ಓದುಗರ ಕಷ್ಟವನ್ನು ಗಮನದಲ್ಲಿಟ್ಟುಕೊಳ್ಳಬೇಕು , ಬರಹ, ಯೂನಿಕೋಡ್ ಗಳಂತಹ ಸೌಲಭ್ಯಗಳಿರುವಾಗಲೂ ಇಂಗ್ಲೀಷ್ ಲಿಪಿ ಬಳಸಿದರೆ ? ೨೬ ಅಕ್ಶರ ಬಳಸಿ ಅವರೇನೋ ಬರೆದುಬಿಡ್ತಾರೆ , ಓದುವವರು ಹೇಗೆ ಓದಬೇಕು ? ನಿಶ್ಚಿತ ಕೋಡಿಂಗ್ ಇದೆಯೇ ? ’ಹೇಳಿ’ ಅನ್ನೋದನ್ನ heli ಅಂತ ಬರೆಯಬೇಕೋ hELi ಅಂತ ಬರೆಯಬೇಕೋ ? ಓದುವವರು ಈ ಕೋಡಿಂಗ್ ಅನ್ನು ಗಮನದಲ್ಲಿಟ್ಟುಕೊಂಡು ಮೆದುಳಿಗೆ ಕೆಲ್ಸ ಕೊಟ್ಟು ಓದಿಕೊಂಡು ಅರ್ಥ ಮಾಡ್ಕೋಬೇಕು .

ನಾನೇನೂ ಸಂಸ್ಕ್ರುತದ ಅಭಿಮಾನಿ ಏನಲ್ಲ ; ನನ್ನ ಬರಹದಲ್ಲಿ ಸಂಸ್ಕೃತ ಶಬ್ದ ಕಂಡು ನಾನು ಸಂಸ್ಕೃತ ಅಭಿಮಾನಿ ಎಂದೂ , ಬ್ರಾಹ್ಮಣನೆಂದೂ ತಿಳಿದರೆ ತಪ್ಪು ನನ್ನದಲ್ಲ ; ( ದಾಸಸಾಹಿತ್ಯ ಮೆಚ್ಚುವವರು, ಪ್ರತಿಕ್ರಿಯಿಸುವವರು ಬ್ರಾಹ್ಮಣರಂತೆ ! ವಚನಸಾಹಿತ್ಯ ಮೆಚ್ಚುವವರು, ಪ್ರತಿಕ್ರಿಯಿಸುವವರು ಲಿಂಗಾಯತ/ವೀರಶೈವರಂತೆ !! ಹೊಸ ಆರಯ್ಯು :) )

’ಸೆಟ್ಟಿಯೆಂಬೆನೆ ಸಿರಿಯಾಳನಾ,
ಡೋಹರನೆಂಬೆನೆ ಕಕ್ಕಯ್ಯನಾ,
ನಾನು ಹಾರುವನೆಂದೆಡೆ
ನಗುವನಯ್ಯಾ ಕೂಡಲಸಂಗಯ್ಯ’

ಅಷ್ಟೇ ;

( ಅಂದ ಹಾಗೆ ಏನೇನೋ ಕಾರಣಗಳಿಂದಾಗಿ ಸಂಪದದಲ್ಲಿ ನಾನು ಸಕ್ರಿಯನಾಗಿ ಪಾಲ್ಗೊಳ್ಳಲು ಆಗುತ್ತಿಲ್ಲ ; ಇದು ಒಂಥರಾ ಹೇಳಿಕೊಳ್ಳದ ಪ್ರೇಮ ; ಒನ್-ವೇ / ಏಕಮುಖ / ಒಮ್ಮುಖ ( ಯಾರಿಗೆ ಯಾವ್ದು ಬೇಕೋ ಆಯ್ದುಕೊಳ್ಳಿ !! ) ಪ್ರೀತಿ .. ಹಾಗಾಗಿ ಈಗ ಸಂಪದದಲ್ಲಿ ನಡೆಯುತ್ತಿರುವ ಚರ್ಚೆಗಳಲ್ಲಿ , ಅಥವಾ ಈ ಬರಹಕ್ಕೆ ಬರಬಹುದಾದ ಟಿಪ್ಪಣಿಗಳಿಗೆ ಮರುಟಿಪ್ಪಣಿ ಹಾಕೋದಿಕ್ಕೆ ನನಗೆ ಆಗೋದಿಲ್ಲ )

ಎಲ್ಲೋ ಒಂದೆರಡು ಕಾಗುಣಿತ ದೋಷಗಳಿರಬೇಕು. ಮನ್ನಿಸಿ .

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ಪ್ರತಿಕ್ರಿಯೆಗಳು

ವಿಷ್ಯ ಕರೆಕ್ಟು. ಅಚ್ಚ ಕನ್ನಡ ಅಪ್ಪಟ ಕನ್ನಡ ಅಂತ ಸುಮ್ಸುಮ್ಕೆ ಬಡ್ಕಳೋರ ಮಕಕ್ಕೆ ಚೆನಾಗಿ ರಾಚಿದೀರಾ.
ಅವು ಯಾವಾಗ ಅರ್ಥ ಮಾಡ್ಕತವೋ ಏನೋ.! :( ಅಚ್ಚ ಕನ್ನಡ ಬೆಳೆಸೋಕೆ ಹೋಗಿ ಇದ್ದ ಕನ್ನಡವನ್ನೂ ಅಳಿಸಿಹಾಕುವಂತಾಗಬಾರದಷ್ಟೆ.

ಬ್ಲಾಗು ಆಗಿಬಿಟ್ಟರೆ ಚರ್ಚೆ ಮಾಡ್ಬಾರ್ದು ಅಂತ ಏನೂ ಇಲ್ಲ ಅಲ್ವಾ? ಎಸ್ಕೇಪು :)

*****************
......ನಾದವಂತೆ ವೇದವಂತೆ
ಒಂದೂ ತಿಳಿಯೇ ನಾ.........
*****************

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಈ ತೆಱನಾದ ವಾದ ಮಾಡುವವರು ತಮ್ಮ ಇತಿಮಿತಿಯನ್ನು ತಿಳಿದಿರಬೇಕು. ಎಲ್ಲವನ್ನು ಸಮಗ್ರವಾಗಿ ಅಱಿತು ವಾದ ಮಾಡಿದರೆ ಅದಕ್ಕೊಂದು ತೂಕವುಂಟು.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಕನ್ನಡಕಂದರೆ,
ಹೆಗಡೆಯವರು ಹೀಗೆ ಬರೆಯುವುದು ಹೊಸತಲ್ಲ(ಹಿಂದೆ ಸಕ್ಕದದಿಂದ ಕನ್ನಡ ನಾಡಿನ 'ಏಕೀಕರಣ' ಆಗಬೇಕು ಅಂತ ಇವರೇ ಹೇಳಿದ್ದು :) ). ಇದನ್ ಬಿಟ್ ಬೇರೆ ಬರೆಯಕ್ಕೆ ಅವರಿಗಾಗಲ್ಲ. ಅವರಿಗೆ ಸರಿಯಾಗ ಸಲಹೆಯನ್ನಿತ್ತಿದ್ದೀರ. ನಿಮಗೆ ನನ್ನಿ :)

--
ಕನ್ನಡಕ್ಕೆ ಬೇಕು ಕನ್ನಡದೇ ಸೊಬಗು,ಸೊಗಡು

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಮಿಶ್ರ ಕೋಟಿಗಳೇ, ಸರಿಯಾಗಿ ಹೇಳಿದ್ದೀರಿ.

ಉತ್ತರನ ಪೌರುಷ ಒಲೆ ಮುಂದೆ ಎಂಬಂತೆ ಇಂಗ್ಲೀಷಿನ ಹೊಡೆತಕ್ಕೆ ಎಲ್ಲ ಭಾಷೆಗಳೂ ಸಿಕ್ಕಿ ನಲುಗುತ್ತಿರುವಾಗ ಅದನ್ನು ಎದುರಿಸಲಾಗದೆ ಸಮಸ್ಯೆಯೇ ಇರದ ವಿಷಯಗಳಮೇಲೆ ವಾದ ಮಾಡಿ ಕಾಲ ಕಳೆಯುವ ಒಂದು ವರ್ಗವಿದೆ. ಅವರದು ಇಂತಹ ಬ್ಲಾಗುದಾಣಗಳಲ್ಲೇ ಹುಟ್ಟಿ ಇಲ್ಲೇ ಸಾಯುವ ’ಚಳುವಳಿ’ ಗಳಷ್ಟೆ. ಹರಟೆ ಕಟ್ಟೆ ಮೀರದ ಇಂತಹ ವಿಷಯಗಳಬಗ್ಗೆ ಇನ್ನು ಚಿಂತಿಸುವುದೂ ಕೂಡ ವ್ಯರ್ಥ. ಇನ್ನು ಇಂತಹ ವಿಷಯಗಳಿಗೆ ವೃಥಾ ಬರೆದು ತಮ್ಮ ಅಮೂಲ್ಯ ಸಮಯವನ್ನು ವ್ಯರ್ಥ ಮಾಡಿಕೊಳ್ಳಬೇಡಿ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಇವೇ ಅಭಿಪ್ರಾಯಗಳನ್ನು ನಾನು ಹೊಂದಿದ್ದೇನೆ. ದಯವಿಟ್ಟು ವೀಕ್ಷಿಸಿ
http://sampada.net/forum/7316

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಈ ಬರಹ ತುಂಬ ಎಳಸುತನದಿಂದ ಕೂಡಿದೆ. ನಾನು ಹೀಗೆ ಹೇಳುವುದಕ್ಕೆ ಓಸುಗರ:-

"...ಅಂದ ಹಾಗೆ ಚಾಯನೀಸ್ ಭಾಶೆಯಲ್ಲಿ ಸಾವಿರಾರು ಅಕ್ಶರಗಳಂತೆ ; ಅವರಿಗೆ ಏನು ತೊಂದರೆ / ಎಷ್ಟು ತೊಂದರೆ ಆಗಿದೆಯೋ ಏನೋ ; ಅವರು ಬಳಸ್ತಾ ಇಲ್ವೀ ..."

ಇದೊಳ್ಳೆ ಪಕ್ಕದ ಮನೆಯವನು ಹೆಂಡ ಕುಡಿತನೆ, ನಾನು ಅವನಿಗಿಂತ ಏನ್ ಕಮ್ಮಿ ನಾನು ಹೆಂಡ ಕುಡಿತೀನಿ ಅನ್ನುವ ಹಾಗಿದೆ.

ಸಾಮಿ ಮಿಶ್ರಿಕೋಟಿಗಳೆ,
ಈ ರೀತಿ ನುಡಿಗಳಲ್ಲಿ (ಕೆಲವು ಹೆಚ್ಚು ಅಕ್ಕರಗಳು, ಕೆಲವು ಕಮ್ಮಿ ಅಕ್ಕರಗಳು) ಇರುವುದು ಆ ನುಡಿಗಳ ಗುಣ,ನಿಬ್ಬರಗಳು. ಅವರು ಮಾಡ್ತರೆ ಅಂತ ನಾವು ಹಂಗೆ ಮಾಡಕ್ಕಾಗಲ್ಲ. ನಮಗೆ(ಕನ್ನಡಕ್ಕೆ) ನಮ್ಮತನ ಇದೆ, ಬೇಕು.

"...ಸಂಸ್ಕೃತದ ಕಾಗುಣಿತ(ಸ್ಪೆಲ್ಲಿಂಗ್ಸ್ ) ನಿಂದಾಗಿ ಹಳ್ಳಿಗರಿಗೆ ಮತ್ತು ಸಂಸ್ಕೃತದ ಪರಿಚಯ ಇಲ್ಲದವರಿಗೆ ( ಅಂದರೆ ’ಕೆಳ’ ಎಂದು ತಿಳಿದಿರುವ ಜಾತಿಯ ಜನಕ್ಕೆ) ತೊಂದರೆ ಆಗಿದೆಯಂತೆ . ಅದಕ್ಕಾಗಿ ಮಹಾಪ್ರಾಣ , ಷ ಇತ್ಯಾದಿ ಅಕ್ಷರಗಳನ್ನು ತೆಗೆದು ಹಾಕಿ ಎಂಬ ವಾದ ಒಂದೆಡೆ ಎದ್ದಿದೆ .."

ಕೆಳ ಅಂತ ಯಾರೂ ತಿಳಿದಿಲ್ಲ. ಅವರನ್ನು ಕೆಳ ಅವರು ಆಡುವ ನುಡಿ ಕೀಳು ಅಂತ ಮೇಲಿನವರು ಹೇಳಿ ಹೇಳಿ ಜಡ್ಡುಗಟ್ಟಿಸಿದ್ದಾರೆ. ಬರೀ ಕಾಗುಣಿತ ಅಲ್ಲ ಸಕ್ಕದದ ಹಲವು ಪದಗ ಉಲಿಯಲು/ಉಚ್ಚರಿಸಿಲು ಬಲು ಎಡರು. ಅಂತ ಎಡರುಪದಗಳನ್ನು ನಾವು ಕನ್ನಡಿಗರ ಮೇಲೆ ಹೇರಬೇಡಿ ಅಂತ ಹೇಳ್ತಾ ಇದ್ದೀವಿ.

"...ಅದಕ್ಕೆ ಏಡು , ನಾಳು , ಪದುಳ ಗಳೆಂಬ ಶಬ್ದ ಚಲಾವಣೆಗೆ ತಂದರೆ ಇದನ್ನೆಲ್ಲಾ ಕಲಿಯಬೆಕಾಗುತ್ತದೆ ..."
ನೀವು ಈಗಾಗಲ್ಲೆ ಯಾದೃಚ್ಚಿಕ, ಬೃಹನ್ಮಂಡಲ ಮತ್ತು ವಾಙ್ಮಯ ಇವುಗಳನ್ನ ಕಲೀತಿಲ್ಲವ? ಏಡು, ನಾಳು ,ಪದುಳ ಕಲಿಯಲು ಏನ್ ಎಡರು ನಿಮಗೆ :)

"..ಎಷ್ಟು ಜನ ಈ ಹಳೆಯ ರ - ಳ ಬಲ್ಲರು ? ಷ-ಶ ನಡುವೆ ಏನೂ ವ್ಯತ್ಯಾಸ ಇಲ್ಲ ; ಷ ಕೈ ಬಿಡಬೇಕು ಎನ್ನೋರಿಗೆ ಹೊಸ ಹಳೆಯ ರ-ಳ ಗಳ ನಡುವೆ ಏಕೆ ಭೇದ ಕಲ್ಪಿಸುತ್ತಾರೋ ? ಇದರಿಂದ ಭಾಷೆಯ ಕ್ಲಿಷ್ಟತೆ ಹೆಚ್ಚುಲ್ಲವೋ..."
ಇಲ್ಲೆ ನೀವು ಎಡವಿರುವುದು. ಶಂಕರಬಟ್ಟರು ಹೇಳಿರುವುದು ಱ,ೞ ಮತ್ತು ಷ ಇವುಗಳನ್ನು ಹೊಸಗನ್ನಡದ ಬರಹದಲ್ಲಿ ಇಟ್ಟುಕೊಳ್ಳಬೇಕಾಗಿಲ್ಲ. ಅತ್ವ ಬರಹಗಾರರ ಇಶ್ಟಕ್ಕೆ ಬಿಡಿ ಅಂತ ಹೇಳಿರುವುದು. ವಿಶಯವನ್ನು 'ವಿಷಯ' ಅಂತಲೇ ಬರಯಬೇಕೆಂಬ ಕಟ್ಟಳೆಯನ್ನು ತೆಗೆದು ಹಾಕಿ ಅಂತ ಅವರು ಹೇಳಿರುವುದು. 'ವಿಶಯ' ಅಂತ ಬರೆದರೆ ಆತನನ್ನು ಕೀಳಾಗಿ ನೋಡಿ ನಗೆಪಾಟಲು ಮಾಡುವುದು ಸರಿಯಲ್ಲ.

ತಾವು ದಯವಿಟ್ಟು ಶಂಕರಬಟ್ಟರ ಹೊತ್ತಿಗೆಗಳನ್ನು ಸರಿಯಾಗಿ ಓದಿ ಅರ್ತ ಮಾಡಿಕೊಂಡು ಆಮೇಲೆ ಇಂತಹ ಬರಹಗಳನ್ನು ಬರೆಯಬೇಕಾಗಿ ಕೋರಿಕೆ. :)

--
ಕನ್ನಡಕ್ಕೆ ಬೇಕು ಕನ್ನಡದೇ ಸೊಬಗು,ಸೊಗಡು

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.