ಚಾರ್ ಧಾಮ್ ಪ್ರವಾಸ- ಕೇದಾರನಾಥ್ - ೧

0

http://www.sampada.net/blog/shamala/08/06/2009/21226


ಬೆಳಿಗ್ಗೆ ಬೇಗ ಎದ್ದು ಗುಪ್ತ ಕಾಶಿಗೆ ಹೊರಟೆವು. ಇದು ಕೇದಾರದ ಮಾರ್ಗ. ದಾರಿಯಲ್ಲಿ ಏನಾದರೂ ತಿನ್ನಬಹುದೆಂದುಕೊಂಡು ಹೊರಟುಬಿಟ್ಟೆವು. ಆದರೆ ಈ ಮಾರ್ಗ ಎಷ್ಟು ನಿರ್ಜನವಾಗಿದೆಯೆಂದರೆ, ದಾರಿಯಲ್ಲಿ ಏನೆಂದರೆ ಏನೂ ಸಿಗುವುದಿಲ್ಲ. ಎಲ್ಲೋ ಒಂದೊಂದು ಅತಿ ಚಿಕ್ಕ ಚಿಕ್ಕ ಹಳ್ಳಿಗಳಲ್ಲಿ ಚಹದ ಅಂಗಡಿಗಳಿವೆ ಅಷ್ಟೆ. ಇಲ್ಲಿಯ ಸ್ಥಳೀಯ ತಯಾರಕರ ಬಿಸ್ಕತ್ತುಗಳು, ಪೆಪ್ಪರಮೆಂಟುಗಳು, ಚಹಾ ಬಿಟ್ಟರೆ ಬೇರೇನೂ ಇಲ್ಲ. ನಾವೂ ಏನನ್ನೂ ತೆಗೆದುಕೊಂಡು ಹೋಗಿರಲಿಲ್ಲ. ಕೊನೆಗೆ ವಿಚಾರಿಸುತ್ತಾ, ವಿಚಾರಿಸುತ್ತಾ ಬಂದು, ಒಂದು ಚಿಕ್ಕ ಚಹದಂಗಡಿಯಲ್ಲಿ, ನನ್ನವರು ಬ್ರೆಡ್ ಇದೆಯೆಂದು, ಆ ಅಂಗಡಿಯವನಿಗೆ ಸಲಹೆ, ಸೂಚನೆಗಳನ್ನು ಕೊಟ್ಟು, ಬ್ರೆಡ್ಡನ್ನು ಚೆನ್ನಾಗಿ ಗರಿಗರಿಯಾಗಿ ಬಿಸಿ ಮಾಡಿಸಿ, ಚಹದೊಂದಿಗೆ (ಅದಕ್ಕೂ, ನೀರೆಷ್ಟು ಇಡಬೇಕು, ಏಲಕ್ಕಿ ಹಾಕು, ಕುದಿಸು, ಕೊನೆಗೆ ಹಾಲು ಸೇರಿಸು, ಸಕ್ಕರೆ ಕಮ್ಮಿ ಹಾಕು ಎಂದೆಲ್ಲಾ ಹೇಳಿಕೊಟ್ಟು) ತಿಂದು ಮುಂದೆ ಹೊರಟೆವು. ಈ ದಾರಿಯಲ್ಲಿ ಹೋಗುವವರು, ಖಂಡಿತಾ ಬಿಸ್ಕತ್ತು, ಬನ್ನು, ಹಣ್ಣುಗಳನ್ನು ತೆಗೆದುಕೊಂಡು ಹೋಗುವುದೇ ಉತ್ತಮ. ಮಾರ್ಗ ತುಂಬಾ ನೀರಸವಾಗಿತ್ತು. ಪ್ರಕೃತಿ ಬಿಟ್ಟರೆ ಬೇರೇನೂ ಇರಲಿಲ್ಲ. ನಾವು ದಾರಿಯಲ್ಲಿ ಮಾನ್ ಪುರ್, ಅಲೇತ್, ಚೌರಂಗೀಖಾಲ್, ಲಂಬಗಾಂವ, ಓಕ್ರಿಯಾಲ್, ಧೌಂನ್ತ್ರಿ, ಊರುಗಳನ್ನು ದಾಟಿದೆವು. ಬೇಸರವಾಗಿದ್ದ ಮನಸ್ಸಿಗೆ ಹಠಾತ್ತಾಗಿ ಉತ್ಸಾಹ ತರುವಂತೆ, ನಮಗೆ ಭಡಿಯಾಲ ಕೆರೆ ಕಂಡಿತ್ತು. ಸುತ್ತಲೂ ಬೆಟ್ಟಗಳ ರಾಶಿ ಮಧ್ಯದಲ್ಲಿ ತಿಳಿಯಾದ ಹಸಿರು, ನೀಲಿ ನೀರಿನ ಈ ಕೆರೆಗೆ ಸರಿಯಾದ ಒಂದು ಆಕಾರ ಇಲ್ಲ. ಬೆಟ್ಟಗಳ ಸಾಲು ಎಲ್ಲೆಲ್ಲಿ ಜಾಗ ಬಿಟ್ಟಿದೆಯೋ ಅಲ್ಲೆಲ್ಲಾ ಹರಿಯುತ್ತೆ ನೀರು. ಈ ಕೇದಾರದ ದಾರಿ ಬೆಟ್ಟವನ್ನು ಚಕ್ರಾಕಾರವಾಗಿ ಸುತ್ತುತ್ತಾ ಮೇಲೇರುವ ರಸ್ತೆ. ಕಡಿದಾದ ತಿರುವುಗಳು ಇವೆ. ಆದ್ದರಿಂದ ಈ ಕೆರೆ ನಮಗೆ ಈ ಬೆಟ್ಟಗಳ ಸಾಲು ಬಿಟ್ಟು, ನಾವು ಚಿಕ್ಕ ಸೇತುವೆಯ ಮುಖಾಂತರ ಇನ್ನೊಂದು ಬೆಟ್ಟಕ್ಕೆ ತಲುಪುವವರೆಗೂ ಸಿಕ್ಕಿತ್ತು. ಬೇರೆ ಬೇರೆ ಕೋನಗಳಲ್ಲಿ ಬೇರೆ ಬೇರೆಯದೇ ಆಕಾರಗಳಲ್ಲಿ, ಶಾಂತವಾಗಿ, ಸುಂದರವಾಗಿ ಕಾಣುತ್ತಲೇ ಇರತ್ತೆ. ಕಣ್ಣಿಗೆ, ಮನಸ್ಸಿಗೆ ಹಿತ ಕೊಡುತ್ತಲೇ ಇರತ್ತೆ.
ನಾವು ಗುಪ್ತಕಾಶಿಯ ಸ್ವಲ್ಪ ಮುಂಚೆ ಮಂದಾಕಿನಿ ನದಿಯ ತಟದಲ್ಲಿರುವ ಅಗಸ್ತ್ಯ ಮುನಿ ಎಂಬ ಜಾಗ ತಲುಪಿದೆವು. ಇದು ಈ ವಲಯದಲ್ಲಿ ಒಂದು ಮುಖ್ಯವಾದ ಜಾಗ. ಇಲ್ಲಿ ಅಂಚೆ ಕಛೇರಿ, ಆಸ್ಪತ್ರೆ ಎಲ್ಲಾ ಇದೆ. ಅಲ್ಲಿಂದ ಪವನ ಹಂಸ ಎನ್ನುವ ಸರಕಾರದ ಹೆಲಿಕಾಫ್ಟರ್ ಕೇದಾರಕ್ಕೆ ಹೋಗತ್ತೆ. ನಾವು ಅದರ ನಿಲ್ದಾಣ ಎಲ್ಲಾ ನೋಡಿ ಬಂದು, ವಿಚಾರಿಸಿದಾಗ, ಚುನಾವಣೆಯ ಕಾರಣ ಅದಿನ್ನೂ ಶುರುವಾಗಿಲ್ಲ, ೧೮ನೇ ತಾರೀಖಿನಿಂದ ಶುರುವಾಗುತ್ತದೆಂದು ತಿಳಿಯಿತು. ನಾವು ಈ ಜಾಗದಲ್ಲಿ ಇಳಿದು, ಅಗಸ್ತ್ಯರು  ತಪಸ್ಸು ಮಾಡಿದ ಜಾಗ, ಸುಮಾರು ೨೦೦ ವರ್ಷಗಳಷ್ಟು ಹಳೆಯ ದೇವಸ್ಥಾನದಲ್ಲಿ ಕಂಚಿನ ಪ್ರತಿಮೆಗೆ ಬೆಳ್ಳಿಯ ಕಿರೀಟವಿದ್ದ ಅಗಸ್ತೇಶ್ವರ ಮಹಾದೇವ, ಎಲ್ಲಾ ನೋಡಿದೆವು. ಮುಂದೆ ಸಾಗಿ ೪,೩೨೬ ಅಡಿ ಎತ್ತರದಲ್ಲಿರುವ ಗುಪ್ತ ಕಾಶಿ ತಲುಪಿ, ಬಸ್ ನಿಲ್ದಾಣದಲ್ಲೇ ಇದ್ದ ವಿಶ್ವನಾಥ ಹೋಟೆಲ್ ತಲುಪಿದೆವು. ಮುಖ ತೊಳೆದು, ನಾನೂ, ನನ್ನತ್ತಿಗೆ, ನಮ್ಮ ಸ್ನೇಹಿತರು ಊಟ ಮಾಡಲು ಚೌವಾಣ್ ಭೋಜನಾಲಯಕ್ಕೆ ಹೋದೆವು. ನನ್ನವರಿಗೆ ಆಗಲೇ, ಮೈ ಕೈ ನೋವು, ಜ್ವರ ಬಂದಿತ್ತು. ಅವರು ಮಾತ್ರೆ ನುಂಗಿ ಮಲಗಿ ಬಿಟ್ಟರು. ಇಲ್ಲಿಯೂ ನಾವು ರೊಟ್ಟಿ (ಪುಲಕಾ ತುಂಬಾ ಮೆತ್ತಗೆ ಬಿಸಿ ಬಿಸಿಯಾಗಿ), ಬದನೆಕಾಯಿ ಭರ್ತ ಹಾಗೂ ಬೇಂಡಿ ಭಾಜಿ ಮತ್ತು ಮೊಸರು ತಿಂದು ಬಂದೆವು. ಗುಪ್ತಕಾಶಿ ಕೇದಾರಕ್ಕೆ ಮುನ್ನ ಒಂದು ಮುಖ್ಯವಾದ ತಂಗುದಾಣ. ಇಲ್ಲಿಯೂ ಬ್ಯಾಂಕ್, ಆಸ್ಪತ್ರೆ, ಪೋಲೀಸ್ ಠಾಣೆ, ಅಂಚೆ ಕಛೇರಿಯ ಸೌಲಭ್ಯವುಳ್ಳ ಜಾಗ. ಗುಪ್ತಕಾಶಿ ಎಂದರೆ ಗುಪ್ತವಾಗಿ ಅಥವಾ ಗೌಪ್ಯವಾಗಿರುವ ಎಂಬರ್ಥದಲ್ಲಿದೆ. ಇದನ್ನು ನಮ್ಮ ಕಾಶಿ (ವಾರಣಾಸಿ)ಗೆ ಸರಿ ಸಮಾನವಾದದ್ದು ಎಂದು ಕೂಡ ಹೇಳುತ್ತಾರೆ. ಇಲ್ಲಿಯೂ ಪ್ರಾಚೀನವಾದ ವಿಶ್ವನಾಥ ದೇವಸ್ಥಾನ ಮತ್ತು ಮಣಿಕರ್ಣಿಕ ಕುಂಡ ಇವೆ (ಕಾಶಿಯಲ್ಲೂ ವಿಶ್ವನಾಥ ದೇವಸ್ಥಾನ ಮತ್ತು ಮಣಿಕರ್ಣಿಕ ಘಾಟ್ ಇವೆ). ಇಲ್ಲಿಯ  ಅರ್ಧನಾರೀಶ್ವರ ದೇವಸ್ಥಾನ, ಕೇದಾರನಾಥನ ದೇವಸ್ಥಾನದಂತೇ, ೫೦೦೦ ಸಾವಿರ ವರ್ಷಗಳಷ್ಟು ಹಳೆಯದಾದದ್ದು. ಇಲ್ಲಿಯ ಪೂಜಾರಿಗಳ ಹೇಳಿಕೆ ಎಂದರೆ, ಇಲ್ಲಿ ಗಂಗಾ ಮತ್ತು ಯಮುನಾ ನದಿಗಳೆರಡೂ ಶಿವಲಿಂಗದ ಕೆಳಗಡೆಯಿಂದ ಹರಿಯುತ್ತದೆ ಮತ್ತು ಮಣಿಕರ್ಣಿಕ ಕುಂಡದಲ್ಲಿ ಸೇರುತ್ತವೆ. ಇದನ್ನು ಪುಷ್ಟೀಕರಿಸುವಂತೆ, ದೇವಸ್ಥಾನದ ಹೊರಗೆ, ಎರಡು ಜಲಧಾರೆಗಳು, ಭೂಮಿಯ ಒಳಗಡೆಯಿಂದ ಬಂದು, ಕುಂಡದಲ್ಲಿ ಬೀಳುತ್ತದೆ. ಈ ನೀರು ಕುಡಿಯಲೂ ತುಂಬಾ ಸಿಹಿಯಾಗಿಯೂ, ತಣ್ಣಗೆಯೂ ಇತ್ತು. ಇಲ್ಲಿಯ ಪ್ರಧಾನ ಅರ್ಚಕರು ಕರ್ನಾಟಕದವರೆಂದೂ, ಕಳೆದ ೩೦ ವರ್ಷಗಳಿಂದಲೂ ಇಲ್ಲೇ ಇರುವರೆಂದೂ ನಮಗೆ ನಂತರ (ಅಂತರ್ಜಾಲದ ಮುಖಾಂತರ) ತಿಳಿಯಿತು. ಇದಕ್ಕೆ ಮೊದಲು ಅವರು ಕೇದಾರೇಶ್ವರನ ದೇವಸ್ಥಾನದಲ್ಲಿ ಇದ್ದರಂತೆ. ಇಲ್ಲಿಯ ಪಂಚ ಕೇದಾರಗಳಲ್ಲಿ, ಇವರು ಒಂದೊಂದು ವರ್ಷ ಸರದಿಯಂತೆ ಪೂಜೆ ಸಲ್ಲಿಸುತ್ತಾರಂತೆ. ಇಲ್ಲಿ ಪುರಾಣದ ಕಥೆಯ ಪ್ರಕಾರ, ಮಹಾಭಾರತದಲ್ಲಿ ಯುದ್ಧ ಮುಗಿದ ನಂತರ, ಪಾಂಡವರು ದಾಯಾದಿಗಳನ್ನು ಹತ್ಯೆ ಮಾಡಿದ ಪಾಪ ಪರಿಹಾರಕ್ಕಾಗಿ, ವ್ಯಾಸ ಮಹರ್ಷಿಗಳನ್ನು ಭೇಟಿ ಮಾಡುತ್ತಾರೆ. ವ್ಯಾಸರು ಈಶ್ವರನ ಮೊರೆ ಹೋಗಲು ಆದೇಶಿಸುತ್ತಾರೆ. ಈಶ್ವರನ ಆದರ, ಕ್ಷಮೆ ಇಲ್ಲದೆ, ಮೋಕ್ಷ, ಸ್ವರ್ಗ ಪ್ರಾಪ್ತಿ ಇಲ್ಲವೆಂದು ಹೇಳುತ್ತಾರೆ. ಪಾಂಡವರು, ಶಿವನನ್ನು ಅರಸುತ್ತಾ ಬರುತ್ತಾರೆ, ಆದರೆ ತುಂಬಾ ಸೂಕ್ಷ್ಮ ಸ್ವಭಾವದ ಶಿವ ಇವರನ್ನು ಕ್ಷಮಿಸಲು ತಯಾರಾಗಿಲ್ಲದ ಕಾರಣ ಮತ್ತು ಇಲ್ಲವೆನ್ನಲೂ ಆಗದ ಕಾರಣ, ತಾನು ಅಂತರ್ಧಾನನಾಗಿ ಬಿಡುತ್ತಾನೆ. ಇಲ್ಲಿಂದ ಪಾಂಡವರು ಶಿವನನ್ನು ಹುಡುಕುತ್ತಾ, ಅವನನ್ನು ಹಿಂಬಾಲಿಸುತ್ತಾ ಬರುತ್ತಾರೆ. ಕಾಶಿಯಲ್ಲಿ ಮಾಯವಾದ ಶಿವ, ಗುಪ್ತ ಕಾಶಿಯಲ್ಲಿ ಕಾಣಿಸಿಕೊಂಡು, ವೇಷ ಮರೆಸಿಕೊಂಡು ಸ್ವಲ್ಪ ಕಾಲ ನೆಮ್ಮದಿಯಾಗಿರುತ್ತಾರೆ. ಆದರೆ ಛಲ ಬಿಡದ ಪಾಂಡವರು, ಹುಡುಕುತ್ತಾ ಬರುತ್ತಾರೆ. ಇಲ್ಲಿ ಶಿವ ಗುಪ್ತವಾಗಿ ಅಡಗಿಕೊಂಡಿದ್ದನೆಂಬ ಕಾರಣಕ್ಕೆ, ಈ ಜಾಗಕ್ಕೆ ಗುಪ್ತಕಾಶಿ ಎಂಬ ಹೆಸರು ಬಂತೆಂದು ಪ್ರತೀತಿ.
ಬೆಳಿಗ್ಗೆ ಬೇಗ ಏಳಬೇಕಾಗಿದ್ದರಿಂದ, ಮಲಗಿ ಬಿಟ್ಟೆವಾದರೂ, ಏನೋ ಆತಂಕ ನಮ್ಮನ್ನು ನಿದ್ದೆ ಮಾಡಲು ಬಿಡಲಿಲ್ಲ. ನಮಗೆ ಗುಪ್ತ ಕಾಶಿ ತಲುಪುವ ದಾರಿಯಲ್ಲಿ, ಮಳೆ ಬಂದು, ಇನೋವಾ ಮೇಲಿದ್ದ, ಪೆಟ್ಟಿಗೆಗಳಲ್ಲೆಲ್ಲಾ ನೀರು ನುಗ್ಗಿ, ಬಟ್ಟೆಗಳೆಲ್ಲಾ ಒದ್ದೆಯಾಗಿ ಬಿಟ್ಟಿತ್ತು. ಮಾರನೆ ದಿನಕ್ಕೆ ಬೇಕಾದ ಒಂದು ಜೊತೆ ಬಟ್ಟೆ ತೆಗೆದಿಟ್ಟುಕೊಂಡು ಸುಮ್ಮನೆ ಕಣ್ಮುಚ್ಚಿ ಮಲಗಿದೆವು. ೩ ಘಂಟೆಗೆಲ್ಲಾ ಎದ್ದು, ಬಿಸಿ ನೀರಿನಲ್ಲಿ (ಇಲ್ಲೆಲ್ಲಾ ಹೋಟೆಲುಗಳಲ್ಲಿ, ರಾತ್ರಿಯೇ ಹೇಳಿದ್ದು, ಬೆಳಿಗ್ಗೆ ಹೋಗಿ ಹುಡುಗರನ್ನು ಎಬ್ಬಿಸಿದರೆ, ಬಿಸಿ ನೀರು ಎಷ್ಟು ಹೊತ್ತಿಗೆ ಬೇಕಾದರೂ ಕೊಡುತ್ತಾರೆ) ಸ್ನಾನ ಮಾಡಿ, ೪.೩೦ಗೆಲ್ಲಾ ಕೇದಾರದ ಕಡೆ ಹೊರಟೆವು. ಕೇದಾರ ದಾರಿಯಲ್ಲಿ, ನಾವು, ನಳ, ನಾರಾಯಣ ಕೋಟಿ, ಭದ್ರೇಶ್ವರ ಮಹಾದೇವ, ಭ್ಯುಂಗ್ ಚಟ್ಟಿ, ಮೈಥಾನ ಮೂಲಕ ಫಟಾ ತಲುಪುತ್ತೇವೆ.
ದಾರಿ ಮತ್ತೆ ಪ್ರಕೃತಿ ಸೌಂದರ್ಯದ ಆಗರ. ಈಗ ಜೊತೆಗೆ ಅಲಕನಂದಾ ನದಿ. ಮಧ್ಯೆ ಮಧ್ಯೆ ಮಾತ್ರ ಚಿಕ್ಕ, ಚೊಕ್ಕವಾಗಿ ಆರ್ಭಟಿಸುತ್ತಾಳೆ ಅಲಕನಂದಾ ಕೂಡ. ನಾವು ಫಟಾ ತಲುಪಿದಾಗ, ಅಲ್ಲಿ ಪ್ರಭಾತ್ ಸರ್ವೀಸಸ್ ಎಂಬ ಸಂಸ್ಥೆ ಕೇದಾರಕ್ಕೆ ಹೆಲಿಕಾಪ್ಟರ್ ಸಹಾಯ ದೊರಕಿಸುತ್ತದೆ ಎಂಬ ವಿಷಯ ತಿಳಿಯಿತು. ಸರಿ ನಾವೆಲ್ಲರೂ ಆಸೆ (ದುರಾಸೆ) ಯಿಂದ ಅಲ್ಲಿ ಇಳಿದು ಕಾಯುತ್ತಾ ನಿಂತೆವು. ಕೇದಾರದ ಬೆಟ್ಟ ೧೪,೫೦೦ ಅಡಿ ಎತ್ತರ ಇದೆ ಮತ್ತು ಅದರ ಉದ್ದ ಕೂಡ ೧೪ ೧/೨ ಕಿ.ಮೀ ನಡಿಗೆಯಾಗಿದೆ. ನಾವು ಹೆಲಿಕಾಪ್ಟರ್ ಸಿಕ್ಕಿಬಿಟ್ಟರೆ, ಎಲ್ಲರೂ ಅದರಲ್ಲಿ ಮೇಲೇರಿ, ನಾನು, ನನ್ನತ್ತಿಗೆ ಮತ್ತು ನಮ್ಮ ಸ್ನೇಹಿತರು ನಡೆದು ಇಳಿಯುವುದು, ನನ್ನವರು ಮತ್ತು ನನ್ನ ಅತ್ತೆಯವರು ವಾಪಸ್ಸು ಹೆಲಿಕಾಪ್ಟರ್ ನಲ್ಲೇ ಬಂದು, ನಮಗಾಗಿ ಕಾಯುವುದೆಂದು ಕನಸು ಕಾಣುತ್ತಾ, ಕುಳಿತಿದ್ದೆವು. ಆದರೆ ಅಲ್ಲಿನ ಪರಿಸ್ಥಿರಿ ಬೇರೆಯೇ ಇತ್ತು. ನಮಗಿಂತ ಮೊದಲು ಅಲ್ಲಾಗಲೇ ೧೫ - ೨೦ ಜನ (ಒಂದೇ ಒಂದು ದೊಡ್ಡ ಸಂಸಾರ) ಕಾಯುತ್ತಿದ್ದರು. ಪ್ರಭಾತ್ ಕಛೇರಿ ತೆರೆದ ಬಳಿಕ, ಬೆಳಿಗ್ಗೆ ೬.೩೦ ಕ್ಕೆ ನಮಗೆ ತಿಳಿದು ಬಂದ ವಿಷಯವೆಂದರೆ, ಅಂತರ್ಜಾಲದ ಮುಖಾಂತರ, ೧೮ - ೧೯ನೇ ತಾರೀಖಿನವರೆಗೂ, ಈಗಾಗಲೇ ಮುಂಗಡ ಕಾಯ್ದಿರಿಸಲಾಗಿದೆಯೆಂದು. ಈ ವಿಳಾಸ ನಮಗೆ ಅಂತರ್ಜಾಲದಲ್ಲಿ ಸಿಕ್ಕಿರಲಿಲ್ಲ. ನಮ್ಮ ಸಾರಥಿ ಪೂರನ್ ಬಂದು, ನೀವಿಲ್ಲೇ ಕಾಯುತ್ತಿದ್ದರೆ, ಮುಂದೆ ಡೋಲಿ ಕೂಡ ಸಿಗುವುದಿಲ್ಲ ಎಂದು ಹೆದರಿಸಿದಾಗ, ನನ್ನವರು ಆ ಕಛೇರಿಯ ಮುಖ್ಯಸ್ಥೆಗೆ ಫೋನಾಯಿಸಿದಾಗ, ಯಾವುದೇ ಕಾರಣಕ್ಕೂ, ಒಂದೇ ಒಂದು ಸೀಟ್ ಕೂಡ ಕೊಡಲಾಗುವುದಿಲ್ಲವೆಂದು ಖಾತ್ರಿಯಾಯಿತು. ನಾವು ದಡಬಡಿಸಿ ಹೊರಟು ಕೇದಾರ ತಲುಪಿದೆವು. ಅಲ್ಲಿ ಗೌರಿ ಕುಂಡಕ್ಕೆ ಇನ್ನೂ ೧ ೧/೨ ಕಿ.ಮೀ ಮುಂಚೆಯೇ ಬೃಹತ್ತಾಗಿ ವಾಹನಗಳ ನಿಲುಗಡೆಯಾಗಿ, ಎಲ್ಲಾ ಯಾತ್ರಿಕರನ್ನೂ ಅಲ್ಲಿಯೇ ಇಳಿಸಿಬಿಡುತ್ತಿದ್ದರು. ಸರಿ ನಾವೂ ಇಳಿದು ಹೊರಟೆವು. ನಮ್ಮತ್ತೆಯವರನ್ನು ಅಲ್ಲೇ ಗಾಡಿಯಲ್ಲೇ, ಪೂರನ್ ನ ರಕ್ಷಣೆಯಲ್ಲಿ ಬಿಟ್ಟೆವು. ಸುಮಾರು ೨ ಕಿ.ಮೀ ನಡೆದ ನಂತರ, ಡೋಲಿಯ ಚೀಟಿ ತೆಗೆದುಕೊಳ್ಳುವ ಜಾಗಕ್ಕೆ ಬಂದೆವು. ಅಲ್ಲಿ ಹೋಗಿ ನೋಡಿದರೆ, ಅಲ್ಲಿ ಸರದಿ ಸಾಲು ಸುಮಾರು ೧ ಮೈಲಿಯಷ್ಟುದ್ದ ಇತ್ತು. ಆದ್ದರಿಂದ ಡೋಲಿಯ ಆಸೆಯನ್ನೂ ಬಿಟ್ಟು, ನಾವು ’ಓಂ ನಮ: ಶಿವಾಯ, ಓಂ ಸಾಯಿನಾಥಾಯ ನಮ:’ ಎಂದು ಹತ್ತಲು ಪ್ರಾರಂಭಿಸಿದೆವು. ಉತ್ಸಾಹ ಮುಗಿಲೆತ್ತರಕ್ಕಿತ್ತು. ೧ ಕಿ.ಮೀ ನಷ್ಟು ಹತ್ತಿ ಮುಗಿಸುವಷ್ಟರಲ್ಲಿ, ಅದರ ಆಳ, ಹಾಗೂ ಶ್ರಮದ ಅರಿವು ನಮಗಾಗಲೇ ಆಗಿತ್ತು. ದಾರಿಯಲ್ಲಿ ಚಹಾ ಕುಡಿದು ಮುಂದುವರೆದೆವು. ೭ ಕಿ.ಮೀ ಹತ್ತಿದರೆ ಸರಿಯಾರಿ ಅರ್ಧ ದಾರಿ ಬಂದಂತೆ ಮತ್ತು ನಾವು ರಾಮಬಾರ ಎಂಬ ಜಾಗ ತಲುಪುತ್ತೇವೆ. ಇಷ್ಟು ಹೊತ್ತಿಗಾಗಲೇ ನಮ್ಮ ಶಕ್ತಿಯ ಹಂತ ಕೆಳ ಮಟ್ಟ ಮುಟ್ಟಿಯಾಗಿತ್ತು. ಸರಿ ಅಲ್ಲಿದ್ದ ಅನ್ನಪೂರ್ಣ ಭೋಜನಾಲಯದಲ್ಲಿ ರೊಟ್ಟಿ + ಮೊಸರು ತಿಂದು ಚಹಾ ಕುಡಿದು ಮತ್ತೆ ಏರಲಾರಂಭಿಸಿದೆವು. ನಮ್ಮ ಸ್ನೇಹಿತರು ಪಾಪ ಮುಂದೆ ಮುಂದೆ ಹೋಗಿ ನಮಗಾಗಿ ಚಹಾ, ಜಲಜೀರ, ಬಿಸ್ಕತ್ತು ಎಂದೆಲ್ಲಾ ತೆಗೆದಿರಿಸಿಕೊಂಡು, ಕಾಯುತ್ತಿದ್ದರು. ನಾನು ಮತ್ತು ನನ್ನತ್ತಿಗೆ ಎಷ್ಟು ಸುಸ್ತಾದೆವೆಂದರೆ, ನಾವು ಒಂದೊಂದೇ ದೀಪದ ಕಂಭಗಳನ್ನು ಗುರಿಯಾಗಿಸಿಕೊಳ್ಳ ತೊಡಗಿದೆವು. ಒಂದು ಕಂಭದಿಂದ ಇನ್ನೊಂದರವೆಗೂ ಮಾತ್ರ ಹತ್ತೋಣ ನಡಿ ಎಂದು ಒಬ್ಬರನ್ನೊಬ್ಬರು ಹುರಿದುಂಬಿಸಿಕೊಳ್ಳುತ್ತಾ, ಮೇಲೇರತೊಡಗಿದೆವು. ಆ ಇನ್ನೊಂದು ಕಂಭ ಕಂಡ ಕ್ಷಣ, ಹೋಗಿ ಒರಗಿ ನಿಂತು ಸುಧಾರಿಸಿಕೊಳ್ಳುತ್ತಿದ್ದೆವು. ಪೂರಾ ರಸ್ತೆಯಲ್ಲಿ, ಎರಡೂ ಕಡೆಗೂ ಅಂಗಡಿಗಳ ಸಾಲಿವೆ ಮತ್ತು ಆ ಅಂಗಡಿಗಳ ಜನರು, ಯಾತ್ರಿಕರಿಗೆ ಅನುಕೂಲವಾಗಲೆಂದು, ಅಂಗಡಿಗಳ ಹೊರಗೆ ಕುರ್ಚಿಗಳು, ಬೆಂಚುಗಳನ್ನು ಹಾಕಿರುತ್ತಾರೆ. ನಾವಿಬ್ಬರು ಮಾತ್ರ, ಅಲ್ಲಿದ್ದ ಎಲ್ಲ ಕಂಭಗಳಿಗೂ ಒರಗಿ, ಎಲ್ಲಾ ಆಸನಗಳಲ್ಲೂ ಕುಳಿತು, ಕಷ್ಟ ಪಡುತ್ತಾ, ಅಮ್ಮಾ.., ಅಪ್ಪಾ... ರಾಮಾ.. ಕೃಷ್ಣಾ.. ಎನ್ನುತ್ತಾ ಅಂತೂ ಇಂತೂ ೧೦ ಕಿ.ಮೀ ನಷ್ಟು ಏರಿದಾಗ, ನಮ್ಮ ಸ್ನೇಹಿತರು ಕೆಲವು ಕಡೆ ಕಾಲುದಾರಿಗಳನ್ನು ತೋರಿಸಿ, ಹತ್ತಿಸಿ, ೧ ರಿಂದ ೧ ೧/೨ ಕಿ. ಮೀ ನಷ್ಟು ನಡಿಗೆ ಉಳಿಸಿದರು. ೧೦ ಕಿ.ಮೀ ನ ನಂತರ ಬರುವ ಕೊನೆಯ ನಾಲ್ಕು ಕಿ.ಮೀಗಳು ನಿಜವಾಗಿಯೂ ಅತ್ಯಂತ ಕಷ್ಟಕರವಾದದ್ದು. ಏಕೆಂದರೆ ಅತಿ ಎತ್ತರದ ಕಾರಣದಿಂದ ಆಮ್ಲಜನಕ ಕಮ್ಮಿಯಾಗಿ ಉಸಿರಾಟದ ತೊಂದರೆ ಪ್ರಾರಂಭವಾಗಿ ಬಿಡುತ್ತದೆ. ನಾವು ಅದಕ್ಕಾಗಿ ಚಿಕ್ಕ ಚಿಕ್ಕ ಆಮ್ಲಜನಕದ ಪೈಪ್ ಗಳನ್ನು ಇಟ್ಟುಕೊಂಡಿರಬೇಕಾಗುತ್ತದೆ. ಕೆಲವರು ಕರ್ಪೂರ ಕೈಯಲ್ಲಿ ಹಿಡಿದು ಮೂಸುತ್ತಿರುತ್ತಾರೆ. ನಾವು ದಾರಿಯುದ್ದಕ್ಕೂ ಜಲಜೀರ ಪಾನೀಯವನ್ನು ಕುಡಿಯುತ್ತಲೇ ಇರಬೇಕಾಗುತ್ತದೆ. ನಮ್ಮ ದೇಹದಲ್ಲಿನ ಉಪ್ಪಿನಂಶ ಬೆವರಿನಲ್ಲಿ ಕರಗಿ ಹರಿಯುವುದರಿಂದ, ನಾವು ಅದನ್ನು ಮತ್ತೆ ಸೇರಿಸುತ್ತಲೇ ಇರಬೇಕಾಗುತ್ತದೆ.
ನಾವು ಕೊನೆಯ ೨ ಕಿ.ಮೀನಂತೂ ಒಬ್ಬರನ್ನೊಬ್ಬರು ಎಳೆದುಕೊಂಡೇ ಹತ್ತಿದೆವು. ಮಧ್ಯಾನ್ಹ ೨ ೧/೨ ಗೆಲ್ಲಾ ಬೆಳಕು ಕಮ್ಮಿಯಾಗಿ ಹೆಲಿಕಾಪ್ಟರ್ ನಿಂತು ಹೋಗಿತ್ತು. ಜೊತೆಗೆ ಮೇಲೇರಿದಂತೆ ಮಂಜು ಕವಿದು, ಹನಿಗಳು ತೂರುತ್ತದೆ. ಛಳಿ, ಗಾಳಿ ಬೀಸುತ್ತಿರುತ್ತದೆ. ನಾವು ಉಣ್ಣೆಯ ಬಟ್ಟೆಗಳನ್ನೆಲ್ಲಾ ಹಾಕಿಕೊಂಡು, ಮಫ್ಲರ್ ಅಥವಾ ಸ್ಕಾರ್ಫ್ ಕಟ್ಟಿಕೊಂಡಿದ್ದರೂ ಕೂಡ ಸುಯ್ಯ್ ಎಂಬ ತಣ್ಣಗೆ ಗಾಳಿ ಕಿವಿಯಲ್ಲಿ ತೂರುತ್ತಿರುತ್ತದೆ. ತಲೆಯಿಂದ ಕಾಲವರೆಗೆ ಉಣ್ಣೆಯ ಬಟ್ಟೆಗಳಿಂದ ಮುಚ್ಚಿಕೊಂಡು ಮೇಲೆ ಪ್ಲಾಸ್ಟಿಕ್ ನ ಮಳೆಯ ಹೊದಿಕೆ ಹೊದ್ದಿದ್ದೆವು. (ಇಂತಹ ಉಪಯೋಗಿಸಿ ಎಸೆಯುವಂಥಹ, ಬಣ್ಣ ಬಣ್ಣದ ಪ್ಲಾಸ್ಟಿಕ್ ಹೊದಿಕೆಗಳು ೧೦ರೂಗೆ ಹರಿದ್ವಾರದಿಂದಲೇ ಕೊಳ್ಳಲು ಸಿಗುತ್ತೆ. ಯಮುನೋತ್ರಿಯ ಹವಾಮಾನ ಕೂಡ ನಂಬಲಸಾಧ್ಯವಾದದ್ದರಿಂದ, ನಮಗೆ ಅಲ್ಲಿಗೂ ಇವುಗಳ ಅವಶ್ಯಕತೆ ಇರುತ್ತದೆ). ಈ ಪ್ರದೇಶವನ್ನು ಪ್ಲಾಸ್ಟಿಕ್ ರಹಿತ ಎಂದು ಮಾಡಿದ್ದರೂ ಸಹ ಪರಿಸರಕ್ಕೆ ಹಾನಿ ಮಾಡುವ ಇಂತಹ ಸಾವಿರಾರು ಪ್ಲಾಸ್ಟಿಕ್ ಗಳು ಇಲ್ಲಿ ಎಸೆಯಲ್ಪಟ್ಟಿವೆ. ಇಷ್ಟು ಹೊತ್ತಿಗೆ ಒಳ್ಳೆಯ ಆಟದ ಶೂ, ಉಣ್ಣೆಯ ಕಾಲುಚೀಲ ಎಲ್ಲಾ ಇದ್ದರೂ, ಕಾಲುಗಳು ಮತ್ತು ಬೆರಳುಗಳೆಲ್ಲಾ ಭಯಂಕರವಾಗಿ ರೋದಿಸಲಾರಂಭಿಸಿದ್ದವು. ನಾವು ತೆಗೆದುಕೊಂಡು ಹೋಗಿದ್ದ ನಮ್ಮ ಕ್ಯಾಮೆರಾ ಮತ್ತು ಜಂಭದ ಚೀಲಗಳೇ ಮಣ ಭಾರವಾಗಿ ಬಿಟ್ಟಿದ್ದವು.
ನಾವು ಸುಮಾರು ೧೩ ಕಿ.ಮೀ ನಷ್ಟು ಮೇಲೆ ಬರುವವರೆಗೂ ನಮಗೆ ದೇವಸ್ಥಾನ ಕಾಣಿಸುವುದೇ ಇಲ್ಲ. ಒಂಥರಾ ಗುರಿಯಿಲ್ಲದೆ ಸುಮ್ಮನೆ ಮೇಲೇರುತ್ತಿರುವಂತಿರುತ್ತದೆ. ನಾವು ಕೊನೆಗೂ ಮೇಲೇರಿದಾಗ, ದೇವಸ್ಥಾನಕ್ಕೆ ಚಿಕ್ಕ ಸೇತುವೆಯ ಮೂಲಕ ಅಲಕನಂದಾಳನ್ನು ದಾಟಬೇಕಾಯಿತು. ದೇವಸ್ಥಾನದ ಎರಡೂ ಕಡೆ ಅಂಗಡಿಗಳ ಸಾಲುಗಳಿವೆ. ಒಮ್ಮೆಲೇ ದೇವಸ್ಥಾನದ ಎದುರು ನಿಂತಾಗ, ಪಟ್ಟ ಕಷ್ಟ, ಆಯಾಸವೆಲ್ಲ ಮರೆತೇ ಹೋಗುತ್ತದೆ. ಕೇದಾರೇಶ್ವರನ ದೇವಸ್ಥಾನ, ಮಂಜಿನ ಬೆಟ್ಟದ ಹಿನ್ನೆಲೆಯಲ್ಲಿ, ಧೀಮಂತವಾಗಿ ಕಾಣಿಸಿದಾಗ, ಮಾತು ಅಕ್ಷರಶ: ಮರೆತೇ ಹೋಗುತ್ತದೆ. ಸಾಯಂಕಾಲ ಸೂರ್ಯ ಅಸ್ತಮಿಸಲು ನಿಂತಿರುವ ಆ ಸಮಯ ವರ್ಣಿಸಲು ಪದಗಳೇ ಇಲ್ಲದಂತೆ, ನಮ್ಮನ್ನು ಮೂಕವಿಸ್ಮಿತರನ್ನಾಗಿ ಮಾಡಿಬಿಡುತ್ತದೆ. 

 ಮುಂದುವರೆಯುವುದು............
http://www.sampada.net/blog/shamala/17/06/2009/21607

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ಪ್ರತಿಕ್ರಿಯೆಗಳು

ಶ್ಯಾಮಲ,
ಪ್ರವಾಸ ಕಥನಕ್ಕೆ ಚಿತ್ರಗಳನ್ನು ಸೇರಿಸಿದರೆ ಚೆನ್ನಾಗಿರುತ್ತದೆ.

ಈ ಕೊಂಡಿ ನಿಮಗೆ ಸಹಾಯವಾಗಬಹುದು.

-ಅನಿಲ್

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು ಅನಿಲ್.....

ಚಿತ್ರಗಳನ್ನು ಸೇರಿಸುತ್ತೇನೆ. ವಿದ್ಯುತ್ ಕೈ ಕೊಟ್ಟರೆ (ಯುಪಿಎಸ್ ಇಲ್ಲ) ಎಂಬ ಭಯಕ್ಕೆ, ಲೇಖನ ಪ್ರಕಟಿಸಿ ಬಿಟ್ಟೆ. ನನಗೆ ಇಲ್ಲಿ ಬರೆದು ಅದನ್ನು ಸೇವ್ ಮಾಡುವ ರೀತಿ ಗೊತ್ತಿಲ್ಲ. ನೇರವಾಗಿ ಬರೆಯುವುದರಿಂದ, ವಿದ್ಯುತ್ ಯಾವಾಗ ಕೈ ಕೊಡತ್ತೋ ಎಂಬ ಭಯ ಯಾವಗಲೂ ನನ್ನನ್ನು ಕಾಡಿತ್ತಿರತ್ತೆ.

ಶ್ಯಾಮಲ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನೀವ್ಯಾಕೆ ಬರಹ ಪ್ಯಾಡ್ ಉಪಯೋಗಿಸಬಾರದು?
ಅದರಲ್ಲಿ ಏನು ಬರೆಯಬೇಕೋ ಅದನ್ನು ಬರೆದು Save ಮಾಡಿಕೊಳ್ಳಬಹುದು.

ಇಲ್ಲಿ ನೋಡಿ
ಮೇಲಿನ ಕೊಂಡಿಯಿಂದ ಬರಹ ಡೌನ್ ಲೋಡ್ ಮಾಡಿಕೊಳ್ಳಿ.

-ಅನಿಲ್

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಆಗಲೇ ಬರೆಯಲು ಮರೆತೆ.

ಚಾರ್ ಧಾಮ್ ಬಗ್ಗೆ ನಿಮ್ಮ ಬರಹ ಚೆನ್ನಾಗಿದೆ.
ಮುಂದಿನ ಭಾಗದ ನಿರೀಕ್ಷೆಯಲ್ಲಿ...

-ಅನಿಲ್

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಧನ್ಯವಾದಗಳು ಅನಿಲ್...

ಬರಹ ಪ್ಯಾಡ್ ಉಪಯೋಗಿಸುವ ಪ್ರಯತ್ನ ಮುಂದಿನಸಲ ಖಂಡಿತಾ ಮಾಡ್ತೀನಿ.........

ಶ್ಯಾಮಲ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

>>ಮಾರ್ಗ ತುಂಬಾ ನೀರಸವಾಗಿತ್ತು. ಪ್ರಕೃತಿ ಬಿಟ್ಟರೆ ಬೇರೇನೂ ಇರಲಿಲ್ಲ.
ಪ್ರಕೃತಿ ಅಷ್ಟೊಂದು ನೀರಸವಾಗಿತ್ತಾ?

ಸಕ್ಕತ್ರೀ ನೀವು ಅಂತೂ ೧೪.೫ ಕಿ.ಮೀ ನಡೆದೇ ಬಿಟ್ಟಿರಿ.. ಕೊರಯುವ ಛಳಿಯಲ್ಲಿನ ನಿಮ್ಮ ಚಾರಣಾನುಭ ಚೆನ್ನಾಗಿದೆ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಧನ್ಯವಾದಗಳು ಪಾಲ

ಪ್ರಕೃತಿ ನೀರಸವಾಗಿತ್ತು ಎಂದಿದ್ದು, ಅಲ್ಲಿ ಸುತ್ತಲೂ ಬರಿಯ ಕಂದು ಬಣ್ಣದ ಬೋಳು ಬೆಟ್ಟಗಳು....... ನೋಡಿ ನೋಡಿ, ಯಾಕೋ ನೀರಸ ಅನ್ನಿಸುತ್ತಿದ್ದಾಗಲೇ ಮಧ್ಯೆ ಭಡಿಯಾಲ ಕೆರೆ ಬಂದಿದ್ದು.........:-)
೧೪.೫ ಕಿ.ಮೀ ಅಲ್ಲರೀ ನಡೆದಿದ್ದು... ಒಟ್ಟು ೨೮ ಕಿ.ಮೀ + ಗೌರಿ ಕುಂಡಕ್ಕೆ ೩ ಕಿ.ಮೀ, ಎರಡೂ ಸೇರಿ ೩೧ ಕಿ.ಮೀ.........

ಶ್ಯಾಮಲ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

<<೧೪.೫ ಕಿ.ಮೀ ಅಲ್ಲರೀ ನಡೆದಿದ್ದು... ಒಟ್ಟು ೨೮ ಕಿ.ಮೀ + ಗೌರಿ ಕುಂಡಕ್ಕೆ ೩ ಕಿ.ಮೀ, ಎರಡೂ ಸೇರಿ ೩೧ ಕಿ.ಮೀ.>>>
ಎಣಿಸಿದ್ದು ನೀವೇನ ? ಅಥವಾ ಅದಕ್ಕೂ ಗೈಡ್ ಇದಾರಾ ;)

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಅದಿಕ್ಕೆಲ್ಲಾ ಗೈಡ್ ಬೇಡಪ್ಪಾ ತಮ್ಮಾ..... ಹತ್ತಿದ್ದು + ಇಳಿದಿದ್ದು ಕೂಡಿದರೆ ಅಷ್ಟು ಬರತ್ತೆ.... ನಂಗೆ ಅಷ್ಟುಮಾತ್ರ ಲೆಖ್ಖ ಬರತ್ತೆ........ :-)

ಶ್ಯಾಮಲ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.