ಚಾರ್ ಧಾಮ್ ಪ್ರವಾಸ- ಗಂಗೋತ್ರಿ

0

http://www.sampada.net/blog/shamala/03/06/2009/21063

೧೨ನೇ ತಾರೀಖು ಬೆಳಿಗ್ಗೆ ಎದ್ದು ನಾವು ಉತ್ತರ ಕಾಶಿಯ ಕಡೆ ಪ್ರಯಾಣ ಬೆಳೆಸಿದೆವು. ತೆಹರಿ, ಮೂಲಕ ಉತ್ತರ ಕಾಶಿಯನ್ನು ನಾವು ೨.೩೦ರ ಹೊತ್ತಿಗೆ ತಲುಪಿದೆವು. ಉತ್ತರ ಕಾಶಿಯಲ್ಲಿ ಒಂದು ಅತಿ ಪ್ರಾಚೀನವಾದ ಈಶ್ವರ ದೇವಸ್ಥಾನವಿದೆ. ಪಕ್ಕದಲ್ಲಿ ಹನುಮಾನ್ ಮಂದಿರ ಕೂಡ ಇದೆ. ಇಲ್ಲಿ ಒಂದು ಶಕ್ತಿಯ ಪೀಠ ಎಂದು ಕರೆಯಲ್ಪಡುವ ದೇವಸ್ಥಾನ ಕೂಡ ಇದೆ. ಇಲ್ಲಿ ದೇವಿಯ ಪ್ರಾಚೀನವಾದ ಅತಿ ಎತ್ತರವಾದ ತ್ರಿಶೂಲ ಇದೆ. ಅದು ಪಾತಾಳ ಲೋಕದಲ್ಲಿ ಶೇಷನಾಗನ ತಲೆಯ ತನಕ ಇದೆ ಎಂದು ಪ್ರತೀತಿ. ಅಷ್ಟು ದೊಡ್ಡದಾಗಿದ್ದರೂ ಕೂಡ ಅದನ್ನು ನಾವು ಒಂದೇ ಒಂದು ಬೆರಳಿನಿಂದ ಆಡಿಸಬಹುದು. ತುಂಬಾ ಚೆನ್ನಾಗಿದೆ. ಈ ತ್ರಿಶೂಲಕ್ಕೆ ನಮಗೆ ಬೇಕಾದ ಬೇಡಿಕೆಯೊಂದಿಗೆ ಒಂದು ಕೆಂಪು ಬಟ್ಟೆ ಕಟ್ಟಿದರೆ, ಕೆಲಸ ಆಗುವುದೆಂಬ ನಂಬಿಕೆ.
ಹನುಮಾನ್ ಮಂದಿರದಲ್ಲೂ ಕೂಡ ಏನಾದರೂ ಬೇಡಿಕೊಂಡು, ತೆಂಗಿನಕಾಯಿ ಕಟ್ಟಿದರೆ ಕೆಲಸ ಖಂಡಿತಾ ಆಗಿಯೇ ಆಗುತ್ತದೆಂಬ ನಂಬಿಕೆ ಜನಗಳಿಗೆ ಇದೆ. ದೇವಸ್ಥಾನದ ಬಾಗಿಲು ಹಾಕಿದ್ದರೂ, ನಾವು ಬೆಂಗಳೂರಿನಿಂದ ಬಂದಿದ್ದೇವೆಂದು ಕೇಳಿಕೊಂಡಿದ್ದರಿಂದ, ನಮಗೆ ಒಳಗೆ ಬಿಟ್ಟರು. ಮುಂದೆ ಪರದೆ ಹಾಕಿದ್ದರೂ ಸಹ ಅಕ್ಕ ಪಕ್ಕಗಳಿಂದ ನಮಗೆ ಆಂಜನೇಯನ ದರ್ಶನ ಆಯಿತು. ಮುದ್ದಾದ ಮೂರ್ತಿ.
ನಮಗೆ "ಮಹಿಮಾ ರೆಸಾರ್ಟ್"ನಲ್ಲಿ ರೂಮುಗಳನ್ನು ಕಾದಿರಿಸಲಾಗಿತ್ತು. ಇದು ಉತ್ತರ ಕಾಶಿಯಿಂದ, ಗಂಗೋತ್ರಿಯ ದಾರಿಯಲ್ಲೇ ೮ - ೧೦ ಕಿ.ಮೀ ದೂರದಲ್ಲಿದೆ. "ವೈಷ್ಣವಿ ಭೋಜನಾಲಯ"ದಲ್ಲಿ ಊಟ ಮಾಡಿ ಸುಮ್ಮನೆ ಇಲ್ಲೇ ಠಳಾಯಿಸುತ್ತಾ, ಹರಟುತ್ತಾ ಕಾಲ ಕಳೆದು, ರಾತ್ರಿ ರೆಸಾರ್ಟ್ ಹೋಟೆಲ್ನಲ್ಲೇ ಬೇಗ ಊಟ ಮಾಡಿ ಮಲಗಿಬಿಟ್ಟೆವು.
ಬೆಳಿಗ್ಗೆ ಮುಂಚೆ ಎದ್ದು ೬ ಘಂಟೆಗೆಲ್ಲಾ ಗಂಗೋತ್ರಿಗೆ ಹೊರಟೆವು. ಇಲ್ಲಿಂದ ಬರೀ ೯೨ ಕಿ.ಮೀ ದೂರ ಇದ್ದರೂ ಕೂಡ, ಕಡಿದಾದ ಬೆಟ್ಟಗಳ ಸಾಲು, ಕಿರಿದಾದ ರಸ್ತೆ, ಕಣಿವೆ ಎಲ್ಲದರ ಕಾರಣದಿಂದ ಪ್ರಯಾಣಕ್ಕೆ ಸುಮಾರು ೩ ೧/೨ - ೪ ಘಂಟೆಗಳ ಕಾಲ ಹಿಡಿಯಿತು. ಬರಿಯ ಕಚ್ಚಾ ರಸ್ತೆ ಇದೆ. ಮಧ್ಯದಲ್ಲಿ ರಸ್ತೆ ಮಾಡುವ ಕಾರ್ಯ ಈಗ ಪ್ರಾರಂಭವಾಗಿದೆ. ಕೆಲವು ಕಡೆ ಮಾತ್ರ ಸ್ವಲ್ಪ ಸ್ವಲ್ಪ ದೂರಕ್ಕೆ ಚೆನ್ನಾಗಿದೆ. ನಡುವೆ ಸುರಂಗ ಮಾರ್ಗವನ್ನೂ ಮಾಡಲಾಗುತ್ತಿದೆಯಾದ್ದರಿಂದ, ಬಂಡೆಗಳನ್ನು ಸಿಡಿಸಲಾಗಿದೆ. ಅದರ ಧೂಳು ಮತ್ತು ಸಣ್ಣ ಪುಡಿ ನಮ್ಮ ಪ್ರಯಾಣದ ಸುಖವನ್ನು ಸ್ವಲ್ಪ ಮಟ್ಟಿಗೆ ಕಡಿಮೆ ಮಾಡುತ್ತದೆ.
ಈ ದಾರಿ ಕೂಡ ಸುಂದರವಾದ ಮರಗಿಡಗಳು, ಪಕ್ಕದಲ್ಲಿ ಹರಿಯುವ ಗಂಗಾನದಿ ಮತ್ತು ಮಧ್ಯೆ ಮಧ್ಯೆ ಕಂದು ಬಣ್ಣದ ಬೆಟ್ಟಗಳ ನಡುವೆ ಹಣಿಕಿ ನೋಡುವ ಬೆಳ್ಳಿಯ ಬಣ್ಣದ ಹಿಮಾಚ್ಛಾದಿತ ಪರ್ವತಗಳು ನಮ್ಮ ಮನಸ್ಸನ್ನು ಸೂರೆಗೊಳ್ಳುತ್ತದೆ. ಗಂಗಾ ನದಿಯಲ್ಲೂ ನೀರೇ ಇಲ್ಲ. ದೊಡ್ಡ ಪಾತ್ರದಲ್ಲಿ ಬರಿಯ ಬಿಳಿಯ ಬಣ್ಣದ ಕಲ್ಲುಗಳೇ ತುಂಬಿದ್ದು ಎಲ್ಲೆಲ್ಲೋ ಒಂದೊಂದು ಕಡೆ ತಿಳಿ ಹಸಿರು ಬಣ್ಣದ ಶುಭ್ರ ನೀರು, ನೊರೆಯೊಂದಿಗೆ, ಆರ್ಭಟ ಮಾಡುವ ದೃಶ್ಯ ನಯನ ಮನೋಹರವಾಗಿದೆ. ನಮ್ಮ ಭಾರತೀಯರ ತನುಮನಗಳನ್ನು ಗಂಗೆ ಆಕರ್ಷಿಸುವಷ್ಟು ಬೇರಾವುದೇ ನದಿಯೂ ಸೂರೆಗೊಂಡಿಲ್ಲ. ಗಂಗಾಸ್ನಾನವೆಂಬುದು ಹಿಂದೂಗಳಿಗೆ ಒಂದು ಪವಿತ್ರವಾದ ಹೆಬ್ಬಯಕೆ. ನಾವು ಪೂಜಾದಿ ಕರ್ಮಗಳಲ್ಲಿ ಕೂಡ ಗಂಗಾಜಲವನ್ನು ಹೊರತು ಪಡಿಸಿ ಮಾಡಿದ್ದು ಪೂರ್ಣ ಅನ್ನಿಸುವುದೇ ಇಲ್ಲ. ಮರಣಶಯ್ಯೆಯಲ್ಲಿರುವ ವ್ಯಕ್ತಿಯು ಕೊನೆಯದಾಗಿ ಗಂಗಾಜಲದ ಬಿಂದುಗಳನ್ನು ಸೇವಿಸಿದರೆ ಅವನ ಎಲ್ಲಾ ಪಾಪಗಳೂ ನಾಶವಾಗುವುವು ಹಾಗೂ ಮೃತರ ಅವಶೇಷಗಳನ್ನು ಗಂಗೆಯಲ್ಲಿ ಅರ್ಪಿಸಿದರೆ ಅವರಿಗೆ ಮುಕ್ತಿ ಪ್ರಾಪ್ತವಾಗುವುದೆಂಬ ನಂಬಿಕೆ ನಮಗೆ ಇದೆ. ಗಂಗೆ ಉದ್ಭವಿಸುವುದು ತೆಹರಿಗರ್ವಾಲ್ ಜಿಲ್ಲೆಯ ಗಂಗೋತ್ರಿಯ ಬಳಿ. ಇದು ಗಂಗೋತ್ರಿಯಿಂದ ಇನ್ನೂ ಮೇಲೆ ಗೋಮುಖ ಎಂಬ ಪ್ರದೇಶದಲ್ಲಿದೆ. ಅಲ್ಲಿಗೆ ಯಾವ ವಾಹನವೂ ಹೋಗುವುದಿಲ್ಲ, ಚಾರಣವೇ ಮಾಡಬೇಕು. ಅದು ಅಲ್ಲಿಂದ ೫ - ೭ ಕಿ.ಮೀ ದೂರದಲ್ಲಿದೆ ಎಂದು ಕೇಳಲ್ಪಟ್ಟೆವು. ಉಗಮಸ್ಥಾನದಲ್ಲಿ, ಈ ನದಿಯನ್ನು ಭಾಗೀರಥಿ ಎಂದು ಕರೆಯುತ್ತಾರೆ. ಟಿಬೆಟಿನ ಗಡಿ ಪ್ರದೇಶದಲ್ಲಿ ಅಲಕನಂದಾ ಎಂಬ ಉಪನದಿ ಹುಟ್ಟಿ, ಹರಿದ್ವಾರದ ಹತ್ತಿರ ದೇವಪ್ರಯಾಗದ ಬಳಿ ಭಾಗಿರಥಿಯನ್ನು ಕೂಡಿಕೊಳ್ಳತ್ತೆ. ಇಲ್ಲೇ ಅದು ಬಯಲು ಪ್ರದೇಶವನ್ನು ಪ್ರವೇಶಿಸಿ ವಿಶಾಲವಾಗಿ ಹರಿಯಲಾರಂಭಿಸುವುದು. ಇಲ್ಲಿಂದ ಅದಕ್ಕೆ ಗಂಗಾ ಎಂದು ಹೆಸರು. ಇಲ್ಲಿಂದ ಆಚೆಗೆ ಮಂದಾಕಿನೀ, ಯಮುನಾ, ಘಾಗ್ರ (ಸರಯೂ), ಸೋನ್, ದಾಮೋದರ, ಗಂಡಕ್ ಮತ್ತು ಕೋಸಿ ಎಂಬ ಉಪನದಿಯಳು ಗಂಗೆಯನ್ನು ಕೂಡುತ್ತವೆ. ಬಂಗಾಳಕೊಲ್ಲಿಯನ್ನು ಸೇರುವ ಮುನ್ನ ಬ್ರಹ್ಮಪುತ್ರ ಎಂಬ ಬೃಹತ್ತಾದ ನದಿಯೂ ಗಂಗೆಯನ್ನು ಸೇರುವುದರಿಂದ, ಇವಳ ಉದ್ದಳತೆ ಸುಮಾರು ೨,೫೦೦ ಕಿ.ಮೀ ಗಳಷ್ಟಾಗುತ್ತದೆ. ಈ ಗಂಗೆಯ ದಡದಲ್ಲೇ, ದೇವಪ್ರಯಾಗ, ರುದ್ರಪ್ರಯಾಗ, ಕರ್ಣಪ್ರಯಾಗ, ಬದರೀನಾಥ, ಕೇದಾರನಾಥ, ಋಷಿಕೇಶ, ಹರಿದ್ವಾರ, ಪ್ರಯಾಗ, ಕಾಶೀ, ಗಂಗೋತ್ರಿ ಮತ್ತು ಗಂಗಾಸಾಗರ ಎಂಬ ತೀರ್ಥಕ್ಷೇತ್ರಗಳಿವೆ. ಗಂಗಾಸಾಗರದ ಬಳಿಯಲ್ಲೇ ಗಂಗೆ ಸಮುದ್ರವನ್ನು ಸೇರುವುದು.
ನಾವು ಸುಮಾರು ೧೦.೩೦ಗೆ ಗಂಗೋತ್ರಿ ತಲುಪಿದೆವು. ದೇವಸ್ಥಾನದ ಗೇಟ್ ವರೆಗೂ ವಾಹನ ಹೋಗುವುದರಿಂದ, ಸುಮಾರು ೫೦೦ ಮೀಟರುಗಳಷ್ಟು ಮಾತ್ರವೇ ನಡೆಯಬೇಕು. ಅಂಗಡಿಗಳ ದಾರಿಯಲ್ಲಿ ನಡೆದುಕೊಂಡು ದೇವಸ್ಥಾನ ತಲುಪಿದೆವು. ಸುಮಾರು ೩೦ - ೪೦ ಜನರಿದ್ದರು ಅಷ್ಟೆ. ಒಳಗೆ ಹೋಗಿ ನೋಡಿದಾಗ, ಗಂಗಾದೇವಿ, ಜಮುನಾದೇವಿ, ಲಕ್ಷ್ಮೀದೇವಿ, ಭಾಗೀರಥಿ, ಸರಸ್ವತಿ ದೇವಿಯರ ವಿಗ್ರಹಗಳ ಜೊತೆ ಬೆಣ್ಣೆ ಕೃಷ್ಣ ಮತ್ತು ವಿಘ್ನೇಶ್ವರನೂ ಇದ್ದರು. ಮನಸ್ಸಿಗೆ ಸಮಾಧಾನ ಸಿಕ್ಕಿತ್ತು. ಗಂಗೆಯ ವಿಗ್ರಹಕ್ಕೆ ಬೆಳ್ಳಿ - ಚಿನ್ನದ ಮುಖವಾಡ, ಆಭರಣಗಳನ್ನು ಹಾಕಿದ್ದರು. ದೇವಸ್ಥಾನದ ಹೊರಗೆ ದೇವಿಯ ಬಲಕ್ಕೆ ಒಂದು ದೊಡ್ಡ ಬೆಳ್ಳಿಯ ಘಂಟೆ ಕಟ್ಟಿದ್ದಾರೆ. ಪಕ್ಕದಲ್ಲಿ ಚಿಕ್ಕ ಶಿವಾಲಯ ಇದೆ. ಎದುರಿಗೆ ಗಣೇಶನ ದೇವಸ್ಥಾನ, ಇದರ ಹಿಂದಕ್ಕೆ ಆಂಜನೇಯನ ಗುಡಿ.
ಪಕ್ಕದಲ್ಲಿರುವ ಮೆಟ್ಟಿಲುಗಳನ್ನು ಇಳಿದು ಹೋದರೆ ಸ್ನಾನದ ಘಟ್ಟ. ಗಂಗಾದೇವಿಯ ಕೃಶಕಾಯ, ಸ್ನಾನ ಮಾಡುವವರ ಉತ್ಸಾಹಕ್ಕೇನೂ ಭಂಗ ತಂದಿಲ್ಲ. ಅಲ್ಲೇ ಒಬ್ಬರ ಮೇಲೊಬ್ಬರು ಅದೇ ನೀರಿನಲ್ಲೇ ಸ್ನಾನ ಮಾಡುತ್ತಿದ್ದರು. ನಾವು ಸುಮ್ಮನೆ ತಲೆಗೆ ಪ್ರೋಕ್ಷಿಸಿಕೊಂಡು, ಕಾಲು ಮುಳುಗಿಸಿ ಬಂದೆವು. ನೀರು ಹಿಮಕೊರೆದಂತೆ ಕೊರೆಯುತ್ತಿತ್ತು ಆದರೆ ಜೀವಜಲದಂತಿತ್ತು. ದೇವಸ್ಥಾನದ ಮುಂದುಗಡೆ ಭಗೀರಥ, ಗಂಗೆ, ಈಶ್ವರನ ಪ್ರತಿಮೆಗಳನ್ನು ಮಾಡಿಟ್ಟಿದ್ದಾರೆ. ಗಂಗೆಯಲ್ಲಿ ಸ್ನಾನ ಮಾಡುವುದರಿಂದ ಶರೀರ ಶುದ್ಧವಾಗುತ್ತದೆ ಎಂಬುದು ಎಲ್ಲರಿಗೂ ತಿಳಿದಿರುವಂಥದೇ, ಆದರೆ ಇದರ ಇನ್ನೊಂದು ವೈಶಿಷ್ಟ್ಯವೆಂದರೆ, ಮನಸ್ಸೂ ಶುದ್ಧವಾಗುತ್ತದೆ ಎಂಬುದು. ಇಲ್ಲಿ ನಾವು ಈ ಕೆಳಗಿನ ಶ್ರೀ ಶಂಕರಾಚಾರ್ಯ ವಿರಚಿತ ’ಗಂಗಾಸ್ತೋತ್ರಮ್’ ಶ್ಲೋಕದ ಮೂಲಕ ಗಂಗಾ ಮಹಿಮೆಯನ್ನು ಅರಿಯಬಹುದು .........
" ತವ ಜಲಮಮಲಂ ಯೇನ ನಿಪೀತಂ, ಪರಮಪದಂ ಖಲು ತೇನ ಗೃಹೀತಮ್ |
ಮಾತರ್ಗಂಗೇ ತ್ವಯಿ ಯೋ ಭಕ್ತ:, ಕಿಲ ತಂ ದ್ರಷ್ಟುಂ ನ ಯಮ: ಶಕ್ತ: " ||
ಅಂದರೆ ಓ ತಾಯಿ ಗಂಗೇ ನಿನ್ನ ನಿರ್ಮಲ ಜಲವನ್ನು ಕುಡಿಯುವವನು ಪರಮಾತ್ಮನ ಪರಮಪದವನ್ನೇ ಪಡೆಯುವನಲ್ಲವೆ? ಆ ಯಮನಂತೂ ನಿನ್ನ ಭಕ್ತನ ಕಡೆ ಕಣ್ಣೆತಿ ನೋಡಲೂ ಶಕ್ತನಲ್ಲ.
ದುಡ್ಡು ಕೊಟ್ಟು ಸಕ್ಕರೆಯ ಅನ್ನದ ಪ್ರಸಾದ ಕೊಂಡು ತಿಂದೆವು. ನದಿ ತೀರದಲ್ಲೂ ಭಗೀರಥನ ಪ್ರತಿಮೆ ಇದೆ. ಒಟ್ಟಿನಲ್ಲಿ ಮನಸ್ಸಿಗೆ ಆಹ್ಲಾದ ತರುವ ಮನೋಹರ ದೃಶ್ಯ.
ಅಲ್ಲಿಂದ ವಾಪಸ್ಸು ಬರುವಾಗ ದಾರಿಯಲ್ಲಿ ೨ ಗಂಗೆಯ ಥಾಲಿಯನ್ನು ಕೊಂಡು ನಮ್ಮ ಇನೋವ ಹುಡುಕಿ, ಹತ್ತಿ ಹೊರಟೆವು. ದಾರಿಯಲ್ಲಿ ಪ್ರಾಚೀನವಾದ ಭೈರವನಾಥನ ದೇವಸ್ಥಾನ ನೋಡಿದೆವು. ಈ ಭೈರವನಾಥ ಗಂಗಾದೇವಿಯ ರಕ್ಷಕನೆಂದು ಕರೆಯಲ್ಪಡುತ್ತಾನೆ. ಮೊದಲು ಇವನ ದರ್ಶನ ಮಾಡಿ ನಂತರ ಗಂಗಾ ಮಾತೆಯ ದರ್ಶನ ಮಾಡಬೇಕೆಂದು ಪ್ರತೀತಿ. ಹೇಗೋ ಉಲ್ಟಾ ಆದರೂ ಪರವಾಗಿಲ್ಲವೆಂದು ನಾವು ಭೈರವನ್ನು ನೋಡಿ ಬಂದೆವು. ಅಲ್ಲಿಂದ ನೇರವಾಗಿ ಮಹಿಮಾ ರೆಸಾರ್ಟ್ಗೆ ವಾಪಸ್ಸು ಬಂದು, ನಿನ್ನೆ ಊಟ ಮಾಡಿದ ಭೋಜನಾಲಯದ ಪಕ್ಕದಲ್ಲಿದ್ದ ಮಾರ್ವಾಡಿ ಭೋಜನಾಲಯದಲ್ಲಿ ಊಟ ಮಾಡಿದೆವು. ನನ್ನವರು ಆ ಅಡಿಗೆ ಭಟ್ಟನ ಮುಂದೆ ನಿಂತು ಸೂಚನೆಗಳನ್ನು ಕೊಟ್ಟಿದ್ದರಿಂದ, ಊಟ ಹಿತವಾಗಿತ್ತು. ಈ ಜಾಗದಲ್ಲೆಲ್ಲಾ ನಮಗೆ ಎಲ್ಲೂ ನಮಗೆ ಬೇಕಾದಂತಹ ಅನ್ನ ಸಿಗುವುದೇ ಇಲ್ಲ. ಇಲ್ಲಿಯ ಜನಗಳು ಅನ್ನ ಹೆಚ್ಚು ತಿನ್ನೋಲ್ಲ. ತಿಂದರೂ ಬಾಸುಮತಿ ಅಕ್ಕಿಯ ತುಂಬಾ ಉದುರು ಉದುರಾಗಿರುವ ಅನ್ನ ತಿಂತಾರೆ. ನಮಗೆ ಅದು ಸರಿಯಾಗುವುದಿಲ್ಲ. ಆದ್ದರಿಂದ ನಮಗೆ ಅವರು ಮಾಡಿ ಕೊಡುವ ಬಿಸಿ ಬಿಸಿ ಪುಲಕಾಗಳೇ ಗತಿ.
ನಮ್ಮ ಹೋಟೆಲಿನ ಕೋಣೆಯ ಹೊರಗೆ ದೊಡ್ಡ ಛತ್ರಿಯ ಕೆಳಗೆ ಕುರ್ಚಿಗಳನ್ನು ಹಾಕಿದ್ದರು. ನಾವು ಊಟ ಮಾಡಿ, ಅಲ್ಲಿ ಕುಳಿತು ಹರಟುತ್ತಾ ಸಂಜೆವರೆಗೂ ಕಾಲ ಕಳೆದೆವು. ನಿಶ್ಯಬ್ದವಾದ ವಾತಾವರಣ, ಹಿಂದೆ ಬೆಟ್ಟಗಳ ಸಾಲು ತುಂಬಾ ಚೆನ್ನಾಗಿತ್ತು.
ಈ ಹೋಟೆಲ್ನಲ್ಲಿ ಧೋಬಿಯ ವ್ಯವಸ್ಥೆ ಇರುವುದರಿಂದ ನಾವು ಬೇಕಾದರೆ ಬಟ್ಟೆಗಳನ್ನು ಕೊಟ್ಟು ಒಗೆಸಿ ಇಸ್ತ್ರಿ ಮಾಡಿಸಿಕೊಳ್ಳಬಹುದು. ಒಂದು ಜೊತೆ ಬಟ್ಟೆಗೆ ರೂ ೨೫ ತೆಗೆದುಕೊಳ್ಳುತ್ತಾರೆ. ಹಿಂದಿನ ರಾತ್ರಿ ಕೊಟ್ಟರೆ ಮರುದಿನ ಸಾಯಂಕಾಲ ಕೊಟ್ಟು ಬಿಡುತ್ತಾರೆ.

http://www.sampada.net/blog/shamala/17/06/2009/21587

ಮುಂದುವರೆಯುವುದು.................

ಬ್ಲಾಗ್ ವರ್ಗಗಳು: 
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ಪ್ರತಿಕ್ರಿಯೆಗಳು

>> ಗಂಗೋತ್ರಿಯಿಂದ ಇನ್ನೂ ಮೇಲೆ "ಗೋಮುಖ" ಎಂಬ ಪ್ರದೇಶದಲ್ಲಿದೆ. ಅಲ್ಲಿಗೆ ಯಾವ ವಾಹನವೂ ಹೋಗುವುದಿಲ್ಲ, ಚಾರಣವೇ ಮಾಡಬೇಕು. ಅದು ಅಲ್ಲಿಂದ ೫ - ೭ ಕಿ.ಮೀ ದೂರದಲ್ಲಿದೆ ಎಂದು ಕೇಳಲ್ಪಟ್ಟೆವು.

ಗಂಗೋತ್ರಿಯಿಂದ ಗೋಮುಖಕ್ಕೆ ೧೮ ಕಿ.ಮೀ...ಚಾರಣವಲ್ಲದೇ, ಕುದುರೆಗಳನ್ನು ಬಾಡಿಗೆಗೆ ಪಡೆಯಬಹುದು...
ಗಂಗೋತ್ರಿಯ ಚಿತ್ರಗಳಿದ್ದರೆ ಹಾಕಿ, ಇಲ್ಲವಾದದಲ್ಲಿ ನನ್ನ ಬಳಿಯಿರುವುದನ್ನು ಹಾಕುವೆ :)

ಉತ್ತರ ಕಾಶಿಗೂ-ಗಂಗೋತ್ರಿಗೂ ಮಧ್ಯೆ ಇರುವ ಹರ್ಶಿಲ್, ನಾನು ಕಂಡ ಅತ್ಯಂತ ಸುಂದರ ಸ್ಠಳಗಳಲ್ಲಿ ಒಂದು...

--ಶ್ರೀ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಹೌದು... ನಾವು ಹೋದ ದಿನ ಕುದುರೆಗಳ ಮುಷ್ಕರವಿದ್ದಿದ್ದರಿಂದ ನಮಗೆ ಸರಿಯಾದ ಮಾಹಿತಿ ಸಿಗಲಿಲ್ಲ. ಸರಿಪಡಿಸಿದ್ದಕ್ಕೆ ಧನ್ಯವಾದಗಳು. ಗಂಗೋತ್ರಿಯ ಚಿತ್ರಗಳ ಕೊಂಡಿ ಮೊದಲೇ ಕೊಟ್ಟಿದ್ದೆ ಮತ್ತು ಸಂಪದದಲ್ಲೂ ಹಾಕಿದ್ದೇನೆ... ಅಲ್ಲಿಲ್ಲದಿರುವ ಚಿತ್ರಗಳನ್ನು ಸೇರಿಸುವ ಇಚ್ಛೆಯಿದ್ದರೆ ಸೇರಿಸಿ.............................................. ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು

ಶ್ಯಾಮಲ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

>>ಕುದುರೆಗಳ ಮುಷ್ಕರವಿದ್ದಿದ್ದರಿಂದ
ನಿಜವಾಗ್ಲೂ! ಕಲಿಗಾಲ ಕೆಟ್ಟೋಯ್ತಪ್ಪ, ಕುದ್ರೆಗಳೂ ಮುಷ್ಕರ ಮಾಡೋದಕ್ಕೆ ಕಲ್ತ್ವಾ?

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಇಲ್ಲ ಪಾಲರವರೇ ಯಾವುದೋ ಒಂದು ರೀತಿಯ ಅಂಟು ಜ್ವರದಿಂದ ೫೦ - ೬೦ ಕುದುರೆಗಳು ಸತ್ತಿದ್ದರಿಂದ, ಎಲ್ಲಾ ಜಾಗಗಳಲ್ಲೂ, ಕುದುರೆಯ ಮಾಲೀಕರು ಮುಷ್ಕರ ಹೂಡಿದ್ದರು, ಕುದುರೆಗಳಲ್ಲ.... ಹ್ಹಿ ಹ್ಹಿ ಹ್ಹಿ... :-)

ಶ್ಯಾಮಲ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

:) ಚೆನ್ನಾಗಿ ಬರ್ತಾ ಇದೆ ನಿಮ್ಮ ಸರಣಿ, ಬರಹದ ಮಧ್ಯೆ ಒಂದೊಂದು ಚಿತ್ರ ಸೇರ್ಸಿ, ನೀವು ಹೇಳ್ತಾ ಇರೋದು ಇನ್ನೂ ಚೆನ್ನಾಗಿ ತಲೆಯೊಳಗೆ ಹೋಗುತ್ತೆ. ಚಿತ್ರ ಪುಟದಲ್ಲಿ ಸೇರ್ಸಿದೀರ ಸರಿ, ಅದೇ ಚಿತ್ರಗಳನ್ನ ನಿಮ್ಮ ಬರಹದ ಮಧ್ಯೆ ಒಂದೊಂದಾಗಿ ಹಾಕಿದ್ರೆ ಇನ್ನೂ ಚೆನ್ನಾಗಿರುತ್ತೆ.. ಚಿತ್ರ ಸೇರ್ಸೋಕೆ ಏನಾದ್ರೂ ಸಹಾಯ ಬೇಕಿದ್ರೆ ಹೇಳಿ..

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಧನ್ಯವಾದಗಳು ಪಾಲ

ಒಂದಕ್ಕಿಂತ ಹೆಚ್ಚು ಚಿತ್ರಗಳನ್ನು ಹೇಗೆ ಸೇರಿಸುವುದು ?

ಶ್ಯಾಮಲ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

rich text enable ಮಾಡಿ ಟೂಲ್ ಬಾರ್ ಬರಿಸಿಕೊಳ್ಳಿ.ಬಲದಿಂದ ನಾಲ್ಕನೆಯ ಸಾಧನ ಚಿತ್ರ ಸೇರಿಸಲು ಇರುವಂತದ್ದು. ಅದನ್ನು ಕ್ಲಿಕ್ಕಿಸಿದರೆ, ಇನ್ನೊಂದು ಸಣ್ಣ ವಿಂಡೋ ತೆರೆಯುತ್ತದೆ. ಇದರಲ್ಲಿ ಚಿತ್ರದ Image URL (ಉದಾ: http://www.sampada.net/files/images/DSC00302.preview.JPG)

Image description
Alignment

ಇವನ್ನೆಲ್ಲಾ ತುಂಬಿ.
insert ಕ್ಲಿಕ್ಕಿಸಿ.
ಚಿತ್ರ ಬರಬೇಕಾದಲೆಲ್ಲ ಕರ್ಸರ್ ಅಲ್ಲಿಟ್ಟು ಹೀಗೇ ಮಾಡಿ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಶ್ರೀನಿವಾಸ್ ಚೆನ್ನಾಗಿದೆ........ ಎಲ್ಲಿಂದ ತೆಗೆದಿರಿ?

ಶ್ಯಾಮಲ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಗಂಗೋತ್ರಿ ದೇಗುಲದ ಬಳಿ ಗೋಮುಖಕ್ಕೆ ಹೋಗಲು ಮೆಟ್ಟಿಲುಗಳಿವೆ. ಅಲ್ಲಿಂದ...
ಮೆಚ್ಚಿದ್ದಕ್ಕೆ ನನ್ನಿ!

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಅಂತೂ ಇಂತೂ... ನನ್ನ ಮಗನ ಸಹಾಯದಿಂದ ಚಿತ್ರಗಳನ್ನು ಹಾಕಲು ಸಾಧ್ಯವಾಯಿತು. ತುಂಬಾ ಧನ್ಯವಾದಗಳು ಪಾಲ, ನಿಮ್ಮಿಂದ ನಾನು ಇದನ್ನು ಕಲಿತೆ. ಅವನಿಲ್ಲದಿದ್ದಾಗ, ಮತ್ತೇನಾದರೂ ಸಹಾಯ ಬೇಕಾದರೆ, ನಿಮ್ಮನ್ನೇ ಕೇಳುತ್ತೇನೆ. :-)

ಶ್ಯಾಮಲ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಿಮ್ಮ ಮಗನಿಂದ ನಮಗೆ ಬರಹದ ಜೊತೆ ಚಿತ್ರ ನೋಡೋ ಹಾಗಾಯ್ತು.. ನಿಮಗೆ ಥ್ಯಾಂಕ್ಸ್ ಹೇಳ್ಬೇಕು, ಹಾಗೆಯೇ ನಿಮ್ಮ ಮಗನಿಗೊಂದು ಥ್ಯಾಂಕ್ಸ್, ತುಂಬಾ ಚುರ್ಕಿದ್ದಾನೆ ನಿಮ್ಮ ಮಗ :)

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ತುಂಬಾ ಚೆನ್ನಾಗಿದೆ ನಿಮ್ಮ ವಿವರಣೆ ಹಾಗೂ ನೀವು ಸೇರಿಸಿರುವ ಚಿತ್ರಗಳು. ಮುಂದಿನ ಭಾಗದ ನಿರೀಕ್ಷೆಯಲ್ಲಿ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಧನ್ಯವಾದಗಳು ನಂದಕುಮಾರ್...

ಸಧ್ಯವಾದಷ್ಟು ಬೇಗ ಬರೆದು ಮುಗಿಸಬೇಕೆಂಬ ಆತುರ ನನಗೂ ಇದೆ. ಬರೆದು ಮುಗಿಸುವ ತನಕ ನನಗೆ ಅದರ ಗುಂಗಿನಿಂದ ಹೊರ ಬರುವ ಸಾಧ್ಯತೆ ಕಾಣುತ್ತಿಲ್ಲ. ಕಣ್ಣು ಮುಚ್ಚಿದರೆ ಸಾಕು, ನಾನಿನ್ನೂ ಅಲ್ಲೆಲ್ಲೋ ಬೆಟ್ಟಗಳ, ಸಾಲಿನಲ್ಲಿ, ಆ ನೀರಿನ ರವರವದಲ್ಲಿ ವಿಹರಿಸುತ್ತಿದ್ದೀನೇನೋ ಅನ್ನಿಸುತ್ತೆ. ಈ ಯಾತ್ರೆ ನನ್ನನ್ನು ಇಷ್ಟೊಂದು ಆವರಿಸಿಕೊಂಡು ಬಿಡಬಹುದೆಂದು, ನಾನು ಅಂದುಕೊಂಡಿರಲೇ ಇಲ್ಲ.

ಶ್ಯಾಮಲ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.