ನಾರಣಪ್ಪನ ಒಂದು ಪದ್ಯ.. ನಾನರ್ಥ ಮಾಡಿಕೊಂಡಂತೆ.

0

ಕುಮಾರವ್ಯಾಸನ ಕೃತಿ "ಕೃಷ್ಣಕಥೆ" ಯಲ್ಲಿನ  ದ್ರೌಪದಿ ಸ್ವಯಂವರದ ಒಂದು ಪದ್ಯ ಕಾಣ್ತು. http://sampada.net/%E0%B2%95%E0%B2%A8%E0%B3%8D%E0%B2%A8%E0%B2%A1-%E0%B2%95%E0%B3%81%E0%B2%B5%E0%B2%B0-%E0%B2%95%E0%B3%81%E0%B2%AE%E0%B2%BE%E0%B2%B0%E0%B2%B5%E0%B3%8D%E0%B2%AF%E0%B2%BE%E0%B2%B8-%E0%B2%AD%E0%B2%BE%E0%B2%97%E0%B3%A8 . ಈ ಪದ್ಯವನ್ನು ನಾನು ಹೇಗೆ ಅರ್ಥ ಮಾಡಿಕೊಂಡೆ ಅಂತ ಇಲ್ಲಿ ಹಾಕ್ತ ಇದ್ದೀನಿ. 

 


ಅಂದ ಹಾಗೆ ಕುಮಾರವ್ಯಾಸ ನಡುಗನ್ನಡದ ಮೊದಲ ದರ್ಜೆ ಕವಿಗಳಾದ ಜನ್ನ, ಹರಿಹರ, ರಾಘವಾಂಕ, ಚಾಮರಸ ಮುಂತಾದವರ ಸಾಲಿನಲ್ಲಿ ನಿಲ್ಲತಕ್ಕಂತವನು. ಭಕ್ತಿ ಕವಿ.

 


ದೇಸಿ ಛಂದಸ್ಸಾದ ಷಟ್ಪದಿ ಬಗ್ಗೆ ಹೇಳುವಾಗ ರಾಘವಾಂಕ,  "ಷಟ್ಪದಿ ಸ್ಥಾಪನಾಚಾರ್ಯ" ಅಂತ ಕರೆಸಿಕೊಂಡು ನಂತರದವರಿಗೆ ದೇಸಿ ಶೈಲಿಯಲ್ಲಿ ಕಾವ್ಯರಚಿಸಲು ಹೆದ್ದಾರಿಯನ್ನೇ ಹಾಕಿಕೊಟ್ಟು ಆದರ್ಶ ಪ್ರಾಯನಾದ. nammalli doDDa shaTpadi parampareyE ide.
 


ಕುಮಾರವ್ಯಾಸ ತನ್ನ ದೇಸಿ ಶೈಲಿಯಲ್ಲಿ ಷಟ್ಪದಿಯ ಎಲ್ಲ ಸಾಧ್ಯತೆಗಳನ್ನು ಸೂರೆಗೊಂಡವ.
 


 


ಈಗ ಪದ್ಯವನ್ನು ಗಮನಿಸೋಣ. ಪದ್ಯ ಭಾಮಿನಿ ಷಟ್ಪದಿಯಲ್ಲಿದೆ.
ರಾಜಸೂಯದ ಕರ್ತೃವೋಲ್ ಜಿತ
ರಾಜಮಂಡಲವಾಯ್ತು ಮುಖವಿದು
ರಾಜರಾಜನಪೋಲ್ದುದಲಕಾವೇಷ್ಟಿತತ್ವದಲಿ
ರಾಜನುದ್ಯಾನದವೊಲಾಸ್ಯ ಸ
ರೋಜವಾಯ್ತುತಮಾಲ ಪತ್ರವಿ
ರಾಜಿತವು ಜನಮೇಜಯ ಕ್ಷಿತಿಪಾಲ ಕೇಳೆಂದಮೊದಲು ಪ್ರತಿಪದಾರ್ಥಗಳು..
೧. ರಾಜಸೂಯದ ಕರ್ತೃ:
ಸುತ್ತಮುತ್ತಲಿನ ( ಜಗತ್ತಿನ?!) ರಾಜರನೆಲ್ಲ ಗೆದ್ದ , ಗೆದ್ದು ರಾಜರ ರಾಜ ಆಗಿ, ಆ ಮೂಲಕ ರಾಜಸೂಯಯಾಗಕ್ಕೆ ನಿಂತವ.   ರಾಜ ರಾಜ ಅನ್ನೋ ಪದವೂ ಇವನನ್ನೇ ಸೂಚಿಸುತ್ತೆ.
೨. ಓಲ್ ::  ವಿಭಕ್ತಿ ಪ್ರತ್ಯಯ . ಅರ್ಥ "ಅಂತೆ" , ಹೋಲಿಕೆ ಮಾಡಲು ಬಳಸುತ್ತಿರುವ ಪದ.
೩. ಜಿತ :: ಗೆದ್ದ
೪. ರಾಜ ಮಂಡಲ ::  ರಾಜ್ಯ
೫. ಮುಖವಿದು  : ಈ ಮುಖ
೬. ರಾಜ ರಾಜನ : ಮೇಲೆ ಹೇಳಿದಂತೆ ರಾಜಸೂಯಯಾಗದ ಕರ್ತೃವಿನ
೭. ಪೋಲ್ದುದು :: ಹೋಲುವುದು ( 'ಹೋಲುತ್ತೆ' ಅನ್ನುವ ಮಾತನ್ನು ಹಮನಿಸಿದರೆ ಈ ಪದದ  ಅರ್ಥ ತಿಳಿಯುತ್ತೆ. )

೮. ಅಲಕಾವೇಷ್ಟಿತತ್ವ ದಲ್ಲಿ.
ಅಲಕಾ ಅಂದರೆ ಮುಂಗುರುಳು. ಸೌಂದರ್ಯ ವರ್ಣನೆಯಲ್ಲಿ ಸುಂದರಿಯ ಈ ಮುಂಗುರುಳಿಗೆ ಅವುಗಳ ಚೇಷ್ಟೆಗೆ ತನ್ನದೇ ಆದ ಸ್ತಾನವನ್ನು ಕವಿಗಳು ಕೊಟ್ಟಿದ್ದಾರೆ. ಬಹುಶ ಇಲ್ಲಿ  ದ್ರೌಪದಿಯ "ಸೌಂದರ್ಯ"ಕ್ಕೆ ಸ್ವಯಂವರಕ್ಕೆ ಆಗಮಿಸಿದ ರಾಜರೆಲ್ಲ ಸೋತರು ಅನ್ನುವುದನ್ನು ಕುಮಾರವ್ಯಾಸ ಅಲಕಾವೇಷ್ಟಿತತ್ವ ಅನ್ನೋ ಪದದಲ್ಲಿ ಸೂಚಿಸುತ್ತಿದ್ದಾನೆ.

ಇನ್ನು 'ಅಲಕಾವೇಷ್ಟಿ' ಅನ್ನೋ ಪದವೇ ಏಕೆ? ಈ ಪದದ "ಔಚಿತ್ಯ"ವೇನು? ಸೌಂದರ್ಯವನ್ನು ಸೂಚಿಸಲು ಬೇರೆ ಪದ ಯಾಕೆ ಬಳಸಲಿಲ್ಲ ಅನ್ನುವಾಗ ಕುಬೇರನೊಡನೆ (ದುಡ್ದೊಡೆಯ)  ಸಾಮ್ಯತೆ ( ರಾಜಸೂಯ ಯಾಗದ ಕರ್ತುವೂ ಎಲ್ಲ ರಾಜರ ಕಪ್ಪ ಕಾಣಿಕೆಗಳಿಂದ ಕುಬೇರನಷ್ಟೇ? ಶ್ರೀಮಂತ ಅನ್ನೋ ಅರ್ಥದಲ್ಲಿ) ತರಲು  ಎರಡೆರಡನ್ನು ಒಂದೇ ಪದದಲ್ಲಿ ಸೂಚಿಸಲು ಈ ಪ್ರಯೋಗ ಮಾಡಿದ್ದಾನೆ.

ಕುಬೇರನಷ್ಟು ದುಡ್ಡು ನೋಡಿದ /ಪಡೆದ  ರಾಜಸೂಯ ಯಾಗದ ಕರ್ತುವಿನ ಮುಖ ಮಂಡಲ, ಮತ್ತು ಮುಂಗುರುಳಿನ ಮೋಡಿಯಿಂದ, ತನ್ನ ಸೌಂದರ್ಯವನ್ನು ಇಮ್ಮಡಿಗೊಳಿಸಿಕೊಂಡ, (ರಾಜರನ್ನು ಗೆದ್ದು  ತನ್ನ  ಹೆಮ್ಮೆಯನ್ನೂ,) ದ್ರೌಪದಿಯ ಮುಖಮಂಡಲ ಇವೆರಡನ್ನೂ "ಅಲಕಾವೇಷ್ಟಿ ತತ್ವ" ಸೂಚಿಸುತ್ತಿದೆ.೯. ರಾಜನುದ್ಯಾನದವೊಲಾಸ್ಯ ಸರೋಜವಾಯ್ತು
ಇದನ್ನು ಬಿಡಿಸಿ ಬರೆದರೆ " ರಾಜನ ಉದ್ಯಾನದ ಓಲ್ ಆಸ್ಯ ಸರೋಜ ಆಯ್ತು "
ಓಲ್  : ಹೋಲಿಕೆಗಾಗಿ ಪದ
ಆಸ್ಯ: ಮುಖ
ಸರೋಜ : ಕಮಲ
ಆಸ್ಯ ಸರೋಜ :: ಮುಖ ಕಮಲ

ರಾಜನ ಉದ್ಯಾನ ಎಲ್ಲ ಉದ್ಯಾನಗಳಿಗೂ ಕಿರೀಟ ಪ್ರಾಯ , ಹಾಗೆಯೇ ಕಮಲಕ್ಕೆ ಎಲ್ಲ ಹೂಗಳಲ್ಲಿ ತನ್ನದೇ ಆದ ಸ್ತಾನವಿದೆ.
ಹಾಗೆ ತಮಾಲ ಪತ್ರ ವಿರಾಜಿತವಾದ ದ್ರೌಪದಿ ಮುಖ "ಮುಖ ಕಮಲ"ವಾಯ್ತು. (ಇಲ್ಲಿ ಕಮಲಕ್ಕೂ ದ್ರೌಪದಿ ಮುಖಕ್ಕೂ ಅಬೇಧವಿದೆ).
ಅಲ್ಲಿನ ಇತರ ಮುಖಗಳಿಗಿಂತ ಹೆಚ್ಚಿನ ಪ್ರಾಮುಖ್ಯತೆಯನ್ನು ಈ ಸಾಲು ದ್ರೌಪದಿಯ ಮುಖ ಕಮಲಕ್ಕೆ ತಂದುಕೊಡುತ್ತೆ.ಸಾರಾಂಶ:
ಕುಮಾರವ್ಯಾಸ ರೂಪಕ ಸಾಮ್ರಾಜ್ಯದ ಚಕ್ರವರ್ತಿ.ಈ ಪದ್ಯದಲ್ಲೂ ರೂಪಕಾಲಂಕಾರವಿದೆ. ಮುಖದಲ್ಲಿನ ಹೆಮ್ಮೆ, ಖುಷಿ, ರಾಜಸೂಯಯಾಗದ ಕರ್ತೃ ಮತ್ತು ದ್ರೌಪದಿ ಗೆ  "ಸಮಾನಧರ್ಮ".

(ಬಹುಶ ಇಡೀ ಕನ್ನಡದಲ್ಲಿ (ಬೇರೆ ಭಾಷೆ ಬಗ್ಗ ಗೊತ್ತಿಲ್ಲ.) ರೂಪಕಗಳನ್ನು ಕುಮಾರವ್ಯಾಸನ ಎತ್ತರಕ್ಕೆ ಕಟ್ಟಿಕೊಡುವ ಇನ್ನೊಬ್ಬ ವ್ಯಕ್ತಿ ಬಸವಣ್ಣ ಮಾತ್ರ. ಆದರೆ ಬಸವಣ್ಣ ಕವಿಯಲ್ಲ. ಕಾವ್ಯ ರಚನೆ ಬಸವಣ್ಣನವರ ಗುರಿಯಾಗಿರಲಿಲ್ಲ. )

ಇಲ್ಲಿನ ಪದ್ಯ ತನ್ನ ಸೌಂದರ್ಯ ಮಾತ್ರದಿಂದ ಅಲ್ಲಿನೆಲ್ಲ ರಾಜರನ್ನು ಗೆದ್ದ ದ್ರೌಪದಿಯ ಮುಖದಲ್ಲಿನ ಹೆಮ್ಮೆಯನ್ನು ಹೇಳ್ತಾ ಇದೆ. ಆ ಮೂಲಕ
ಮೂಲಕ ದ್ರೌಪದಿಯನ್ನು, ಆಕೆಯ ಸೌಂದರ್ಯವನ್ನು ವರ್ಣಿಸುತ್ತಿದೆ. ತನ್ನ ಸೌಂದರ್ಯ ಮಾತ್ರದಿಂದ ಸ್ವಯಂವರದ ರಾಜಾನ್ನೆಲ್ಲೇ ಗೆದ್ದ ದ್ರೌಪದಿಯ ಮುಖವನ್ನು ತನ್ನ ಕ್ಷಾತ್ರ ಬಲದಿಂದ ರಾಜ ರಾಜರನ್ನು ಗೆದ್ದು ರಾಜರಾಜನೆನಿಸಿಕೊಂಡ ರಾಜಸೂಯ ಕರ್ತುವಿಗೆ ಹೋಲಿಸಲಾಗಿದೆ......................
ಸಾಮಾನ್ಯವಾಗಿ ಕಾವ್ಯವೇ ಆಗಲಿ ಕಾವ್ಯ ವ್ಯಾಖ್ಯಾನವೇ ಆಗಲಿ ಅತಿ ವಾಚ್ಯ ಆಗಬಾರದು. ಹಾಗಾದರೆ ಅದರಲ್ಲಿನ ರಸ ದಕ್ಕುವುದಿಲ್ಲ. ನನ್ನ ವಿವರಣೆ ಅತಿ ವಾಚ್ಯ ಅನ್ನಿಸುತ್ತಿದೆ. ಆದರೂ ಕುಮಾರವ್ಯಾಸನ ಕವಿತಾ ಶೈಲಿಯನ್ನು ಅರ್ಥ ಮಾಡಿಕೊಳ್ಳುವಲ್ಲಿ ನನ್ನದೊಂದು ಸಣ್ಣ ಪ್ರಯತ್ನ ಈ ಬರಹ.


 
 

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.