ನಾಸ್ತಿಕನಾಗೋದು ಅಂದ್ರೆ....

5

    ಅಂದು ಕೊಂಡ ತಕ್ಷಣ ಆಯಿತೆ? ನಾವು ನಮ್ಮೆಲ್ಲ ಕಷ್ಟಗಳನ್ನು ಪರಿಪಾಟಲುಗಳನ್ನು ದೇವರ ತಲೆಗೆ ಹಾಕಿ ಒಂದು ಕ್ಷಣ ನೆಮ್ಮದಿಯ ನಿಟ್ಟುರಸಿರು ಬಿಟ್ಟುಬಿಡುತ್ತೇವೆ. ಆದರೆ ಆ ಅಧಾರದ ಬಗ್ಗೆಯೇ ಅಪನಂಬಿಕೆ ಇರುವ ನಾಸ್ತಿಕರ ಕಥೆಯೇನು? ಒಂದೆಡೆ  ತಲೆಯಲ್ಲಿನ ಒತ್ತಡಗಳನ್ನು ನಿವಾರಿಸಿಕೊಳ್ಳಲು ಇರುವ ಆಧಾರ ತಪ್ಪಿತು. ಮತ್ತೊಂದೆಡೆ  ದೇವರನ್ನು ನಂಬದೇ ಇರುವುದರಿಂದ ಆಗುವ ಭಯಂಕರ ಸಮಸ್ಯೆಗಳ ಬಗ್ಗೆ ಜನರು ಹೇಳುವ ಮಾತುಗಳನ್ನು ಕೇಳಿಸಿಕೊಳ್ಳಬೇಕು. ಪುಕ್ಕಲನಾಗಿದ್ದರೆ  ದೇವರೆ ಗತಿ!! ಒಟ್ಟಾರೆ ಸಾಕಷ್ಟು ಮನೋದಾರ್ಢ್ಯವಿಲ್ಲದೆ ನಾಸ್ತಿಕನಾಗಲು ಸಾಧ್ಯವಿಲ್ಲ. ನಾನು ದೇವರನ್ನು ನಂಬುವುದಿಲ್ಲ ಎಂದು ಹೇಳುವುದು ಸುಲಭ. ಆದರೆ ಇಡೀ ಜೀವನವೆಲ್ಲ ಹಾಗೆಯೇ ಬದುಕುವುದು ಇದೆಯಲ್ಲ ಅದು ನಿಜಕ್ಕೂ ಚಾಲೆಂಜಿಂಗ್.
    ನಮ್ಮ 'ಅವಸ್ಥೆಯ' ಹಿಂದೆ, ನಮ್ಮ ಮನಸ್ಸು ಕೆಲಸ ಮಾಡುತ್ತಿರುತ್ತದೆ. ಈ ಮನಸ್ಸು ತನ್ನ ಒಳಬೇಗುದಿಗಳನ್ನು ಕಡಿಮೆ ಮಾಡಿಕೊಳ್ಳಲು ಹಲವಾರು ಉಪಾಯಗಳನ್ನು ಹುಡುಕಿಕೊಂಡಿರುತ್ತದೆ. ಒಂದರ್ಥದಲ್ಲಿ ಸೇಫ್ಟಿ ವಾಲ್ವ್ ನ ಹಾಗೆ. ಮನುಷ್ಯನಿಗೆ ಆಗಾಗ ಕಾಡುವ ಒಂಟಿತನ, ಬೇಸರ, ಅಭದ್ರತೆ ಇತ್ಯಾದಿಗಳನ್ನು ಪರಿಹಾರ ಮಾಡಿಕೊಳ್ಳಲು ಇರುವ ಏಕೈಕ ಉಪಾಯ ಅದನ್ನು ವರ್ಗಾಯಿಸುವುದು. ಆಗ ಆ ಕ್ಷಣಕ್ಕಾದರೂ ಆ ವಿಷಯದಿಂದ ಮುಕ್ತಿ ಸಿಗುತ್ತದೆ. ಈ ವಿಷಯದಲ್ಲಿ ದೇವರು ದಯಾಮಯಿ. ನಮಗೆ ಯಾವಾಗಲೂ ಇಂಥ ಸಂದರ್ಭದಲ್ಲಿ ಸಹಾಯಕ್ಕೆ ಒದಗಿ ಬರುತ್ತಾನೆ.   
    ದೇವರು ನಮ್ಮ ಸಹಾಯಕ್ಕೆ ಬಾರದಿರುವುದು ಒಂದು ಸಂದರ್ಭದಲ್ಲಿ ಮಾತ್ರ. ನಾಸ್ತಿಕರೆಂದು ತಿಳಿದ ತಕ್ಷಣ ಜನರು ಅ ವ್ಯಕ್ತಿಯನ್ನು ನೋಡುವ, 'ಪ್ರತಿಕ್ರಿಯಿಸುವ' ಸಂದರ್ಭದಲ್ಲಿ. ಆಸ್ತಿಕರು, ನಾಸ್ತಿಕರಿಗೂ ದೈವ ಸಂಬಂಧವನ್ನು ಕಲ್ಪಿಸಿರುತ್ತಾರೆ(?). ದೇವರ ಅಸ್ತಿತ್ವವನ್ನು ವಿರೋಧಿಸಿಯೂ ಯಾರಾದರೂ ಆರಾಮದಲ್ಲಿ ಬದುಕುತ್ತಿದ್ದರೆ, ಆಸ್ತಿಕರು ಆತನನ್ನು ರಾಕ್ಷಸ ಗಣದವನು ಎಂದು ಹೇಳಿ ತಮ್ಮ ಸೋಲನ್ನು ಮತ್ತೊಮ್ಮೆ ಪುರಾಣಕ್ಕೆ ಕೊಂಡೊಯ್ಯುತ್ತಾರೆ. ಯಾಕಂದರೆ ಸಾಮಾನ್ಯವ್ಯಕ್ತಿ ದೇವರ ಅಸ್ತಿತ್ವವನ್ನು ವಿರೋಧಿಸಿ ಬದುಕಲು ಸಾಧ್ಯವೇ ಇಲ್ಲ ಎಂಬ ನಂಬಿಕೆ ಆಸ್ತಿಕರದ್ದು. ರಾಕ್ಷಸರು ಅಸಾಮಾನ್ಯರಾದ್ದರಿಂದಲೇ ಬದುಕ್ಕಿದ್ದು ಎಂಬ ನಂಬಿಕೆ. ಆದರೆ ರಾಕ್ಷಸಗಣದ ವ್ಯಕ್ತಿಯ ಜನ್ಮಕ್ಕೆ ಮುಕ್ತಿ ದೊರಕುವುದು ದೈವ ಸ್ಪರ್ಷದ ನಂತರವೇ.
    ಗಮನಿಸಿ, ದೇವರ ಬಗೆಗೆ ಅಪಾರ ನಂಬಿಕೆ ಇರುವುದು ಧರ್ಮವನ್ನು ಅರ್ಥೈಸುವ ಮೇಲ್ವರ್ಗದಲ್ಲೂ ಅಲ್ಲ, ಹಾಗೇಯೇ ತೀರಾ ಕೆಳವರ್ಗದಲ್ಲಿಯೂ ಅಲ್ಲ. ಹಿಂದುಳಿದ ವರ್ಗಗಳಲ್ಲಿ ಹೆಚ್ಚು (ವಿಶಾಲಾರ್ಥದಲ್ಲಿ ಮಧ್ಯಮವರ್ಗ ಎಂದುಕೊಳ್ಳುವ). ಬದುಕಿನ ಜಂಜಾಟಗಳಿಗೆ ನೇರವಾಗಿ ಸಿಕ್ಕಿಬೀಳುವ ಈ ವರ್ಗ ಅಪಾರವಾದ ಮಾನಸಿಕ ಗೊಂದಲಗಳನ್ನು ಹೊಂದಿರುತ್ತದೆ. ಯಾವ ವಿಷಯದಲ್ಲೂ ಸಂಪೂರ್ಣ ಮಾನಸಿಕ ಭದ್ರತೆ ಈ ವರ್ಗಕ್ಕಿರುವುದಿಲ್ಲ. ಈ ವಿದ್ಯಮಾನವನ್ನು ನೋಡಿದಾಗ ಬಹುಶ: ಮನೋ ಆಧಾರಕ್ಕಾಗಿ ಹಾತೊರೆಯುವ ಜನರು ದೇವರನ್ನು ಹೆಚ್ಚಾಗಿ ನಂಬುತ್ತಾರೆ. ಹೆಚ್ಚು ಓದಿದರೆ ನಾಸ್ತಿಕರಾಗುತ್ತಾರೆ ಅಂತ ಒಂದು ನಂಬಿಕೆ ಇತ್ತು. ಆದ್ರೆ ಇವತ್ತು ಅದು ಸುಳ್ಳಾಗಿ ಆಸ್ತಿಕತೆ ಹೆಚ್ಚಾಗುತ್ತಿದೆ. ಬಹುಶ: ಮನುಷ್ಯನ ಜಂಜಾಟದ ಬದುಕು ಇದಕ್ಕೆ ಕಾರಣವಿರಬಹುದು. ಹರೇಕೃಷ್ಣ ಭಕ್ತರಲ್ಲಿ ಅಪಾರ ಕಲಿತವರೂ ಇದ್ದಾರೆ.  
    ದೇವರನ್ನು ನಂಬುವುದು ಬಿಡುವುದು ವ್ಯಕ್ತಿಯೊಬ್ಬನ/ಳ ವೈಯಕ್ತಿಕ ವಿಚಾರ. ಆದರೆ ಅದನ್ನು ಅವಲಂಬಿಸಿ ಬರುವ ಅನೇಕ ವಿಷಯಗಳ ಸಂದರ್ಭದಲ್ಲಿ ಜಾಗರೂಕತೆ ಅಗತ್ಯ. ದೇವರನ್ನು ತೋರಿಸಿ ಲಾಭಮಾಡಿಕೊಳ್ಳುವ ಅನೇಕ ಸಂಗತಿಗಳು ಸಮಾಜದಲ್ಲಿರುತ್ತವೆ. ಇನ್ನೊಂದು ವಿಶೇಷ ಅಂದರೆ ಕೆಲ ನಾಸ್ತಿಕರಲ್ಲೂ ಜಾತಿವಾದವಿರುತ್ತದೆ. ಅವರು ದೇವರನ್ನಷ್ಟೇ ನಂಬುವುದಿಲ್ಲ. ಆದರೆ ಉಳಿದಂತೆ ಇತರರಲ್ಲಿ ಇರಬಹುದಾದ ಎಲ್ಲ ಜಾತಿವಾದದ ಲಕ್ಷಣಗಳು ಇರುತ್ತವೆ. ಹೀಗಾದರೆ ಇದರಿಂದ ಸಮಾಜಕ್ಕೆ ಇನ್ನಷ್ಟು ಅಪಾಯವೇ ಜಾಸ್ತಿ. ಆತ ಎರಡಲಗಿನ ಖಡ್ಗದಂತೆ. ಇತ್ತ ನಾಸ್ತಿಕನಾಗಿಯೂ ಸಮಾಜದಲ್ಲಿ ಗುರುತಿಸಿಕೊಂಡು ಒಂದು ಐಡೆಂಟಿಟಿ ಸೃಷ್ಟಿಸಿಕೊಳ್ಳುತ್ತಾನೆ. ಇನ್ನೊಂದೆಡೆ ಜಾತಿ ಐಡೆಂಟಿಟಿಯಿಂದಲೂ ಅನೇಕ ಲಾಭಪಡೆಯುತ್ತಾನೆ. ಇದಕ್ಕಿಂತ ಉತ್ತಮ ಮನಸ್ಸಿರುವ ಆಸ್ತಿಕನೇ ಮೇಲು. ಇವತ್ತು ನಾಸ್ತಿಕತೆಯೆನ್ನುವುದು ಒಂದು ಫ್ಯಾಷನ್ ಆಗಿದೆ. ಎಲ್ಲ ಐಡೆಂಟಿಟಿಗಳ ಹಾಗೇ ತೋರ್ಪಡಿಕೆಯ ಸಾಧನವೂ ಆಗಿದೆ. ಇವೆಲ್ಲ ನೋಡುವಾಗ 'ನಿಜವಾದ ಅರ್ಥದಲ್ಲಿ ನಾಸ್ತಿಕನಾಗಿರೋದು' ಬಹಳ ಕಷ್ಟ ಅಲ್ಲವೇ?

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 5 (3 votes)
To prevent automated spam submissions leave this field empty.

ಪ್ರತಿಕ್ರಿಯೆಗಳು

ಆಸ್ತಿಕ ನಾಸ್ತಿಕ ವಿಚಾರಗಳೆಲ್ಲ ನಮಗೆ ಗೊತ್ತಿಲ್ಲ .. ಸಂಕಟ ಬಂದಾಗ ವೆಂಕಟರಮಣ ಅನ್ನೋ ಜೀವ ನಂದು. ಹಂಗಂದ್ರೆ ಹಂಗೂ ಸೈ ಹಿಂಗ ಅಂದ್ರೆ ಹಿಂಗೂ ಸೈ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಗಿರೀಶ್, ಅಗ್ದಿ ಶ್ಯಾಣ್ಯಾ ಅದೀರಿ ನೀವು :) ಸಾತ್ವಿಕ್
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಿಮ್ಮಷ್ಟು ಇಲ್ಲ ಬಿಡ್ರಿ... ನಿಮಗಿಂತ ಕಮ್ಮೀನ ಎಷ್ಟು ಶ್ಯಾಣ್ಯಾ ಇದ್ರೂ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಈ ವಿಚಾರಕ್ಕೆ no Comment ಯಾಕೆಂದರೆ ಆಸ್ತಿಕರಿಗೆ ಎಷ್ಟು ಹೇಳಿದ್ರೂ ಬದಲಾಗೊಲ್ಲ, ಅವನಿಗೆ ಅವನ ಮೂಧನಂಬಿಕೆಗಳೇ, ಆಧಾರ ಅವನು ಬದುಕಲಿಕ್ಕೆ. ಅರವಿಂದ್
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಸಾತ್ವಿಕ ಜೀವನ ಮಾಡ್ತಾ ಇದ್ರೆ ಕಷ್ಟದಲ್ಲಿ ದೇವರನ್ನು ನೆನೆಸುವ ಪ್ರಸಂಗ ಗಳು ಬರುದು ಕಮ್ಮಿ...:).. अहं ब्रह्म अस्मि । ದೇವರು ಬೇರೆ ಎಲ್ಲೂ ಇಲ್ಲ ..ಅವನನ್ನು ಹುಡುಕುವ ಅಗತ್ಯತೆ ಇಲ್ಲ..
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಏನು ಹೇಳುತ್ತಿದ್ದೀರಾ ಎಂದು ಸರಿಯಾಗಿ ತಿಳಿಯಲಿಲ್ಲ. ಕ್ಷಮಿಸಿ. ನನಗೆ ಅರ್ಥವಾದ ಹಾಗೆ ನೀವು ಹೇಳುತ್ತಿರುವುದು: * ದೇವರು ಎನ್ನುವ ಕಲ್ಪನೆ ನಿರ್ಬಲ ಮನಸ್ಸಿಗೆ ಸಾಂತ್ವನ ಒದಗಿಸುತ್ತದೆ. ಹಾಗಾಗಿ ದೇವರಿಲ್ಲ ಎಂದು ಒಪ್ಪುವ ನಾಸ್ತಿಕ ಮನಸ್ಸು ಬಹಳ ನಿರ್ಭಯಿ ಆಗಿರಬೇಕು. - ಇದನ್ನು ಒಪ್ಪುತ್ತೇನೆ. (ಮೇಲೆ ಅರವಿಂದ ಅವರ no comment ಕಮೆಂಟು ನೋಡಿ!) * ಬದುಕಿನ ಕಷ್ಟ-ಸುಖಗಳನ್ನು ಹೆಚ್ಚಾಗಿ ಅನುಭವಿಸುವ ಮಧ್ಯಮ ವರ್ಗದಲ್ಲಿ ದೇವರ ನಂಬಿಕೆ ಹೆಚ್ಚು. - ಮೇಲಿನ ಅಂಶಕ್ಕೆ ಪೂರಕ. * ಆಸ್ತಿಕತೆ ಇಂದು ಇನ್ನೂ ಹೆಚ್ಚಾಗುತ್ತಿದೆ. - ಯಾವ ಆಧಾರದ ಮೇಲೆ ಹೇಳುತ್ತಿದ್ದೀರಿ? ಶೇಕಡಾವಾರು ನಾಸ್ತಿಕರ ಪ್ರಮಾಣ ಹಿಂದೆಂದಿಗಿಂತ ಇಂದೇ ಹೆಚ್ಚು ಎಂದು ಅನಿಸುವುದಿಲ್ಲವೇ? ಹಾಗಾದರೆ ಆಸ್ತಿಕತೆಯ ಪ್ರಮಾಣ ಕಡಿಮೆ ಆದಂತೆ ಆಯಿತಲ್ಲ. ಸಂಪರ್ಕ ಸಾಧನಗಳ ಸುಲಭ ಲಭ್ಯತೆಯಿಂದ ಆಸ್ತಿಕತೆ, ನಾಸ್ತಿಕತೆ ಎರಡರ ಬಗೆಗೂ ಜನರಲ್ಲಿ ಅರಿವು ಹೆಚ್ಚಾಗುತ್ತಿದೆಅನ್ನಬಹುದೇನೋ. * ದೇವರನ್ನಷ್ಟೇ ನಂಬದೆ ಉಳಿದೆಲ್ಲ ಧಾರ್ಮಿಕ ಅನಿಷ್ಟಗಳನ್ನು ಪಾಲಿಸುವ 'ನಾಸ್ತಿಕರು' ಇದ್ದಾರೆ. - ಇರಬಹುದು. *ಒಟ್ಟಿನಲ್ಲಿ 'ನಿಜವಾದ ಅರ್ಥದಲ್ಲಿ' ನಾಸ್ತಿಕನಾಗಿರುವುದು ಕಷ್ಟ. - ಹೌದು. ಅದೇ ರೀತಿ ನಿಜವಾದ ಅರ್ಥದಲ್ಲಿ ಆಸ್ತಿಕ, ಧಾರ್ಮಿಕ ಆಗಿರುವುದೂ ಕಷ್ಟ. ಹೆಚ್ಚಿನ ಜನರು ತಮ್ಮ ವೈಚಾರಿಕ ನೆಲೆಗಳಲ್ಲಿ compromise ಮಾಡಿಕೊಂಡೇ ಬದುಕುತ್ತಾರೆ. ಇದಕ್ಕೆ ಆಸ್ತಿಕರೂ, ನಾಸ್ತಿಕರೂ ಯಾರೂ ಹೊರತಲ್ಲ. [ಇದಕ್ಕೆ ಒಂದು ಉದಾಹರಣೆ: ಮೊನ್ನೆ ಟಿವಿ ಯಲ್ಲಿ ಒಂದು ಸ್ವಾಮಿ ವಿದೇಶೀಯ ಒಬ್ಬನಿಗೆ ಸಂದರ್ಶನ ಕೊಡುತ್ತಿದ್ದದನ್ನು ನೋಡಿದೆ. ಆಶ್ರಮದ ಭೋಜನ ಶಾಲೆ ತೋರಿಸುತ್ತ ಸ್ವಾಮಿಜಿ 'ಕ್ಯಾರಟ್ಟು ಮೂಲಂಗಿಗಳಲ್ಲೂ ಜೀವವಿದೆ, ಅದಕ್ಕೆ ಅವನ್ನು ತಿನ್ನುವ ನಾವು ಅವುಗಳ ಜೀವವನ್ನೂ ನಮ್ಮಲ್ಲಿ ಅಳವಡಿಸಿಕೊಂಡು ಆ ಜೀವಕ್ಕೆ ಅಪಚಾರ ಆಗದಂತೆ ಉತ್ತಮ ಜೀವನ ನಡೆಸಬೇಕು' ಎಂದು ಉಪದೇಶ ಮಾಡಿದರು. ಕೆಲವು ನಿಮಿಷದ ನಂತರ ಆಶ್ರಮದಲ್ಲಿ ಇದ್ದ (ಹಲ್ಲು ಕಿತ್ತ?) ಹಾವು, ಬೇಲಿಯಲ್ಲಿ ಇದ್ದ ಜಿಂಕೆಗಳು ಇವನ್ನು ಹೆಮ್ಮೆಯಿಂದ ತೋರಿಸುತ್ತಿದ್ದರು. ಕ್ಯಾರಟ್ಟಿನ ಜೀವಕ್ಕೆ ಇರುವ ಬೆಲೆಗಿಂತ ಹಾವು/ಜಿಂಕೆಯ ಸ್ವಾತಂತ್ರ್ಯಕ್ಕೆ ಕಮ್ಮಿ ಬೆಲೆಯೇ? ಇದು ಯಾವ ರೀತಿಯಲ್ಲಿ 'ನಿಜ ಅರ್ಥದಲ್ಲಿ' ಧಾರ್ಮಿಕ ಆದಂತೆ ಆಯಿತು?] ಇನ್ನು ಸಾಧಾರಣವಾಗಿ ವಿದ್ಯೆ ಎನ್ನುವುದು ನಾಸ್ತಿಕತೆಗೆ sufficient condition ಅಲ್ಲ. ವಿದ್ಯೆ ಹೆಚ್ಚಾದಂತೆ ವೈಚಾರಿಕತೆ, ವೈಚಾರಿಕತೆ ಹೆಚ್ಚಾದಂತೆ ನಾಸ್ತಿಕತೆ ಹೆಚ್ಚಾಗುವುದು ಸಹಜ. ಹಾಗೆಂದ ಮಾತ್ರಕ್ಕೆ ವಿದ್ಯೆ ಹೆಚ್ಚಾದಂತೆ ವೈಚಾರಿಕತೆ ಬಂದೆ ಬಿಡುತ್ತದೆ ಎಂದೇನೂ ಇಲ್ಲ; ವಿದ್ಯೆ ಕಮ್ಮಿ ಇದ್ದವನಿಗೆ ವೈಚಾರಿಕತೆ ಬರಬಾರದು ಎಂದೂ ಇಲ್ಲ. ವೈಚಾರಿಕತೆಗೂನಾಸ್ತಿಕತೆಗೂ ಬಹುಶ ಹೆಚ್ಚಿನ correlation ಇರಬಹುದು.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.